ರಾಜಕೀಯ ರಥಯಾತ್ರೆ ಕೊನೆಗೊಂಡು ಧರ್ಮಯಾತ್ರೆ ಚಿಗುರಲಿ

  •  
  •  
  •  
  •  
  •    Views  

ಡಯೆಟ್ ಮಾಡುವುದು ಉಪವಾಸವಲ್ಲ, ಅದರಿಂದ ಶರೀರ ಸುಂದರವಾಗುವುದೇ ಹೊರತು ಚಿತ್ತಶುದ್ಧಿ, ಆತ್ಮಶುದ್ಧಿಯಾಗದು!

ವ್ಯಕ್ತಿಯ ಆತ್ಮೋನ್ನತಿಗೆ ಮತ್ತು ಜಗತ್ತಿನ ಒಳಿತಿಗೆ ಕಾರಣವಾಗಬೇಕಾದ ಧರ್ಮಗಳು ಪರೋಕ್ಷವಾಗಿ ಆಯಾಯ ಮತಧರ್ಮದ ಜನರ ಸಂಘಟನೆಗೆ ಕಾರಣವಾಗಿವೆ. ಇದರ ಪರಿಣಾಮವಾಗಿ ರಾಜಕೀಯ ಪಕ್ಷಗಳಂತೆ ವಿಭಿನ್ನ ಧರ್ಮಗಳ ಆಧಾರದ ಮೇಲೆ ವಿಭಿನ್ನ ಧರ್ಮೀಯರು ವಿಭಿನ್ನ ಸಮುದಾಯಗಳಾಗಿ ವಿಘಟನೆಗೊಳ್ಳುವಂತೆ ಆಗಿದೆ. ಧರ್ಮತತ್ವಗಳನ್ನು ಪಾಲಿಸುತ್ತಾರೋ ಇಲ್ಲವೋ ಆಯಾಯ ಧರ್ಮದಲ್ಲಿ ಹುಟ್ಟಿದ ಜನರದು ಒಂದು ವರ್ಗವಾದರೆ ಬೇರೊಂದು ಧರ್ಮಕ್ಕೆ ಸೇರಿದ ಜನರದು ಮತ್ತೊಂದು ವರ್ಗವಾಗಿದೆ. “ಇವರು ನಮ್ಮವರು, ಅವರು ನಮ್ಮವರಲ್ಲ” ಎಂದು ಎರಡು ವಿಂಗಡಣೆಗಳಾಗಿ ಸಂಘರ್ಷಕ್ಕೆ ಕಾರಣವಾಗಿದೆ. ಸ್ವಧರ್ಮೀಯರನ್ನು ನೋಡುವ ದೃಷ್ಟಿಯೇ ಬೇರೆ, ಪರಧರ್ಮೀಯರನ್ನು ನೋಡುವ ದೃಷ್ಟಿಯೇ ಬೇರೆ. ಪ್ರತಿಯೊಂದು ಧರ್ಮದಲ್ಲಿಯೂ ಪರಧರ್ಮೀಯರನ್ನು ಬೇರೆ ಬೇರೆ ಶಬ್ದಗಳಿಂದ ಗುರುತಿಸಲಾಗಿದೆ. ಅನ್ಯ ಧರ್ಮೀಯರನ್ನು ಹಿಂದೂಧರ್ಮದಲ್ಲಿ “ಮ್ಲೇಚ್ಛ” ರೆಂದೂ, ಇಸ್ಲಾಂ ಧರ್ಮದಲ್ಲಿ “ಕಾಫಿರ್” ಎಂದೂ, ಕ್ರೈಸ್ತಧರ್ಮದಲ್ಲಿ “ಹೀದನ್” ಎಂದೂ ಹೀಗಳೆಯಲಾಗಿದೆ. ಶಿವಶರಣರ ಕಾಲದಲ್ಲಿ ಇಷ್ಟಲಿಂಗ ಧರಿಸಿದವರನ್ನು ಭಕ್ತರೆಂದೂ ಅನ್ಯರನ್ನು ಭವಿಗಳೆಂದೂ ಕರೆಯಲಾಗುತ್ತಿತ್ತು. ಈ ವಿಚಾರವಾಗಿ ಚಿಂತನೆ ನಡೆಸಿ ಕಟುವಾಗಿ ನುಡಿದ ಚೆನ್ನಬಸವಣ್ಣನವರ ಮುಂದಿನ ವಚನವನ್ನು ಗಮನಿಸಿ: 

ಭಕ್ತನೆದ್ದು ಭವಿಯ ಮುಖವ ಕಂಡರೆ, ರೌರವ ನರಕವೆಂಬರು. 
ಭಕ್ತನಾವನು? ಭವಿಯಾವನು? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. 
ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, 
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ 
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ 
ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, 
“ನಾನು ಭವಿಯ ಮೋರೆಯ ಕಾಣಬಾರದು” ಎಂದು 
ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ  
ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ.

ಅಜ್ಞಾನಿ ಜನರ ಧಾರ್ಮಿಕ ದುರ್ಭಾವನೆಗಳು ವಿಜ್ಞಾನಿಯ ಅಣುಬಾಂಬಿಗಿಂತಲೂ ಹೆಚ್ಚು ಅಪಾಯಕಾರಿ ಮತ್ತು ಆಸ್ಫೋಟಕಾರಿ. ಎರಡನೇ ಮಹಾಯುದ್ದದಲ್ಲಿ ಅಣುಬಾಂಬಿನ ಧಾಳಿಯಿಂದ ತತ್ತರಿಸಿದ ಜಪಾನ್ ದೇಶವು ಮತ್ತೆ ಚೇತರಿಸಿಕೊಂಡು ತಲೆ ಎತ್ತಿ ನಿಂತಿದೆ. ಆದರೆ ಶತಮಾನಗಳಿಂದ ಬೆಳೆದು ಬಂದಿರುವ ಹಿಂದೂ-ಮುಸ್ಲಿಮರ ವಿದ್ವೇಷದ ದಳ್ಳುರಿಯಿಂದ ಭಾರತವು ಮಾತ್ರ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. 

ಯಾವ ಧರ್ಮವೂ ಇನ್ನೊಂದು ಧರ್ಮದವರನ್ನು ದ್ವೇಷಿಸಬೇಕೆಂದು ಬೋಧಿಸುವುದಿಲ್ಲ. ಆದರೆ ಜಗತ್ತಿನ ಯಾವ ಭಾಗದಲ್ಲಿಯೂ ಒಂದು ಧರ್ಮದವರು ಮತ್ತೊಂದು ಧರ್ಮದವರೊಂದಿಗೆ ಜಗಳ ಕಾಯದೆ, ಕಾದಾಡದೆ, ಕೊರಳು ಕತ್ತರಿಸದೆ ಬಿಟ್ಟಿಲ್ಲ. ಎಲ್ಲ ಧರ್ಮಗಳೂ ಮೂಲಭೂತವಾಗಿ ಮನುಷ್ಯನ ಮನಸ್ಸಿಗೆ ಶಾಂತಿಯನ್ನೂ, ನೆಮ್ಮದಿಯನ್ನೂ, ನಿತ್ಯ ಸುಖವನ್ನೂ ತಂದು ಕೊಡಲು ಹುಟ್ಟಿಕೊಂಡಿದ್ದರೂ ಎಲ್ಲಿ ನೋಡಿದರೂ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಕಲಹ, ಕೋಲಾಹಲ, ಹಿಂಸಾಚಾರಗಳೇ ನಡೆಯುತ್ತಾ ಬಂದಿವೆ. ಇತ್ತೀಚೆಗಂತೂ ಧರ್ಮಗಳು ರಾಜಕೀಯ ದಾಳಗಳಾಗಿ ಪರಿಣಮಿಸಿವೆ. ಇದಕ್ಕೆ ಕಾರಣ ಧರ್ಮಗಳಲ್ಲ. ಧರ್ಮಗಳು ನೈಜ ಧರ್ಮಗಳಾಗಿ ಉಳಿಯದೆ ಮತ ಧರ್ಮಗಳಾಗಿ, ಜಾತಿ ಉಪಜಾತಿಗಳಾಗಿ ಪರಿಣಮಿಸಿ, ಜನರು ಸಂಪ್ರದಾಯಗಳಿಗೆ ಕಟ್ಟುಬಿದ್ದು, ಸಂಪ್ರದಾಯಗಳ ಹಿಂದೆ ಇರುವ ಸದಾಶಯಗಳನ್ನು ನಿರ್ಲಕ್ಷಿಸಿರುವುದು ಇಂತಹ ದುರ್ಘಟನೆಗಳಿಗೆ ಮೂಲ ಕಾರಣವಾಗಿದೆ. ಎಷ್ಟೋ ವೇಳೆ ಇಬ್ಬರ ವೈಯಕ್ತಿಕ ದ್ವೇಷಾಸೂಯೆಗಳು ಎರಡು ಕೋಮುಗಳ ಮಧ್ಯೆ ಸಂಘರ್ಷ ಮತ್ತು ಹಿಂಸಾಚಾರಗಳಿಗೆ ಎಡೆ ಮಾಡಿಕೊಟ್ಟ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. 

ಹಿಂದೂ-ಮುಸ್ಲಿಮರ ದ್ವೇಷದ ದಳ್ಳುರಿಯಿಂದ ಇಂದು ದೇಶ ತತ್ತರಿಸಿ ಹೋಗಿದೆ. ಸಹಸ್ರಾರು ಅಮಾಯಕ ಜನರು ಈ ದ್ವೇಷದ ಜ್ವಾಲೆಯಲ್ಲಿ ಬೆಂದು ಹೋಗಿದ್ದಾರೆ. 1992 ರಲ್ಲಿ ದಾವಣಗೆರೆಯಲ್ಲಿ ಘಟಿಸಿದ ಹಿಂದೂ-ಮುಸ್ಲಿಂ ಘರ್ಷಣೆ ನೇರವಾಗಿ ಬಾಬರಿ ಮಸೀದಿ ವಿಧ್ವಂಸಗೊಂಡ ಕಾರಣದಿಂದ ಆಗಿದ್ದಲ್ಲ. ಇಬ್ಬರು ಬಿಸಿರಕ್ತದ ಯುವಕರ ಮಾತಿನ ಘರ್ಷಣೆಯಲ್ಲಿ ಒಬ್ಬನ ಕೊಲೆಯಾಗಿ ಭುಗಿಲೆದ್ದ ಕೋಮುಘರ್ಷಣೆ. ನಂತರ ಪೋಲೀಸರಿಂದ ನಡೆದ ಗೋಲಿಬಾರ್ ನಲ್ಲಿ 20 ಜನ ಅಮಾಯಕರ ಸಾವು. ಈ ಮಾರಣಹೋಮದಿಂದ ತತ್ತರಿಸಿದ್ದ ದಾವಣಗೆರೆಯಲ್ಲಿ ಶಾಂತಿ ನೆಲೆಸುವಂತೆ ಎರಡೂ ಜನಾಂಗಗಳ ಮುಖಂಡರೊಂದಿಗೆ ಸಮಾಲೋಚಿಸಿ ನಗರದ ಬೀದಿಗಳಲ್ಲಿ ಎಲ್ಲ ಜನಾಂಗದವರೊಂದಿಗೆ ನಡೆಸಿದ ನಮ್ಮ “ಶಾಂತಿ ಪಾದಯಾತ್ರೆ” ಈಗಲೂ ಜನಮಾನಸದಲ್ಲಿ ನೆಲೆಸಿದೆ. ತನ್ನ ಮಗನನ್ನು ಕಳೆದುಕೊಂಡು ದುಃಖಿತನಾಗಿದ್ದ ಹಿಂದೂ ತಂದೆ ದಾರಿಯಲ್ಲಿ ನಮ್ಮ ದರ್ಶನಕ್ಕೆ ಬಂದಾಗ ಪಕ್ಕದಲ್ಲಿದ್ದ ಮುಸ್ಲಿಂ ವೃದ್ಧರೊಬ್ಬರು ಅವರನ್ನು ಬಿಗಿದಪ್ಪಿ ಸಂತೈಸಿದ್ದು ಮರೆಯಲಾಗದ ದೃಶ್ಯ! 

ಅದೆಷ್ಟು ಜನ ತಾಯಂದಿರು ತಮ್ಮ ಪ್ರೀತಿಯ ಮಕ್ಕಳನ್ನು ಕಳೆದುಕೊಂಡಿದ್ದಾರೋ! ಅದೆಷ್ಟು ಜನ ಹೆಣ್ಣುಮಕ್ಕಳು ತಮ್ಮ ಗಂಡಂದಿರನ್ನು ಕಳೆದುಕೊಂಡು ವಿಧವೆಯರಾಗಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೋ! ಸರ್ಕಾರವೇನೋ ಸಂತ್ರಸ್ತ ಕುಟುಂಬದವರಿಗೆ ಪರಿಹಾರ ಧನವನ್ನು ನೀಡುತ್ತದೆ. ಆದರೆ ಗತಿಸಿ ಹೋದ ಪ್ರಾಣಗಳನ್ನು ತಂದುಕೊಡಲು ಸಾಧ್ಯವೇ? ಮೃತರ ಪರಿವಾರಗಳಿಗೆ ಶಾಂತಿ-ಸಮಾಧಾನಗಳನ್ನು ತಂದುಕೊಡಲು ಸಾಧ್ಯವೇ? ಇವರ ಕಣ್ಣೀರಿನ ಗೋಳನ್ನು ಯಾವ ಪರಿಹಾರ ಧನದಿಂದ ನಿವಾರಣೆ ಮಾಡಲು ಸಾಧ್ಯ? ಹಿಂದೂ ತಾಯಿಯಾಗಲೀ, ಮುಸ್ಲಿಂ ತಾಯಿಯಾಗಲೀ, ಕ್ರೈಸ್ತ ತಾಯಿಯಾಗಲೀ ಅವಳ ಹೃದಯದಲ್ಲಿರುವುದು ಒಂದೇ ಧರ್ಮ: ಅದುವೇ ಮಾತೃವಾತ್ಸಲ್ಯ! ತನ್ನ ಕರುಳ ಕುಡಿಯನ್ನು ಕಳೆದುಕೊಂಡಾಗ ಹಿಂದೂ ತಾಯಿಗೆ ಒಂದು ರೀತಿಯ ವೇದನೆ, ಮುಸ್ಲಿಂ ತಾಯಿಗೆ ಮತ್ತೊಂದು ರೀತಿಯ ವೇದನೆ, ಕ್ರೈಸ್ತ ತಾಯಿಗೆ ಇನ್ನೊಂದು ರೀತಿಯ ವೇದನೆ ಆಗುತ್ತದೆಯೇ? ಮಾತೃವಾತ್ಸಲ್ಯಕ್ಕೆ ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಭೇದವಿಲ್ಲ. 

ಮೊಟ್ಟೆಯಿಂದ ಹಿಡಿದು ಮಾಂಸಾಹಾರ ಸೇವನೆವರೆಗೆ ಮಾಧ್ಯಮಗಳಲ್ಲಿ ದಿನವೂ ಏನೇನೋ ಒಣ ಚರ್ಚೆ ನಡೆಯುತ್ತಿದೆ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಉಪವಾಸಕ್ಕೆ ಬಹಳ ಮಹತ್ವವಿದೆ ಎಂಬುದನ್ನು ಗಮನಿಸಬೇಕು. ಜೈನರ ಸಲ್ಲೇಖನ ವ್ರತವಾಗಲೀ, ಹಿಂದೂಗಳ ಏಕಾದಶೀ ವ್ರತವಾಗಲೀ, ಮುಸ್ಲಿಮರ ರೋಜಾ ಆಗಲೀ ಆಚರಣೆಯಲ್ಲಿರುವುದು ಅಂತರಂಗದ ಶುದ್ದಿಗಾಗಿ, ದೇಹವನ್ನು ದಂಡಿಸಿ ದೇಹದೊಳಗಿರುವ ಚೈತನ್ಯದ ಸಾಕ್ಷಾತ್ಕಾರಕ್ಕಾಗಿ, ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ಬೇಡುವವರಲ್ಲಿ ಒಬ್ಬ “ಭಿಕ್ಷುಕ” ಎನಿಸಿ ಅನಾದರಣೆಗೆ ಗುರಿಯಾದರೆ ಮತ್ತೊಬ್ಬ “ಭಿಕ್ಷು” ಎನಿಸಿ ಗೌರವಕ್ಕೆ ಪಾತ್ರನಾಗುತ್ತಾನೆ. “ಉಪವಾಸ” ಎಂದರೆ ಆಯಾಯ ಧರ್ಮದ ಪದ್ಧತಿಯಂತೆ ಒಂದು ತಿಂಗಳು ಅಥವಾ ವಾರದಲ್ಲಿ ಒಂದು ದಿನ ಆಹಾರ ಸೇವಿಸದಂತೆ ಇರುವ ಶುಷ್ಕ ಧಾರ್ಮಿಕ ಆಚರಣೆಯಲ್ಲ. ಲೌಕಿಕ ಜೀವನದಲ್ಲಿ “ಉಪವಾಸ” ಎಂದರೆ ಆಹಾರ ಸೇವನೆ ಮಾಡದೇ ಇರುವುದು ಎಂಬುದೇನೋ ನಿಜ. ಆದರೆ “ಉಪವಾಸ” ಶಬ್ದದ ಪಾರಮಾರ್ಥಿಕ ಅರ್ಥ ದೇವರಿಗೆ ಹತ್ತಿರವಾಗುವುದು. ಸುಳ್ಳು, ಮೋಸ, ವಂಚನೆ, ಕ್ರೌರ್ಯ ಇತ್ಯಾದಿ ದುರ್ಗುಣಗಳನ್ನು ತ್ಯಜಿಸಿ ದೈವೀಗುಣಗಳನ್ನು ಮೈಗೂಡಿಸಿಕೊಳ್ಳುವುದು, ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಶರೀರದ ತೂಕ ಜಾಸ್ತಿಯಾಯಿತೆಂದು diet ಮಾಡುವುದು ಉಪವಾಸವಲ್ಲ. ಅದರಿಂದ ಶರೀರ ನೋಡಲು ಸುಂದರವಾಗಿ ಕಾಣಬಹುದೇ ಹೊರತು ಚಿತ್ತಶುದ್ದಿ, ಆತ್ಮಶುದ್ಧಿಯಾಗಲು ಸಾಧ್ಯವಿಲ್ಲ.

 ನಮ್ಮ ದೇಶವು ಧರ್ಮನಿರಪೇಕ್ಷ ರಾಷ್ಟ್ರ. ನಮ್ಮ ಸಂವಿಧಾನವು ಈ ರಾಷ್ಟ್ರದಲ್ಲಿರುವ ಪ್ರತಿಯೊಬ್ಬ ನಾಗರಿಕನ ಮತಧರ್ಮವನ್ನು ಗೌರವಿಸುತ್ತದೆಯೇ ಹೊರತು ಉಪೇಕ್ಷಿಸುವುದಿಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಧರ್ಮದಲ್ಲಿ ನಂಬುಗೆ, ವಿಶ್ವಾಸವನ್ನು ಇಟ್ಟುಕೊಳ್ಳಲು ಸ್ವತಂತ್ರನು. ಆದರೆ ಅವನ ಧರ್ಮವು ಯಾವುದೇ ಇರಲಿ ಅದು ರಾಷ್ಟ್ರ ಧರ್ಮಕ್ಕೆ ಚ್ಯುತಿಯನ್ನುಂಟು ಮಾಡಬಾರದು. ಆಯಾಯ ಧರ್ಮೀಯರು ಅವರವರ ಧರ್ಮಗ್ರಂಥಗಳನ್ನು ಗೌರವಿಸುವಂತೆಯೇ ಎಲ್ಲ ಧರ್ಮೀಯರು ಸಮಾನವಾಗಿ ಬದುಕುವ ಅವಕಾಶವನ್ನು ಕಲ್ಪಿಸಿಕೊಟ್ಟ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂಗಳ ರಕ್ತವೂ ಹರಿದಿದೆ, ಮುಸ್ಲಿಮರ ರಕ್ತವೂ ಹರಿದಿದೆ, ಸಿಖ್ಖರ ರಕ್ತವೂ ಹರಿದಿದೆ. ಎಲ್ಲರ ಬಲಿದಾನದಿಂದ, ಕುರ್ಬಾನಿನಿಂದ ಪಡೆದ ಸ್ವಾತಂತ್ರ್ಯವು ಒಂದು ದೊಡ್ಡ ಹೊಣೆಗಾರಿಕೆಯೇ ಹೊರತು ಸ್ಟೇಚ್ಛಾಚಾರವಲ್ಲ, ಮನಸ್ವೀ ವರ್ತನೆಯಲ್ಲ,

ಮುಸ್ಲಿಮರಿಗೇ ಬೇರೆ ದೇವರು, ಹಿಂದೂಗಳಿಗೇ ಬೇರೆ ದೇವರು ಇದ್ದಾನೆಯೇ? “ಏಕಂ ಸತ್ ವಿಪ್ರಾ ಬಹುಧಾ ವದಂತಿ”, “ದೇವನೊಬ್ಬ ನಾಮ ಹಲವು”,“ಅಲ್ಲಾಹು ಅಕ್ಬರ್” “ಲಾ ಇಲಾಹಾ ಇಲ್ಲಲ್ಲಾ” ಎಂದು ಎಲ್ಲ ಧರ್ಮಗಳೂ ಬೋಧಿಸುತ್ತಿರುವುದು ಒಬ್ಬನೇ ದೇವರನ್ನು ಕುರಿತು ಅಲ್ಲವೇ? “ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂಚ ಜಗತ್ಯಾಂ ಜಗತ್" (ಈ ಜಗತ್ತೆಲ್ಲವೂ ಈಶ್ವರನ ಆವಾಸಸ್ಥಾನ) ಎಂದು ಸಾರಿದ ಉಪನಿಷತ್ತಿನ ಸಿದ್ದಾಂತವೇನು? “ನ ಮಂದಿರ್ ಮೇ ಹೂಂ ನ ಮಸ್ ಜಿದ್ ಮೇ, ನ ಕಾಬಾ ಮೇ ಹೂಂ ನ ಕೈಲಾಸ್ ಮೇ!” (ನಾನು ಮಂದಿರದಲ್ಲೂ ಇಲ್ಲ; ಮಸೀದಿಯಲ್ಲೂ ಇಲ್ಲ! ಕಾಬಾದಲ್ಲೂ ಇಲ್ಲ; ಕೈಲಾಸದಲ್ಲೂ ಇಲ್ಲ!) ಎಂದು ದೇವರ ಬಾಯಿಂದ ಹೇಳಿಸಿದ ಕಬೀರನ ಸಂದೇಶವೇನು? “ಅಂಗುಷ್ಠ ಮಾತ್ರಃ ಪುರುಷೋsಂತರಾತ್ಮಾ ಸದಾ ಜನಾನಾಂ ಹೃದಿ ಸಂನ್ನಿವಿಷ್ಠಃ!” (ಹೆಬ್ಬರಳಿನಷ್ಟು ಗಾತ್ರದ ಅಂತರಾತ್ಮನು ಎಲ್ಲ ಜನರ ಹೃದಯದಲ್ಲಿ ಸದಾ ನೆಲೆಸಿರುತ್ತಾನೆ ಎಂದು ಬೋಧಿಸಿದ ಭಗವದ್ಗೀತೆಯ ತಾತ್ಪರ್ಯವೇನು? “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಶವಯ್ಯಾ ಕೂಡಲಸಂಗಮದೇವಾ ಕೇಳಯ್ಯಾ: ಸ್ಥಾವರಕ್ಕಳಿವುಂಟು! ಜಂಗಮಕ್ಕಳಿವಿಲ್ಲ!” ಎಂದು ಪ್ರತಿಯೊಬ್ಬ ವ್ಯಕ್ತಿಯ ಶರೀರವನ್ನೇ ದೇಗುಲವನ್ನಾಗಿ ಮಾಡಬಯಸಿದ ಬಸವಣ್ಣನವರ ವಚನದ ಆಶಯವೇನು? 

ಇಂತಹ ತತ್ವೋಪದೇಶಗಳನ್ನು ಎಲ್ಲರೂ ಅರ್ಥ ಮಾಡಿಕೊಂಡು ಸಾಮರಸ್ಯದಿಂದ ಬದುಕುವುದು ಯಾವಾಗ? ಇನ್ನಾದರೂ ರಾಜಕೀಯ ಪಕ್ಷಗಳ ರಥಯಾತ್ರೆಗಳು ಕೊನೆಗೊಳ್ಳಲಿ! ಸರ್ವಧರ್ಮ ರಥಯಾತ್ರೆಗಳು ನಾಡಿನಾದ್ಯಂತ ಆರಂಭಗೊಳ್ಳಲಿ! ಕುರುಕ್ಷೇತ್ರ ಕೊನೆಗೊಂಡು ಧರ್ಮಕ್ಷೇತ್ರ ನೆಲೆಗೊಳ್ಳಲಿ! ಜನರು ನೆಮ್ಮದಿಯಿಂದ ಬಾಳುವಂತಾಗಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ. 25-8-2022.