ಆತ್ಮ ನಿವೇದನೆ : ಅಧಮ ಗುರುಗಳು - ಮೂರ್ಖ ಶಿಷ್ಯರು
8.5.1938
ವ್ಯಭಿಚಾರವನ್ನು ಮಾಡುವ ನಾಮಧಾರಿ ಗುರುಗಳನ್ನು ನೋಡಲು ಸಹ ಮನಸ್ಸು ಬರುವುದಿಲ್ಲ. ದೇವರೇ! ಈ ಜಗತ್ತಿನಲ್ಲಿ ಯಾರೂ ಇಲ್ಲವಲ್ಲ. ಈ ಗುರುಗಳಾದವರಿಗೂ ಸಹ ಸ್ವಲ್ಪವೂ ಜ್ಞಾನವಿಲ್ಲವಲ್ಲ! ಶಿಷ್ಯರ ಭಯವೇ ಇಲ್ಲ. ಮೂರ್ಖ ಶಿಷ್ಯರು. ಇಂತಹ ನೀಚರನ್ನು ಹೊಡೆದೇಕೆ ಓಡಿಸಬಾರದು? ಇಂಥವರಿಗೆಲ್ಲಾ ಬೆಲೆಯನ್ನು ಕೊಡುತ್ತಾ ಹೋದರೆ ಜಗದ್ವಾಪಾರವೆಲ್ಲಾ ಕೆಟ್ಟು ಹೋಗುವುದರಲ್ಲಿ ಸಂಶಯವಿಲ್ಲ. ಇಂತಹ ಮೂರ್ಖ ಶಿಷ್ಯರಿಗೆ ಇಂತಹ ಗುರುಗಳೇ ಯೋಗ್ಯರೆಂದೂ ಹೇಳಬಹುದು. ಅಯ್ಯೋ ನೀಚ ಗುರುವರ್ಗವೇ! ನಿಮ್ಮ ಅಂತಸ್ತು ಎಲ್ಲಿತ್ತು! ಈಗ ಎಲ್ಲಿಗೆ ಬಂದಿರುತ್ತೆ! ನೀವು ದೇವರಿಗೂ ದೇವರಾಗಿದ್ದಿರಲ್ಲಾ. ಈ ದಿನ ನಿಮ್ಮ ಈ ಅವನತಿಗೆ ಕಾರಣವೇನೆಂಬುದನ್ನು ಸ್ವಲ್ಪವಾದರೂ ಆಲೋಚಿಸಬಾರದೇ? ಜಗದೀಶ್ವರ! ಈ ಜಗತ್ತಿನ ಮೇಲೆ ನಿನಗೆ ಕೃಪೆಯಿದ್ದರೆ ಈ ನೀಚ ಪ್ರವೃತ್ತಿಯನ್ನು ನಾಶಮಾಡಿ ಗುರುವರ್ಗವನ್ನೆತ್ತಿ ಕಾಪಾಡು!
15.5.1938
ಜಗತ್ತೆಲ್ಲಾ ವಿಷಯಾಭಿಮುಖವಾಗಿದೆ. ಯಾರಿಗೆ ಯಾವುದು ಅವಶ್ಯವಿಲ್ಲವೋ ಅದೆಲ್ಲಾ ಈಗ ಅವರಿಗೆ ಅವಶ್ಯಕವಾಗಿದೆ. ಒಬ್ಬರಿಗೂ ತಮ್ಮ ಜವಾಬ್ದಾರಿಯು ಜ್ಞಾಪಕದಲ್ಲೇ ಇಲ್ಲ. ಈಗಿನ ಸನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ. ಅಜ್ಞಾನವಿದ್ದಲ್ಲಿ ಸತ್ಯಕ್ಕೆ ಬೆಲೆಯಿಲ್ಲ ಕಂದಾಚಾರಕ್ಕೆ ಬೆಲೆಯಿರುವವರಿಗೆ ಜಗತ್ತಿಗೆ ಸುಖವಿಲ್ಲ. ನಿರಕ್ಷರಕುಕ್ಷಿಗಳೂ ವಿಷಯ ಕೂಪದಲ್ಲಿ ಬೆಳೆದವರೂ ಮತ್ತು ವಿಷಯದಲ್ಲೇ ತೊಳಲಿ ಬಳಲಿದವರೂ ಗುರುಗಳಾದರೆ ಯಾವ ಜಗತ್ತು ಉದ್ದಾರವಾಗುತ್ತದೆ? ಗುರುಗಳಾಗುವುದೆಂದರೆ ನಾಟಕದಲ್ಲಿ ವೇಷ ಹಾಕಿಕೊಂಡು ಪಾರ್ಟು ಮಾಡುವುದೆಂದು ಜನರು ಭಾವಿಸಿರುವಂತೆ ತೋರುತ್ತದೆ. ಶಿವ ಶಿವ! ದನ ಕಾಯೋರೆಲ್ಲಾ, ಸುಳ್ಳು ಹೇಳುವವರೆಲ್ಲ, ವಿಧವಾಪ್ರಿಯರೆಲ್ಲಾ ನಿನ್ನ ಹೆಸರಿನಿಂದ ದೇಶದಲ್ಲಿ ಮೆರೆಯುತ್ತಾರಲ್ಲ!
ಅಯ್ಯೋ ಮೂಡ ಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿರಿ. ಅಯ್ಯೋ ನಿರ್ಧಯಿ ಗುರುವರ್ಗವೇ! ನಿಮಗಾದರೂ ಪಾಪವನ್ನು ಮಾಡಿ ಜಗತ್ತನ್ನು ಹಾಳು ಮಾಡುತ್ತಿರುವಿರಲ್ಲಾ ದಯ ಬೇಡವೇ? ಶಿವ ಶಿವ! ಜಗತ್ತಿನ ಸೂತ್ರವೆಲ್ಲಾ ವ್ಯಭಿಚಾರಿಗಳ ಕೈಯಲ್ಲಿದೆ. ವ್ಯಭಿಚಾರಿಗಳು ಗುರುಗಳೆಂದು ಹೇಳಿಸಿಕೊಳ್ಳಲು ನಾಚಿಕೆಗೊಳ್ಳುವುದಿಲ್ಲವಲ್ಲಾ! ಹರ ಹರ! ಶಿವ ಶಿವ!
21.5.1938
ಯಾರೆಷ್ಟು ದ್ವೇಷಿಸಿದರೂ ಪರಮಾತ್ಮನು ಕಾಪಾಡಬೇಕು. ಮನುಷ್ಯನು ಮನುಷ್ಯನನ್ನು ಕೆಡಿಸಲಾರನು. ಪರಮೇಶ್ವರನ ಕೃಪೆಯು ತಪ್ಪಿದರೆ ಯಾರು ಕಾಪಾಡಲಾರರು. "ನಾನು ನಾನು" ಎಂಬ ಅಹಂಕಾರಕ್ಕೆ ಇದಿರಾರೂ ಇಲ್ಲ. ನಮ್ಮಲ್ಲಿರುವ ಸತ್ಯವು ನಮ್ಮನ್ನು ಕಾಪಾಡಬೇಕೇ ವಿನಾ ಇನ್ನಾರು ಕಾಪಾಡಲಾರರು. ದೇವ! ನಿನಗೆ ಭಕ್ತಿಯಿಂದ ನಮಸ್ಕರಿಸುತ್ತೇನೆ.
24.6.1938
ಶಿಷ್ಯರ ಹಣವನ್ನು ತೆಗೆದುಕೊಂಡು ಹೋಗಿ ಮಠದಲ್ಲಿರುವ ತಮ್ಮ ಅಣ್ಣ ತಮ್ಮಂದಿರ ಹೆಂಡಿರು ಮಕ್ಕಳುಗಳಿಗೆ ಹಾಕುವ ನಾಮಧಾರಿ ಗುರುಗಳು ಸಮಾಜದಿಂದ ತೊಲಗದವರೆಗೆ ನಮಗೆ ಕಲ್ಯಾಣವಿಲ್ಲ. ಇವರು ಅಣ್ಣ ತಮ್ಮಂದಿರ ಹೆಂಡತಿಯರಲ್ಲಿ ಪ್ರೇಮವನ್ನು ಬೆಳೆಸಿಕೊಂಡು ಅವರ ಗಂಡಂದಿರಿಗೆ ದುಡಿಯುವುದನ್ನಾದರೂ ತಪ್ಪಿಸುತ್ತಾರೆಂಬುದೊಂದು ಮಹೋಪಕಾರವೆಂದು ಭಾವಿಸಬೇಕಾಗಿದೆ. ಮಠಗಳಲ್ಲಿ ಸಂಭೋಗ, ತೊಟ್ಟಿಲು ಕಟ್ಟುವುದು ಇತ್ಯಾದಿ ಗೃಹಸ್ಥ ಧರ್ಮದ ಕಾರ್ಯಗಳು ನಡೆಯುವಾಗ ಆ ಮಠಗಳು ಪಾಪ ಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ. ಆ ಪಾಪ ಕ್ಷೇತ್ರಗಳಲ್ಲಿ ಬಂದು ನಮಸ್ಕರಿಸುವ ಶಿಷ್ಯವರ್ಗಕ್ಕೆ ಕಲ್ಯಾಣವಾಗುತ್ತೆಂಬುದು ಶುದ್ಧ ಅಸಂಗತ. ಅಕ್ಕ-ತಂಗಿಯರನ್ನು ಸಾಕಲು ಮಠವನ್ನು ಮಾಡಬೇಕೆ? ತಿಳಿಯದು. ಸಾಮಾಜಿಕರು ಇಂತಹ ನೀಚ ಪದ್ಧತಿಯನ್ನು ತೊಲಗಿಸದಿದ್ದರೆ ಖಂಡಿತವಾಗಿಯೂ ಕಲ್ಯಾಣವಿಲ್ಲ. ನಮ್ಮ ಸಮಾಜದಂತಹ ಮೂಢರು ಪ್ರಪಂಚದಲ್ಲೇ ಇಲ್ಲವೆಂದು ಹೇಳಬೇಕಾಗುತ್ತದೆ.
20.7.1938
"ಗುರುವಿಗಿಂ ಪರವಿಲ್ಲವೋ, ಸದ್ಗುರುವಿಗಿಂ ಮಿಗಿಲಿಲ್ಲವೋ" ಎನ್ನುವ ಕಾಲವು ಹೋಯಿತು. ಗುರು ಎಂಬುದೊಂದು ಶಬ್ದ ಮಾತ್ರ ಉಳಿಯಿತು. ಗುರುವಿನ ಅಂತಸ್ತು ಹೋಯಿತು. ಗುರುಗಳು ಸ್ತ್ರೀಯರ ಪಾದತಳದಲ್ಲಿ ಬಿದ್ದರು. ಯಾರ್ಯಾರೆಂದು ಹೇಳೋಣ? ಎಲ್ಲರೂ ವ್ಯಭಿಚಾರಿಗಳು. ನಾನು ಕಂಡ ಹಾಗೆ ಎಲ್ಲರೂ ದುರಾಚಾರಿಗಳು. ನನಗೆ ಬಹಳ ದುಃಖವಾಗುತ್ತಿದೆ. ಶಿಷ್ಯರೆದುರಿನಲ್ಲಿ ಈ ವಿಷಯವನ್ನು ಹೇಳಿದರೆ ಯಾರೂ ಕಿವಿಯಲ್ಲಿ ಹಾಕಿಕೊಳ್ಳುವುದಿಲ್ಲ. ಸದ್ಗುರುವಿನ ಮಹಿಮೆಯು ಅವರಿಗೆ ಗೊತ್ತಿಲ್ಲ.
24.7.1938
ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರು ಮಾಡುತ್ತಾ ಇಲ್ಲ. ಎಲೈ ಮೂರ್ಖ ಶಿಷ್ಯ ಸಮುದಾಯವೇ! ನಿಮಗೇನು ಹುಚ್ಚು ಹಿಡಿದಿದೆ. ಭ್ರಷ್ಟರನ್ನು ಪೂಜಿಸಿ ಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೇರಿಸುತ್ತಿರುವಿರಲ್ಲಾ! ಸತ್ಯವನ್ನು ಜೀವಸಹಿತ ಹೂಳುತ್ತಿರುವಿರಲ್ಲಾ! ನೀವು ಭ್ರಾಂತರಾಗಿರುವಿರಿ. ನೀಚ ಗುರು ವರ್ಗ! ಅದಾವ ಗುರುವರ್ಗ! ಜಗದ್ರೋಹಿ! ನಿನಗೆ ಧಿಕ್ಕಾರ! ಪತಿತ ಗುರುವರ್ಗ! ನಿನಗೆ ದಿಕ್ಕಾರ! ದಿಕ್ಕಾರ! ನಿಮಗೇನು ಮಾಡಿದರು ನಿಮ್ಮ ಪಾಪಕ್ಕೆ ಪ್ರಾಯಶ್ಚಿತವಾಗುವುದಿಲ್ಲ. ಅಘೋರ ನಾಯಕ ನರಕದಲ್ಲಿ ಬೀಳುವಿರಿ. ಆಧಮರೇ ಶೀಘ್ರವಾಗಿ ತೊಲಗಿರಿ.
28.7.1938
ಹೆಂಗಸೆಂದರೆ ಬಾಯ್ತೆರೆಯುತ್ತಾ ಇದೆ ಗುರುವರ್ಗ. ಈ ಗುರುವರ್ಗವನ್ನು ಕಂಡರೆ ನನಗೆ ಹೇಸಿಗೆಯಾಗುತ್ತದೆ. ಈ ಗುರುವರ್ಗದಿಂದ ಜಗತ್ತಿನ ವ್ಯಾಪಾರವೆಲ್ಲಾ ನಷ್ಟವಾಗಹತ್ತಿದೆ. ಮುಂದೂ ಗುರುಸ್ಥಾನಕ್ಕೆ ಬರುವ ಮಾನವ! ನೀನು ಗುರುತ್ವದ ಗೌರವವನ್ನು ಕಾಪಾಡಲು ಸಮರ್ಥನಾದರೆ ಅದರ ಮರ್ಯಾದೆ ರಕ್ಷಣೆಗಾಗಿ ಅಧಿಕಾರವನ್ನು ಬಿಟ್ಟು ಸಂಸಾರಿಯಾಗು. ಖಂಡಿತವಾಗಿಯೂ ದುರಭಿಮಾನಿ ಗುರುವಾಗಬೇಡ. ಬಿಸಾಡಿ ಬಿಡುವುದು ಅಗೌರವವೂ ಅಲ್ಲ ಅಹಿತವೂ ಅಲ್ಲ. ನಾನು ನಿನಗೆ ಸತ್ಯ ಹಿತವನ್ನು ಹೇಳಿರುತ್ತೇನೆ. ಗುರುಮಾರ್ಗಕ್ಕೆ ಕಳಂಕವನ್ನು ತರಬೇಡ. ನಡೆ ದೂರ ನಡೆ ಪಾಪಿ!
1.8.1938
ಯಾವನು ತಾನು ಪೂಜ್ಯನು, ದೊಡ್ಡವನು, ಒಳ್ಳೆಯವನು ಎಂದು ತಿಳಿದುಕೊಂಡಿದ್ದಾನೋ, ಅವನು ಕೇವಲ ವಾಚಿಕ ಪೂಜ್ಯನಾಗದೆ ಅವುಗಳಿಗೆ ಬೇಕಾಗುವ ಗುಣವನ್ನು ಸಂಪಾದಿಸಿದರೆ ಪ್ರತಿಯೊಬ್ಬರೂ ವಂದಿಸುತ್ತಾರೆ. ಅದನ್ನು ಬಿಟ್ಟು ಒಬ್ಬ ಸಾಮಾನ್ಯನೂ ಮಾಡಲಾರದಂತ ದುಷ್ಟ ಕೃತ್ಯ ಗಳೆಂದರೆ ಸುಳ್ಳು, ವ್ಯಭಿಚಾರ ಇತ್ಯಾದಿಗಳನ್ನು ಮಾಡಿದರೆ ಯಾರೂ ಪೂಜಿಸಲಾರರು. ಅಲ್ಲದೆ ಅವನು ಪ್ರತ್ಯಕ್ಷವಾಗಿ ಅಧೋಗತಿಯನ್ನು ಹೊಂದದಿರಲಾರನು. ಪರಮೇಶ್ವರ! ಶಾಸ್ತ್ರ ಶಿಷ್ಟಾಚಾರ ದ್ರೋಹಿಗಳು ಸಮಾಜದಿಂದ ತೊಲಗಬೇಕು.
- ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
ಆಕರ ಗ್ರಂಥ : ಆತ್ಮನಿವೇದನೆ