ಭಕ್ತಿ ಸಮರ್ಪಿಸಿ “ಶಿಷ್ಯರಿಗೆ ಅಂಜಿ ಗುರು” ಮಾತು ಸಾಬೀತು: ತರಳಬಾಳು ಶ್ರೀ ಮೆಚ್ಚುಗೆ

  •  
  •  
  •  
  •  
  •    Views  

ಕೊಂಡಜ್ಜಿ: “ಗುರುವಿಗೆ ಅಂಜಿ ಶಿಷ್ಯರು” ಎಂಬ ಮಾತಿನಂತೆ ನೀವೆಲ್ಲಾ ನಡೆದುಕೊಂಡಿದ್ದೀರಿ. ನಮ್ಮ ಹಿರಿಯ ಗುರುಗಳು ಬರೆದಿರುವಂತೆ “ಶಿಷ್ಯರಿಗೆ ಅಂಜಿ ಗುರುಗಳು” ಎಂಬ ಮಾತನ್ನೂ ಇವತ್ತು ಕೊಂಡಜ್ಜಿಯ ಭಕ್ತರು ಸಾಬೀತು ಮಾಡಿ ತೋರಿಸಿದ್ದೀರಿ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ತರಳಬಾಳು ಹಿರಿಯ ಜಗದ್ಗುರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಅಂಗವಾಗಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸಾಧು ವೀರಶೈವ ಸಮಾಜ ಕೊಂಡಜ್ಜಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಭಕ್ತಿ ಸಮರ್ಪಣಾ, ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕೊಂಡಜ್ಜಿ ಸುತ್ತಮುತ್ತ ಎರಡು-ಮೂರು ದಿನ ಭಾರೀ ಮಳೆಯಾಗಿದೆ. ಇಂದೂ ಬಿಡುವು ಕೊಡುತ್ತೋ ಇಲ್ಲವೋ ಎಂಬ ಆತಂಕ ಕಾರ್ಯಕ್ರಮ ಸಂಘಟಕರಿಗಿತ್ತು. ಪೂಜ್ಯರು ಗ್ರಾಮಕ್ಕೆ ಬರುತ್ತಿದ್ದಾರೆ ಎಂದು ಮಳೆ ಬೇರೆ ಊರಿಗೆ ಹೋಗಿದೆ ಗ್ರಾಮದಲ್ಲಿ ನಮ್ಮ ಜತೆ ಹೆಜ್ಜೆ ಹಾಕಿದ ಯುವಕರು ಉತ್ಸಾಹದಿಂದ ಹೇಳಿದರು. ಇದು ಅವರು, ಶ್ರೀಮಠ ಮತ್ತು ಗುರುವರ್ಯರ ಮೇಲೆ ಇಟ್ಟಿರುವ ಭಕ್ತಿಗೆ ಸಾಕ್ಷಿ. ಮಳೆ ಬೇಡ್ವಾ ನಿಮಗೆ? ಬೇಕು. ದುಡ್ಡು ಬೇಡವಾ? ಬೇಕು. ಬದುಕಿಗೆ ಎಷ್ಟು ಬೇಕೋ ಅಷ್ಟು ಉಪಯೋಗವಾಗುತ್ತದೆ. ಕೃಷಿಗೆ ಅಗತ್ಯವಿದ್ದಷ್ಟು ಮಳೆ ಬೇಕು. ಮಳೆ ಹೆಚ್ಚಾಗಿ ತಿಂಗಳುಗಟ್ಟಲೆ ನೀರು ನಿಂತರೆ, ಬೆಳೆ ಕೊಳೆತು ಹೋಗುತ್ತವೆ. ದಾವಣಗೆರೆಯಲ್ಲಿ ಗಣೇಶೋತ್ಸವದಲ್ಲಿ ಒಂದು ಮಾತು ಹೇಳಿದ್ದೆವು. ಅದು ನಿಮ್ಮ ಕಿವಿಗೆ ಬಿತ್ತೊ ಇಲ್ಲವೋ ಗೊತ್ತಿಲ್ಲ. ಪತ್ರಿಕೆಯಲ್ಲಿ ಅದು ಬಂತೋ ಇಲ್ಲವೋ ಗೊತ್ತಿಲ್ಲ. ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದವರಿಗೆ ಒಂದು ನೆನಪಿನ ಕಾಣಿಕೆ ನೀಡುತ್ತೀರಿ. ಆ ಪದ್ಧತಿ ಇದೆ. ಆದರೆ ಇವತ್ತಿನ ಸಮಾರಂಭದಲ್ಲಿ ಯಾವ ಹಾರ, ತುರಾಯಿ ಇಲ್ಲದೆ, ಸರಳ ಮತ್ತು ಅಚ್ಚುಕಟ್ಟಾಗಿ ಮೂಲ ಉದ್ದೇಶ ಮಾತ್ರ ಗಮನದಲ್ಲಿಟ್ಟುಕೊಂಡು ಆಯೋಜಿಸಿದ್ದೀರಿ ಎಂದರು.

ಈ ಸ್ಮರಣಿಕೆ ಕೊಡುತ್ತಾರಲ್ಲ ಆ ರೀತಿ ಕೊನೆಗೆ ನಾವೂ ಭಕ್ತರಾದ ನಿಮಗೆ ಎರಡು ವಿಧದ ನೆನಪಿನ ಕಾಣಿಕೆ ಕೊಡಲು ಬಯಸುತ್ತವೆ. ಎರಡು ವಿಗ್ರಹಗಳಿರುತ್ತವೆ. ಒಂದು ಶ್ರೀ ರಾಮನದ್ದು, ಮತ್ತೊಂದು ರಾವಣನದ್ದು. ಇದರಲ್ಲಿ ಯಾವುದನ್ನು ಪಡೆಯಲು ಬಯಸುತ್ತೀರಿ ಎಂದು ಸಭಿಕರನ್ನು ಪ್ರಶ್ನಿಸಿದರು. ರಾಮನ ವಿಗ್ರಹ ಎಂಬ ಉತ್ತರ ಬಂತು. ಈಗ ಮತ್ತೊಂದು ಪ್ರಶ್ನೆ, ರಾಮನ ವಿಗ್ರಹ ಕಟ್ಟಿಗೆಯಿಂದ ಮಾಡಿದ್ದು, ರಾವಣನ ವಿಗ್ರಹ ಚಿನ್ನದಿಂದ ಮಾಡಿದ್ದು. ಈಗ ಪ್ರಾಮಾಣಿಕವಾಗಿ ಹೇಳಿ. ಕಟ್ಟಿಗೆಯ ರಾಮ ಬೇಕೋ? ಚಿನ್ನದ ರಾವಣ ಬೇಕೋ? ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. ಆದದ್ದಾಗಲಿ ಬೆಲೆಬಾಳುವ ಚಿನ್ನದ್ದೇ ಬೇಕು ಎಂದು ಆಯ್ದುಕೊಳ್ಳುತ್ತೀರಿ. ಯಾಕೆಂದರೆ ಅದು ಬಂಗಾರದ್ದು. ಹಾಗಾಗಿ, ಅದರ ಮೇಲೆ ಆಸೆ. ಯಾವಾಗ ಮನುಷ್ಯನ ಜೀವನ ವ್ಯವಹಾರಿಕವಾಗಿ ತಿರುಗಿತೋ ಆಗ ಎಲ್ಲ ಸಮಸ್ಯೆಗಳು ಉದ್ಭವಿಸುತ್ತವೆ. 

ಹಿಂದಿನ ಕಾಲದಲ್ಲಿ, ನಾವು ಬಾಲಕರಾಗಿದ್ದಾಗ, ಮುಯ್ಯಿ ಮಾಡುವ ಪದ್ಧತಿ ಇತ್ತು. ಈಗಲೂ ಅದು ಇದೆಯಾ? ಎಂದು ಪ್ರಶ್ನಿಸಿದರು. ಈಗ ಪ್ರಸಂಟೇಷನ್ ಎಂದು ರೂಢಿಯಲ್ಲಿದೆ. ಆಗ ಯಾರು ಏನು ಮುಯ್ಯಿ ಮಾಡಿದರು ಎಂದು ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ವಿ. ಈಗ ಅವರೇ ಬರೆದು ಕೊಡುತ್ತಾರೆ. ಆಗ ಮುಯ್ಯಿ ಕೊಟ್ಟವರ ಮನೆಯಲ್ಲಿ ಕಾರ್ಯಕ್ರಮ ಜರುಗಿದಾಗ ಮುಯ್ಯಿ ಕೊಟ್ಟು ಬರುತ್ತಿದ್ದರು. ಪ್ರಸ್ತುತ ಮುಯ್ಯಿ ಎನ್ನುವ ಶಬ್ದ ಮುಯ್ಯಿಗೆ ಮುಯ್ಯಿ ಎನ್ನುತ್ತಾ ಬಳಕೆಯಲ್ಲಿದ್ದು, ದ್ವೇಷದ ಅರ್ಥದಲ್ಲಿ ಬಳಕೆಯಾಗುತ್ತಿದೆ. ಪ್ರೀತಿಯಿಂದ ಉಡುಗೊರೆಗೆ ಪ್ರತಿಯಾಗಿ ಉಡುಗೊರೆ ನೀಡುವ ಮನಸ್ಥಿತಿ ಇಲ್ಲವಾಗಿದೆ. ಅವರು ಏನು ಕೊಟ್ಟಿರುತ್ತಾರೋ, ನಾವೇನು ಕೋಡುತ್ತೇವೋ ಎಂದು ಅಳೆದು ತೂಗಿ ನೋಡುವ ಸ್ಥಿತಿಯಲ್ಲಿದ್ದಾರೆ. 

ಈಚೆಗೆ ಲಗ್ನ ಪತ್ರಿಕೆಯೊಂದರಲ್ಲಿ ನೋಡಿದ್ದೇವೆ, ಮುಯ್ಯಿ ಸ್ವೀಕರಿಸುವುದಿಲ್ಲ ಎಂದು ಅಚ್ಚು ಹಾಕಿಸಿದ್ದರು.  ಯಾವಾಗ ಮನುಷ್ಯರ ಸಂಬಂಧ ವ್ಯವಹಾರಿಕವಾಗುತ್ತೊ ಹಾಗ ಸಂಬಂಧಗಳು ಹಾಳಾಗುತ್ತವೆ. ಪ್ರೀತಿಯಿಂದ ಕೊಡುವುದು ಬೇರೆ. ಏನೋ ಒಂದು ನಿರೀಕ್ಷೆ ಇಟ್ಟುಕೊಂಡು ಕೊಡುವುದು ಬೇರೆ. ಗಂಡ-ಹೆಂಡಿರ ಪ್ರೀತಿಗಿಂತ ತಾಯಿ ಮಕ್ಕಳ ಪ್ರೀತಿ ಅತ್ಯಂತ ಶುದ್ಧವಾದ ಪ್ರೀತಿ ಎಂದು ನಾವು ಭಾವಿಸುತ್ತೇವೆ. ತಾಯಿ ತನ್ನ ಮಗುವನ್ನು ಪ್ರೀತಿಸೋದು ತನಗೆ ವಯಸ್ಸಾದ ಮೇಲೆ ಮಗ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತಲ್ಲ. ಹಾಗಾಗಿ, ಗಂಡ-ಹೆಂಡಿರ ಪ್ರೀತಿಗಿಂತ ತಾಯಿ-ಮಕ್ಕಳ ಪ್ರೀತಿ ಅಪೂರ್ವವಾದುದು ಎಂದು ಮನವರಿಕೆ ಮಾಡಿದರು.

ತಾಯಿ-ಮಕ್ಕಳ ಪ್ರೀತಿ ಅನನ್ಯ :

ಧಾರ್ಮಿಕ ಕಾರ್ಯಕ್ರಮ ಎಂದರೆ ಬರೀ ಭಾಷಣ ಆಗಬಾದರು ಎಂದು, ಎಸ್.ಎಸ್. ಆಸ್ಪತ್ರೆಯವರ ಜತೆ ಮಾತನಾಡಿ, ಎಲ್ಲ ನಾಗರಿಕರಿಗೆ ಉಪಯುಕ್ತ ಆಗುವಂತೆ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲಾ ವೈದ್ಯರನ್ನು ಈ ಸಂದರ್ಭದಲ್ಲಿ ನಿಮ್ಮ ಪರವಾಗಿ ಅಭಿನಂದಿಸುತ್ತೇವೆ. ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ರಕ್ತದ ಅಗತ್ಯ ಇದೆ ಎಂದು ವೈದ್ಯರು ಹೇಳಿದಾಗ ಬ್ಲಡ್ ಬ್ಯಾಂಕ್ ಗೆ ಹೋಗಿ ರಕ್ತ ಕೊಡಿ ಎಂದು ಕೇಳುತ್ತೀರೇ ಹೊರತು, ಅಲ್ಲಿ ಲಿಂಗಾಯತರ ರಕ್ತ ಕೊಡಿ, ಬ್ರಾಹ್ಮಣರ ರಕ್ತ ಕೊಡಿ, ಮುಸ್ಲಿಮರ ರಕ್ತ ಕೊಡಿ ಎಂದು ಕೇಳಲ್ಲ. ಗಂಡುಮಕ್ಕಳಿಗೆ ಗಂಡುಮಕ್ಕಳ ರಕ್ತ, ಹೆಣ್ಣುಮಕ್ಕಳಿಗೆ ಹೆಣ್ಣುಮಕ್ಕಳ ರಕ್ತ ಕೊಡಿ ಎಂದು ಕೇಳುತ್ತಾರಾ? ಇಲ್ಲ. ಮನುಷ್ಯನಿಗೆ ತ್ಯಾಗ ಮನೋಭಾವ ಮುಖ್ಯ. ತಾಯಿಗೆ ತನ್ನ ಜೀವಕ್ಕಿಂತ ತನ್ನ ಮಗುವಿನ ಜೀವ ಪ್ರಧಾನವಾಗುತ್ತದೆ. ಅದಕ್ಕಾಗಿ ತನಗೆ ಎಷ್ಟೇ ನೋವಾದರೂ ಸಹಿಸಿಕೊಳ್ಳುತ್ತಾಳೆ. ಆ ನೋವನ್ನು ತಾಯಿ ಹೇಗೆ ಸಹಿಸಿಕೊಳ್ಳಬಲ್ಲಳು ಎಂದು ನೋಡುವುದಾದರೆ, ತನ್ನ ಗರ್ಭದಲ್ಲಿನ ಆ ಮಗುವಿನ ಮೇಲಿನ ಮಾತೃ ವಾತ್ಸಲ್ಯ ತಾಯಿಗೆ ನೋವನ್ನು ಸಹಿಸಿಕೊಳ್ಳುವ ಅರಿವಳಿಕೆಯಾಗಿ ಕೆಲಸ ಮಾಡುತ್ತದೆ. ತಾನು ಸತ್ತರೂ ಪರವಾಗಿಲ್ಲ ಆ ಮಗು ಬದುಕಬೇಕು ಎಂಬ ದೃಢತೆಯೇ ಮಾತೃ ವಾತ್ಸಲ್ಯ, ಪ್ರೀತಿ. ಅದೇ ಪ್ರೀತಿಯು ಮನುಷ್ಯನ ಬದುಕಿಗೆ ಬೇಕಿದೆ. ಸಂಪತ್ತು ಬೇಕು ನಿಜ. ಆದರೆ, ಎಲ್ಲಿ ಪ್ರೀತಿ ಅನುರಾಗ ಇರುವುದಿಲ್ಲವೋ  ಅಲ್ಲಿ ಸಂಪತ್ತು ತೆಗೆದೊಕೊಂಡು ಏನು ಮಾಡುತ್ತೀರಿ? ಸಂಪತ್ತಿನಿಂದ ಸುಖ ಇದೆ ನಿಜ, ಆದರೆ, ಸಂಪತ್ತೇ ಎಲ್ಲಾ ಸುಖವನ್ನು ತಂದುಕೊಡಲ್ಲ. ಮನುಷ್ಯನ ಹೃದಯಕ್ಕೆ ಬೇಕಿರುವುದು ಪ್ರೀತಿ. ಹಾಗಾಗಿ ಇವತ್ತಿನ ಸಮಾರಂಭ ಒಂದು ವಿಶೇಷ ಪ್ರೀತಿಯ ಸಮಾರಂಭ. ಲೌಕಿಕ ಜೀವನದಲ್ಲಿ ಪತಿ-ಪತ್ನಿಯರ ಮಧ್ಯೆ, ತಾಯಿ-ಮಕ್ಕಳ ಮಧ್ಯೆ, ಕುಟುಂಬದ ಸದಸ್ಯರ ಮಧ್ಯೆ ಹೇಗೆ ಪ್ರೀತಿ ಇರುತ್ತೋ ಅದು ಲೌಕಿಕ ಪ್ರೀತಿ. ಆದರೆ, ಇವತ್ತಿನ ಸಮಾರಂಭ ಅದೇ ಪ್ರೀತಿಯ ಇನ್ನೊಂದು ಸ್ವರೂಪ. ಅದು ನಿಮ್ಮೆಲ್ಲರಿಗೂ ಗುರುಗಳ ಮೇಲಿರುವ ಪ್ರೀತಿ ಇದೆಯಲ್ಲ ಅದನ್ನ ನಾವು ಭಕ್ತಿ ಎಂದು ಕರೆಯುತ್ತೇವೆ ಪ್ರೀತಿಯ ಇನ್ನೊಂದು ರೂಪವೇ ಭಕ್ತಿ. ಒಂದು ವಿಶೇಷವಾದ ಅನುರಕ್ತಿಯೇ ಭಕ್ತಿ ಎಂದು ಹೇಳಿದರು.

ಸಮಾಜಕ್ಕೆ ಜೀವ ತೆತ್ತ ಶ್ರೀಗಳು :

ನಮ್ಮ ಗುರುಗಳು ಶಿವಕುಮಾರ ಶಿವಾಚಾರ್ಯರು ನಮ್ಮ ನಿಮ್ಮನ್ನು ಅಗಲಿ ಇಲ್ಲಿಗೆ 30  ವರ್ಷಗಳಾದವು. ಆದರೂ ಅವರ ನೆನಪು ಮಾಸಿಲ್ಲ. ಇಲ್ಲಿರುವ ಮಕ್ಕಳು, ಯುವಕರಿಗೆ ಗಾಂಧೀಜಿ, ನೆಹರು, ಸುಭಾಷ್ ಚಂದ್ರ ಬೋಸ್ ಬಗ್ಗೆ ಕೇಳಿದರೆ ಸ್ವಲ್ಪ ಮಟ್ಟಿಗೆ ಬರೆದಾರು. ಆದರೆ, ಅವರ ಅಪ್ಪ, ಅಜ್ಜ, ಮತ್ತಜ್ಜನ ಹೆಸರು ಕೇಳಿದರೆ ಹೇಳಬಲ್ಲರು. ಅದಕ್ಕೂ ಮಿಗಿಲಾಗಿ ನಿಮ್ಮ ಅಜ್ಜನ ಅಜ್ಜನ ಹೆಸರೇನು ಎಂದರೆ ಗೊತ್ತೇಇಲ್ಲ. ಯಾಕೆ? ಆದರೆ, ಬುದ್ಧ, ಬಸವಣ್ಣ, ಹಿರಿಯ ಶ್ರೀಗಳ ಹೆಸರು ಗೊತ್ತು. ತಾತನ ತಾತನ ಹೆಸರು ಏನೆಂದು ನಿನಗೇಕೆ ಗೊತ್ತಿಲ್ಲ ಹೇಳಿ ನೋಡೋಣ….. ಯಾಕೆಂದರೆ, ಅಜ್ಜನ ಅಜ್ಜ ತನ್ನ ಕುಟುಂಬಕ್ಕೆ ಅಷ್ಟೇ ಮಾಡಿದರು. ಆದರೆ, ಬಸವಣ್ಣನಾಗಲಿ, ಲಿ.ಶಿವಕುಮಾರ ಶ್ರೀಗಳಾಗಲಿ ಅವರು ಸಮಾಜಕ್ಕಾಗಿ ಮಾಡಿದರು. ಅದಕ್ಕಾಗಿ ಸ್ಮರಿಸುತ್ತೇವೆ, ಸದಾ ನೆನಪಿನಲ್ಲಿಡುತ್ತೇವೆ. ಅದು ಅವರ ತ್ಯಾಗ. ನಮ್ಮ ಗುರುಗಳ ಗುರುಗಳಾದ ನಮಗೆ ಅಜ್ಜ ಆಗುವ, ನಮ್ಮ ಗುರು ಪಿತಾಮಹರಾದ ಗುರುಶಾಂತ ಶ್ರೀಗಳವರು. ಅರನ್ನು ಬಹಳ ಜನ ಮರೆತಿದ್ದೀರಿ. ಅದಕ್ಕಾಗಿ ನಾವು ಅವರ ಭಾವ ಚಿತ್ರ ವನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿದ್ದೇವೆ. ಯಾಕೆಂದರೆ ಅವರು ಸಮಾಜಕ್ಕಾಗಿ ಪ್ರಾಣ ತೆತ್ತವರು. 1938ರ ಆಗಸ್ಟ್ 11ರಂದು ಅವರಿಗೆ ಆಗದ, ಮಠದಲ್ಲೇ ಇದ್ದ ದುಷ್ಟ ಜನಗಳು, ದಾವಣಗೆರೆಯಿಂದ ಸಿರಿಗೆರೆಗೆ ದಣಿದು ಬಂದಿದ್ದ ಶ್ರೀಗಳು ಏನಾದರೂ ಕುಡಿಯಲು ಕೊಡಿ ಎಂದು ಕೇಳಿದಾಗ ದುಷ್ಟ ಕಾವಿಧಾರಿಗಳು ಮಜ್ಜಿಗೆಯಲ್ಲಿ ವಿಷ ಬೆರೆಸಿ ಕೊಟ್ಟು ಸಾಯಿಸಿಬಿಟ್ಟರು. ಆ ಹಿರಿಯ ಗುರುಗಳ ತ್ಯಾಗ ಬಲಿದಾನದ ಫಲವಾಗಿ ಈ ಸಮಾಜ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಅಂಥವರನ್ನು ಸ್ಮರಿಸಿಕೊಳ್ಳಬೇಕು. ನಾವು ಕಂಡಹಾಗೆ ಶಿಷ್ಯರಿಗೆ ಮಠ, ಗುರುಗಳ ಮೇಲೆ ಎಷ್ಟೊಂದು ಭಕ್ತಿ ಎಂದರೆ ಅವರ ಹೆಂಡತಿಯರನ್ನಾದರೂ ಬಿಟ್ಟಾರು ಗುರುಗಳನ್ನು ಬಿಡುವುದಿಲ್ಲ. ಅಂಥಹ ಭಕ್ತಿ ಶಿಷ್ಯರಲ್ಲಿದೆ. ಬಹಳ ಅಪರೂಪದ ಸಮಾಜಿಕ ಹೊಣೆಗಾರಿಕೆಯನ್ನು ನಮ್ಮ ಮಠದ ಎಲ್ಲಾ ಗುರುಗಳು ನಿರ್ವಹಿಸುತ್ತಾ ಬಂದಿದ್ದಾರೆ. ಕಾಲ ಕಾಲಕ್ಕೆ ಸಾಮಾಜಿಕವಾಗಿ ಆಗಬೇಕಾದ ಅತ್ಯವಶ್ಯಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತ್ಯಾಗ ಮನೋಭಾವದಿಂದ ದುಡಿದಿದ್ದಾರೆ. ಈ ಸಂದರ್ಭದಲ್ಲಿ ನಾವು ಹಿರಿಯ ಗುರುವರ್ಯರನ್ನು ಸ್ಮರಿಸಿದರೆ, ನೀವು ನಿಮ್ಮ ಹಿರಿಯರನ್ನು ನೆನಪಿಸಿಕೊಳ್ಳುತ್ತೀರಿ. ಸಾವು ನೀವು ಅತ್ಯಂತ ಪ್ರೀತಿಪಟ್ಟವರನ್ನ ಕುಟುಂಬದ ಸದಸ್ಯರನ್ನು ಎಳೆದೊಯ್ಯಬಹುದು, ಕೊನೆಗಾಣಿಸಬಹುದು. ಆದರೆ, ಅವರ ಮೇಲಿನ ನಿಮ್ಮ ಪ್ರೀತಿಯನ್ನು ಯಾರೂ ಕೊನೆಗಾಣಿಸಲು ಸಾಧ್ಯವಿಲ್ಲ ಎಂದರು.

ಬೇಸರ ತಂದ ರಾಜಕೀಯ :

ಇವತ್ತಿನ ಕೊಂಡಜ್ಜಿ ಗ್ರಾಮದ ಕಾರ್ಯಕ್ರಮ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿ ನಡೆದಿದೆ. ಒಂದು ತಿಗಣೆಗೂ ಬದುಕಬೇಕೆಂಬ ಆಸೆ ಇರುವಾಗ ಮನುಷ್ಯ ತಾನು ಬದುಕಬೇಕು ಎಂದು ಆಸೆ ಇಟ್ಟುಕೊಂಡರೆ ಏನು ತಪ್ಪು? ಏನೂ ತಪ್ಪಿಲ್ಲ. ಆದರೆ, ಇನ್ನೊಬ್ಬರ ರಕ್ತವನ್ನು ಹೀರಿ ಬದುಕುವುದಕ್ಕಿಂತ ಇನ್ನೊಬ್ಬರಿಗೆ ರಕ್ತ ಕೊಟ್ಟು ಬದುಕುವುದಿದೆಯಲ್ಲ ಅದು ಬಹಳ ಶ್ರೇಷ್ಠ. ನೀವು ಕೊಡುವ ರಕ್ತ ಹಲವರ ಜೀವ ಉಳಿಸುತ್ತದೆ. ಇದು ನಿಸ್ವಾರ್ಥ ಸೇವೆ. ಏನನ್ನೂ ನಿರೀಕ್ಷೆ ಮಾಡದೆ ತನಗೆ ಅಗತ್ಯ ಇದ್ದರೂ ಇನ್ನೊಬ್ಬರಿಗೆ ನೀಡುವುದಿದೆಯಲ್ಲ ಅದು ನಿಸ್ವಾರ್ಥ ತ್ಯಾಗ. ತ್ಯಾಗ ಬುದ್ಧಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಬದುಕು ಸುಂದರವಾಗಿರುತ್ತೆ. ಕೊಟ್ಟ ದಾನ ತೋರ್ಪಡಿಸಿಕೊಂಡರೆ ಅದಕ್ಕೆ ಯಾವ ಅರ್ಥವೂ ಉಳಿಯುವುದಿಲ್ಲ. ಧರ್ಮ ಕಾರ್ಯದಲ್ಲಿ ಸ್ವಾರ್ಥ ಇರಬಾರದು. ಶ್ರದ್ಧಾಂಜಲಿ ಸಮಾರಂಭಕ್ಕೆ ಅಕ್ಕಿ ಸಮರ್ಪಣೆ ಎಲ್ಲಾ ತಾಲ್ಲೂಕಿನಲ್ಲೂ ನಡೆಯುತ್ತಾ ಬಂದಿದೆ. ಮೊದಲು ಇದು ಇದ್ದಿಲ್ಲ. ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಬಸವನ ಗೌಡ್ರು ಸುಮಾರು 100 ಕ್ವಿಂಟಾಲ್ ನಷ್ಟು ಅಕ್ಕಿಯನ್ನು 10 ವರ್ಷ ಹಾಗೇ ಕಳುಹಿಸಿದರು. ಈ ರೀತಿ ಸಭೆ ಸಮಾರಂಭ ಇರುತ್ತಿರಲಿಲ್ಲ. ನಾವು ಯೋಚನೆ ಮಾಡಿ, ಹೊನ್ನಾಳಿಯಿಂದ ಕಾರ್ಯಕ್ರಮ ಶುರು ಮಾಡಿದ್ವಿ. ಅದು ಹೊನ್ನಳಿಯಿಂದ ಶಿವಮೊಗ್ಗ, ಭದ್ರಾವತಿಗೆ ಹಬ್ಬಿತು. ಹಾಗ ಹರಿಹರದವರು ಇನ್ನೂ ಮಲಗಿಕೊಂಡಿದ್ರು. ಹರಿಹರದ್ದೂ ಬಾಲ ಮುರುದ್ವಿ ಗುರುಸಿದ್ಧಪ್ಪ ಇದ್ದಾಗ, ಇಷ್ಟೊಂದು ಬತ್ತ ಬೆಳಿತೀರಿ ನೀವೊಂದು ಲೋಡು ಕೊಡಾಕಾಗೊಲ್ವಾ ಎಂದು. ಅದು 2013 ರಲ್ಲಿ ಹೊಳೆ ಸಿರಿಗೆರೆಯಲ್ಲಿ ಶುರುವಾಯ್ತು. ಕ್ರಮೇಣ ಇದೇನಾಯ್ತು ಎಂದ್ರೆ ಗುರುಗಳ ಮೇಲಿನ ಭಕ್ತಿಯಿಂದ ಮಾಡಬೇಕಾದ್ದು ಇದರಲ್ಲಿ ರಾಜಕೀಯ ನುಸುಳಿತು. ಇದನ್ನ ನೇರವಾಗಿ ಹೇಳುತ್ತೇವೆಇದನ್ನ ನಿಮಗೆ. ಆ ಪಾರ್ಟಿಯವರನ್ನ ಕರೆದಿದ್ದಾರೆ, ಈ ಪಾರ್ಟಿಯವರನ್ನ ಕರೆದಿದ್ದಾರೆ ಅಂತೇಳಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತೇಳಿ ಅವರ ಹೆಸರು ಬಿಟ್ಟಿದ್ದಾರೆ, ಇವರ ಹೆಸರು ಬಿಟ್ಟಿದ್ದಾರೆ ಶುರುವಾಯ್ತು. ಕೆಲ ಕಡೆ ಆಹ್ವಾನ ಪತ್ರಿಕೆಗಳು ಎರಡೆರೆಡು, ಎರಡು ಬಾರಿ ಮುದ್ರಣವೂ ಆದವು. ಇದಕ್ಕೆ ಬೇಸತ್ತು, ನಾವು ಈ ಕಾರ್ಯಕ್ರಮ ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆವು ಈ ರಾಜಕೀಯ ಬೇಡವೆಂದು. ಧರ್ಮ ರಾಜಕೀಯಕ್ಕೆ ದುರ್ಭಳಕೆ ಆಗಬಾರದು. ಅದಕ್ಕೆ ಅನುಗುಣವಾಗಿ “ಗುರುವಿಗೆ ಅಂಜಿ ಶಿಷ್ಯರು” ಎಂಬ ಮಾತಿನಂತೆ ನೀವೆಲ್ಲಾ ನಡೆದುಕೊಂಡ್ರಿ. ಹಿರಿಯ ಗುರುಗಳು ಬರೆದಿರುವಂತೆ “ಶಿಷ್ಯರಿಗೆ ಅಂಜಿ ಗುರುಗಳು” ಎಂ ಮಾತನ್ನು ಇವತ್ತು ಕೊಂಡಜ್ಜಿಯ ಭಕ್ತರು, ಹರಿಹರ, ಭದ್ರಾವತಿ ತಾಲ್ಲೂಕಿನ ಭಕ್ತರು ಕೊಂಡಜ್ಜಿಯಲ್ಲಿ ಸಾಬೀತುಮಾಡಿ ತೋರಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಆಹ್ವಾನ ಪತ್ರಿಕೆಯಲ್ಲಿ ಯಾರ ಹೆಸರನ್ನು ಹಾಕಬಾರದು ಎಂಬ ನಮ್ಮ ಷರತ್ತು ಪಾಲಿಸುವುದಾದರೆ ನಾವು ಒಪ್ಪಿಕೊಳ್ಳುತ್ತೇವೆ ಎಂದಿದ್ವಿ. ಆದರೆ, ತಮ್ಮ ಹೆಸರು ಹಾಕಲು ಒಪ್ಪಿಗೆ ಸೂಚಿಸಬೇಕು ಎಂದು ಪಟ್ಟು ಹಿಡಿದರು. ಅದಕ್ಕೆ ನಾವು ಒಪ್ಪಲಿಲ್ಲ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರನ ಹೆಸರು ಬಿಟ್ಟು ಅತಿಥಿಗಳ ಹೆಸರು ಹಾಕಿಸ್ತಿರಾ ಎಂದು ಪ್ರಶ್ನಿಸಿದರು. ಅದಕ್ಕೆ ಈಚೆಗೆ ವಿಶೇಷ ಆಹ್ವಾನಿತರು ಎಂದು ಹಾಕಿಸುತ್ತಿದ್ದಾರೆ ಎಂಬ ಉತ್ತರ ಬಂದಾಗ, ಮದುವೆ ಆಮಂತ್ರಣದಲ್ಲಿ ಮದುಮಕ್ಕಳ ಹೆಸರು ಇರಬೇಕೇ ಕೊರತು ಯಾವ ವಿಶೇಷ ಆಹ್ವಾನಿತರ ಹೆಸರು ಇರಕೂಡದು. ಇದನ್ನ ನೀವು ಪಾಲಿಸಬೇಕು. ಇದು ನಾವು ನಿಮಗೆ ಕೊಡುವ ಆದೇಶ. ಯಾಕೆಂದರೆ ಅದು ಪ್ರೀತಿಯ ಸಂಬಂಧ. ರಾಜಕೀಯ ಸಂಬಂಧ ಆಗಬಾರದು. ಸಭೆ ಸಮಾರಂಭ ಸಂಘಟಕರು ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು ಎಂದು ಸೂಚ್ಚವಾಗಿ ಹೇಳಿದರು.

ತಪ್ಪುಗಳನ್ನು ಶಿಷ್ಯರು ಮಾಡುತ್ತೀರಿ, ತಪ್ಪುಗಳಾದಾಗ ತಿದ್ದಬೇಕಾದ್ದು ಗುರುಗಳ ಜವಾಬ್ದಾರಿ. ಸಮಾಜದಲ್ಲಿ ಅನೇಕ ಸಮಸ್ಯೆಗಳಿರುತ್ತವೆ. ಒಬ್ಬರ ಆಲೋಚನೆಯಂತೆ ಇನ್ನೊಬ್ಬರ ಆಲೋಚನೆ ಇರಲ್ಲ.ಎರ ಅದನ್ನ ನೀವುಳು ಎತ್ಯಾಣಿಸದೆ ಎಲ್ಲರೊಡಗೂಡಿ ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಮಾಜದ ಮುಖಂಡರಿಗೆ ತಾಕೀತು ಮಾಡಿದರು.

ಸಮಾಜ ಸೇವೆಗೆ ಮಾಗನೂರು ಬಸಪ್ಪ ಅವರು ನಿಷ್ಠರಾಗಿದ್ದರು ಎಂದು ಸ್ಮರಿಸಿದರು : 

ದೊಡ್ಡ ಗುರುಗಳನ್ನು ಹಾಗೂ ನಮ್ಮ ಗುರು ಪರಂಪರೆಯನ್ನು ಎಷ್ಟು ಸ್ಮರಿಸಿದರೂ ಸಾಲದು. ಅದರ ಫಲವಾಗಿ ಇಂದು ಭಕ್ತರು ಹೃದಯ ಪೂರ್ವಕವಾಗಿ ಭಕ್ತಿ ಸಮರ್ಪಣೆ ಮಾಡುತ್ತಿದ್ದೀರಿ. ಬರೀ ಅಕ್ಕಿ ಕೊಡುವ ಬದಲು ಸಾಂಬಾರ್ ಮಾಡಲು ಬೇಳೆ ಕೊಡಿ ಎಂದು ಹೇಳಿದ್ದೆವು ಅದರಂತೆ 50 ಕ್ವಿಂಟಲ್ ನಂಬರ್ 1 ಕ್ವಾಲಿಟಿಯ ₹513000 ಮೌಲ್ಯದ ಬೇಳೆಯನ್ನು ಇಂದು ನೀವು ಬಕ್ತಿ ಸಮರ್ಪಿಸುತ್ತಿದ್ದೀರಿ ಎಂದು ಭಕ್ತರನ್ಙು ಕೊಂಡಾಡಿದರು.

ಅಕ್ಕಿಯೊಳಗನ್ನವನು ಮೊದಲಾರು ಕಂಡವರು :

ಅಕ್ಕರದ ಬರಹಕ್ಕೆ ಮೊದಲಿಗನಾರು ಎಂಬ ಸಾಲುಗಳನ್ನು ಉಲ್ಲೇಖಿಸಿದ ಶ್ರೀಗಳು, ನಾನು ನಾನು ಎನ್ನುತ್ತಾ ಹೆಸರಿಗಾಗಿ ಬೆನ್ನುಬಿದ್ದಿದ್ದಾರೆ. ಮನುಷ್ಯನಲ್ಲಿ ಅಹಂಕಾರ ಹೋಗಬೇಕು. ಸಮಾಜ ಸೇವಾ ಮತ್ತು ತ್ಯಾಗ ಮನೋಭಾವ ಬರಬೇಕು. ಆಗ ಮನುಷ್ಯ ಸುಖ ಮತ್ತು ಸಂತೋಷದಿಂದ ಜೀವನ ಮಾಡಲು ಸಾಧ್ಯ ಎಂದರು.

ಕೊಂಡಜ್ಜಿ ಬಸಪ್ಪ ಭಕ್ತಿ ಶ್ಲಾಘನೀಯ :

ನಿಮ್ಮೂರಿನಲ್ಲಿ ಹುಟ್ಟಿ ಬೆಳೆದ, ನಿಮ್ಮೂರಿನ ಹಿರಿಯರು ಕೊಂಡಜ್ಜಿ ಬಸಪ್ಪನವರು, ಅವರನ್ನು ನೆನಪಿಸಿಕೊಳ್ಳದಿದ್ದರೆ ಅಪಚಾರವಾಗುತ್ತೆ. ನಿಮ್ಮೂರಿನ ಹೆಸರು ಅವರ ಹೆಸರಿನ ಜತೆ ಬೆಸೆದುಕೊಂಡಿದೆ. ಒಂದು ರೀತಿ ಅವರು ಬೋಳೆ ಬಸಣ್ಣ ಅಲ್ವಾ? ಬಹಳ ಅಪರೂಪದ ವ್ಯಕ್ತಿ. ನಾವು ಯೂರೋಪ್ ನ ಯುಯನ್ನಾದಲ್ಲಿ ಓದಿ ಬೆಂಗಳೂರಿಗೆ ಹಿಂದಿರುಗಿದಾಗ ವಿಮಾನ ನಿಲ್ದಾಣದಲ್ಲಿ ದೊಡ್ಡ ಹೂವಿನ ಹಾರ ಹಿಡಿದು ಮೊಟ್ಟ ಮೊದಲು ಸ್ವಾಗತ ಮಾಡಿದವರು ಕೊಂಡಜ್ಜಿ ಬಸಪ್ಪನವರು. ಬೆಂಗಳೂರಿನಲ್ಲಿ ಮಠದ ಒಂದಿಂಚೂ ಜಾಗ ಇರಲಿಲ್ಲ. ಆಗಿನ ಸಿಎಂ ಗುಂಡೂರಾವ್ ಅವರು ಮಠಕ್ಕೆ ಬೆಂಗಳೂರಿನಲ್ಲಿ ನಿವೇಶನ ನೀಡುತ್ತೇವೆ ಎಂದು ತರಳಬಾಳು ಹುಣ್ಣುಮೆಯಲ್ಲಿ ಘೋಷಣೆ ಮಾಡಿದಂತೆ ಆರ್.ಟಿ.ನಗರದಲ್ಲಿ ನಿವೇಶನ ಮಂಜೂರು ಮಾಡಿಸಿಕೊಡುವಲ್ಲಿ ಕೊಂಡಜ್ಜಿ ಬಸಪ್ಪ ಮತ್ತು ಬಿಡಿಎ ಅಧಿಕಾರಿಯಾಗಿದ್ದ ಗಲಗಲಿ ಅವರು ನಾವು ಅಪೇಕ್ಷೆ ಪಟ್ಟಿದ್ದ ಜಾಗವನ್ನೇ ದೊರಕಿಸಿಕೊಟ್ಟರು. ಈ ಅಲ್ಲಿ ಬೃಹದಾಕಾರದ ಕಟ್ಟಡವಿದೆ. ಅಂದು ಸಮಾಜದಿಂದ 15 ಲಕ್ಷ ಬಂತು. 75 ಲಕ್ಷ ಸಂಗ್ರಹ ಆಗಲಿಲ್ಲ. ಅಲ್ಲಿ 10 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬೃಹತ್ ಕೇಂದ್ರವನ್ನು ನಿರ್ಮಿಸಿದ್ದೇವೆ. ಪ್ರಸ್ತುತ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಿಮ್ಮೆಲ್ಲರ ಶ್ರದ್ಧೆ ಭಕ್ತಿಯ ಕಾರಣದಿಂದ ಶ್ಲಾಘಿಸಿದರು.

ಉಗುಳುವ ಅಡಿಕೆ ಉಗುಳುವಬೆಳೆ ಹೆಚ್ಚಾಗಿದೆ, ಉಣ್ಣುವ ಭತ್ತ, ರಾಗಿ ಬೆಳೆ ಕಡಿಮೆಯಾಗಿದೆ. ಎಲ್ಲರಿಗೂ ಅಡಿಕೆ ಮೇಲೆ ಪ್ರೀತಿ. ಯಾಕೆಂದರೆ ಅಡಿಕೆಯಿಂದ ದುಡ್ಡು ಹೆಚ್ಚಾಗಿ ಸಿಗುತ್ತೆ ಅದಕ್ಕೆ. ಅಡಿಕೆ ಮೇಲೆ ಪ್ರೀತಿ. ರೈತರು ಮಿಶ್ರ ಬೆಳೆ ಪದ್ಧತಿ ರೂಢಿಸಿಕೊಳ್ಳಬೇಕು. ಅದಕ್ಕೆ ಅಗತ್ಯ ಮಾಹಿತಿ ಮತ್ತು ನೆರವನ್ನು ನಮ್ಮ ಕೃಷಿ ವಿಜ್ಞಾನ ಕೇಂದ್ರ ನೀಡುತ್ತದೆ. ಅಡಿಕೆಯಲ್ಲಿ ಮಿಶ್ರ ಬೆಳೆಯಾಗಿ ಕಾಳು ಮೆಣಸು, ಕೋಕೊ, ಜಾಯಿ ಕಾಯಿ ಬೆಳೆಯಬಹುದೆಂದು ಹೇಳುತ್ತಾರೆ. ತಜ್ಞರು ಅದಕ್ಕಾಗಿ ಇದ್ದಾರೆ. ತಾವೆಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ರೈತರಿಗೆ ಮಾತ್ರ ಹೆಣ್ಣು ಕೊಡುತ್ತೇವೆ ಅನ್ನೋ ಕಾಲ ಬರುತ್ತೆ….

ಹಿಮಾಚಲ ಪ್ರದೇಶದ ಗುಡ್ಡಗಾಡು ಜನರ ಕಷ್ಟದ ಬದುಕು ಮತ್ತು ಮಳೆಯಿಂದಾಗಿ ಕೋಟ್ಯಂತರ ಬೆಲೆಬಾಳುವ ಬಂಗಲೆಗಳ ಜನರ ಪರಿಸ್ಥಿತಿಯನ್ನು ನೋಡಿದರೆ ಇಲ್ಲಿನ ನೀವುಗಳು, ರೈತರು ಪುಣ್ಯವಂತರು. ನಿಮ್ಮಂಥ ಸುಖಪುರುಷರೇ ಯಾರಿಲ್ಲ. ಸಾಫ್ಟ್ ವೇರ್ ಎಂಜಿನಿಯರ್ ಗಳು ಸುಖಪುರುಷರಲ್ಲ. ರೈತನಾದ ನೀನೇ ರಾಜ. ಎಂಜಿನಿಯರ್ ಗಿಂತ ಹೆಚ್ಚು ಆದಾಯ ರೈತನದಾಗುತ್ತೆ. ಮುಂದೆ ರೈತರಿಗೆ ಮಾತ್ರ ಹೆಣ್ಣು ಕೊಡುತ್ತೇವೆ ಬೇರೆ ಯಾರಿಗೂ ಹೆಣ್ಣು ಕೊಡಲ್ಲ ಎನ್ನುವ ಕಾಲವೂ ಬರುತ್ತೆ. ಹಣ ಮುಖ್ಯವಲ್ಲ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವವನಾಗಬೇಕು. ಹಣ ಸಂಪತ್ತು ಸುಖವನ್ನು ಕೊಡುತ್ತದೆ ಎಂಬುದು ಸುಳ್ಳು. ಇದನ್ನು ಮನಗಂಡು ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಸೆ.24ರಂದು ಶ್ರೀಗಳ ಶ್ರದ್ಧಾಂಜಲಿ ವೇಳೆ ಸಿರಿಗೆರೆಯಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ತೀರ್ಮಾನಿಸಿದ್ದೇವೆ. ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಮುಖ್ಯ ಅದನ್ನು ಸರಿದೂಗಿಸಿಕೊಂಡು ಹೋಗಬೇಕು. ಕೊರೋನ ಕಾಲದಲ್ಲಿ ದಾವಣಗೆರೆ ಹರಿಹರ ಜನರು ಮಾಡಿದ ದಾಸೋಹ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು. 

ಧರ್ಮ ರಾಜಕೀಯಕ್ಕೆ ದುರ್ಬಳಕೆ ಆಗಬಾರದು :

ಧರ್ಮ ಎಂದರೆ ಭಾಷಣ ಅಲ್ಲ. ದ್ವೇಷ ಹಗೆತನ ಬೇಡ. ಇವು ಸಂಬಂಧ ಹಾಳು ಮಾಡುತ್ತವೆ. ಎಲ್ಲರೂ ಒಂದಾಗಿ ಬದುಕುವುದು ಧರ್ಮ. ಶಿವಮೊಗ್ಗದಲ್ಲಿ ನಡೆಸಿದ ಶಾಂತಿ ಪಾದಯಾತ್ರೆಯಲ್ಲಿ ಅಲ್ಲಿನ 16 ನ್ಯಾಯಾಧೀಶರು ಪಾಲ್ಗೊಂಡಿದ್ದರು ಇದು ದೇಶದ ಇತಿಹಾಸದಲ್ಲಿ ಮೊದಲು. ಧರ್ಮ ರಾಜಕೀಯ ಪ್ರೇರಿತ ಆಗಬಾರದು. ಸಮಾಜದ ಸ್ವಾಸ್ಥ್ಯ ರಾಜಕೀಯ ಕಾರಣಕ್ಕೆ ಹಾಳಾಗಬಾರದು. ಧರ್ಮ ರಾಜಕೀಯ ದುರ್ಬಳಕೆ ಆಗಬಾರದು. ಧರ್ಮ ಧರ್ಮವಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.