ಗುರುವಾಣಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

  •  
  •  
  •  
  •  
  •    Views  

  • ಸುಖವೆಂಬುದು  ವಸ್ತು ಸಂಗ್ರಹದಲ್ಲಿಲ್ಲ. ಸುಖವೆಂಬುದು ಆತ್ಮಾನುಗ್ರಹದಿಂದ ಆತ್ಮನಿಂದಲೇ ಆತ್ಮನಲ್ಲೇ ಸಿಗುವ ವಸ್ತುವು.
  • ಹೊರಗೆ ಎಲ್ಲೂ ಸುಖವನ್ನು ಹುಡುಕಬೇಡ. ಸುಖವು ನಿನ್ನಲ್ಲಿಯೇ ಇದೆ.
  • ಅಂದು (ಬಸವಣ್ಣನವರ ಕಾಲದಲ್ಲಿ) ದುಡಿಯುವುದು ಕಾಯಕವಾಗಿತ್ತು; ಇಂದು ಮಾತನಾಡುವುದೇ ಒಂದು ಕಾಯಕವಾಗಿದೆ. ದುಡಿಯದೆ ಅನಾಯಾಸವಾಗಿ ಸುಖಪಡಬೇಕೆಂಬ ಹಂಬಲವು ಇಡೀ ಜನಜೀವನವನ್ನೇ ಆವರಿಸಿದೆ. 
  • ಮನುಷ್ಯನು ಮನಸ್ಸಿನಿಂದಲೇ ಹಾಳಾಗುವುದು. ಉದ್ಧಾರವಾಗುವುದೂ ಮನಸ್ಸಿನಿಂದಲೇ.
  • ತನ್ನ ಮನಸ್ಸಿಗೆ ತಾನು ಅಂಜುವವನು ಶೀಘ್ರದಲ್ಲಿ ಉದ್ಧಾರವಾಗುತ್ತಾನೆ.  
  • ನಿಂದಿಸುವವರು ನೀನಿರುವತನಕ ನಿಂದಿಸುತ್ತಾರೆ. ಕಡೆಗೆ ಸುಮ್ಮನಾಗುತ್ತಾರೆ. ನಾಯಿಗಳು ಹೆದರುವವನನ್ನು ಕಂಡರೆ ಬಹಳವಾಗಿ ಬೊಗಳುತ್ತವೆ. ಕೈಯಲ್ಲಿ ದೊಣ್ಣೆಯುಳ್ಳವನನ್ನು ಕಂಡರೆ ದಿಕ್ಕಾಪಾಲಾಗಿ ಓಡುತ್ತವೆ. 
  • ಯಾವನು ತಾನು ಸತ್ಯವಂತನಾದರೂ ನಿಂದೆಗೆ ಪ್ರತಿನಿಂದೆಯನ್ನು ಮಾಡುತ್ತಾನೋ ಅವನು ತನ್ನ ವಾತಾವರಣವನ್ನು ಕೆಡಿಸಿಕೊಳ್ಳುತ್ತಾನೆ. 
  • ಮಗುವಿಗೆ ಆಟದ ಸಾಮಾನುಗಳು ಸಿಕ್ಕರೆ ತಾಯಿಯನ್ನು ಮರೆಯುವುದು ಸ್ವಭಾವ. ಜೀವಾತ್ಮನಿಗೆ ವಿಷಯಗಳು ಸಿಕ್ಕರೆ ಪರಮಾತ್ಮನನ್ನು ಮರೆಯುವುದೂ ಸ್ವಭಾವ. 
  • ಬ್ರಹ್ಮಚರ್ಯವಿಲ್ಲದವನು ಎಷ್ಟು ಗುಣಗಳನ್ನು ಸಂಪಾದಿಸಿದರೂ ಸ್ಥಿರವಾಗಿ ನಿಲ್ಲುವುದಿಲ್ಲ. ತೂತಿನ ಮಡಿಕೆಗೆ ನೀರು ಹಾಕಿದಂತಾಗುತ್ತದೆ. ಬ್ರಹ್ಮಚರ್ಯವಿಲ್ಲದವನು ಶಾಂತಿಯನ್ನು ಪಡೆಯಲಾರನು. 
  • ಸತ್ಯ, ಬ್ರಹ್ಮಚರ್ಯ, ಪರೋಪಕಾರ ಈ ಮೂರು ಪರಮೇಶ್ವರನಲ್ಲಿಗೆ ಕರೆದುಕೊಂಡು ಹೋಗಲು ಸಾಧನಗಳು. ಸತ್ಯವೇ ರಥ. ಬ್ರಹ್ಮಚರ್ಯವೇ ಸಾರಥಿ. ಪರೋಪಕಾರವೇ ಅಶ್ವ. 
  • ನುಡಿದಂತೆ ನಡೆಯುವುದನ್ನೂ ನಡೆದಂತೆ ನುಡಿಯುವುದನ್ನೂ ಕಲಿಯಬೇಕು. ನುಡಿ ಪುರಾತನರದಾಗಿ, ನಡೆ  ಕಿರಾತರದಾಗಬಾರದು. 
  • ಕೇವಲ ಧರ್ಮ ಜ್ಞಾನದಿಂದ ನಾವು ಧರ್ಮಾನುಯಾಯಿಗಳಾಗಲಾರೆವು. ಜ್ಞಾನಕ್ಕೆ ತಕ್ಕಂತೆ ಆಚರಣೆ ಇರಬೇಕು. 
  • ನೀತಿಯ ನೆಲೆಗಟ್ಟಿನ ಮೇಲೆ ನಿಂತ ಜೀವನವೇ ತುಂಬು ಜೀವನ.
  • ಶಿಕ್ಷಣದಲ್ಲಿ ಪರಿವರ್ತನೆಯಾಗದೆ ಜಗತ್ತಿಗೆ ಸುಖವಿಲ್ಲ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯಾವಹಾರಿಕ, ಆಧ್ಯಾತ್ಮಿಕ ಮೂರು ಶಿಕ್ಷಣಗಳನ್ನು ಕೊಡಬೇಕು.
  • ಸ್ತ್ರೀಯರಲ್ಲಿ ಸುಖವಿದ್ದರೆ ಪುರುಷರನ್ನು ಅವರು ಬಯಸುತ್ತಿರಲಿಲ್ಲ. ಪುರುಷರಲ್ಲಿ ಸುಖವಿದ್ದರೆ ಅವರು ಸ್ತ್ರೀಯರನ್ನು ಬಯಸುತ್ತಿರಲಿಲ್ಲ. ಇವರು ಅವರಲ್ಲಿ ಸುಖವಿದೆಯೆನ್ನುತ್ತಾರೆ. ಅವರು ಇವರಲ್ಲಿದೆಯೆನ್ನುತ್ತಾರೆ. ವಿಚಾರಶೀಲನಿಗೆ ಸುಖವು ಇಬ್ಬರಲ್ಲೂ ಇಲ್ಲ. ಆತ್ಮನಲ್ಲೇ ಸುಖವಿರುವುದು. ಆತ್ಮನೇ ಸುಖಕ್ಕಾಧಾರಭೂತನು.

-ಶ್ರೀ ತರಳಬಾಳು ಜಗದ್ಗುರು 
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು