ಸೆ.20 ರಿಂದ ಐದು ದಿನ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಆಚರಣೆ
ಸಿರಿಗೆರೆ: ನಾಡಿನ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳ ಅಭಿವೃದ್ಧಿಗೆ ನಾಲ್ಕು ದಶಕಗಳ ಕಾಲ ಶ್ರಮಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭವನ್ನು ಸೆ. 20ರಿಂದ ಐದು ದಿನಗಳ ಕಾಲ ಆಚರಿಸಲಾಗು ವುದು ಎಂದು ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ತಿಳಿಸಿದರು.
ಇಲ್ಲಿನ ಸದ್ಧರ್ಮ ನ್ಯಾಯಪೀಠದ ಆವರಣದಲ್ಲಿ ನಡೆದ 30ನೇ ಶ್ರದ್ಧಾಂಜಲಿ ಸಮಾರಂಭದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾರಂಭಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುವುದು. ಸಾಹಿತಿಗಳು, ವಿದ್ವಾಂಸರು, ಗಣ್ಯರು ಭಾಗವಹಿಸುವರು ಎಂದರು.
ಕಾರ್ಯಕ್ರಮದ ಅಂಗವಾಗಿ ಸೆ.20ರಿಂದ ರಾಜ್ಯದ 14 ಜಿಲ್ಲೆಗಳಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ.
ಅಲ್ಲಿ ವಿಜೇತ ತಂಡಕ್ಕೆ ಸಮಾರಂಭದಲ್ಲಿ ಪ್ರದರ್ಶನವಿರುತ್ತದೆ. ನಗದು ಬಹುಮಾನ, ಪ್ರಶಸ್ತಿ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ತಿಳಿಸಿದರು.
ಸೆ. 20ರಂದು ಪ್ರಾಥಮಿಕ, 21ರಂದು ಪ್ರೌಢಶಾಲೆ ಹಾಗೂ 22ರಂದು ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ.
ನಿವೃತ್ತ ನೌಕರರ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾವೇಶ :
ಸೆ. 23ರಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ದೇಶ, ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನೌಕರರ ಸಮಾವೇಶ ಜರುಗಲಿದೆ.
ಸೆ.24ರ ಶನಿವಾರ ಬೆಳಿಗ್ಗೆ 11ಕ್ಕೆ ಶ್ರದ್ಧಾಂಜಲಿ ಸಮಾರಂಭ ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ಭವನದ ಮುಂಭಾಗದ ಮಹಾಮಂಟಪದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಅತಿಥಿ ಗಣ್ಯರು ಭಾಗವಹಿಸುವರು.
30ನೇ ಶ್ರದ್ಧಾಂಜಲಿ ಸಮಾರಂಭದ ಪ್ರಯುಕ್ತ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ರೈತರಿಗೆ ಕೃಷಿ ಪರಿಕರಗಳು ಹಾಗೂ ಉತ್ಪನ್ನಗಳ ಸ್ಟಾಲ್ಗಳನ್ನು ಹಾಕಲಾಗುವುದು ಎಂದು ಮಾಹಿತಿ ನೀಡಿದರು. 23ರಂದು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಭಾವಚಿತ್ರ ಮೆರವಣಿಗೆ ಜರುಗುವುದು.
ಸಭೆಯಲ್ಲಿ ಸಿರಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯಸ್ಥರು, ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ಭಾಗವಹಿಸಿದ್ದರು.
ತುಮ್ಕೋಸ್ ಸಂಸ್ಥೆ : ಲಕ್ಷ ಲಾಡು :
ಪ್ರತಿ ವರ್ಷದಂತೆ ಈ ವರ್ಷವೂ ಚನ್ನಗಿರಿ ತುಮ್ಕೋಸ್ ಸಂಸ್ಥೆ ವತಿಯಿಂದ ಒಂದು ಲಕ್ಷ ಲಾಡನ್ನು ದಾಸೋಹಕ್ಕೆ ಸಮರ್ಪಿಸಲಾಗುವುದು ಎಂದು ಅಧ್ಯಕ್ಷ ಅಜ್ಜಿಹಳ್ಳಿ ರವಿ ತಿಳಿಸಿದರು.
ಈಗಾಗಲೇ ಕೊಂಡಜ್ಜಿ ಗ್ರಾಮಸ್ಥರು ಹಾಗೂ ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದಿಂದ ದಾಸೋಹಕ್ಕೆ 50 ಕ್ವಿಂಟಲ್ ಬೇಳೆ, ಭದ್ರಾವತಿ ತಾಲ್ಲೂಕು ಸೈದರಕಲ್ಲಹಳ್ಳಿ ಭಕ್ತರು ನೂರು ಕ್ಷಿಂಟಲ್ ಅಕ್ಕಿ ಸಮರ್ಪಣೆ ಮಾಡಿದ್ದಾರೆ. ಇನ್ನೂ ಕೆಲವರು ಬೆಲ್ಲ, ತರಕಾರಿ ಇತರೆ ದವಸ ಧಾನ್ಯಗಳನ್ನು ಭಕ್ತರು ಸಮರ್ಪಿಸುವರು ಎಂದರು.
ಮಹಾದಾಸೋಹಕ್ಕೆ ಕೊಂಡಜ್ಜಿ ಗ್ರಾಮಸ್ಥರು ಹಾಗೂ ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದಿಂದ ದಾಸೋಹಕ್ಕೆ 50 ಕ್ವಿಂಟಲ್ ಬೇಳೆ ಸಮರ್ಪಿಸಿರುತ್ತಾರೆ.
ಮಹಾದಾಸೋಹಕ್ಕೆ ಸೈದರಕಲ್ಲಹಳ್ಳಿ ಭಕ್ತರು ಹಾಗೂ ಭದ್ರಾವತಿ ತಾಲ್ಲೂಕು ಸಾಧು ವೀರಶೈವ ಸಮಾಜದಿಂದ ಒಂದು ನೂರು ಕ್ಷಿಂಟಾಲ್ ಅಕ್ಕಿಯನ್ನು ಸಮರ್ಪಿಸಿರುತ್ತಾರೆ.