ಶ್ರೀ ಗುರುವಾಣಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

  •  
  •  
  •  
  •  
  •    Views  

  • ಯಾವ ಸಮಾಜದಲ್ಲಿ ಉತ್ತಮ ತಾಯಂದಿರಿಲ್ಲವೋ ಆ ಸಮಾಜವು ಮುಂದುವರಿಯುವುದು ಸಾಧ್ಯವಿಲ್ಲ.
  • ಇಂದು ಪ್ರಜಾಪ್ರಭುತ್ವ ಬಂದಿದೆಯಾದರೂ ನೇರವಾಗಿ ಅದರ ಬಳಕೆಯನ್ನು ಮಾಡಿಕೊಳ್ಳುವಷ್ಟು ವಿವೇಕ ಮತ್ತು ಸಾಮರ್ಥ್ಯಗಳು ನಮ್ಮ ಜನತೆಯಲ್ಲಿ ಇಲ್ಲ.
  • ಎಲ್ಲಿಯವರೆಗೆ ನಾವು ಪರಮತ ಸಹಿಷ್ಣುತೆಯನ್ನು ಕಲಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ರಾಜ್ಯಾಂಗದಲ್ಲಿರುವ ಜಾತ್ಯತೀತ ಘೋಷಣೆಗೆ ಕವಡೆಯ ಬೆಲೆಯೂ ದೊರೆಯಲಾರದು.
  • ನಾಯಕನಾಗುವವನು ಜನತೆಗೆ ಬೇಕಾದುದನ್ನು ಕೊಡಬೇಕೇ ವಿನಾ ಜನತೆ ಬಯಸಿದ್ದನ್ನು ಕೊಡಬಾರದು. ಇಂದಿನ ನಾಯಕರು ಜನತೆಗೆ ಬೇಕಾದ್ದನ್ನು ಕೊಡುವಲ್ಲಿ ವಿಮುಖರಾಗಿ ಜನತೆ ಬಯಸಿದುದನ್ನು ಕೊಡುತ್ತಾ ಅಗ್ಗದ ಜನಪ್ರಿಯರಾಗುತ್ತಿದ್ದಾರೆ.
  • ಯಾವುದೇ ತತ್ತ್ವಸಿದ್ಧಾಂತವಾಗಲಿ ಪರಿಶ್ರಮವಿಲ್ಲದೆ ಪ್ರಚುರವಾಗಲಾರದು; ತ್ಯಾಗ ಬಲಿದಾನಗಳಿಲ್ಲದೆ ಪ್ರಸಿದ್ಧಿ ಪಡೆಯದು. ತತ್ತ್ವಸಿದ್ಧಾಂತದಲ್ಲಿ ನಂಬಿಕೆಯುಳ್ಳವರು, ಸಿದ್ಧಾಂತದಲ್ಲಿ ನಿಷ್ಠೆಯುಳ್ಳವರು, ಅದಕ್ಕಾಗಿ ಪರಿಶ್ರಮ ಪಡಲೇಬೇಕು. ಬಲಿದಾನ ಮಾಡಲೇಬೇಕು.
  • ಇಸ್ಲಾಂ ಮತೀಯರಿಂದ ನಾವು ಸಮಾನತೆಯ ಪಾಠವನ್ನು ಕಲಿಯಬೇಕು; ಮಸೀದಿಯಲ್ಲಿ ಪ್ರಾರ್ಥನೆ ನಡೆಯಿಸುವಾಗ ಅವರಲ್ಲಿ ದೊರೆಯೂ ಒಂದೇ, ಭಿಕ್ಷುಕನೂ ಒಂದೇ.
  • ಧರ್ಮವು ಇಹ ಜೀವನದ ಪರಿಶುದ್ಧತೆಗೆ ಮುಖ್ಯ ಸಾಧನವಾಗಿರುವುದರ ಮೂಲಕ ಪರಲೋಕದ ಸಿದ್ಧಿಯನ್ನು ಸಾಧಿಸುತ್ತದೆ.
  • ಜಾತಿಯು ಜನತೆಯನ್ನು ವಿಂಗಡಿಸಿದರೆ ಧರ್ಮವು ಒಗ್ಗೂಡಿಸುತ್ತದೆ.
  • ಧರ್ಮದ ಪ್ರಯೋಜನವು ಒಬ್ಬ ವ್ಯಕ್ತಿಯ ಬದುಕಿಗೆ ಪರಿಮಿತವಾಗಿಲ್ಲ. ಧರ್ಮವು ವ್ಯಕ್ತಿ ಮತ್ತು ಸಮಾಜಗಳ ಐಹಿಕ, ಅಮುಕ್ತಿ ಸಿದ್ಧಿಗೆ ಸಾಧನ.
  • ವ್ಯಕ್ತಿಯ ಗೌರವವಾಗಲಿ, ಪೂಜ್ಯತೆಯಾಗಲಿ, ಅವನ ಹುಟ್ಟಿನಿಂದ ಪರಿಗಣಿಸಲ್ಪಡದೆ ಯೋಗ್ಯತೆಯನ್ನು ಅವಲಂಬಿಸಿರಬೇಕು.
  • ವಿಶ್ವಬಂಧು ಮರುಳಸಿದ್ಧ ಮತ್ತು ಅಣ್ಣ ಬಸವಣ್ಣ ಇವರೀರ್ವರು ಸ್ವಲ್ಪ ಹೆಚ್ಚು ಕಡಿಮೆ ಒಂದೇ ಕಾಲದವರು; ಒಂದೇ ತತ್ತ್ವದವರು. ಅಂತೆಯೇ ಇವರಿಬ್ಬರ ಧ್ಯೇಯವು ಒಂದೇ. ಇವರ ಇತಿಹಾಸವನ್ನು, ಜೀವನವನ್ನು ಪರಿಶೀಲಿಸಿದರೆ ಇವರ ಸಾಮರಸ್ಯವು ಕಾಣದಿರದು. ಅಣ್ಣ ನುಡಿದಂತೆ ನಡೆದವನು. ಮರುಳಸಿದ್ಧನು ನಡೆದಂತೆ ನುಡಿದವನು. ಇವರೀರ್ವರ ಹೋರಾಟ ಕ್ರಮದಲ್ಲಾಗಲೀ, ಜೀವನದ ರೀತಿಯಲ್ಲಾಗಲೀ ಭಿನ್ನತೆಯಿಲ್ಲ.
  • ಈಗಿನ ಸನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ.
  • ಯಾರು ಮಾರ್ಗದರ್ಶಕರೋ ಅವರೇ ಮಾರ್ಗ ತಪ್ಪಿ ನಡೆದರೆ ಕುರುಡನ ಕೈಹಿಡಿದು ಕುರುಡ ನಡೆದಂತಾದೀತು.
  • ದೇಹಕ್ಕೆ ಆಹಾರದ ಅವಶ್ಯಕತೆ ಇರುವಂತೆ ಆತ್ಮಕ್ಕೆ ಜ್ಞಾನದ ಅವಶ್ಯಕತೆ ಇದೆ. ಆಹಾರವು ದೇಹವನ್ನು ಪೋಷಿಸುವಂತೆ ಜ್ಞಾನವು ಆತ್ಮವನ್ನು ಪೋಷಿಸುತ್ತದೆ.
  • ಈಶ್ವರನಲ್ಲಿ ಭಕ್ತಿಯನ್ನಿಟ್ಟು ನಡೆಯುವವನು ಪಾಪಾಚರಣೆಗಳನ್ನು ಮಾಡಲಾರ. ಭಕ್ತನಿಂದ ಪಾಪಕೃತ್ಯಗಳು ಜರುಗುತ್ತಿದ್ದರೆ ಅವನೆಂದಿಗೂ ಭಕ್ತನಲ್ಲ.

-ಶ್ರೀ ತರಳಬಾಳು ಜಗದ್ಗುರು 
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು