ಶ್ರದ್ಧಾಂಜಲಿ ಸ್ಮರಣಾರ್ಥ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಇಂದು

  •  
  •  
  •  
  •  
  •    Views  

ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಶ್ರದ್ದಾಂಜಲಿ ಕಾರ್ಯಕ್ರಮದ ಸ್ಥಳ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಸಂಚಾಲಕರು ಹಾಗೂ ಭಕ್ತರು ಇದ್ದರು.

ಸಿರಿಗೆರೆ: ಶ್ರೀ ತರಳಬಾಳು ಬೃಹನ್ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸ್ಮರಣಾರ್ಥ ಸಿರಿಗೆರೆ ಪ್ರಾದೇಶಿಕ ವಲಯದ ಶಾಲಾ-ಕಾಲೇಜುಗಳ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ವಲಯ ಮಟ್ಟದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ಜರುಗುವವು ಎಂದು ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕ ಹಾಗೂ ಪ್ರಾದೇಶಿಕ ಅಧಿಕಾರಿ ಎಚ್.ಎ.ವಿಶ್ವಕುಮಾರ್ ತಿಳಿಸಿದರು.

ಪ್ರತಿವರ್ಷದಂತೆ ಶ್ರದ್ಧಾಂಜಲಿ ಸ್ಮರಣಾರ್ಥ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಪ್ರಾದೇಶಿಕ ವಲಯ ಮಟ್ಟದಲ್ಲಿ ಏರ್ಪಡಿಸುತ್ತಾ ಬಂದಿದ್ದು, ಸೆ.20 ರಿಂದ 24ರವರೆಗೆ ನಡೆಯುವ ಪ್ರತಿದಿನದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ತಂಡದಿಂದ ಪ್ರದರ್ಶನ ನೀಡಲಾಗುತ್ತದೆ ಹಾಗೂ ಪ್ರಮಾಣ ಪತ್ರದೊಂದಿಗೆ ಬಹುಮಾನ ನೀಡಲಾಗುವುದು ಎಂದರು. 

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು:

ವಚನಗಾಯನ, ವಚನನೃತ್ಯ, ಜಾನಪದ ನೃತ್ಯ, ಏಕಪಾತ್ರಭಿನಯ, ಪ್ರಬಂಧ ಸ್ಪರ್ಧೆ, ಆಶುಭಾಷಣ, ಚಿತ್ರಕಲೆ, ಕನ್ನಡ-ಇಂಗ್ಲಿಷ್ ಸುಂದರ ಬರವಣಿಗೆ, ರಸಪ್ರಶ್ನೆ, ಕಿರುನಾಟಕ ಸ್ಪರ್ಧೆಗಳು ನಡೆಯುವವು.

ಸೆ.23ರ ಸಂಜೆ 3ಕ್ಕೆ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ  ಭಾವಚಿತ್ರದ ಮೆರವಣಿಗೆ ಶ್ರೀಮಠದ ಸಕಲ ಬಿರುದಾವರೆಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು ಎಂದು ಮೆರವಣಿಗೆ ಸಂಚಾಲಕರು ತಿಳಿಸಿದರು. 

ಬುಧವಾರದಂದು ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಗ್ರಾಮದ ಸದ್ಭಕ್ತರು ಒಂದು ನೂರು ಕ್ವಿಂಟಾಲ್ ಅಕ್ಕಿಯನ್ನು ದಾಸೋಹಕ್ಕೆ ಸಮರ್ಪಿಸಿರುತ್ತಾರೆ.

ಸೆ.20ರಿಂದ ಪ್ರಾರಂಭವಾಗುವ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಭಕ್ತಾದಿಗಳು ಆಗಮಿಸುವುದರಿಂದ ಬೃಹತ್ ಮಂಟಪದ ಕಾರ್ಯ ಭರದಿಂದ ಸಾಗಿದೆ. ದಾನಿಗಳಿಂದ ವಿವಿಧ ದವಸ ಧಾನ್ಯಗಳನ್ನು ಸಮರ್ಪಿಸುತ್ತಿರುವುದು ಕಂಡು ಬಂದಿತು. 

ಬೃಹನ್ಮಠದ ಐಕ್ಯಮಂಪಟದಲ್ಲಿ ಬೆಳ್ಳಿಸಿಂಹಾಸನ ಹಾಗೂ ಪಕ್ಕದ ಕೊಠಡಿಗಳಲ್ಲಿ ವಿಶ್ವಬಂಧು ಮರುಳಸಿದ್ಧರ ಚಿತ್ರಕಥೆಯ ವಿವರಣೆಗಳ ಫಲಕಗಳನ್ನು ಭಕ್ತರ ದರ್ಶನಕ್ಕೆ ಇಡಲಾಗಿದೆ.

ಶ್ರೀ ಗುರುಶಾಂತೇಶ್ವರ ಭವನದಲ್ಲಿ ಹಿಂದಿನ ಕಾಲದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಜೊತೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾನೀಯರ ಭಾವಚಿತ್ರಗಳನ್ನು ಪರಿಚಯಿಸುವುದಕ್ಕೆ ಅವುಗಳನ್ನು ಗೋಡೆಗೆ ಹಾಕಿ ಸಿಂಗರಿಸಲಾಗುತ್ತಿದೆ.