ರೈತರ ತೀರ್ಥಕ್ಷೇತ್ರವಾದ ಭರಮಸಾಗರದ ಕೆರೆ

  •  
  •  
  •  
  •  
  •    Views  

"ಕನ್ನಡಂ ಎನಿಪ್ಪ ಆ ನಾಡು ಚೆಲ್ವಾಯ್ತು, ಮೆಲ್ಲಲರಿಂ, ಪೂತ
ಕೊಳಂಗಳಿ೦, ಕೆರೆಗಳಿಂ, ಕಾಲೂರ್ಗಳಿಂ, ಕೆಯ್ದಳಿಮ್!

ಅಂದರೆ ಕನ್ನಡವೆಂಬ ಈ ನಾಡು ಮಂದ ಮಾರುತದಿಂದಲೂ, ಹೂಗಳಿಂದ ಕೂಡಿದ ಕೊಳಗಳಿಂದಲೂ, ಕೆರೆಗಳಿಂದಲೂ, ಹಳ್ಳಿಯ ಹೊಲಗದ್ದೆಗಳಲ್ಲಿ ನಿಂತ ಬೆಳೆಗಳಿಂದಲೂ ಕೂಡಿ ಚೆಲುವಾಗಿತ್ತು ಎಂದು ಕವಿ ಆಂಡಯ್ಯನು ತನ್ನ 'ಕಬ್ಬಿಗರ ಕಾವಂ' ಕೃತಿಯಲ್ಲಿ ಮನೋಜ್ಞವಾಗಿ ವರ್ಣಿಸುತ್ತಾನೆ. ಅಂತೆಯೇ ಕರ್ನಾಟಕದಲ್ಲಿ ಕೆರೆಗಳಿಲ್ಲದ ಊರಿಲ್ಲ. ಊರಿಗೊಂದು ಕೆರೆಕೆರೆಯಲ್ಲಿ ಅರಳಿದ ತಾವರೆ; ಅದಕ್ಕೆ ಝೇಂಕರಿಸುತ್ತಾ ಮುತ್ತುವ ದುಂಬಿಗಳ ದಂಡು! ಕರ್ನಾಟಕದ ಹಳೆಯ ಮೈಸೂರು ಪ್ರಾಂತ್ಯದಲ್ಲಿರುವ ಅನೇಕ ಹಳ್ಳಿಗಳ ಹೆಸರು 'ಕೆರೆ'ಯಿಂದ ಕೊನೆಗೊಳ್ಳುತ್ತವೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲಿಯೇ ಹೊಳಲ್ಕೆರೆ, ಸಿರಿಗೆರೆ, ಚಳ್ಳಕೆರೆ ಹೀಗೆ ಸುಮಾರು ಒಂದು ನೂರು ಹಳ್ಳಿಗಳ ಹೆಸರಿನ ಕೊನೆಯಲ್ಲಿ 'ಕೆರೆ' ಬರುತ್ತದೆ. ಹಳ್ಳಿಯ ಜನಜಾನುವಾರುಗಳ ಜೀವನಾಡಿ ಕೆರೆ. ಹಿಂದಿನ ರಾಜಮಹಾರಾಜರಕಾಲದಲ್ಲಿ ಕೆರೆಯನ್ನು ಕಟ್ಟಿಸುವುದು ಒಂದು ಪುಣ್ಯಕಾರ್ಯವೆಂಬ ಭಾವನೆ ಇತ್ತು. ವಿಜಯನಗರದ ಅರಸರ ಕಾಲದಲ್ಲಿ ಮಂತ್ರಿಯಾಗಿದ್ದ ಪದ್ಮರಸ ಅನೇಕ ಕೆರೆಗಳನ್ನು ನಿರ್ಮಿಸಿ 'ಕೆರೆಯ ಪದ್ಮರಸ'ನೆಂದೇ ಖ್ಯಾತಿಯನ್ನು ಗಳಿಸಿದ್ದ ಈಗಿನ ಸರಕಾರದ ಆಡಳಿತದಲ್ಲಿ ದೊಡ್ಡ ದೊಡ್ಡ ಡ್ಯಾಂಗಳು Major Irrigationಗೆ ಸೇರಿದರೆ ಸಣ್ಣ ದೊಡ್ಡ ಕೆರೆಗಳು Irrigationಗೆ ಸೇರುತ್ತವೆ. ಹಿಂದಿನ ರಾಜಮಹಾರಾಜರು ಮತ್ತು ಪಾಳೆಯಗಾರರ ಕಾಲದಲ್ಲಿ ಸುಮಾರು ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣವುಳ್ಳಕೆರೆಗಳು ಅವುಗಳನ್ನು ಕಟ್ಟಿಸಿದ ರಾಜಮಹಾರಾಜರಹೆಸರಿನಲ್ಲಿವೆ. ಅಂತಹ ಕೆರೆಗಳ ಹೆಸರಿನ ಕೊನೆಯಲ್ಲಿ ಅಂಬು, ಸಾಗರ, ಸಮುದ್ರ ಎಂದು ಇರುವುದನ್ನು ಕಾಣಬಹುದು. ಉದಾಹರಣೆಗೆ 'ಬುಕ್ಕಾಂಬು, ಭರಮಸಾಗರ, ಭೀಮಸಮುದ್ರ'. ಸಮುದ್ರದಂತೆ ಕಾಣುವ ಅಂತಹ ಬೃಹದಾಕಾರದ ಕೆರೆಗಳನ್ನು ಈಗಿನ ಪರಿಭಾಷೆಯಲ್ಲಿ Major Irrigation ಎಂದು ಕರೆಯಬಹುದೆಂದು ತೋರುತ್ತದೆ. ಉಳಿದ ಸಣ್ಣ ಕೆರೆಗಳು ಈಗಿನಂತೆ Minor Irrigation ಎನ್ನಬಹುದು.

ಪ್ರಜಾವತ್ಸಲರಾದ ಚಿತ್ರದುರ್ಗದ ಪಾಳೆಯಗಾರರು ಬರಡು ನಾಡಾದ ಚಿತ್ರದುರ್ಗ ಪ್ರಾಂತ್ಯದ ಜಲದಾಹವನ್ನು ತಣಿಸಲು ಅನೇಕ ಕೆರೆ- ಕಟ್ಟೆಗಳನ್ನು, ಹೊಂಡಗಳನ್ನು ನಿರ್ಮಿಸಿದ್ದಾರೆ. ಭರಮಸಾಗರದ ಜೋಡಿ ಕೆರೆಗಳನ್ನು ಚಿತ್ರದುರ್ಗದ ಪಾಳೆಯಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನು ಮುನ್ನೂರು ವರ್ಷಗಳ ಹಿಂದೆ ನಿರ್ಮಿಸಿದನೆಂದು ದಾಖಲೆಗಳ ಪ್ರಕಾರ ತಿಳಿದು ಬರುತ್ತದೆ. ಕ್ರಿ.ಶ 1689ರಲ್ಲಿ ತನ್ನ ದಂಡಿನ ದಳವಾಯಿ ಲಿಂಗಪ್ಪನಾಯಕನಿಗೆ ಭರಮಸಾಗರದ ಕೆರೆಯ ಕಾಮಗಾರಿಯನ್ನು ಆರಂಭಿಸಲು ಆದೇಶಿಸಿದನೆಂದು ತಿಳಿದುಬರುತ್ತದೆ. ಕೆರೆಯ ಕಾಮಗಾರಿ ಮುಗಿದದ್ದು 32 ವರ್ಷಗಳ ನಂತರ 1721ರ ಅಕ್ಟೋಬರ್ 30ರಂದು, ಒಂದು ಸಾವಿರ ಎಕರೆ ವಿಸ್ತೀರ್ಣದ ಈ ದೊಡ್ಡಕೆರೆ ಕಳೆದ 15 ವರ್ಷಗಳಿಂದ ಅನಾವೃಷ್ಟಿಯ ಕಾರಣದಿಂದ ನೀರಿಲ್ಲದೆ ಒಣಗಿಹೋಗಿತ್ತು. ಈಗ ಕೆರೆಯ ರಾಜರು ಯಾರೂ ಇಲ್ಲ, ರೈತ ಸಂಘಟನೆಗಳ ಒತ್ತಾಯಕ್ಕೆ 22 ಕೆರೆಗಳ ರಾಜನಳ್ಳಿ ಏತನೀರಾವರಿ ಯೋಜನೆಯಲ್ಲಿ ಸೇರ್ಪಡೆಯಾಗದಿದ್ದರೂ ಹಾಲುವರ್ತಿಯಿಂದ ಭರಮಸಾಗರ ಕೆರೆಗೆ ನೀರನ್ನು ತರುವ ಪ್ರಯತ್ನಕ್ಕೆ ನಮ್ಮ ವಿರೋಧವಿತ್ತು. ಆ ಯೋಜನೆಯಲ್ಲಿ 22 ಕೆರೆಗಳಿಗೆ ನೀರು ಬರುವುದೇ ದುಸ್ತರವಾಗಿದ್ದು ಹಾಲುವರ್ತಿಯಿಂದ ಭರಮಸಾಗರಕ್ಕೆ ಪೈಪು ಅಳವಡಿಸಿದರೆ ಆ ಕೆರೆಗೆ ನಲ್ಲಿ ನೀರು ಬಂದಂತೆ ಆಗುತ್ತದೆ ಎಂಬುದೇ ನಮ್ಮ ಪ್ರಬಲ ವಿರೋಧಕ್ಕೆ ಕಾರಣವಾಗಿತ್ತು. ಇದನ್ನು ಭರಮಸಾಗರದ ಜನತೆ ನಿಧಾನವಾಗಿ ಮನಗಂಡಿತು. 

ತುಂಗಭದ್ರಾ ನದಿಯಿಂದ ಪ್ರತ್ಯೇಕ ಪೈಪ್ ಅಳವಡಿಸಿ ಭರಮಸಾಗರಕ್ಕೆ ನೀರು ತರಬಹುದೆಂಬ ಪರಿಕಲ್ಪನೆ ಯಾರಿಗೂ ಇರಲಿಲ್ಲ. 2018 ರಲ್ಲಿ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಜಗಳೂರಿನಲ್ಲಿ ನಡೆದಾಗ ಅಂದಿನ ಸಭೆಯಲ್ಲಿ ನಾವು ಬಹಿರಂಗವಾಗಿ ಲಕ್ಷಾಂತರ ಜನರ ಎದುರಿನಲ್ಲಿ ಪ್ರಸ್ತಾಪಿಸಿದ ಜಗಳೂರು ಮತ್ತು ಭರಮಸಾಗರ ಏತನೀರಾವರಿ ಯೋಜನೆಗಳನ್ನು ಮುಂಜೂರು ಮಾಡಬೇಕೆಂದು ಆಗ್ರಹಿಸಿದ್ದನ್ನು ಆಗಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಸಿದ್ದರಾಮಯ್ಯನವರು ಗಂಭೀರವಾಗಿ ಆಲಿಸಿದರು. ಸಮಾರಂಭ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗಿದ 15 ದಿನಗಳಲ್ಲಿ 500 ಕೋಟಿ ರೂ. ಗಳನ್ನು ಈ ಎರಡು ಯೋಜನೆಗಳಿಗೆ ಬಜೆಟ್ನಲ್ಲಿ ಸೇರ್ಪಡೆ ಮಾಡಿದರು. ಆಗಿನ ಸಚಿವರಾಗಿದ್ದ ಎಸ್,ಎಸ್, ಮಲ್ಲಿಕಾರ್ಜುನರವರು, ಎಚ್. ಆಂಜನೇಯರವರು ಮತ್ತು ಜಗಳೂರು ಮಾಜಿ ಶಾಸಕರಾದ ರಾಜೇಶ್ರವರು ನಮ್ಮ  ಕಣ್ಣಾವಲಿನಲ್ಲಿ ಬಜೆಟ್ಗೆ ಸೇರ್ಪಡೆಯಾಗುವಂತೆ ಶ್ರಮಿಸಿದರು. ನಂತರ ಬಂದ ಸಮಿಶ್ರ ಸರಕಾರದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಭಾಗವಹಿಸಿದ್ದ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಇದು ಸಿರಿಗೆರೆ ಗುರುಗಳ ಯೋಜನೆ ಎಂದು ತುಂಬಾ ಅಭಿಮಾನದಿಂದ ಅನುಮೋದನೆ ನೀಡುವಂತೆ ಮಾಡಿದರು. ನಂತರ ಮುಖ್ಯಮಂತ್ರಿಗಳಾಗಿ ಬಂದ ಬಿ.ಎಸ್. ಯಡಿಯೂರಪ್ಪನವರು ಈ ಎರಡೂ ಯೋಜನೆಗಳಿಗೆ ಮೊದಲ ಕಂತಾಗಿ 250 ಕೋಟಿ ರೂ. ಮುಂಜೂರು ಮಾಡಿದರು. ನಂತರ ಒಂದೇ ವಾರದಲ್ಲಿ ನಮ್ಮ ಒತ್ತಾಯಕ್ಕೆ ಮಣಿದು ಈ ಆದೇಶವನ್ನು ಹಿಂಪಡೆದು ಎರಡೂ ಯೋಜನೆಗಳಿಗೆ ಬೇಕಾದ 1200 ಕೋಟಿ ರೂ. ಒಂದೇ ಕಂತಿನಲ್ಲಿ ಮುಂಜೂರು ಮಾಡಿ ಹೊಸ ಆದೇಶ ಹೊರಡಿಸಿದರು. ಈ ಬೃಹತ್ ಮೊತ್ತದ ಮುಂಜೂರಾತಿಗೆ ನೆರವಾದವರು ಆಗಿನ ಸಚಿವ ಸಂಪುಟದ ಬಸವರಾಜ ಬೊಮ್ಮಾಯಿಯವರು, ಗೋವಿಂದ ಕಾರಜೋಳರವರು, ಮಾಧುಸ್ವಾಮಿಯವರು, ಸಿ.ಟಿ ರವಿಯವರು, ಸಿ.ಸಿ ಪಾಟೀಲರು ಮತ್ತು ಸಂಸದ ರಾದ ಜಿ.ಎಂ. ಸಿದ್ದೇಶ್ರವರು ಮತ್ತು ಶಾಸಕರಾದ ರಾಮ ಚಂದ್ರಪ್ಪನವರು ಮತ್ತು ಚಂದ್ರಪ್ಪನವರು. ಅತ್ಯಲ್ಪ ಕಾಲದಲ್ಲಿಯೇ ಸರಕಾರದಿಂದ ಮುಂಜೂರಾದ ಹಣದಲ್ಲಿ ನಿಗದಿಪಡಿಸಿದ ಕಾಲದ ಮಿತಿಗಿಂತ ಮುಂಚಿತವಾಗಿಯೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಖ್ಯಾತಿ ಈ ಭರಮಸಾಗರ ಏತ ನೀರಾವರಿ ಯೋಜನೆಯದಾಗಿದೆ. ತುಂಗಭದ್ರಾ ನದಿಯಿಂದ 5 ಅಡಿ ಗಾತ್ರದ ಪೈಪಿನಲ್ಲಿ 56 ಕಿ.ಮೀ ದೂರದವರೆಗೆ ನೀರು ಹರಿಯುವ ಯೋಜನೆ ರಾಜ್ಯದಲ್ಲಿ ಮತ್ತೊಂದಿಲ್ಲ ಎಂಬ ಹೆಮ್ಮೆ ಈ ಭರಮಸಾಗರ ಏತನೀರಾವರಿ ಯೋಜನೆಯದು. ಇದು ನಮ್ಮೊಬ್ಬರಿಂದ ಆದ ಕೆಲಸವಲ್ಲ. ಇದರ ಹಿಂದೆ ಅನೇಕ ರಾಜಕೀಯ ಧುರೀಣರು, ರೈತ ಮುಖಂಡರು, ಅಧಿಕಾರಿಗಳು ಮತ್ತು ಕಾರ್ಮಿಕರ ಸಹಯೋಗವಿದೆ. 

ಬದುಕಿನಲ್ಲಿ ನೆಮ್ಮದಿಯನ್ನು ಪಡೆಯಲು ಒಮ್ಮೆಯಾದರೂ ಕಾಶಿಗೆ ಹೋಗಬೇಕು, ರಾಮೇಶ್ವರಕ್ಕೆ ಹೋಗಬೇಕು, ಮೆಕ್ಕಾಕ್ಕೆ ಹೋಗಬೇಕು ಎಂಬುದು ಆಸ್ತಿಕ ಜನರ ನಂಬುಗೆ. ಆದರೆ ಇದೀಗ ಭರಮಸಾಗರ ಕೆರೆ ಈ ಭಾಗದ ರೈತರ ಬಾಳಿಗೆ ತೀರ್ಥಕ್ಷೇತ್ರವಾಗುತ್ತಿದೆ. ಇದೇ ಸೆಪ್ಟೆಂಬರ್ 29ರಿಂದ ತುಂಗಭದ್ರಾ ನದಿಯ ನೀರಿನಿಂದ ಮೈದುಂಬಿಕೊಳ್ಳುತ್ತಿರುವ ಈ ಕೆರೆಯನ್ನು ನೋಡಿ ಕಣ್ಣುಂಬಿಕೊಳ್ಳಲು ಕಾಶೀ, ಕೇದಾರ, ರಾಮೇಶ್ವರ, ಮೆಕ್ಕಾ ಯಾತ್ರೆ ಮರೆತು ಪ್ರತಿದಿನವೂ ಸಾವಿರಾರು ಜನರು ಭರಮಸಾಗರಕ್ಕೆ ಧಾವಿಸಿ ಬರುತ್ತಿದ್ದಾರೆ. ಈ ಕೆರೆ ತುಂಬಬೇಕು, ಆಸು ಪಾಸಿನ ಕೆರೆಗಳು ತುಂಬಬೇಕು, ರೈತರ ಬದುಕು ಹಸನಾಗಬೇಕೆಂಬ ನಮ್ಮ ಬಹಳ ವರ್ಷಗಳ ಕನಸು ನನಸಾದ ಅಮೃತಘಳಿಗೆ ಒದಗಿ ಬಂದಿದೆ. ಬಿಚ್ಚುಗತ್ತಿ ಭರಮಣ್ಣ ನಾಯಕನು 30-10-1721ರಂದು ಕಟ್ಟಿ ಪೂರೈಸಿದ ಈ ಭರಮಸಾಗರ ಕೆರೆಗೆ ಸರಿಯಾಗಿ 300 ವರ್ಷಗಳ ನಂತರ 29-9-2021 ರಂದು ತುಂಗಭದ್ರೆಯ ನೀರು ಧುಮ್ಮಿಕ್ಕಿದಾಗ ರೈತರು ಕುಣಿದು ಕುಪ್ಪಳಿಸಿ ಕೇಕೆ ಹಾಕಿದ ದೃಶ್ಯವನ್ನು ನೋಡಿ ನಮಗಾದ ಸಂತೋಷಕ್ಕೆ ಪಾರವೇ ಇಲ್ಲ. ಅದರ ವಿಡಿಯೊ ತುಣುಕನ್ನು ನೋಡಿ ವಾಷಿಂಗ್ಟನ್ನಿಂದ ವಿಶ್ವಬ್ಯಾಂಕಿನ ಸಲಹೆಗಾರರಾಗಿರುವ ಮೊಹುವಾ ಬರೆದ ಪ್ರತಿಕ್ರಿಯೆ: 

"What a joyous sight! Changing lives of the formers completely. I wish this could be replicated everywhere in ten thousand additional locations. It is not only a question of funds shortage. Without dedicated and committed coordination and management efforts and determination to see the con- clusion of the project, all funds will go astray. The shortage is not funds, but rather it is a shortage of leaders like yourself."

ಬದುಕು ಬಂಗಾರವಾಗಬೇಕು, ಬಂಗಾರದಿಂದ ಸುಖವಿಲ್ಲ ಎನ್ನುವ ಮಾತು ಪೂರ್ಣಸತ್ಯವಲ್ಲ, ಭಾರತೀಯ ದಾರ್ಶನಿಕರ ಪ್ರಕಾರ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಅರ್ಥ ಎಂದರೆ ಸಂಪತ್ತೂ ಸಹ ಒಂದು. ಮೋಕ್ಷವನ್ನು ಗುರಿಯಾಗಿಟ್ಟುಕೊಂಡು ಧರ್ಮದ ತಳಹದಿಯ ಮೇಲೆ ಗಳಿಸಿದ ಧನ ಕನಕ- ಸಂಪತ್ತನ್ನು ಅನುಭವಿಸಿ ಸುಖಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಧರ್ಮಬಾಹಿರವಾದ ಗಳಿಕೆಯಲ್ಲಿ ಮಾತ್ರ ಸುಖವಿಲ್ಲ, ಮನುಷ್ಯರಿಗೆ ವಿಶೇಷವಾಗಿ ಮಹಿಳೆಯರಿಗೆ ಬಂಗಾರದಿಂದ ಸಂತೋಷವಂತೂ ಆಗುತ್ತದೆ. ಆದರೆ ಅದರ ಮೇಲಿನ ಮೋಹ ಮಾತ್ರ ಇರಬಾರದು. ಅಂತಹ ಮೋಹವನ್ನು ತ್ಯಜಿಸಿದ ಕಾರಣದಿಂದಲೇ ರೈತರು ತಮ್ಮ ಮಹಿಳೆಯರ ಕೊರಳಲ್ಲಿರುವ ಮಾಂಗಲ್ಯವನ್ನು ಬಿಟ್ಟು ಅವರ ಮೈಮೇಲಿರುವ ಉಳಿದ ಬಂಗಾರದ ಒಡವೆಗಳನ್ನು ಪಡೆದು ಒತ್ತೆ ಇಟ್ಟು ಸಾಲಸೋಲ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಹತ್ತಾರು ಬೋರ್ ಕೊರೆಸಿ ಕಷ್ಟಪಟ್ಟು ತೋಟ ಉಳಿಸಿಕೊಂಡಿದ್ದಾರೆ. ಆ ಬೋರುಗಳೂ ಬತ್ತಿದ ಮೇಲೆ ಕಂಗಾಲಾಗಿ ಎಲ್ಲಿಂದಲೋ ದುಡ್ಡುಕೊಟ್ಟು ಟ್ಯಾಂಕರ್ಗಳಲ್ಲಿ ನೀರು ತಂದು ಅಡಿಕೆ ಮರಗಳನ್ನು ಉಳಿಸಿಕೊಂಡಿದ್ದಾರೆ. ಈಗ ಕೆರೆಗೆ ನೀರು ಬಂದ ಮೇಲೆ ಬರುವ ಆದಾಯದಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಬಂಗಾರದ ಒಡವೆಗಳನ್ನು ಮಾಡಿಸಿಕೊಟ್ಟು ಅವರ ಉಪಕಾರ ಸ್ಮರಣೆ ಮಾಡುವುದು ಅವರ ಧರ್ಮ ಎಂಬುದು ನಮ್ಮ ಆಶಯ. 'ಗೃಹಿಣೀ ಹೃಹಮುಚ್ಯತೇ' ಎನ್ನುವಂತೆ ನಮ್ಮ ದೃಷ್ಟಿಯಲ್ಲಿ ಮಹಿಳೆಯರು ಆಯಾಯ ಮನೆತನದ ರಿಸರ್ವ್ ಬ್ಯಾಂಕ್ ಇದ್ದಂತೆ. ಅವರು ಪುರುಷರಂತೆ ದುರ್ವ್ಯಸನಗಳಿಗೆ ಬಲಿಯಾಗಿ ಅಪವ್ಯಯ ಮಾಡುವುದಿಲ್ಲ. ಕಾಣದ ದೇವರಿಗೆ ಬಂಗಾರದ ಒಡವೆ ಮಾಡಿಸಿ ಅರ್ಪಣೆ ಮಾಡುವುದಕ್ಕಿಂತ ಕಣ್ಣೆದುರಿಗೆ ಇರುವ ಮನೆಯ ಹೆಣ್ಣುಮಕ್ಕಳಿಗೆ ಒಡವೆ ಮಾಡಿಸಿ, ಅವರು ಸಂತೋಷಪಡುವುದನ್ನು ನೋಡಿ ಸುಖಿಸುವುದು ಒಳ್ಳೆಯದು. ಅವರ ಮೈಮೇಲಿರುವ ಅಂಥ ಬಂಗಾರದ ಒಡವೆಗಳು ಮನೆತನದ ಅನುವು ಆಪತ್ತಿಗೆ ಆಗುವ ಭದ್ರ ತಿಜೋರಿಯೂ ಹೌದು! 

ಇಲ್ಲಿಯ ತನಕ ಕೆರೆಗಳು ಬತ್ತಿದ್ದರಿಂದ ರೈತರು ತಮ್ಮ ಮಡದಿಯರ ಮೈಮೇಲಿನ ಬಂಗಾರವನ್ನು ಮಾರಿ ಬದುಕಿದರು. ಈಗ ಕೆರೆಗಳು ತುಂಬಿದರೆ ಬೆಳೆಗಳು ನಳನಳಿಸಿ ರೈತರ ಮಡದಿಯರ ಮೈಮೇಲೆ ಮುತ್ತು ರತ್ನಗಳು ಕಂಗೊಳಿಸುತ್ತವೆ! ಅದಕ್ಕೂ ಹೆಚ್ಚಾಗಿ ಅಳಿದು ಹೋಗಿದ್ದ ಮುಖದ ಮೇಲಿನ ನಗುವೆಂಬ ನಗ ಪುನಃ ರಾರಾಜಿಸುತ್ತದೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.21-10-2021
ಬಿಸಿಲು ಬೆಳದಿಂಗಳು