30ನೇ ಶದ್ಧಾಂಜಲಿ : ಸಿರಿಗೆರೆಯಲ್ಲಿ ಬೃಹತ್ ವೇದಿಕೆ ಸಜ್ಜು
ಸಿರಿಗೆರೆ: ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.20ರ ಮಂಗಳವಾರದಿಂದ ಕಾರ್ಯಕ್ರಮಕ್ಕೆ ಚಾಲನೆಗೊಳ್ಳಲಿದೆ.
30ನೇ ಶ್ರದ್ದಾಂಜಲಿ ಕಾರ್ಯಕ್ರಮವು ಸೆ.20ರಿಂದ 24ರವರೆಗೆ ನಡೆಯಲಿದ್ದು, ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ಭವನದ ಮುಂಭಾಗದಲ್ಲಿ ಮಹಾಮಂಟಪ ಸಜ್ಜುಗೊಂಡಿದೆ.
ಪ್ರತಿದಿನದ ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದಿಂದ ವಚನ ನೃತ್ಯ, ಜಾನಪದ ನೃತ್ಯ, ವಚನಗೀತೆ, ನಾಟಕ, ಭರತನಾಟ್ಯ ಪ್ರದರ್ಶನ ನಡೆಯುವುದು. ನಾಡಿನ ವಿದ್ವಾಂಸರು, ಸಾಹಿತಿಗಳು, ಗಣ್ಯರು ಉಪಸ್ಥಿತಿ.
ಸಾರ್ವಜನಿಕರು ಕಾರ್ಯಕ್ರಮ - ವೀಕ್ಷಿಸಲು ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗುವುದು. ವೃದ್ಧರು, ಮಕ್ಕಳು, ದೂರದ ಪ್ರದೇಶಗಳ ಭಕ್ತರು ಮನೆಯಲ್ಲಿಯೇ ಕುಳಿತು ಯೂಟ್ಯೂಬ್ ಲೈವ್ “Taralabalu Math Sirigere” ಇಲ್ಲಿ ವೀಕ್ಷಿಸಬಹುದಾಗಿದೆ.
ಶ್ರೀಮಠದ ಸುತ್ತಲೂ ಶಿವಧ್ವಜ ರಾರಾಜಿಸುತ್ತಿದೆ. ಬೃಹನ್ಮಠದ ಐಕ್ಯಮಂಟಪವನ್ನು ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಗ್ರಾಮದ ಸುತ್ತಲೂ ವಿದ್ಯುತ್ ದೀಪಗಳು, ಹಾಗೂ ಐಕ್ಯಮಂಟಪದ ಮುಂಭಾಗದಲ್ಲಿ ನೀರಿನ ಕಾರಂಜಿ ಭಕ್ತರನ್ನು ಆಕರ್ಷಿಸುಲು ಸಜ್ಜಾಗಿದೆ.
ರೈತರಿಗೆ ಕೃಷಿ ಉತ್ಪನ್ನಗಳ ಬಗ್ಗೆ ಮಾಹಿತಿ ಮತ್ತು ಓದುಗರಿಗೆ ಪುಸ್ತಕ ಭಂಡಾರ ಹಾಗೂ ಇತರೆ ವಸ್ತುಗಳನ್ನು ಕೊಳ್ಳುವವರಿಗೆ ಸ್ಟಾಲ್ಗಳನ್ನು ನಿರ್ಮಿಸಲಾಗಿದೆ.
ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದಾವಣಗೆರೆ ಶಿವಸೈನ್ಯ ಯುವಕ ಸಂಘದಿಂದ ದಾಸೋಹ ಸೇವೆ ನಡೆಯಲಿದೆ.
ದಾಸೋಹಕ್ಕೆ ದವಸ-ಧಾನ್ಯಗಳು :
ಹೊಳಲ್ಕೆರೆ ತಾಲೂಕು ಗುಂಜಿಗನೂರು ನರೇಂದ್ರಪ್ಪ ಮೂರು ನೂರು ತೆಂಗಿನಕಾಯಿ, ದಾವಣಗೆರೆ ಎಪಿಎಂಸಿ ಮಾರ್ಕೆಟ್ ದಲ್ಲಾಳಿ ಸಂಘದಿಂದ ಮೂರುನೂರು ಕೆಜಿ ಕೊತುಂಬರಿ ಕಾಳು, ಹೊನ್ನಾಳಿ ತಾಲೂಕು ನ್ಯಾಮತಿ ಸಾಧು ವೀರಶೈವ ಸಮಾಜ ಸಮಿತಿಯಿಂದ ಒಂದು ನೂರು ಕ್ವಿಂಟಾಲ್ ಅಕ್ಕಿ ಸಮರ್ಪಿಸಿದ್ದಾರೆ. ಹಳಿಯೂರಿನ ಮೇಘರಾಜ್ ಎರಡುನೂರು ಕೆಜಿ ತೊಗರಿಬೇಳೆ ಸಮರ್ಪಿಸಿದ್ದಾರೆ.
ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಹಿಂಭಾಗದಲ್ಲಿರುವ ಹೆಲಿಪ್ಯಾಡ್ ಸ್ಥಳಕ್ಕೆ ಲೋಕೋಪಯೋಗಿ ಅಧಿಕಾರಿಗಳವರು ಭೇಟಿ ನೀಡಿ ಮಾಹಿತಿ ಪಡೆದರು.