ಹಾಲು ಜೇನುಂಡು ಮತ್ಸರಕ್ಕೆ ಮಜ್ಜನವನೆರೆವ ಮನುಜರು!
ಭಾರತದ ಪ್ರಾಚೀನ ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣವಾಗಲೀ, ಮಹಾಭಾರತವಾಗಲೀ ಎಂದೂ ಬತ್ತದ ಸಾಹಿತ್ಯ ರಸಗಂಗೆಯಾಗಿ ಭಾರತದುದ್ದಕ್ಕೂ ಸಾವಿರಾರು ವರ್ಷಗಳಿಂದ ಜನಮಾನಸದಲ್ಲಿ ಸದಾ ಕಾಲ ತುಂಬಿ ಹರಿಯುತ್ತಾ ಬಂದಿವೆ! ಇವುಗಳಲ್ಲಿ ಬರುವ ಸಾವಿರಾರು ಕಥಾಪ್ರಸಂಗಗಳು ವಿಭಿನ್ನ ಕಾಲಘಟ್ಟಗಳಲ್ಲಿ ಉದಯಿಸಿ ಬಂದ ವಿಭಿನ್ನ ಭಾಷೆಗಳ ಕವಿಪುಂಗವರಿಗೆ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಚಿಸಲು ಸ್ಫೂರ್ತಿಯ ಸೆಲೆಯಾಗಿ ಪರಿಣಮಿಸಿವೆ. ಇವೆರಡೂ ಪ್ರಾಚೀನ ಮಹಾಕಾವ್ಯಗಳಲ್ಲಿ ಜಗತ್ತಿನ ಜನರಲ್ಲಿರುವ ಎಲ್ಲ ಗುಣದೋಷಗಳೂ ದಾಖಲಾಗಿವೆ. ಇವುಗಳಲ್ಲಿ ಕಾಣಬರುವ ಪಾತ್ರಧಾರಿಗಳು ಕೇವಲ ಗತಕಾಲದ ವ್ಯಕ್ತಿಗಳಾಗಿರದೆ ಈಗಲೂ ಜೀವಂತವಾಗಿದ್ದಾರೆ. "ಕಾವ್ಯ ನವನವೋನ್ಮೇಷಶಾಲಿನೀ" ಎಂದು ಬಣ್ಣಿಸುವುದು ಇದಕ್ಕಾಗಿಯೇ.
ಈ ಗ್ರಂಥಗಳು ವಿಭಿನ್ನ ಭಾರತೀಯ ಭಾಷೆಗಳ ಪ್ರಸಿದ್ಧ ಸಾಹಿತ್ಯ ಕೃತಿಗಳಿಗೆ ಆಕರ ಗ್ರಂಥಗಳಾಗಿ ಬಳಕೆಯಾಗಿರುವುದಷ್ಟೇ ಅಲ್ಲ ಇವುಗಳಲ್ಲಿ ಬರುವ ಕಥಾಪ್ರಸಂಗಗಳು, ನುಡಿಗಟ್ಟುಗಳು ಭಾರತೀಯರ ದೈನಂದಿನ ಆಡುಮಾತಿನಲ್ಲಿಯೂ ಹಾಸುಹೊಕ್ಕಾಗಿ ಬೆರೆತಿವೆ. ನಿತ್ಯ ಜೀವನದಲ್ಲಿ ತಮ್ಮ ಸಂಪರ್ಕಕ್ಕೆ ಬರುವ ತಮಗೆ ಮೆಚ್ಚುಗೆಯಾಗುವ ಜನರನ್ನು ಗುಣಗಾನ ಮಾಡಲು ಅಥವಾ ತಮಗೆ ಆಗದ ಜನರನ್ನು ಕಟುಟೀಕೆ ಮಾಡಲು, ಮೂದಲಿಸಲು ಹೀಗೆ ವಿಭಿನ್ನ ಮನೋಧರ್ಮದ ವ್ಯಕ್ತಿಗಳನ್ನು ಕುರಿತು ಅವರವರಿಗೆ ಅನಿಸಿದಂತೆ ಮಾತನಾಡಲು ಈಗಲೂ ಬಳಕೆಯಾಗುತ್ತಿರುವುದನ್ನು ಮನಗಾಣಬಹುದಾಗಿದೆ. “ಅವನು ಧರ್ಮರಾಯನಿದ್ದಂತೆ” ಎಂಬ ಒಳ್ಳೆಯ ಮಾತುಗಳು ಕೇಳಿಬಂದರೆ “ಅವನಂಥಾ ಶಕುನಿ ಬೇರೆ ಯಾವ ಊರಿನಲ್ಲಿಯೂ ಇಲ್ಲ” ಎನ್ನುವ ಕಟುಟೀಕೆಗಳೂ ಕೇಳಿ ಬರುತ್ತವೆ.
ಜನರು ಒಂದೆಡೆ ರಾಮಾಯಣದ ಬಗ್ಗೆ ಭಕ್ತಿಭಾವಗಳನ್ನು ಹೊಂದಿ ಕಥಾಶ್ರವಣ ಮಾಡಿದರೆ ಮತ್ತೊಂದೆಡೆ “ನಿನ್ನ ರಾಮಾಯಣ ಕೇಳೋಕೆ ನನಗೆ ಪುರುಸೊತ್ತು ಇಲ್ಲ ಕಣೋ” ಎಂದೋ “ಸಾಕು ನಿಲ್ಲಿಸೋ ನಿನ್ನ ರಾಮಾಯಣವನ್ನು” ಎಂದೋ ಅನಾದರಣೆಯ ಮಾತುಗಳನ್ನಾಡುತ್ತಾರೆ. ರಾಮಾಯಣವನ್ನು ಕುರಿತು ಕೇಳಿಬರುವ ಮತ್ತೊಂದು ಗಾದೆ ಮಾತೆಂದರೆ: “ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ಎದ್ದು ಸೀತೆಗೂ ರಾಮನಿಗೂ ಏನು ಸಂಬಂಧ ಎಂದು ಕೇಳಿದರಂತೆ!” ಈ ಗಾದೆ ಮಾತು ಜನರ ಬಾಯಲ್ಲಿ ಹೇಗೆ ಬಳಕೆಗೆ ಬಂದಿರಬಹುದು ಎಂಬುದನ್ನು ಊಹಿಸುವುದು ಕಷ್ಟವೇನೂ ಆಗಲಾರದು. ಸೀತೆಯು ಶ್ರೀರಾಮನ ಪತ್ನಿಯೆಂದು ಇಡೀ ಜಗತ್ತಿಗೇ ಗೊತ್ತಿದ್ದರೂ ಇಂತಹ ಪ್ರಶ್ನೆಯನ್ನು ಕೇಳುತ್ತಾರೆಂದರೆ ಅವರು ರಾಮಾಯಣದ ಕಥಾಕಾಲಕ್ಷೇಪ ನಡೆಯುತ್ತಿರುವಾಗ ನಿದ್ದೆ ಮಾಡುತ್ತಿರಬೇಕು, ಇಲ್ಲವೇ ಕಾಟಾಚಾರಕ್ಕೆ ಕೇಳಿಸಿಕೊಳ್ಳುತ್ತಿರಬೇಕು. ಹಿಂದಿನ ದಿನ ತರಗತಿಯಲ್ಲಿ ಗಂಟೆಗಟ್ಟಲೆ ಪಾಠ ಮಾಡಿದ ಅಧ್ಯಾಪಕ ಮಾರನೆಯ ದಿನ ವಿದ್ಯಾರ್ಥಿಗಳಿಗೆ ಪ್ರಶ್ನೆ ಹಾಕಿದಾಗ ಏನೂ ಉತ್ತರಿಸದ ಮಡ್ಡಿಮುಠ್ಠಾಳರಿಗೆ ಇನ್ನೇನು ಹೇಳಬೇಕು!
ನಾವು ಕಾಶಿಯಲ್ಲಿ ಓದುತ್ತಿದ್ದಾಗ ಕೇಳಿದ ಒಂದು ಪ್ರಹಸನ. ಪಂಡಿತರೊಬ್ಬರು ಭಗವದ್ಗೀತೆಯ ಮಹತ್ವವನ್ನು ಕುರಿತು ಈ ಕೆಳಗಿನ ಪ್ರಸಿದ್ಧ ಶ್ಲೋಕವನ್ನು ವಿವರಿಸಿದರು:
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್
ಇದರ ಅರ್ಥ: ಉಪನಿಷತ್ತುಗಳೆಲ್ಲವೂ ಹಾಲು ಕರೆಯುವ ಹಸುಗಳಿದ್ದಂತೆ, ಹಾಲು ಕರೆಯುವವನು (ದೋಗ್ಧಾ) ಭಗವಾನ್ ಶ್ರೀಕೃಷ್ಣ. ಅರ್ಜುನ ಕರುವಾದರೆ, ಹಾಲು ಕುಡಿಯುವವರು ಸಜ್ಜನರು.
ಅಮೃತ ಸಂಜೀವಿನಿಯಾದ ಗೀತೆಯೇ ಆ ಹಾಲು. ಇದನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶ್ಲೋಕದ ಮೊದಲನೆಯ ಸಾಲಿನಲ್ಲಿರುವ “ದೋಗ್ಧಾ” ಶಬ್ದವನ್ನು ಹಿಂದಿಯಲ್ಲಿ “ದೋ ಗಧಾ” (ಎರಡು ಕತ್ತೆಗಳು) ಎಂದು ತಪ್ಪಾಗಿ ಗ್ರಹಿಸಿ ಹೀಗೆ ಕೇಳಿದನಂತೆ: “ಪಂಡಿತ್ಜೀ, ಏಕ್ ಗಧಾ ತೋ ಶ್ರೀಕೃಷ್ಣ ಭಗವಾನ್ ಹೈಂ, ದೂಸರಾ ಗಧಾ ಕೌನ್ ಹೈಂ?” ಇದರಿಂದ ಸಿಟ್ಟಿಗೆದ್ದ ಪಂಡಿತರು ಹೇಳಿದರಂತೆ: “ಅರೇ ಬೇವಕೂಫ್, ಉಲ್ಲೂ ಕೇ ಪಠ್ಠೇ! ಶ್ರೀಕೃಷ್ಣಭಗವಾನ್ ಕೋ ಕ್ಯೋಂ ಗಧೇ ಬನಾ ರಹೇ ಹೋ? ಏಕ್ ಗಧಾ ತೂ ಹೈಂ, ದೂಸರೇ ಗಧಾ ಮೈಂ ಹೂಂ, ಕ್ಯೋಂಕಿ ತುಮ್ ಜೈಸೇ ಗಧೇ ಕೋ ಮೈಂ ಪಢಾನೇ ಕೀ ಮೂರ್ಖತಾ ಕೀ! (ಏಯ್ ಬೇವಕೂಫ್, ಗೂಬೆ, ಭಗವಾನ್ ಶ್ರೀಕೃಷ್ಣನನ್ನು ಏಕೆ ಕತ್ತೆಯನ್ನಾಗಿ ಮಾಡುತ್ತಿದ್ದೀಯಾ? ಒಬ್ಬ ಕತ್ತೆ ನೀನು, ಇನ್ನೊಬ್ಬ ಕತ್ತೆ ನಾನು. ಏಕೆಂದರೆ ನಿನ್ನಂತಹ ಕತ್ತೆಗೆ ಪಾಠ ಹೇಳಿ ಮೂರ್ಖತನ ಮಾಡಿದೆ ಅದಕ್ಕೆ).
ಈ ವಾರದ ಅಂಕಣವನ್ನು ಬರೆಯಲು ಆಲೋಚಿಸಿದ್ದ ವಿಷಯವೇ ಬೇರೆಯಾಗಿತ್ತು. ಆದರೆ ಪರೀಕ್ಷೆಗೆ ಓದಿದ್ದೇ ಬೇರೆ ಪರೀಕ್ಷೆಯಲ್ಲಿ ಬಂದ ಪ್ರಶ್ನೆಯೇ ಬೇರೆ ಎಂಬಂತಾಯಿತು. ರಾಮಾಯಣ ಕುರಿತು ಈ ಅಂಕಣ ಬರೆಯಲು ಒಂದು ವಿಶೇಷ ಕಾರಣವಿದೆ. ಪ್ರತಿ ವರ್ಷದ ಪದ್ಧತಿಯಂತೆ ಇದೇ ಸೆಪ್ಟೆಂಬರ್ 24ರಂದು ಶನಿವಾರ ನಮ್ಮ ಲಿಂಗೈಕ್ಯ ಗುರುವರ್ಯರ 30ನೆಯ ಶ್ರದ್ದಾಂಜಲಿ ಸಮಾರಂಭ. ಅದರ ನಿಮಿತ್ತ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆ ಮೊನ್ನೆ ಸಂಜೆ ಆರಂಭವಾಯಿತು. ದಾವಣಗೆರೆಯ ನಮ್ಮ ಅನುಭವ ಮಂಟಪದ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರು ಅಭಿನಯಿಸಿದ ಕಿರುನಾಟಕ “ಸೀತೆಯ ಶಾಪ”! ಶ್ರೀರಾಮ-ಲಕ್ಷ್ಮಣರ ಪಾತ್ರಧಾರಿಗಳಾದ ದುಂಡನೆಯ ಮುಖದ ಹಾಲುಗಲ್ಲದ ಆ ಬಾಲಕಿಯರು ಜಟಾಧಾರಿಗಳಾಗಿ ಬೆನ್ನ ಹಿಂದೆ ಬಾಣಗಳ ಬತ್ತಳಿಕೆ ಧರಿಸಿ ಕೈಯಲ್ಲಿ ಬಿಲ್ಲು ಬಾಣ ಹಿಡಿದು ವೇದಿಕೆಯನ್ನೇರಿದ ಅವರ ಗಾಂಭೀರ್ಯ ನಡೆ, ನುಡಿ ಮತ್ತು ಅತ್ಯದ್ಭುತವಾದ ಅಭಿನಯ ಸಹಸ್ರಾರು ಸಭಿಕರ ಮನಸ್ಸನ್ನು ಸೂರೆಗೊಂಡಿತು. ಎಲ್ಲರ ಹರ್ಷೋದ್ಗಾರದ ಮಧ್ಯೆ ಪ್ರಥಮ ಬಹುಮಾನವನ್ನು ಗಿಟ್ಟಿಸಿದ ಈ ನಾಟಕದ ಕಥಾವಸ್ತು ನಮ್ಮನ್ನು ಅಲೋಚನಾಪರರನ್ನಾಗಿ ಮಾಡಿತು. ಕಥಾಪ್ರಸಂಗ ಹೀಗಿದೆ:
ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ವನವಾಸಕ್ಕೆ ತೆರಳಿ ಗಯಾ ಸಮೀಪದ ಫಲ್ಗು ನದೀ ತೀರಕ್ಕೆ ಬರುತ್ತಾನೆ. ದಿವಂಗತ ತಂದೆ ದಶರಥ ಮಹಾರಾಜನ ಆತ್ಮಕ್ಕೆ ಪಿಂಡಪ್ರದಾನ ಮಾಡಲು ನಿರ್ಧರಿಸಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತರಲು ತಮ್ಮನಾದ ಲಕ್ಷ್ಮಣನಿಗೆ ಆದೇಶಿಸುತ್ತಾನೆ. ಎಷ್ಟು ಹೊತ್ತಾದರೂ ಲಕ್ಷಣ ಹಿಂದಿರುಗದ ಕಾರಣ ಸೀತೆ ಚಿಂತಾಕ್ರಾಂತಳಾಗುತ್ತಾಳೆ. ನದೀ ದಡದಲ್ಲಿಯೇ ಇರಲು ಸೀತೆಗೆ ರಾಮನು ಸೂಚಿಸಿ ಬೇಗನೆ ಲಕ್ಷಣನೊಂದಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಹೊರಡುತ್ತಾನೆ. ಸೀತೆ ಅವರ ದಾರಿ ಕಾಯುತ್ತಾ ನದೀ ತೀರದಲ್ಲಿದ್ದ ಹಸುವಿಗೆ ಹುಲ್ಲು ತಿನ್ನಿಸುತ್ತಿರುತ್ತಾಳೆ. ಇದ್ದಕ್ಕಿದ್ದಂತೆ ಒಂದು ಆರ್ತನಾದ ಕೇಳಿಬರುತ್ತದೆ. ಸೀತೆ ಅತ್ತ ಕಡೆ ಕಿವಿಗೊಟ್ಟು ಆಲಿಸಿದಾಗ ಅದು ಮಾವನಾದ ದಶರಥನ ಅತೃಪ್ತ ಆತ್ಮದ ಆರ್ತನಾದ. “ರಾಮ ಬರುವುದು ತಡವಾಗುತ್ತದೆ. ಬೇಗನೆ ಪಿಂಡಪ್ರದಾನ ಮಾಡದಿದ್ದರೆ ನನಗೆ ಮುಕ್ತಿ ಸಿಗುವುದಿಲ್ಲ, ಮಗಳೇ! ನೀನೇ ಮಾಡು. ನಾನು ನಿಶ್ಚಿಂತೆಯಿಂದ ಸ್ವರ್ಗಕ್ಕೆ ಹೋಗುತ್ತೇನೆ” ಎಂದು ದಶರಥನ ಅತೃಪ್ತ ಆತ್ಮ ಸೀತೆಯನ್ನು ಆಗ್ರಹಿಸುತ್ತದೆ. ಸೀತೆ ಬೇರೆ ದಾರಿಕಾಣದೆ ಫಲ್ಗು ನದಿಯ ದಡದಲ್ಲಿದ್ದ ಮರಳನ್ನೇ ಕೈಯಲ್ಲಿ ತೆಗೆದುಕೊಂಡು ಉಂಡೆಯನ್ನಾಗಿ ಮಾಡಿ “ಪಿಂಡಪ್ರದಾನ” ಮಾಡುತ್ತಾಳೆ.
ಬಹಳ ಹೊತ್ತಿನ ನಂತರ ಹಿಂದಿರುಗಿ ಬಂದ ಶ್ರೀರಾಮ ವಿಷಯ ತಿಳಿದು “ಪಿಂಡಪ್ರದಾನ”ವನ್ನು ಮಗನಾದವನೇ ಮಾಡಬೇಕು, ನೀನು ಹೇಗೆ ಮಾಡಿದೆ? ಎಂದು ಸೀತೆಯ ಮೇಲೆ ಸಿಟ್ಟಾಗುತ್ತಾನೆ. ಮಾವನವರ ಆದೇಶದ ಮೇರೆಗೆ ಮಾಡಿದೆ ಎಂದು ಸೀತೆ ಪರಿಪರಿಯಾಗಿ ಹೇಳಿದರೂ ರಾಮ ನಂಬುವುದಿಲ್ಲ. ನೀನು ಪಿಂಡಪ್ರದಾನ ಮಾಡಿದ್ದಕ್ಕೆ ಸಾಕ್ಷಿಸಮೇತ ರುಜುವಾತು ಪಡಿಸು ಎಂದು ಸವಾಲು ಹಾಕುತ್ತಾನೆ. ಸೀತೆಯು ಫಲ್ಗು ನದಿಗೆ ಕೈಮುಗಿದು ಸಾಕ್ಷಿ ಹೇಳಲು ನಿವೇದಿಸಿಕೊಳ್ಳುತ್ತಾಳೆ. ಫಲ್ಗು ಪ್ರತ್ಯಕ್ಷಳಾಗಿ “ಹೇ ಶ್ರೀರಾಮಚಂದ್ರ! ನಾನು ನನ್ನ ಮೈ ತೊಳೆದುಕೊಳ್ಳುವುದರಲ್ಲಿ ಅಲೆಗಳಲ್ಲಿ ಮಗ್ನಳಾಗಿದ್ದೆ. ಸೀತೆ ಪಿಂಡಪ್ರದಾನ ಮಾಡಿದಳೇ ಹೇಗೆ ಕಣ್ಣಾರೆ ನೋಡಲಿಲ್ಲ” ಎಂದಾಗ ಸೀತೆಯ ಹೃದಯ ತಲ್ಲಣಗೊಳ್ಳುತ್ತದೆ. ಸೀತೆ ಧೃತಿಗೆಡದೆ ತಾನು ಕೈಯಾರೆ ಹುಲ್ಲು ತಿನ್ನಿಸಿದ ಗೋಮಾತೆಯತ್ತ ತಿರುಗಿ ನೀನಾದರೂ ಸಾಕ್ಷಿ ಹೇಳಮ್ಮಾ ಎಂದು ಬೇಡಿಕೊಳ್ಳುತ್ತಾಳೆ. ಗೋ ಮಾತೆಯೂ ಸಹ “ನಾನು ಹುಲ್ಲು ತಿನ್ನುವುದರಲ್ಲಿ ಮಗ್ನಳಾಗಿದ್ದೆ, ಗಮನಿಸಲಿಲ್ಲ ಶ್ರೀರಾಮಚಂದ್ರ” ಎಂದು ಹಾರಿಕೆಯ ಉತ್ತರ ಕೊಡುತ್ತಾಳೆ. ಸೀತೆಯು ಗಾಬರಿಗೊಂಡು ತುಳಸಿ ಗಿಡದತ್ತ ತಿರುಗಿ ನೀನಾದರೂ ನಡೆದ ಘಟನೆಯನ್ನು ನನ್ನ ಗಂಡನಿಗೆ ವಿವರಿಸು ಎಂದು ಪರಿಪರಿಯಾಗಿ ಕೇಳಿಕೊಂಡರೂ ತುಳಸಿಯೂ ಸಹ “ಶ್ರೀರಾಮಚಂದ್ರ, ನಾನು ತಂಪಾದ ಗಾಳಿಯಲ್ಲಿ ಓಲಾಡುತ್ತಾ ಮೈಮರೆತಿದ್ದೆ, ನೋಡಲಿಲ್ಲ” ಎಂದು ಉತ್ತರಿಸಿದ್ದು ಸೀತೆಯನ್ನು ಜರ್ಝರಿತಳನ್ನಾಗಿ ಮಾಡುತ್ತದೆ. ಶ್ರೀರಾಮ ಸೀತೆಯತ್ತ ತಿರುಗಿ ಸಿಟ್ಟಿಗೆದ್ದು “ಕಣ್ಣಾರೆ ನೋಡಿದವರಿಂದ ಸಾಕ್ಷಿ ಹೇಳಿಸಲು ನಿನಗೆ ಕೊನೆಯ ಅವಕಾಶವನ್ನು ಕೊಡುತ್ತೇನೆ” ಎಂದು ಎಚ್ಚರಿಸುತ್ತಾನೆ. ಆಗ ಸೀತೆ ಹತಾಶಳಾಗಿ ನದೀ ತೀರದಲ್ಲಿದ್ದ ವಟವೃಕ್ಷಕ್ಕೆ ಭಕ್ತಿಯಿಂದ ಕೈಮುಗಿದು ನಿಜಸಂಗತಿಯನ್ನು ಹೇಳಲು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಆ ವಟ ವೃಕ್ಷವು “ಹೇ ರಾಮಚಂದ್ರ, ಸೀತೆ ಹೇಳುತ್ತಿರುವುದು ನಿಜ, ಪಿಂಡಪ್ರದಾನ ಮಾಡಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ, ಯಾವ ಸಂಶಯವೂ ಬೇಡ” ಎಂದು ಹೇಳಿದಾಗ ಸೀತೆಗೆ ಮರುಜೀವ ಬಂದಂತಾಗಿ ವಟವೃಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾಳೆ. ಕಣ್ಣಾರೆ ನೋಡಿದ್ದ ಘಟನೆಯನ್ನು ನೋಡಿಲ್ಲವೆಂದು ಸುಳ್ಳು ಹೇಳಿದ ಫಲ್ಗು ನದಿ, ಗೋವು ಮತ್ತು ತುಳಸಿಗೆ ಸೀತೆಯು ಹಿಡಿ ಶಾಪ ಹಾಕುತ್ತಾಳೆ.
ಈ ಕಿರುನಾಟಕ ಮುಕ್ತಾಯಗೊಂಡಾಗ ಕಿಕ್ಕಿರಿದು ಸೇರಿದ್ದ ಸಭಿಕರ ಕರತಾಡನ ಸಭಾಂಗಣದಲ್ಲಿ ಗೂಂಜಿಟ್ಟಿತು. ಆದರೆ ನಮ್ಮ ಮನಸ್ಸು ವ್ಯಗ್ರಗೊಂಡಿತು. ವೇದಿಕೆಯನ್ನೇರಿ ಮಕ್ಕಳ ಅಭಿನಯಕ್ಕೆ ಮೆಚ್ಚಿ ಬಹುಮಾನ ವಿತರಣೆ ಮಾಡಿದರೂ ಸಭಿಕರನ್ನು ಉದ್ದೇಶಿಸಿ ಮಾಡಿದ ನಮ್ಮ ವಿಮರ್ಶೆ: ನಿತ್ಯವೂ ಪೂಜಾರ್ಹರಾದ ಗಂಗಾಮಾತೆ, ಗೋಮಾತೆ, ತುಳಸಿ ಇವರುಗಳಿಂದ ಕಥಾಕಾರನು ಸುಳ್ಳು ಹೇಳಿಸಿದ್ದು, ಹಾರಿಕೆ ಉತ್ತರ ಕೊಡಿಸಿದ್ದು ತಪ್ಪು. ಅವರು ಸುಳ್ಳು ಹೇಳಲು ಸಾಧ್ಯವಿಲ್ಲ. ಸತ್ಯಪಥದಲ್ಲಿ ನಡೆವವರ ಬಗ್ಗೆ ಸುಳ್ಳು ಕಥೆಗಳನ್ನು ಹೆಣೆದು ಗೋಳುಹೊಯ್ದುಕೊಳ್ಳುವ ಖದೀಮರ ಪ್ರತೀಕವಾಗಿ ಕೋತಿಯಿಂದಲೋ, ನರಿಯಿಂದಲೋ, ಗೂಬೆಯಿಂದಲೋ ಸುಳ್ಳು ಹೇಳಿಸಿದ್ದರೆ ಅರ್ಥಪೂರ್ಣವಾಗುತ್ತಿತ್ತು! ಅಂಥವರನ್ನು ಕಂಡೇ ಕನಲಿ ನಮ್ಮ ಪರಮಾರಾಧ್ಯ ಗುರುವರ್ಯರ ಅಂಕಿತ ನಾಮದಲ್ಲಿ ಬರೆದ ಮಹದೇವ ಬಣಕಾರರ ವಚನ ಇಂತಿದೆ:
ಹುಲ್ಲ ತಿಂದ ಹಸು ಹಾಲ ಕರೆವುದಯ್ಯಾ
ಕಲ್ಲ ತಿಂದ ಕೋಳಿ ಮೊಟ್ಟೆಯನಿಡುವುದಯ್ಯಾ
ನೀರನುಂಡ ಚಂದನ ಗಂಧವ ಕೊಡುವುದಯ್ಯಾ
ಹೂವಿನ ರಸ ಹೀರಿದ ಜೇನು ಮಧುವನೀವುದಯ್ಯಾ
ಹಾಲು ಜೇನುಂಡವರು ಮತ್ಸರಕ್ಕೆ ಮಜ್ಜನವನೆರೆವರಯ್ಯಾ
ಎನ್ನ ವರಗುರು ಶಿವಕುಮಾರ ಪ್ರಭುವೆ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ. 21-9-2022.
Powered by Froala Editor