ಶ್ರೀ ತರಳಬಾಳು ಜಗದ್ಗುರುಗಳವರ ಪಿಟೀಲು ವಾದನಕ್ಕೆ ಕೇರಳಿಗರ ಮನದುಂಬಿದ ಭಕ್ತಿಯ ಕರತಾಡನ !...
ದಿನಾಂಕ: 18-9-2022 ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಡೆದ ಕೇರಳ ಸಮಾಜದ ಸಂಗೀತ ಕಾರ್ಯಕ್ರಮದಲ್ಲಿ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಿಟೀಲು ವಾದನವು ನೆರೆದಿದ್ದ ಸಭಿಕರ ಭಕ್ತಿಯ ಕರ ತಾಡನಕ್ಕೆ ಸಾಕ್ಷಿಯಾಯಿತು.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು ಭಾವಗೀತೆಯು ಶ್ರೀ ಜಗದ್ಗುರುಗಳವರ ಪಿಟೀಲು ವಾದನದ ಕೃತಿಯಾಯಿತು. ಪೂಜ್ಯ ಶ್ರೀ ಜಗದ್ಗುರುಗಳವರ ವಾದನವು ಮನಸ್ಸಿಗೊಂದು ಚೈತನ್ಯ ತಂದುಕೊಡುವ ಅಪೂರ್ವ ಶಕ್ತಿಯಾಗಿ ಮನಸ್ಸು ಮತ್ತು ದೇಹದ ಉಲ್ಲಾಸವನ್ನು ಹೆಚ್ಚಿಸಿತು.
ಆಶೀರ್ವಚನ ನುಡಿಗಳನ್ನು ದಯಪಾಲಿಸಿದ ಶ್ರೀ ಜಗದ್ಗುರುಗಳವರು ನಾವು ಶಾಲಾ ಬಾಲಕನಾಗಿದ್ದಾಗ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಕೂಡಲಿಯಿಂದ ಕೂಗಳತೆಯ ದೂರದ ಸೂಗೂರು ನಮ್ಮ ಜನ್ಮಸ್ಥಳ. ಪಕ್ಕದೂರಿಗೆ ಗುರುಗಳೊಬ್ಬರು ದಯಮಾಡಿಸಿದ್ದರು. ನಾವು ಒಂದೆರಡು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದು ಗುರುಗಳಿಗೆ ಬಹಳ ಸಂತೋಷ ಉಂಟುಮಾಡಿತ್ತು. ಗುರುಗಳು ಕೇಳಿದರು "ಯಾರೀ ಹುಡುಗ?" ಊರಿನ ಹಿರಿಯರು ಪರಿಚಯಿಸಿದರು. ಸಂಗೀತದಲ್ಲಿ ಬಾಲಕನಿಗಿದ್ದ ಅಭಿರುಚಿಯನ್ನು ವಿವರಿಸಿದರು. ಹತ್ತಿರದ ಪೇಟೆಯಲ್ಲಿ ಬೀದಿಯ ಭಿಕ್ಷುಕನೊಬ್ಬ ನುಡಿಸುತ್ತಿದ್ದ ತೆಂಗಿನ ಚಿಪ್ಪಿನ ತಂತಿಯ ವಾದ್ಯದಿಂದ ಆಕರ್ಷಿತನಾಗಿ ಮನೆಗೆ ಬಂದೊಡನೆ ಅದರಂತೆ ಮಾಡಲು ಪ್ರಯತ್ನಿಸಿದ್ದನ್ನು ಕೇಳಿ ಗುರುಗಳು ಮುಗುಳ್ನಕ್ಕರು. ಬಾಲಕನನ್ನು ಹತ್ತಿರ ಕರೆದು ಮೈದಡವಿ ತಮ್ಮ ಮಠದಲ್ಲಿರುವ ಪಿಟೀಲನ್ನು ಕಳುಹಿಸಿಕೊಡುವುದಾಗಿ ಹೇಳಿದರು.
ಸಿರಿಗೆರೆ ಮಠದಿಂದ ಮಾರನೆಯ ದಿನವೇ ಸೂಗೂರಿಗೆ ಬರುತ್ತಿದ್ದ ಗಜಾನನ ಬಸ್ಸಿನಲ್ಲಿ ಬಂದು ಅದು ಬಾಲಕನ ಕೈಸೇರಿತು! ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಸಿರಿಗೆರೆ ಮಠಕ್ಕೆ ಬಂದು ಗುರುಗಳೆದುರಿಗೆ ನುಡಿಸಿದಾಗ ಗುರುಗಳು ಆನಂದತುಂದಿಲರಾಗಿ ಭೇಷ್ ಎಂದು ಉದ್ಗರಿಸಿದರು. ಶಿವಮೊಗ್ಗದಿಂದ ಮೈಸೂರಿಗೆ, ಮೈಸೂರಿನಿಂದ ಕಾಶಿಗೆ, ಕಾಶಿಯಿಂದ ಕಡಲಾಚೆಯ ವಿಯೆನ್ನಾಕ್ಕೆ ಹೋಗುವಂತೆ ಮಾಡಿ ನಾಡಿನ ಒಳಹೊರಗಿನ ವಿಶ್ವವಿದ್ಯಾನಿಲಯಗಳಲ್ಲಿ ಓದುವಂತೆ ಪ್ರೋತ್ಸಾಹಿಸಿದರು. ಅವರೇ ನಮ್ಮ ಲಿಂಗೈಕ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಅವರು ಅನುಗ್ರಹಿಸಿ ಕಳಿಸಿದ್ದ ಆ ಪಿಟೀಲಿನ ತಂತಿಗಳಲ್ಲಿ ಯಾವ ಮೋಡಿಯಿತ್ತೋ ಬಲ್ಲವರಾರು! ದೂರದ ದೇಶದಲ್ಲಿದ್ದರೂ ಅವರ ಸನಿಹಕ್ಕೆ ಗಾಢವಾಗಿ ಎಳೆದು ತಂದಿತು! ಅವರು ವಿರಾಜಮಾನರಾಗಿ ಕುಳಿತಿದ್ದ ಗದ್ದುಗೆಯನ್ನು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಸೀನರಾಗುವಂತೆ ಮಾಡಿದ ರೋಚಕ ಸಂದರ್ಭವನ್ನು ಭಾವಪೂರ್ಣವಾಗಿ ಸ್ಮರಿಸಿದರು. ಕೇರಳ ಸಮಾಜದ ಪದಾಧಿಕಾರಿಗಳು ಶ್ರೀ ಜಗದ್ಗುರುಗಳವರನ್ನು ಭಕ್ತಿ ಪೂರ್ವಕವಾಗಿ ಅಭಿವಂದಿಸಿದರು.
ಕನ್ನಡ ನಾಡಿನ ಜಲಋಷಿ, ಬಹುಭಾಷಾ ವಿದ್ವಾಂಸರು, ವಿದ್ವತ್ ಪೂರ್ಣ ಸಂತಶ್ರೇಷ್ಠರು ಸರ್ವತ್ರ ಪೂಜ್ಯರಾದ ಶ್ರೀ ತರಳಬಾಳು ಜಗದ್ಗುರು
ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬನಾರಸ್ ಹಿಂದೂ ವಿಶ್ವ ವಿದ್ಯಾನಿಲಯದ ವಯೊಲಿನ್ ಡಿಪ್ಲೊಮಾದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಪ್ರತಿಭಾನ್ವಿತರು. ಶ್ರೀ ಜಗದ್ಗುರುಗಳವರು ಶಿವಮೊಗ್ಗದಲ್ಲಿ ಶಾಲಾ ಬಾಲಕರಾಗಿರುವಾಗಲೇ ಪಿಟೀಲು ನುಡಿಸುವುದನ್ನು ಖಾಸಗಿ ಶಿಕ್ಷಕರಿಂದ ಅಭ್ಯಾಸ ಮಾಡಿದರು. ಸ್ವಾರಸ್ಯದ ಸಂಗತಿ: ಶಿವಮೊಗ್ಗದಲ್ಲಿ ಆಗ ಲಾಯರ್ ಆಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಮೃದಂಗ ಮತ್ತು ಹಾಡುಗಾರಿಕೆ ಕಲಿಯುತ್ತಿದ್ದ ಸಹಪಾಠಿ!
ಮುಂದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಯನದ ಸಂದರ್ಭದಲ್ಲಿ ಪಿಟೀಲು ಚೌಡಯ್ಯನವರು ಸ್ಥಾಪಿಸಿದ ಬಿಡಾರಂ ಕೃಷ್ಣಪ್ಪನವರ ಅಯನಾರ್ ಕಲಾ ಶಾಲೆಯಲ್ಲಿ ಪಿಟೀಲು ಕಲಿಯುವುದು ಮಂದುವರೆಯಿತು. ಬನಾರಸ್ ನಲ್ಲಿ ಸಂಸ್ಕೃತ ತರಗತಿಗಳು ಮುಗಿದ ನಂತರ ಸಂಜೆ ಹೊತ್ತು ನಡೆಯುತ್ತಿದ್ದ ವಯೊಲಿನ್ ಡಿಪ್ಲೊಮಾ ತರಗತಿ ಸೇರಿದರು. ಚೆನ್ನೈನ ವಿದ್ವಾನ್ ವೆಂಕಟರಾಮಾನುಜಂ ಅವರು ಶಿಕ್ಷಕರು. ಕರ್ನಾಟಕ ಸಂಗೀತದ ಬಹು ದೊಡ್ಡ ವಿದ್ವಾಂಸರವರು. ಆಕಾಶವಾಣಿಯಲ್ಲಿ ಸಂಗೀತ ಕಚೇರಿ ನೀಡುತ್ತಿದ್ದರು. ಒಮ್ಮೆ ದೆಹಲಿಯ ಆಕಾಶವಾಣಿಯಲ್ಲಿ ಅವರ ಪಿಟೀಲು ಕಚೇರಿ ನಡೆದಾಗ ತಂಬೂರಿ ಸಾಥ್ ನೀಡಿದ್ದು ಆಗ ವಿದ್ಯಾರ್ಥಿಯಾಗಿದ್ದ ಶ್ರೀ ಗುರುಗಳೇ! ವಯೋಲಿನ್ ಡಿಪ್ಲೊಮಾದಲ್ಲಿ ಪ್ರಥಮ ರ‍್ಯಾಂಕ್ ನ ಗರಿಯು ಮುಡಿಗೇರಿತು!
ಶ್ರೀಜಗದ್ಗುರುಗಳು ಈಗಲೂ ಸಮಯ ಸಿಕ್ಕರೆ (ಅದು ಸಿಗುವುದು ದುರ್ಲಭ!) ಪಿಟೀಲಿನ ತಂತಿಗಳ ಮೇಲೆ ಕೈ ಆಡಿಸುತ್ತಾರೆ. ತ್ಯಾಗರಾಜರ ಕೃತಿಗಳನ್ನು, ವಚನಗಳನ್ನು ಮತ್ತು ಭಾವಗೀತೆಗಳನ್ನು ಇಷ್ಟಪಟ್ಟು ನುಡಿಸುತ್ತಾರೆ. ಪ್ರತಿ ವರ್ಷ ಹಿರಿಯ ಗುರುಗಳವರ ಶ್ರದ್ಧಾಂಜಲಿಯ ದಿನದಂದು ಐಕ್ಯ ಮಂಟಪದಲ್ಲಿ ಪರಮಾರಾಧ್ಯ ಗುರುವರ್ಯರಿಗೆ ಸಂಗೀತದದೊಂದಿಗೆ ಭಕ್ತಿ ಸಮರ್ಪಿಸುವ ದೃಶ್ಯ ಕಣ್ಣಾಲಿಗಳನ್ನು ತರುತ್ತದೆ.
ಪೂಜ್ಯರಿಗೆ ತುಂಬಾ ಪ್ರಿಯವಾದ ಭಾವಗೀತೆ ಜಿ.ಎಸ್ ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು . ಅದಕ್ಕೆ ಕಾರಣವನ್ನು ಅವರ ಮಾತುಗಳಲ್ಲೇ ತಿಳಿಯಿರಿ. "ಈ ಹಾಡನ್ನು ಕೇಳಿದಾಗಲೆಲ್ಲಾ ನಮ್ಮ ಮತ್ತು ನಮ್ಮ ಲಿಂಗೈಕ್ಯ ಗುರುವರ್ಯರ ಸಂಬಂಧವನ್ನು ಕುರಿತೇ ಜಿ.ಎಸ್.ಎಸ್ ಬರೆದಿದ್ದಾರೇನೋ ಎಂಬ ಭಾವನೆ ನಮ್ಮ ಹೃದಯದಲ್ಲಿ ಸಹಜವಾಗಿ ಮೂಡಿಬರುತ್ತದೆ. ಎಷ್ಟೇ ಆಗಲಿ ಇದು ಗುರು-ಶಿಷ್ಯ ಸಂಬಂಧವನ್ನು ಕುರಿತದ್ದೇ ತಾನೆ. ಇದಕ್ಕಿಂತ ಭಿನ್ನವಾದ ಶಬ್ದಗಳಲ್ಲಿ ನಮ್ಮ ಗುರುವರ್ಯರ ಬಗ್ಗೆ ನಮಗಿರುವ ಮಧುರ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಿಲ್ಲ ಎನಿಸುತ್ತದೆ." ಈ ಕವಿತೆಯ ಭಾವದಿಂದ ನಮ್ಮ ಬಾಲ್ಯ ಜೀವನದ ಘಟನೆ ನೆನಪಾಗಿ ಹೃದಯ ಗದ್ಗದಗೊಳ್ಳುತ್ತದೆ; ಕಂಠ ಬಿಗಿಯುತ್ತದೆ, ಕಣ್ಣೆವೆ ಹನಿಗೂಡುತ್ತದೆ!
ಅಂದ ಹಾಗೆ ಒಂದು ಚಿಕ್ಕ ಮಾಹಿತಿ: ಮಹಾರಾಜಾ ಕಾಲೇಜಿನಲ್ಲಿ ಜಿ.ಎಸ್ ಶಿವರುದ್ರಪ್ಪನವರು ಶ್ರೀಜಗದ್ಗುರುಗಳವರ ಅಧ್ಯಾಪಕರು!