ಮರೆತು ಹೋದ ಕನ್ನಡ ನಾಡಿನ ಜಲಿಯನ್ ವಾಲಾ ಬಾಗ್
1938ರಲ್ಲಿ ನಡೆದ ವಿದುರಾಶ್ವತ್ಥದ ಹತ್ಯಾಕಾಂಡ ಕನ್ನಡಿಗರ ದೇಶಭಕ್ತಿ, ರಾಷ್ಟ್ರೀಯ ಭಾವನೆಗಳ ಪ್ರತಿಬಿಂಬ
ಈ ವರ್ಷ ಅಕ್ಟೋಬರ್ 2ರಂದು ಭಾನುವಾರ ಬಂದ ಗಾಂಧೀಜಯಂತಿ ಸರಕಾರೀ ನೌಕರರಿಗಾಗಲೀ, ಶಾಲಾಕಾಲೇಜು ಶಿಕ್ಷಕರು ಮತ್ತು ಸಿಬ್ಬಂದಿಗಾಗಲೀ ಅಷ್ಟೇನೂ ಸಂತೋಷದಾಯಕ ದಿನವಾಗಿರಲಿಲ್ಲ. “ಭಾನುವಾರ ಹೇಗೂ ರಜಾ. ಈ ಗಾಂಧಿಜಯಂತಿ ಹಾಳಾದ್ದು ರಜಾ ದಿನವೇ ಬರಬೇಕೇ? ಅದರ ಬದಲು ಸೋಮವಾರ ಬಂದಿದ್ದರೆ ದಸರಾ ಹಬ್ಬದ ಪ್ರಯುಕ್ತ ಮಂಗಳವಾರ ಮತ್ತು ಬುಧವಾರ ರಜೆ ಇದ್ದುದರಿಂದ ಇನ್ನೂ ಹೆಚ್ಚು ಖುಷಿಯಾಗುತ್ತಿತ್ತು! CL, EL ಉಳಿಯುತ್ತಿದ್ದವು!” ಎಂದು ಅನಿಸಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಒಮ್ಮೆ ನಮ್ಮ ಮಠಕ್ಕೆ ಪ್ರವಾಸ ಬಂದಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ “ಮಹಾತ್ಮಾ ಗಾಂಧೀಜಿಗೆ ಇಂದಿರಾಗಾಂಧಿಯು ಏನಾಗಬೇಕು?” ಎಂದು ಕೇಳಿದ ನಮ್ಮ ಸರಳ ಪ್ರಶ್ನೆಗೆ ಒಬ್ಬ ವಿದ್ಯಾರ್ಥಿ ಕೊಟ್ಟ ಸಲೀಸಾದ ಉತ್ತರ: “ಮಗಳಾಗಬೇಕು!” ಅವನತ್ತ ಅಸಮಾಧಾನದ ದೃಷ್ಟಿ ಬೀರಿ ಬೇರೊಬ್ಬ ಹುಡುಗನನ್ನು ಕೇಳಿದಾಗ ಅವನು ಕೊಟ್ಟ ದಿಟ್ಟ ಉತ್ತರ “ಉಹೂಂ, ಮಗಳಲ್ಲ; ಇಂದಿರಾಗಾಂಧಿಯು ಮಹಾತ್ಮಾ ಗಾಂಧೀಜಿಗೆ ಸೊಸೆಯಾಗಬೇಕು”! ಇದು ನಮ್ಮ ಇಂದಿನ ಶಿಕ್ಷಣದ ಗುಣಮಟ್ಟದ ಸೂಚಕ!
ಇನ್ನು ಮುಂದೆ ಹಬ್ಬ ಹರಿದಿನಗಳಂದು ಕೊಡುವ ರಜೆಗಳನ್ನು ಹೊರತುಪಡಿಸಿ ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆ ಇತ್ಯಾದಿ ರಾಷ್ಟ್ರೀಯ ರಜೆಗಳನ್ನು ರದ್ದುಗೊಳಿಸುವುದು ಒಳ್ಳೆಯದು. ಯಾರಾದರೂ ಪ್ರತಿಷ್ಠಿತ ವ್ಯಕ್ತಿಗಳು ಮರಣ ಹೊಂದಿದಾಗ ಅವರ ಗೌರವಾರ್ಥ ಶೋಕದಿನಾಚರಣೆ ಎಂದು ಸರಕಾರ ರಜಾ ಘೋಷಣೆ ಮಾಡುವುದೂ ಸಹ ಸರಿಯಲ್ಲ. ಈ ದಿನ ಶಾಲೆಗೆ ಏಕೆ ರಜೆ ಎಂದು ಕೇಳಿದರೆ ಮಕ್ಕಳು “ಅದು ಯಾರೋ ಸತ್ತಿದ್ದಾರಂತೆ ಅದಕ್ಕೆ” ಎಂದು ಹೇಳುತ್ತಾರೆ. ಇದು ಮೃತರಾದ ಗಣ್ಯಮಾನ್ಯರಿಗೆ ಗೌರವ ತರುವಂತಹ ವಿಷಯವೇ? ಈ ರೀತಿ ರಜೆ ಪೋಷಣೆ ಮಾಡುವ ಬದಲು ಮೃತಪಟ್ಟ ಪ್ರತಿಷ್ಠಿತ ವ್ಯಕ್ತಿಗಳ ಜೀವನ ಚರಿತ್ರೆ, ಸಾಧನೆ, ಸೇವೆಗಳನ್ನು ಕುರಿತು ಶಾಲೆಗಳಲ್ಲಿ ಮಕ್ಕಳಿಗೆ ತಿಳಿಹೇಳುವುದು, ವಿಶೇಷ ಉಪನ್ಯಾಸಗಳನ್ನು ಮತ್ತು ಅವರ ಜೀವನಕ್ಕೆ ಸಂಬಂಧಿಸಿದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಒಳ್ಳೆಯದು. ಆ ಮೂಲಕ ಮಕ್ಕಳ ಬೌದ್ಧಿಕ ಪರಿಧಿ ಹೆಚ್ಚುತ್ತಾ ಹೋಗುತ್ತದೆ. ಅವರ ಭವಿಷ್ಯ ಜೀವನಕ್ಕೆ ಪ್ರೇರಣೆಯುಂಟಾಗುತ್ತದೆ.
ಇಷ್ಟೆಲ್ಲಾ ಬರೆಯಲು ಕಾರಣ ಕಳೆದ ಭಾನುವಾರ ಗಾಂಧಿ ಜಯಂತಿಯಂದು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರಿನಿಂದ ಎಂಟು ಕಿ.ಮೀ ದೂರದಲ್ಲಿರುವ ವಿದುರಾಶ್ವತ್ಥದವರೆಗೆ ನಡೆದ ಪಕ್ಷಾತೀತ, ಜಾತ್ಯತೀತವಾದ ಸದ್ಭಾವನಾಯಾತ್ರೆ. ನಾಗರಿಕರ ಜೀವನವು ಸದ್ಭಾವನೆಯಿಂದ ಕೂಡಿರಬೇಕೆಂದರೆ ರಾಜಕೀಯ ಪಕ್ಷಗಳ ತಿಕ್ಕಾಟ, ಜಾತಿ-ಜಾತಿಗಳ ಸಂಘರ್ಷ ಇಲ್ಲದೇ ಇದ್ದಾಗ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಹೈಕೋರ್ಟಿನ ಹಿರಿಯ ವಕೀಲರೂ, ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷರೂ ಆದ ಅಶೋಕ್ ಹಾರನಹಳ್ಳಿಯವರು ಎರಡು ತಲೆಮಾರಿನಿಂದ ವಂಶಪಾರಂಪರ್ಯವಾಗಿ ಬಂದ ದೇಶಭಕ್ತಿಯಿಂದ ಈ ಪಾದಯಾತ್ರೆಯನ್ನು ಏರ್ಪಡಿಸಿದ್ದರು. ನಮ್ಮ ಗುರುವರ್ಯರ ಆತ್ಮೀಯರಾಗಿದ್ದ ಇವರ ತಂದೆ ಹಾರನಹಳ್ಳಿ ರಾಮಸ್ವಾಮಿಯವರು 1942 ರಲ್ಲಿ ನಡೆದ “ಕ್ವಿಟ್ ಇಂಡಿಯಾ” ಚಳುವಳಿಯಲ್ಲಿ ಗಾಂಧೀಜಿಯ ಜೊತೆ ಭಾಗವಹಿಸಿದವರು. “ಕಂಡಲ್ಲಿ ಗುಂಡಿಕ್ಕಿ” ಕೊಲ್ಲಬೇಕೆಂಬ ಬ್ರಿಟಿಷ್ ಸರಕಾರದ ಆದೇಶವಿದ್ದರೂ ಅಪ್ಪಟ ಗಾಂಧೀವಾದಿಗಳಾದ ಇವರ ತಂದೆ ಮತ್ತು ತಾತ ಸರ್ದಾರ್ ವೆಂಕಟರಾಮಯ್ಯನವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ನಮ್ಮನ್ನು ಅಶೋಕ್ ಹಾರನಹಳ್ಳಿಯವರು ದೂರವಾಣಿಯಲ್ಲಿ ಆಹ್ವಾನಿಸುವವರೆಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ದುರಂತ ಸಂಭವಿಸಿದ “ದಕ್ಷಿಣದ ಜಲಿಯನ್ ವಾಲಾ ಬಾಗ್” ಎಂದೇ ಖ್ಯಾತಿಯನ್ನು ಪಡೆದ ಐತಿಹಾಸಿಕ ಸ್ಥಳವಾದ ಈ ವಿದುರಾಶ್ವತ್ಥದ ಪರಿಚಯವೇ ನಮಗೆ ಇರಲಿಲ್ಲ. ಅವರಿಂದ ಪುಸ್ತಕಗಳನ್ನು ತರಿಸಿಕೊಂಡು ಓದಿದಾಗ ಮೈರೋಮಾಂಚನವಾಯಿತು. ವಿದುರಾಶ್ವತ್ಥದ ಪರಿಚಯವನ್ನು ಮಾಡಿಕೊಡುವ ಮೊದಲು “ಜಲಿಯನ್ ವಾಲಾ ಬಾಗ್” ಕುರಿತು ಕೆಲವು ಸಂಗತಿಗಳು:
1919 ರ ಏಪ್ರಿಲ್ 13 ರಂದು ನಡೆದ ದಾರುಣ ಘಟನೆ. ಪಂಜಾಬಿನ ಆಗಿನ ಲೆಫ್ಟಿನೆಂಟ್ ಗವರ್ನರ್ ಆದ ಸರ್ ಮೈಖೇಲ್ ಓಡ್ವಯರ್ (Sir Michael ODwyer) ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೆಲವಾರು ಮುಖಂಡರನ್ನು ದಸ್ತಗಿರಿ ಮಾಡಿ ಗಡಿಪಾರು ಮಾಡಿದ್ದನು. ಗಾಂಧೀಜಿಯನ್ನು ಪಂಜಾಬ್ ಪ್ರವೇಶಿಸದಂತೆ ನಿರ್ಬಂಧಿಸಿದ್ದನು. ಇದರಿಂದ ಉದ್ರಿಕ್ತರಾದ ಜನರು ರಾಜ್ಯಾದ್ಯಂತ ಅಲ್ಲಲ್ಲಿ ಗುಂಪುಗುಂಪಾಗಿ ಸೇರಿ ಪ್ರತಿಭಟನೆ ಮಾಡತೊಡಗಿದರು. ಏಪ್ರಿಲ್ 13 ರಂದು ಪಂಜಾಬಿನ ಪ್ರಮುಖನಗರವಾದ ಅಮೃತ್ ಸರ್ ನ ಮಧ್ಯಭಾಗದಲ್ಲಿರುವ ಜಲಿಯನ್ ವಾಲಾ ಬಾಗ್ ನಲ್ಲಿ ಸಭೆ ಏರ್ಪಾಡಾಗಿತ್ತು. ಅಂದು ಸಿಖ್ಖರಿಗೆ ಅತ್ಯಂತ ಪವಿತ್ರವಾದ ಬೈಸಾಖೀ ಹಬ್ಬದ ದಿನ. ಅಮೃತಸರದಲ್ಲಿ ಸಿಖ್ಖರ ಪವಿತ್ರ ಕ್ಷೇತ್ರವಾದ ಸ್ವರ್ಣಮಂದಿರವಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸುತ್ತಮುತ್ತಲ ಹಳ್ಳಿಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಜಲಿಯನ್ ವಾಲಾ ಬಾಗ್ ನಲ್ಲಿ ಜಮಾಯಿಸಿದ್ದರು.
ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡಯರ್ (Reginald Dyer) ತನ್ನ ಸೇನಾ ತುಕಡಿಯೊಂದಿಗೆ ಸಂಜೆ 5 ಗಂಟೆಗೆ ಧಾವಿಸಿದ. ಸುತ್ತಲೂ ಕಣ್ಣುಹಾಯಿಸಿದ. ಗುಂಡು ಹಾರಿಸುವುದಾಗಿ ಯಾವ ಮುನ್ಸೂಚನೆಯನ್ನೂ ನೀಡದೆ ಕ್ರುದ್ಧನಾಗಿ “ಫಯರ್” ಎಂದು ಸಿಪಾಯಿಗಳಿಗೆ ಆರ್ಡರ್ ಮಾಡಿದ. ಕೇವಲ 15 ನಿಮಿಷಗಳಲ್ಲಿ ಬಂದೂಕಿನಿಂದ 1650 ಗುಂಡುಗಳು ಹಾರಿದವು. ಕ್ಷಣಾರ್ಧದಲ್ಲಿ ನೂರಾರು ಜನ ಅಮಾಯಕರು ಹೆಣಗಳಾಗಿ ಉರುಳಿಬಿದ್ದರು.
ಪ್ರಾಣಭೀತಿಯಿಂದ ಜನರು ದಿಗಿಲುಗೊಂಡು 8-10 ಅಡಿ ಎತ್ತರದ ಗೋಡೆಯನ್ನು ಹಾರಿ ಬದುಕಲು ಪ್ರಯತ್ನ ಮಾಡಿ ಗುಂಡಿಗೆ ಆಹುತಿಯಾದರು. ಹತ್ತಿರದಲ್ಲಿದ್ದ ತೆರೆದ ಬಾವಿಗೆ ಹಾರಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿ ನೂಕುನುಗ್ಗಲಿನಲ್ಲಿ ನೀರಿನೊಳಗೆ ಮುಳುಗಿ ಸತ್ತರು. ಮಹಿಳೆಯರೂ ಮಕ್ಕಳೂ ಸೇರಿದಂತೆ ನೂರಾರು ಜನ ಸತ್ತುಹೋದರು, ಸಾವಿರಾರು ಜನ ಗಾಯಗೊಂಡರು. ಈ ಬರ್ಬರ ಹತ್ಯೆ ಪಂಜಾಬ್ ಪ್ರದೇಶದ ಜನರಲ್ಲಿ ಕೋಪ-ತಾಪಗಳನ್ನುಂಟುಮಾಡಿತು. ಗಾಂಧೀಜಿಯ ಅಸಹಕಾರ ಚಳುವಳಿಗೆ ದಾರಿ ಮಾಡಿಕೊಟ್ಟಿತು. ವಿಶ್ವಕವಿ ರವೀಂದ್ರನಾಥ ಠಾಗೂರ್ ಅವರು ಬ್ರಿಟಿಷ್ ಸರ್ಕಾರ ನೀಡಿದ್ದ “ನೈಟ್ ಹುಡ್” ಪದವಿಯನ್ನು ತಿರಸ್ಕರಿಸಿ ವೈಸರಾಯ್ ಗೆ ಪ್ರತಿಭಟನಾಪತ್ರ ಬರೆದರು.
ಆದರೆ ಡಯರ್ ಬ್ರಿಟಿಷರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿದ ದಕ್ಷ ಅಧಿಕಾರಿಯೆಂದು ಬ್ರಿಟಿಷ್ ಮಾಧ್ಯಮಗಳು ಗುಣಗಾನ ಮಾಡಿದವು. “ಪಂಜಾಬ್ ಹಂತಕ”ನಾದ ಆ ಕ್ರೂರಿಗೆ “ಪಂಜಾಬ್ ರಕ್ಷಕ” ಎಂಬ ಬಿರುದು ಕೆತ್ತಿದ ಖಡ್ಗವನ್ನು ನೀಡಲಾಯಿತು. “Morning Post" ಎಂಬ ಬ್ರಿಟಿಷ್ ಪತ್ರಿಕೆ ಸಾರ್ವಜನಿಕರಿಂದ ಸುಮಾರು 28 ಸಾವಿರ ಪೌಂಡ್ ನಿಧಿ ಸಂಗ್ರಹಿಸಿ ಅವನಿಗೆ ಅರ್ಪಣೆ ಮಾಡಿತು! ಕೆಲವು ವರ್ಷಗಳ ನಂತರ ಡಯರ್ ಅಪಸ್ಮಾರದಿಂದ ಮರಣ ಹೊಂದಿದ. ಜಲಿಯನ್ ವಾಲಾ ಬಾಗ್ ಮಾರಣ ಹೋಮವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಾರೆ ಕಂಡಿದ್ದ ಹುಡುಗ ಉದ್ದಮ್ ಸಿಂಗ್ ನ ಮನಸ್ಸಿನಲ್ಲಿ ಹೆಡೆಯಾಡುತ್ತಿದ್ದ ಪತೀಕಾರದ ಭಾವನೆ ತೃಪ್ತಿಗೊಳ್ಳಲಿಲ್ಲ, ಸತತವಾಗಿ 21 ವರ್ಷಗಳ ಕಾಲ ಹೊಂಚುಹಾಕಿ ಇಂಗ್ಲೆಂಡಿಗೆ ಹೋಗಿ ಈ ಹತ್ಯಾಕಾಂಡಕ್ಕೆ ಮೂಲಕಾರಣಕರ್ತನಾದ ಗವರ್ನರ್ ಸರ್ ಮೈಖೇಲ್ ಓಡ್ವಯರ್ ನನ್ನು ಗುಂಡಿಕ್ಕಿ ಕೊಂದುಹಾಕಿದ. ಭಾರತಕ್ಕೆ ಓಡಿಬರುವ ವಿಫಲ ಪ್ರಯತ್ನ ಮಾಡದೆ ಇಂಗ್ಲೆಂಡಿನಲ್ಲಿಯೇ ನೇಣುಗಂಬವನ್ನೇರಿದ.
ಜಲಿಯನ್ ವಾಲಾ ಬಾಗ್ ಪ್ರತಿರೂಪವೇ 1938 ರಲ್ಲಿ ನಡೆದ ಕರ್ನಾಟಕದ ವಿದುರಾಶ್ವತ್ಥದ ಹತ್ಯಾಕಾಂಡ. ಆಗಿನ ಜನರ ದೇಶಭಕ್ತಿ ಮತ್ತು ರಾಷ್ಟ್ರೀಯ ಭಾವನೆಗಳನ್ನು ಎರಡೂ ಹತ್ಯಾಕಾಂಡಗಳು ಬಿಂಬಿಸುತ್ತವೆ. ಎರಡೂ ಸಹ ಧಾರ್ಮಿಕ ಮತ್ತು ಚಾರಿತ್ರಿಕ ಇತಿಹಾಸವುಳ್ಳ ಪುಣ್ಯಸ್ಥಳಗಳು. ಜಲಿಯನ್ ವಾಲಾ ಬಾಗ್ ಸಿಖ್ ಧರ್ಮೀಯರಿಗೆ ಅತ್ಯಂತ ಪವಿತ್ರವಾದ ಬೈಸಾಖೀ ಹಬ್ಬವನ್ನು ಆಚರಿಸುವ ಸ್ಥಳವಾದರೆ, ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಹಿಂದೂಗಳು ಆರಾಧಿಸುವ ಪವಿತ್ರ ಕ್ಷೇತ್ರ. ಇಲ್ಲಿರುವ ಅಶ್ವತ್ಥನಾರಾಯಣಸ್ವಾಮಿಯ ದೇವಾಲಯದ ಆವರಣದಲ್ಲಿರುವ ಅಶ್ವತ್ಥ ವೃಕ್ಷ ಮಹಾಭಾರತದ ವಿದುರನು ನೀರೆರೆದು ಬೆಳೆಸಿದ ವೃಕ್ಷವೆಂಬ ಐತಿಹ್ಯ ಜನಮಾನಸದಲ್ಲಿದೆ. ಸ್ವಾತಂತ್ರ್ಯ ಸಂಗ್ರಾಮ ತಾರಕ ಸ್ಥಿತಿಯಲ್ಲಿದ್ದ 1938 ರಲ್ಲಿ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಕಾಂಗ್ರೆಸ್ ಅಧಿವೇಶನವನ್ನು ನಡೆಸಲು ಸಿದ್ಧತೆಗಳು ಏರ್ಪಾಡಾಗಿದ್ದವು. ಆದರೆ ಕಾಂಗ್ರೆಸ್ ಧ್ವಜ ಹಾರಿಸುವುದನ್ನು ಮೈಸೂರು ಸರಕಾರವು ನಿಷೇಧಿಸಿದ್ದಲ್ಲದೆ ಹಲವಾರು ನಾಯಕರನ್ನು ಬಂಧಿಸಲಾಯಿತು. ಇದರಿಂದ ರೊಚ್ಚಿಗೆದ್ದ ಜನ ವಿದುರಾಶ್ವತ್ಥದಲ್ಲಿ ದೇಶಭಕ್ತರ ದಿನಾಚರಣೆಯನ್ನು ಆಚರಿಸಲು ಮತ್ತು ತ್ರಿವರ್ಣಧ್ವಜ ಸತ್ಯಾಗ್ರಹ ಮಾಡಲು ತೀರ್ಮಾನಿಸಿದರು. ಗೌರಿಬಿದನೂರಿನ ಅಮಲ್ದಾರರು ವಿದುರಾಶ್ವತ್ಥ ಗ್ರಾಮದ ಎರಡು ಮೈಲುಗಳ ಸುತ್ತಮುತ್ತ ಸಭೆ ನಡೆಸುವುದನ್ನು, ಭಾಷಣ ಮತ್ತು ಧ್ವಜಾರೋಹಣ ಮಾಡುವುದನ್ನು ನಿಷೇಧಿಸಿ 144 ಸೆಕ್ಷನ್ ಜಾರಿ ಮಾಡಿ ಆಜ್ಞೆ ಹೊರಡಿಸಿದರು. ಆದರೂ ಆಗಿನ ದೇಶಭಕ್ತರು ಅದನ್ನು ಉಲ್ಲಂಘಿಸಿ 1938 ಏಪ್ರಿಲ್ 25 ರಂದು ಧ್ವಜಸತ್ಯಾಗ್ರಹ ನಡೆಸಿದರು. ಅವರ ವಿರುದ್ದ ಗುಂಡು ಹಾರಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಆಜ್ಞೆ ಮಾಡಿದಾಗ ಗೋಲಿಬಾರ್ ನಡೆದು 96 ಸುತ್ತು ಗುಂಡುಗಳನ್ನು ಹಾರಿಸಲಾಯಿತು. 32 ಜನ ಅಮಾಯಕರು ಸತ್ತು 48 ಮಂದಿ ಗಾಯಗೊಂಡರು. ಅಂದು ನಡೆದ ಆ ದುರಂತವನ್ನು “ವಿದುರಾಶ್ವತ್ಥದ ದುರಂತ ಪ್ರಕರಣ” ಎಂಬ ಕಿರುಹೊತ್ತಿಗೆಯ ಲೇಖಕ ಎಂ. ರಾಮಮೂರ್ತಿಯವರು ಹೀಗೆ ವರ್ಣಿಸಿದ್ದಾರೆ: “ಅದು ಬಹಳ ರೌದ್ರ ದೃಶ್ಯ. ಮೇಲುಗಡೆ ಉರಿ ಬಿಸಿಲು. ಕೆಳಗಡೆ ಕಾದ ಮರಳು. ಒಂದು ಕಡೆ ಲಾಠಿ ಪ್ರಹಾರ! ಮತ್ತೊಂದು ಕಡೆ ಪಟಾಕಿಗಳಂತೆ ಘಳಿಗೆ ಘಳಿಗೆಗೂ ಸಿಡಿಯುವ ಗುಂಡುಗಳು! ಜನರ ಹಾಹಾಕಾರ! ಹೆಂಗಸರು ಮಕ್ಕಳ ಆರ್ತನಾದ! ಜನರು ಗುಂಡೇಟಿನಿಂದ ಕೆಳಗೆ ಬಿದ್ದು ಅಯ್ಯೋ ಎಂದು ನರಳುತ್ತಿದ್ದರು. ಎಲ್ಲೆಲ್ಲಿ ನೋಡಿದರೂ ರಕ್ತದ ಕಾಲುವೆ ಹರಿದಿತ್ತು. ಆ ದಿನ ವಿದುರಾಶ್ವತ್ಥದ ಭಯಂಕರವಾದ ಸ್ಮಶಾನವಾಯಿತು. ನಿರಪರಾಧಿಗಳನ್ನು, ನಿಶ್ಯಸ್ತ್ರರನ್ನು ಮಾರಣ ಹೋಮ ಮಾಡಿದ ಬೇರೊಂದು ಜಲಿಯನ್ ವಾಲಾ ಬಾಗ್ ಅದಾಗಿತ್ತು!”
ವಿಷಯ ತಿಳಿದ ಗಾಂಧೀಜಿ ಆಗಿನ ಮೈಸೂರು ಮಹಾರಾಜರಿಗೆ ಪತ್ರ ಬರೆದು ಸರದಾರ್ ವಲ್ಲಭ್ ಭಾಯಿ ಪಟೇಲ್ ಮತ್ತು ಆಚಾರ್ಯ ಕೃಪಲಾನಿಯವರನ್ನು ಕಳುಹಿಸಿದರು. ಪಟೇಲ್ ಮತ್ತು ದಿವಾನ್ ಮಿರ್ಜಾ ಒಪ್ಪಂದವಾಯಿತು. ಚಳುವಳಿ ಮಾಡಿದವರ ಮೇಲಿನ ಎಲ್ಲ ಕೇಸುಗಳನ್ನು ಹಿಂಪಡೆಯಲಾಯಿತು. ಜೈಲಿನಲ್ಲಿದ್ದವರನ್ನು ಬಿಡುಗಡೆ ಮಾಡಲಾಯಿತು. ಮೈಸೂರು ರಾಜ್ಯದ ಗಂಡಬೇರುಂಡ ಧ್ವಜದ ಜೊತೆಗೆ ತ್ರಿವರ್ಣಧ್ವಜವನ್ನು ಹಾರಿಸಲು ಮಹಾರಾಜರಿಂದ ಅನುಮತಿ ದೊರೆಯಿತು. ಭಾರತದ ಸ್ವಾತಂತ್ಯಕ್ಕೆ ನಾಂದಿಯಾಯಿತು.
ಮಧ್ಯಾಹ್ನ ವಿದುರಾಶ್ವತ್ಥವನ್ನು ತಲುಪಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ವೇದಿಕೆಯ ಕೆಳಭಾಗದಲ್ಲಿದ್ದ ಮರದ ಬುಡದಲ್ಲಿ “ಮಂಗಗಳು ಇವೆ, ಎಚ್ಚರಿಕೆ!” ಎಂಬ ಫಲಕ ನಮ್ಮ ಕಣ್ಣಿಗೆ ಬಿದ್ದು ಬೇರೊಂದು ಅರ್ಥವನ್ನು ಧ್ವನಿಸುವಂತಿತ್ತು! ಚುನಾವಣೆಗಳಲ್ಲಿ ಕೋಟಿ ಕೋಟಿ ಹಣ ಚೆಲ್ಲುವ ಮತ್ತು ಪಡೆಯುವ ಇಂದಿನ ಸ್ವತಂತ್ರ ಭಾರತದ ಸ್ವಾರ್ಥಿ ಜನಜಂಗುಳಿಗೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಪರಿವೆಯೇ ಇಲ್ಲ. ಆ ದಿನ ಗಾಂಧಿಜಯಂತಿಯಂದು “ನಮ್ಮ ನಡಿಗೆ ವಿದುರಾಶ್ವತ್ಥದ ಕಡೆಗೆ” ಎಂಬ ಹೆಸರಿನಲ್ಲಿ ಗೌರಿಬಿದನೂರಿನಿಂದ ವಿದುರಾಶ್ವತ್ಥದವರೆಗೆ ನಡೆದ ಸುಮಾರು ಎಂಟು ಕಿ.ಮೀ ದೂರದ ನಮ್ಮ “Nonstop” ನಡಿಗೆಯ ಜೊತೆಗೆ ನೂರಾರು ಸ್ವಾತಂತ್ರ್ಯಯೋಧರ ಪ್ರತಿಕೃತಿಗಳನ್ನು ಹಿಡಿದು ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದ ಸಾವಿರಾರು ಜನರು ಯಾರೂ ನರ್ಸಿಂಗ್ ಹೋಂಗಳಲ್ಲಿ Treadmill Test ಮಾಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಆದರೆ 1938 ರಲ್ಲಿ ಇದೇ ದಾರಿಯಲ್ಲಿ ಕ್ರಮಿಸಿ ಪೋಲೀಸರ ಗುಂಡಿನ ಸುರಿಮಳೆಗೆ ಎದೆಯೊಡ್ಡಿದ ಆಗಿನ ದೇಶಭಕ್ತರ ಎದೆಗುಂಡಿಗೆಯ ಮುಂದೆ ನಮ್ಮ ಪಾದಯಾತ್ರೆ ಸರಿಸಾಟಿಯಲ್ಲ ಎನಿಸಿತು! ಆಗಿನ ಕಾಲದ ಸ್ವಾತಂತ್ರ್ಯಯೋಧರ ಧಮನಿ ಧಮನಿಗಳಲ್ಲಿ ಹರಿಯುತ್ತಿದ್ದುದು ಜಾತಿಯಲ್ಲ, “ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದೊಡೆ ನಾಲಗೆ ಕೂಡಲಸಂಗಾ ಶರಣೆನ್ನುತ್ತಿದ್ದಿತಯ್ಯಾ” ಎನ್ನುವ ಅಪಾರ ದೇಶಭಕ್ತಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.6-10-2022.