ಚುನಾವಣೆಯಲ್ಲಿ ಮತದಾನ ಎಲ್ಲರಿಗೂ ಕಡ್ಡಾಯ ಮತದಾನ ಮಾಡದವರಿಗೆ ಸರಕಾರದ ಎಲ್ಲಾ ಸೌಲಭ್ಯ ನಿಲ್ಲಿಸಿ : ಶ್ರೀ ಜಗದ್ಗುರುಗಳವರ ಅಭಿಮತ
ತಿಪಟೂರು : ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಎಲ್ಲರಿಗೂ ಕಡ್ಡಾಯ ಮಾಡಬೇಕು ಆಗ ಮಾತ್ರ ದೇಶದ ಪ್ರಜಾತಂತ್ರ ವ್ಯವಸ್ಥೆಯ ರಕ್ಷಣೆಗೆ ನಾಂದಿ ಹಾಡುತ್ತದೆ. ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ತಿಪಟೂರು ನಗರದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಗುರುಕುಲಾನಂದಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ಮತದಾನ ಮಾಡದವರಿಗೆ ಸರಕಾರದಿಂದ ನೀಡುವ ಎಲ್ಲಾ ಸೌಲಭ್ಯಗಳನ್ನು ಕಡಿತಗೊಳಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಹಾಗೂ ಉದ್ಯೋಗ ನೀಡಲು ಸಂವಿಧಾನದಲ್ಲಿ ನಮಗೆ ಜಾತಿ ಆಧಾರಿತ ಮೀಸಲಾತಿ ನೀಡಿದೆ. ಆದರೆ ಸರಕಾರ ಸಂಪುಟ ರಚಿಸಲು ಯಾವುದೇ ಮೀಸಲಾತಿ ಇಲ್ಲದಿದ್ದರೂ ಅಲಿಖಿತ ಸಂವಿಧಾನದಂತೆ ಇದನ್ನು ಪಾಲಿಸಿಕೊಂಡು ಬರುತ್ತಿರುವುದು ನಮ್ಮೆಲ್ಲರ ದುರ್ಧೈವ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರಿಗೆ ಯಾವುದೇ ಜಾತಿ ಇರುವುದಿಲ್ಲ ಕೇವಲ ದೇಶಭಕ್ತಿ ಇರುತ್ತದೆ. ಆದರೆ ಈಗಿನ ಸಮಾಜದಲ್ಲಿ ಜಾತೀಯತೆ ಎನ್ನುವುದು ತಾಂಡವವಾಡುತ್ತಿದೆ. 12ನೆಯ ಶತಮಾನದಲ್ಲಿ ಬಸವಣ್ಣನವರು ಜಾತೀಯತೆಯನ್ನು ವಿರೋಧಿಸಿದ್ದರು. ಆದರೆ ಈಗಲೂ ಅದು ನಿಂತಿಲ್ಲ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಯಾರು ಸಹ ಜಾತಿ ನೋಡಲಿಲ್ಲ ಅವರಲ್ಲಿ ಮೈಯಲ್ಲಿ ರಾಷ್ಟಭಕ್ತಿ ದೇಶಪ್ರೇಮ ಮಾತ್ರ ಇದೆ. ಅವರುಗಳ ತ್ಯಾಗದ ಫಲ ನಮಗೆ ಸ್ವಾಂತ್ರತ್ರ್ಯ ಲಭಿಸಿದೆ. ಅದರಂತೆ ತ್ಯಾಗದ ಅಂಶವು ಎಲ್ಲರಲ್ಲಿಯೂ ಬರಬೇಕು, ಭಾರತ ದೇಶ ಜ್ಯಾತ್ಯಾತೀತ ರಾಷ್ಟ್ರಾವಾದರೂ ಸಹ ಜಾತಿಯನ್ನು ಅವಲಂಬಿತವಾಗಿದೆ, ಜಾತಿಯ ಚೌಕಟ್ಟುನ್ನು ಮೀರಿ ನಿಲ್ಲುವ ಕಡೆ ಮಾನವನು ಬೆಳೆಯಬೇಕು ಎಂದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಸ್ವಾ ತಂತ್ರ್ಯದ ನಂತರ ಜಾತಿ ಸಂಘರ್ಷ ಕಡಿಮೆಯಾಗಿ ವರ್ಗ ಸಂಘರ್ಷಕ್ಕೆ ಕಾಲಿಟ್ಟಿದ್ದೇವೆ. ಸಮಾಜದಲ್ಲಿ ಶ್ರೀಮಂತರು-ಬಡವರು, ಉಳ್ಳವರು-ಇಲ್ಲದವರು. ಹಳ್ಳಿಯವರು.-ಪಟ್ಟಣದವರು ವಿಚಾರವಂತರು-ದಡ್ಡರು ಎಂಬ ವರ್ಗೀಕರಣ ಪ್ರಾರಂಭವಾಗಿದೆ. ಪಿ.ಯು.ಸಿ. ಯಲ್ಲಿ ಗಳಿಸಿದ ಅಂಕ ಕ್ಕಿಂತ ನೀಟ್ ಮತ್ತು ಸಿ.ಇ.ಟಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಮಾತ್ರ ಮೆಡಿಕಲ್, ಇಂಜಿನಿಯರಿಂಗ್ ಸೀಟು ಸಿಗುತ್ತದೆ. ಆದರೆ ಈ ಸೌಲಭ್ಯ ಗ್ರಾಮಾಂತರ ಮಕ್ಕಳಿಗೆ ಸಿಗದೆ ಇರುವುದರಿಂದ ಪಟ್ಟಣದ ಜನ ದೂರದೂರಿನ ರೆಸಿಡೆನ್ಸಿಯಲ್ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ನಮ್ಮ ಊರಿನ ಕಾಲೇಜುಗಳಲ್ಲೂ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಮಾಡುವ ಶಿಕ್ಷಣ ನೀಡಬೇಕು. ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜದ ಉದ್ದಾರಕ್ಕೆ ಶ್ರಮಿಸಬೇಕು ಎಂದರು.
ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಸುಮಾರು ನೂರು ವರ್ಷಗಳ ಹಿಂದೆ ಹಿರಿಯ ಶ್ರೀಗಳು ಗುರುಕುಲ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಹಳ್ಳಿ-ಹಳ್ಳಿಗೆ ಹೋಗಿ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಕರೆತಂದು ಶಿಕ್ಷಣ, ಊಟ, ವಸತಿ ನೀಡಿ ಬೆಳೆಸಿದರು. ಇದರಿಂದ ಎಲೆಮರೆ ಕಾಯಿಯಂತಿದ್ದ ಅನೇಕ ಪ್ರತಿಭಾವಂತರು ವಿದ್ಯೆ ಕಲಿತು ಸಮಾಜದಲ್ಲಿ ಪ್ರಮುಖರಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗ ನೀಡುವಂತಾಗಿರುವುದು ಸಂಸ್ಥೆಗೆ ಹೆಮ್ಮೆ ತರುವ ವಿಷಯ. ಸರಕಾರಿ ನೌಕರರೂ ಸಹ ಐದು ಜನ ಮಕ್ಕಳ ವಿದ್ಯಾಭ್ಯಾಸವನ್ನು ವಹಿಸಿಕೊಳ್ಳಬೇಕು ಮತ್ತು ಎಲ್ಲ ಲಿಂಗಾಯಿತ ಒಳಪಂಗಡಗಳೂ ಒಂದಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ತಿಪಟೂರು ನಗರದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.