ಪ್ರೀತಿ, ವಾತ್ಸಲ್ಯಗಳ ಸಂಕೇತ ಈದ್ ಮಿಲಾದ್ : ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ: “ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನವಾದ ಈ ಪವಿತ್ರ ದಿನದಂದು ಅವರ ಮೇಲಿನ ಭಕ್ತಿಯನ್ನು ಸಮರ್ಪಿಸುವುದು ಈದ್ ಮಿಲಾದ್ ಹಬ್ಬದ ವಿಶೇಷ” ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಹೇಳಿದರು.
ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಸಿರಿಗೆರೆ ಸಮೀಪದ ಗೌರಮ್ಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.
“ಮಗು ಹುಟ್ಟಿದಾಗ ಉಂಟಾಗುವ ಸಂಭ್ರಮದ ರೀತಿಯಲ್ಲಿ ಧರ್ಮ ಪ್ರವರ್ತಕರ ಜನ್ಮದಿನದಂದೂ ಸಂಭ್ರಮ ಇರುತ್ತದೆ. ನಾವು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಸ್ಮರಿಸಿದಂತೆಯೇ ಈ ಕಾರ್ಯಕ್ರಮವು ಪೈಗಂಬರರ ಸ್ಮರಣೆಯ ಪ್ರತೀಕ” ಎಂದು ಅವರು ತಿಳಿಸಿದರು.
“ಮುಸ್ಲಿಂ ಬಾಂಧವರೆಲ್ಲರೂ ಪ್ರೀತಿ, ವಿಶ್ವಾಸ, ಭಕ್ತಿ, ಶ್ರದ್ಧೆ ಮತ್ತು ನಂಬಿಕೆಗಳಿಂದ ನಮ್ಮ ಮಠದೊಂದಿಗೆ ಬೆಸೆದುಕೊಂಡಿದ್ದೀರಿ. ನೀವು ಕೇವಲ ಈದ್ ಮಿಲಾದ್ ಆಚರಣೆಯಂದು ಮಾತ್ರವಲ್ಲದೆ ವರ್ಷಪೂರ್ತಿಯೂ ನಮ್ಮೊಂದಿಗೆ ಇರುತ್ತೀರಿ. ಅಂತೆಯೇ ನಾವು ಖುಷಿಯಿಂದ ಕಾರ್ಯುಕ್ರಮದಲ್ಲಿ ಭಾಗಿಯಾಗಿದ್ದೇವೆ” ಎಂದರು.
“ಯಾರು ಅಲ್ಲಾಹುವಿಗೆ (ದೇವರಿಗೆ) ಹೆದರುತ್ತಾರೋ ಅವರಿಗೆ ದೇವರು ಸರಿಯಾದ ಮಾರ್ಗ ತೋರುತ್ತಾನೆ. ದೇವರಿಗೆ ಹೆದರುವುದು ಎಂದರೆ ನಾವು ನಮ್ಮ ಜೀವನದಲ್ಲಿ ಕೆಟ್ಟ ಕೆಲಸಗಳಿಗೆ ಹೆದರುವುದು ಎಂದರ್ಥ” ಎಂದು ಅವರು ಹೇಳಿದರು.
“ನೀವು ಪ್ರತಿ ವರ್ಷವೂ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಆವರ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಸಾದಕ್ಕೆ ತರಕಾರಿ ನೀಡಿ ಭಕ್ತಿ ಸಮರ್ಪಿಸಿದ್ದೀರಿ. ನಿಮ್ಮ ಮನೆಯಲ್ಲಿ ಅಂದು ಅಡುಗೆ ಮಾಡದೇ ಕುಟುಂಬದ ಎಲ್ಲಾ ಸದಸ್ಯರು ಶ್ರದ್ಧಾಂಜಲಿಯ ಪ್ರಸಾದ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು” ಎಂದು ಸ್ವಾಮೀಜಿ ಗ್ರಾಮಸ್ಥರನ್ನು ಕೋರಿದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಬೀದಿಗಳಲ್ಲಿ ಸ್ವಾಮೀಜಿವರನ್ನು ಮೆರವಣಿಗೆಯ ಮೂಲಕ ಸಭೆಗೆ ಕರೆ ತರಲಾಯಿತು. ಗ್ರಾಮದ ಮುಖಂಡರು ಶಾಲು ಹೊದಿಸಿ, ಹಣ್ಣು ನೀಡಿ ಆಶೀರ್ವಾದ ಪಡೆದರು.
ಸ್ವಾತತ್ರ್ಯೋತ್ಸವ ಸಂದರ್ಭದಲ್ಲಿ ಸಿರಿಗೆರೆ ಬಿ.ಲಿಂಗಯ್ಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶಿಫಾ ಬೇಗ್ ನಿರರ್ಗಳವಾಗಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಗ್ರಾಮದ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಅಭಿನಂದಿಸಿದರು.
ರಹಮತ್ ನಿರೂಪಿಸಿದರು, ಇಬ್ರಾಹಿಂ ಬೇಗ್, ಇಸಾಖ್ ಬೇಗ್, ಶಬೀರ್ ಜಾನ್, ಸಿ.ಆರ್.ನಾಗರಾಜು ಮತ್ತು ಶಶಿಪಾಟೀಲ್ ಇದ್ದರು.