ಇಹಲೋಕದ ಯಾತ್ರೆ ಮುಗಿಸಿದ ದಾವಣಗೆರೆ ಡಾಕ್ಟರ್ ಪಂಚಣ್ಣನಿಗೆ ಶ್ರೀ ತರಳಬಾಳು ಜಗದ್ಗುರುಗಳ ಸಂತಾಪ
ಹಾಸ್ಯ, ಹರಟೆ ಮೂಲಕ ಚಿರಪರಿಚಿತರಾಗಿದ್ದ ಡಾ.ಪಂಚಾಕ್ಷರಪ್ಪನವರದು ವೈವಿಧ್ಯಮಯ ವ್ಯಕ್ತಿತ್ವ. ದಾವಣಗೆರೆ ವೈದ್ಯಕೀಯ ರಂಗದಲ್ಲಿ ಡಾ. ಪಂಚ್ ಎಂದೇ ಖ್ಯಾತರಾಗಿದ್ದರು.
ಹೊನ್ನಾಳಿ ತಾಲೂಕಿನ ಕೋಟೆಹಾಳ್ ಗ್ರಾಮದ ಹಂಪೋಳ್ ಮನೆತನದ ಇವರು ಮೈಸೂರಿನಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಎಮ್.ಬಿ.ಬಿ.ಎಸ್ ಓದಿದ್ದರು. ಆನಂತರ ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದೀರ್ಘ ಕಾಲ ವೈದ್ಯಾಧಿಕಾರಿಗಳಾಗಿದ್ದರು.
ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ನಿಕಟವರ್ತಿಯಾಗಿದ್ದ ಇವರು ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಚಿಕಿತ್ಸೆಗೆ ಅಪಾರ ಸೇವೆ ಸಲ್ಲಿಸಿದ್ದರು. ಪ್ರತಿ ಭಾನುವಾರ ಮುತ್ತುಗದೂರಿನ ಪೂಜ್ಯರ ವಿಶ್ರಾಂತಿ ಧಾಮಕ್ಕೆ ದಾವಣಗೆರೆಯ ವೈದ್ಯಕೀಯ ತಂಡವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸುತ್ತಿದ್ದುದು ಮರೆಯಲಾಗದ ಸಂಗತಿ. 1982 ರಿಂದ 1992 ರವರೆಗೆ ಅತ್ಯಂತ ಕಾಳಜಿಯಿಂದ ಪೂಜ್ಯರ ಆರೋಗ್ಯದ ಜವಾಬ್ದಾರಿ ನಿರ್ವಹಿಸಿದ್ದರು. ಪೂಜ್ಯರ ಅನಾರೋಗ್ಯದ ನಡುವೆಯು ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾತನಾಡಿ, ಶ್ರೀಗಳು ವಿಶೇಷ ಕೃಪೆಗೆ ಪಾತ್ರರಾಗಿದ್ದರು.
ವೈದ್ಯಕೀಯ ಸೇವೆಯ ಜೊತೆಗೆ ಸಾಹಿತ್ಯ, ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ದಾವಣಗೆರೆ ಪ್ರತಿಮಾ ಸಭಾದ ಪ್ರಮುಖ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಪಿ ಲಂಕೇಶ್ ಅವರ "ಸಂಕ್ರಾಂತಿ" ನಾಟಕದ ಉಜ್ಜನ ಪಾತ್ರದಿಂದ ಜನಪ್ರಿಯ ನಟರಾಗಿದ್ದರು. ಬಿ.ಸಿ.ಪಾಟೀಲ್ ಜೊತೆಗೆ ಕೆಲವು ಚಲನಚಿತ್ರಗಳಲ್ಲೂ ಬಣ್ಣ ಹಚ್ಚಿದ್ದುಂಟು. ದಾವಣಗೆರೆಯ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ ಮುಂದಿನ ಸಾಲಿನಲ್ಲಿ ಕೂತು, ಕಾರ್ಯಕ್ರಮ ಆಸ್ವಾದಿಸುತ್ತಿದ್ದರು. ಅಲ್ಲದೆ ಕವಿಗಳ, ಕಲಾವಿದರ ಹೆಗಲಮೇಲೆ ಕೈಹಾಕಿ ತಮ್ಮ ತುಸು ದಡೂತಿ ದೇಹದ ಭಾರ ಹಾಕಿ ನಡೆಯುತ್ತಿದ್ದುದನ್ನು ಅನೇಕರು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.
ಇವರ ಅಭಿನಯಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ಪಂಚಣ್ಣ ಇದ್ದ ಕಡೆ ಹಾಸ್ಯ, ಹರಟೆಯ ಕಾರಂಜಿ ಚಿಮ್ಮುತಿತ್ತು. ಎಂತಹ ಬಿಗುವಿನ ವಾತಾವರಣದಲ್ಲೂ ತನ್ನ ಮಾತಿನ ಮೂಲಕ ನಗೆ ಚಿಮ್ಮಿಸುತ್ತಿದ್ದರು. ಅವರ ಮಾತಿನ ಶೈಲಿಯಿಂದ ಎಂತಹವರ ಮುಖದಲ್ಲೂ ಒಂದು ಕ್ಷಣ ನಗು ಮಿಂಚವಂತೆ ಮಾಡುತ್ತಿದ್ದರು.
ಅಪೂರ್ವ ವ್ಯಕ್ತಿತ್ವದ ಡಾ. ಪಂಚಣ್ಣನವರ ಅಗಲಿಕೆ ವೈದ್ಯಕೀಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ನಷ್ಟ ಎಂದರೆ ಉತ್ಪ್ರೇಕ್ಷೆಯಾಗಲಾರದು. ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸೇವೆಯನ್ನು ಮಾಡಿದ ಡಾಕ್ಟರ್ ಪಂಚಣ್ಣ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಇವರ ಕುಟುಂಬ ವರ್ಗಕ್ಕೆ ದುಃಖವನ್ನು ಬರಿಸುವ ಶಕ್ತಿ ಭಗವಂತ ನೀಡಲೆಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂತಾಪ ಸೂಚಿಸಿರುತ್ತಾರೆ.
ನೀ ಹುಟ್ಟಿಸಿದಲ್ಲಿ ಹುಟ್ಟದೆ, ನೀ ಕೊಂದಲ್ಲಿ ಸಾಯದೆ ಎನ್ನ ವಶವೆ, ಅಯ್ಯಾ? ನೀವಿರಿಸಿದಲ್ಲಿರದೆ, ಎನ್ನ ವಶವೇ, ಅಯ್ಯಾ? ಅಕಟಕಟಾ! ʼಎನ್ನವನೆನ್ನವನೆʼನ್ನಯ್ಯಾ, ಕೂಡಲ ಸಂಗಮದೇವಯ್ಯಾ.
- ನಾಗರಾಜ ಸಿರಿಗೆರೆ