ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಲು ವಿಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಗಾರ ಸಹಕಾರಿ
ಸಿರಿಗೆರೆ : ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಎರಡು ದಿನಗಳ ಕಾರ್ಯಗಾರ ಶುಕ್ರವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಹೆಚ್.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಲು ಇಂತಹ ಪ್ರಾತ್ಯಕ್ಷಿಕ ಕಾರ್ಯಗಾರಗಳು ಸಹಕಾರಿ. ಕಾರ್ಯಗಾರದಲ್ಲಿ ಕಲಿತಂತಹ ಅಂಶಗಳೆಲ್ಲವನ್ನು ಶಿಕ್ಷಕರು ತರಗತಿ ಕೋಣೆಯಲ್ಲಿ ಅನುಷ್ಠಾನಗೊಳಿಸಿದರೆ ಇದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಇಂತಹ ಕಾರ್ಯಗಾರಕ್ಕೆ ಅವಕಾಶ ಕಲ್ಪಿಸಿಕೊಟ್ಟ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಇಲಾಖೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಹೆಚ್.ವಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಚಿಂತನಾತ್ಮಕ ಅಂಶವಾಗಿದೆ. ಈ ವಿಷಯದ ಕಲಿಕೆ ಗಟ್ಟಿಗೊಳ್ಳಬೇಕಾದರೆ ಪ್ರಯೋಗಗಳ ಮೂಲಕ ಆದಾಗ ಮತ್ತು ವಿದ್ಯಾರ್ಥಿಗಳೇ ಸ್ವಯಂ ಭಾಗವಹಿಸಿ ಪ್ರಯೋಗಗಳನ್ನು ಮಾಡಿದಾಗ ಅದರ ಮಹತ್ವ ಗಟ್ಟಿಗೊಳ್ಳುತ್ತದೆ. ವಿದ್ಯಾರ್ಥಿಗಳು ಪ್ರಶ್ನಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಹಾಗಾದಾಗ ಮಾತ್ರ ಅವರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಲು ಸಾಧ್ಯ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಪಾರ್ಥ ಸಾರಥಿ 10ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ಎಲ್ಲಾ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ವಿಜ್ಞಾನ ಬೋಧಿಸುವ ಶಿಕ್ಷಕರು ಸದಾ ಚಟುವಟಿಕೆಯಿಂದ ಇರಬೇಕೆಂದರೆ ಅವರು ಏನಾದರೂ ಪ್ರಯೋಗಗಳನ್ನು ಮಾಡುತ್ತಿರಬೇಕು. ಅದರಿಂದ ಆತ್ಮ ತೃಪ್ತಿ ಸಿಗುವುದರ ಜೊತೆಗೆ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಬೆಳವಣಿಗೆ ಹೊಂದಲು ಇದು ಪೂರಕವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ,ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿ ಹುಲಿಕುಂಟರಾಯಪ್ಪ ಉಪಸ್ಥಿತರಿದ್ದರು.
ಕುಮಾರಿ ಚೇತನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪಿ.ಅಪೂರ್ವ ಸ್ವಾಗತಸಿದರು, ಅಪೂರ್ವ ಕಾರ್ಯಕ್ರಮ ನಿರೂಪಿಸಿದರು. ನಿಶ್ಚಿತ ಕೆ ವಂದಿಸಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಲ್ಲಾ ಪ್ರೌಢಶಾಲೆಗಳ ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸುವ 160 ಕ್ಕೂ ಹೆಚ್ಚು ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಸಂಪನ್ಮೂಲ ವ್ಯಕ್ತಿ ಪಾರ್ಥ ಸಾರಥಿ.