ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

  •  
  •  
  •  
  •  
  •    Views  

ದಾವಣಗೆರೆ:  ಶಿಕ್ಷಕ ನಿರಂತರ ಕಲಿಕಾರ್ಥಿಯಾಗಿರುತ್ತಾನೆ. ಶಿಕ್ಷಕ ವೃತ್ತಿ ಪವಿತ್ರವಾದುದು. ತರಳಬಾಳು ಜಗದ್ಗುರು ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅಂದು ಎಂ.ಎಂ.ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಿ ಎಲ್ಲರೂ ಕಲಿಯಲು ದಾರಿದೀಪವಾದರು ಎಂದು ಗುರು ವಂದನೆ ಸ್ವೀಕರಿಸಿದ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಸ್ಮರಿಸಿದರು.

ಇಲ್ಲಿನ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ 2001-02ನೇ ಸಾಲಿನ ಬಿ.ಇಡಿ. ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಹಲವು ತಲೆಮಾರುಗಳ ಗುರು-ಶಿಷ್ಯರ ಸಮಾಗಮ ಇಲ್ಲಿ ಆಗಿದೆ. ಶೈಕ್ಷಣಿಕವಾಗಿ ನಿರಂತರ ಪೀಳಿಗೆ ಒಟ್ಟಿಗೆ ಬೆಳೆಯಬೇಕು. ಕ್ಷೇತ್ರ ಯಾವುದೇ ಇರಲಿ ಜನ ಗಮನ ಸೆಳೆಯು ಕೆಲಸ ಮಾಡಬೇಕು. ಜತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇದ್ದಾರೆ. ಸಂಪನ್ನೂಲ ವ್ಯಕ್ತಿಗಳಾಗಿ ನಮ್ಮ ವಿದ್ಯಾರ್ಥಿಗಳು ರೂಪುಗೊಂಡಿದ್ದಾರೆ. ಗೌರವಿಸುವುದು ಪ್ರೇರಣೆ ಆಗಲಿ, ಹಣ ಗಳಿಕೆ ಮುಖ್ಯ ಅಲ್ಲ. ನಾವು ಸಮಾಜಕ್ಕೆ ಏನು ನೀಡಿದೆವು ಎಂಬುದು ಮುಖ್ಯ. ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ಸಾಗಿಸಿ, ಸಮಾಜಕ್ಕೆ ಕೊಡುಗೆ ನೀಡಿ ಎಂದು ಕರೆ ನೀಡಿದರು.

ಉದ್ಘಾಟನಾ ನುಡಿಗಳನ್ನಾಡಿದ ಎಂ.ಎಂ.ಕಾಲೇಜಿನ ಪ್ರಾಂಶುಪಾಲರು ಕೆ.ಟಿ. ನಾಗರಾಜನಾಯ್ಕ್ ಮಾತನಾಡಿ, ಎಂ.ಎಂ. ಶಿಕ್ಷಣ ಮಹಾ ವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಗಳು ನೀವು. ಈ ವಿದ್ಯಾಲಯ ಮತ್ತು ವಿದ್ಯಾರ್ಥಿಗಳು ಬಾಗ್ಯಶಾಲಿಗಳು. ಕಾಲೇಜು ಪ್ರಸ್ತುತ ವರ್ಷ 50 ವಸಂತ ಮುಗಿಸಿದೆ. ಶೀಘ್ರ ಕಾರ್ಯಕ್ರಮ ನಡೆಯಲಿದೆ. ವಿದ್ಯೆ ಕಲಿಸಿದ ಗುರುವಿಗೆ ವಂದನೆ ರೂಪದ ಗೌರವ ಉತ್ತಮ ಸಂಸ್ಕಾರ. ಇದು ಅರ್ಥಪೂರ್ಣ. ಶಿಕ್ಷಕರು ಕಾಲೇಜಿಗೆ ರಾಜ್ಯದಲ್ಲಿ ಹೆಸರು ತಂದಿದ್ದಾರೆ. ಇಲ್ಲಿ ಕಾಲೇಜಿನ ಸಂಸ್ಕೃತಿಯೇ ಅನಾವರಣಗೊಂಡಿದೆ. 20 ವರ್ಷದ ನಂತರ ನಡೆಯುತ್ತಿರುವುದು ಅಪರೂಪದ ಸಂಗತಿ. ಹಳೇ ವಿದ್ಯಾರ್ಥಿಗಳು ನಿರಂತರ ಬಾಂಧವ್ಯ ಹೊಂದಿರಲಿ ಎಂದು ಹೇಳಿದರು.

ಗೌರವ ಸ್ವೀಕರಿಸಿದ ಪ್ರೊ.ವೈ.ಎಂ.ವಿಠಲ್ ರಾವ್ ಮಾತನಾಡಿ, ಕಲಿಕೆ ಮೊದಲು ಆಂತರಿಕವಾಗಬೇಕು. ವಿದ್ಯಾರ್ಥಿಗಳು ಕಲಿತದ್ದನ್ನು ಆಂತರೀಕರಣ ಮಾಡಿಕೊಂಡಿದ್ದರ ಸಂಕೇತ ಇಂದು ನಮ್ಮೆದುರಿಗಿದೆ. ಈ ಕ್ಷಣ ಸಂತಸದಾಯಕ. ಒತ್ತಡದಲ್ಲಿ ಮಾರ್ಗದರ್ಶನ ಕಷ್ಟಕರವಾದುದು. ಆದರ್ಶಗಳು ಹಾಗೂ ತತ್ವಜ್ಞಾನ ಜಗತ್ತನ್ನು ನಿರ್ವಹಿಸುತ್ತದೆ. ಅದಕ್ಕೆ ಇಂದಿನ ದಿನ ನಿಮ್ಮ ಗೌರವ ಸಾಕ್ಷಿಯಾಗಿದೆ. ನಮಗೆ 2022 ಸ್ಮರಣೀಯ ವರ್ಷ. ನೀವು ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದನ್ನು ವಿದ್ಯಾರ್ಥಿಗಳಿಗೆ ಕಲಿಸಿ. ಕಾಲೇಜಿನ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು ನೀವು. 20 ವರ್ಷ ನಂತರ ನಮ್ಮನ್ನು ಗೌರವಿಸಿರುವುದು ಸ್ಮರಣೀಯ ಎಂದರು.

ಗೌರವ ಸ್ವೀಕರಿಸಿದ ಡಾ.ಎಂ.ಎಂ.ಪಟ್ಟಣ ಶೆಟ್ಟಿ ಮಾತನಾಡಿ, ಕಾಲ ಬದಲಾದ ಹಾಗೆ ಉತ್ತಮ ಕಾರ್ಯವೂ ಹೆಚ್ಚಾಗಿವೆ. ನಿಮ್ಮ ಭಾವನೆಗಳು ನಮ್ಮ ಭಾವನೆಗಳನ್ನು ಮೆಲುಕು ಹಾಕುವಂತೆ ಮಾಡಿದವು. ತಂತ್ರಜ್ಞಾನ ಬಳಸಿ ನಿಮ್ಮನ್ನೂ ನೆನಪಿಸಿಕೊಂಡು ನಮ್ಮನ್ನೂ ನೆನಪಿನ ಅಂಗಳಕ್ಕೆ ಕೊಂಡೊಯ್ದಿರಿ. ಉತ್ತಮ ಸಂಸ್ಕಾರ ಹೆಚ್ಚಬೇಕು. ನಾವು ಕಲಿಸಿದ್ದೇವೆ, ಅದರ ಉದ್ದೇಶ ಉತ್ತಮವಾದುದ್ದನ್ನು ಹೊರ ತರುವುದು. ಬಹುತೇಕರು ಶಿಕ್ಷಕರಾಗಿ ರಾಜ್ಯದೆಲ್ಲಡೆ ಹೆಸರು ಗಳಿಸಿದ್ದೀರಿ. ಅದು ನಮ್ಮ ಕಾಲೇಜು ಮತ್ತು ನಮಗೆ ಹೆಮ್ಮೆಯ ಸಂಗತಿ ಎಂದರು.

ಗೌರವ ಸ್ವೀಕರಿಸಿದ ಡಾ.ಎಚ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಇಂದು ಸಂತಸದ ದಿನ. ನಿವೃತ್ತಿ ನಂತರ ಮಾತನಾಡದೆ ಬೇಸರ. ಅದು ಅನಿವಾರ್ಯ. ಮನೆಗೆ ಮಾರಿ, ನೆರೆ ಮನೆಗೆ ಉಪಕಾರಿ ಆಗಬೇಡಿ. ಶಿಕ್ಷಕ ವೃತ್ತಿ ನಂತರ ಬದುಕು ಸುಂದರ ಮತ್ತು ಸಂತೋಷ ದಿಂದ ಕಳೆಯಿರಿ. ಸಮ್ಮಿಲನ ಕಾರ್ಯಕ್ರಮ ಜೇನು ಗೂಡಿಗೆ ಕೈ ಹಾಕಿ ಜೇನು ತೆಗೆದಂತೆ. ಇದು ಕಾಲೇಜು ಮತ್ತು ಉಪನ್ಯಾಸಕರ ಬಗ್ಗೆ ನಿಮಗಿರುವ ಅಭಿಮಾನವನ್ನು ತೋರುತ್ತದೆ. ನಿಮ್ಮ ಗೌರವ ನಮ್ಮ ಸೇವೆಗೆ ಸಂದ ಪುರಸ್ಕಾರ. ಸಂತೋಷದ ಗಳಿಗೆ ಒಂದೊಂದು ದಿನದ ಆಯಸ್ಸನ್ನು ಹೆಚ್ಚಿಸುತ್ತದೆ. ನಮ್ಮ ನೋವನ್ನು ಸಹಿಸಿಕೊಂಡ ವಿದ್ಯಾರ್ಥಿಗಳು ನೀವು ನೀವಾಗಿದ್ದೀರಿ. ಶಿಸ್ತನ್ನು ರೂಢಿಸಿಕೊಂಡಿದ್ದೀರಿ. ವಿದ್ಯಾರ್ಥಿಗಳ ಸಾಧನೆ ನಮ್ಮ ಕಾಲೇಜಿನ ಹಿರಿಮೆ. ಮನೋವಿಜ್ಞಾನ ಎಲ್ಲಾ ಕ್ಷೇತ್ರದಲ್ಲಿ ನೆರವಾಗುತ್ತದೆ. ಆಲೋಚನೆ ಹೆಚ್ಚಿಸಿಕೊಂಡು, ವ್ಯಕ್ತಿತ್ವ ರೂಢಿಸಿಕೊಳ್ಳಿ. ನಿಮ್ಮನ್ನುಗೌರವಿಸಿಕೊಳ್ಳಿ. ವೃತ್ತಿ ಗೌರವ ತಾನಾಗಿಯೇ ಹೆಚ್ವುತ್ತದೆ. ಸಾಧಕರೊಂದಿಗೆ ಇದ್ದರೆ ನಿಮ್ಮ ಸಾಧನೆ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು.

ಗೌರವ ಸ್ವೀಕರಿಸಿದ ಜಿ.ಎಸ್. ಶೇಖರಪ್ಪ ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಠ ಎಂಬುದನ್ನು ಕಾರ್ಯರೂಪಕ್ಕೆ ತಂದಿದ್ದೀರಿ. ನಮ್ಮ ಸೇವೆ ಗುರುತಿಸಿರುವ ನಿಮ್ಮ ಬಾಳು ಬಂಗಾರವಾಗಲಿ ಎಂದು ಹಾರೈಸುತ್ತೇವೆ ಎಂದರು.

ಗೌರವ ಸ್ವೀಕರಿಸಿದ ಎಸ್.ಪ್ರಭುದೇವ್ ಮಾತನಾಡಿ, ಈ ಕಾರ್ಯಕ್ರಮದಿಂದ ಹೃದಯ ತುಂಬಿ ಬರುತ್ತದೆ. ನನ್ನ ಗುರುವರ್ಯರು ಸದಾ ಸ್ಮರಣೀಯ. ಈ ಕಾಲೇಜಿನ ವೃತ್ತಿ ಸೇವೆಯ ದಿನಗಳು ಜೀವನದುದ್ದಕ್ಕೂ ಸ್ಮರಣೀಯ ಎಂದರು.

ಗೌರವ ಸ್ವೀಕರಿಸಿದ ಈ.ರಾಘವೇಂದ್ರ ಮಾತನಾಡಿ, ಸಂಘಟನೆ ಮೂಲಕ ಎಲ್ಲರೂ ಸೇರಿ ನಮ್ಮನ್ನು ಗೌರವಿಸಿರುವುದು ಸಂತಸದ ಸಂಗತಿ. ಶಿಕ್ಷಕನಾಗಿ ಕಲಿಸಿದ್ದಕ್ಕಿಂತ ಕಲಿತಿದ್ದೇನೆ. ಎಂ.ಎಂ.ಕಾಲೇಜಿನ ನಂಟು ಬಿಡಲಾರದಂತದ್ದು. ವಿದ್ಯಾರ್ಥಿಗಳ ಸಾಧನೆ ಸಂತಸದಾಯಕ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಪ್ರತಿನಿಧಿ, ಬೀದರ್ ನ ನ್ಯಾಯಾಧೀಶರಾದ ಸಿದ್ಧರಾಮಪ್ಪ ಕೇಶಾಪುರ ಮಾತನಾಡಿ, ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಿತ ನಾವು ಭಾಗ್ಯಶಾಲಿಗಳು. ಪ್ರಶಿಕ್ಷಣ ವೇಳೆ ಕಲಿತ ತಂತ್ರಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವಾಗ ಬಳಕೆಯಾದವು. ಅದೇ ರೀತಿ ಮನೋವಿಜ್ಞಾನದ ಕಲಿಕೆ ನ್ಯಾಯ ನೀಡುವ ವೇಳೆ ಅಪರಾಧಿಗಳ ಮತ್ತು ಆರೋಪಿಗಳ ಮನಸ್ಥಿತಿ ಅರಿಯಲು ನೆರವಾಗಿದೆ. ಯಾವುದೇ ಕ್ಷೇತ್ರದಲ್ಲಿ ಇದ್ದರೂ ಉತ್ತಮ ಸೇವೆ ಸಲ್ಲಿಸೋಣ. ಸ್ನೇಹ ಅಪರೂಪದ ಸಂಗಮವಿದ್ದಂತೆ ಎಂದು ಬಣ್ಣಿಸಿದರು.