ಹಿಂದಿನ ಕಾಲದ ಜನರ ಜೀವನ ಮೌಲ್ಯದ ಕುರುಹುಗಳು!

  •  
  •  
  •  
  •  
  •    Views  

ರಾಮಾಯಣ ಮಹಾಭಾರತ ಮಹಾಕಾವ್ಯಗಳು ಸಹಸ್ರಾರು ವರ್ಷಗಳಿಂದ ಭಾರತದ ವಿಭಿನ್ನ ಭಾಷೆಗಳಲ್ಲಿ ಮತ್ತು ವಿಭಿನ್ನ ಕಾಲಘಟ್ಟದಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಚಿಸಿದ ಮಹಾಕವಿಗಳಿಗೆ ಸ್ಫೂರ್ತಿ ದಾಯಕವಾದ ಮೂಲಸ್ರೋತಗಳು ಎಂಬ ಸಂಗತಿ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ಗೊತ್ತು. ಇನ್ನೊಂದು ವಿಶೇಷವೆಂದರೆ ಈ ಮಹಾಕಾವ್ಯಗಳಲ್ಲಿ ಬರುವ ಅನೇಕ ಕಥಾನಕಗಳು ಪರಂಪರಾಗತವಾಗಿ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಬೇರೂರಿ ಪ್ರೇರಣಾದಾಯಕವೂ ಆಗಿವೆ. ಇವುಗಳಲ್ಲಿ ಬರುವ ವಿಪುಲ ಹಾಗೂ ವಿಭಿನ್ನ ಗುಣಾವಗುಣಗಳುಳ್ಳ ಪಾತ್ರಗಳು ಜನಸಾಮಾನ್ಯರ ದೈನಂದಿನ ಜೀವನದ ಸಂಭಾಷಣೆಯಲ್ಲಿ ಬಳಕೆಯಾಗುತ್ತಲೂ ಬಂದಿವೆ. ಈ ಮಹಾಕಾವ್ಯಗಳಲ್ಲಿ ಇಲ್ಲದ ಮನುಷ್ಯ ಪ್ರಪಂಚದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಅಲ್ಲದೆ ಈ ಮಹಾಕಾವ್ಯಗಳಲ್ಲಿ ಬರುವ ಪ್ರಮುಖ ಘಟನಾವಳಿಗಳು ಪ್ರಾದೇಶಿಕವಾಗಿ ಭಾರತದುದ್ದಕ್ಕೂ ನೆಲೆಗೊಂಡಿವೆ. ಆ ಘಟನೆಗಳು ನಡೆದ ನಿಜವಾದ ಐತಿಹಾಸಿಕ ಸ್ಥಳ ಯಾವುದು ಎಂದು ನಿರ್ಧರಿಸಲು ಇತಿಹಾಸಜ್ಞರಿಗೆ ಕಠಿಣವಾದ ಸವಾಲು ಒಡ್ಡಿವೆ. ಇತಿಹಾಸಜ್ಞರು ಏನೇ ಹೇಳಲಿ, ರಾಮಾಯಣ ಮಹಾಭಾರತ ಕಾಲದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯ, ಪಾಂಡವರು ಮೊದಲಾದ ಪ್ರಸಿದ್ಧ ವ್ಯಕ್ತಿಗಳು ನಮ್ಮೂರ ಮೇಲೆಯೇ ಹಾದು ಹೋದರು ಎಂದು ಹೆಮ್ಮೆಯಿಂದ ಕನ್ನಡ ಜನಪದರು ಹೇಳಿಕೊಳ್ಳುತ್ತಾರೆ. 

ಉದಾಹರಣೆಗೆ ಪಾಂಡವರ ಹೆಸರಿನಲ್ಲಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ. ಪ್ರವಾಸಿಗರ ತಾಣವಾದ ಈ ಪಟ್ಟಣದ ಸಮೀಪದಲ್ಲಿರುವ "ಕುಂತಿಬೆಟ್ಟ". ಪಾಂಡವರು ವನವಾಸ ಮಾಡುತ್ತಿರುವಾಗ ಕೆಲವು ದಿನ ಈ ಸ್ಥಳದಲ್ಲಿ ತಂಗಿದ್ದರೆಂದೂ ಇಲ್ಲಿರುವ ಬೆಟ್ಟವನ್ನು ಕುಂತಿಯು ತುಂಬಾ ಇಷ್ಟಪಟ್ಟಿದ್ದರಿಂದ ಇದಕ್ಕೆ "ಕುಂತಿಬೆಟ್ಟ’ ಎಂಬ ಹೆಸರು ಬಂದಿತೆಂದೂ ಪ್ರತೀತಿ. ಇದರ ಸಮೀಪದಲ್ಲಿಯೇ ಇನ್ನೊಂದು ಚಿಕ್ಕ ಬೆಟ್ಟವಿದ್ದು ಅದರ ಹೆಸರು “ಕೌರವ ಬೆಟ್ಟ". ಇಲ್ಲಿದ್ದ ಅಪಾರ ಕಲ್ಲುಬಂಡೆಗಳು ಗಣಿಗಾರಿಕೆಯ "ಕೌರವ" ಕುಳಗಳಿಂದ ನೆಲಸಮವಾಗಿದ್ದು ಈಗ ಆ ಬೆಟ್ಟವೇ ಇಲ್ಲದಂತಾಗಿದೆ. ಇಲ್ಲಿಯ ಕಲ್ಲುಬಂಡೆಗಳನ್ನು ಒಡೆಯಲು ಅವಕಾಶ ಕೊಡಬಾರದು, ಇದರಿಂದ ಸಮೀಪದಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟಿಗೆ ಧಕ್ಕೆಯುಂಟಾಗುತ್ತದೆ ಎಂಬ ಜನಸಾಮಾನ್ಯರ ಕೂಗು ಅರಣ್ಯ ರೋದನವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ದೊಡ್ಡ ಬೆಟ್ಟಕ್ಕೆ "ಕುಂತಿಬೆಟ್ಟ" ಎಂದೂ ಸಣ್ಣ ಬೆಟ್ಟಕ್ಕೆ "ಕೌರವ ಬೆಟ್ಟ" ಎಂದೂ ಹೆಸರು ಇಟ್ಟ ಹಿಂದಿನ ಕಾಲದ ಜನರ ಜೀವನ ಮೌಲ್ಯ! ಧರ್ಮ ಮತ್ತು ಅಧರ್ಮ ಕಾರ್ಯ ಮಾಡುವವರನ್ನು ಗುರುತಿಸುವ ಅವರ ವಿಚಕ್ಷಣ ದೃಷ್ಟಿ ಮೆಚ್ಚುವಂತಹದು. 

ಈ ಹಿಂದಿನ ಅಂಕಣದಲ್ಲಿ ಗಾಂಧೀ ಜಯಂತಿಯಂದು ಗೌರೀಬಿದನೂರಿನಿಂದ "ನಮ್ಮ ನಡಿಗೆ ವಿದುರಾಶ್ವತ್ಥದ ಕಡೆಗೆ" ಎಂಬ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ವಿಚಾರ ಮತ್ತು 1938 ರಲ್ಲಿ ಈ ಸ್ಥಳದಲ್ಲಿ ನಡೆದ ಧ್ವಜಸತ್ಯಾಗ್ರಹದಲ್ಲಿ ಪೋಲೀಸರ ಗುಂಡಿನ ಸುರಿಮಳೆಗೆ ಎದೆಯೊಡ್ಡಿ ನಿಂತ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡದ ದಾರುಣ ಇತಿಹಾಸ ಓದುಗರ ಹೃದಯವನ್ನು ಮಿಡಿದಿದೆ. ಮಹಾಭಾರತ ಮತ್ತು ಆಧುನಿಕ ಭಾರತ ಇವೆರಡೂ ಇತಿಹಾಸವನ್ನು ಈ ವಿದುರಾಶ್ವತ್ಥ ಗ್ರಾಮ ಹೊಂದಿದೆ. ಯುಧಿಷ್ಠಿರನು ಪಗಡೆಯಾಡದಂತೆ ತಪ್ಪಿಸಲು ಯತ್ನಿಸಿದವನು ವಿದುರ. ದುಶ್ಯಾಸನನು ದ್ರೌಪದಿಯ ಮಾನಭಂಗ ಮಾಡದಂತೆ ತಡೆಯಲು ಕೌರವನನ್ನು ಎಚ್ಚರಿಸಿದವನು ವಿದುರ. ಕುರುಕ್ಷೇತ್ರ ಯುದ್ಧವನ್ನು ತಡೆಗಟ್ಟಲು ಪ್ರಯತ್ನಿಸಿದವನು ವಿದುರ. ಶ್ರೀಕೃಷ್ಣನು ನಡೆಸಿದ ಸಂಧಾನಕ್ಕೆ ಒಪ್ಪಲು ಆಗ್ರಹಿಸಿದಾಗ ದುರ್ಯೋಧನನಿಂದ ಕೇಳಿ ಬಂದ ಮೂದಲಿಕೆಯ ಮಾತುಗಳಿಂದ ಬೇಸತ್ತು ತನ್ನ ಕೈಯಲ್ಲಿದ್ದ ಧನುಸ್ಸನ್ನು ಮುರಿದು, ಕುರುರಾಜ್ಯದ ಪ್ರಧಾನಮಂತ್ರಿ ಸ್ಥಾನವನ್ನು ತ್ಯಜಿಸಿ ಹೊರ ನಡೆದವನು ವಿದುರ.

ಮಹಾಭಾರತ ಕಾಲದ ಆ ವಿದುರನು ಈ ಗ್ರಾಮಕ್ಕೆ ಬಂದಿದ್ದನೋ ಇಲ್ಲವೋ ಇಲ್ಲಿರುವ ಅಶ್ವತ್ಥ ವೃಕ್ಷವನ್ನು ವಿದುರನೇ ನೀರೆರೆದು ಬೆಳೆಸಿದನೆಂಬ ಐತಿಹ್ಯ ಹಿಂದಿನ ಕಾಲದ ಜನರ ಧರ್ಮ ದೃಷ್ಟಿಯ ದ್ಯೋತಕ. 

ಪಾಂಡವರೊಂದಿಗೆ ನಡೆಸಿದ ಮಾತುಕತೆಗಳ ಬಗ್ಗೆ ವಿವರಗಳನ್ನು ನಾಳೆ ರಾಜಸಭೆಯಲ್ಲಿ ತಿಳಿಸುವುದಾಗಿ ಸಂಜಯನು ಹೇಳಿ ಹೋದ ಮೇಲೆ ಧೃತರಾಷ್ಟ್ರನು ಚಿಂತಾಕ್ರಾಂತನಾಗಿ ಕೂಡಲೇ ವಿದುರನನ್ನು ಕರೆಸಿ "ನಾಳೆ ಪಾಂಡವರೊಂದಿಗೆ ಸಂಧಿಯಾಗುವುದೋ ಅಥವಾ ಯುದ್ದವೇ ಒದಗಿ ಬರುವುದೋ ತಿಳಿಯದಾಗಿದೆ. ನನಗೆ ನಿದ್ರೆಯೇ ಬರುತ್ತಿಲ್ಲ" ಎಂದು ತನ್ನ ಕಳವಳವನ್ನು ವ್ಯಕ್ತಪಡಿಸುತ್ತಾನೆ. ಆಗ ಧೃತರಾಷ್ಟ್ರನಿಗೆ ಸುದೀರ್ಘವಾಗಿ ತಿಳಿಹೇಳಿದ ವಿದುರನ ಹಿತನುಡಿಗಳು ಮಹಾಭಾರತದ ಉದ್ಯೋಗಪರ್ವದಲ್ಲಿ ದಾಖಲಾಗಿವೆ. ಅದನ್ನು ಆಧರಿಸಿ ಬರೆದ ಕುಮಾರವ್ಯಾಸಭಾರತದಲ್ಲಿ ವಿದುರನು ಧೃತರಾಷ್ಟ್ರನಿಗೆ ಮಾಡಿದ ಕೆಲವು ಹಿತೋಪದೇಶದ ಮಾತುಗಳು ಹೀಗಿವೆ: 

ಬಲಶಾಲಿಯ ಆಕ್ರಮಣಕ್ಕೆ ಸಿಕ್ಕಿದ ದುರ್ಬಲನಿಗೂ, ಕಾಮುಕನಿಗೂ, ಹಣದ ಚಿಂತೆಯಿಂದ ಕಂಗೆಟ್ಟವನಿಗೂ, ಕಳ್ಳನಿಗೂ, ದೈವದ ಮಹಿಮೆ ಎಷ್ಟೆಂಬುದನ್ನು ಅರಿಯದವನಿಗೂ ಮನಃಶಾಂತಿ ಇರುವುದಿಲ್ಲ. ದಿಟವಾಗಿ ಅಂಥವರಿಗೆ ನಿದ್ರೆಯೇ ಬರುವುದಿಲ್ಲ, 

•ತನ್ನಿಚ್ಛೆಯಂತೆ ಎಲ್ಲವೂ ನಡೆಯುವುದಾದರೆ ಲೋಕಕ್ಕೆ ದೇವರೆಂಬುವನು ಏಕೆ ಬೇಕು? ನಾನೇ ದೇವರು ಎಂದು ಮನುಷ್ಯನು ಅಹಂಕಾರದಿಂದ ಬೀಗುವ ಸಾಧ್ಯತೆ ಇದೆ! 

•ಈ ಲೋಕದಲ್ಲಿ ಇಬ್ಬರು ಕಡುಮೂರ್ಖರು. ಒಬ್ಬ ನಿನ್ನ ಮಗ ದುರ್ಯೋಧನ, ಇನ್ನೊಬ್ಬ ರಾವಣ. 

•ತಾಯಿ ತಂದೆಗಳು ಮಕ್ಕಳನ್ನು ಪ್ರೀತಿಸಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು. ಇಲ್ಲದಿದ್ದರೆ ಮಕ್ಕಳಿಗೆ ತಂದೆತಾಯಿಗಳೇ ಶತ್ರುಗಳು. 

•ಹೂವಾಡಿಗನು ಗಿಡಮರಗಳಿಂದ ಹೂಗಳನ್ನು ಕೀಳುವಂತೆ, ದುಂಬಿಯು ಹೂಗಳಿಂದ ಮಕರಂದವನ್ನು ಹೀರುವಂತೆ ಪ್ರಜೆಗಳನ್ನು ಪೀಡಿಸದೆ ಕಂದಾಯವನ್ನು ವಸೂಲು ಮಾಡಬೇಕು. ಇದ್ದಿಲು ಮಾಡುವವನಂತೆ ಗಿಡಮರಗಳನ್ನೇ ಬುಡಸಹಿತ ಉರುಳಿಸಬಾರದು. ಪಶುಪಾಲಕನು ಪಶುಗಳನ್ನು ಕಾಯುವಂತೆ ಪ್ರಜೆಗಳನ್ನು ಹಿತಮಿತವಾದ ರೀತಿಯಲ್ಲಿ ಪಾಲಿಸಬೇಕು. ಹುಲಿಗಳು ದನಗಳನ್ನು ಕಾದಂತೆ ಮಾಡಬಾರದು. ಪ್ರಜೆಗಳು ಕಂಗೆಟ್ಟರೆ ಅರಸನ ಬಾಳಿಗೇ ಕುತ್ತು.

ಇತ್ಯಾದಿಯಾಗಿ ವಿದುರನು ತಿಳಿಹೇಳುತ್ತಾನೆ. ಧೃತರಾಷ್ಟ್ರನಿಗೆ ಸುದೀರ್ಘವಾಗಿ ಹೇಳಿದ ಇಂತಹ ವಿವೇಕದ ಮಾತುಗಳೇ "ವಿದುರನೀತಿ" ಎಂದು ಪ್ರಸಿದ್ದ. ಪ್ರಜೆಗಳ ಮೇಲಿನ ಕಾಳಜಿಯಿಂದ ಹೇಳಿದ ಈ ಕೆಳಗಿನ ಮಾತುಗಳೂ ಸಹ ಕುಮಾರವ್ಯಾಸಭಾರತದಲ್ಲಿ ಬರುತ್ತವೆ:

ಅರಸು ರಕ್ಕಸ, ಮಂತ್ರಿಯೆಂಬುವ 
ಮೊರೆವ ಹುಲಿ, ಪರಿವಾರ ಹದ್ದಿನ 
ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು 
ಉರಿವುತಿದೆ ದೇಶ! 

ಜನರ ಧಾರ್ಮಿಕ ಭಾವನೆಗಳಿಗೆ ಮತ್ತೊಂದು ಉದಾಹರಣೆ ಎಂದರೆ ಹಂಪೆಯಲ್ಲಿರುವ "ಸುಗ್ರೀವ ಗುಹೆ", “ಸೀತಾ ಸೆರಗು", "ಸೀತಾ ಕೊಳ" ಮೊದಲಾದವುಗಳು.

ರಾವಣನು ಸೀತೆಯನ್ನು ಪಂಚವಟಿಯಿಂದ ಲಂಕೆಗೆ ಅಪಹರಿಸಿಕೊಂಡು ಹೋದಾಗ ಶ್ರೀರಾಮನು ಲಕ್ಷ್ಮಣನೊಂದಿಗೆ ದಕ್ಷಿಣ ದಿಕ್ಕಿನತ್ತ ಧಾವಿಸಿ ತುಂಗಭದ್ರಾ ನದಿಯ ತೀರದಲ್ಲಿರುವ ಕಿಷ್ಕಿಂಧೆಯನ್ನು ತಲುಪುತ್ತಾನೆ. ಆ ವೇಳೆಗೆ ಸಹೋದರರಾದ ವಾಲಿ ಮತ್ತು ಸುಗ್ರೀವರ ಮಧ್ಯೆ ಕಲಹ ಉಂಟಾಗಿ ಸುಗ್ರೀವನು ಪಂಪಾಸರೋವರದ ಸಮೀಪದಲ್ಲಿರುವ ಗುಹೆಯೊಂದರಲ್ಲಿ ಅಡಗಿ ಕುಳಿತಿರುತ್ತಾನೆ. ಹಂಪಿ ಮತ್ತು ಆನೆಗೊಂದಿಯ ಮಧ್ಯೆ ಇರುವ ಈ ಪ್ರದೇಶವೇ ಕಿಷ್ಕಿಂಧೆ. ಕಿಷ್ಕಿಂಧೆ ಎಂದರೆ ಗ್ರಾಮೀಣ ಭಾಷೆಯಲ್ಲಿ ತುಂಬಾ ಇಕ್ಕಟ್ಟು ಎಂದರ್ಥ. ಗುಡ್ಡಬೆಟ್ಟಗಳ ಮಧ್ಯೆ ಕಲ್ಲು ಬಂಡೆಗಳ ಇಕ್ಕಟ್ಟಿನಲ್ಲಿರುವ ಈ ಜಾಗದಿಂದ ಕನ್ನಡದಲ್ಲಿ ಆ ಅರ್ಥ ಬಂದಿರಬಹುದೋ ಏನೋ ಭಾಷಾತಜ್ಞರ ಚಿಂತನೆಗೆ ಬಿಟ್ಟ ವಿಚಾರ. ಮೊಟ್ಟಮೊದಲು ಶ್ರೀರಾಮನಿಗೆ ಆಂಜನೇಯನ ಪರಿಚಯವಾಗಿದ್ದು ಇಲ್ಲಿಯೇ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ರಸ್ತೆಯ ಉದ್ದಕ್ಕೂ ಕಾಣಬರುವ ಬಿಳಿಯ ಪಟ್ಟಿಯಂತೆ "ಸುಗ್ರೀವಗುಹೆ’ಯತ್ತ ಪ್ರವಾಸಿಗರು ನಡೆದು ಹೋಗುವಾಗ ಹಾಸುಬಂಡೆಯ ಮೇಲೆ ಉದ್ದಕ್ಕೂ ಈಗಲೂ ಕಾಣಬರುವ ಸಮಾನಾಂತರವಾದ ಎರಡು ಬಿಳಿಯ ರೇಖೆಗಳೇ "ಸೀತಾ ಸೆರಗು", ರಾವಣನು ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕರೆದೊಯ್ದದ್ದು ಇದೇ ಮಾರ್ಗವಾಗಿ; ದುಃಖದಿಂದ ತನ್ನ ಮೈಮೇಲೆ ಇದ್ದ ಆಭರಣಗಳನ್ನು ಸೀತೆಯು ಕಳಚಿ ತನ್ನ ಸೆರಗಿನಲ್ಲಿ ಕಟ್ಟಿ ಕೆಳಗೆ ಬೀಳಿಸಿದ್ದರಿಂದ ಆ ಹೆಸರು ಬಂದಿತೆಂದು ಶ್ರದ್ಧಾಳುಗಳ ನಂಬುಗೆ. ತನ್ನನ್ನು ರಕ್ಷಣೆ ಮಾಡಲು ಮೊರೆಯಿಡುತ್ತಾ ಸೀತೆ ಸುರಿಸಿದ ಕಣ್ಣೀರೇ ಗುಹೆಯ ಹತ್ತಿರದಲ್ಲಿರುವ "ಸೀತಾ ಕೊಳ". ಬಂಡೆಯ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಭರಣಗಳನ್ನು ಕಪಿಸೈನಿಕರು ಸಂಗ್ರಹಿಸಿ ತಂದು ಸುಗ್ರೀವನಿಗೆ ಒಪ್ಪಿಸುತ್ತಾರೆ. ಆ ಆಭರಣಗಳಲ್ಲಿ ಸೀತೆಯ ಕಾಲುಂಗುರವನ್ನು ಲಕ್ಷ್ಮಣನು ಗುರುತಿಸುತ್ತಾನೆ. ಇದರಿಂದ ಸೀತೆಯನ್ನು ರಾವಣನು ಹೊತ್ತೊಯ್ದ ದಾರಿಯ ಸುಳಿವು ಸಿಕ್ಕುತ್ತದೆ. ಶ್ರೀರಾಮನು ಸುಗ್ರೀವನೊಂದಿಗೆ ಸ್ನೇಹ ಬೆಳೆಸಿ ವಾಲಿಯನ್ನು ಕೊಂದು ಕಿಷ್ಕಿಂಧೆಯ ರಾಜನನ್ನಾಗಿ ಮಾಡುತ್ತಾನೆ. ಅವನಿಂದ ಆಂಜನೇಯ ಮತ್ತು ಕಪಿಸೈನ್ಯದ ಸಹಾಯವನ್ನು ಪಡೆದು ಲಂಕೆಯತ್ತ ಧಾವಿಸುತ್ತಾನೆ. ಇಲ್ಲಿಂದ ಮುಂದಿನ ಘಟನಾವಳಿಗಳನ್ನು ಬಸವಣ್ಣನವರು ಈ ಕೆಳಗಿನ ವಚನದಲ್ಲಿ ಆಧ್ಯಾತ್ಮಿಕ ಲೇಪದೊಂದಿಗೆ ತುಂಬಾ ಮನೋಜ್ಞವಾಗಿ ವರ್ಣಿಸಿದ್ದಾರೆ. 

ಎಚ್ಚು ವಾಲಿಯ ಕೊಂದ, ಕಟ್ಟಿದನು ಶರಧಿಯನು, 
ಹತ್ತು ತಲೆಯ ರಾವಳನ ಒಂದೇ ಅಂಬಿನಲ್ಲಿ ಮಡಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ, 
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ, 
ಮಾಯದ ಸಂಸಾರವ ನಚ್ಚಿ, ಕೆಟ್ಟು ಬರುದೊರೆವೊಗಬೇಡ 
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ! 

ಸೀತೆಯ ಸುಳಿವು ಸಿಕ್ಕು ಲಂಕೆಯ ಮೇಲೆ ಧಾಳಿ ನಡೆಸಲು ಶ್ರೀರಾಮನಿಗೆ ನೆರವಾದ ಈ ಕಿಷ್ಕಂಧೆಯು ಬೇರೆ ಎಲ್ಲಿಯೂ ಇರದೆ UNESCO ದಿಂದ “World Heritage Site” ಎಂದು ವಿಶ್ವಮಾನ್ಯತೆಯನ್ನು ಪಡೆದ, ವಿಶ್ವಾದ್ಯಂತ ಪ್ರವಾಸಿಗರ ಆಕರ್ಷಣೆಯ ತಾಣವಾದ ಕನ್ನಡ ನಾಡಿನ ಹಂಪಿಯಲ್ಲಿದೆ ಎಂಬುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.20-10-2022.