ಯಮನನ್ನು ಗೆದ್ದಿದ್ದ ಬಹುರೂಪಿ ಪಂಚಣ್ಣನ 'ಗತಿ' (ಕವಿತೆ) ಆಧ್ಯಾತ್ಮಿಕ ಭಾವದ್ದು: ಡಾ.ಶ್ರೀ ಸ್ಮರಣೆ
ದಾವಣಗೆರೆ: ಪಂಚಣ್ಣ(ಡಾ.ಕೆ.ಎಚ್.ಪಂಚಾಕ್ಷರಪ್ಪ) ಹಿರಿಯ ಗುರುಗಳ ಅಪಾರ ಸೇವೆ ಮಾಡಿದ್ದರು. ತನ್ನ ಸಾವಿನ ಕುರಿತು ತಾನೇ ರಚಿಸಿದ್ದ ಕವಿತೆ "ಗತಿ"ಯನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುವುದು ಅವರ ವ್ಯಕ್ತಿತ್ವ ಬಿಂಬವಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು.
ದಾವಣಗೆರೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಇಲ್ಲಿನ ನಿವಾಸಿ ಲಿಂ. ಡಾ.ಕೆ.ಎಚ್. ಪಂಚಾಕ್ಷರಪ್ಪ ಅವರ ಕೈಲಾಸ ಶಿವಗಣಾರಾಧನೆ ಹಾಗೂ ಶರಣ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.
ನಾವು ನಾಲ್ಕು ದಶಕದಲ್ಲಿ ಅನೇಕ ಸಮಾರಾಧನೆಯಲ್ಲಿ ಪಾಲ್ಲೊಂಡಿದ್ದೇವೆ. ಅದು ಲೆಕ್ಕವಿಲ್ಲದಷ್ಟು. ಅಲ್ಲೆಲ್ಲ ಸಂತಾಪ ಸೂಚಿಸುವ ವಾಡಿಕೆ ಇದೆ. ಮೌನವೇ ಹೆಚ್ಚು. ಆದರೆ, ಇವತ್ತಿನ ಸಮಾರಾಧನೆ ಹಿಂದೆ ಭಾಗವಹಿಸಿದ ಎಲ್ಲಾ ಸಮಾರಾಧನೆ ಕಾರ್ಯಕ್ರಮಗಳಿಗಿಂತ ವಿಭಿನ್ನವಾದುದು. ಸಮಾರಾಧನೆ ಸಂದರ್ಭದಲ್ಲಿ ಸಂತಾಪ ಸೂಚಿಸುವ ಬದಲು ಎಲ್ಲರೂ ನಕ್ಕು ನಲಿದಾಡುವಂತೆ ಮಾತನಾಡಿದ್ದೀರಿ. ಇದು ಪಂಚಣ್ಣನ ವ್ಯಕ್ತಿತ್ವ, ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ನೀವೆಲ್ಲಾ ಧಾರಾಳವಾಗಿ ಅವರ ಬಗ್ಗೆ ಮಾತನಾಡಿ, ತೀರಾ ರೋಚಕವಾದ ಸಂಗತಿಗಳನ್ನು ಸಭೆ ಗಮನಕ್ಕೆ ತಂದಿದ್ದೀರಿ. ನಗುವ ಮುಖಾಂತರ ಅಳುವವರ ದುಃಖವನ್ನು ಮರೆಯುವಂತೆ ಮಾಡಿ, ಕಚಗುಳಿ ಇಟ್ಟು ಅವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೀರಿ. ಪಂಚಣ್ಣನ ಬದುಕಿನ ಸಿಹಿ ಘಟನೆ ಸ್ಮರಣೆ ಮಾಡಿ ಈವರೆಗೆ ಮಾತನಾಡಿದ ಎಲ್ಲರೂ ಅಭಿನಂದನಾರ್ಹ. ಮರಣವನ್ನು ದುಃಖ ಎಂದು ಭಾವಿಸಬಾರದು ಅದು “ಮರಣವೇ ಮಹಾನವಮಿ” ಎಂಬ ಬಸವಣ್ಣನವರ ತತ್ವದ ಆಶಯಗಳನ್ನು ಬಿಂಬಿಸುವಂತೆ ಎಲ್ಲರೂ ಮನಬಿಚ್ಚಿ ಮಾತನಾಡಿದ್ದೀರಿ ಎಂದರು.
ಪಂಚಣ್ಣ, ಮಂಜಣ್ಣ, ಸೋಮಣ್ಣ ಈ ಮೂವರೂ ಒಡಹುಟ್ಟಿದವರು ಅಲ್ಲ. ಆದರೆ, ಆತ್ಮೀಯ ಒಡನಾಡಿಗಳು.
ಹಿರಿಯ ಲಿಂ.ಶಿವಕುಮಾರ ಗುರುಗಳು ಅನಾರೋಗ್ಯಕ್ಕೆ ತುತ್ತಾದಾಗ ಪಂಚಣ್ಣ ಮತ್ತು ಇತರ ಮೂವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಗುರುಗಳನ್ನು ಅನಾರೋಗ್ಯ ನಿಮಿತ್ತ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಸೇರಿಸಿದಾಗ ನಾವು ನೋಡಲು ಬಂದಿದ್ದೆವು.
ಆಗ ಡಾ.ಗುರುಪಾದಪ್ಪನವರು ಗುರುಗಳು ಅಂತಿಮ ಸ್ಥಿತಿಯಲ್ಲಿದ್ದಾರೆ. ನೀವು ಖಾಸಗಿಯಾಗಿ ಏನನ್ನಾದರೂ ಮಾತನಾಡುವುದಿದೆಯಾ. ಇದ್ದರೆ ಅವರ ಜತೆ ಮಾತನಾಡಿ ಎಂದು ನಮಗೆ ತಿಳಿಸಿದರು. ಆಗ ನಾವು ಗುರುಪಾದಪ್ಪನವರಿಗೆ ಹೇಳಿದೆವು "ಖಾಸಗಿಯಾಗಿ ಮಾತನಾಡುವ ಯಾವ ಒಳ ವ್ಯವಹಾರವೂ ನಮ್ಮ ಮತ್ತು ಗುರುಗಳ ಮಧ್ಯೆ ಇಲ್ಲ. ನಾವು ನಿಮಗೆ ಬಹಿರಂಗವಾಗಿ ಕೇಳುತ್ತೇವೆ. ನಿಮ್ಮ ವೈದ್ಯಕೀಯ ಪರಿಣತಿಯನ್ನು ನಾವು ಪ್ರಶ್ನೆ ಮಾಡಲ್ಲ. ತಾವು ಯಾವುದೇ ತಪ್ಪು ತಿಳಿಯಬಾರದು. ನಾವು ನಿಮ್ಮಿಂದ ಬಯಸುವುದೇನೆಂದರೆ ಜಗತ್ತಿನಲ್ಲಿ ಎಲ್ಲಿ ಕರೆದುಕೊಂಡು ಹೋದರೆ ಗುರುಗಳಿಗೆ ಈ ಸ್ಥಿತಿಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತೆ, ಗುಣವಾಗುತ್ತಾರೆ ನೀವು ಹೇಳಿ" ಎಂದು ಕೇಳಿದೆವು.
ಆಗಿನ ಕಾಲದಲ್ಲಿ ಗುರುಪಾದಪ್ಪನವರಿಗಿಂತ ಒಳೆ ತಜ್ಞ ವೈದ್ಯರು ಇರಲಿಲ್ಲ. ಆದರೂ ಕೇಳಿದೆವು. ನಮ್ಮದೊಂದು ಹೊಣೆಗಾರಿಕೆ, ಜವಾಬ್ದಾರಿ ಇತ್ತು. ಎಲ್ಲಿಗೆ ಕರೆದೊಯ್ಯಬೇಕು, ಇಂಗ್ಲೆಂಡ್, ಅಮೆರಿಕಾಕ್ಕೆ ಹೆಚ್ಚಿನ ಚಿಕಿತ್ಸೆಗೆ ಹೋದರೆ ಗುಣವಾಗುತ್ತಾರಾ ಎಂದೆವು. ಬೆಂಗಳೂರಿನ ನಿಮಾನ್ಸ್ ನ ಜಿ.ಎನ್.ರೆಡ್ಡಿ ಮತ್ತು ಡಾ.ಗೌರಿ ಅವರ ಬಳಿ ಕರೆದೊಯ್ಯಬಹುದು ಎಂದು ಸಲಹೆ ನೀಡಿದರು. ನಾವು ತಕ್ಷಣವೇ ನಮ್ಮ ಜತೆ ಗುರುಗಳನ್ನು ಕರೆದೊಯ್ದೆವು.
ಅಲ್ಲಿ ಒಂದೆರೆಡು ತಿಂಗಳು ಚಿಕಿತ್ಸೆ ಪಡೆದ ಬಳಿಕ ಗುರುಗಳು ಗುಣಮುಖರಾಗಿ ಮತ್ತೆ ಮೂರ್ನಾಲ್ಕು ವರ್ಷ ಬದುಕ್ಕಿದ್ದರು. ಆಗ ನಮಗೆ ಗುರುಗಳು ಸಿರಿಗೆರೆಯಲ್ಲಿ ಸಭೆಯೊಂದರಲ್ಲಿ ಹೇಳಿದ್ದ ಮಾತು ನೆನಪಿಗೆ ಬಂತು. "ಸಾಕ್ಷಾತ್ ಯಮನೇ ಬಂದು ಎದುರು ನಿಂತು ನಿನ್ನ ಆಯಸ್ಸು ಮುಗಿದಿದೆ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದರೂ, ನಾವು ಮಾಡಬೇಕಾದ ಅನೇಕ ಕೆಲಸ ಇನ್ನೂ ಇವೆ ಎಂದು ಹೇಳಿ ಆ ಯಮನನ್ನು ಒಂಟಿ ಕಾಲಲ್ಲಿ ನಿಲ್ಲಿಸುತ್ತೇವೆ" ಎಂದು ಗುರುಗಳು ಹೇಳಿದ್ದರು.
ಅದೇ ತೆರನಾಗಿ ಗುರುಗಳು ನಾಲ್ಕು ವರ್ಷ ಬದುಕಿ ಯಮನನ್ನು ನಾಲ್ಕು ವರ್ಷ ಒಂಟಿ ಕಾಲಲ್ಲಿ ನಿಲ್ಲಿಸಿದ್ದರು. ಈ ಮಾದರಿಯಲ್ಲಿ ವೈದ್ಯಕೀಯ ಶಾಸ್ತ್ರಕ್ಕೆ ಒಂದು ದೊಡ್ಡ ಸವಾಲಾಗಿದ್ದವರು ಪಂಚಣ್ಣ. ನಾಲ್ಕು ವರ್ಷದ ಹಿಂದೆ ಹೃದಯ ತೊಂದರೆ ಆಗಿ ಕುಸಿದು ಬಿದ್ದಿದ್ದರು. ಅವರ ಹೃದಯ ಮತ್ತೆ ಚಾಲನೆ ಆಗುವಂತೆ ಮಾಡಿದವರು ಅವರ ಸ್ನೇಹಿತ ವೈದ್ಯರು. ಇನ್ನೇನು ಉಳಿಯುವುದೇ ಇಲ್ಲ ಎನ್ನುವಂತ ಸ್ಥಿತಿಯಲ್ಲಿದ್ದ ಪಂಚಣ್ಣ ಸಾವು ಗೆದ್ದಿದ್ದರು. ಮೊನ್ನೆ ಸಾವಿನ ಎರಡು ದಿನ ಹಿಂದೆ ನಮ್ಮ ಜತೆ ಮಾತನಾಡಿದ್ದ. ಆವನ ಮಾತಿನಲ್ಲಿ ಕಿಂಚಿತ್ತೂ ಆತಂಕದ ಆಲೋಚನೆ ಇರಲಿಲ್ಲ. ಅವನಲ್ಲಿ ಜೀವನೋತ್ಸಾಹ ಇತ್ತು. ಮಾರನೆ ದಿನ ಅವನನ್ನು ಮಾತನಾಡಿಸಲು ಬೆಳಿಗ್ಗೆ 10.30ಕ್ಕೆ ಹೋಗಬೇಕಿತ್ತು. ಆದರೆ, ಆಗಿದ್ದೇ ಬೇರೆ ಆ ದಿನ ಹೆದ್ದಾರಿಯ ಪಕ್ಕ ತುರ್ತು ಸೇವಾ ವಾಹನ ಒಂದರಲ್ಲಿ ಮೃತ ದೇಹ ನೋಡುವಂತಾಯಿತು ಎಂದು ಶ್ರೀಗಳು ನೋವು ವ್ಯಕ್ತಪಡಿಸಿದರು.
ಪಂಚಣ್ಣ ಹಿರಿಯ ಗುರುಗಳ ಅಪಾರ ಸೇವೆ ಮಾಡಿದ್ದರು. ತನ್ನ ಸಾವಿನ ಕುರಿತು ತಾನೇ ರಚಿಸಿದ್ದ ಕವಿತೆ "ಗತಿ"ಯನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುವುದು ಅವರ ವ್ಯಕ್ತಿತ್ವ ಬಿಂಬ ವಾಗಿದೆ. "ಗತಿ" ಪದದ ಬಳಕೆಯನ್ನು ಲೌಕಿಕ ಬದುಕಿಗಿಂತ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಬರೆದಿದ್ದಾರೆ. “ಹೊತ್ತು ಹೋಗುವ ಮುನ್ನ ಪೂಜಿಸೆನ್ನ” ಎನ್ನುವಂತೆ ಅತ್ಯುತ್ತಮ ಕವಿತೆ ರಚಿಸಿದ್ದಾರೆ ಎಂದು ಹೇಳಿದರು.
ಪಂಚಣ್ಣನ ಕುರಿತ ಪುಸ್ತಕ ತರಬೇಕೆಂಬ ಅವರ ಆಸೆ ನಮಗೆ ಗೊತ್ತಿರಲಿಲ್ಲ. ಹೊರ ತಂದಿದ್ದರೆ ಎಷ್ಟು ಖುಷಿ ಪಡುತ್ತಿದ್ದರೋ ಎಂದು ಸ್ಮರಿಸಿದ ಶ್ರೀಗಳು, ನಿಜವಾಗಲೂ ಪಂಚಣ್ಣ ಬಹುರೂಪಿ. ಬದುಕಿನಲ್ಲಿ ಎಲ್ಲರ ಜತೆ ಎಲ್ಲಾ ಬಗೆಯ ಪಟ್ಟು ಹಾಕಿದ್ದರು. ಪಂಚಣ್ಣ ಇನ್ನೂ ನಾಲ್ಕು ಕಾಲ ಬದುಕಿದ್ದರೆ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೆ ನೆರವಾಗುತ್ತಿದ್ದರು. ಡಿವಿಜಿ ಆಶಯದಂತೆ, ಕಣ್ಣೀರು ಸುರಿಸದೆ ಇನ್ನೂ ಬದುಕುತ್ತೇನೆ ಎಂಬ ಆಶಯ ಬಿಟ್ಟು ಹೋಗಿದ್ದಾರೆ.
ಯಾವ ಸಮಾರಾಧನೆಯಲ್ಲಿ ನಾವು ನಗುವನ್ನು ನೋಡಿಲ್ಲ. ಅದಕ್ಕೆ ಅವರ ವ್ಯಕ್ತಿತ್ವವೇ ಸಾಕ್ಷಿ ಎಂದ ಶ್ರೀಗಳು, ಪಂಚಣ್ಣನ ಕುರಿತ ಪುಸ್ತಕವನ್ನು ತರಳಬಾಳು ಶ್ರೀ ಮಠದಿಂದ ಹೊರತರುತ್ತೇವೆ. ಅದಕ್ಕೆ ಪೂರಕವಾದ ಕೆಲಸವನ್ನು ಮಾಡಿ ಎಂದು ಸೂಚಿಸಿದರು.
ಹಿರಿಯ ಶ್ರೀಗಳಿಗೆ ಸೇವೆ ಮಾಡಿದವರು. ಅವರ ಸೇವೆ ದಾಖಲಾಗಬೇಕು. ಪಂಚಣ್ಣನಿಗೆ ಬಸವಾದಿ ಶಿವಶರಣರು ಸದ್ಗತಿ ನೀಡಲಿ. ಜತೆಗೆ, ಅವರ ಕುಟುಂಬಕ್ಕೆ ನೋವನ್ನು ನೀಗುವ ಶಕ್ತಿ ತುಂಬಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಆದರ್ಶದ ಬದುಕು ಕೊಟ್ಟ ತಂದೆ
ಪಂಚಾಕ್ಷರಪ್ಪ ಅವರ ಪುತ್ರಿ ಪ್ರತಿಮಾ ಮಾತನಾಡಿ, ತಂದೆ ಎಲ್ಲರೊಡನೆ ಬೆರೆತು ಬಾಳಿದವರು. ಕೋಟೇಹಾಳಲ್ಲಿ ನಂದ್ಯಪ್ಪ ದಂಪತಿ ಪುತ್ರರಾಗಿ ಜನಿಸಿ, ಶಿವಮೊಗ್ಗ, ಮೈಸೂರಿನಲ್ಲಿ ವ್ಯಾಸಂಗ ಮಾಡಿ, ಎಂ.ಬಿ.ಬಿ.ಎಸ್. ಮಾಡಿದ್ರು. ತಮ್ಮ ಹಿತ-ಮಿತದಲ್ಲಿ ಎಲ್ಲ ಮಾಡಿದರು. ಯಾರನ್ನೂ ಬೈಯ್ಯಲಿಲ್ಲ. ವ್ಯಕ್ತಿ ನಿತ್ಯ ವಿದ್ಯಾರ್ಥಿಯಾಗಿರಬೇಕು ಎಂದು ನುಡಿದಂತೆ ನಡೆದು. ಎಲ್ಲಾ ವರ್ಗದ ಜನರನ್ನು ಆಪ್ತವಾಗಿ ಮಾತನಾಡಿಸುತ್ತಿದ್ದರು. ಆದರ್ಶದ ಬದುಕನ್ನು ನಮಗೆ ಕೊಟ್ಟುಹೋಗಿದ್ದಾರೆ. ಕೊನೆ ಕ್ಷಣದಲ್ಲಿಯೂ ಉತ್ತಮ ಸೇವೆ ಸಲ್ಲಿಸಿದರು ಎಂದು ತಂದೆಯ ಬದುಕನ್ನು ಸ್ಮರಿಸಿದರು.
ಶಿವಕುಮಾರ ಶ್ರೀಗಳ ಆಪ್ತ ಒಡನಾಡಿ ಪಂಚಣ್ಣ
ಪಂಚಣ್ಣ ಅವರ ಆಪ್ತ ವಲಯದಲ್ಲಿದ್ದ ಡಾ.ಮಂಜುನಾಥ್ ಮಾತನಾಡಿ, “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವಂತೆ “ಪಂಚಣ್ಣ ಮಾಡದ ಕೆಲಸವಿಲ್ಲ”. ಪಂಚಣ್ಣ ಕಾಲೇಜು ದಿನಗಳಲ್ಲಿ ಪರಿಚಯ. ದಾವಣಗೆರೆಯಲ್ಲಿ ಪ್ರಥಮಬಾರಿಗೆ ಮೇಘನ ಬ್ಲಡ್ ಬ್ಯಾಂಕ್ ಸ್ಥಾಪಿಸಿ ಸೇವೆ ಸಲ್ಲಿಸಿದರು. ವೃತ್ತಿಯಲ್ಲಿ ಗಳಿಸಿದ ವೇತನ ಬಿಟ್ಟು ಬೇರೆಯವರಿಂದ ಒಂದು ರೂಪಾಯಿಯನ್ನು ಅವರು ತಿನ್ನಲಿಲ್ಲ. ತರಳಬಾಳು ಹಿರಿಯ ಜಗದ್ಗುರು ಶಿವಕುಮಾರ ಶ್ರೀಗಳ ಆರೋಗ್ಯ ತಪಾಸಣೆ ಪಂಚಣ್ಣ ಮತ್ತು ನಮ್ಮ ಪಾಲಿಗೆ ಒದಗಿ ಬಂತು. ಗುರುಗಳ ಜೆತೆಗೆ ಪ್ರೀತಿ, ಪ್ರೇಮ ಬಾಂಧವ್ಯ ಹೊಂದಿದ್ದರು. ಆತ್ಮೀಯ ಒಡನಾಡಿ ಆಗಿದ್ದರು. ಕೊನೆಗೆ ಪಂಚಣ್ಣನ ಕಾಲು ನೋವು ನನಗೆ ಬಲಗೈ ಕಳೆದುಕೊಂಡಂತಾಗಿತ್ತು. ಪಂಚಣ್ಣ ಭೋಜನ ಪ್ರಿಯ. ಯಾರಿಗೂ ಕೇಡು ಬಯಸದ ವ್ಯಕ್ತಿ. ಸದಾ ಪರರಿಗೆ ನೆರವಾಗುವ ವ್ಯಕ್ತಿತ್ವ ಅವರದು ಎಂದು ತಮ್ಮ ಒಡನಾಟವನ್ನು ಸ್ಮರಿಸಿದರು.
ಪಂಚ ಪಾಂಡವರು
ಮತ್ತೊಬ್ಬ ಆಪ್ತ ಒಡನಾಡಿ ಡಾ.ಇ.ಅರ್.ಸಿದ್ದೇಶ್ ಮಾತನಾಡಿ, ಪಂಚಣ್ಣ ಪರೋಪಕಾರಿ. ಅನಾರೋಗ್ಯ ಪೀಡಿತರಿಗೆ ಸದಾ ಮಿಡಿಯುತ್ತಿದ್ದರು. ಅವರ ಒಡನಾಡಿಗಳಾಗಿ ನಿತ್ಯ ಐದು ಗೆಳೆಯರು ಪಂಚ ಪಾಂಡವರ ರೀತಿ ಇರುತ್ತಿದ್ದೆವು. ಪಂಚಣ್ಣ ನಡೆದದ್ದೇ ದಾರಿಯಾಗಿತ್ತು. ಎಲ್ಲರನ್ನು ಸಂಬಾಳಿಸುತ್ತಿದ್ದರು. ಕಲ್ಲನ್ನೂ ಮಾತನಾಡಿಸಬಲ್ಲ ವ್ಯಕ್ತಿತ್ವದ ಪಂಚಣ್ಣನದು. ಹಿರಿಯ ಗುರುಗಳ ಆಪ್ತ ಒಡನಾಡಿಯಾಗಿದ್ದರು. ಜೀವನವನ್ನು ಗಂಭೀರವಾಗಿ ತೆಗೆದುಕೊಂವರಲ್ಲ. ಅದು ಹೇಗೆ ನಡೆಯುತ್ತೊ ಹಾಗೆ ನಡೆಯಲಿ ಎಂಬ ಮನೋಭಾವದ ವ್ಯಕ್ತಿ ಅವರಾಗಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಹಾಡುಗಾರಿಕೆಯಲ್ಲಿ ಹೊಸ ಲೋಕ ಸೃಷ್ಟಿ
ಹಿರಿಯ ರಂಗಕರ್ಮಿ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ಪಂಚಣ್ಣನ ಕಾರ್ಯ ಅವರನ್ನು ಜೀವಂತವಾಗಿರಿಸಿವೆ. ಪಂಚಾಕ್ಷರಣ್ಣ ಓದಿನ ದಿನಗಳಲ್ಲಿ ಮೈಸೂರಿನಲ್ಲಿ ಪರಿಚಯ. ಆ ದಿನಗಳಲ್ಲೇ ಜನಾನುರಾಗಿ ಆಗಿದ್ದರು. ವೈದ್ಯ, ಕಲಾವಿದರಾಗಿದ್ದವರು. ಹಿರಿಯ ಗುರುಗಳಿಗೆ ಅನಾರೋಗ್ಯ ಇದ್ದಾಗಲೂ ಅವರನ್ನು ನಗಿಸಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದರು. ಅಭಿನಯ ಮತ್ತು ಹಾಡುಗಾರಿಕೆಯಲ್ಲಿ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದರು. ರಕ್ತ ದಾನಿಗಳನ್ನು ಒಗ್ಗೂಡಿಸಿ ಇಟ್ಟಿದ್ದರು. ಆಸ್ಪತ್ರೆ ಹೊರಗೂ ರೋಗಿಗಳನ್ನು ಪತ್ತೆ ಮಾಡಿ ಸೇವೆ ಒದಗಿಸಿದರು. ನೋವಿನಲ್ಲೂ ಸಂತೋಷ ಮತ್ತು ಹೆಮ್ಮೆಯ ಸಂಗತಿಗಳನ್ನು ಬಿಟ್ಟು ಹೋಗಿದ್ದಾರೆ ಎಂದು ನೆನಪುಗಳನ್ನು ತೆರೆದಿಟ್ಟರು.
ಭವ ರೋಗಿಗಳಿಗೂ ವೈದ್ಯ ಪಂಚಣ್ಣ
ನಗರವಾಣಿ ಸಂಪಾದಕ ಬಿ.ಎನ್.ಮಲ್ಲೇಶ್ ಮಾತನಾಡಿ, ಪಂಚಣ್ಣನಿಗೆ ನಾನು ಕಿರಿಯ ಮಿತ್ರ ಎಂದರೆ ತಪ್ಪಾಗಲಾರದು. ಪ್ರತಿಮಾ ಸಭಾದ ಮೂಲಕ ಒಡನಾಡಿಯಾದವರು. ಬದುಕಿದ್ದಾಗ ಮನುಷ್ಯತ್ವದೊಟ್ಟಿಗೆ ನಿಜ ಮನುಷ್ಯನಾಗಿ ಬದುಕಿದವರು. ಒಳಗೊಂದು - ಹೊರಗೊಂದು ಇಲ್ಲದೆ ಜೀವಿಸಿದ ವ್ಯಕ್ತಿ. ಪಂಚಣ್ಣ ಭವ ರೋಗಗಳಿಗೂ ವೈದ್ಯರಾಗಿದ್ದರು. ಹಿರಿಯ - ಕಿರಿಯರೆಲ್ಲರೊಡಗೂಡುತ್ತಿದ್ದ ಜವಾರಿ ಮನುಷ್ಯರಾಗಿದ್ದರು. ಆನುಗೋಡು ನಂಜುಂಡಪ್ಪನ ಹಳೇ ಗೂಳಿ ಇದ್ದಂತೆ ಎಂದು ತಮ್ಮನ್ನೇ ವಿಡಂಬನೆ ಮಾಡಿಕೊಳ್ಳುತ್ತಿದ್ದರು. ಜನಪದ ಲೋಕದ ದಿಗ್ಗಜರಂತಿದ್ದರು. ಹೊರಗಿನ ಸ್ನೇಹಿತರನ್ನೂ ತನ್ನವರಂತೆ ಕಾಣುತ್ತಿದ್ದರು. ನಿರಂತರ ನಗುವಿನ ಅಲೆಯಲ್ಲಿ ತೇಲುವಂತೆ ಮಾಡುತ್ತಿದ್ದರು. ಭಜಿ, ಖಾರ-ಮಂಡಕ್ಕಿ ಅಪ್ಪಟ ಪ್ರೀತಿಯಾಗಿತ್ತು. ಅವರಲ್ಲಿದ್ದದ್ದು ಜೀವನ ಪೀತಿ. ಉತ್ಸಾಹದ ವ್ಯಕ್ತಿ. ಅಪ್ಪಟ ಪ್ರೀತಿಯ ಜವಾರಿ ಮನುಷ್ಯ ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಹೆಸರು ತಂದ ಉಜ್ಜಣ್ಣನ ಪಾತ್ರ
ಆಪ್ತರಾದ ಸಾಹಿತಿ ಬಾ.ಮ. ಬಸವರಾಜಯ್ಯ ಮಾತನಾಡಿ, ಅವರ ಅಭಿನಯದ ಸಂಕ್ರಾಂತಿ ನಾಟಕದ ಉಜ್ಜಣ್ಣನ ಪಾತ್ರ ಅವರಿಗೆ ಮತ್ತು ಅದೇ ನಾಟಕದ ಕೆಂಚನ ಪಾತ್ರ ಮಾಡಿದ್ದ ನನಗೆ ಹೆಸರು ತಂದುಕೊಟ್ಟಿತ್ತು. ಪ್ರಪಂಚದಲ್ಲಿ ದುಃಖವೇ ಇಲ್ಲದ ವ್ಯಕ್ತಿ ಎಂದರೆ ಪಂಚಣ್ಣ ಎಂದರೆ ತಪ್ಪಾಗಲಾರದು ಎಂದು ಸ್ಮರಿಸಿದರು.
ಅಳಿಯ ರಮೇಶ್, ಪಂಚಣ್ಣನ ಕುರಿತು ರಚಿಸಿದ "ಬಾವನ ಭಾವ" ಕವಿತೆ ವಾಚಿಸಿದರು.