ವಿದ್ಯಾರ್ಥಿಗಳ ಯಶಸ್ಸಿಗೆ ಅವರ ವ್ಯವಸ್ಥಿತ, ಕ್ರಮಬದ್ಧವಾದ ಯೋಜನೆ ತುಂಬಾ ಮುಖ್ಯ : ಡಾ. ಎಂ.ಎನ್.ಚಂದ್ರಶೇಖರಯ್ಯ
ಸಿರಿಗೆರೆ-ಅಕ್ಟೋಬರ್-21 : ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಯೋಜನಾ ಬದ್ಧವಾಗಿ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಸಾಧನೆಯನ್ನು ಮಾಡಬೇಕೆಂದು ಬೆಂಗಳೂರಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ.ಎನ್. ಚಂದ್ರಶೇಖರಯ್ಯ ಅವರು ತಿಳಿಸಿದರು.
ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಭವನದ ಸದ್ಧರ್ಮ ನ್ಯಾಯಪೀಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
10ನೇ ತರಗತಿ ಮತ್ತು ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಕುರಿತು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಮಾಡಿದ ಸಾಧನೆಕ್ಕಿಂತ ಮುಂದಿನ ತರಗತಿಯಲ್ಲಿ ಅದಕ್ಕಿಂತ ಮತ್ತಷ್ಟು ಹೆಚ್ಚಾಗಬೇಕು. ವಿದ್ಯಾರ್ಥಿಗಳಿಗೆ Career, Job, Hobby and Dream ಪದಗಳ ಬಗ್ಗೆ ವಿಶ್ಲೇಷಿಸಿದರು.
ವಿದ್ಯಾರ್ಥಿಗಳು “ಕನಸನ್ನು ನನಸು” ಮಾಡುವಲ್ಲಿ ಪ್ರಯತ್ನಿಸಬೇಕು. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾದಂತೆ ತಾವೆಲ್ಲರೂ ಮಹಾನ್ ಸಾಧನೆಯನ್ನು ಮಾಡಬೇಕು. ಭಾರತದ ಅತ್ಯುನ್ನತ ಸಂಸ್ಥೆಗಳಾದ ಐಐಟಿ ಇತ್ಯಾದಿಗಳಲ್ಲಿ ಓದುವಂತಾಗಬೇಕು .
ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಪ್ರಾರಂಭಿಸಬೇಕು ಎಂದರು. ಕ್ರಮಬದ್ಧವಾದ ವಿದ್ಯಾಭ್ಯಾಸ ಯಶಸ್ವಿಗೆ ಸಹಕಾರಿ ಎಂದರು.
ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಪ್ರಪಂಚದ ಪ್ರಮುಖ ಸಂಪರ್ಕ ಭಾಷೆ ಇಂಗ್ಲಿಷ್ ಆದ್ದರಿಂದ ಇಂಗ್ಲೀಷನ್ನು ತುಂಬಾ ಸರಳವಾಗಿ ಮಾತನಾಡುವುದನ್ನು ಕಲಿಯಬೇಕೆಂದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಡಾ.ಕೆ.ಜಿ.ಸತ್ಯನಾರಾಯಣ ಅವರು ಮಾತನಾಡಿ ನಾವು ಎಲ್ಲವನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು ಎಂದರು. ಸರಿಯಾದ ಗುರಿ, ಯೋಜನೆ ನಮ್ಮ ಕನಸನ್ನು ನನಸಾಗಿಸುತ್ತದೆ. ಕೇವಲ ಉದ್ಯೋಗಕ್ಕಾಗಿ ಓದದೇ ಉದ್ಯೋಗವೇ ನಮ್ಮನ್ನು ಹುಡುಕಿಕೊಂಡು ಬರುವಂತೆ ಪ್ರಯತ್ನಿಸಬೇಕು. ದೊಡ್ಡ ದೊಡ್ಡ ಸಂಸ್ಥೆಗಳು ನಮ್ಮನ್ನು ಗುರುತಿಸಿ ಸೇವೆಗೆ ಅವಕಾಶವನ್ನು ಕಲ್ಪಿಸಿ ಕೊಡುವಂತೆ ಮುನ್ನುಗ್ಗಬೇಕು ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ಕರುಣಿಸದ ಪರಮಪೂಜನೀಯ ಶ್ರೀಮದುಜ್ಜಯಿನಿ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಶಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತಮ್ಮ ಸಹಪಾಠಿಗಳಾದ ಡಾ. ಎಂ.ಎನ್.ಚಂದ್ರಶೇಖರಯ್ಯ ಹಾಗೂ ಡಾ.ಕೆ.ಜಿ.ಸತ್ಯನಾರಾಯಣ ಅವರ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ಮಠದ ಆಶ್ರಯದಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಸಾಧನೆಯನ್ನು ಮಾಡುವತಾಗಬೇಕು ಎಂದು ಆಶಿಸಿದರು.
ಗ್ರಾಮೀಣ ಪ್ರದೇಶದ ರೈತಾಪಿ ವರ್ಗದಿಂದ ಬಂದ ಎಲ್ಲ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು ಎಂದರು.
ನಾವು ನಿಮ್ಮ ಹಾಗೆ ವಿದ್ಯಾರ್ಥಿಗಳಾಗಿದ್ದಾಗ ಮೊದಲು ವಿಜ್ಞಾನ ವಿಷಯದಲ್ಲಿ ಆಸಕ್ತಿಯನ್ನು ವಹಿಸಿದ್ದೆವು. ದೊಡ್ಡ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆದೇಶದ ಮೇರೆಗೆ “ಸಾಹಿತ್ಯ ಮತ್ತು ಸಂಸ್ಕೃತವನ್ನು” ಅಭ್ಯಾಸ ಮಾಡಿ “ಸಂಸ್ಕೃತದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪ್ರಶಸ್ತಿ” ಪಡೆದೆವು. ಕ್ರಿ.ಪೂ. 5ನೆಯ ಶತಮಾನದಲ್ಲಿ ಶ್ರೇಷ್ಠ ಸಂಸ್ಕೃತ ವ್ಯಾಕರಣ ಶಾಸ್ತ್ರಜ್ಞ ಪಾಣಿನಿಯ ಅಷ್ಟಾಧ್ಯಾಯಿಯನ್ನು ಗಣಕಯಂತ್ರಕ್ಕೆ ಅಳವಡಿಸಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ಜಗತ್ತಿನ ಸಂಸ್ಕೃತಾಸಕ್ತರಿಗೆ ವರದಾನವಾಗಿದೆ ಎಂದರು. ವಿದ್ಯಾರ್ಥಿಗಳಾದ ನೀವು ಸರಿಯಾದ ದಾರಿಯಲ್ಲಿ ಓದಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಹೆಚ್.ವಿ.ವಾಮದೇವಪ್ಪ ಹಾಗೂ ದಾವಣಗೆರೆಯ ಇಂಟೆಲೆಜೆನ್ಸ್ ವಿಭಾಗದ ಡಿವೈಎಸ್ಪಿ ಶ್ರೀ ಸೋಮಲಿಂಗಪ್ಪನವರು ಉಪಸ್ಥಿತರಿದ್ದರು.
ಸ್ಥಳೀಯ ಶಾಲಾ ಕಾಲೇಜುಗಳ 10ನೇ ತರಗತಿ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು ಶಿಕ್ಷಕರು ಮತ್ತು ಮುಖ್ಯಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡರು.