ಭುಜಂಗನಗರದ ತರಳಬಾಳು ಶಾಖಾ ಮಠದಲ್ಲಿ ಶಿವಗೋಷ್ಠಿ: ಲೋಕ ಕಲ್ಯಾಣಕ್ಕೆ ನೋವುಂಡ ಮರುಳಸಿದ್ಧರು
ಭುಜಂಗನಗರ(ಬಳ್ಳಾರಿ ಜಿಲ್ಲೆ): ಮೌಢ್ಯ, ಕಂದಾಚಾರದ ವಿರುದ್ಧ ಹೋರಾಟ ನಡೆಸಿದ ಮರುಳಸಿದ್ಧರ ನೈತಿಕ, ಮಾನವೀಯ, ಸಮಾಜ ಮುಖಿ ಆಶಯಗಳ ಶಿಖರವಾಗಿ "ತರಳಬಾಳು" ಶ್ರೀ ಮಠ ಮತ್ತು ಗುರು ಪರಂಪರೆ ಸಾಕ್ಷಿ ಪ್ರಜ್ಞೆಯಾಗಿ ನಮ್ಮೆದುರಿಗಿದೆ ಎಂದು ಸಾಹಿತಿ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಂಗಾಪುರ - ನುಲೇನೂರಿನ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಸ್ವತಂತ್ರ್ಯ ಜ್ಯೋತಿ ಪ್ರೌಢಶಾಲೆ ಕನ್ನಡ ಅಧ್ಯಾಪಕ ನಾಗರಾಜ ಸಿರಿಗೆರೆ ಅವರು ಇತಿಹಾಸವನ್ನು ತೆರೆದಿಟ್ಟರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಭುಜಂಗನಗರದಲ್ಲಿನ ತರಳಬಾಳು ಶಾಖಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಶಿವಗೋಷ್ಠಿಯಲ್ಲಿ "ತರಳಬಾಳು ಮಠದ ಗುರು ಪರಂಪರೆ" ವಿಷಯ ಕುರಿತು ಉಪನ್ಯಾಸ ನೀಡಿದರು.
ಆಶ್ವೀಜ ಮಾಸದ ಶುದ್ಧ ತ್ರಯೋದಶಿಯಂದು ಮಠದ ಪರಂಪರೆಯಲ್ಲಿ ಶಿವಗೋಷ್ಠಿ ಆರಂಭವಾಗಿದೆ. ದಾವಣಗೆರೆ, ರಾಣೇಬೆನ್ನೂರಿನಲ್ಲಿ ನಿರಂತರ ನಡೆಯುತ್ತಿದೆ. ಇಲ್ಲಿ ಇಂದು ಆರಂಭವಾಗಿದೆ. ಇದು ನಿರಂತರವಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದ ನಾಗರಾಜ್, 1925ರಲ್ಲಿ ತರಳಬಾಳು ಗುರು ಪರಂಪರೆಯ ಶಾಖಾಮಠ ಆರಂಭವಾಯಿತು. ಮಠದ ಮೂಲ ಪುರುಷ ಮರುಳಸಿದ್ಧರ ಜನ್ಮ ಸ್ಥಳ ಅಂದಿನ ಬಳ್ಳಾರಿ ಜಿಲ್ಲೆ(ಪ್ರಸ್ತುತ ವಿಜಯನಗರ ಜಿಲ್ಲೆ). ನಮಗೆ ಇತಿಹಾಸದ ಅರಿವು ಬೇಕು. ಈ ಮೂಲಕ ಭವಿಷ್ಯದ ಬದುಕು ಕಟ್ಟಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮಠದ ಪರಂಪರೆ ಬಗ್ಗೆ ತಿಳಿವಳಿಕೆ ಅಗತ್ಯ ಎಂದರು.
"ತರಳಾ ಬಾಳು" ಎಂಬ ಐದಕ್ಷರದ ಮಾಂತ್ರಿಕತೆ ಜಗತ್ತಿನೆಲ್ಲೆಡೆ ಪಸರಿಸಿದೆ. ಲೋಕದ ಜನ ಸುಖವಾಗಿ ಬಾಳಬೇಕು ಎಂದು ವಿಶ್ವಬಂಧು ಮರುಳಸಿದ್ಧರು ಮಾಘ ಶುದ್ಧ ಹುಣ್ಣಿಮೆಯಂದು ಆಶೀರ್ವದಿಸಿದ ಘಳಿಗೆ ಶ್ರೀ ಮಠ ಉದಯವಾಯಿತು.
ಕಗ್ಗಲ್ಲು ಪುರದಲ್ಲಿ ಕೂಚಿಮಾರ ದಂಪತಿಗೆ ಜನಿಸಿದ
ಮರುಳಸಿದ್ಧರು ಸಾಕು ತಂದೆ ಬಾಚನಗೌಡರ ಮನೆಯಲ್ಲಿ ಬೆಳೆದರು. ಜತೆ ಜತೆಗೆ ವಾರಿಗೆಯವರೊಟ್ಟಿಗೆ ದನ ಮೇಯಿಸುತ್ತಾ ಬಾಲ್ಯ ಕಳೆಯುತ್ತಾನೆ. ಇದಕ್ಕೆ ಸಾಕ್ಷಿಯಾಗಿ "ತೂಗು ಉಯ್ಯಾಲೆ ಹಳ್ಳಿ" ಕಾಲಾನಂತರ ತುಯ್ಯಾಲ ಹಳ್ಳಿ ಎಂದು, ನಂತರ ತೂಲಹಳ್ಳಿ ಆಗಿದೆ. ಅಂದಿನ ದಿನಮಾನಗಳಲ್ಲಿ ಮರುಳಸಿದ್ಧರು ದೇವಿ ಜಾತ್ರೆಯಲ್ಲಿ ನೀಡುತ್ತಿದ್ದ ಪ್ರಾಣಿ ಬಲಿಯನ್ನು ವಿರೋಧಿಸಿದರು. ಆ ಮೂಲಕ ಸಾಮಾಜಿಕ ಕಳಕಳಿ, ಮಾನವೀಯತೆಯೊಂದಿಗೆ ಹೆಜ್ಜೆ ಇಟ್ಟು ಮೌಢ್ಯದ ವಿರುದ್ಧ ಹೋರಾಟ ಆರಂಭಿಸಿದರು. ಮುಂದೆ ಮರುಳಸಿದ್ಧ ಚಿನ್ಮೂಲಾದ್ರಿಗೆ(ಇಂದಿನ ಚಿತ್ರದುರ್ಗ)ಹೋಗಿ ರೇವಣಸಿದ್ಧರಿಂದ ಮಾರ್ಗದರ್ಶನ, ಶಿಕ್ಷಣ ಪಡೆದು ಲೋಕ ಸಂಚಾರ ಮಾಡುತ್ತಾನೆ. ಈ ವೇಳೆ ಅನೇಕ ಕಷ್ಟಗಳನ್ನು ಎದುರಿಸುತ್ತಾರೆ. ಉತ್ತರ ದಿಕ್ಕಿನಲ್ಲಿ ಮಾಯೆಯ ಕಡೆ ಹೋಗಬೇಡ ಎಂದು ಹೇಳಿದಾಗಲೂ ಅದನ್ನು ಪರೀಕ್ಷಿಸಿ ನೋಡಲು ಹೊರಡುತ್ತಾನೆ. ಮರುಳಸಿದ್ಧರು ಎಲ್ಲಾ ಜನಾಂಗದವರ ಜತೆ ಕೂಡಿ ಉಂಡ ಊರು ಕುರುಡಿಯಾಗಿದೆ. ಬ್ರಾಹ್ಮಣರ ಯಜ್ಞವನ್ನು ವಿರೋಧಿಸಿದಾಗ ಹಗೇವಿಗೆ ಹಾಕಿದ್ದರು. ಅಲ್ಲಿ ಅವರ ಮೈಗೆ ಎಣ್ಣೆ ಹಚ್ಚಿ ಆರೈಕೆ ಮಾಡುತ್ತಾರೆ. ಅದೇ ಇಂದಿನ ಬೇತೂರು. ಅಲ್ಲಿ ಹಗೇವು ಸಿದ್ಧೇಶ್ವರ ದೇವಸ್ಥಾನ ಇದೆ. ಈ ಹಿನ್ನೆಲೆಯಲ್ಲಿ ಉಜಿನಿಯಲ್ಲಿ ಮರುಳಸಿದ್ಧ ದೇಗುಲ ಶಿಖರಕ್ಕೆ ರಥೋತ್ಸವದ ಮಾರನೇ ದಿನ ತೈಲ ಎರೆಯಲಾಗುತ್ತದೆ. ಮುಂದೆ ಅಣಜಿ ಕೆರೆಗೆ ಕೈಕಾಲು ಕಟ್ಟಿ ಹಾಕುತ್ತಾರೆ. ಅಲ್ಲಿ ಗೊಂಗಡಿ ಸಿದ್ಧಪ್ಪನ ಗುಡಿ ಇದೆ. ಹೀಗೆ ಲೋಕದಲ್ಲಿ ಸವಾಲು ಎದುರಿಸುತ್ತಾ ಮುಂದೆ ಬಂದು, ತೆಲಗು ಬಾಳಿನಲ್ಲಿ ರೈತ ದಂಪತಿಯ ಮಗ ಮೂಕನನ್ನು ಮಾತನಾಡಿಸಿ, ಅವರೊಟ್ಟಿಗೆ ಕರೆದೊಯ್ಯುತ್ತಾರೆ. ಮುಂದೆ ನಡೆದು, ಅವರ ಹುಟ್ಟೂರಾದ ಕಗ್ಗಲ್ಲು ಪುರಕ್ಕೆ ಬಂದು ಲೋಕ ಕಲ್ಯಾಣಕ್ಕಾಗಿ ಒಂಬತ್ತು ಪಾದ ಸ್ಥಳ ಪಡೆದು ಆ ಪೀಠದಲ್ಲಿ ತೆಲಗು ಬಾಳಿನ ಸಿದ್ಧನನ್ನು ಕೂರಿಸಿ "ತರಳಾ ಬಾಳು" ಎಂದು ಆಶೀರ್ವದಿಸಿದರು. ಈ ಮೂಲಕ ಇಂದಿನ ಉಜಿನಿಯಲ್ಲಿ ಪೀಠ ಸ್ಥಾಪಿಸಿದರು.
ಮರುಳಸಿದ್ಧರು ತನ್ನ ದೀಕ್ಷಾ ಗುರು ರೇವಣಸಿದ್ಧರ ಅಂಕಿತದಲ್ಲಿ ಬರೆದ ಒಂದು ವಚನ ಲಭ್ಯವಾಗಿದೆ. ದೇವ ಕವಿಯ ಸಿದ್ಧಲಿಂಗ ಚಾರಿತ್ರ್ಯ ಮರುಳಸಿದ್ಧರ ಬದುಕನ್ನು ತೆರೆದಿಡುತ್ತದೆ. ಸೇರಿದಂತೆ ಹಲವು ಸಾಹಿತಿಗಳು ಮರುಳಸಿದ್ಧರ ವಚನಗಳನ್ನು ಹುಡುಕಿದ್ದಾರೆ. ಬಳಿಕ ತರಳಬಾಳು ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮರುಳಸಿದ್ಧರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿಸಿದರು.
ಪೀಠದ ಗುರು ಪರಂಪರೆಯಲ್ಲಿ ವಿಷಮ ಇತಿಹಾಸವೇ ಇದೆ.
ಉಜಿನಿಯಲ್ಲಿ ಇದ್ದ ತರಳಬಾಳು ಪೀಠ ಸಿರಿಗೆರೆಗೆ ಸ್ಥಳಾಂತರಗೊಂಡಿತು. ಜಂಬಪ್ಪ ದೇವರು 12ನೇ ಪೀಠಾಧಿಪತಿಯಾದರು(ಕ್ರಿ.ಶ. 1740). ಮುಂದುವರಿದು, 19ನೇ ಗುರುವಾಗಿ ಬಂದವರು ಗುರುಶಾಂತರಾಜದೇಶಿ ಕೇಂದ್ರ ಸ್ವಾಮೀಜಿ. ಇವರೂ ಬಳ್ಳಾರಿ ಜಿಲ್ಲೆಯವರು. ಶಿಕ್ಷಕರಾಗಿದ್ದ ಪ್ರಜ್ಞಾವಂತರಾಗಿದ್ದ ಅವರು, ಸಿರಿಗೆರೆಯಲ್ಲಿ ಶಾಲೆ ಆರಂಭಿಸಿದರು. ಅದು ಇಂದು ಶತಮಾನ ಕಂಡಿದೆ. ಇಂತಹ ಗುರುವನ್ನು ಸಮಾಜದ ಒಳಗುದಿ, ಮಠದಲ್ಲಿನ ಖಾವಿಧಾರಿಗಳೇ ಸಂಚು ರೂಪಿಸಿ ಮಜ್ಜಿಗೆಯಲ್ಲಿ ವಿಷ ಹಾಕಿ ಸಾಯಿಸಿದ ಕರಾಳ ಇತಿಹಾಸವಿದೆ ಎಂದರು.
ಬಳಿಕ ಮುತ್ತಗದೂರಿನ ಕುಡಿ, ರೇವಣಸಿದ್ಧರನ್ನು ಗುರುತಿಸಿ ಓದಲು ಕಾಶಿಗೆ ಕಳುಹಿಸಿದ್ದರು. ಓದನ್ನು ಮೊಟಕುಗೊಳಿಸಿ ಶಿವಕುಮಾರ ಶಿವಾಚಾರ್ಯ ಶ್ರೀ ಎಂದು ನಾಮಾಂಕಿತದೊಂದಿಗೆ ಅವರನ್ನು ಯಲಹಂಕದ ಪೀಠಕ್ಕೆ ನೇಮಕ ಮಾಡಿದ್ದರು. ಅಂದು ಮೂರು ಕವಲಾಗಿದ್ದ ಮಠವನ್ನು ಒಂದು ಮಾಡಿದವರು ಗುರುಶಾಂತ ಶ್ರೀ ಮತ್ತು ಶಿವಕುಮಾರ ಶ್ರೀಗಳವರು.
ಸಿರಿಗೆರೆಯಲ್ಲಿನ ತರಳಬಾಳು ಪೀಠದ 20ನೇ ಗುರುವಾಗಿ ಶಿವಕುಮಾರ ಶಿವಾಚಾರ್ಯ ಶ್ರೀ ಬಂದ ಬಳಿಕ ಮಠದ ಸುವರ್ಣ ಯುಗ ಆರಂಭವಾಯಿತು. ಸಮಾಜದ ಉನ್ನತಿಗಾಗಿ ಸಿರಿಗೆರೆಯಲ್ಲಿ ಪ್ರೌಢಶಾಲೆ ಆರಂಭಿಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಸರ್ವ ಜಾತಿ ಮಕ್ಕಳಿಗೆ ಸಹಪಂಕ್ತಿ ಭೋಜನ, ವಸತಿ ನಿಲಯ ನಡೆಸಿದರು. ಈ ವಿಚಾರವಾಗಿ ಸಮಾಜದ ಜನರಿಂದ ಬಂದ ವಿರೋಧವನ್ನು ಅಷ್ಟೇ ದಕ್ಷತೆಯಿಂದ ನಿಬಾಯಿಸಿದರು. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದರು. ತಾವೇ ಕೈ ಮುಟ್ಟಿ ಕೆಲಸ ಮಾಡುತ್ತಾ, ವಿದ್ಯಾರ್ಥಿಗಳಿಂದಲೇ ಶಾಲಾ ಕಟ್ಟಡ ಕಟ್ಟಿಸಿದರು. ಸೇವಾದಳದ ಮೂಲಕವೂ ಸಮಾಜ ಸೇವೆ ಮಾಡಿದರು. ಬಳಿಕ ತರಳಬಾಳು ವಿದ್ಯಾ ಸಂಸ್ಥೆ ತೆರೆದರು. ಅದು ಗ್ರಾಮೀಣ ಭಾಗದಲ್ಲಿ. ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲಿ ಎಂಬ ಉದ್ದೇಶ ಅವರದಾಗಿತ್ತು. ಪಿಯು, ಪದವಿ ಕಾಲೇಜು ತೆರೆದರು. ಅಣ್ಣನ ಬಳಗ, ಅಕ್ಕನ ಬಳಗದ ಮೂಲಕ ಶರಣ ಸಮ್ಮೇಳನ ನಡೆಸಿದರು. ಕಲಾಸಂಘ ಸ್ಥಾಪಿಸಿ ಸ್ವತಃ ನಾಟಕಗಳನ್ನು ರಚಿಸಿ, ಶಿಕ್ಷಕರಿಂದ ಅಭಿನಯಿಸಿ ದೇಶದೆಲ್ಲೆಡೆ ಪ್ರದರ್ಶನ ಮಾಡಿದರು. ತರಳಬಾಳು ಹುಣ್ಣಿಮೆ ಆರಂಭಿಸಿದರು. ವಚನಗಳಿಗೆ ಸಂಗೀತ ಸಂಯೋಜನೆ ಮಾಡಿಸಿದರು. ಈ ಮೂಲಕ ಸಮಾಜವನ್ನು ಮುನ್ನಡೆಸಿದರು.
ಪೀಠ ತ್ಯಾಗ ಮಾಡಿದ ಶಿವಕುಮಾರ ಶ್ರೀಗಳು ವಿದೇಶದಲ್ಲಿ ವ್ಯಾಸಂಗ ಮಾಡಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಿದರು. 1979ರಂದು ಅಧಿಕಾರ ವಹಿಸಿಕೊಂಡ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಠದ ಕೀರ್ತಿಯನ್ನು ತಮ್ಮ ಪಾಂಡಿತ್ಯ ಮತ್ತು ವಿದ್ವತ್ತು, ದಕ್ಷ ಆಡಳಿತದ ಮೂಲಕ ಜಗತ್ತಿನ್ನೆಲ್ಲೆಡೆ ಹರಡಿದರು. ಸಮಾಜದ ಅಗತ್ಯ ಮನಗಂಡು ಪಾಲಿಟೆಕ್ನಿಕ್, ಎಂಜಿನಿಯರ್ ಕಾಲೇಜು ಆರಂಭಿಸಿದರು. ವಚನ ಸಾಹಿತ್ಯ ಗಣಕೀಕರಣ ಸೇರಿದಂತೆ ಬೆರಳ ತುದಿಯಲ್ಲಿ ಶರಣ ಸಾಹಿತ್ಯ ಲಭ್ಯವಾಗುವಂತೆ ಮಾಡಿದರು. 21 ಸಾವಿರ ವಚನ ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅವಿರತ ಶ್ರಮಿಸಿ ಆಧುನಿಕ ಭಗೀರಥರಾಗಿದ್ದಾರೆ. ಒಟ್ಟಾರೆ ತರಳಬಾಳು ಶ್ರೀ ಮಠ ಸಮಾಜಮುಖಿಯಾಗಿ, ನಾಡಿನ, ದೇಶದ ಹಿತಕ್ಕಾಗಿ, ವಿಶ್ವ ಶಾಂತಿಯ, ಸಹ ಬಾಳ್ವೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಭುಜಂಗನಗರದ ಇತಿಹಾಸ ಮರುಕಳಿಸಲಿ
ಅಧ್ಯಕ್ಷತೆ ವಹಿಸಿದ್ದ ಸಂಡೂರು ತಾಲ್ಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಜಿ.ಉಜ್ಜನ ಗೌಡ ಮಾತನಾಡಿ, 1925ರಲ್ಲಿ ಇಲ್ಲಿ ಶ್ರೀ ಮಠ ಸ್ಥಾಪನೆಯಾಯಿತು. ಇಂಥ ಮಠ ತಾಲ್ಲೂಕಿನಲ್ಲಿ ಎಲ್ಲೂ ಇಲ್ಲ. ಇಲ್ಲಿನ ಜನ ಶಿಕ್ಷಣ, ಉದ್ಯೋಗ, ವ್ಯವಸಾಯ, ದುಡಿಮೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು. ಅದು ಈಗ ಕಡಿಮೆ ಆಗಿದೆ. ಅದನ್ನು ಮರುಕಳಿಸುವಂತೆ ಮಕ್ಕಳು ಉತ್ತಮ ಶಿಕ್ಷಣ, ನೈತಿಕತೆ ಮೈಗೂಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗದೆ ಹಿರಿಯರ ಕೀರ್ತಿ ಉಳಿಸುವ, ಇತಿಹಾಸ ಮರುಕಳಿಸುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಕ್ಕಳಿಗೆ ನೈತಿಕ ಸಂಸ್ಕಾರ ಅಗತ್ಯ
ಭುಜಂಗನಗರದ ತರಳಬಾಳು ಶಾಖಾ ಮಠದ ಅಧ್ಯಕ್ಷ ಎಂ. ನಿಂಗಪ್ಪ ಮಾತನಾಡಿ, ಕೊವಿಡ್ ಕಾರಣಕ್ಕೆ ಎರಡು ವರ್ಷಗಳ ಹಿಂದೆ ನಡೆಯ ಬೇಕಿದ್ದ ಕಾರ್ಯಕ್ರಮ ಇಂದು ಜರುಗುತ್ತಿದೆ. ಹಳ್ಳಿಯಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನೈತಿಕತೆಯ ಪಾಠ ಹೇಳುವ ಅಗತ್ಯ ಇದೆ. ಅದು ಶಿವಗೋಷ್ಠಿ ಮೂಲಕ ಇಂದು ನಡೆಯುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಮುಂದುವರಿಸುತ್ತೇವೆ. ಇದಕ್ಕೆ ತಮ್ಮೆಲ್ಲ ಸಹಕಾರ ಅಗತ್ಯ ಎಂದು ಹೇಳಿದರು.
ಪೂಜ್ಯರ ಕೃಪೆ, ಮಾರ್ಗದರ್ಶನವಿರಲಿ
ಉದ್ಘಾಟನಾ ನುಡಿಗಳನ್ನಾಡಿದ ಸಂಡೂರಿನ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕರಡಿ ಎರ್ರಿಸ್ವಾಮಿ, ತರಳಬಾಳು ಮಠ ವಿಶ್ವದಲ್ಲೇ ಹೆಸರು ಗಳಿಸಿ ವಿಶಿಷ್ಟವಾದುದು. ವಿಶ್ವ ಬಂಧು ಮರುಳಸಿದ್ಧರು ಮನೆ ಮತ್ತು ಮನದ ದೇವರಾಗಿದ್ದಾರೆ. ಈ ಮೂಲಕ ಮಠವು ಮಕ್ಕಳಲ್ಲಿ, ಸಮಾಜದ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಇಂಥಹ ಕಾರ್ಯಕ್ರಮ ಇಲ್ಲಿ ನಿರಂತರವಾಗಿ ನಡೆಯಲಿ. ಇದಕ್ಕೆ ಶ್ರೀ ಮಠದ ಪೂಜ್ಯರು ಕೃಪೆ ತೋರಬೇಕು ಎಂದು ಮನವಿ ಮಾಡಿದರು.
ಬಸವಣ್ಣನವರ ಆಶಯದಂತೆ ನಡೆಯೋಣ
ಆರನೇ ತರಗತಿ ವಿದ್ಯಾರ್ಥಿನಿ ಪರಿಮಳಾ ಮಾತನಾಡಿ, ಬಸವಣ್ಣನವರ ಕಳಬೇಡ ಕೊಲಬೇಡ... ವಚನ ವಾಚಿಸಿ, ಭಾವಾರ್ಥ ಹೇಳಿದರು. ನಡೆದಂತೆ ನುಡಿ ಎಂದ ಬಸವಣ್ಣನವರ ಆಶಯದಂತೆ ನಾವೆಲ್ಲರೂ ನಡೆಯಬೇಕಿದೆ. ವಿದ್ಯಾರ್ಥಿದೆಸೆಯಿಂದಲೇ ವಚನಗಳಲ್ಲಿನ ಸಾರಗಳನ್ನು ಮೈಗೂಡಿಸಿಕೊಳ್ಳಬೇಕು. ಸರಳ ಕನ್ನಡದಲ್ಲಿರುವ ವಚನಗಳು ಬದುಕಿನ ದಾರಿದೀಪಗಳು ಎಂದರು.
ಸ್ಥಳೀಯ ಕಲಾವಿದರು, ಬಸವರಾಜಪ್ಪ, ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು. ಎ.ಜಿ.ಶೇಖರಪ್ಪ ಸ್ವಾಗತಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.