ತಮಸೋ ಮಾ ಜ್ಯೋತಿರ್ಗಮಯ..... ಓ ದೇವರೇ! ಕತ್ತಲೆಯಿಂದ ಬೆಳಕಿನಡೆಗೆ ಮುನ್ನಡೆಸು.......

  •  
  •  
  •  
  •  
  •    Views  

“ಓ ದೇವರೇ! ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸು” (ತಮಸೋ ಮಾ ಜ್ಯೋತಿರ್ಗಮಯ) ಎಂದು ಸಾವಿರಾರು ವರ್ಷಗಳಿಂದ ಭಾರತೀಯರು ದೇವರನ್ನು ಪ್ರಾರ್ಥಿಸುತ್ತಾ ಬಂದಿದ್ದಾರೆ. ಆದರೆ ಅದು ಎಷ್ಟರಮಟ್ಟಿಗೆ ಫಲಕಾರಿಯಾಗಿದೆ? ಕೋಟ್ಯಂತರ ಜನರು ಅತ್ಯಂತ ಶ್ರದ್ದಾಭಕ್ತಿಗಳಿಂದ ಮಾಡುತ್ತಾ ಬಂದ ಈ ಪ್ರಾರ್ಥನೆ ವ್ಯರ್ಥವಾಗಿ ಹೋಯಿತೇ? ದೇವರಿಗೆ ಈ ಪ್ರಾರ್ಥನೆಯನ್ನು ಕೇಳಿ ಅನುಗ್ರಹಿಸುವಷ್ಟು ವ್ಯವಧಾನವಿಲ್ಲವೇ? ಪ್ರಾರ್ಥನೆ ದೇವರ ಮನಸ್ಸನ್ನು ಬದಲಾಯಿಸುವಂತೆ ಮಾಡುವ ಪ್ರಯತ್ನ ಅಲ್ಲ; ನಮ್ಮ ಮನಸ್ಸನ್ನು ದೇವರು ಬದಲಾಯಿಸುವಂತೆ ಮಾಡುವ ಪ್ರಯತ್ನ (Prayer is not an attempt to change God”s mind, but an attempt to let God change our mind). ಈ ಲೇಖನ ಬರೆಯುವ ವೇಳೆಗೆ ಸರಿಯಾಗಿ ನಮ್ಮ ಬಾಲ್ಯ ಸ್ನೇಹಿತರಾದ ಪಿ.ಎಸ್.ಭಗವಾನ್ ಅವರಿಂದ ನಮ್ಮ ಮೊಬೈಲಿಗೆ ಬಂದ ಮೇಲ್ಕಂಡ ದೀಪಾವಳಿಯ ಶುಭಾಶಯ ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು: ಜನರು ಕತ್ತಲೆಯಿಂದ ಬೆಳಕಿನತ್ತ ಹೋಗುತ್ತಿದ್ದಾರೆಯೇ ಅಥವಾ ಬೆಳಕಿನಿಂದ ಕತ್ತಲೆಗೆ ಸರಿಯುತ್ತಿದ್ದಾರೆಯೇ ಅಥವಾ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ ಕತ್ತಲೆಯಿಂದ ಕತ್ತಲೆಗೇ ಹೆಜ್ಜೆ ಇಡುತ್ತಿದ್ದಾರೆಯೇ? 

ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ 
ಮತಾಪು-ಪಟಾಕಿ-ಸುರುಸುರು ಬತ್ತಿ - ಹೂಬಾಣ ಸುಟ್ಟಿದ್ದೇವೆ 
“ತಮಸೋ ಮಾ ಜ್ಯೋತಿರ್ಗಮಯ” ಎನ್ನುತ್ತ ಬರೀ 
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ...

ಅದರೂ ಹಣತೆ ಹಚ್ಚುತ್ತೇನೆ ನಾನೂ 
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ 
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು 
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ! - (ಜಿ.ಎಸ್.ಎಸ್ - ನನ್ನ ಹಣತೆ).

 

ಕಾಲಕಾಲಕ್ಕೆ ಹುಟ್ಟಿ ಬಂದ ಶರಣರು, ಸಂತರು, ದಾರ್ಶನಿಕರು ಈ “ನಾನು-ನೀನು” ಎಂಬ ಉಭಯ ಸಂಗವನಳಿದು ತಾನು ತಾನಾಗಿ ಬೆಳಗಿನೊಳಗಣ ಮಹಾಬೆಳಗಾಗಿ ನಿರಂತರ ಕಂಗೊಳಿಸುವ, ಉರಿಯುಂಡ ಕರ್ಪೂರದಂತೆ ಬಯಲಾಗುವ ಸತ್ಪಥವನ್ನು ಮನುಷ್ಯನಿಗೆ ತೋರಿಸಿಕೊಡುವ ವಿಚಾರಜ್ಯೋತಿಯನ್ನು ಹಚ್ಚುತ್ತಲೇ ಬಂದಿದ್ದಾರೆ. ಆದರೆ ಜನರು ಆ ದಾರಿಯಲ್ಲಿ ಕ್ರಮಿಸುವ ಬದಲು ಅಡ್ಡದಾರಿ ಹಿಡಿಯುತ್ತಲೇ ಬಂದಿದ್ದಾರೆ. ನಮ್ಮ ಈ ದುರವಸ್ಥೆಗೆ ಆ ದೇವರಾಗಲೀ, ದಾರ್ಶನಿಕರಾಗಲೀ ಕಾರಣರಲ್ಲ; ನಮ್ಮ ಬುದ್ದಿಗೆ ಹಿಡಿದಿರುವ ಮಂಕೇ ಕಾರಣ. “ಆನೆಯ ಜರಿದು ಕೋಣನ ಏರಿದರೆ ಆರೇನು ಮಾಡುವರು?” ಎನ್ನುತ್ತಾರೆ ಅನುಭವಿಗಳು. ಸರಿಯಾದ ದಾರಿಯಲ್ಲಿ ನಡೆಯಲು ಬೆಳಕು ಬೇಕು. ಹಾಗೆಯೇ ಬದುಕಿನ ದಾರಿಯನ್ನು ಕಂಡುಕೊಳ್ಳಲು ಅರಿವಿನ ಬೆಳಕು ಬೇಕು. ಅಂತಹ ಅರಿವಿನ ಬೆಳಕನ್ನು ಹೊತ್ತ ಹಣತೆ ಬಸವಣ್ಣನವರ ಕಾಲದಲ್ಲಿ ಕಲ್ಯಾಣವಾಗಿತ್ತು. 

“ಕಲ್ಯಾಣವೆಂಬ ಪ್ರಣತೆಯಲ್ಲಿ 
ಭಕ್ತಿರಸವೆಂಬ ತೈಲವನೆರೆದು, 
ಆಚಾರವೆಂಬ ಬತ್ತಿಗೆ 
ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು 
ತೊಳಗಿ ಬೆಳಗಿದ್ದಿತಯ್ಯಾ ಶಿವನ ಪ್ರಕಾಶ” ಎನ್ನುತ್ತಾರೆ ಅಲ್ಲಮಪ್ರಭು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು “ಆಚಾರವೆಂಬ ಬತ್ತಿ”. ಅನುಭಾವಿಗಳು ಹಚ್ಚಿದ ವಿಚಾರಜ್ಯೋತಿಗೆ ಕಾಲಕ್ರಮೇಣ ಅವರ ಅನುಯಾಯಿಗಳ ಆಚರಣೆಯಲ್ಲಿ ಮಂಕು ಹಿಡಿಯುತ್ತದೆ. ಬತ್ತಿಗೆ ಹಿಡಿದ ಮಂಕನ್ನು ತಿದ್ದಿ ತೀಡದಿದ್ದರೆ ಯಾವ ಜ್ಯೋತಿ ತಾನೆ ಬೆಳಗೀತು! ಮಾತು ಜ್ಯೋತಿರ್ಲಿಂಗವಾಗುವುದು ಕೇವಲ ಮಾತಿನಿಂದಲ್ಲ, “ಆಚಾರ”ದಿಂದ ಅಂದರೆ ನಮ್ಮ ನಡೆ ಗಟ್ಟಿಗೊಂಡಾಗ! ಮಹಾಭಾರತದ ಕುರುಕ್ಷೇತ್ರ ರಣರಂಗವಾದರೂ ಒಂದು ಧರ್ಮಕ್ಷೇತ್ರವಾಗಿತ್ತು. ಇಂದು ಧರ್ಮಕ್ಷೇತ್ರವೇ ಕುರುಕ್ಷೇತ್ರವಾಗಿ ಪರಿಣಮಿಸಿ ಇಡೀ ಜಗತ್ತೇ ಕಾದಾಡುವಂತಾಗಿದೆ. ಹೀಗಾಗಿ ಭಗವದ್ಗೀತೆಯ ಆರಂಭದ ಶ್ಲೋಕವಾದ “ಧರ್ಮಕ್ಷೇತ್ರೇ ಕುರುಕ್ಷೇತ್ರೇ” ಎಂಬುದನ್ನು ಈ ಕಾಲಕ್ಕೆ ಅನ್ವಯಿಸುವಂತೆ ತಿರುವು ಮುರುವಾಗಿ ಬದಲಾಯಿಸಿ ಕೆಳಕಂಡಂತೆ ಹೇಳಬೇಕೆನಿಸುತ್ತದೆ. 

ಕುರುಕ್ಷೇತ್ರೇ ಧರ್ಮಕ್ಷೇತ್ರೇ ಸಮವೇತಾ ನರಾಧಮಾಃ | 
ಮತಾಂಧಾಃ ಧರ್ಮಭ್ರಷ್ಟಾಶ್ಚ ಕಿಮಕುರ್ವತ “ಮೀಡಿಯ” ||

ಇಂದು ಧರ್ಮಗಳು ಧರ್ಮಗಳಾಗಿ ಉಳಿಯದೆ ಮತಧರ್ಮಗಳಾಗಿ ಪರಸ್ಪರ ಶತ್ರುಗಳಂತೆ ಸಂಘರ್ಷಕ್ಕೆ ನಿಂತಿವೆ. ಮನೆಯೊಳಗಿನ ದೀಪವೇ ಮನೆಯವರ ಬೇಜವಾಬ್ದಾರಿಯಿಂದ ಬೆಂಕಿಯಾಗಿ ಹತ್ತಿ ಉರಿದು ಮನೆಯನ್ನೇ ಸುಡುವಂತಾಗಿದೆ! 

ಕೆಲವು ವರ್ಷಗಳ ಹಿಂದೆ ಒಂದು ಪ್ರಸಿದ್ಧ  ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ ಉದ್ಘಾಟನಾ ಸಮಾರಂಭವಿತ್ತು. ಆಗಿನ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣ ಆಗಮಿಸಿದ್ದರು. ಸಾಂಪ್ರದಾಯಿಕವಾಗಿ ಸಮಾರಂಭದ ಉದ್ಘಾಟನೆಯನ್ನು ಮಾಡಲು ವೇದಿಕೆಯ ಮೇಲೆ ಸುಂದರವಾದ ಹಾಗೂ ಅಲಂಕೃತವಾದ ಒಂದು ದೊಡ್ಡ ದೀಪವನ್ನು ಇಡಲಾಗಿತ್ತು. ಕರ್ನಾಟಕದಲ್ಲಿ ನಡೆಯುವ ಸಾರ್ವಜನಿಕ ಸಭೆಗಳ ಒಂದು ವೈಶಿಷ್ಟ್ಯವೆಂದರೆ ಸಮಾರಂಭದ ಉದ್ಘಾಟಕರು ಮತ್ತು ಇತರೆ ಅತಿಥಿಗಳು ದೀಪ ಹಚ್ಚುವುದರಲ್ಲಿ ಪರಸ್ಪರ ತೋರುವ ಸೌಜನ್ಯ ಮತ್ತು ಸಹಕಾರ. ದೀಪ ಬೆಳಗಿಸುವುದರಲ್ಲಿ ಕರ್ನಾಟಕದಲ್ಲಿರುವಷ್ಟು “ಪ್ರಜಾಪ್ರಭುತ್ವ” ಬೇರಾವ ರಾಜ್ಯಗಳಲ್ಲಿಯೂ ಇರುವಂತೆ ತೋರುವುದಿಲ್ಲ, ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾದ ಪ್ರಕಾರ ಅಧಿಕೃತವಾಗಿ ಉದ್ಘಾಟನೆ ಮಾಡಬೇಕಾದ ಪ್ರತಿಷ್ಠಿತ ವ್ಯಕ್ತಿ ಒಬ್ಬರೇ ದೀಪ ಬೆಳಗಿಸುವುದಿಲ್ಲ. ಅವರು ಒಂದು ಬತ್ತಿಯನ್ನು ಮಾತ್ರ ಹೊತ್ತಿಸಿ ಪಕ್ಕದಲ್ಲಿ ನಿಂತಿರುವ ಇತರ ಗಣ್ಯಮಾನ್ಯ ವ್ಯಕ್ತಿಗಳಿಗೆ ಉಳಿದ ಬತ್ತಿಗಳನ್ನು ಹಚ್ಚಲು ಅನುವು ಮಾಡಿಕೊಡುತ್ತಾರೆ. ಕೆಲವೊಮ್ಮೆ ಹತ್ತಿದ ಬತ್ತಿಯನ್ನೇ ಮತ್ತೆ ಹತ್ತಿಸುವ ಶಾಸ್ತ್ರವೂ ನಡೆಯುತ್ತದೆ. ಛಾಯಾಗ್ರಾಹಕರ ಕೋರಿಕೆ ಮೇರೆಗೆ ಹತ್ತಿಸಿದಂತೆ ನಟಿಸುವ “ನಟನಾ ಕೌಶಲ”ವೂ ಪ್ರದರ್ಶಿತವಾಗುತ್ತದೆ. ಬಹುಶಃ ಎಂದೂ ಮನೆಯಲ್ಲಿ ದೇವರಮನೆಯ ದೀಪ ಹಚ್ಚಲು ಮುಂದಾಗದ “ನಿಷ್ಠಾವಂತ” ಕಾರ್ಯಕರ್ತರು ದೀಪದ ಬತ್ತಿಯನ್ನು ಒತ್ತಿ ಒತ್ತಿ ತಮ್ಮ ಕೈಬೆರಳು ಜಿಡ್ಡುಗಟ್ಟಿದರೂ ಲೆಕ್ಕಿಸದೆ ಮುಖ್ಯ ಅತಿಥಿಗಳು ದೀಪ ಹಚ್ಚಲು ಕಷ್ಟಪಡುವುದನ್ನು ತಪ್ಪಿಸಲು ಸಹಾಯಕ್ಕೆ ಮುಂದಾಗುತ್ತಾರೆ. ಅದು ಆ ಅತಿಥಿಗಳ ಮೇಲಿನ ಅವರ ನಿಷ್ಠೆಯೋ ಅಥವಾ ಎದುರಿಗಿರುವ ಛಾಯಾಗ್ರಾಹಕರ ಮೇಲಿನ ನಿಷ್ಠೆಯೋ ಆ ದೇವರಿಗೇ ಗೊತ್ತು!

ಕಾರ್ಯಕ್ರಮದ ನಿರ್ವಾಹಕರು “ಈಗ ಸನ್ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಿಸುವುದರ ಮೂಲಕ ಸಮಾರಂಭದ ಉದ್ಘಾಟನೆಯನ್ನು ಮಾಡುತ್ತಾರೆ” ಎಂದು ಪ್ರಕಟಿಸಿದಾಗ ನಮ್ಮನ್ನೂ ಒಳಗೊಂಡಂತೆ ವೇದಿಕೆಯ ಮೇಲಿದ್ದ ಎಲ್ಲ ಗಣ್ಯವ್ಯಕ್ತಿಗಳೂ ಎದ್ದು ಹೋಗಿ ದೀಪದ ಸುತ್ತ ನಿಂತೆವು. ಉದ್ಘಾಟನೆಯನ್ನು ಮಾಡಬೇಕಾಗಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮೊದಲು ದೀಪ ಹಚ್ಚಲು ಮುಂದಾಗದೆ ಕಾರ್ಯಕರ್ತರು ಕೊಟ್ಟ ಉರಿಯುವ ಮೇಣದ ಬತ್ತಿಯನ್ನು ಸೌಜನ್ಯದಿಂದ ಪಕ್ಕದಲ್ಲಿದ್ದ ನಮಗೆ ಹಸ್ತಾಂತರಿಸಿದರು. ನಾವೂ ಸಹ ಅಷ್ಟೇ ಸೌಜನ್ಯದಿಂದ ನಮ್ಮ ಪಕ್ಕದಲ್ಲಿದ್ದ ಮತ್ತೊಂದು ಪ್ರತಿಷ್ಠಿತ ಮಠದ ಸ್ವಾಮಿಗಳಿಗೆ ಹಸ್ತಾಂತರಿಸಲು ಪ್ರಯತ್ನಿಸಿದೆವು. ಆದರೂ ಅವರು ತಾವೇ ಹಚ್ಚಿ ಎಂದು ಒತ್ತಾಯಪಡಿಸಿದ್ದರಿಂದ ಅನಿವಾರ್ಯವಾಗಿ ನಾವೇ ದೀಪ ಹಚ್ಚಬೇಕಾಯಿತು. ಬಹಳ ವರ್ಷಗಳ ಹಿಂದೆ “ಪಹಲೇ ಆಪ್, ಪಹಲೇ ಆಪ್” ಎಂದು ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ದಿವಂಗತ ಅಧ್ಯಕ್ಷ ಭುಟ್ಟೋರವರ ಮಧ್ಯೆ ಯಾವುದೋ ಒಂದು ಸಭೆಯಲ್ಲಿ ನಡೆದ ಸನ್ನಿವೇಶ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ನೆನಪಾಯಿತು. ಆ ಸ್ವಾಮಿಗಳ ಸೌಜನ್ಯಕ್ಕೆ ಮನಸೋತು ದೀಪ ಹಚ್ಚಿಯಾದ ಮೇಲೆ ಮತ್ತೆ ಅವರಿಗೆ ದೀಪ ಹಚ್ಚಲು ಮೇಣದ ಬತ್ತಿಯನ್ನು ಕೊಡಲು ಮುಂದಾದಾಗ ಸ್ಪಷ್ಟವಾಗಿ ನಿರಾಕರಿಸಿದರು. ಸಭೆಯಲ್ಲಿ ಕುಳಿತುಕೊಂಡ ಮೇಲೆ ಅವರೊಂದಿಗೆ ನಡೆದ ಸಂಭಾಷಣೆಯಿಂದ ಅವರು ಸಭೆ-ಸಮಾರಂಭಗಳಲ್ಲಷ್ಟೇ ಅಲ್ಲ ಪೂಜೆ ಮಾಡುವಾಗಲೂ ದೀಪ ಹಚ್ಚಬಾರದೆಂಬ ನಿರ್ಧಾರ ಕೈಗೊಂಡಿರುವುದಾಗಿ ಅವರ ಬಾಯಿಂದಲೇ ಕೇಳಿ ಚಕಿತರಾದೆವು. ಅದಕ್ಕೆ ಅವರು ಕೊಟ್ಟ ಕಾರಣ ಬಡವರ ಗುಡಿಸಲಿನಲ್ಲಿ ರಾತ್ರಿ ಒಂದು ಹೊತ್ತು ಲಾಟೀನು ಉರಿಸಲೂ ಎಣ್ಣೆ ಇಲ್ಲದಿರುವಾಗ ಈ ರೀತಿ ಸಭೆ ಸಮಾರಂಭಗಳಲ್ಲಿ, ದೀಪಾವಳಿ, ಕಾರ್ತೀಕ ಮತ್ತಿತರ ಹಬ್ಬ ಹರಿದಿನಗಳಲ್ಲಿ ದೀಪ ಹಚ್ಚಲು ಎಣ್ಣೆ ಬಳಸುವುದು ದುರುಪಯೋಗ. ಇದನ್ನು ಕೇಳಿ ಮುಖ್ಯ ಅತಿಥಿಗಳ ಭಾಷಣದ ಕಡೆ ಗಮನ ಕೊಡಲಾಗದೆ ಸ್ವಾಮಿಗಳ ವಿಚಾರಧಾರೆಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಚಿಂತನೆ ನಡೆದಿತ್ತು. ಸ್ವಾಮಿಗಳಿಗೆ ಬಡವರ ಬಗ್ಗೆ ಇರುವ ಕಾಳಜಿ ಮೆಚ್ಚಬೇಕಾದ್ದೇ. ಆದರೆ ಎಂತಹ ಕಡುಬಡವನಾದರೂ ತಲೆಗೆ ಹಚ್ಚಲು ಎಣ್ಣೆ ಇಲ್ಲದಿದ್ದರೂ ದೇವರಿಗೆ ದೀಪಹಚ್ಚದಿರುವಷ್ಟು ಭಕ್ತಿಯ ಬಡತನ ನಮ್ಮ ದೇಶದಲ್ಲಿ ಖಂಡಿತಾ ಇಲ್ಲ. ಬಡವರ ಬಗ್ಗೆ ಅಷ್ಟೊಂದು ಕಾಳಜಿಯುಳ್ಳ ಸ್ವಾಮಿಗಳು ಲಕ್ಷಣವಾಗಿ ಮಠದಲ್ಲಿರಬೇಕು. ಪರದೇಶಗಳಿಗೆ ಏಕೆ ವಿಮಾನದಲ್ಲಿ ಹೋಗುತ್ತಾರೆ? ದಿನಬೆಳಗಾದರೆ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಈ ದುಬಾರಿ ಕಾಲದಲ್ಲಿ ನಿತ್ಯವೂ ಕಾರಿನಲ್ಲಿ ಓಡಾಡಲು ಮನಸ್ಸಾದರೂ ಹೇಗೆ ಬರುತ್ತದೆ? ಸ್ವಾಮಿಗಳಾದವರೇ ಹೀಗೆ ದೇವರಿಗೆ ದೀಪ ಹಚ್ಚುವುದಿಲ್ಲವೆಂದರೆ ಈ ದೇಶಕ್ಕೆ ರಾಜಕಾರಣಿಗಳು ಬೆಂಕಿ ಹಚ್ಚದೆ ಇರುತ್ತಾರೆಯೇ? ಈ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ! ಆ ಕಷ್ಟದ ನಿವಾರಣೆಗೆಂದೇ ಇತ್ತೀಚೆಗೆ ದೀಪದ ಪ್ರತಿಯೊಂದು ಬತ್ತಿಯ ಮೇಲೂ ಕರ್ಪೂರದ ಬಿಲ್ಲೆ ಇಡುವ ಪದ್ಧತಿಯನ್ನು ಕೆಲವೊಂದು ಅನುಭವಿ ಕಾರ್ಯಕರ್ತರು ಜಾರಿಗೆ ತಂದಿದ್ದಾರೆ. ಇಷ್ಟೆಲ್ಲಾ ಪ್ರಯತ್ನ ಮಾಡಿದ ಮೇಲೂ ಹಚ್ಚಿದ ಕೆಲವೇ ಸೆಕೆಂಡುಗಳಲ್ಲಿ ದೀಪ ಆರಿ ಮಂಕು ಕವಿದಿರುತ್ತದೆ! ಇದು ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವ ಸಂಕೇತವಾಗುವುದರ ಬದಲು ನಮ್ಮ ಜನ ಬೆಳಕಿನಿಂದ ಕತ್ತಲೆಯ ಕಡೆಗೆ ಧಾವಿಸುತ್ತಿರುವುದರ ಸಂಕೇತವಿರಬಹುದೇ? ಅದೇನೇ ಇರಲಿ, ಎಲ್ಲವನ್ನೂ ವ್ಯಾವಹಾರಿಕವಾಗಿ ಲೆಕ್ಕಾಚಾರ ಹಾಕುತ್ತಾ ದೀಪ ಹಚ್ಚಲು ನಿರಾಕರಿಸುವುದು ಸರಿಯೇ? ತಂದೆತಾಯಿಗಳು ದೀಪಾವಳಿಯಲ್ಲಿ ಚಿಕ್ಕ ಮಕ್ಕಳ ಕೈಗೆ ಬಣ್ಣ ಬಣ್ಣದ ಬೆಳಕನ್ನು ನೀಡುವ ಮತಾಪಿನ ಪೊಟ್ಟಣವನ್ನು ಕೊಡುತ್ತಾರೆ. ಮಕ್ಕಳು ಕಡ್ಡಿ ಗೀರಿ ಆ ಬಣ್ಣದ ಬೆಳಕಿನಲ್ಲಿ ಓರಿಗೆಯ ಮಕ್ಕಳೊಂದಿಗೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾರೆ. ಹತ್ತಾರು ಕಡ್ಡಿಗಳನ್ನು ಗೀಚುವುದರೊಳಗೆ ಹೆಚ್ಚಿನ ಬೆಲೆಯ ಆ ಮತಾಪಿನ ಪೊಟ್ಟಣ ಮುಗಿದುಹೋಗುತ್ತದೆ ಎಂದು ಅದರ ಬದಲು ನೂರಾರು ಕಡ್ಡಿಗಳಿರುವ ಕಡಿಮೆ ಬೆಲೆಯ ಬೆಂಕಿಪೊಟ್ಟಣವನ್ನು ಕೊಟ್ಟರೆ ಅದು ಬೀಡಿ-ಸಿಗರೇಟು ಸೇದುವ ಜನರಿಗೆ ಸರಿಯಾಗುತ್ತದೆಯೇ ಹೊರತು ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆಯೇ? 

ದೀಪಾವಳಿಯ ಸಂದರ್ಭದಲ್ಲಿ ಜೂಜಾಡುವ ಒಂದು ಪದ್ಧತಿ ಇದೆ. ಅದು ಹೇಗೆ ಬಂತೋ ತಿಳಿಯದು. ಋಗ್ವೇದದ ದಶಮ ಮಂಡಲದ 34ನೆಯ ಮಂತ್ರದಲ್ಲಿ ಒಂದು ರೋಚಕವಾದ ಪ್ರಸಂಗ ದಾಖಲಾಗಿದೆ. ಮಂತ್ರದ ಹೆಸರು “ಕಿತವ” ಅಂದರೆ “ಜೂಜುಗಾರ”. ಆ ಮಂತ್ರದಲ್ಲಿ ಉಲ್ಲೇಖಿತವಾದ ಜೂಜುಗಾರ ತನ್ನ ಜೀವನಾನುಭಾವವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾನೆ. ಅವನಿಗೆ ಹೆಂಡತಿಯ ಮೇಲಿನ ಪ್ರೀತಿಗಿಂತ ಪಗಡೆಯಾಟದಲ್ಲಿ ಬಳಸುವ ದಾಳಗಳ ಮೇಲೆಯೇ ಪ್ರೀತಿ ಜಾಸ್ತಿಯಂತೆ, ಹೆಂಡತಿ ಕೋಪಿಸಿಕೊಂಡಂತೆ ಅವು ಎಂದೂ ಅವನ ಮೇಲೆ ಕೋಪಿಸಿಕೊಂಡಿಲ್ಲವಂತೆ. ಆ ದಾಳಗಳ ಮೇಲಿನ ಪ್ರೀತಿಯ ಕಾರಣದಿಂದಾಗಿ ಅವನು ಹೆಂಡತಿ ಮತ್ತು ಮಕ್ಕಳಿಂದ ದೂರಾಗುತ್ತಾನೆ. ಮಗ ಜೂಜುಗಾರನೆಂದು ತಿಳಿದು ತಾಯಿಯೂ ಅವನನ್ನು ತುಂಬಾ ದ್ವೇಷಿಸುತ್ತಾಳೆ. ಜೂಜಾಡುವುದನ್ನು ಬಿಡಲು ನಿರ್ಧರಿಸಿದರೆ ಸ್ನೇಹಿತರೂ ದೂರಾಗಿ ಏಕಾಂಗಿಯಾಗುತ್ತೇನೆಂಬ ಭಯ ಅವನಿಗೆ. ದುಬಾರಿ ಬೆಲೆಯ ಕುದುರೆಯು ಮುದಿವಯಸ್ಸಿನಲ್ಲಿ ಮೂಲೆಗುಂಪಾದ ಮೇಲೆ ನಿರ್ಲಕ್ಷ್ಯಕ್ಕೆ ಒಳಗಾದ ದುಃಸ್ಥಿತಿ ಅವನದಾಗುತ್ತದೆ. ಒಂಟಿತನ, ಸಾಲದ ಬಾಧೆ, ಆತಂಕಗಳಿಂದ ತತ್ತರಿಸಿ ದಿಕ್ಕುದೆಸೆ ಇಲ್ಲದೆ ತಿರುಗಾಡುತ್ತಿರುತ್ತಾನೆ. ಆದರೂ ರಾಜಮಹಾರಾಜರ ಕೋಪಕ್ಕೂ ಜಗ್ಗದ, ಅವರ ಗೌರವಾದರಗಳಿಗೆ ಪಾತ್ರವಾದ ಪಗಡೆಯಾಟದ ದಾಳಗಳನ್ನು ಮಾತ್ರ ಕೈಬಿಡಲು ಅವನಿಗೆ ಮನಸ್ಸು ಬರುವುದಿಲ್ಲ. ಈ ಹೊಯ್ದಾಟದಲ್ಲಿ ಆ ಜೂಜುಗಾರ ಒಮ್ಮೆ ಪಗಡೆಯಾಟ ಆಡಿ ಜೇಬಿನಲ್ಲಿದ್ದ ಎಲ್ಲ ಹಣವನ್ನು ಕಳೆದುಕೊಂಡುಬಿಡುತ್ತಾನೆ. ಮೈಮೇಲಿದ್ದ ಆಭರಣಗಳನ್ನೂ ಒತ್ತೆಯಿಟ್ಟು ಜೂಜಾಡಿ ಸೋತು ಅವುಗಳನ್ನೂ ಕಳೆದುಕೊಳ್ಳುತ್ತಾನೆ. ಆದರೂ ಪಗಡೆಯಾಟದ ದಾಳಗಳ ಮೇಲಿನ ಅವನ ಪ್ರೀತಿ ಹೋಗುವುದಿಲ್ಲ. ಎದುರಾಳಿಗಳಿಗೆ ಮುಂದಿನ ಆಟಗಳಲ್ಲಿ ಸೋತರೆ ಮನೆಯ ಟ್ರಜರಿಯಲ್ಲಿರುವ ಹಣ ಮತ್ತು ಆಭರಣಗಳನ್ನು ಕೊಡುವುದಾಗಿ ಹೇಳಿ ಒಪ್ಪಿಸಿ ಆಟವಾಡುತ್ತಾನೆ. ಅವನ ದುರದೃಷ್ಟಕ್ಕೆ ಆ ಎಲ್ಲ ಆಟಗಳಲ್ಲಿಯೂ ಸೋತು ಬಿಡುತ್ತಾನೆ. ಎದುರಾಳಿಗಳು ಅವನನ್ನು ಮನೆಗೆ ಎಳೆದುಕೊಂಡು ಬರುತ್ತಾರೆ. ಅವನು ಪಗಡೆಯಾಟದಲ್ಲಿ ಸೋತಿದ್ದರಿಂದ ಮನೆಯ ಟ್ರಜರಿಯಲ್ಲಿರುವ ಹಣ ಮತ್ತು ಆಭರಣಗಳನ್ನು ತೆಗೆದುಕೊಂಡು ಹೋಗಲು ಬಂದಿರುವುದಾಗಿ ಹೇಳುತ್ತಾರೆ. ಅವನ ಹೆಂಡತಿ ಅವನನ್ನು ಗುರುತಿಸಿದರೂ ತನ್ನ ಗಂಡ ಎಂದು ಒಪ್ಪಿಕೊಂಡರೆ ಮನೆಯ ಟ್ರಜರಿ ಖಾಲಿಯಾಗುತ್ತದೆ ಎಂದು ಯೋಚಿಸಿ “ಇವನು ಯಾರೋ ನನಗೆ ಗೊತ್ತಿಲ್ಲ, ನೀವು ತಪ್ಪಾಗಿ ನಮ್ಮ ಮನೆಗೆ ಬಂದಿದ್ದೀರಿ” ಎನ್ನುತ್ತಾಳೆ. ಇದೇ ರೀತಿ ಅವನ ತಂದೆ, ತಾಯಿ ಮತ್ತು ಅಣ್ಣತಮ್ಮಂದಿರೂ ಸಹ ಇವನು ಯಾರೋ ಗೊತ್ತಿಲ್ಲವೆಂದು ನಿರಾಕರಿಸಿ ಮನೆಯೊಳಗೆ ಬಿಟ್ಟುಕೊಳ್ಳದೆ “ಇವನನ್ನು ಹೆಡೆಮುರಿ ಕಟ್ಟಿ ಎಳೆದುಕೊಂಡು ಹೋಗಿರಿ” ಎಂದು ಥಟ್ಟನೆ ಮನೆಯ ಬಾಗಿಲು ಹಾಕುತ್ತಾರೆ. (ಪಿತಾ-ಮಾತಾ-ಭ್ರಾತರ ಏನಮಾಹುಃ ನ ಜಾನೀಮಃ ನಯತ ಬದ್ದಮೇತಂ - ಋಗ್ವೇದ 10.34.4). ಅವರ ಈ ಮಾತನ್ನು ಕೇಳಿ ಜೂಜುಗಾರನ ಮನಸ್ಸಿಗೆ ತುಂಬಾ ಆಘಾತವುಂಟಾಗುತ್ತದೆ. ತನ್ನ ಕಣ್ಣೆದುರಿಗೇ ತನ್ನ ಒಡಹುಟ್ಟಿದವರು, ತನ್ನ ಹೆತ್ತ ತಂದೆ-ತಾಯಿಗಳು, ತನ್ನ ಮಡದಿ-ಮಕ್ಕಳು ತನ್ನನ್ನು ಗುರುತಿಸಿಯೂ ಅಪರಿಚಿತರಂತೆ ವರ್ತಿಸಿ ತನ್ನನ್ನು ತಿರಸ್ಕಾರದೃಷ್ಟಿಯಿಂದ ನೋಡಿದ ರೀತಿ ಅವನನ್ನು ಘಾಸಿಗೊಳಿಸುತ್ತದೆ. ಇದಕ್ಕೆಲ್ಲಾ ಕಾರಣ ಒಂದು ಕಡೆ ತನ್ನ ದುರ್ವ್ಯಸನವಾದ ಪಗಡೆಯಾಟ ಎಂದು ಮನವರಿಕೆಯಾದರೂ, ಮತ್ತೊಂದು ಕಡೆ ತನ್ನನ್ನು ಉಳಿಸಿಕೊಳ್ಳುವುದಕ್ಕಿಂತ ಟ್ರಜರಿಯಲ್ಲಿರುವ ಹಣವನ್ನು ಉಳಿಸಿಕೊಳ್ಳುವುದೇ ಇವರಿಗೆ ಮುಖ್ಯವಾಯಿತಲ್ಲಾ ಎಂದು ಜಿಗುಪ್ಸೆಗೊಳ್ಳುತ್ತಾನೆ. “ಈ ಪಗಡೆಯಾಟದಿಂದ ನಾನು ಹಾಳಾದಂತೆ ನೀವಾರೂ ಜೂಜಾಡಿ ಹಾಳಾಗಬೇಡಿರಿ. ಕಷ್ಟಪಟ್ಟು ಜಮೀನನ್ನು ಉಳುಮೆ ಮಾಡಿ, ಪಶುಪಾಲನೆ ಮಾಡಿ ಬಂದ ಅಲ್ಪ ಸಂಪಾದನೆಯಲ್ಲೇ ಮಡದಿ ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸಿರಿ” ಎಂದು ಉಪದೇಶಿಸುತ್ತಾನೆ: 

ಅಕ್ಷೈರ್ಮಾ ದೀವ್ಯಃ, ಕೃಷಿಮಿತ್ ಕೃಷಸ್ವ, ವಿತ್ತೇ ರಮಸ್ವ ಬಹುಮನ್ಯಮಾನಃ | 
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿಚಷ್ಟೇ ಸವಿತಾಯಮರ್ಯಃ || - (ಋಗ್ವೇದ 10.34.13).

ಸಹೃದಯ ಓದುಗರೇ! ಎಷ್ಟೇ ದೀಪ ಉರಿಸಿದರೂ “ದೀಪದ ಬುಡದಲ್ಲಿಯೇ ಕತ್ತಲು” ಅಲ್ಲವೆ? ಪಟಾಕಿಗಳ ಅಬ್ಬರದಲ್ಲಿ ಮರೆಯದೆ ನಮ್ಮೊಳಗಿರುವ ಕತ್ತಲನ್ನು ಓಡಿಸುವ ಪ್ರಯತ್ನ ಮಾಡಬೇಕಲ್ಲವೆ? ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ