ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ ಸಾಗಬೇಕಿದೆ : ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ: ಕೊಂಬು, ಕಹಳೆ ಮೊಳಗಿಸಿ, ನಗಾರಿ ಬಾರಿಸಿ ದೀಪ ಬೆಳಗಿಸುವ ಹಬ್ಬ ದೀಪಾವಳಿ. ಆದರೆ ಈಗ ಪಟಾಕಿ ಆವಳಿಯ ಹಬ್ಬವಾಗಿದೆ. ಪಟಾಕಿ ಪರಿಸರವನ್ನು, ಆರೋಗ್ಯವನ್ನು ಮಲೀನ ಮಾಡುವ ಆವಳಿ ಹೇಗೆ ನುಸುಳಿಕೊಂಡಿದೆ ಎನ್ನುವುದು ವಿಷಾದನೀಯ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು.
ದೀಪಾವಳಿ ಹಬ್ಬದ ಅಂಗವಾಗಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಐಕ್ಯಮಂಟಪದಲ್ಲಿ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.
ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ, ಮೃತ್ಯುದಿಂದ ಅಮೃತತ್ವದ ಕಡೆಗೆ ನಡೆಯಬೇಕೆಂಬುದು ಉಪನಿಷತ್ತಿನ ಸಂದೇಶ. ಬೆಳಕು ಜ್ಞಾನದ ಸಂಕೇತವಾದರೆ, ಕತ್ತಲು ಅಜ್ಞಾನದ ಸಂಕೇತ. ಭಾರತೀಯರು ಈ ಸಂದೇಶವನ್ನು ಪ್ರಾಚೀನ ಕಾಲದಿಂದಲೂ ಪರಿಪಾಲನೆ ಮಾಡಿಕೊಂಡು ಬಂದಿದ್ದಾರೆ. ಪುರಾಣಗಳಲ್ಲಿ ಬರುವ ತಾರಾಕಾಸುರ, ನರಕಾಸುರ, ರಾವಣಾಸುರರೆಂಬ ರಾಕ್ಷಸರ ವಧೆಯ ಹಿನ್ನೆಲೆಯಲ್ಲಿ ಈ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಆದರೆ ಈಗಲೂ ಮನುಷ್ಯರಲ್ಲಿ. ಅಸುರೀಯ ಗುಣಗಳು ಇನ್ನಷ್ಟು ತೀವ್ರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಸಿರಿಗೆರೆಯ ಮಠದ ಪರಿಸರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಸ್ವಾಮಿಗಳಿಗೆ ಕಾಣಿಕೆ ಕೊಟ್ಟು ನಮಸ್ಕರಿಸಿದಾಗ ಇವರು ಸಿರಿಗೆರೆ ಮಠದ ಶಿಷ್ಯರು ಎಂಬ ನಂಬಿಕೆ ತುಂಬಾ ವ್ಯಾಪಕವಾಗಿದೆ. ಹಾಗೆಯೇ ಸಿರಿಗೆರೆಯಲ್ಲಿ ಓದಿದ ವಿದ್ಯಾರ್ಥಿಗಳು ಸದ್ಗುಣಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ಕಿವಿಮಾತು ಹೇಳಿದರು.
ದೀಪ ಹಚ್ಚುವವರಿಗಿಂತ ಬೆಂಕಿ ಹಚ್ಚುವವರ ಸಂಖ್ಯೆಯೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾವೇ ರಚಿಸಿದ `ಮತ್ಸರದ ಬತ್ತಿ’ ಎಂಬ ಕವಿತೆಯನ್ನು ಈ ಸಂದರ್ಭದಲ್ಲಿ ವಾಚಿಸಿದ್ದು ಮಾರ್ಮಿಕವಾಗಿತ್ತು.
ಹತ್ತಿ ಉರಿಯುತಿದೆ ಸುತ್ತಲೂ ಮತ್ಸರದ ಸುರುಸುರು ಬತ್ತಿ
ಹಚ್ಚಲಾದೀತೇ ಅದರಿಂದ ಮತ್ತೊಂದು ಹಣತೆಯ ಬತ್ತಿ!
ಹಣತೆ ಹಣತೆಯ ಕೂಡಿದರೆ ಕಂಗೊಳಿಸುವುದು ಜ್ಯೋತಿ
ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ
ಯಾರ ಬದುಕಿನ ಅಂಗಳದಲ್ಲಿ ಯಾರು ಇಡುವರೋ ಬತ್ತಿ
ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಯುಕ್ತಿ!
ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ
ಈ ಸಂದರ್ಭದಲ್ಲಿ “ವಿಶ್ವಬಂಧು ಮರುಳಸಿದ್ಧ"ನ ಪ್ರತಿಮೆ ದಾನಿ ದಾವಣಗೆರೆಯ ಯು.ಜಿ.ಶಿವಕುಮಾರ್ ಕುರುಡಿ ಅವರನ್ನು ಶ್ಲಾಘಿಸಿದರು. ಪರಮಪೂಜ್ಯರು ಆಗಮಿಸುತಿದ್ದಂತೆ ಶ್ರೀಮಠದ ಮುಂಭಾಗದಲ್ಲಿ ರಂಗೋಲಿ ಹಾಕಿ, ದೀಪ ಹಚ್ಚಿ ಸಿಂಗರಿಸಲಾಗಿತ್ತು. ಪರಮಪೂಜ್ಯರು ಗ್ರಾಮದ ಜನತೆಗೆ ಹಣತೆ ನೀಡಿದರು. ಮಹಿಳೆಯರು, ಚಿಕ್ಕಮಕ್ಕಳಾದಿಯಾಗಿ ಹಣತೆಯನ್ನು ಮನೆಗಳಿಗೆ ತೆಗೆದುಕೊಂಡು ಹೋದರು. ತಮ್ಮ ಮನೆಗಳಲ್ಲಿ ಹಣತೆ ಹಚ್ಚಿ ಸಂಭ್ರಮಿಸಿದರು.