ಸಿರಿಗೆರೆ ಶ್ರೀಗಳ ಬೌದ್ಧಿಕ ಸಿರಿ, ವೈಚಾರಿಕ ಪಾಂಡಿತ್ಯ, ಬೆಳದಿಂಗಳ ದಾಹ, ಹೃದಯವೇ ಸಂವಿಧಾನ : ಇಂದ್ರಜಿತ್ ಲಂಕೇಶ್

  •  
  •  
  •  
  •  
  •    Views  

ಮೊನ್ನೆ ಪತ್ರಿಕಾ ಕಚೇರಿಗೆ ಹೋದಾಗ ನನ್ನ ಮೇಜಿನ ಮೇಲೆ ಅಂಚೆ ಮೂಲಕ ಬಂದಿದ್ದ ಪುಸ್ತಕದ ಪಾರ್ಸಲ್ ಇತ್ತು ಪುಸ್ತಕ ಯಾರು ಕಳುಹಿಸಿದ್ದಾರೆ. ಎಲ್ಲಿಂದ ಬಂದಿದೆ ಎಂದು ಪಾರ್ಸಲ್ ಮೇಲಿದ್ದ ವಿಳಾಸವನ್ನು ನೋಡಿದೆ. ನನಗೆ ಸಂತಸ, ಆಚ್ಚರಿ ಆಯಿತು. ಸಿರಿಗೆರೆ ಶ್ರೀಗಳು ಆ ಪುಸ್ತಕದ ಪಾರ್ಸಲ್ ಕಳುಹಿಸಿದ್ದರು. ಅದರಲ್ಲಿ ಮೂರು ಪುಸ್ತಕಗಳಿದ್ದವು. 

ಈ ವಿಷಯದ ಬಗ್ಗೆ ಮುಂದೆ ವಿವರಿಸುತ್ತೇನೆ. ಈಗ ಸಿರಿಗೆರೆ ಶ್ರೀಗಳ ಜೊತೆಗಿನ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 1980ರಲ್ಲಿ ಅಪ್ಪ “ಎಲ್ಲಿಂದಲೋ ಬಂದವರು” ಸಿನಿಮಾಗೆ ಕಥೆ ಬರೆಯಲು ದಾವಣಗೆರೆಗೆ ಹೋಗಿದ್ದಾಗ ಸಿರಿಗೆರೆ ಮಠದಲ್ಲಿ ಒಂದು ವಾರಗಳ ಕಾಲ ಉಳಿದುಕೊಂಡು ಕಥೆ ಸಿದ್ಧಪಡಿಸಿದ್ದರು. ನಾನು ಚಿತ್ರದುರ್ಗದ ಕಡೆಗೆ ಹೋದಾಗಲೆಲ್ಲ ಶ್ರೀಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಕಂಡು ಆಶೀರ್ವಾದ ಪಡೆಯುತ್ತೇನೆ. 

ವಾಗ್ಮಿ, ಚಿಂತಕರು, ಬರಹಗಾರರಾಗಿರುವ ಸಿರಿಗೆರೆ ಶ್ರೀಗಳು ಮಠದ ಪರಂಪರೆಯನ್ನು ಆದರ್ಶಮಯವಾಗಿ ಪೊರೆಯುತ್ತಾ ಬಂದಿದ್ದಾರೆ, ಬಸವತತ್ವದ ತಳಹದಿಯ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೈಂಕರ್ಯಗಳನ್ನು ನಿತ್ಯ ಪೂಜೆಯಂತೆ ಮಾಡುತ್ತಿದ್ದಾರೆ. ಮುಂದಿನ ತಲೆಮಾರಿಗೆ ಉತ್ಕೃಷ್ಟ ಹಾದಿಯನ್ನು ಹಾಕಿಕೊಡುತ್ತಿದ್ದಾರೆ.

 2017 ಜುಲೈನಲ್ಲಿ ನಾನು “ಬಸವ ಕ್ರಾಂತಿ” ವೇದಿಕೆ ಮೂಲಕ ನಗರದ ಟೌನ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೆ. ರಾಜಕೀಯ ನಾಯಕರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಧಾರ್ಮಿಕ ಕ್ಷೇತ್ರದಿಂದ ಸಿದ್ಧಗಂಗಾ ಶ್ರೀ, ಸುತ್ತೂರು ಶ್ರೀ ಹಾಗೂ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿರಿಗೆರೆಯ ಶ್ರೀಗಳ ಪ್ರತಿ ಮಾತು ಕೂಡ ನನ್ನ ಕಿವಿಯಲ್ಲಿ ಇಂದಿಗೂ ರಿಂಗಣಿಸುತ್ತಿದೆ. ನಾನು ಶ್ರೀಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋಗಿದ್ಧಾಗಲೂ ಹಾಗೂ ಕಾರ್ಯಕ್ರಮದ ದಿನ ಕೆಂಪು ಬಣ್ಣದ ಕುರ್ತಾವನ್ನು ಹಾಕಿದ್ದೆ ಮಾತು ಆರಂಭಿಸಿದ ಸಿರಿಗೆರೆ ಶ್ರೀಗಳು ನನ್ನ ಉಡುಗೆಯನ್ನು ನೋಡಿ “ನೀವು ಮಠ ಪರಂಪರೆಗೆ ಬರುತ್ತೇನೆಂದು ಭಾವಿಸಿದ್ದೆ ಆದರವರು ರಾಜಕೀಯದೆಡೆಗೆ ಮುಖ ಮಾಡಿದ್ದಾರೆಂದು” ಹಾಸ್ಯ ಚಟಾಕಿಯ ಮೂಲಕ ಮಾತು ಮುಂದುವರೆಸಿದರು. 

“ತಂದೆಯಿಂದ ಒಂದು ಸಂಸ್ಕಾರ ಬಂದಿದೆ. ಆ ವೈಚಾರಿಕ ಸಂಸ್ಕಾರದ ಹಾದಿಯಲ್ಲೇ ನಾನು ಸಾಗಲಿ.” ಎಂದು ಹಾರೈಸಿದರು. ತಂದೆಯ ನಿರ್ಭೀತ, ನಿಷ್ಠುರ ಪತ್ರಿಕೋದ್ಯಮ ನಡೆಸಿದ್ದನ್ನು ನೆನಪು ಮಾಡಿಕೊಂಡು, ಪತ್ರಿಕೆ ಮುಖಾಂತರ ತಂದೆಯ ತಲೆಮಾರುಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಆವರಿಸಿಕೊಂಡಿದ್ದು, ರಾಜಕೀಯದವರ ಮುಖವಾಡ ಕಳಚಿದ್ದು, ಹಾಗೂ ಇವತ್ತಿನ ಕಾಲಕ್ಕೆ ಲಂಕೇಶ್ ದನಿಯ ಅವಶ್ಯಕತೆ ಇದ್ದು ಇಂದ್ರಜಿತ್ ಆ ಸ್ಥಾನ ತುಂಬುವ ಆಶಯ ವ್ಯಕ್ತಪಡಿಸಿದ್ದರು. 

ಪ್ರಧಾನಿ ನರೇಂದ್ರ ಮೋದಿ ದಿಟ್ಟತೆಯಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರು ಸ್ವಚ್ಛ ಭಾರತ್ ಅಭಿಯಾನ ಜೊತೆಗೆ ಅಂತರಂಗ ಶುದ್ದಿಯಂಥ ಅಭಿಯಾನ ಆರಂಭವಾಗಬೇಕು. ಬಸವಣ್ಣನವರ ತತ್ವ, ಆದರ್ಶಗಳ ಹಾದಿಯಲ್ಲಿಯೇ ಮನುಷ್ಯ, ಮನುಷ್ಯನಾಗಿ ಬದುಕುವಂಥ ತಾರತಮ್ಯವಿಲ್ಲದ ಸಮಾನತು ವ್ಯವಸ್ಥೆಗೆ ಅಡಿಪಾಯ ಹಾಕುವಂತೆ ಕೆಲಸಗಳಾಗಬೇಕೆಂದು ಎಚ್ಚರಿಸಿದರು. ಹೀಗೆ ಶ್ರೀಗಳ ವಿಚಾರ ಲಹರಿ ಜೀವಸೆಲೆಯಾಗಿ ನನಗೆ ನೆನಪಾಗುತ್ತದೆ. 

ವೈಚಾರಿಕ ಪಾಂಡಿತ್ಯ 

ಈಗ ಪಾರ್ಸಲ್ ಬಂದಿದ್ದ ಪುಸ್ತಕದ ವಿಷಯಕ್ಕೆ ಬರೋಣ. ಮೂರು ಪುಸ್ತಕಗಳಿದ್ದವು. ಮೊದಲನೆಯದು “ಭ್ರಷ್ಟಾಚಾರದ ಮೊದಲ ಹೆಜ್ಜೆ", ಎರಡನೇಯದು “ಕಪ್ಪೆ ಚಿಪ್ಪು ವರ್ಸಸ್ ಮತ್ತು ರತ್ನ”, ಮೂರನೇಯದು “ಹಣದ ಝಣತ್ಕಾರ, ಪ್ರೀತಿಗೆ ಸಂಚಕಾರ”. ಈ ಪುಸ್ತಕಗಳು ಕ್ರಮವಾಗಿ 2013, 2014 ಮತ್ತು 2015ರಲ್ಲಿ ದೈನಿಕವೊಂದಕ್ಕೆ ಶ್ರೀಗಳು ಬರೆದ ಅಂಕಣ ಲೇಖನಗಳನ್ನು ಒಳಗೊಂಡಿದೆ. ನಾನು ಪುಸ್ತಕದಲ್ಲಿರುವ ಅಂಕಣ ಬರಹಗಳನ್ನು ಓದಿದೆ. ಲೇಖನದ ವಿಷಯವಸ್ತು, ಆಳವಾದ ವಿಶ್ಲೇಷಣೆ, ಅಭಿಮತ ನಿಜಕ್ಕೂ ಓದುಗರ ಚಿಂತನೆಯನ್ನು ಓರೆಗೆ ಅಚ್ಚುತ್ತವೆ. ಮೊದಲ ಪುಸ್ತಕದಲ್ಲಿ “ಮತದಾನ ಭಿಕ್ಷಕರಿಗೆ ನೀಡುವ ಕಿಲುಬು ಕಾಸಲ್ಲ” ಲೇಖನವನ್ನು ಓದಿದಾಗ ಆದು 2013ರ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಬರೆದ ಬರಹ ಅದರಲ್ಲಿ ಚನಾವಣೆ ವಿಷಯದಲ್ಲಿ ಜನರ ಜವಾಬ್ದಾರಿ, ಎಚ್ಚರಿಕೆ, ಮತದಾನದ ಹಕ್ಕು, ಚನಾವಣಾ ಭ್ರಷ್ಟಾಚಾರ ಶೇಷನ್ ಕಾಲದಲ್ಲಿ ಚುನಾವಣಾ ನಿಯಮಾವಳಿಗಾದ ಕಾಯಕಲ್ಪಗಳನ್ನೊಳಗೊಂಡ ವಿಭಿನ್ನ ಆಯಾಮವಿದೆ. ಅದರಲ್ಲಿ ಒಂದು ವಾಕ್ಯವಿದೆ. “ಸಾಂಸಾರಿಕ ಜೀವನದಿಂದ ಬೇಸತ್ತು ಬಸವಣ್ಣನವರು ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ, ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ” ಎಂದು ವಿಷಾದಿಸಿದ್ದಾರೆ. ಇದೇ ಮಾತನ್ನು ವಿಸ್ತರಿಸಿ ಭಾರತಕ್ಕೆ ಮಧ್ಯರಾತ್ರಿಯಲ್ಲಿ ಬಂದ ಸ್ವಾತಂತ್ರ್ಯವೆಂಬ ಹುಣ್ಣಿಮೆಯ ಚಂದಿರವನ್ನು ಇಂದಿನ ಭ್ರಷ್ಟ ರಾಜಕೀಯ ನುಂಗಿ ನೀರು ಕುಡಿಯುತ್ತಿದೆ ಎಂದು ಹೇಳುತ್ತಾರೆ. ಮತದಾನವನ್ನು ಪೂಜೆಯಷ್ಟೇ ಪವಿತ್ರಕಾರ್ಯ ಎಂದು ನಮ್ಮ ಹಿಂದಿನ ಲಿಂ. ಗುರುವರ್ಯರು ಭಾವಿಸಿದ್ದರು. ಅವರ ಮೇಲ್ಪಂಕ್ತಿಯನ್ನು ತಾವು ಅನುಸರಿಸುವುದಾಗಿ ಹೇಳುವ ಮೂಲಕ ಜನರಲ್ಲಿ ಮತದಾನದ ಅರಿವನ್ನು ಮೂಡಿಸುತ್ತಾರೆ.

ಹಾಗೆಯೇ “ಕಪ್ಪೆ ಚಿಪ್ಪು ವರ್ಸಸ್ ಮುತ್ತು ರತ್ನ” ಪುಸ್ತಕದಲ್ಲಿ “ಬಡವರ ಭಿನ್ನಪವ ಕೇಳುವವರಾರು?” ಎಂಬ ಅಂಕಣದಲ್ಲಿ ಸರ್ಕಾರದ ಆವವಸ್ಥೆಯನ್ನು, ಹಾವು ಹಿಡಿಯುವ ಮುದುಕನ ಪ್ರಸಂಗದೊಂದಿಗೆ ವಿಡಂಬನೆ ಮಾಡಿದ್ದಾರೆ. ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ವಿಷದ ಹಾವಿಗೆ ಹೋಲಿಸಿ ವಿವರಿಸಿರುವುದು ಇವತ್ತಿನ ಭ್ರಷ್ಟ ವ್ಯವಸ್ಥೆಗೆ ಹಿಡಿದ ನೈಜ ಕನ್ನಡಿಯಾಗಿದೆ. 

ಮತ್ತೊಂದು ಲೇಖನವಾದ ಜಿ ಎಸ್ ಎಸ್ ಅವರ ಕಾವ್ಯದಲ್ಲಿ ಆಧ್ಯಾತ್ಮಿಕ ಚಿಂತನೆಯಲ್ಲಿ ಕವಿಯ ನೈತಿಕ ಜವಾಬ್ದಾರಿ, ಕಾವ್ಯದ ಮೌಲ್ಯ, ಸಾಮಾಜಿಕ ಸ್ಪಂದನೆಯನ್ನು ವಚನ-ದಾಸ ಸಾಹಿತ್ಯದ ಉದಾಹರಣೆ ಕೊಡುವ ಮೂಲಕ ಜಿ ಎಸ್ ಎಸ್ ರವರು ಬರೆದಿರುವ “ಕಾಣದ ಕಡಲಿಗೆ ಹಂಬಲಿಸಿದೆ ಮನ”, “ಹೆಡೆಯಂತಾಡುವ ಸೊಡರಿನ ಕುಡಿಗೆ”, “ವಯಸ್ಸಾಗುವುದು ಕವಿಗೆ ಕವಿತೆಗಳಿಗಲ್ಲ” ಎಂಬಂತಹ ಕವನಗಳನ್ನು ಉಲ್ಲೇಖಿಸುತ್ತಾ ಆಧ್ಯಾತ್ಮಿಕತೆಯ ಹೊನಲನ್ನು ಎಳೆಎಳೆಯಾಗಿ ಓದುಗನಿಗೆ ಉಣಬಡಿಸಿದ್ದಾರೆ. 

ಮತ್ತೊಂದು ಪುಸ್ತಕ “ಹಣದ ಝಣತ್ಕಾರ, ಪ್ರೀತಿಗೆ ಸಂಚಕಾರ” ಪುಸ್ತಕದಲ್ಲಿರುವ “ಹಲ್ಲಿನ ಸುತ್ತ ಒಂದು ವಿಚಾರ ಲಹರಿ” ಲೇಖನದಲ್ಲಿ ವಿವಿಧ ದೇಶಗಳಲ್ಲಿ ಹಲ್ಲಿನ ಬಗ್ಗೆ ಇರುವ ಅಭಿಪ್ರಾಯವನ್ನು ಹಾಗೂ ಮನುಷ್ಯನ ಮಾತು, ಮಾನಸಿಕತೆಯ ಪರಿಸ್ಥಿತಿಗಳನ್ನು ಹಲ್ಲಿನ ಮೂಲಕ ಅಭಿವ್ಯಕ್ತಿಸುವ ರೀತಿಗಳು, ಹಲ್ಲಿನ ಪ್ರಾಮುಖ್ಯತೆಯನ್ನು ಮನೋಜ್ಞವಾಗಿ ಅರ್ಥೈಯಿಸಿದ್ದಲ್ಲದೇ, ಅಂತಿಮವಾಗಿ ವಿಷಯ ಲೋಲುಪತೆಯೆಂಬ ವಿಷದ ಹಲ್ಲುಗಳನ್ನು ಕಿತ್ತು ಹಾಕಿದರೆ ಈ ಶರೀರ ಭವಬಂಧನಕ್ಕೆ ಕಾರಣವಾಗದೆ ಆತ್ಮೋನ್ನತಿಗೆ ದಾರಿಯಾಗುತ್ತದೆ ಎನ್ನುವ ಆಕ್ಕನ ವಚನವನ್ನು ಹೇಳುವ ಮೂಲಕ ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುತ್ತಾರೆ. 

ಹೀಗೆ ಈ ಮೂರು ಪುಸ್ತಕಗಳಲ್ಲಿ ರಾಜಕೀಯ, ಸಾಹಿತ್ಯ, ಜೀವನ, ಮನೋಭಾವನೆ, ಸಂಬಂಧ, ಧರ್ಮ, ಪರಿಸರ, ಸಮಾಜ ಮುಂತಾದ ಸೂಕ್ಷ್ಮ ವಿಷಯ ವಸ್ತುಗಳನ್ನು ತಮ್ಮ ಅಂಕಣದ ವಿಷಯವಾಗಿಸಿ ಅದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸಿ ಓದುಗರ ಮನಸ್ಸನ್ನು ಚಿಂತನೆಗೆ ಹಚ್ಚುತ್ತಾರೆ. ತಮ್ಮ ಬರಹದ ಸರಳ ಶೈಲಿ, ಗಾದೆ, ವಚನ, ತತ್ವ, ಕಥೆಗಳ ಮೂಲಕ ವಿಚಾರ ಮಂಡಿಸುವ ಪರಿ ಅತ್ಯದ್ಭುತವಾಗಿದೆ. ಅವರೊಳಗಿನ ಪಾಂಡಿತ್ಯ ಸಿರಿಗೆ ಎಲ್ಲರೂ ಪ್ರೀತಿಯಿಂದ ಸೆರೆಯಾಗುತ್ತಾರೆ. 

ಬೆಳದಿಂಗಳ ದಾಹ:

ತರಳಬಾಳು ಬೃಹನ್ಮಠದಿಂದ ನಡೆಯುವ ಪರಂಪರೆಯ ಕಾರ್ಯಕ್ರಮಗಳಲ್ಲಿ “ತರಳಬಾಳು ಹುಣ್ಣಿಮೆ” ವಿಶೇಷ ಸ್ಥಾನ ಪಡೆದಿದೆ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ವೈಚಾರಿಕ ನೆಲೆಯಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ರಾಜ್ಯದಲ್ಲಷ್ಟೇ ಅಲ್ಲ ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರ ಮನ ಸೂರೆ ಮಾಡಿದೆ. ಎಲ್ಲಾ ಜಾತಿ-ಧರ್ಮದವರು ಒಳಗೊಳ್ಳುವ “ತರಳಬಾಳು ಹುಣ್ಣಿಮೆ” ಜಾತ್ಯಾತೀತತೆಗೆ ನಿದರ್ಶನವಾಗಿದೆ. ಶ್ರೀಮಠದಿಂದ ದಶಕಗಳಿಂದಲೂ ನಡೆಯುತ್ತಿದ್ದ ದಸರಾ ಉತ್ಸವವನ್ನು ತಿಪಟೂರಿನ ಗಾಂಧಿವಾದಿ ಎಸ್.ಆರ್.ಮಲ್ಲಪ್ಪನವರು “ತರಳಬಾಳು ಹುಣ್ಣಿಮೆ ಮಹೋತ್ಸವ” ಎಂದು ಹೆಸರಿಟ್ಟರು. ನಾಡಿನ ವಿವಿಧ ಭಾಗಗಳಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮವನ್ನು ಹಿಂದಿನ ಲಿಂಗೈಕ್ಯ ಗುರುಗಳು ನಡೆಸುವಂತೆ ಇಚ್ಛಿಸಿದ್ದರಿಂದ ಪ್ರಸ್ತುತ ಪೀಠಾಧಿಪತಿಗಳು ಅವರ ಆಶಯದಂತೆ ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಚಿಂತಕರು, ಸಾಧಕರು, ಕಲಾವಿದರು ಭಾಗವಾಗಿಸುತ್ತಾರೆ. ಹಾಗಾಗಿಯೇ ಅದನ್ನು "ನಡೆದಾಡುವ ಜ್ಞಾನದೇಗುಲ” ವೆಂತಲೂ ಕರೆಯುತ್ತಾರೆ. 

ಹುಣ್ಣಿಮೆಯನ್ನು ಭಕ್ತಿ ಭಾವದೊಂದಿಗೆ ಆಸ್ವಾದಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇದರ ಜನಪ್ರಿಯತೆ ಕಂಡು ಶ್ರೀಗಳಿಗೆ ಮುಂದಿನ ಸಲ ನಮ್ಮೂರಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಮನವಿ ಮಾಡುತ್ತಾರೆ, ಸಿರಿಗೆರೆಯಿಂದ ಮೊದಲ ಬಾರಿಗೆ ಜಗಳೂರಿನಲ್ಲಿ ಈ ಕಾರ್ಯಕ್ರಮ 50ರ ದಶಕದಲ್ಲಿ ನಡೆಯಿತು. ಅಲ್ಲಿಂದ ಈ ಪರಿಪಾಠ ಮುಂದುವರೆದಿದೆ, ಇಂತಹ ಮಹೋನ್ನತ ಕಾರ್ಯಕ್ರಮಗಳಿಂದಲೇ ಈ ನಾಡಿನ ಸಾಂಸ್ಕೃತಿಕ ಬೇರುಗಳು ಇಂದಿಗೂ ಜೀವಂತವಾಗಿದೆ. ಅದನ್ನು ನೋಡದವರು ಒಮ್ಮೆ ಭಾಗವಹಿಸಿ ಪುನೀತರಾಗಿ.

ಹೃದಯವೇ ಸಂವಿಧಾನ 

ತರಳಬಾಳು ಬೃಹನ್ಮಠದ ಮತ್ತೊಂದು ಮೈಲಿಗಲ್ಲೆಂದರೆ “ಸದ್ಧರ್ಮ ನ್ಯಾಯಪೀಠ” ಈ ಕಾಯಕವನ್ನು ಶ್ರೀಮಠದ ಪರಂಪರೆಯ ಎಲ್ಲಾ ಗುರುವರ್ಯರು ನಡೆಸಿದವರೇ. ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ನ್ಯಾಯಾಲಯದ ಮಾದರಿಯಲ್ಲಿಯೇ ವಿಚಾರಣೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತದೆ. 

ರೈತರು, ಬಡವರು, ಕಾರ್ಮಿಕರು.. ಹೀಗೆ ಎಲ್ಲಾ ವರ್ಗದವರು ವ್ಯಾಜ್ಯಗಳನ್ನು ಪರಿಹರಿಕೊಳ್ಳಲು ಸದ್ಧರ್ಮ ನ್ಯಾಯಪೀಠಕ್ಕೆ ಬರುತ್ತಾರೆ. ನ್ಯಾಯಾಲಯದಲ್ಲಿ ಬಗೆಹರಿಯದ ಸಮಸ್ಯೆಗಳು ಇಲ್ಲಿ ಬಗೆಹರಿಯುತ್ತದೆ. ನ್ಯಾಯಾಧೀಶರುಗಳೇ ಬೆರಗಿನಿಂದ, ಆಸಕ್ತಿಯಿಂದ ಸದ್ಧರ್ಮ ನ್ಯಾಯಪೀಠದ ಪ್ರಕರಣಗಳನ್ನು ಗಮನಿಸುತ್ತಾರೆ. ನ್ಯಾಯಾಲಯಗಳು ಸಂವಿಧಾನದ ಕಾನೂನನ್ನು ಆಧರಿಸಿದೆ. ಸಾಕ್ಷಿಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಯದಾನ ಮಾಡುತ್ತಾರೆ. ಆದರೆ “ಸದ್ಧರ್ಮ ನ್ಯಾಯಪೀಠ”ದಲ್ಲಿ “ಹೃದಯವೇ ಸಂವಿಧಾನ” -ಖಾಸಗಿಯಾಗಿ ವಿಚಾರಣೆ ಮಾಡಿದಾಗ ಪರಸ್ಪರ ಸೌಹಾರ್ದತೆ, ವಿಶ್ವಾಸದ ಮೇಲೆ ನ್ಯಾಯ ದೊರೆಯುತ್ತದೆ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು  ಅತ್ಯುತ್ತಮವಾಗಿ ಈ ಸಮಾಜಮುಖಿ ಕಾರ್ಯವನ್ನು ನಡೆಸುತ್ತಾರೆ. ಸಮುದಾಯ, ವ್ಯಕ್ತಿ ನೆಮ್ಮದಿಯಿಂದ ಬಾಳುವಂತೆ ಮಾಡುವುದೇ ಈ ನ್ಯಾಯಪೀಠದ ಉದ್ದೇಶವೆಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಹೀಗೆ ಹಲವಾರು ವಿಶೇಷ ಕಾರ್ಯಗಳಿಂದ ನಾಡಿನ ಭಕ್ತವೃಂದದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತರಳಬಾಳು ಬೃಹನ್ಮಠವೂ ಗ್ರಾಮೀಣ ಭಾಗದ ಶಿಕ್ಷಣ, ಮಹಿಳಾ ಶಿಕ್ಷಣಕ್ಕೂ ಹೆಚ್ಚು ಪ್ರಸಿದ್ದಿ ಪಡೆದಿದೆ. ಶ್ರೀ ಮಠದ ಪರಂಪರೆಯನ್ನು ಬದ್ಧತೆ, ಶಿಸ್ತು, ಪೂಜ್ಯತೆಯಿಂದ ಮುನ್ನಡೆಸುತ್ತಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ  ಕಾಯಕ ಮತ್ತಷ್ಟು ಪ್ರಜ್ವಲಿಸಲಿ.