ಸಾಧು ಲಿಂಗಾಯತ ಸಮಾಜದ ಮೇರು ಶಿಖರವಾಗಿ ಇಡೀ ಸಮಾಜವನ್ನೇ ಧೇನಿಸಿದ ಶಕಪುರುಷ : ಡಾ. ಹಿರೇಮಲ್ಲೂರ ಈಶ್ವರನ್

  •  
  •  
  •  
  •  
  •    Views  

ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಸಮಾಜ ವಿಜ್ಞಾನಿಯಾಗಿದ್ದ ಹಿರೇಮಲ್ಲೂರ ಈಶ್ವರನ್ ಅದ್ಭುತ ಕ್ರಿಯಾಶಕ್ತಿಯ ಮಹಾಚೇತನವಾಗಿದ್ದರು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹಿರೇಮಲ್ಲೂರಿನ ಬಡ ಕುಟುಂಬದಲ್ಲಿ 1922ರ ನವೆಂಬರ್ 1ರಂದು ಚನ್ನಪ್ಪ ಮಾಸ್ತರ ಮತ್ತು ಬಸಮ್ಮ ದಂಪತಿ ಮಗನಾಗಿ ಜನಿಸಿದ ಈಶ್ವರನ್, ವಿದ್ಯಾರ್ಥಿ ಜೀವನದಿಂದಲೂ ಪ್ರತಿಭಾವಂತರು. ಬಡತನದಲ್ಲಿ ಕಷ್ಟಪಟ್ಟು ಓದಿ ಮುಂದೆ ಬಂದವರು.

ಹಿರೇಮಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಬಂದು ಮುರುಘಾಮಠದ ಪ್ರಸಾದ ನಿಲಯದಲ್ಲಿದ್ದುಕೊಂಡು ಮಾಧ್ಯಮಿಕ ಶಿಕ್ಷಣ ಮುಗಿಸಿ, ಬೆಳಗಾವಿಯಲ್ಲಿ ಪದವಿ ಶಿಕ್ಷಣ ಪೂರೈಸಿ, ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈಶ್ವರನ್, ತಮ್ಮದೇ ಆದ “ಕಲ್ಪನಾ” ಗ್ರಂಥಮಾಲೆ ಆರಂಭಿಸಿ “ಹಾಲಾಹಲ”, “ವಿಷ ನಿಮಿಷಗಳು”, “ರಾಜ ರಾಣಿ ದೇಖೋ”, “ಶಿವನ ಬುಟ್ಟಿ”, “ಕನ್ನಡ ತಾಯ ನೋಟ” ಕೃತಿಗಳನ್ನು ಪ್ರಕಟಿಸಿದರು. ಖ್ಯಾತ ಕಾದಂಬರಿಕಾರ ಮಿರ್ಜಿ ಅಣ್ಣಾರಾಯರ “ರಾಮಣ್ಣ ಮಾಸ್ತರ”, ಚೆನ್ನವೀರ ಕಣವಿ ಅವರ “ಕಾವ್ಯಾಕ್ಷಿ” ಅಲ್ಲದೆ, ಸಿಂಪಿ ಲಿಂಗಣ್ಣ, ವರದರಾಜ ಹುಯಿಲಗೋಳ ಅವರ ಕೃತಿಗಳನ್ನು “ಕಲ್ಪನಾ” ಗ್ರಂಥಮಾಲೆಯ ಮೂಲಕ ಪ್ರಕಟಿಸಿದರು.

ಈಶ್ವರನ್ ಮಹತ್ವಾಕಾಂಕ್ಷೆಯ ಅಪ್ರತಿಮ ವ್ಯಕ್ತಿ. ಅವರು ಸ.ಸ. ಮಾಳವಾಡರ ಮಾರ್ಗದರ್ಶನದಲ್ಲಿ “ಹರಿಹರನ ಕೃತಿಗಳ ಸಂಖ್ಯಾ ನಿರ್ಣಯ” ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದರು. ಅವರ ಜ್ಞಾನದಾಹ ಅಪರಿಮಿತವಾದದ್ದು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿ “ಮನುಧರ್ಮಶಾಸ್ತ್ರದಲ್ಲಿ ಅಪರಾಧ ಮತ್ತು ಶಿಕ್ಷೆ”ಯ ಕುರಿತು ಸಂಶೋಧನೆ ನಡೆಸಿ ಮಾನವ ಶಾಸ್ತ್ರದಲ್ಲಿ ಬಿ.ಲಿಟ್ ಪದವಿ ಪಡೆದರು. ಹಾಲೆಂಡ್ ದೇಶದ ದಿ ಹೇಗ್ ನಗರದ ಅಂತರರಾಷ್ಟ್ರೀಯ ಸಮಾಜ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಶಿಷ್ಯವೇತನ ಪಡೆದು ಸಮಾಜಶಾಸ್ತ್ರದಲ್ಲಿ ಎಂ.ಎಸ್.ಎಸ್. ಪದವಿ ಪಡೆದರು. ಅದೇ ದೇಶದ ಪ್ರಾಚೀನ ಮತ್ತು ಪ್ರತಿಷ್ಠಿತ ಲೈಡನ್ ವಿಶ್ವವಿದ್ಯಾಲಯದಲ್ಲಿ ಹಾಲೆಂಡ್ ನ ಕುಟುಂಬ ಜೀವನದ ಬಗ್ಗೆ ಸಂಶೋಧನೆ ನಡೆಸಿ ಡಿ.ಲಿಟ್ ಪದವಿ ಪಡೆದರು.

ಈಶ್ವರನ್ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಆಗಿನ ಕುಲಪತಿ ಡಿ.ಸಿ. ಪಾವಟೆ ತಮ್ಮ ವಿಶ್ವವಿದ್ಯಾಲಯಕ್ಕೆ ಆಮಂತ್ರಿಸಿದರು. 1959ರಲ್ಲಿ ಕ.ವಿ.ವಿ. ಮಾನವಶಾಸ್ತ್ರದ ವಿಭಾಗದ ಮುಖ್ಯಸ್ಥರಾಗಿ ಈಶ್ವರನ್ ಅಧಿಕಾರ ವಹಿಸಿಕೊಂಡರು. `ಇಂಟರ್ ನ್ಯಾಶನಲ್ ಜರ್ನಲ್ ಆಫ್ ಕಂಪಾರಿಟಿವ್ ಸೊಸಿಯಾಲಜಿ” ಅಂತರರಾಷ್ಟ್ರೀಯ ನಿಯತಕಾಲಿಕ ಆರಂಭಿಸಿ ಮಾನವಶಾಸ್ತ್ರ ವಿಭಾಗವನ್ನು ಬೆಳೆಸಿದರು. ಹಟವಾದಿ, ಸ್ವಾಭಿಮಾನಿ, ಸಂಶೋಧಕರಾದ ಈಶ್ವರನ್ ಮತ್ತು ಕುಲಪತಿ ಪಾವಟೆ ಅವರ ನಡುವೆ ಬಂದ ಭಿನ್ನಾಭಿಪ್ರಾಯಗಳಿಂದ ಈಶ್ವರನ್ ಕ.ವಿ.ವಿ ತೊರೆದು ಮತ್ತೆ ಕೆನಡಾ ದೇಶಕ್ಕೆ ಹೊರಟರು.

ಈಶ್ವರನ್ ಹಾಲೆಂಡ್ನಲ್ಲಿರುವಾಗ ಓಬೆನ್ ಅವರನ್ನು ಪ್ರೀತಿಸಿದರು. ಆದರೆ, ಅವರ ಮದುವೆ ಆದದ್ದು ಸಿರಿಗೆರೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜೀಯವರ ಸನ್ನಿಧಿಯಲ್ಲಿ. ಹಿಂದೂ ವಿವಾಹ ಪದ್ಧತಿಯಲ್ಲಿ. ಪಾಟೀಲ ಪುಟ್ಟಪ್ಪ ದಂಪತಿ ವಧುವಿನ ಪರವಾಗಿ ನಿಂತು ವಿವಾಹ ಮಾಡಿದ್ದನ್ನು ಈಶ್ವರನ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಈಶ್ವರನ್ ಪತ್ನಿ ಓಬೆನ್, ಶೈಲಜಾ ಆಗಿ ಅವರ ಮನೆ ಮನವನ್ನು ಬೆಳಗಿದರು. ಅವರಿಗೆ ಮೂರು ಜನ ಮಕ್ಕಳು. ಹಿರಿಯರು ಅರುಂಧತಿ, ಅವಳ ಜೀವನದ ಕರುಣ ಕಥೆಯನ್ನು “ನನ್ನ ಮಗಳು ಅರುಂಧತಿ” ಪುಸ್ತಕದಲ್ಲಿ ಈಶ್ವರನ್ ಬರೆದಿದ್ದಾರೆ. ಎರಡನೆಯವರು ಹೇಮಂತ್ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿ ವಿದೇಶದಲ್ಲಿ ಖ್ಯಾತಿ ಗಳಿಸಿದ್ದಾರೆ. ಮೂರನೆಯವರು ಶಿವಕುಮಾರ್, ಈಶ್ವರನ್ ನಡೆಸುತ್ತಲಿದ್ದ ಅಂತರರಾಷ್ಟ್ರೀಯ ಜರ್ನಲ್ಗಳನ್ನು ಮುಂದುವರಿಸುತ್ತಿದ್ದಾರೆ. ಅವರು ಕೆನಡಾ ದೇಶದ ಪ್ರಜೆಯಾದರೂ ಭಾರತದ ಬಗೆಗೆ ಅಪಾರ ಪ್ರೀತಿ, ಗೌರವ ಹೊಂದಿದವರು.

ಟೊರೆಂಟೊ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಈಶ್ವರನ್ ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆಯಿಂದ ಖ್ಯಾತಿ ಗಳಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಿರಂತರ ಹೋರಾಟ, ನೋವು, ಕೌಟುಂಬಿಕ ಜೀವನದಲ್ಲಿ ಆದ ಆಘಾತಗಳು ಅವರನ್ನು ಘಾಸಿಗೊಳಿಸಿದ್ದರೂ ಅವರು ಜ್ಞಾನಪಿಪಾಸು, ದಣಿವರಿಯದ ಸಂಶೋಧಕರಾಗಿದ್ದರು.

ಈಶ್ವರನ್ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಅವರ ಸಂಶೋಧನಾ ಮಹಾಪ್ರಬಂಧ “ಹರಿಹರನ ಕೃತಿಗಳ ಸಂಖ್ಯಾ ನಿರ್ಣಯ”ವನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದೆ. ಹರಿಹರನ ಕೃತಿಗಳ ಬಗ್ಗೆ ಉಪಲಬ್ಧವಿದ್ದ ಎಲ್ಲ ಆಕರ ಸಾಮಗ್ರಿಗಳನ್ನು ದಾಖಲಿಸಿ ಆಂತರಿಕ ಮತ್ತು ಬಾಹ್ಯ ಪ್ರಮಾಣಗಳಿಂದ ಹರಿಹರನ ಒಟ್ಟೂ ಕೃತಿಗಳು 106 ಎಂದು ನಿರ್ಧರಿಸಿದ್ದಾರೆ. ಬೇರೆ ಬೇರೆ ಕಡೆ ಇರುವ ಹರಿಹರನ ಓಲೆಕಟ್ಟುಗಳನ್ನು ಇಟ್ಟುಕೊಂಡು ವಿಪುಲ ಸಾಮಗ್ರಿಯನ್ನು ಸಂಶೋಧನೆಗೆ ಬಳಸಿಕೊಂಡಿದ್ದಾರೆ. ಈಶ್ವರನ್ ಬರೆದ ಆತ್ಮಚರಿತ್ರೆ “ವಲಸೆ ಹೋದ ಕನ್ನಡಿಗನ ಕಥೆ” ಕನ್ನಡ ಆತ್ಮಚರಿತ್ರೆಗಳ ಸಾಲಿನಲ್ಲಿ ವಿಶಿಷ್ಟವಾದದ್ದು. ಭಾರತದ ಬಗ್ಗೆ ಪ್ರೀತಿ ಅಭಿಮಾನವಿದ್ದರೂ ದೂರದ ಕೆನಡಾ ದೇಶಕ್ಕೆ ವಲಸೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕನ್ನಡ ತಾಯ್ ನೋಟುಗಳು ಅವರ ಲಲಿತ ಪ್ರಬಂಧಗಳಾಗಿವೆ. ಕವಿತೆ ಕಥೆಗಳನ್ನು ಅವರು ಬರೆದಿದ್ದಾರೆ.

ಉತ್ತರ ಕರ್ನಾಟಕದ ಶಿವಪುರ ಹಳ್ಳಿಯನ್ನು ಕುರಿತು ಹದಿನೈದು ವರ್ಷ ಅಧ್ಯಯನ ನಡೆಸಿ “ಭಾರತದ ಹಳ್ಳಿಗಳು” ಗ್ರಂಥ ರಚಿಸಿದ್ದು, ಅದನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದೆ. ಭಾರತೀಯ ಹಳ್ಳಿಗಳು ಪ್ರಾಚೀನ ಸಂಸ್ಕೃತಿಯ ಅವಶೇಷವಾಗಿವೆ. ಪಾಶ್ಚಾತ್ಯ ಹಳ್ಳಿಗಳು ಔದ್ಯೋಗೀಕರಣದಿಂದ ಭೌತಿಕ ಸಂಪತ್ತಿನತ್ತ ಸಾಗಿದರೆ ಭಾರತದ ಹಳ್ಳಿಗಳಲ್ಲಿರುವ ಸಾಂಸ್ಕೃತಿಕ ಸಂಪತ್ತು ವಿಸ್ಮಯ ಉಂಟು ಮಾಡುತ್ತದೆ. ಭಾರತದ ಹಳ್ಳಿಗಳ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅಧ್ಯಯನ ಈಶ್ವರನ್ ಪುಸ್ತಕದಲ್ಲಿದೆ.

ಈಶ್ವರನ್ ಅವರು ಧರ್ಮ ಹಾಗೂ ಸಮಾಜಶಾಸ್ತ್ರದ ಅಧ್ಯಯನದ ಬೃಹತ್ ಗ್ರಂಥಗಳನ್ನು ರಚಿಸಿದ್ದಾರೆ. ಅವರ “ಲಿಂಗಾಯತ ಧರ್ಮ - ಒಂದು ಅಧ್ಯಯನ” ಲಿಂಗಾಯತ ಧರ್ಮದ ಆಳ–ಅಗಲ ತೆರೆದಿಡುವ ಅಧಿಕೃತ ಗ್ರಂಥ. ಶರಣರ ಕಾಯಕ ಸಿದ್ಧಾಂತದ ವಿನೂತನ ಸಮಾಜಶಾಸ್ತ್ರೀಯ ವ್ಯಾಖ್ಯಾನವನ್ನು ಅವರು ಮಾಡಿದ್ದಾರೆ. ಭಾರತದಲ್ಲಿ ಕಾಣುವ ಸಮಾಜನೀತಿ, ಸಹಕಾರ, ಪ್ರಜಾಪ್ರಭುತ್ವ ಮೌಲ್ಯಗಳು ಲಿಂಗಾಯತ ಪರಂಪರೆಯಲ್ಲಿವೆ. ವೈದಿಕ ಭಕ್ತಿ ಪರಂಪರೆಗಿಂತ ಲಿಂಗಾಯತ ಭಕ್ತಿ ಪರಂಪರೆ ಭಿನ್ನವಾಗಿದೆ ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಲಿಂಗಾಯತ ಧರ್ಮದ ಉಗಮ, ಸ್ಥಾಪನೆ, ತತ್ವಜ್ಞಾನ, ಸಾಹಿತ್ಯ, ಸಂಸ್ಕೃತಿ, ಸಮಾಜ ರಚನೆ, ಆಚಾರ ವಿಚಾರಗಳ ಕುರಿತು ವಸ್ತುನಿಷ್ಠವಾದ ಅಧ್ಯಯನ ಈ ಗ್ರಂಥದಲ್ಲಿದೆ. ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂದು ಈಶ್ವರನ್ ಅಭಿಪ್ರಾಯಪಟ್ಟಿದ್ದಾರೆ.

ಈಶ್ವರನ್ ಅವರ “ಲಿಂಗಾಯತ, ಜೈನ ಮತ್ತು ಬ್ರಾಹ್ಮಣ ಮಠಗಳು: ಒಂದು ತೌಲನಿಕ ಅಧ್ಯಯನ” (1998) ಮಹತ್ವದ ಕೃತಿಯಾಗಿದೆ. ಅದರಲ್ಲಿ ಹೀಗೆ ಹೇಳಿದ್ದಾರೆ: “ಶಿವಪುರದ ಲಿಂಗಾಯತರು ಅಕ್ಷರ ಸಂಸ್ಕೃತಿಗೆ ಸೇರಿದವರಲ್ಲ. ಅವರ ಧಾರ್ಮಿಕ ಸಾಹಿತ್ಯಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ಈ ಜನತೆಯ ಸಮುದಾಯದ ಸಂಪ್ರದಾಯವನ್ನು ದೇಶಿ ಚೌಕಟ್ಟಿನಲ್ಲಿ ಸೇರಿಸಬೇಕೋ ಮಾರ್ಗದ ಚೌಕಟ್ಟಿನಲ್ಲಿ ಸೇರಿಸಬೇಕೋ ಎಂಬ ಪ್ರಶ್ನೆ ನನ್ನ ಮುಂದೆ ನಿಂತಾಗ ಅವೆರಡೂ ಚೌಕಟ್ಟು ಮತ್ತು ಸಂಪ್ರದಾಯಗಳಿಗೆ ಒಳಗಾಗದೆ ಶಿವಪುರದ ಲಿಂಗಾಯಿತರು ಸ್ವತಂತ್ರವಾದ ಸಂಪ್ರದಾಯವನ್ನು ನಿರ್ಮಿಸಿಕೊಂಡರು. ಅವರ ವಿಶಿಷ್ಟ ಸಂಪ್ರದಾಯವನ್ನು “ಜನಪದ ಸಮಷ್ಟಿ ಸಂಪ್ರದಾಯ” ಎಂದು ಹೆಸರಿಟ್ಟು ಕರೆದೆ”. ಕರ್ನಾಟಕದ ಇತರ ಮಠಗಳಾದ ಜೈನ, ಬ್ರಾಹ್ಮಣ ಮಠಗಳ ಮಠಾಧಿಪತಿಗಳ ಹಿನ್ನೆಲೆಯಲ್ಲಿ ಲಿಂಗಾಯತ ಮಠಗಳ ಪ್ರತ್ಯೇಕತೆಯನ್ನು ಕ್ರಿಯಾಶಕ್ತಿ, ಸೋಲು ಗೆಲುವುಗಳನ್ನು ಅಧ್ಯಯನ ಮಾಡಿದ್ದಾರೆ.

ಲಿಂಗಾಯತ ಮಠಗಳು ಸಮಾಜ ಸೇವೆ ದಾಸೋಹದಲ್ಲಿ ಶಿವನನ್ನು ಕಾಣಬೇಕೆಂದು ಹೇಳುತ್ತವೆ. ಏಕದೇವತಾವಾದವು ಜಂಗಮಸಂಸ್ಕೃತಿಯ ಜೀವಾಳ. ಇಷ್ಟಲಿಂಗ ಅದರ ಸಂಕೇತವಾಗಿದ್ದು ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ, ಸಮತೆಗಳೆಂಬ ವಿಶ್ವತತ್ವಗಳನ್ನು ಅದು ಪ್ರತಿನಿಧಿಸುತ್ತದೆ. ಲೌಕಿಕ ಮೌಲ್ಯಗಳನ್ನು ಪಾರಮಾರ್ಥಿಕ ಮಟ್ಟಕ್ಕೇರಿಸಿದ ಲಿಂಗಾಯತರ ಧರ್ಮವನ್ನು ಪ್ರಜಾಧರ್ಮವೆಂದು ಹೇಳಬಹುದು ಎಂದು ಈಶ್ವರನ್ ಪ್ರತಿಪಾದಿಸಿದ್ದಾರೆ. ಜೈನ ಮತ್ತು ಬ್ರಾಹ್ಮಣ ಮಠಗಳಲ್ಲಿ ವಿಗ್ರಹ ಪೂಜೆ, ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ. ಅದಕ್ಕಾಗಿ ಅಪಾರ ಹಣ ವ್ಯಯವಾಗುತ್ತದೆ. ಆದರೆ ಲಿಂಗಾಯತ ಮಠಗಳು ನಿತ್ಯ ದಾಸೋಹ, ಧರ್ಮ ಪ್ರಸಾರ, ಪ್ರಸಾದ ನಿಲಯ, ಶಿಕ್ಷಣ ಸಂಸ್ಥೆಗಳಿಗೆ ಧನ ವಿನಿಯೋಗ ಮಾಡುತ್ತಿವೆ. ಜೈನ, ಬ್ರಾಹ್ಮಣ ಸಂಸ್ಕೃತಿಗಳು ಸ್ಥಾವರ ಪರವಾದರೆ ಲಿಂಗಾಯತ ಸಂಸ್ಕೃತಿ ಜಂಗಮ ಪರವಾಗಿದೆ ಎಂದು ಈಶ್ವರನ್ ವಿಶ್ಲೇಷಿಸಿದ್ದಾರೆ. ಜಂಗಮ ಸಂಸ್ಕೃತಿಯಲ್ಲಿ ಸ್ತ್ರೀ ಪುರುಷರಿಬ್ಬರ ದೇಹಗಳು ಪವಿತ್ರವಾದವು. ಇಲ್ಲಿ ದೇಹವೇ ದೇವಾಲಯ. ಆದ್ದರಿಂದಲೇ ಲಿಂಗಾಯತ ಧರ್ಮ ಲಿಂಗಾಧಾರಿತ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜವನ್ನು ಕಟ್ಟಲು ಹೊರಟಿದೆ ಎಂದು ಪ್ರತಿಪಾದಿಸಿದ್ದಾರೆ.

"ತರಳಬಾಳು ಮಠದ" ಬಗೆಗೆ ಅಪಾರ ಭಕ್ತಿ, ಶ್ರದ್ಧೆ ಇಟ್ಟುಕೊಂಡ ಈಶ್ವರನ್ ತಮ್ಮ ಬಾಳ ಕೊನೆಯವರೆಗೂ ಲಿಂಗಾಯತ ಧರ್ಮ ಸಾಹಿತ್ಯ ಸಂಸ್ಕೃತಿಯ ಅಧ್ಯಯನದಲ್ಲಿ ತೊಡಗಿದವರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು 1998 ಜೂನ್ 23ರಂದು ಧಾರವಾಡದಲ್ಲಿ ನಿಧನಹೊಂದಿದರು. ಅವರ ಮನೆ ಕಲ್ಪನಾವನ್ನು ಗದುಗಿನ ತೋಂಟದಾರ್ಯ ಮಠಕ್ಕೆ ದಾನವಾಗಿ ಕೊಟ್ಟಿದ್ದಾರೆ. ಈಗ ಅಲ್ಲಿ ಹಿರೇಮಲ್ಲೂರ್ ಈಶ್ವರನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ವಿದ್ಯಾ ಕೇಂದ್ರವಾಗಿದೆ. ಈಶ್ವರನ್ ನಮ್ಮ ನಡುವೆ ಈಗ ಇಲ್ಲ. ಆದರೆ, ತಮ್ಮ ಗ್ರಂಥ ಲೇಖನಗಳಿಂದ ನಮ್ಮ ನಡುವೆ ನಡೆದಾಡುತ್ತಿದ್ದಾರೆ. 

ಡಾ. ಜಿ.ಎಂ. ಹೆಗಡೆ