ಮಾಗನೂರು ಬಸಪ್ಪ ಅನುಭವ ಮಂಟಪದ ಗಾಂಧಿತಾತ : ಶ್ರೀ ತರಳಬಾಳು ಜಗದ್ಗುರುಗಳ ಬಣ್ಣನೆ

  •  
  •  
  •  
  •  
  •    Views  

ದಾವಣಗೆರೆ : ಜೀವನದ  ಕೊನೆ ಉಸಿರಿರುವವರೆಗೂ ಸಮಾಜದ ಬಗ್ಗೆ ಚಿಂತಿಸಿದ ಮಾಗನೂರು ಬಸಪ್ಪನವರು ಅನುಭವ ಮಂಟಪ ಶಾಲಾ ಮಕ್ಕಳ ಪಾಲಿನ  “ಗಾಂಧಿ ತಾತಾ” ಆಗಿದ್ದರು ಎಂದು  ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯಪಟ್ಟರು.

ಇಂದು ದಾವಣಗೆರೆಯ ತರಳಬಾಳು ಬಡಾವಣೆಯಲ್ಲಿ ಏರ್ಪಾಡಾಗಿದ್ದ ಆರೂಢ ದಾಸೋಹಿ ಮಹಾಶರಣ ಮಾಗನೂರು ಬಸಪ್ಪನವರ 27ನೆಯ  ಮತ್ತು ಸರ್ವಮಂಗಳಮ್ಮನವರ 14ನೆಯ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

80ರ ದಶಕದಲ್ಲಿ “ಅನುಭವ ಮಂಟಪ ಶಾಲೆ” ಪ್ರಾರಂಬಿಸಿದಾಗ ಅಪಾರ ಸಂತೋಷ ವ್ಯಕ್ತಪಡಿಸಿದ್ದ ಬಸಪ್ಪನವರು,  ಶಾಲಾ ಆವರಣದಲ್ಲಿ ವಾಯು ವಿಹಾರ ಮಾಡುತ್ತ, ವಚನ ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದರು. “ಓಂ ನಮಃ ಶಿವಾಯ” ಎಂಬ ಮಂತ್ರವನ್ನು ಜಪಿಸುತ್ತಾ ತಮ್ಮ ಕಾಯಕವನ್ನು ಆರಂಭಿಸುತ್ತಿದ್ದರು.  ಮನೆಯ ಎಲ್ಲಾ ಮಕ್ಕಳು, ಮೊಮ್ಮಕ್ಕಳಿಗೂ ಆಧ್ಯಾತ್ಮಿಕ ಸಂಸ್ಕಾರ ನೀಡಿದ್ದರು. ಇಂದು

ಸಾವಿರಾರು ಪೋಷಕರಿಗೆ ತಮ್ಮ ಮಕ್ಕಳು ಅನುಭವ ಮಂಟಪ ಶಾಲೆಯಲ್ಲಿ ಓದುವುದು ಅಭಿಮಾನದ ಸಂಗತಿ ಎಂದು ಭಾವಿಸಿದ್ದಾರೆ. ಅಂತಹ  ಶಾಲೆ ಕಟ್ಟಲು ಬಸಪ್ಪನವರು ಪ್ರೇರಣೆಯಾಗಿದ್ದರು ಎಂದು ಗುಣಗಾನ ಮಾಡಿದರು. ದಾನ ಎಂಬುದು ಎಂದೂ ಬತ್ತದ ಒರತೆ ನೀರಿದ್ದಂತೆ. ದುಡಿದದ್ದರಲ್ಲಿ ಸ್ವಲ್ಪ ಭಾಗ ದಾನ ಮಾಡುವುದರಿಂದ ಮುಂದಿನ ಜನ್ಮದಲ್ಲಿ ನಾವು ಹುಟ್ಟುವ ಮನೆಯಲ್ಲಿ ದಾನ ಸಿಗುತ್ತದೆ ಎಂಬ ಭಾವ ಬಸಪ್ಪನವರದಾಗಿತ್ತು.

ತಮ್ಮ ಜೀವನಾನುಭವಗಳನ್ನು ಕುರಿತು ಪುಸ್ತಕ ಬರೆಯಲು ಒತ್ತಾಯಿಸಿದೆವು.  ಆಗ ಅವರು ಮೊಮ್ಮಕ್ಕಳು  ಬರೆದು ಉಳಿದ ಹಾಳೆಗಳಲ್ಲಿ ಬರೆದಿದ್ದರು. ಅಪಾರ ಸಂಪತ್ತನ್ನು ದಾನ ಮಾಡಿದ ಅವರು ಮಿತವ್ಯಯಿ ಆಗಿದ್ದರು ಎಂಬುದನ್ನು ಶ್ರೀಗಳು ಸ್ಮರಿಸಿದರು.

ಸಮಾಜದ ಬಗ್ಗೆ ಅಪಾರ ಹೊಂದಿದ್ದ ಕಾಳಜಿ ಅವರು ಸಮಾಜದ ಹಿತಾಸಕ್ತಿ ಮೊದಲು, ಸ್ವಂತ ಕೆಲಸ ನಂತರ ಎಂಬ ಧ್ಯೇಯ ಅವರದಾಗಿತ್ತು. ಎಷ್ಟೋ ಮದುವೆ ಸಮಾರಂಭಗಳಲ್ಲಿ ಮೊದಲು ಲಗ್ನದ ಫಂಡ್, ಆನಂತರ ಊಟ, ಸಮಾಜದ ಅಭಿವೃದ್ಧಿಗಾಗಿ ಫಂಡ್ ಕೊಡುವವರೆಗೂ ಊಟ ಮಾಡುತ್ತಿರಲಿಲ್ಲ ಎಂಬ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಉನ್ನತ ಸ್ಥಾನದಲ್ಲಿರುವವರು ಬಹುತೇಕ ಏಕಾಂಗಿ ಎಂಬ ಮಾತಿದೆ. ಅದರಂತೆ ನಮ್ಮ ಅಂತರಂಗ ವಿಚಾರಗಳನ್ನು ಮತ್ತು ಕಷ್ಟ ಸುಖಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗುತ್ತಿರಲಿಲ್ಲ. ಹಾಗೆ ಹಂಚಿಕೊಳ್ಳಬಹುದಾದ ಏಕೈಕ ವ್ಯಕ್ತಿ ಬಸಪ್ಪನವರಾಗಿದ್ದರು. ಅವರು ನಿಧನರಾದಾಗ ನಮಗೆ ಆಸರೆಯಾಗಿದ್ದ ಊರುಗೋಲೊಂದು ಮುರಿದಂತಾಗಿದೆ ಎಂದರು.

ನುಡಿ ನಮನ ಸಲ್ಲಿಸಿದ ನಿವೃತ್ತ ಪ್ರಾಚಾರ್ಯ ಡಾ. ನಾ ಲೋಕೇಶ ಒಡೆಯರ್,

ದಾವಣಗೆರೆ ನಗರ ಉತ್ತರೊತ್ತರವಾಗಿ ಪ್ರಗತಿಗೆ ಹೊಂದಲು ಬಸಪ್ಪನವರ ಶ್ರಮ ಅಪಾರವಾದುದು. ಹಿರಿಯ ಶ್ರೀ ತರಳಬಾಳು ಜಗದ್ಗುರುಗಳ ಸಂಪರ್ಕದಿಂದ ಶ್ರೀಮಠ ಮತ್ತು ಸಮಾಜಕ ಅಭಿವೃದ್ಧಿ ತಮ್ಮ ಜೀವನವನ್ನು ಸೇವೆಗೆ ಮೀಸಲಾಗಿಟ್ಟಿದ್ದರು. ಬಸಪ್ಪನವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರು ಜೀವಿತಾವಧಿಯಲ್ಲಿ ಮಾಡಿದ ಸತ್ಕಾರ್ಯಗಳ ಮೂಲಕ ಜೀವಂತವಾಗಿರುತ್ತಾರೆ. ಸರ್ವಮಂಗಳಮ್ಮನವರು ಬಸಪ್ಪನವರ ಸೇವೆಗೆ ಸದಾ ಬೆನ್ನೆಲೆಬಾಗಿದ್ದರು ಎಂಬುದನ್ನು ಸ್ಮರಿಸಿದರು.

9೦ ವರ್ಷಗಳ ತುಂಬು ಜೀವನ ನಡೆಸಿ, ಮನೆಗೆ ಮಲ್ಲಿಯಾಗಿ, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾಗಿ ಎಲ್ಲರೊಳಗೊಂದಾಗಿ ಬಾಳಿದವರು ಮಾಗನೂರು ಬಸಪ್ಪನವರು  ಎಂದು ಲೋಕೇಶ ಒಡೆಯರ್ ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಸವಂತಪ್ಪ ದೊಡ್ಡಮಲ್ಲಪ್ಪ  ಕುಂಬಾರ ಮಾತನಾಡಿ, “ಆಡುಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತಿನಂತೆ ಬಸಪ್ಪನವರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ. ಆದುದರಿಂದ 20ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರದ ಮೂಲಕ ಬಸಪ್ಪನವರ ಜೀವನ ಸಂದೇಶವನ್ನು ಯುವ ಜನಾಂಗಕ್ಕೆ ಪರಿಚಯಿಸುವ ಅಗತ್ಯವಿದೆ ಎಂದರು.

ಶ್ರೀ ತರಳಬಾಳು ಜಗದ್ಗುರುಗಳ ವಚನ ಸಾಹಿತ್ಯ ಪ್ರಚಾರ ಕಾರ್ಯ ಶ್ಲಾಘನೀಯವಾದುದು. ಪೂಜ್ಯರ ಮಾರ್ಗದರ್ಶನದಲ್ಲಿ ದಾವಣಗೆರೆ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವಾಗಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಬಸಪ್ಪನವರ ಟ್ರಸ್ಟ್ ಮಾಡುವ ಶೈಕ್ಷಣಿಕ ಮತ್ತು ಸಾಮಾಜಿಕ  ಕಾರ್ಯಗಳಿಗೆ  ನಮ್ಮ ವಿಶ್ವವಿದ್ಯಾಲಯವು ಸದಾ ನೆರವನ್ನು ನೀಡಲು ಸಿದ್ಧ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ,ಮುಖಂಡರಾದವರಿಗೆ ಪ್ರಾಮಾಣಿಕತೆ ಇದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಮಾಡಲು ಸಾಧ್ಯ. ಆದುದರಿಂದ ಮಾಗನೂರು ಬಸಪ್ಪನವರ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ನಿಷ್ಠಾವಂತ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಶಿಕ್ಷಣ ಮತ್ತು ದಾಸೋಹಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯವಾದುದು ಎಂದರು.

ಈ ಸಂದರ್ಭದಲ್ಲಿ ಸಂಸ್ಕರಣಾ ಗ್ರಂಥದ ಸಂಪಾದಕರ ಪರವಾಗಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ ಮಾತನಾಡಿದರು. ಬಸಪ್ಪನವರ ಜೀವನ ಚರಿತ್ರೆಯನ್ನು ಹಿಂದಿ ಭಾಷೆಗೆ ಅನುವಾದಿಸಿದ ವಿಶ್ರಾಂತ ಹಿಂದಿ ಉಪನ್ಯಾಸಕರಾದ ಡಾ. ಈಶ್ವರ ಶರ್ಮ ಮತ್ತು ಬಿ.ಎನ್.ಗೋವಿಂದರಾವ್ ಅವರನ್ನು ಸತ್ಕರಿಸಲಾಯಿತು.