2021-22ರ ವಾರ್ಷಿಕ ಮಹಾಸಭೆ ಹಾಗೂ 30ನೆಯ ಶ್ರದ್ಧಾಂಜಲಿಯ ಅಭಿನಂದನಾ ಕಾರ್ಯಕ್ರಮ : ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಚನ

  •  
  •  
  •  
  •  
  •    Views  

ಸಿರಿಗೆರೆ : 1922 ರಿಂದ ಪ್ರಸ್ತುತ ದಿನಗಳವರೆಗೆ ನೂರು ವರ್ಷಗಳ ಕಾಲಾವಧಿಯಲ್ಲಿ ಶ್ರೀಮಠದ ಪರಂಪರೆಯಲ್ಲಿ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ ಕ್ರಾಂತಿಗೆ ಶ್ರಮಿಸಿದ  ಲಿಂ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಲಿಂ.ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ ಕಾಯಕ ಶ್ಲಾಘನೀಯವಾದುದು ಹಾಗೂ ಸಮಾಜದಲ್ಲಿನ ಶೈಕ್ಷಣಿಕ ಅಭಿವೃದ್ಧಿಗೆ ತರಳಬಾಳು ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು.

ಭಾನುವಾರದಂದು ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಜರುಗಿದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ 2021-22ನೆಯ ಸಾಲಿನ ವಾರ್ಷಿಕ ಮಹಾಸಭೆ ಹಾಗೂ 30ನೆಯ ಶ್ರದ್ಧಾಂಜಲಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಗುರುಶಾಂತರಾಜದೇಶಿಕೇಂದ್ರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಸಭೆ ಕುರಿತು ಆಶೀರ್ವಚನ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ತರಳಬಾಳು ಜಗದ್ಗುರು ಸಂಸ್ಥೆಯು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶಿಕ್ಷಣ ಕ್ರಾಂತಿಗೆ ಶ್ರದ್ಧೆ, ನಿಷ್ಠೆಯಿಂದ ನೆರವಾಗುತ್ತಾ ಬಂದ ನಮ್ಮ ಹಿಂದಿನ ಗುರುವರ್ಯರಿಗೆ ಅಭಿನಂದನೆ ಸಲ್ಲಿಸಿ, ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವುದಕ್ಕೆ ಕಾರಣ ಸಂಸ್ಥೆಯ ಜವಾಬ್ದಾರಿಯುತ  ಶಿಕ್ಷಕರುಗಳು ಉತ್ತಮ ಸೇವೆ ಸಲ್ಲಿಸಿದ್ದಾರೆ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರೀಸಂಸ್ಥೆಯ 30 ಪ್ರೌಢಶಾಲೆಗಳಿಗೆ ಶೇ 100 ರಷ್ಟು ಫಲಿತಾಂಶ ಬಂದಿದ್ದು, 20 ವಿದ್ಯಾರ್ಥಿಗಳು "ಚಿನ್ನದ ಪದಕ" ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಿರಿಗೆರೆಯಲ್ಲಿ ಪಿಯುಸಿ ವಿಜ್ಞಾನ ವಿಷಯಗಳನ್ನು ಅಭ್ಯಾಸ ಮಾಡುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಯೋಜನೆ ಕಲ್ಪಿಸಲಾಗಿದೆ. 1000 ವಿದ್ಯಾರ್ಥಿಗಳು ಹಾಗೂ 1000 ವಿದ್ಯಾರ್ಥಿನಿಯರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗಿದೆ. ನುರಿತ ಅಧ್ಯಾಪಕರ ಯೂಟ್ಯೂಬ್ ಪಾಠಗಳನ್ನು ಶ್ರೀಮಠದ ವೆಬ್ ಸೈಟ್ ನಲ್ಲಿ ವೀಕ್ಷಿಸುವ ಹಾಗೆ ಮಾಡಲಾಗಿದೆ ಎಂದರು.

ಬ್ರಿಟಿಷರು ನಮ್ಮ ದೇಶದ ಮೇಲೆ ಆಡಳಿತ ಹೊಂದಿದ್ದರು. ಆದರೆ ಇಂದು ಭಾರತೀಯ ಮೂಲದ ಬ್ರಿಟನ್ ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ರಿಷಿ ಸುನಕ್ ರವರು ಬ್ರಿಟನ್ನಿನ ಪ್ರಧಾನಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಭಕ್ತರ ಹೃದಯದಲ್ಲಿ ಮಾನವೀಯ ಧರ್ಮ ಅಡಕ:

ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 30ನೆಯ ಶ್ರದ್ಧಾಂಜಲಿ ಸಮಾರಂಭದ ಯಶಸ್ವಿಗೆ ಕಾರಣರಾದ ಸಿರಿಗೆರೆ ಸುತ್ತಮುತ್ತಲಿನ ಗ್ರಾಮಸ್ಥರು, ಶಿವಸೈನ್ಯ ಹಾಗೂ ದವಸ-ಧಾನ್ಯ ನೀಡಿದ ಸದ್ಭಕ್ತರು, ಸಮೀಪದ ಗೌರಮ್ಮನಹಳ್ಳಿಯ ಭಕ್ತಾದಿಗಳು ವಿವಿಧ ತರಕಾರಿಗಳನ್ನು ನೀಡಿದಕ್ಕೆ ಅಭಿನಂದಿಸಿ ಮಾತನಾಡಿ, ಧರ್ಮ ಸಮಾಜದಲ್ಲಿ ಬೇರೆ-ಬೇರೆ ರೀತಿಯಲ್ಲಿ ಇರಬಹುದು ಆದರೆ ನಮ್ಮ ಭಕ್ತರ ಹೃದಯದಲ್ಲಿ ಮಾನವೀಯ ಧರ್ಮ ಅಡಕವಾಗಿದೆ ಎಂದು ತಿಳಿಸಿದರು.

13 ಕುಟುಂಬಕ್ಕೆ ಅನುಕಂಪ ನಿಧಿ:

ವಿದ್ಯಾಸಂಸ್ಥೆಯಲ್ಲಿ ಅಕಾಲಿಕ ಮರಣಕ್ಕೆ ತುತ್ತಾದವರ ಕುಟುಂಬ ವರ್ಗಕ್ಕೆ ಮೌನಾಚರಣೆ ಸಲ್ಲಿಸಿ, 1987ರಲ್ಲಿ ಪ್ರಾರಂಭಿಸಲಾದ ಅನುಕಂಪ ನಿಧಿಯನ್ನು 13 ಕುಟುಂಬದವರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಸವರಾಜಪ್ಪ, ಮುಂಡರಗಿಯ ಮಾಜಿ ಸಹಕಾರ ಸಚಿವರು ಎಸ್. ಎಸ್ ಪಾಟೀಲ್ ರವರು, ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಆರ್.ಓಂಕಾರಪ್ಪ, ಶಾಂತನಗೌಡ,  ಕೇಂದ್ರ ಕಾರ್ಯಕಾರಿ, ಸ್ಥಳೀಯ ಸಲಹಾ, ಕಾನೂನು, ಕಟ್ಟಡ, ಕೃಷಿ, ಲೆಕ್ಕಪರಿಶೋಧನಾ, ಹಾಸ್ಟೆಲ್, ವಾಹನ ಸಂರಕ್ಷಣಾ, ಪ್ರಾಥಮಿಕ ಶಿಕ್ಷಣ ಸಮಿತಿಯ ಸದಸ್ಯರು, ಪ್ರಾದೇಶಿಕ ಅಧಿಕಾರಿಗಳು, ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ನೌಕರರು  ಇದ್ದರು.

ಅಕೌಂಟೆಂಟ್ ಶಿವಕುಮಾರ್ ಆಯವ್ಯಯ-ಆಸ್ತಿ, ಜವಾಬ್ದಾರಿ ತಃಖ್ತೆ ಓದಿದರು, ರಶ್ಮಿ ಮತ್ತು ಸಂಗಡಿಗರಿಂದ ವಚನಗೀತೆ ಜರುಗಿತು, ರಾಜಶೇಖರಯ್ಯ ನಿರೂಪಿಸಿದರು, ಜಿ.ಟಿ.ಬಸವರಾಜು ಆಹ್ವಾನ ಪತ್ರಿಕೆ ಓದಿದರು.