ಇಂದು ೬೭ ನೆಯ ಕನ್ನಡ ರಾಜ್ಯೋತ್ಸವ - ಕನ್ನಡ ಎನೆ ಕುಣಿದಾಡುವುದೆನ್ನೆದೆ....
ಇಂದು ರಾಜ್ಯೋತ್ಸವ. ಕನ್ನಡ ಭುವನೇಶ್ವರಿಯ ತೇರನೆಳೆಯಲು ನಾ ಮುಂದು ತಾ ಮುಂದು ಎಂಬ ಆರ್ಭಟ! ಎಲ್ಲೆಡೆ ಕನ್ನಡ ಬಾವುಟಗಳ ಹಾರಾಟ! ರಾಜ್ಯೋತ್ಸವ ಪ್ರಶಸ್ತಿಗೆ ಪರದಾಟ! ಸಿಕ್ಕದವರಿಗೆ ಸಂಕಟ! ಆದರೂ ಕನ್ನಡಿಗರೆಲ್ಲರೂ ಒಗ್ಗೂಡಿ ಆಚರಿಸುವ ಸಂಭ್ರಮದ ದಿನ. ಇಂತಹ ಸಂತಸದ ದಿನದಂದು ಕನ್ನಡಿಗರೊಬ್ಬರ ಮನೆಯಲ್ಲಿ ಗಾಬರಿಗೊಳಿಸುವ ಸುದ್ದಿ: “ಅರ್ಲಿ ಇನ್ ದ ಮಾರ್ನಿಂಗ್ ನಮ್ಮನೇಲಿ ಒನ್ ಷಾಕಿಂಗ್ ಇನ್ಸಿಡೆಂಟ್ ಆಯ್ತು ಸರ್. ನಮ್ ಫಾದರ್ಗೆ ಸಡನ್ ಹಾರ್ಟ್ ಅಟ್ಯಾಕ್. ಇಮ್ಮಿಡಿಯೇಟ್ಟಾಗಿ ಟ್ಯಾಕ್ಸಿ ಮಾಡಿಕೊಂಡು ಹಾಸ್ಪಿಟಲಿಗೆ ಹೋದೆ. ಲಕ್ಕೀಲಿ ಎಡ್ಮಿಶನ್ ಆಯ್ತು. ಕನಸರ್ನ್ಡ್ ಡಾಕ್ಟರ್ ಜಸ್ಟ್ ಬಂದಿದ್ರು, ಟ್ರೀಟ್ಮೆಂಟ್ ಸ್ಟಾರ್ಟ್ ಆಯ್ತು. ಈಗ ಸ್ವಲ್ಪ ಬೆಟರ್”. ಇದು ಇಂದಿನ ವಿದ್ಯಾವಂತರು ಕನ್ನಡದಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿ ಮಾತನಾಡುವ ಪರಿ. ಖ್ಯಾತ ಕನ್ನಡ ಸಾಹಿತಿ ಮಹದೇವ ಬಣಕಾರರು ತಮ್ಮ “ಆಂಗ್ಲರ ಆಡಳಿತದಲ್ಲಿ ಕನ್ನಡ” ಎಂಬ ಉದ್ ಗ್ರಂಥದಲ್ಲಿ ಉಲ್ಲೇಖಿಸಿರುವ ಕನ್ನಡದ ಆಡುನುಡಿಯ ಪರಿಷ್ಕತ ನಿರೂಪಣೆ. “ಯಾಕಪ್ಪಾ ಒಂದು ವಾರದಿಂದ ಕಾಲೇಜಿಗೆ ಬಂದಿಲ್ಲ?” ಎಂದು ಕೇಳಿದರೆ “ನಮ್ಮ ಗ್ರಾಂಡ್ ಫಾದರ್ ಡೆತ್ ಆಗಿದ್ರು ಸಾರ್, ಅದಕ್ಕೆ...”. ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದೀಯಾ? ಎಂದು ಕೇಳಿದರೆ “ಥರ್ಟಿಫೈ ಪಾಯಿಟ್ ಫೈವ್ ಬಂದು ಜಸ್ಟ್ ಪಾಸಾಗಿದೆ ಸಾರ್”, ಇದು ಇಂದಿನ ವಿದ್ಯಾರ್ಥಿಗಳಿಂದ ಬರುವ ಉತ್ತರ! ಈಗೀಗ ಟಿ.ವಿ ಚಾನಲ್ಗಳ ನಿರ್ವಾಹಕರು ಮಾತನಾಡುವ ಕನ್ನಡವಂತೂ ಕನ್ನಡ ಭುವನೇಶ್ವರಿಗೇ ಪ್ರೀತಿ! ಇದೇ ಮಾದರಿಯಲ್ಲೇ ನಮ್ಮ ಯುವಕರೂ ಮಾತನಾಡತೊಡಗಿದ್ದಾರೆ. “ಕನ್ನಡ ಎನೆ ಕುಣಿದಾಡುವುದೆನ್ನೆದೆ” ಎಂದು ಕುವೆಂಪು ಹಾಡಿದ್ದರೆ ಇಂಥ ಕನ್ನಡವನ್ನು ಕೇಳಿದಾಗ “ಕನ್ನಡ ಎನೆ ಗಡಗಡ ನಡುಗುವುದೆನ್ನೆದೆ” ಎಂಬಂತಾಗಿದೆ!
ಭಾಷೆಯು ಒಂದು ಪ್ರಾಂತದ, ಸಮಾಜದ ಸಂಸ್ಕೃತಿಯನ್ನು ಅದರ ಸೊಗಡನ್ನು ಅಭಿವ್ಯಕ್ತಗೊಳಿಸುತ್ತದೆ. ಕೌಟುಂಬಿಕ ಸಂಬಂಧ ಸೂಚಕ ಪದಗಳ ಸಂಪತ್ತು ಕನ್ನಡದಲ್ಲಿ ಹೇರಳವಾಗಿದೆ. ಇಂಗ್ಲೀಷಿನಲ್ಲಿ ಇಂತಹ ಆತ್ಮೀಯ ಸಂಬಂಧಗಳನ್ನು ಸೂಚಿಸುವ ಸ್ವತಂತ್ರ ಪದಗಳು ಹುಡುಕಿದರೂ ಸಿಕ್ಕುವುದಿಲ್ಲ. ಇಂಗ್ಲಿಷಿನಲ್ಲಿ ಮಾವನೂ ಅಂಕಲ್, ಚಿಕ್ಕಪ್ಪ ದೊಡ್ಡಪ್ಪ ಇಬ್ಬರೂ ಅಂಕಲ್ ಗಳೇ; ಅತ್ತೆಯೂ ಆಂಟಿ, ಚಿಕ್ಕಮ್ಮ, ದೊಡ್ಡಮ್ಮ ಇಬ್ಬರೂ ಆಂಟಿಗಳೇ! ಸಂಬಂಧ ಕೆಟ್ಟಾಗ ಅವರ ವರ್ತನೆಯೂ ಆಂಟಿ! ಹಾಗೆಯೇ ಅತ್ತೆ, ಸೊಸೆ, ಮಾವ, ಅಳಿಯ, ಭಾವ, ಮೈದುನ, ಷಡ್ಡಕ ಇವುಗಳಿಗೆ ಇಂಗ್ಲಿಷಿನಲ್ಲಿ ಶಬ್ದಗಳೇ ಇಲ್ಲ. ಸೊಸೆಯು “ಡಾಟರ್-ಇನ್-ಲಾ”, ಅಳಿಯ “ಸನ್-ಇನ್-ಲಾ”, ಮಾವ “ಫಾದರ್-ಇನ್-ಲಾ”, ಅತ್ತೆ “ಮದರ್-ಇನ್-ಲಾ”! ಅಂದರೆ ಕಾನೂನಿನಲ್ಲಿ (ಇನ್-ಲಾ) ಇವರು ಡಾಟರ್, ಸನ್, ಫಾದರ್, ಮದರ್ ಆಗುತ್ತಾರೆ; ಮದುವೆ ಮುರಿದುಬಿದ್ದರೆ ಎಲ್ಲ “ಇನ್-ಲಾ” ಗಳು “ಔಟ್-ಲಾ” (ಕ್ರಿಮಿನಲ್) ಗಳಾಗಿಬಿಡುತ್ತಾರೆ!
ಕನ್ನಡದಲ್ಲಿ ಹೇರಳವಾಗಿ ಇಂಗ್ಲಿಷ್ ಭಾಷೆಯ ಪದಗಳನ್ನು ಬಳಸಿದಂತೆ ಸಂಸ್ಕೃತ ಪದಗಳನ್ನೂ ಬಳಸುವುದನ್ನು ಕಾಣಬಹುದು. ಹಾಗೆ ಬಳಸಿದರೂ ಸಹ ಸಂಸ್ಕೃತ ಪದಗಳು ಕನ್ನಡ ಪದಗಳೇ ಎಂಬಷ್ಟು ಸಹಜವಾಗಿರುತ್ತವೆ; ಅನ್ಯಭಾಷೆಯ ಪದಗಳೆಂದು ತೋರಿಕೆಗಾದರೂ ಅನ್ನಿಸದೆ ಕನ್ನಡದಲ್ಲಿ ಹಾಸುಹೊಕ್ಕಾಗಿ ಬೆರೆತು ಹೋಗಿವೆ. “ಅವನು ಮಹಾ ಮೂರ್ಖ!” ಎಂಬ ವಾಕ್ಯದಲ್ಲಿ “ಮಹಾ” ಮತ್ತು “ಮೂರ್ಖ” ಎಂಬ ಎರಡೂ ಪದಗಳು ಸಂಸ್ಕೃತ ಪದಗಳೇ ಆಗಿವೆ. ಮಹಾಮೂರ್ಖ ಎಂಬುದನ್ನು “ದೊಡ್ಡ ಪೆದ್ದ" ಎಂದು ಅಚ್ಚಕನ್ನಡದಲ್ಲಿ ಹೇಳಬಹುದಾದರೂ ಹೇಳಿದವರೇ ಪೆದ್ದರೆನಿಸಿಕೊಳ್ಳುತ್ತಾರೆ. ಅದೇ ವಾಕ್ಯವನ್ನು ಅವನು “ಬಿಗ್ ಈಡಿಯಟ್” ಎಂದು ಇಂಗ್ಲಿಷ್ ಪದಗಳನ್ನು ಬೆರೆಸಿ ಹೇಳಿದರೆ ಜಾಣರಾಗುತ್ತಾರೆ. ಆದರೆ “ಬಿಗ್” ಮತ್ತು “ಈಡಿಯಟ್” ಎಂಬ ಪದಗಳು ಸುಂದರವಾದ ಗುಲಾಬಿ ಹೂವಿನ ಮಗ್ಗುಲಲ್ಲಿ ಇರುವ ಜೋಡಿ ಮುಳ್ಳುಗಳಂತೆ ಕನ್ನಡವನ್ನು ಕಂಗಾಲಾಗಿಸುತ್ತವೆ. ಭಾಷೆಯ ಇಂಥ ಭಯಂಕರ ಕಲಬೆರಕೆಗೆ ಕಾರಣವೇನು? ಇಂಗ್ಲಿಷ್ ಭಾಷೆಯ ಮೇಲಿನ ಮೋಹವೇ? ಕನ್ನಡ ಭಾಷೆಯ ಬಗೆಗೆ ಇರುವ ಅವಜ್ಞೆಯೇ?
ಕನ್ನಡದ ಹಿರಿಯ ತಲೆಮಾರಿನ ಸಾಹಿತಿಗಳನೇಕರಿಗೆ ಇಂಗ್ಲಿಷ್ ಭಾಷಾ ಸಾಹಿತ್ಯದಲ್ಲಿ ಪ್ರಕಾಂಡ ಪಾಂಡಿತ್ಯವಿದ್ದರೂ ಕನ್ನಡ ಭಾಷೆಯ ಬಗೆಗೆ ಅಪಾರ ಒಲವಿತ್ತು. ಬಿ.ಎಂ.ಶ್ರೀಯವರು ಇಂಗ್ಲಿಷಿನ ಪ್ರಾಧ್ಯಾಪಕರಾಗಿದ್ದರೂ ಕನ್ನಡಕ್ಕಾಗಿ ದುಡಿದರು. ಶಕುಂತಲೆ ಸ್ವಂತ ಮಗಳಲ್ಲದಿದ್ದರೂ ಪ್ರೀತಿಯಿಂದ ಪೊರೆದು ಪೋಷಿಸಿದ ಕಣ್ವ ಋಷಿಗಳಂತೆ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಏಳಿಗೆಗಾಗಿ ಪ್ರೀತಿಯಿಂದ ದುಡಿದು “ಕನ್ನಡದ ಕಣ್ವ” ಎನಿಸಿಕೊಂಡರು. ಶುದ್ಧ ಕನ್ನಡದಲ್ಲಿ ಮಾತನಾಡಬೇಕೆಂದು ಪಣತೊಟ್ಟ ಅಂದಿನ ತರುಣ ಅಧ್ಯಾಪಕರ ವಿಫಲ ಪ್ರಯತ್ನವೊಂದನ್ನು ತೀ.ನಂ.ಶ್ರೀಯವರು “ಕಾಸಿನ ಸಂಘ” ಎಂಬ ತಮ್ಮ ಪ್ರಬಂಧದಲ್ಲಿ ಚೇತೋಹಾರಿಯಾಗಿ ಚಿತ್ರಿಸಿದ್ದಾರೆ. ಒಂದು ದಿನ ಅಪರಾಹ್ನ ಅಧ್ಯಾಪಕರೆಲ್ಲರೂ ಕಾಫಿ ಸೇವಿಸುತ್ತಾ ಹರಟೆ ಹೊಡೆಯುತ್ತಿರುವ ಸಂದರ್ಭದಲ್ಲಿ ಈ ಸಂಘ ಮೈದಾಳಿತು. ಸಂಘದ ಸದಸ್ಯರುಗಳಾದ ಅಧ್ಯಾಪಕರುಗಳೆಲ್ಲರೂ ಶುದ್ಧ ಕನ್ನಡದಲ್ಲಿಯೇ ಮಾತನಾಡಬೇಕೆಂದು ಹೊಸ ಪ್ರತಿಜ್ಞೆ ಸ್ವೀಕರಿಸಿ ರೂಪಿಸಿದ ಸಂಘದ ನಿಯಮಾವಳಿಗಳ ಸಂಕಲನ ಹೀಗಿದೆ:
- ಕನ್ನಡವನ್ನು ಮಾತನಾಡುವಾಗ ಇಂಗ್ಲಿಷ್ ಪದಗಳನ್ನು ಬೆರೆಸಕೂಡದು.
- ಒಂದು ವಾಕ್ಯವನ್ನು ಕನ್ನಡದಲ್ಲಿ ಆರಂಭಿಸಿದರೆ ಆ ವಾಕ್ಯ ಪೂರ್ಣಗೊಳ್ಳುವ ತನಕ ಕನ್ನಡದಲ್ಲಿಯೇ ಇರಬೇಕು; ಇಂಗ್ಲೀಷಿನಲ್ಲಿ ಪ್ರಾರಂಭಿಸಿದರೆ ಇಂಗ್ಲಿಷಿನಲ್ಲೇ ಇರಬೇಕು. ನಡುವೆ ಕನ್ನಡದಿಂದ ಇಂಗ್ಲೀಷಿಗೆ, ಇಂಗ್ಲೀಷಿನಿಂದ ಕನ್ನಡಕ್ಕೆ ತಿರುಗಿಸಕೂಡದು.
- ವಾಕ್ಯವನ್ನು ಕನ್ನಡದಲ್ಲಿ ಪ್ರಾರಂಭಿಸಿ ಕನ್ನಡದಲ್ಲೇ ಮುಗಿಸಿದ ಬಳಿಕ ಮುಂದಿನ ವಾಕ್ಯಕ್ಕೆ ಇಂಗ್ಲೀಷನ್ನು ಶರಣುಹೊಕ್ಕರೆ ತಪ್ಪಿಲ್ಲ.
- ಮನೆಮಾತಿನಲ್ಲಿ ಬಳಕೆಯಲ್ಲಿರುವ ರೈಲು, ಮೋಟಾರು, ಕೋರ್ಟು, ಕಾಲೇಜು ಮೊದಲಾದ ಪದಗಳನ್ನು ಕನ್ನಡವೆಂದೇ ಪರಿಗಣಿಸಬೇಕು. ಹೊಗೆಬಂಡಿ, ಧೂಮಶಕಟ, ನ್ಯಾಯಸ್ಥಾನ ಎಂದು ತರ್ಜುಮೆ ಮಾಡಬೇಕಾಗಿಲ್ಲ.
- ನಿಯಮವನ್ನು ಮೀರಿ ಇಂಗ್ಲಿಷ್ ಪದಗಳನ್ನು ಬಳಸಿದರೆ ಒಂದು ಶಬ್ದಕ್ಕೆ ಒಂದು ಕಾಸಿನಂತೆ ದಂಡ ಕೊಡಬೇಕು.
ಈ ಸರಳ ಅಲಿಖಿತ ನಿಯಮಾವಳಿಗಳೊಂದಿಗೆ ಕನ್ನಡ “ಕಾಸಿನ ಸಂಘ” ಉತ್ಸಾಹದಿಂದ ಆರಂಭಗೊಂಡಿತು. ಆದರೆ ಬರುಬರುತ್ತಾ ಲೆಕ್ಕ ಪತ್ರವಿಟ್ಟು ದಂಡವನ್ನು ವಸೂಲು ಮಾಡುತ್ತಿದ್ದ ವಿಧಾಯಕನ ಎದುರು ಎಲ್ಲರೂ ದಂಡಕ್ಕೆ ಹೆದರಿ ತುಟಿ ಬಿಚ್ಚದಂತಾದರು. ಪಾಪ ಆ ವಿಧಾಯಕನಿಗೆ ತನ್ನದಲ್ಲದ ತಪ್ಪಿಗೆ ಬಹಿಷ್ಕಾರ! ಒಂದು ದಿನ ಅಪರಾಹ್ನ ಅದುವರೆಗೆ ಸಂಗ್ರಹವಾಗಿದ್ದ ದಂಡದ “ಕಾಸು”ಗಳನ್ನೆಲ್ಲಾ ಖರ್ಚು ಮಾಡಿ ಆತ ಎಲ್ಲರಿಗೂ ಭರ್ಜರಿ ಸಿಹಿ, ಖಾರ, ಕಾಫಿಗಳ ಸಮಾರಾಧನೆ ಏರ್ಪಡಿಸಿದ. ಹೀಗೆ ಕಾಫಿ ಕುಡಿಯುವಾಗ ಹುಟ್ಟಿದ ಅನ್ ರಿಜಿಸ್ಟರ್ಡ್ “ಕಾಸಿನ ಸಂಘ” ಕಾಫಿ ಗುಟುಕರಿಸುವುದರಲ್ಲಿಯೇ ಕೊನೆಗೊಂಡಿತಂತೆ!
ಅರ್ಧ ಶತಮಾನಕ್ಕಿಂತಲೂ ಹಿಂದೆ ಕನ್ನಡ ಶುದ್ಧಿಕರಣಕ್ಕೆ ಮಾಡಿದ ಪ್ರಯತ್ನ ವಿಫಲವಾದ ಪರಿ ಇದು. ಆದಾಗ್ಯೂ ಪ್ರಯತ್ನ ಮಾತ್ರ ಅನುಗಾಲ ನಡೆಯುತ್ತಿರಬೇಕು. ಪ್ರೈಮರಿಯಿಂದ ಪ್ರೌಢಶಾಲೆವರೆಗಿನ ಅಧ್ಯಾಪಕರುಗಳು ಈ ಕಡೆ ಗಮನ ಕೊಡಬೇಕು. ಮಕ್ಕಳು ಶುದ್ಧ ಕನ್ನಡವನ್ನು ಆಡುವ ಹಾಗೆ ಪ್ರೇರೇಪಣೆ ಮಾಡಬೇಕು. ಇಂದು ಕನ್ನಡ ಉಳಿದಿರುವುದೇ ಹಳ್ಳಿಯ ಅನಕ್ಷರಸ್ಥರಿಂದ, ಅರೆಬರೆ ಇಂಗ್ಲೀಷ್ ಬಲ್ಲ ವಿದ್ಯಾವಂತರಿಂದ ಕನ್ನಡ ಕ್ಷೀಣಿಸುತ್ತಿದೆ. ತೀ.ನಂ.ಶ್ರೀ ಅವರ ಮಾತಿನಲ್ಲೇ ಹೇಳುವುದಾದರೆ ವಿದ್ಯಾವಂತರಾಡುವ ಕನ್ನಡ “ತೇಪೆ ಹಾಕಿದ ಹರಿದ ಬಟ್ಟೆ!” ಥೇಟ್ ಕಾಲೇಜು ಯುವಕ/ಯುವತಿಯರ ಜೀನ್ಸ್ ಪ್ಯಾಂಟ್ ಥರ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು