• Kannada
  • Tamil
  • Hindi
  • ಕನ್ನಡ ಭುವನೇಶ್ವರಿಯ ಅಕ್ಕರೆಯ ಮಕ್ಕಳು!

    •  
    •  
    •  
    •  
    •    Views  

ಗತ್ತಿನಲ್ಲಿ ಅನೇಕ ಭಾಷೆಗಳನ್ನಾಡುವ ಜನರಿದ್ದಾರೆ. ಅವರೆಲ್ಲರೂ ತಾವಾಡುವ ಭಾಷೆಯ ಹೆಸರು ಏನೇ ಇರಲಿ ಅದನ್ನು “ಮಾತೃಭಾಷೆ” ಎಂದು ಕರೆಯುತ್ತಾರೆ. ಅದೇ ರೀತಿ ತಾವು ವಾಸಿಸುವ ದೇಶ ಯಾವುದೇ ಇರಲಿ ಅವರವರ ದೇಶವನ್ನು “ತಾಯಿನಾಡು” ಎಂದೇ ಕರೆಯುತ್ತಾರೆ. ಆದರೆ ಜರ್ಮನ್ ಭಾಷೆಯಲ್ಲಿ ಮಾತ್ರ ಜರ್ಮನ್ನರು ಎಲ್ಲರಂತೆ ಅವರಾಡುವ ಭಾಷೆಯನ್ನು “ಮಾತೃಭಾಷೆ” (Mutter Sprache) ಎಂದು ಕರೆದರೂ ತಮ್ಮ ದೇಶವನ್ನು “ತಾಯಿನಾಡು” ಎಂದು ಕರೆಯುವುದಿಲ್ಲ. “ತಂದೆಯ ನಾಡು” (Vater Land) ಎಂದು ಕರೆಯುತ್ತಾರೆ. 

ಪ್ರತಿಯೊಂದು ಪ್ರಜಾಪ್ರಭುತ್ವ ರಾಷ್ಟ್ರಕ್ಕೂ ತನ್ನದೇ ಆದ ಸಂವಿಧಾನ ಮತ್ತು ರಾಷ್ಟ್ರಧ್ವಜ ಇರುತ್ತದೆ. ಮೈಸೂರು ಅರಸರು ತಮ್ಮ ಆಡಳಿತ ಕಾಲದಲ್ಲಿ ಗಂಡಭೇರುಂಡ ಧ್ವಜವನ್ನು ಹೊಂದಿದ್ದಂತೆ ಹಿಂದಿನ ಅನೇಕ ರಾಜಮಹಾರಾಜರುಗಳು ತಮ್ಮದೇ ಆದ ವಿಶಿಷ್ಟ ಧ್ವಜಗಳನ್ನು ಹೊಂದಿದ್ದರು. ಆದರೆ ನಾಡಗೀತೆ ಎಂಬುದಿರಲಿಲ್ಲ. ಆಯಾಯ ರಾಜರ ಚಕ್ರವರ್ತಿಗಳ ವೀರ ಶೌರ್ಯ ಸಾಹಸಗಳನ್ನು ಬಣ್ಣಿಸುವ ಬಿರುದು-ಬಾವಲಿಗಳು ಇದ್ದವು. ಅವರು ಅರಮನೆಯ ರಾಜಸಭಾಂಗಣಕ್ಕೆ ಆಗಮಿಸುತ್ತಿದ್ದಂತೆಯೇ ವಂದಿ ಮಾಗಧರಿಂದ “ಭುಜಬಲ ಚಕ್ರವರ್ತಿ, ಮೂರು ರಾಯರ ಗಂಡ, ಚಂಡ ಪ್ರಚಂಡ ಉದ್ದಂಡ...” ಇತ್ಯಾದಿ ಬಹುಪರಾಕುಗಳು, ಜಯಘೋಷಗಳು ಮೊಳಗುತ್ತಿದ್ದವು. ಈ ರೀತಿಯ ಪದ್ಧತಿ ಧಾರ್ಮಿಕ ಕ್ಷೇತ್ರದಲ್ಲಿಯೂ ಇತ್ತು. ನಮ್ಮ ತರಳಬಾಳು ಗುರುಪರಂಪರೆಯಲ್ಲಿ ಶತಮಾನಗಳ ಕಾಲ ತುಳಿತಕ್ಕೆ ಒಳಗಾದ ಸಮಾಜವನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದವರು ಮತ್ತು ಅನೀತಿಯುತ ಜೀವನ ನಡೆಸುವವರನ್ನು ದಮನ ಮಾಡಲು ಹೋಗಿ ದುಷ್ಟಶಕ್ತಿಗಳ ಸನ್ನಾಹದಿಂದ ವಿಷಪ್ರಾಶನಕ್ಕೆ ಬಲಿಯಾದವರು ನಮ್ಮ ಗುರುಪಿತಾಮಹರಾದ ಶ್ರೀಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು (1938). ಅವರನ್ನು ಊರೂರುಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯುವಾಗ ಶಿಷ್ಯರು ಚಾಮರ ಬೀಸುತ್ತಾ “ಸಿರಿಗೆರೆಯ ದೊರೆಯೇ ನಿನಗಾರು ಸರಿಯೇ, ಸರಿ ಸರಿಯೆಂಬುವರ ಹಲ್ಲು ಮುರಿಯೇ, ಯತಿ ಕುಲ ತಿಲಕ ಬಹುಪರಾಕ್, ಬಹುಪರಾಕ್!” ಎಂದು ಉಗ್ಘಡಿಸಿ ಜಯಘೋಷ ಮಾಡುತ್ತಿದ್ದರು. ಅದೇ ಪದ್ಧತಿ ನಮ್ಮ ಗುರುಗಳು ಪಟ್ಟಕ್ಕೆ ಬಂದ (1940) ಆರಂಭದ ವರ್ಷಗಳವರೆಗೂ ಮುಂದುವರೆದಿತ್ತು. ಧಾರ್ಮಿಕ ಸಮಾನತೆಯನ್ನು ಪಡೆಯಲು, ಪರಿಶುದ್ಧ ಜೀವನವನ್ನು ನಡೆಸಲು ಶತಮಾನಗಳ ಹಿಂದೆ ಹೋರಾಟ ನಡೆಸಿದ ಕಾಲದಲ್ಲಿ ಇದು ಸರಿ ಇದ್ದಿರಬಹುದಾದರೂ, ಪ್ರಜಾಪ್ರಭುತ್ವ ಕಾಲದಲ್ಲಿ ಸಾಮಾಜಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಇಂತಹ ಬಹುಪರಾಕುಗಳಿಗೆ ಕಡಿವಾಣ ಹಾಕಿದವರು ಮತ್ತು ದುಷ್ಟಶಕ್ತಿಗಳ ಹುಟ್ಟಡಗಿಸಿ “ದಿಟ್ಟ ಹೆಜ್ಜೆಯ ಧೀರ ಸನ್ಯಾಸಿ” ಎನಿಸಿದವರು ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. “ವೀರನಾದರೆ ವೈರಿಯು ಮೆಚ್ಚಬೇಕು, ವೀರವ್ರತಿಯಾದರೆ ಅಂಗನೆಯರು ಮೆಚ್ಚಬೇಕು” ಎನ್ನುವ ಬಸವಣ್ಣನವರ ವಚನದ ಆಶಯದಂತೆ ನಡೆಧೀರರಾಗಿದ್ದರು. 

“ಮಠವನ್ನು ಆಶ್ರಯಿಸಿ ಬದುಕಬೇಕೆಂಬ ಜನರೇ ಬಹಳ. ಸ್ವಾರ್ಥವು ಸಿಗದಿದ್ದರೆ ನಿಂದಿಸುತ್ತಾರೆ. ಪರರ ನಿಂದೆಗೆ ಪ್ರತಿಯಾಗಿ ನಿಂದಿಸದೆ ಅವರ ವಿಷಯದಲ್ಲಿ ಉದಾಸೀನನಾಗಿರಬೇಕು. “ ನಾಯಿಗಳು ಹೆದರುವವರನ್ನು ಕಂಡರೆ ಬಹಳವಾಗಿ ಬೊಗಳುತ್ತವೆ, ಕೈಯಲ್ಲಿ ದೊಣ್ಣೆಯುಳ್ಳವನನ್ನು ಕಂಡರೆ ದಿಕ್ಕಾಪಾಲಾಗಿ ಓಡುತ್ತವೆ. ಪರರ ನಿಂದೆಗೆ ವೃಥಾ ವ್ಯಾಕುಲ ಪಡಬೇಡ. ನಿನ್ನಲ್ಲಿ ದೋಷವನ್ನು ಕಂಡು ಯಾರೂ ನಿಂದಿಸುವುದಿಲ್ಲ. ತಮ್ಮ ಸ್ವಾರ್ಥವು ಈಡೇರದ ಕಾರಣ ನಿಂದಿಸುತ್ತಾರೆ. ಸ್ವಾರ್ಥವು ಸಿಕ್ಕರೆ ಹೊಗಳುತ್ತಾರೆ; ಸಿಗದಿದ್ದರೆ ದೂಷಿಸುತ್ತಾರೆ. ಅವರ ಹೊಗಳಿಕೆಗೂ ಬೆಲೆಯಿಲ್ಲ; ಉಗುಳುವಿಕೆಗೂ ಬೆಲೆಯಿಲ್ಲ. ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳಲು ನಿಮ್ಮನ್ನು ಇಂದ್ರ-ಚಂದ್ರ ಎಂದು ಹೊಗಳಿ ಕೊನೆಗೆ ಕೈಕೊಡುತ್ತಾರೆ, ಎಚ್ಚರದಿಂದಿರಿ” ಎಂದು ತಮ್ಮ ಸುದೀರ್ಘ ಸಾರ್ವಜನಿಕ ಜೀವನದ ಸ್ವಾನುಭವದಿಂದ ನಮ್ಮ ಗುರುವರ್ಯರು ನಮಗೆ ಕಿವಿಮಾತು ಹೇಳಿದ್ದರು. ಅವರ ಈ ಅನುಭವದ ಮಾತುಗಳು ನಮ್ಮ ಸ್ವಾನುಭವಕ್ಕೆ ಬರಲು ಬಹಳ ವರ್ಷಗಳು ಹಿಡಿಯಲಿಲ್ಲ. ಇಂದು ಬಹುತೇಕ ಮಠಗಳು ಆಧ್ಯಾತ್ಮಿಕ ಕೇಂದ್ರಗಳಾಗುವುದಕ್ಕಿಂತ ಹೆಚ್ಚಾಗಿ ಲೌಕಿಕ ಆಶೋತ್ತರಗಳನ್ನು ಈಡೇರಿಸುವ ತಾಣಗಳಾಗಿವೆ. ನಮ್ಮ ಅನುಭವದಲ್ಲಿ ಯಾರಾದರೂ ಕೈಯಲ್ಲಿ ಅತಿ ದೊಡ್ಡ ಹಾರ ಹಿಡಿದುಕೊಂಡು ಬಂದರೆಂದರೆ ನಮ್ಮ ಕೊರಳಿಗೆ ಉರುಲು ಬಿತ್ತೆಂದೇ ಅರ್ಥ! ಆ ಅಸಾಮಾನ್ಯ ಹಾರದ ಹಿಂದೆ ಅಸಾಮಾನ್ಯ ಕೆಲಸವನ್ನು ಸಾಧಿಸಿಕೊಳ್ಳುವ ಹುನ್ನಾರವೇ ಇರುತ್ತದೆ! 

ಮೊನ್ನೆ ಸಿರಿಗೆರೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಬಾವುಟವನ್ನು ಹಾರಿಸುವಾಗ ನಮಗೆ ನೆನಪಾಗಿದ್ದು ಪುರಾಣಗಳಲ್ಲಿ ಬರುವ ಒಂದು ರೋಚಕ ಕಥಾಪ್ರಸಂಗ: ಒಮ್ಮೆ ತ್ರಿದೇವಿಗಳೆನಿಸಿದ ಸರಸ್ವತಿ, ಲಕ್ಷ್ಮೀ ಮತ್ತು ಪಾರ್ವತಿಯರಲ್ಲಿ ಯಾರು ಹೆಚ್ಚು ಸದ್ಗುಣಸಂಪನ್ನೆಯರು ಎಂಬ ವಿವಾದ ಉಂಟಾಗುತ್ತದೆ. ಇದನ್ನು ನಿರ್ಣಯಿಸಲು ನಾರದನಿಗೆ ವಹಿಸಲಾಗುತ್ತದೆ. ನಾರದನು ವಿಚಾರ ಮಾಡಿ ಅವರೆಲ್ಲರನ್ನೂ ಬಿಟ್ಟು ಅತ್ರಿ ಮಹರ್ಷಿಯ ಪತ್ನಿಯಾದ ಅನಸೂಯಾ ಹೆಚ್ಚು ಸದ್ಗುಣಶೀಲೆ ಎಂದು ತೀರ್ಮಾನ ಹೇಳುತ್ತಾನೆ. ನ್ಯಾಯಾಧೀಶರು ಯಾವುದೇ ತೀರ್ಪು ನೀಡಿದರೂ ಅದಕ್ಕೆ ಕಾರಣಗಳನ್ನು ಕೊಡಬೇಕಾಗುತ್ತದೆ. ಅದಕ್ಕೆ ಅನುಗುಣವಾಗಿ “ಅನುಸೂಯೆಯ ಪರಿಶುದ್ಧತೆಯು ಕಬ್ಬಿಣದ ಕಡಲೆಯನ್ನೂ ಬೇಯಿಸಬಲ್ಲುದು” ಎಂದು ನಾರದ ಕಾರಣ ಕೊಡುತ್ತಾನೆ. ತ್ರಿದೇವಿಯರಾದ ಸರಸ್ವತಿ, ಲಕ್ಷ್ಮೀ ಮತ್ತು ಪಾರ್ವತಿಯರು ಸಿಟ್ಟಿಗೆದ್ದು ಸ್ವತಃ ಈ ಕಾರ್ಯವನ್ನು ಮಾಡಿ ತೋರಿಸಲು ಯತ್ನಿಸಿ ವಿಫಲರಾಗುತ್ತಾರೆ. ಅನುಸೂಯೆಯ ಮೇಲಿನ ಅಸೂಯೆ ಅವರನ್ನು ಒಂದುಗೂಡಿಸುತ್ತದೆ. ತಮ್ಮ ಹೆಂಡತಿಯರ ಒತ್ತಾಯಕ್ಕೆ ಮಣಿದು ಬ್ರಹ್ಮ ವಿಷ್ಣು ಮತ್ತು ಶಿವ ಯುವ ಋಷಿಗಳ ವೇಷವನ್ನು ಧರಿಸಿ ಅತ್ರಿ ನದಿಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭವನ್ನು ಬಳಸಿಕೊಂಡು ಏಕಾಂಗಿಯಾಗಿ ಆಶ್ರಮದಲ್ಲಿದ್ದ ಅನಸೂಯೆಯ ಬಳಿ ಬರುತ್ತಾರೆ. ಆಕೆಯು ಆಶ್ರಮಕ್ಕೆ ಅತಿಥಿಗಳಾಗಿ ಬಂದ ಅವರ ಆತಿಥ್ಯವನ್ನು ಮಾಡಲು ಮುಂದಾಗುತ್ತಾಳೆ. ಆದರೆ ಅವರು ಒಂದು ವಿಶೇಷ ಉಪವಾಸ ಕೈಗೊಂಡಿದ್ದರಿಂದ ಬೆತ್ತಲೆಯಾಗಿ ಊಟ ಬಡಿಸಬೇಕೆಂದು ಆಗ್ರಹಪಡಿಸುತ್ತಾರೆ. ಇದರಿಂದ ಅನಸೂಯಾ ಕ್ಷಣಕಾಲ ದಿಗ್ಭ್ರಮೆಗೊಂಡರೂ ತನ್ನ ಗಂಡನ ಪಾದೋದಕವನ್ನು ಆ ತ್ರಿಮೂರ್ತಿಗಳ ಮೇಲೆ ಸಿಂಪಡಿಸಿ ಅವರನ್ನು ಶಿಶುಗಳನ್ನಾಗಿ ಮಾಡಿ ತನ್ನ ಎದೆ ಹಾಲು ಕುಡಿಸಿ ತೊಟ್ಟಿಲಲ್ಲಿ ಮಲಗಿಸುತ್ತಾಳೆ. ತ್ರಿದೇವಿಯರು ಗರ್ವಭಗ್ನರಾಗಿ ತಮ್ಮ ಗಂಡಂದಿರನ್ನು ಮೊದಲಿನ ರೂಪಕ್ಕೆ ತರುವಂತೆ ಮಹಾಸಾಧ್ವಿ ಅನುಸೂಯೆಯನ್ನು ಬೇಡಿಕೊಳ್ಳುತ್ತಾರೆ. 

ಈ ಪೌರಾಣಿಕ ಪ್ರಸಂಗ ನಮಗೆ ನೆನಪಾಗಲು ಕಾರಣ ಧ್ವಜಾರೋಹಣದ ಸಂದರ್ಭದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಧ್ವಜದ ಕಟ್ಟೆಯ ಮುಂದೆ ನಿಂತು ನಾಡಗೀತೆಯನ್ನು ಹಾಡಿದರು. ನಂತರ ಸಾಲುಸಾಲಾಗಿ ಶಿಸ್ತಿನಿಂದ ಹೆಜ್ಜೆ ಹಾಕಿ ಧ್ವಜವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಊರ ಬೀದಿಗಳಲ್ಲಿ ಕನ್ನಡ ಭುವನೇಶ್ವರಿಯ ವಿಗ್ರಹವನ್ನು ಸಾರೋಟಿನಲ್ಲಿರಿಸಿ ಮೆರವಣಿಗೆ ನಡೆಸಿ ಧ್ವಜದ ಕಟ್ಟೆಯ ಪಕ್ಕಕ್ಕೆ ತಂದು ನಿಲ್ಲಿಸಿದ್ದರು. 

ನಮ್ಮ ಎಡ-ಬಲದಲ್ಲಿ ನರ್ಸರಿ ಶಾಲೆಯ ಮಕ್ಕಳು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕುವೆಂಪು, ಗೋವಿಂದ ಪೈ, ದ.ರಾ.ಬೇಂದ್ರೆ, ತೀ.ನಂ.ಶ್ರೀ, ಬಿ.ಎಂ.ಶ್ರೀ, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್. ನರಸಿಂಹಸ್ವಾಮಿ, ಪು.ತಿ.ನ, ಗಿರೀಶ್ ಕಾರ್ನಾಡ್, ವಿ.ಕೃ.ಗೋಕಾಕ್, ಹುಯಿಲಗೋಳ ನಾರಾಯಣರಾವ್, ಪಾಪು ಮೊದಲಾದವರ ವೇಷಭೂಷಣ ಧರಿಸಿ ಕುಳಿತಿದ್ದರು. ಅವರ ಮುದ್ದು ಮುಖಗಳನ್ನು ನೋಡಿದಾಗ ಕನ್ನಡ ಭುವನೇಶ್ವರಿಯು ಸಾಧ್ವಿ ಅನಸೂಯಾಳಂತೆ ಅವರೆಲ್ಲರನ್ನೂ ಮತ್ತೆ ಶಿಶುಗಳನ್ನಾಗಿ ಮಾಡಿ ಕನ್ನಡ ನಾಡು ನುಡಿಯನ್ನು ಬೆಳೆಸಲು ಮರು ಜೀವದಾನ ಮಾಡಿದಂತೆ ತೋರಿತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.17-11-2022.

सार्वजनिक परिवहन का उपयोग करते हुए या इंतज़ार करते हुए समय का उपयोग करें।

நீரினுள் மறைந்திலங்கும் அழலனையதாம்,

இளங்கன்றின் சாற்றின் சுவையனையதாம்,

முகையினுள்ளே நறுமணமனையதாம்,

    கூடலசங்கமதேவனே, பெதும்பையின் காதலனையதாம்.