ಅಮೇರಿಕಾದಲ್ಲಿರುವ ಜೀವ ಶಾಸ್ತ್ರ ಸಂಶೋಧನಾ ವಿಜ್ಞಾನಿ ಡಾ.ಶಿವಕುಮಾರ್ ಶ್ರೀ ತರಳಬಾಳು ಜಗದ್ಗುರುಗಳಿಂದ ಆಶೀರ್ವಾದ ಪಡೆದರು
ದೂರದ ಅಮೇರಿಕಾ ದೇಶದ ಚಿಕಾಗೋ ನಗರದಿಂದ ಡಾ. ಶಿವಕುಮಾರ್ ಮತ್ತು ಅವರ ಶ್ರೀಮತಿ ಅನುಸೂಯ ಶಿವಕುಮಾರ್ ರವರು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭೇಟಿನೀಡಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಶ್ರೀಯುತರು ಮೂಲತಃ ಸಿರಿಗೆರೆ ಗ್ರಾಮದ ಸಮೀಪದಲ್ಲಿರುವ ಸಾಸಲು ಗ್ರಾಮದವರು. ಇವರು ಜೀವ ಶಾಸ್ತ್ರ ಸಂಶೋಧನಾ ವಿಜ್ಞಾನಿಯಾಗಿ ಚಿಕಾಗೋ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಶ್ರೀಮತಿ ಅನುಸೂಯಮ್ಮ ಇವರು ಡಾ.ಶಿವಕುಮಾರ್ ರವರ ಜೀವ ವಿಜ್ಞಾನ ಸಂಶೋಧನೆಗೆ ಪ್ರಯೋಗಾಲಯದಲ್ಲಿ ಸಹಾಯಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ.
ಅಮೇರಿಕದಲ್ಲಿದ್ದರೂ ಕನ್ನಡ ಸಾಹಿತ್ಯದ ಓದು ಮತ್ತು ಬರಹದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇವರು ಮತ್ತು ಇವರ ಪತ್ನಿ ಶ್ರೀಮತಿ ಅನುಸೂಯಮ್ಮ ಅಮೇರಿಕಾದಲ್ಲಿರುವ ಕನ್ನಡ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಅಮೇರಿಕದಲ್ಲಿ ಅನೇಕ ಕನ್ನಡ ಕಾರ್ಯಕ್ರಮಗಳನ್ನು ಕನ್ನಡ ಸಂಘದವತಿಯಿಂದ ಉತ್ತಮವಾಗಿ ಶ್ರಮಪಟ್ಟು ಸಂಘಟಿಸಿರುತ್ತಾರೆ.
ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಮತ್ತು ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ 500 ವಿದ್ಯಾರ್ಥಿಗಳು ಹಾಗೂ ಜೀವ ಶಾಸ್ತ್ರ ಸಂಶೋಧನಾ ವಿಜ್ಞಾನಿಗಳಾದ ಡಾ.ಶಿವಕುಮಾರ್ ಇವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಬಹಳ ಕುತೂಹಲದಿಂದ ಜೀವ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ವಿಜ್ಞಾನಿಗಳಿಂದ ಉತ್ತರ ಪಡೆದರು. ಜೀವ ಕೋಶಗಳು, ಡಿ.ಎನ್.ಎ, ಆರ್. ಎನ್.ಎ, ಬ್ಯಾಕ್ಟೀರಿಯಾ, ವೈರಸ್, ಎಚ್.ಐ.ವಿ, ಅನುವಂಶೀಯತೆ, ಡ್ರಗ್ ಹಾಗೂ ಕೊರೋನ ವೈರಸ್ ಈ ವಿಷಯಗಳಿಗೆ ಸಂಬಂಧಿಸಿದಂತೆ ಇವರೊಂದಿಗೆ ಸಂವಾದ ಮಾಡಲಾಯಿತು.
ಕನ್ನಡ ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವ ಶಿವಕುಮಾರ್ ರವರು ತಾವೇ ರಚಿಸಿದ ಪದ್ಯಗಳನ್ನು ಓದಿ ತಮ್ಮ ಕನ್ನಡ ಪ್ರೇಮವನ್ನು ಮೆರೆದರು. ಅಲ್ಲದೆ ಅಮೇರಿಕಾದಲ್ಲಿ ಕರ್ನಾಟಕದವರು ಯಾರೇ ಭೇಟಿಯಾದರೂ ಇವರು ಕನ್ನಡದಲ್ಲೇ ಮಾತನಾಡುತ್ತಾರೆ. ರಾಷ್ಟ್ರಕವಿ ಕುವೆಂಪು ರವರ ಮಾತಿನಲ್ಲಿ ಹೇಳುವುದಾದರೆ
“ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು!
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡವೇ ಸತ್ಯ! ಕನ್ನಡವೇ ನಿತ್ಯ!!”
ಇದೇ ಸಂದರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಡಾ.ಶಿವಕುಮಾರ್ ರವರನ್ನು ಸನ್ಮಾನಿಸಿ ಆರ್ಶೀವದಿಸಿದರು. ತಮ್ಮ ಆಶೀರ್ವಚನದಲ್ಲಿ ಶಿವಕುಮಾರ್ ರವರ ಸಂಶೋಧನೆ, ಕನ್ನಡ ಅಭಿರುಚಿ ಮತ್ತು ಗುರುಭಕ್ತಿಯನ್ನು ನೆರೆದಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಧಕರು ಸಿರಿಗೆರೆಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಭೌದ್ಧಿಕ ವಿಕಾಸ ಹೊಂದಲು ಸಹಕಾರಿಯಾಗುತ್ತದೆ ಅಲ್ಲದೆ ಇಂತಹ ಸಾಧಕರನ್ನು ನೋಡುವುದರಿಂದ ನಾವು ಏನಾದರು ಸಾಧಿಸಬೇಕೆಂಬ ಛಲ ಹುಟ್ಟುತ್ತದೆ ಎಂಬುದು ಈ ಸಂವಾದದ ಮೂಲ ಆಶಯ ಎಂದು ತಿಳಿಸಿದರು.
ಅಮೇರಿಕಾ ದೇಶಕ್ಕೆ ಹೋದಾಗಲೆಲ್ಲಾ ಶಿವಕುಮಾರ್ ರವರ ಮನೆಯಲ್ಲೇ ಶ್ರೀ ಜಗದ್ಗುರುಗಳು ಮೊಕ್ಕಾಂ ಮಾಡುತ್ತಾರೆ. ಆ ದೇಶದಲ್ಲಿ ಶ್ರೀಗಳು ಪ್ರವಾಸವನ್ನು ಇವರ ಕಾರಿನಲ್ಲಿಯೇ ಮಾಡುತ್ತಾರೆ. ಶಿವಕುಮಾರ್ ದಂಪತಿಗಳು ನೀಡುವ ಕಾಣಿಕೆಯನ್ನು ಇವರ ಹೆಸರಿನಲ್ಲಿ ಒಂದು ದತ್ತಿ ನಿಧಿ ಸ್ಥಾಪಿಸಿ ಇದರಿಂದ ಬರುವ ಬಡ್ಡಿ ಹಣದಲ್ಲಿ ಸಿರಿಗೆರೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತಿದೆ ಎಂದು ಶ್ರೀ ಜಗದ್ಗುರುಗಳು ಆಶೀರ್ವಚನದಲ್ಲಿ ತಿಳಿಸಿದರು.