ಮಕ್ಕಳ ಆಸಕ್ತಿಯಂತೆ ವಿದ್ಯಾಭ್ಯಾಸ ಮಾಡಿಸಲು ಶ್ರೀ ತರಳಬಾಳು ಜಗದ್ಗುರುಗಳವರ ಕರೆ
ರಸ್ತೆಗಳಂತೆ ಜನರು ಮನಸ್ಸುಗಳ ತಗ್ಗು ದಿಣ್ಣೆಗಳನ್ನು ತಿದ್ದಬೇಕಾಗಿದೆ : ಶಾಲಾ ಶತಮಾನೋತ್ಸವದಲ್ಲಿ ಶ್ರೀ ಜಗದ್ಗುರುಗಳವರ ಅಭಿಮತ
ತಿಪಟೂರು : ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಿದ್ಯಾಭ್ಯಾಸವನ್ನು ಮಾಡಿಸಬೇಕೇ ಹೊರತು ಒತ್ತಾಯ ಪೂರ್ವಕವಾಗಿ ಮಾಡಿಸಬಾರದು ಇದು ಎಲ್ಲಾ ತಂದೆ ತಾಯಿಗಳ ಕರ್ತವ್ಯವಾಗಬೇಕಾಗಿದೆ, ರಸ್ತೆಗಳಂತೆ ಜನರ ಮನಸ್ಸುಗಳ ತಗ್ಗು-ದಿಣ್ಣೆಗಳಿಂದ ತುಂಬಿದೆ. ಈ ತಗ್ಗುಗಳನ್ನು ತಿದ್ದಬೇಕಾಗಿದೆ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯಪಟ್ಟರು.
ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯ ಮತ್ತೀಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಹಯೋಗದಲ್ಲಿ ಶಾಲಾ ಶತಮಾನೋತ್ಸವ ಸಮಾರಂಭ (೧೯೧೯-೨೦೧೯)ದ ದಿವ್ಯ ಸಾನಿಧ್ಯವನ್ನು ವಹಿಸಿ ಶ್ರೀ ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿದರು.
ಪೋಷಕರು ತಮ್ಮ ಮಕ್ಕಳಲ್ಲಿನ ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ಕೊಡಿಸುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ಸಾಕಷ್ಟು ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಏರಲು ಬಯಸುತ್ತಾರೆ. ಅದನ್ನು ಬಿಟ್ಟು ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿದಾಗ ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಿದ್ದು ಸಮಯವನ್ನು ಉಳಿಸಲು ಸಹಕಾರಿ ಆಗಿದ್ದು ಅದನ್ನು ಬಳಕೆ ಮಾಡಿಕೊಳ್ಳಬೇಕು ಪ್ರಸ್ತುತ ದಿನದಲ್ಲಿ ಮದುವೆಯನ್ನು ಒತ್ತಾಯದಿಂದ ಮಾಡಲು ಸಾಧ್ಯವಿಲ್ಲ ಅದುದರಿಂದ ಎಲ್ಲಾ ಮಕ್ಕಳಿಗೂ ತಾಯಿಯೇ ಮೊದಲ ಗುರುವಾಗಿರುವುದರಿಂದ ಅದೇ ರೀತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವು ಒತ್ತಾಯ ಆಗಬಾರದು.
ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಣೆ ಸ್ಥಿತಿಯಲ್ಲಿದ್ದರೂ ಗ್ರಾಮೀಣ ಬಾಗದ ರಸ್ತೆಗಳು ಇನ್ನು ಗುಂಡಿ-ಹೊಂಡಗಳಿಂದ ತುಂಬಿದೆ. ಅದರಂತೆ ಪ್ರಸ್ತುತ ದಿನದಲ್ಲಿ ಜನರ ಮನಸ್ಸುಗಳು ಸಹ ತಗ್ಗು ಆಗಿದೆ. ಅದುದರಿಂದ ರಸ್ತೆ ಮತ್ತು ಜನರ ಮನಸ್ಸುಗಳ ತಗ್ಗು-ದಿಣ್ಣೆಗಳನ್ನು ತಿದ್ದಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಇತ್ತೀಚಿನ ದಿನದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಶೈಕ್ಷಣಿಕ ಸಂಸ್ಥೆಗಳ ಕಲಿಕಾ ವಿಧಾನವನ್ನು ಬದಲಾವಣೆ ಮಾಡುವಂತಹ ಅನಿವಾರ್ಯತೆ ಎದುರಾಗಿದೆ.
ಬ್ರಿಟಿಷರ ಆಳ್ವಿಕೆಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯೂ ಅವ್ಯವಸ್ಥೆಯಾಗುವ ಸಂದರ್ಭದಲ್ಲಿ ಮಠಗಳ ಮೂಲ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಮೆಕಾಲೆ ಶಿಕ್ಷಣ ಪದ್ದತಿ ಜಾರಿಗೆ ಬಂದು ಸಮಾಜದ ಸುವ್ಯವಸ್ಥೆ ಹಾಳಾಗುವ ಸಂದರ್ಭದಲ್ಲಿ ಮಠ ಮಂದಿರಗಳು ತಮ್ಮ ಧಾರ್ಮಿಕ ಕಾರ್ಯದ ಜೊತೆಗೆ ಶಾಲೆಗಳನ್ನು ತೆರೆದು ಸರ್ಕಾರದ ಮೇಲೆ ಅವಲಂಭಿತರಾಗದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಕೊಡಿಸಿದ್ದಾರೆ. ಮಗುವಿನ ಜ್ಞಾನ ಹೆಚ್ಚಾಗಲು ಸ್ವಾವಲಂಭಿಯಾಗಿ ಬದುಕಲು ಅಗತ್ಯವಿರುವ ಶಿಕ್ಷಣವನ್ನು ಸಮಾಜ ನೀಡುತ್ತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರದಿದ್ದರೆ ಜನರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬ ಉದ್ದೇಶದಿಂದಲೇ ಬ್ರಿಟಿಷರು ಮೆಕಾಲೆ ಮೂಲಕ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದರು. ಆ ಶಿಕ್ಷಣ ಪದ್ಧತಿಯ ಮೂಲಕ ಸಮಾಜದ ಬದಲಾವಣೆಯೂ ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಏಕೆಂದರೆ ಮನೆ-ಮಠ-ಮಂದಿರಗಳು ನೀಡುತ್ತಿದ್ದ ಸಂಸ್ಕಾರಯುತ ಶಿಕ್ಷಣದ ಮುಂದೆ ಮೆಕಾಲೆ ಪದ್ಧತಿ ಉಪಯುಕ್ತವಾಗಲಿಲ್ಲ.
ಸರ್ವ ಶಿಕ್ಷಣ ಅಭಿಯಾನದ ಮೂಲಕ ದೇಶದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಂದು ಮೂಲಭೂತ ಸೌಕರ್ಯಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದ ಕೀರ್ತಿ ವಾಜಪೇಯಿರವರಿಗೆ ಸಲ್ಲುತ್ತದೆ. ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾದ ಯುವಜನತೆಯೂ ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ಹಿಂದೆ ಸರಿದು ಸಮಾಜದೊಂದಿಗಿನ ಸಂಪರ್ಕವನ್ನು ಕಡಿತ ಮಾಡಿಕೊಳ್ಳುತ್ತಿರುವ ದುರಂತದ ಸಂಗತಿ ನಡೆಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಸ್ವಾತಂತ್ರ್ಯ ಹೋರಾಟಗಾರರ ಆಶಯದಂತೆ ಬ್ರಿಟಿಷರ ಪದ್ಧತಿಗಳನ್ನು ಬದಲಾವಣೆ ಮಾಡು ಸಲುವಾಗಿ ಹೊಸ ಶಿಕ್ಷಣ ನೀತಿ (ಎನ್.ಇ.ಪಿ.) ಜಾರಿಗೆ ತಂದಿದೆ. ಇದರಿಂದಾಗಿ ಸಮಾಜಿಕ ಜವಾಬ್ದಾರಿಯ ಜೊತೆಗೆ ನೈತಿಕ ಶಿಕ್ಷನಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದರು.
ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಪೂಜ್ಯರಾದ ಶ್ರೀ ಗುರುಪರದೇಶೀಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ದಯಪಾಲಿಸಿ, ದೇಶ, ಸಮಾಜ ವಿದ್ಯಾವಂತರಿಂದಲೇ ಅತೀ ಹೆಚ್ಚಾಗಿ ಹಾಳಾಗಿ ಹೋಗುತ್ತಿದೆ. ವಿದ್ಯಾವಂತರಲ್ಲಿನ ವಿದ್ಯೆಯ ಮದ, ಹಣದ ಮದ, ತಮ್ಮಲ್ಲಿನ ಅಹಂಕಾರದ ಮನೋಭಾವದಿಂದ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿನ ಸುಶಿಕ್ಷಿತರು ಉತ್ತಮವಾದ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಅದ್ದರಿಂದ ಉತ್ತಮ ಸಂಸ್ಕಾರಯುತ ನೈತಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಿದ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ ಸಾಮಾನ್ಯ ಜನರನ್ನು ಸರ್ಕಾರಗಳು ತಲುಪಬೇಕಾದರೆ ಸಹಕಾರಿ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರ. ಅದ್ದರಿಂದ ಸರ್ಕಾರಿ ಶಾಲೆಗಳ ಉಳಿವು ಅಗತ್ಯವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಅಗತ್ಯವಿದೆ. ಗ್ರಾಮೀಣ ಭಾಗದ ಜನರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರ ಬಂದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರುಗಳಿಗೆ ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಗೌರವಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ.ಸುದರ್ಶನ್, ಸಾಹಿತಿ ಸಿಡ್ಲೇಹಳ್ಳಿ ಡಾ.ಕಿರಣ್, ಮತ್ತಿಹಳ್ಳಿ ಪಟೇಲ ಎ.ಆರ್.ಜಯಣ್ಣ, ಗುಡಿಗೌಡರು ಎಂ.ಎಂ.ರಮೇಶ್, ಮತ್ತೀಹಳ್ಳಿ ಗ್ರಾ.ಪಂ.ಅಧ್ಯಕ್ಷ ಚನ್ನಬಸವಯ್ಯ, ಉಪಾಧ್ಯಕ್ಷೆ ತೀರ್ಥಾವತಿ, ಸದಸ್ಯರುಗಳಾದ ಎಂ.ಪಿ.ಹರೀಶ್, ರೇಣುಕಾ, ರೂಪಾ, ಎಂ.ಡಿ.ಹರೀಶ್ ಗೌಡ, ಪಿಡಿಓ ಗೋಪಿನಾಥ್ ಇದ್ದರು.