ಶಾಂತಿ ಮಂತ್ರದ ಅರ್ಥವನ್ನು ಪಾಲನೆಮಾಡಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂದೇಶ

  •  
  •  
  •  
  •  
  •    Views  

ಓಂ ಸಹನಾವವತು|  
ಸಹನೌ ಭುನಕ್ತು| 
ಸಹ ವೀರ್ಯಂ ಕರವಾವಹೈ| 
ತೇಜಸ್ವಿ ನಾಮಧೀತಮಸ್ತು ಮಾ ವಿದ್ವಿಷಾವ ಹೈ|
ಓಂ ಶಾಂತಿಃ ಶಾಂತಿಃ ಶಾಂತಿಃ||

ಇದರರ್ಥ: ರಕ್ಷಣೆಯಲ್ಲಿ, ಭಕ್ಷಣೆಯಲ್ಲಿ, ಬಲದಲ್ಲಿ, ಶಿಕ್ಷಣದಲ್ಲಿ ಸ್ನೇಹ ಸೌಹಾರ್ದದಲ್ಲಿ (ದ್ವೇಷಿಸದಿರುವಲ್ಲಿ) ನಾವೆಲ್ಲರೂ, ಅಂದರೆ ಪ್ರಪಂಚದ ಮಾನವರೆಲ್ಲರೂ ಕೂಡಿ ನಡೆಯೋಣ ಎಂಬುದು ನಮ್ಮ ಉಪನಿಷತ್ ಶಾಂತಿಮಂತ್ರದ ಅರ್ಥ, ಕೂಡಿ ಬಾಳುವುದರಲ್ಲೇ, ಕೂಡಿ ನಡೆಯುವುದರಲ್ಲೇ, ಕೂಡಿ ಓಡಾಡುವುದರಲ್ಲೇ ಕೂಡಿ ಕಲಿಯುವುದರಲ್ಲೇ, ಕೂಡಿ ಒಂದಾಗುವುದರಲ್ಲೇ,  ಮಾನವ ಕುಲದ ಕಲ್ಯಾಣವಿದೆಯೆಂದು ಇದರ ತಾತ್ಪರ್ಯ. ಇದೆಲ್ಲವನ್ನೂ ಪಠಿಸುತ್ತಲೇ ನಾವು ಒಬ್ಬರಿಂದೊಬ್ಬರು ದೂರವಾಗುತ್ತಿದ್ದೇವೆ. ಈಗ ಆ ಕಾಲ ಉಳಿದಿಲ್ಲ. ಈ ಮಂತ್ರದ ಎಷ್ಟೋ ಅಂಶಗಳು ಕಾರ್ಯಕಾರಿಯಾಗಿವೆ. “ಸಹನಾವವತು” ಇನ್ನೂ ಕಾರ್ಯಕಾರಿಯಾಗಬೇಕು. “ಸಹನೌಭುನಕ್ತು” ಕಾರ್ಯಕಾರಿಯಾಗಿದೆ. ಸಭೆ ಸಮಾರಂಭಗಳಲ್ಲಿ ಉಪಹಾರ ಗೃಹಗಳಲ್ಲಿ ಪ್ರಪಂಚದ ಎಲ್ಲಾ ಮಾನವರೂ ಒಂದುಗೂಡಿ ಉಣ್ಣುತ್ತಿದ್ದಾರೆ. ಅದನ್ನು ಅಧರ್ಮವೆಂದು ಯಾರೂ ಪ್ರತಿಭಟಿಸಿಲ್ಲ.ಯಾವ ಧರ್ಮಾಧಿಕಾರಿಯೂ ಅದಕ್ಕಾಗಿ ಯಾರಿಗೂ ಬಹಿಷ್ಕಾರ ಹಾಕಿಲ್ಲ. ಹಾಕಲು ಸಾಧ್ಯವೂ ಇಲ್ಲ. “ಸಹವೀರ್ಯಂಕರವಾವಹೈ” ಇದು ಮಾತ್ರ ತಮ್ಮ ತಮ್ಮ ನೇರಕ್ಕೆ ಬಳಕೆಯಾಗಿದೆ.

ತಾನು ಶಕ್ತಿಗಳಿಸಬೇಕು. ಎಲ್ಲರ ಕಲ್ಯಾಣಕ್ಕಾಗಿ ಇದು ಇನ್ನೂ ಬಳಕೆಯಲ್ಲಿಲ್ಲ. ಇದು  ತನ್ನ ನೇರವನ್ನೇ ಹಿಡಿದಿದೆ. “ತೇಜಸ್ವಿನಾವಧೀತಮಸ್ತು” ಇದು ಕಾರ್ಯಕಾರಿಯಾಗಿದೆ. ಶೈಕ್ಷಣಿಕ ರಂಗದ ಎಲ್ಲರಿಗೂ ಪ್ರವೇಶವುಂಟು. ಎಲ್ಲರೂ ಮಹಾವಿದ್ವಾಂಸರನ್ನು ಸರಿಗಟ್ಟಿ ವಿದ್ವಾಂಸರಾಗುತ್ತಿದ್ದಾರೆ. “ಮಾವಿದ್ವಿಷಾವಹೈ” “ಒಬ್ಬರು ಮತ್ತೊಬ್ಬರನ್ನು ದ್ವೇಷಿಸುವುದು ಬೇಡ” ಈ ಮಾತು ಕಾರ್ಯಕಾರಿಯಾಗಿಲ್ಲ. ಒಬ್ಬರೊನ್ನಬ್ಬರು ದ್ವೇಷಿಸುವುದರಲ್ಲೇ ತನ್ನ ಹಿತವಿದೆಯೆಂದು, ಹೀಗೆ ದ್ವೇಷಿಸುವುದೇ ತನ್ನ ಅಭ್ಯುದಯಕ್ಕೆ ಕಾರಣವೆಂದು ತಿಳಿದವರೇ ಹೆಚ್ಚು ಜನ. ಒಟ್ಟಿನಲ್ಲಿ ಈ ಶಾಂತಿ ಮಂತ್ರವನ್ನು ಇಂದು ನಾವು ತಿಳಿದೋ ತಿಳಿಯದೆಯೋ ಸನ್ನಿವೇಶಕ್ಕೆ ಹೊಸದಾಗಿ ಕೆಲವನ್ನು ಪಾಲಿಸುತ್ತಿದ್ದೇವೆ. ಕೆಲವನ್ನು ತಿರಸ್ಕರಿಸುತ್ತಿದ್ದೇವೆ. ಎಲ್ಲವನ್ನೂ ಪಾಲಿಸಬೇಕೆಂಬುದೇ ವೇದಧರ್ಮ. ಇದನ್ನು ಧರ್ಮಾಧಿಕಾರಿಗಳು ಜನರಿಗೆ ನಿತ್ಯ ಪಾಠವನ್ನಾಗಿ ಮಾಡಬೇಕು. ಈ ಮಂತ್ರವನ್ನು ಕೇವಲ ಪಠಿಸುವುದರಲ್ಲಲ್ಲ-ಇದರ ಅರ್ಥವನ್ನು ಪಾಲಿಸುವುದರಲ್ಲಿ.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

ದಿಟ್ಟಹೆಜ್ಜೆ ಧೀರಕ್ರಮ
ಪುಟ : 198