ಮಾತೃಭಾಷೆ ಶುದ್ಧವಾಗಿ ಮಾತನಾಡಿ : ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಸಿರಿಗೆರೆ: ಜಗತ್ತಿನ ಎಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ಶುದ್ಧವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಬೃಹನ್ಮಠ ಹಾಗೂ ತರಳಬಾಳು ಕಲಾಸಂಘದಿಂದ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ-2022 ಮೊದಲ ದಿನದ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪ ಅರ್ಪಿಸಿ‌ ಉದ್ಘಾಟಿಸಿ ಮಾತನಾಡಿದರು.

ಪಠ್ಯ ಪುಸ್ತಕಗಳು ಕೇವಲ ದಿಗ್ದರ್ಶಕಗಳು ಮಾತ್ರ. ಸಾಹಿತ್ಯ ಕೃತಿಗಳ ಅಧ್ಯಯನದಿಂದ ಭಾಷಾ ಪ್ರೌಢಿಮೆ ಬೆಳೆಯುತ್ತದೆ. ಪ್ರತಿಯೊಂದು ಭಾಷೆಗೂ ಆಡು ಭಾಷಾ ಸೊಗಡಿರುತ್ತದೆ. ಆ ಸೊಗಡನ್ನು ಅನುಭವಿಸಿ, ಆನಂದಿಸುವಂತಾಗಲು ಈ ರಾಜ್ಯೋತ್ಸವ ಪ್ರೇರಣೆಯಾಗಲಿ ಎಂದರು.

ಈ ನೆಲದಲ್ಲಿರುವ ನಾಗರಿಕತೆ, ಸಂಸ್ಕೃತಿ, ಮೌಲ್ಯಗಳಿಂದ ಭಾರತ ವಿಶ್ವಗುರುವಾಗಿ ಬೆಳೆಯಲು ಕಾರಣವಾಗಿದೆ. ಭಾರತೀಯ ತತ್ತ್ವ ಚಿಂತನೆಗಳಲ್ಲಿ ವಿಶ್ವಮಾನವ ಪ್ರಜ್ಞೆ ಅಡಗಿದೆ ಎಂದು ಕರ್ನಾಟಕದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ. ಮದನಗೋಪಾಲ್ ಅಭಿಪ್ರಾಯಪಟ್ಟರು.

ಕನ್ನಡ ನಾಡಿನ ಹಳ್ಳಿಗಳಲ್ಲಿ ಕನ್ನಡ ಭಾಷೆಯು ಜೀವಂತವಾಗಿದೆ. ಆಡುಭಾಷೆ ಸೊಗಡಿನಲ್ಲಿರುವ ಒಗಟು, ಗಾದೆಗಳು, ಚುಟುಕುಗಳಲ್ಲಿ ಕನ್ನಡದ ಸತ್ವ ಅಡಗಿದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ಡಾ. ಬಿ.ವಿ. ವಸಂತಕುಮಾರ್ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಟ ಎಚ್.ಜಿ. ದತ್ತಾತ್ರೇಯ ಅವರನ್ನು ಸನ್ಮಾನಿಸಲಾಯಿತು. ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಹಾಸನದ ಬನುಮ ಗುರುದತ್ತ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ತರಳಬಾಳು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

ತರಳಬಾಳು ಕಲಾಸಂಘ ಜಾನಪದ ಸಿರಿಸಂಭ್ರಮ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು.

ಮೊದಲಿಗೆ ನಾಡಗೀತೆ ಮತ್ತು ರೈತಗೀತೆ ಹಾಡುವುದರೊಂದಿಗೆ ಮನರಂಜಿಸಿದರು.

ವೀರಣ್ಣ ಎಸ್. ಜತ್ತಿ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ, ಅಣ್ಣನ ಬಳಗದವರು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ಗ್ರಾಮಸ್ಥರು ಇದ್ದರು. ಕಾರ್ಯಕ್ರಮದಲ್ಲಿ ನಾಗರಾಜ ಸಿರಿಗೆರೆ ಸ್ವಾಗತಿಸಿದರು. ಶಿಕ್ಷಕ ರಂಗಣ್ಣ ನಿರೂಪಿಸಿದರು. ವಿಶ್ವಕುಮಾರ್ ಬಹುಮಾನ ವಿತರಣೆ ನಡೆಸಿಕೊಟ್ಟರು.