ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ
ಅಮೃತವತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ,
ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ,
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
ನಾಭಿರಾಜ ಮರುತಾದೇವಿಗೆ ಹುಟ್ಟಿದಾತನರುಹ.
ಇವರೆಲ್ಲರೂ ಯೋನಿಜರೆಂಬುದ ತೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮ ದೇವಂಗೆ
ಮಾತಾಪಿತರುಗಳುಳ್ಳಡೆ ಹೇಳಿರೋ!
ಇಂದ್ರನ ತಂದೆ-ತಾಯಿಗಳು ಸೋಮಶಂಭು ಮತ್ತು ಅಮೃತವತಿ, ಬ್ರಹ್ಮನ ತಂದೆ-ತಾಯಿಗಳು ಸತ್ಯಋಷಿ ಮತ್ತು ಜೇಷ್ಠಾದೇವಿ, ವಿಷ್ಣುವಿನ ತಂದೆ-ತಾಯಿಗಳು ವಸುದೇವ ಮತ್ತು ದೇವಕಿ, ಅರ್ಹಂತನ ತಂದೆ-ತಾಯಿಗಳು ನಾಭಿರಾಜ ಮತ್ತು ಮರುತಾದೇವಿ. ಹೀಗೆ ಇಂದ್ರ, ಬ್ರಹ್ಮ ವಿಷ್ಣು, ಅರ್ಹಂತ ಮೊದಲಾದವರೆಲ್ಲರಿಗೂ ಜನ್ಮ ನೀಡಿದ ಅವರವರ ತಂದೆತಾಯಿಗಳಿದ್ದಾರೆ. ಆದರೆ ಶಿವನಿಗೆ ಜನ್ಮ ನೀಡಿದ ತಂದೆತಾಯಿಗಳು ಇದ್ದಾರೆಯೇ? ಹೇಳಿ ಎಂದು ಬಸವಣ್ಣನವರು ಈ ವಚನದಲ್ಲಿ ಒಂದು ಕುತೂಹಲಕರವಾದ ಪ್ರಶ್ನೆಯನ್ನು ಕೇಳಿದ್ದಾರೆ.
ಲೌಕಿಕ ಜೀವನದಲ್ಲಿ ಮಕ್ಕಳು ಯಾರು ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ ಅವರಿಗೆ ಜನ್ಮ ನೀಡಿದ ತಂದೆತಾಯಿಗಳೇ ದೊಡ್ಡವರು. ಹೆತ್ತ ತಂದೆ-ತಾಯಿಗಳಿಗಿಂತ ಮಕ್ಕಳನ್ನು ಯಾರೂ ದೊಡ್ಡವರು ಎನ್ನುವುದಿಲ್ಲ, ಹಾಗೆಯೇ ಬಸವಣ್ಣನವರ ತಾರ್ಕಿಕ ದೃಷ್ಟಿಯಲ್ಲಿ ತಂದೆತಾಯಿಗಳಿಂದ ಜನ್ಮ ಪಡೆದ ದೇವತೆಗಳು ದೊಡ್ಡವರಲ್ಲ, ಬೇರೆ ದೇವತೆಗಳಿಗೆ ತಂದೆತಾಯಿಗಳು ಇದ್ದಂತೆ ಶಿವನಿಗೆ ಯಾವ ತಂದೆತಾಯಿಗಳೂ ಇಲ್ಲ. ಆದಕಾರಣ ಉಳಿದೆಲ್ಲ ದೇವರುಗಳಿಗಿಂತ ಶಿವನೇ ದೊಡ್ಡವನು ಎಂದು ಶಿವನ ಪಾರಮ್ಯವನ್ನು ಬಸವಣ್ಣನವರು ಈ ವಚನದಲ್ಲಿ ಎತ್ತಿ ತೋರಿಸಿದ್ದಾರೆ. ಮೇಲ್ನೋಟಕ್ಕೆ ಇದು ಮತೀಯ ಭಾವನೆಯನ್ನು ಬಿಂಬಿಸುವ ವಚನವಾಗಿ ಕಂಡುಬಂದರೂ ಇದರಲ್ಲಿ ಒಂದು ತಾತ್ವಿಕ ದರ್ಶನವಿದೆ (philosophical insight), ಬ್ರಹ್ಮ ವಿಷ್ಣುವಿನಂತೆ ಶಿವನಿಗೂ ಜನ್ಮವಿತ್ತ ತಂದೆತಾಯಿಗಳಿದ್ದಾರೆಂದು ಯಾವ ಪೌರಾಣಿಕ ಕಥಾನಕಗಳಲ್ಲಿಯೂ ಉಲ್ಲೇಖವಿಲ್ಲ. ಒಂದು ಪಕ್ಷ ಶಿವನಿಗೂ ಬೇರೆ ದೇವತೆಗಳಂತೆ ತಂದೆತಾಯಿಗಳು ಇದ್ದಾರೆಂದು ಹೇಳಿದ್ದರೆ ಆ ತಂದೆತಾಯಿಗಳ ತಂದೆತಾಯಿಗಳು ಯಾರು? ಮತ್ತೆ ಅವರ ತಂದೆತಾಯಿಗಳು ಯಾರು? ಎಂಬ ಪ್ರಶ್ನೆಗಳ ಸರಮಾಲೆಯೇ ಉದ್ಭವಿಸುತ್ತಿತ್ತು. ಇದು ಅನವಸ್ಥಾದೋಷಕ್ಕೆ (ad infinitum) ಕಾರಣವಾಗುತ್ತಿತ್ತು. ಇಲ್ಲಿ ಬಸವಣ್ಣನವರು ಕೇಳಿರುವ ಕೂಡಲಸಂಗಮ ದೇವರಿಗೆ ಮಾತಾಪಿತರುಂಟೇ? ಎಂಬ ಪ್ರಶ್ನೆಯನ್ನು ಮತೀಯ ದೃಷ್ಟಿಯಿಂದ ನೋಡದೆ ತಾತ್ವಿಕದೃಷ್ಟಿಯಿಂದ ನೋಡಬೇಕು. ಇಲ್ಲಿ ಬಳಸಿರುವ ಕೂಡಲಸಂಗಮದೇವಾ ಎಂಬ ಅಂಕಿತವನ್ನು ಶಿವನಿಗೆ ಸಮೀಕರಿಸಿದರೂ ದೇವನೊಬ್ಬ ನಾಮ ಹಲವು ಎಂದು ಅವರೇ ಹೇಳುವಂತೆ ಅದರ ಅರ್ಥ ದೇವರು ಎಂದು ಪರಿಭಾವಿಸಿ ದೇವರಿಗೆ ತಂದೆತಾಯಿಗಳುಂಟೇ? ಇಲ್ಲ ಎಂಬ ಭಾವಾರ್ಥವನ್ನು ಗ್ರಹಿಸಬೇಕು. ಆಗ ಬಸವಣ್ಣನವರ ದಿವ್ಯ ತಾತ್ವಿಕ ದೃಷ್ಟಿಯ ದರ್ಶನವಾಗುತ್ತದೆ. “ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮ ದೇವಂಗೆ” ಎನ್ನುವಲ್ಲಿ ಬಸವಣ್ಣನವರ ಈ ತಾತ್ವಿಕ ನಿಲುವು ಗೋಚರಿಸುತ್ತದೆ.
ಇದೇ ರೀತಿ ಸಿರಿಗೆರೆಯ ಗುರುಗಳಿಗೆ ಜನ್ಮ ನೀಡಿದ ತಂದೆತಾಯಿಗಳು ಇದ್ದಾರೆಯೇ ಎಂಬ ಪ್ರಶ್ನೆ ಶಿಷ್ಯರ ಮನಸ್ಸಿನಲ್ಲಿ ಎಂದೂ ಸುಳಿದಿಲ್ಲ. ಹಾಗೆ ಸುಳಿಯದಂತೆ ನಡೆದುಕೊಂಡವರು ನಮಗಿಂತ ಹೆಚ್ಚಾಗಿ ನಮ್ಮ ಪೂರ್ವಾಶ್ರಮದ ತಂದೆತಾಯಿಗಳಾದ ಈಶ್ವರಯ್ಯ ಮತ್ತು ಗಂಗಮ್ಮನವರು. ಅವರು ಇದ್ದಾರೆಂದು ಶಿಷ್ಯಮಂಡಳಿಗೆ ಗೊತ್ತಾಗಿದ್ದು ಎರಡು ಸಂದರ್ಭಗಳಲ್ಲಿ ಮಾತ್ರ: ಒಂದು ನಮ್ಮ ಪೀಠಾರೋಹಣದ ಸಂದರ್ಭದಲ್ಲಿ ಮತ್ತೊಂದು ಅವರು ಮರಣ ಹೊಂದಿದ ಸಂದರ್ಭ !
ಪೂರ್ವಜನ್ಮವಳಿದು ಪುನರ್ಜಾತನಾದ ಬಳಿಕ ನಂಟುಭಕ್ತಿ ನಾಯಕ ನರಕ! ಎಂದು ಬಸವಣ್ಣನವರು ಹೇಳುವಂತೆ ಶ್ರೀಗುರುವಿನಿಂದ ಅನುಗ್ರಹವನ್ನು ಪಡೆದು ಸ್ವಾಮಿಗಳಾದ ಮೇಲೆ ಹೆತ್ತವರ ಮತ್ತು ಒಡಹುಟ್ಟಿದವರ ಬಂಧುತ್ವದ ಸೋಂಕು ಇರಬಾರದು. ಈ ಹಿನ್ನೆಲೆಯಲ್ಲಿ ನಮ್ಮ ಗುರುವರ್ಯರು 1979 ರಲ್ಲಿ ನಮ್ಮನ್ನು "ತರಳ, ಬಾಳು" ಎಂದು ಹರಸಿ ಪೀಠಾರೋಹಣ ಮಾಡಿಸಿದ ಸಂದರ್ಭದಲ್ಲಿ ಸಮಸ್ತ ಶಿಷ್ಯ ಸಮುದಾಯದ ಎದುರಿನಲ್ಲಿ ನಮ್ಮ ಪೂರ್ವಾಶ್ರಮದ ತಂದೆತಾಯಿಗಳನ್ನು ಕರೆಸಿದ್ದರು. ನಮ್ಮಿಂದ ಅವರಿಗೆ ಒಂದು ಜೊತೆ ಬಟ್ಟೆಯನ್ನು ಉಡುಗೊರೆಯಾಗಿ ಕೊಡಿಸಿ ಅವರ ನಮ್ಮ ಕೌಟುಂಬಿಕ ಸಂಬಂಧ ಅಂದಿನಿಂದ ಕೊನೆಗೊಂಡಿತೆಂಬುದನ್ನು ಸಾರ್ವತ್ರಿಕವಾಗಿ ಮನದಟ್ಟು ಮಾಡಿಕೊಟ್ಟಿದ್ದರು.
ನಮ್ಮ ಗುರುವರ್ಯರು ಹಾಕಿ ಕೊಟ್ಟ ಆ ದಾರಿಯಲ್ಲಿ ಕಳೆದ ಮೂರು ದಶಕಗಳಿಂದ ಸುಗಮವಾಗಿ ನಡೆಯಲು ಯಾವುದೇ ರೀತಿಯ ಎಡರು ತೊಡರುಗಳು ಎದುರಾಗದಂತೆ, ಬಂಧುತ್ವದ ಇರುಸು ಮುರುಸು ಪ್ರಸಂಗಗಳು ನಮಗೆ ಉಂಟಾಗದಂತೆ ಎಚ್ಚರಿಕೆಯಿಂದ ನಡೆದುಕೊಂಡವರು ನಮ್ಮ ಪೂರ್ವಾಶ್ರಮದ ತಂದೆ-ತಾಯಿಗಳು. ನಮ್ಮ ಪೀಠಾರೋಹಣದ ಸಂದರ್ಭದಲ್ಲಿ ಅವರಿಗೆ ಉಡುಗೊರೆಯಾಗಿ ಕೊಟ್ಟ ಹೊಸ ಬಟ್ಟೆಗಳಿಗಿಂತ, ನಾವು ಕಾವಿ ಧರಿಸುವ ಮುನ್ನ ವಿದ್ಯಾರ್ಥಿಗಳಾಗಿದ್ದಾಗ ಉಟ್ಟು ತೊಟ್ಟು ಬಿಟ್ಟಿದ್ದ ಹಳೆಯ ಬಟ್ಟೆಗಳನ್ನು ಅವರು ನಮ್ಮಿಂದ ಕೇಳಿ ಪಡೆದು ಅವುಗಳನ್ನೇ ನೋಡಿ ತೃಪ್ತಿಪಟ್ಟುಕೊಂಡವರು. ಪೀಠಾರೋಹಣಕ್ಕೆ ಮುಂಚೆ ಪರದೇಶದಲ್ಲಿದ್ದಾಗ ಸಾಲ ವಸೂಲಾತಿಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮನೆಗೆ ಜಪ್ತಿ ಮಾಡಲು ಬಂದಿದ್ದರು ಎಂಬ ವಿಷಯ ನಂತರ ತಿಳಿಯಿತು. ಆದರೂ ಮಠದ ಮತ್ತು ಸಂಸ್ಥೆಯ ವ್ಯವಹಾರಗಳಲ್ಲಿ ನಮ್ಮಿಂದ ಅವರು ಎಂದೂ ಯಾವ ರೀತಿಯ favour ಬಯಸಿ ಬಂದವರಲ್ಲ, ತಮ್ಮ ಬಂಧುಮಿತ್ರರಿಗೆ ಶಿಫಾರಿಸು ಮಾಡಿದವರಲ್ಲ. ಕಳೆದ ಮೂರು ದಶಕಗಳಲ್ಲಿ ಅವರು ನಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇ ಕೈಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರ. ಸಭೆ-ಸಮಾರಂಭಗಳಲ್ಲಿ ಸಿಕ್ಕರೂ ಎಲ್ಲರಂತೆ ಗುಂಪಿನಲ್ಲಿ ಬಂದು ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ ಒಂದು ಮಾತನ್ನೂ ಆಡದೆ, ಯಾರೊಂದಿಗೂ ಹೆಚ್ಚು ಒಡನಾಡದೆ ಮೂಕರಂತೆ ಮೂಲೆಯೊಂದರಲ್ಲಿ ಕುಳಿತು ಸಭೆಯಲ್ಲಿ ನಾವಾಡುವ ಮಾತುಗಳನ್ನು ಕಿವಿಗೊಟ್ಟು ಆಲಿಸಿ ಆನಂದಿಸಿ ಯಾರಿಗೂ ಕಾಣಿಸಿಕೊಳ್ಳದಂತೆ ಸದ್ದು ಗದ್ದಲವಿಲ್ಲದೆ ಸರಿದು ಹೋಗುತ್ತಿದ್ದ ತಪಸ್ವಿಗಳು. ಮಠದಿಂದ ದೂರವಿದ್ದು ನಮಗೆ ಮಠದ ವ್ಯವಹಾರಗಳಲ್ಲಿ ಯಾವುದೇ ಬಂಧುತ್ವದ ಕಳಂಕ ಬರದಂತೆ ಎಚ್ಚರವಹಿಸಿದ್ದ ನಿಸ್ವಾರ್ಥ ಜೀವಿಗಳು! ಮಗುವಿನ ಮುಖಚರ್ಯೆ ನೋಡಿ ಮೂಗು ತಂದೆಯದು, ಕಣ್ಣು ತಾಯಿಯದು ಎಂದು ಹೇಳುತ್ತಾರೆ. ಹಾಗೆಯೇ ನಮ್ಮ ವ್ಯಕ್ತಿತ್ವದ ವಿಕಸನದಲ್ಲಿ ತಾಯಿಯಿಂದ ಶಾಂತಿ, ಸಮಾಧಾನ, ತಾಳ್ಮೆ, ಸಾತ್ವಿಕತೆ; ತಂದೆಯಿಂದ ಪರಿಶ್ರಮ, ಶಿಸ್ತು ಮತ್ತು ಸಿಟ್ಟು; ಗುರುವಿನಿಂದ ತ್ಯಾಗ, ಸಂಸ್ಕಾರ ಮತ್ತು ಬುದ್ಧಿ ಇವು ಮೈಗೂಡಿರುವಂತೆ ತೋರುತ್ತದೆ.
ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ಅಷ್ಟಾಗಿ ಓದು ಬರಹ ಬಾರದ ಹಳ್ಳಿಯ ಮುಗ್ಧ ಮಹಿಳೆ. ಅಪ್ರಾಪ್ತವಯಸ್ಕಳಾಗಿದ್ದಾಗಲೇ ತಮ್ಮ 14ನೆಯ ವಯಸ್ಸಿನಲ್ಲಿ ಹಸೆಮಣೆಯನ್ನೇರಿ ಈಶ್ವರಯ್ಯನವರ ಸಹಧರ್ಮಿಣಿಯಾದರು. ಆದರೆ ಈಶ್ವರಯ್ಯನವರೊಂದಿಗೆ ಸಂಸಾರ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಸಿಟ್ಟಿನಲ್ಲಿ ದೂರ್ವಾಸ ಮುನಿ. ಅದೆಲ್ಲವನ್ನೂ ಸಹಿಸಿಕೊಳ್ಳುವ ಅಪರಿಮಿತವಾದ ತಾಳ್ಮೆ ಗಂಗಮ್ಮನವರಿಗೆ ಇದ್ದರೂ ಮದುವೆಯಾದ ಏಳೆಂಟು ವರ್ಷಗಳ ಕಾಲ ಮಕ್ಕಳಾಗದ ಕಾರಣ ಸಮಾಜದಲ್ಲಿ ಕೇಳಿ ಬರುತ್ತಿದ್ದ ಬಂಜೆ ಎಂಬ ಮೂದಲಿಕೆಯ ಮಾತುಗಳು ಅವರ ಹೃದಯವನ್ನು ತುಂಬಾ ಘಾಸಿಗೊಳಿಸಿದ್ದವು. ನಮಗೆ ಜನ್ಮ ನೀಡಿದ ದಿನದಿಂದ ಆ ಕಟಕಿಯ ಮಾತುಗಳು ದೂರಾದವು. ನಾವು ಹುಟ್ಟಿದ ದಿನದಂದೇ ಆಕಸ್ಮಿಕವಾಗಿ ಆಗಮಿಸಿದ್ದ ನಮ್ಮ ಮಠದ ಆಗಿನ ವಿರಕ್ತಮೂರ್ತಿಗಳಾದ ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರಿಂದ ನಮಗೆ ನಾಮಕಾರಣವೂ ಆಯಿತು. ಬಂಜೆತನ ನಿವಾರಣೆಯಾದರೂ ಅದುವರೆಗೆ ಕೇಳಿದ್ದ ಚುಚ್ಚು ಮಾತುಗಳಿಂದ ಮನಸ್ಸಿಗೆ ಆಗಿದ್ದ ನೋವನ್ನು ಮರೆಯಲು ತಾಯಿಗೆ ಆಗಿರಲಿಲ್ಲ. ನಾವು ಬೆಳೆದಂತೆ ನಮ್ಮೊಂದಿಗೆ ಹಂಚಿಕೊಂಡಿದ್ದ ಆಗಿನ ಅವರ ವೇದನೆಯೇ ನಾವು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದಾಗ ಕಾಲೇಜಿನ ವಾರ್ಷಿಕ ಸಂಚಿಕೆಗೆ ಬರೆದಿದ್ದ “ನಟಿಕೆಯ ಹಿಂದೆ” ಎಂಬ ನಮ್ಮ ಲೇಖನಕ್ಕೆ ಪ್ರೇರಣೆ.
ಪಿತ್ರಾರ್ಜಿತ ಆಸ್ತಿಗಳಲ್ಲಿ ಒಂದು ಎಲೆ ಬಳ್ಳಿತೋಟವಿತ್ತು. ತೋಟದಲ್ಲಿ ಒಂದು ಕಪಿಲೆ ಬಾವಿ ಇತ್ತು. ಈಗಿನಂತೆ ಆಗ ಬೋರ್ ವೆಲ್ ಗಳು ಇರಲಿಲ್ಲ. ಆಗಾಗ್ಗೆ ತೋಟಕ್ಕೆ ನೀರು ಹಾಯಿಸಲು ತಂದೆತಾಯಿ ಹೋಗುತ್ತಿದ್ದರು. ಶಾಲೆಗೆ ರಜಾ ಇದ್ದ ದಿನ ನಾವೂ ಜೊತೆಗೆ ಹೋಗುತ್ತಿದ್ದೆವು. ತಂದೆ ಎತ್ತುಗಳನ್ನು ಹೂಡಿ ಕಪಿಲೆ ಬಾವಿಯಿಂದ ನೀರು ಹೊಡೆದರೆ, ತಾಯಿ ಕಾಲುವೆಯಲ್ಲಿ ಹರಿದು ಬಂದ ನೀರನ್ನು ತಿರುವಿ ಎಲೆಬಳ್ಳಿಗೆ, ಮಧ್ಯೆ ಮಧ್ಯೆ ಇದ್ದ ಬಾಳೆ ಮತ್ತು ತೆಂಗಿನ ಗಿಡಗಳಿಗೆ ಹಾಯಿಸುತ್ತಿದ್ದರು. ತಾಯಿಯ ಸಮೀಪದಲ್ಲಿದ್ದು ಕಾಲುವೆಯೊಳಗೆ ನಿಂತು ಹರಿದು ಬರುತ್ತಿದ್ದ ನೀರಿನಲ್ಲಿ ಆಟವಾಡುತ್ತಿದ್ದೆವು. ತೆಂಗಿನ ಚಿಪ್ಪಿನಲ್ಲಿರುವ ಮೂರು ಕಣ್ಣುಗಳಲ್ಲಿ ಒಂದನ್ನು ತೂತು ಮಾಡಿ ಅದಕ್ಕೆ ಸೈಕಲ್ ಟ್ಯೂಬ್ ನೆಕ್ಕನ್ನು ಅಳವಡಿಸಿ ಅದರ ತುದಿಗೆ ರಬ್ಬರ್ ಟ್ಯೂಬನ್ನು ಜೋಡಿಸಿ ದಾರ ಕಟ್ಟಿ ಕಪಿಲೆ ಬಾವಿಯಿಂದ ನೀರನ್ನು ಎತ್ತುವಂತೆ ಕಾಲುವೆಯ ನೀರಿನಲ್ಲಿ ನಾವು ಆಡುತ್ತಿದ್ದ ಆಟ, ಬಾಳೆಗಿಡದ ಮೇಲಿರುವ ಬಾಳೆಮೂತಿಯಿಂದ ಉದುರಿಬಿದ್ದ ಅಂಗೈಯಾಕಾರದ ಕೆಂಬಣ್ಣದ ಎಲೆಗಳನ್ನು ಕಾಲುವೆಯ ನೀರಿನಲ್ಲಿ ದೋಣಿಯಂತೆ ತೇಲಿ ಬಿಟ್ಟು ಖುಷಿಪಡುತ್ತಿದ್ದೆವು. ಒಮ್ಮೆ ಎಲೆಬಳ್ಳಿಯ ಕೊನೆಯ ಸಾಲನ್ನು ತಲುಪುತ್ತಿದ್ದಂತೆಯೇ ಬಾವಿಯ ನೀರು ಬರಿದಾಯಿತು. ತಂದೆ ಕಪಿಲೆ ಹೊಡೆಯುವುದನ್ನು ನಿಲ್ಲಿಸಿ ತೆರೆದ ಬಾವಿಯೊಳಗೆ ಇಳಿದು ಕೆಸರಿನ ಗುಂಡಿಯಿಂದ ನೀರನ್ನು ಮೊಗೆದು ಕಪಿಲೆಯ ಬಾನಿಗೆ ತುಂಬುವಂತೆ ಮಾಡುತ್ತಿದ್ದರು. ತಾಯಿ ಬಾವಿಯ ದಡದಲ್ಲಿ ಬೆಳೆದು ನಿಂತಿದ್ದ ಹಸಿ ಮೆಣಸಿನಕಾಯಿಗಳನ್ನು ಬಿಡಿಸಿಕೊಳ್ಳುತ್ತಿದ್ದರು. ಬಾವಿಯ ಕಟ್ಟೆಯ ಮೇಲಿಂದ ನಿಂತು ಕುತೂಹಲದಿಂದ ನೋಡುತ್ತಿದ್ದ ನಮ್ಮನ್ನು “ಬಿದ್ದೀಯಾ, ಜೋಕೆ!” ಎಂದು ತಾಯಿ ಎಚ್ಚರಿಸುತ್ತಿದ್ದರು. ನೋಡು ನೋಡುತ್ತಿದ್ದಂತೆಯೇ ಆಗಬಾರದ ಅನಾಹುತ ಆಗಿಯೇ ಹೋಯಿತು. ಬಾವಿಯ ಕಟ್ಟೆಯ ಮೇಲಿಂದ ಕಾಲು ಜಾರಿ ಬಿದ್ದು ಮಧ್ಯದಲ್ಲಿ ತಲೆಗೆ ಕಲ್ಲು ಬಡಿದು ರಕ್ತ ಚಿಮ್ಮತೊಡಗಿತು. ಅಮ್ಮಾ ಎಂದು ಅರಚುತ್ತಾ ಕೆಸರಲ್ಲಿ ಬಿದ್ದ ನಮ್ಮನ್ನು ತಂದೆ ಮೇಲೆತ್ತಿಕೊಂಡು ಬಾವಿಯ ದಂಡೆಗೆ ಬಂದರು. ಕೆಸರಿನ ಗುಂಡಿಯಲ್ಲಿ ಬಿದ್ದ ಕಾರಣ ಮೈತುಂಬಾ ಕೆಸರು ಮೆತ್ತಿಕೊಂಡಿದ್ದು ಮೈಗೆ ಪೆಟ್ಟಾಗಿರಲಿಲ್ಲ. ಆದರೆ ತಲೆಗೆ ಕಲ್ಲು ಬಡಿದ ಕಾರಣ ತೀವ್ರ ರಕ್ತಸ್ರಾವವಾಗುತ್ತಿತ್ತು. ಅದನ್ನು ಕಂಡು ಘಾಸಿಗೊಂಡ ತಾಯಿ ಉಟ್ಟ ಸೀರೆ ಕೆಸರಾಗುವುದನ್ನೂ ಲೆಕ್ಕಿಸದೆ ನಮ್ಮನ್ನು ಬಿಗಿದಪ್ಪಿಕೊಂಡು ಸುರಿಸುತ್ತಿದ್ದ ಕಣ್ಣೀರು ಬತ್ತಿದ ಬಾವಿಯನ್ನು ತುಂಬುವಂತಿತ್ತು! ಪ್ರೀತಿವಾತ್ಸಲ್ಯಗಳಿಂದ ತುಂಬಿ ತುಳುಕುತ್ತಿದ್ದ ತಾಯ ಮಡಿಲಲ್ಲಿ ಕ್ಷಣಾರ್ಧದಲ್ಲಿ ಮೂರ್ಛೆ ಹೋದೆವು. ಮುಂದೆ ಏನಾಯಿತೆಂಬುದು ತಿಳಿಯಲಿಲ್ಲ. ಮೆಲ್ಲಮೆಲ್ಲನೆ ಎಚ್ಚರವಾದಾಗ ಮನೆಯ ಮುಂಭಾಗದ ಜಗುಲಿಯ ಮೇಲೆ ಗಾಳಿಗೆ ಮಲಗಿಸಿದ್ದರು. ಸುತ್ತ ಹಳ್ಳಿಯ ಜನ ಜಮಾಯಿಸಿದ್ದರು! ತೆಂಗಿನಕಾಯಿಯ ಜುಟ್ಟಿನ ಬಳಿ ಇರುವ ಕಣ್ಣಿನಂತೆ ನಮ್ಮ ತಲೆ ತೂತಾಗಿತ್ತು! ಅದರ ಗುರುತು ಈಗಲೂ ನಮ್ಮ ನೆತ್ತಿಯ ಮೇಲಿದೆ.
ಮನೆಯ ಮುಂಭಾಗದ ಜಗುಲಿಯೇ ನಮ್ಮ ಅಧ್ಯಯನ ಪೀಠ, ತೊಡೆಗಳೇ ಟೇಬಲ್, ಎದುರಿಗೆ ಮೃಡ ಬಸವೇಶ್ವರನ ಗುಡಿ, ಸಂಜೆಗತ್ತಲು ಆವರಿಸುತ್ತಿದ್ದರೂ ನಮ್ಮ ಓದು ಬರಹ ನಿಲ್ಲುತ್ತಿರಲಿಲ್ಲ. ತಾಯಿ ಬಂದು “ಹೀಗೆ ಸಂಜೆಗತ್ತಲಿನಲ್ಲಿ ಓದಿದರೆ ಕಣ್ಣುಗಳು ಹಾಳಾಗುತ್ತವೆ ಕಣೋ” ಎಂದು ಗದರಿಸಿ ಒಳಗೆ ಕರೆದುಕೊಂಡು ಹೋಗುತ್ತಿದ್ದರು. ಎಳೆಯ ವಯಸ್ಸಿನಲ್ಲಿ ಒಮ್ಮೊಮ್ಮೆ ಶಾಲೆಯಿಂದ ಮನೆಗೆ ಹಿಂತಿರುಗಿದಾಗ ಕಾಣದಂತೆ ಮನೆಯೊಳಗೆ ಬಂದು ಮರೆಯಲ್ಲಿ ಸರಿದು ನಿಶ್ಶಬ್ದವಾಗಿ ಹಿಂಬದಿಯಿಂದ ಹೋಗಿ ತಾಯ ಕೊರಳನ್ನು ಸುತ್ತಿ ಕೈಬೊಗಸೆಗಳಲ್ಲಿ ಕಣ್ಣುಗಳನ್ನು ಮುಚ್ಚಿ ಕೀಟಲೆ ಮಾಡಿ ನಗುತ್ತಿದ್ದುದು, ಅದರಿಂದ ಚಕಿತಗೊಂಡ ಮಾತೃಹೃದಯದ ಸ್ಪಂದನ, ಹುಸಿಕೋಪದಿಂದ “ಬಿಡಪ್ಪಾ, ಬಿಡೋ” ಎಂದು ಝಂಕಿಸಿ ಎಳೆಯ ಕೈಗಳನ್ನು ಬಿಗಿಹಿಡಿದು ತನ್ನ ಬೆನ್ನ ಮೇಲೆ ಜೋಕಾಲೆಯಾಡಿಸುತ್ತಿದ್ದುದು ಇವೆಲ್ಲಾ ಸಂಸ್ಕೃತದ ಮಹಾಕವಿ ಭವಭೂತಿಯ “ತೇ ಹಿ ನೋ ದಿವಸಾಃ ಗತಾಃ!” (ಆ ದಿನಗಳು ಗತಿಸಿ ಹೋದವು!) ಎಂಬ ಕವಿವಾಣಿಯನ್ನು ನೆನಪಿಗೆ ತರುತ್ತವೆ.
ಹುಟ್ಟಿದೂರು ಸೂಗೂರಿನಿಂದ ಶಿವಮೊಗ್ಗೆಗೆ, ಶಿವಮೊಗ್ಗದಿಂದ ಮೈಸೂರಿಗೆ, ಮೈಸೂರಿನಿಂದ ಕಾಶಿಗೆ, ಕಾಶಿಯಿಂದ ವಿಯೆನ್ನಾಕ್ಕೆ, ವಿಯೆನ್ನಾದಿಂದ ಸಿರಿಗೆರೆಗೆ, ಸಿರಿಗೆರೆಯಿಂದ ವಿಶ್ವದೆಲ್ಲೆಡೆಗೆ! ಜ್ಞಾನದ ಕ್ಷಿತಿಜವನ್ನು ಏರಿ ಹೋದಂತೆ ಮಾತೃಹೃದಯದ ಸನಿಹದಿಂದ ದೂರ, ದೂರ! ಕಾಲಚಕ್ರವು ತನ್ನ ಗತಿಯಲ್ಲಿ ತಿರುಗಿ ದಿನಗಳು ವಾರಗಳಾದವು, ವಾರಗಳು ತಿಂಗಳಾದವು, ತಿಂಗಳುಗಳು ವರ್ಷಗಳಾದವು, ವರ್ಷಗಳು ಉರುಳಿಹೋದವು! ಹೆತ್ತವರಿಗೆ ಮುಪ್ಪು ಆವರಿಸಿತು, ಶರೀರ ಕುಗ್ಗಿತು! ಅವಸಾನ ಸಮೀಪಿಸಿತು!
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಮಾತೃಶ್ರೀಯವರಿಗೆ ಕೃತಕ ಉಸಿರಾಟದ ನಳಿಕೆಯನ್ನು ಹಾಕಿರುವ ವಿಷಯ ತಿಳಿದು ಹೋದಾಗ ನಮ್ಮನ್ನು ನೋಡಿ ಅವರಿಗೆ ಬದುಕಿನಲ್ಲಿ ಮತ್ತೆ ಭರವಸೆ ಮೂಡಿತು. ನಂತರ ಗುಣಮುಖರಾಗಿ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಮ್ಮ ದರ್ಶನಕ್ಕೆಂದು ಬಂದರು. ಯಥಾಪ್ರಕಾರ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ ಕುಳಿತುಕೊಂಡರು. ಲೋಕಾಭಿರಾಮವಾಗಿ ಮಾತನಾಡುತ್ತಾ ಹಸನ್ಮುಖರಾಗಿ "ದಡ್ಡರಾದ ನಾವು ಒಬ್ಬನೇ ಮಗನಾದ ಇವರನ್ನು ಮಠಕ್ಕೆ ಕೊಟ್ಟೆವು, ಜಾಣೆಯರಾದ ನೀವು ನಿಮ್ಮ ಮಕ್ಕಳನ್ನು ಮಠಕ್ಕೆ ಕೊಡಬಲ್ಲಿರಾ? ಎಂದು ತಮ್ಮ ಕೊನೆಯ ಮಗಳು ಅಕ್ಕಮಹಾದೇವಿಯನ್ನು ಹಂಗಿಸಿದರು’. ಆಗತಾನೇ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದ್ದ ಅವರು ಮತ್ತೆ ತಮ್ಮ ಕೊನೆಯ ಅಳಿಯ ಸಂಗಮೇಶನಿಂದ 25,000/- ರೂ. ಗಳ ನೋಟಿನ ಕಂತೆಯನ್ನು ನಮ್ಮ ಮುಂದೆ ಇಡಿಸಿದರು. ಏಕೆಂದು ನಮಗೆ ತಕ್ಷಣವೇ ತಿಳಿಯಲಿಲ್ಲ. ಅದು ಆಸ್ಪತ್ರೆಯ ಖರ್ಚಿಗೆಂದು ಅವನು ತರಳಬಾಳು ಕೇಂದ್ರದಿಂದ ಮುಂಗಡವಾಗಿ ಪಡೆದಿದ್ದ ಹಣ ಎಂದು ಹೇಳಿದರು! ಬೇಗನೆ ಮಠಕ್ಕೆ ವಾಪಾಸ್ ಮುಟ್ಟಿಸು ಎಂದು ಆಸ್ಪತ್ರೆಯಲ್ಲಿದ್ದಾಗ ಮಾತೃಶ್ರೀಯವರು ಅವನನ್ನು ಒತ್ತಾಯಪಡಿಸಿದ್ದರಂತೆ! ಈ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲ. “ಮಠ ಮತ್ತು ಸಮಾಜದ ಋಣದಲ್ಲಿ ನಾನು ಸಾಯಬಾರದು, ನಿಮಗೆ ಕೆಟ್ಟ ಹೆಸರು ಬರಬಾರದು! ತೆಗೆದುಕೊಳ್ಳಿ “ ಎಂದು ಹೇಳಿದಾಗ ನಮ್ಮ ಹೃದಯ ಕಲಕಿತು. ಕಂಠ ಬಿಗಿಯಿತು. ಸೌಜನ್ಯಕ್ಕಾದರೂ ಬೇಡವೆಂದು ಹೇಳಲು ಆಶ್ರಮಧರ್ಮ ಒಪ್ಪಲಿಲ್ಲ! ಮಠದ ಸಿಬ್ಬಂದಿಯನ್ನು ಕರೆದು ಆ ಹಣವನ್ನು ತೆಗೆದುಕೊಂಡು ಹೋಗಿ ಮಠದ ಅಕೌಂಟಿಗೆ ಜಮಾ ಮಾಡಲು ಆದೇಶಿಸಿದೆವು. ಮಠ ಮತ್ತು ವಿದ್ಯಾಸಂಸ್ಥೆಯ ಸೇವೆ ಮಾಡುವ ಎಷ್ಟೋ ಬಡ ಜನರಿಗೆ ಕೋಟ್ಯಂತರ ರೂಪಾಯಿ ಸಹಾಯ ಮಾಡಿದ ನಾವು ಹೆತ್ತ ತಾಯಿಗೆ ವೈಯಕ್ತಿಕವಾಗಿ ಒಂದು ಬಿಡಿಗಾಸೂ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹುಟ್ಟಿದ್ದೇ ತಪ್ಪಾಯಿತ್ತೇ ಎಲೆ ಲಿಂಗವೇ! ಎಂದು ಪರಿತಪಿಸುವಂತಾಯಿತು. ಈ ಸಂದರ್ಭದಲ್ಲಿ ಆವಿರ್ಭವಿಸಿದ ನಮ್ಮ ಹೃದಯದ ಭಾವನೆಗಳು.
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಈ ಮಾಯೆಯನತಿಗಳೆವರೆ ಎನ್ನಳವಲ್ಲ!
ಎನ್ನುವ ಬಸವಣ್ಣನವರ ವಚನದ ಮೊದಲ ಮತ್ತು ಕೊನೆಯ ವಾಕ್ಯಗಳಿಗೆ ಭಾಷ್ಯವನ್ನು ಬರೆದಂತಿದ್ದವು! ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ನೀತಿಪಾಠ ನೆನಪಾಯಿತು. ಮಠದ ಹಣಕಾಸಿನ ವ್ಯವಹಾರಗಳಲ್ಲಿ ಹೇಗೆ ಎಚ್ಚರ ವಹಿಸಬೇಕೆಂಬುದಕ್ಕೆ ಇದುವೇ ಮೊದಲ ಗುರುವಿನಿಂದ ನಾವು ಕಲಿತ ಕೊನೆಯ ಪಾಠ! ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಯುಗಾದಿಯ ಮುನ್ನಾ ದಿನ (18.3.2007) ಭಾನುವಾರ ಬೆಳಗಿನ ಜಾವ ಆ ಮಾಗಿದ ಜೀವ ಶಿವನ ಪಾದ ಸೇರಿತು.
ಆ ದಿನ ಬೆಳ್ಲಿಗ್ಗೆ ಸಾವಿನ ಸುದ್ದಿ ಬಂದಾಗ ಸಿರಿಗೆರೆಯಲ್ಲಿದ್ದೆವು. ಮಾತೃಶ್ರೀಯವರ ಅಂತ್ಯಸಂಸ್ಕಾರಕ್ಕೆ ದಯಮಾಡಿಸಬೇಕೆಂದು ಶಿಷ್ಯರ ಒತ್ತಾಸೆ ಇದೆಯೆಂದು ಸಮಾಜದ ಅಧ್ಯಕ್ಷರಾದ ಮಾಜಿ ರಾಜ್ಯಸಭಾಸದಸ್ಯ ಕೆ.ಆರ್.ಜಯದೇವಪ್ಪನವರಿಂದ ದೂರವಾಣಿ ಕರೆ ಬಂತು. ಬಸವಣ್ಣನಿಗೆ ಆತನ ಸಹಧರ್ಮಿಣಿ ನೀಲಾಂಬಿಕೆ ಹೇಳಿ ಕಳುಹಿಸಿದ ಉತ್ತರ ನೆನಪಾಯಿತು. ಕಲ್ಯಾಣದಲ್ಲಿ ಭುಗಿಲೆದ್ದ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರು ಕೂಡಲ ಸಂಗಮಕ್ಕೆ ತೆರಳಿ ಸಹಧರ್ಮಿಣಿಯಾದ ನೀಲಾಂಬಿಕೆಗೆ ಅಪ್ಪಣ್ಣನ ಮುಖಾಂತರ ಬರಲು ಹೇಳಿ ಕಳುಹಿಸಿದಾಗ ಬಸವಣ್ಣನಿಗೆ ಏಕೆ ಇಂತಹ ಮರಹು, ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ? ಎಂದು ನೀಲಾಂಬಿಕೆ ನೀಡಿದ ಮಾರುತ್ತರವನ್ನು ವಿವರಿಸಿ ನೀವೇ ಹೋಗಿ ಎಂದು ಶಿಷ್ಯಪ್ರಮುಖರಿಗೆ ಹೇಳಿ ಮಠದ ಐಕ್ಯಮಂಟಪದಲ್ಲಿರುವ ಲಿಂಗೈಕ್ಯ ಗುರುವರ್ಯರ ಗದ್ದುಗೆಗೆ ಹೋದೆವು. ಶ್ರೀಗುರು ಸನ್ನಿಧಿಯಲ್ಲಿ ಅಗಲಿದ ಚೇತನಕ್ಕೆ ನಮ್ಮ ಗೌರವವನ್ನು ಸಲ್ಲಿಸಿ ಇಲ್ಲಿಂದಲೇ ವಿದಾಯ ಹೇಳಿದೆವು. ನಿತ್ಯವೂ ಬಳಸುತ್ತಿದ್ದ ವಿಭೂತಿ ಗಟ್ಟಿ ಮತ್ತು ಬಿಲ್ವಪತ್ರೆಯನ್ನು ಪೂಜಾಮರಿಯ ಕೈಯಲ್ಲಿ ಕೊಟ್ಟು ನಮ್ಮ ಜನ್ಮಸ್ಥಳವಾದ ತುಂಗಭದ್ರೆಯ ಸಂಗಮದ ಸೂಗೂರಿಗೆ ಹೋಗಿ ಜನ್ಮದಾತಳ ಸಮಾಧಿಗೆ ಅರ್ಪಣೆ ಮಾಡಲು ಸೂಚಿಸಿ ಪೂರ್ವನಿಯೋಜಿತವಾದ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದೆವು. ವೈಯಕ್ತಿಕ ಹಿತ ಮತ್ತು ಮಠದ ಹಿತ ಮುಖಾಮುಖಿಯಾದಾಗ ನಮ್ಮ ಆಯ್ಕೆ ಮಠದ ಹಿತ. ಮಠದ ಹಿತ ಮತ್ತು ದೇಶದ ಹಿತ ಎದುರಾದಾಗ ನಮ್ಮ ಆಯ್ಕೆ ದೇಶದ ಹಿತ. ದೇಶದ ಹಿತದಲ್ಲಿಯೇ ಮಠದ ಮತ್ತು ವೈಯಕ್ತಿಕ ಹಿತಗಳು ಅಡಗಿವೆಯೆಂಬುದು ನಮ್ಮ ಬಲವಾದ ನಂಬಿಕೆ.
ಕಾರು ಮುಂದೆ ಮುಂದೆ ಓಡುತ್ತಿದ್ದರೆ ಮನಸ್ಸು ಗತಕಾಲದ ನೆನಪುಗಳ ಕುದುರೆಯನ್ನೇರಿ ಹಿಂದೆ ಹಿಂದೆ ಧಾವಿಸುತ್ತಿತ್ತು! A man on the top is lonely! ಎಂಬ ಆಂಗ್ಲಭಾಷೆಯ ನುಡಿಗಟ್ಟು ನಮಗೆ ಚೆನ್ನಾಗಿ ಅರ್ಥವಾಗಿದ್ದು ಆಗಲೇ. ದಾರಿಯುದ್ದಕ್ಕೂ ಯುಗಾದಿಯ ಸಿಡಿಮದ್ದುಗಳ ಆರ್ಭಟವು ಹೊರಗೆ ಕೇಳಿ ಬರುತ್ತಿದ್ದರೆ, ನಮ್ಮ ಹೃದಯದಲ್ಲಿ ಆವಿರ್ಭವಿಸಿದ ಭಾವನೆಗಳ ಸಿಡಿಮದ್ದುಗಳು ಬೇರೆಯವರಿಗೆ ಕೇಳಿಸದಂತೆ ಸಿಡಿದು ಹೃದಯದ ಭೌಮಾಕಾಶದಲ್ಲಿ ಹೊಗೆಯಾಡಲಾರಂಭಿಸಿದ್ದವು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 19.8.2009.