ಭಾರತೀಯ ಸಂವಿಧಾನದ ತಾಯಿಬೇರು ಕನ್ನಡದ ನೆಲದಲ್ಲಿ!

  •  
  •  
  •  
  •  
  •    Views  

ನಿನ್ನೆ ನಡೆದ ಗಣರಾಜ್ಯೋತ್ಸವ ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದು. ವಿಭಿನ್ನ ಧರ್ಮೀಯರು ಇರುವ ನಮ್ಮ ನಾಡಿನಲ್ಲಿ ಧಾರ್ಮಿಕ ಹಬ್ಬಗಳು ವರ್ಷದುದ್ದಕ್ಕೂ ಇರುತ್ತವೆ. ರಾಷ್ಟ್ರೀಯ ಹಬ್ಬಗಳು ಮಾತ್ರ ವರ್ಷದಲ್ಲಿ ಪ್ರಮುಖವಾಗಿ ಎರಡು: ಒಂದು ಸ್ವಾತಂತ್ರೋತ್ಸವ ಇನ್ನೊಂದು ಗಣರಾಜ್ಯೋತ್ಸವ. ಆದರೆ ಧಾರ್ಮಿಕ ಹಬ್ಬಗಳಲ್ಲಿರುವ ಸಡಗರ ಸಂಭ್ರಮಗಳು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವಗಳಂದು ಇರುವುದಿಲ್ಲ. ಆಯಾಯ ಧರ್ಮದ ಹಬ್ಬದ ದಿನ ಆಯಾಯ ಧರ್ಮೀಯರಿಗೆ ಮಾತ್ರ ಸಡಗರ ಮತ್ತು ಸಂಭ್ರಮದ ದಿನವಾಗಿರುತ್ತದೆ. ಅನ್ಯ ಧರ್ಮೀಯರಿಗೆ ಅದೊಂದು ಮಾಮೂಲೀ ದಿನವಾಗಿರುತ್ತದೆ. ಹಾಗೆಯೇ ಗಣರಾಜ್ಯೋತ್ಸವವಾಗಲೀ, ಸ್ವಾತಂತ್ರೋತ್ಸವವಾಗಲೀ ಶಾಲಾಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸರ್ಕಾರೀ ಕಛೇರಿಗಳ ಅಧಿಕಾರಿಗಳು ಆಚರಿಸುವ ವಾರ್ಷಿಕ ವಿಧಿಗಳಾಗಿವೆ. ಜನಸಾಮಾನ್ಯರು ಸಂತಸಪಡುವ ದಿನಗಳಾಗಿಲ್ಲ.

ಹಾಗೆ ನೋಡಿದರೆ ಸರ್ಕಾರೀ ಕಛೇರಿಗಳಿಗಿಂತ  ಶಾಲಾ ಕಾಲೇಜುಗಳಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಗಳು ಎಷ್ಟೋ ವಾಸಿ. ಶಾಲಾಮಕ್ಕಳು ಸಮವಸ್ತ್ರ ಧರಿಸಿ ಶಿಸ್ತಿನಿಂದ ಪಥಸಂಚಲನ ಮಾಡಿ ಧಾರ್ಮಿಕ ಮತ್ತು ಐತಿಹಾಸಿಕ ವ್ಯಕ್ತಿಗಳ ಪೋಷಾಕು ಧರಿಸಿ ಸಂಭ್ರಮಿಸುತ್ತಾರೆ. ಸರ್ಕಾರೀ ಕಛೇರಿಗಳಲ್ಲಿ ನಡೆಯುವ ಕಾರ್ಯಕ್ರಮಗಳು ಕಡ್ಡಾಯವಾಗಿ ನಿಯಮಪಾಲನೆಗಾಗಿ ನಡೆಯುತ್ತವೆ. ಎಲ್ಲಿ ಕಡ್ಡಾಯವಿರುತ್ತದೆಯೋ ಅಲ್ಲಿ ಯಾಂತ್ರಿಕತೆ ಇರುತ್ತದೆ. ಧ್ವಜಾರೋಹಣಕ್ಕೆ ಹಾಜರಾಗಿಲ್ಲವೆಂದು ಮುಖ್ಯಸ್ಥರು ನೋಟೀಸು ಜಾರಿಮಾಡುತ್ತಾರೆ. ಧಾರ್ಮಿಕ ಹಬ್ಬಗಳು ಹಾಗಲ್ಲ. ಅವುಗಳನ್ನು ಆಚರಿಸಬೇಕೆಂದು ಸರ್ಕಾರದ ಯಾವ ಸುತ್ತೋಲೆಗಳೂ ಇರುವುದಿಲ್ಲ. ಆದರೂ ಜನ ಸಂತೋಷದಿಂದ ಅವರವರ ನಂಬುಗೆಗೆ ಅನುಗುಣವಾಗಿ ಹಬ್ಬಗಳನ್ನು ಆಚರಿಸಿ ಬಂಧುಮಿತ್ರರೊಂದಿಗೆ ಭೂರಿಭೋಜನವನ್ನು ಸವಿದು ಖುಷಿಪಡುತ್ತಾರೆ. ಪಾಶ್ಚಾತ್ಯರಾಷ್ಟ್ರಗಳಲ್ಲಿ ಜನಸಾಮಾನ್ಯರು ಧಾರ್ಮಿಕಹಬ್ಬಗಳಂತೆ ರಾಷ್ಟ್ರೀಯಹಬ್ಬಗಳನ್ನೂ ಆಚರಿಸುತ್ತಾರೆ. ಹಬ್ಬಹರಿದಿನಗಳಂದು ನಮ್ಮವರು ತಳಿರುತೋರಣಗಳಿಂದ ಮನೆಗಳನ್ನು ಸಿಂಗರಿಸಿದಂತೆ ಅಲ್ಲಿಯ ಜನರು ತಮ್ಮ ಮನೆಗಳನ್ನು ರಾಷ್ಟ್ರಧ್ವಜಗಳಿಂದ ಅಲಂಕರಿಸುತ್ತಾರೆ. ಆವರಲ್ಲಿರುವ ರಾಷ್ಟ್ರಪ್ರಜ್ಞೆ ನಿಜಕ್ಕೂ ಮೆಚ್ಚುವಂತಹುದು. ನಮ್ಮ ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗುವುದು ಬೇರೆ ದೇಶದವರು ನಮ್ಮ ದೇಶದ ಮೇಲೆ ಧಾಳಿ ಮಾಡಿದಾಗ ಮಾತ್ರ. ಉಳಿದಂತೆ ಅಕ್ಕಪಕ್ಕದ ರಾಜ್ಯಗಳ ಜನರು ಪರಸ್ಪರ ಭಾಷೆ-ಜಲ-ನೆಲದ ವಿಚಾರವಾಗಿ ಬಡಿದಾಡುತ್ತಲೇ ಇರುತ್ತಾರೆ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ರೈಲು ಬಸ್ಸುಗಳಿಗೆ ಬೆಂಕಿ ಹಚ್ಚಿ ರಾಷ್ಟ್ರದ ಸಂಪತ್ತನ್ನು ಹಾಳುಮಾಡುತ್ತಾರೆ. ತನ್ನ ತಲೆಯ ಮೇಲೆಯೇ ಕೈಯಿಟ್ಟುಕೊಂಡು ಸುಟ್ಟು ಬೂದಿಯಾದ ಭಸ್ಮಾಸುರನಂತೆ ವರ್ತಿಸುತ್ತಾರೆ.

ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ದೇಶವು ಸ್ವತಂತ್ರಗೊಂಡಾಗ ಅದಕ್ಕೊಂದು ಸಂವಿಧಾನವನ್ನು ರೂಪಿಸುವುದು ಕಠಿಣವಾದ ಒಂದು ಸವಾಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಇಡೀ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೇ ಅತ್ಯದ್ಭುತವಾಗಿದೆ ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ಕಾರಣ ಸಂವಿಧಾನದ ರಚನೆ ಆಗುವಾಗ ಪ್ರಪಂಚದ ನಾನಾ ಭಾಗಗಳಲ್ಲಿರುವ ಪ್ರಜಾಪ್ರಭುತ್ವ ದೇಶಗಳ ಸಂವಿಧಾನಗಳನ್ನು ಅವಲೋಕಿಸಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ಆಯ್ಕೆ ಮಾಡಿಕೊಂಡಿರುವುದು. ಪ್ರಜಾಪ್ರಭುತ್ವದ ಜೀವಾಳವೆ ಸ್ವಾತಂತ್ರ್ಯ. ಪ್ರಜಾಪ್ರಭುತ್ವ ಎಂದರೆ ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂದರೆ ಪ್ರಜಾಪ್ರಭುತ್ವ ಎಂದು ಅನೇಕ ವೇಳೆ ಪರಿಭಾವಿಸಲಾಗುತ್ತದೆ. ಆದರೆ ಪ್ರಜಾಪ್ರಭುತ್ವ ಸ್ವಾತಂತ್ರ್ಯ ಅಲ್ಲ, ಸ್ವಾತಂತ್ರ್ಯ ಪ್ರಜಾಪ್ರಭುತ್ವ ಅಲ್ಲ. ಇವೆರಡನ್ನೂ ಪರ್ಯಾಯ ಶಬ್ದಗಳಾಗಿ ಬಳಸುವುದು ತಪ್ಪು. ಸ್ವಾತಂತ್ರ್ಯ ಎಂದರೇನು ಎಂಬುದನ್ನು ಗೊತ್ತುಪಡಿಸುವುದು ಪ್ರಜಾಪ್ರಭುತ್ವ. ಸ್ವಾತಂತ್ರ್ಯದ ಖಚಿತ ಪರಿಭಾಷೆಯನ್ನು ನೀಡುವುದೇ ಪ್ರಜಾಪ್ರಭುತ್ವ.  ಸ್ವಾತಂತ್ರ್ಯ ಇರುವ ಕಾರಣದಿಂದಲೇ ಜನರ ಬದುಕು-ನಿಯಮ ರೂಪಿಸಲು ಸಾಧ್ಯವಾಗಿರುವುದು. ರಾಜಪ್ರಭುತ್ವದಂತೆಯೇ ಪ್ರಜಾಪ್ರಭುತ್ವದಲ್ಲಿಯೂ ಒಂದು ನಿಶ್ಚಿತ ಭೂಭಾಗದ ಜನರ ಸಾಮಾಜಿಕ, ಆರ್ಥಿಕ ಹಿನ್ನೆಲೆಯಲ್ಲಿ ಆಡಳಿತಕ್ಕಾಗಿ ಸಂವಿಧಾನದಲ್ಲಿ ರೂಪುರೇಷೆಗಳನ್ನು ರೂಪಿಸಲಾಗುತ್ತದೆ. ಯಾವುದೇ ಧರ್ಮಗ್ರಂಥ, ಲಾಂಛನ ಮತ್ತು ದೇವತಾ ಪ್ರಾರ್ಥನೆಗಳಿಗೆ ಆಯಾಯ ಧರ್ಮೀಯರ ಹೃದಯದಲ್ಲಿ ಪವಿತ್ರ ಭಾವನೆ ಇರುವಂತೆ ದೇಶದ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ದೇಶದ ಪ್ರಜೆಗಳ ಹೃದಯದಲ್ಲಿ ಗೌರವಭಾವನೆ ಇರಬೇಕಾಗುತ್ತದೆ.

ನಮ್ಮ ದೇಶವನ್ನು ಧರ್ಮನಿರಪೇಕ್ಷರಾಷ್ಟ್ರ, ಜಾತ್ಯತೀತರಾಷ್ಟ್ರ ಎಂದು ಹೇಳುವುದು ರೂಢಿಯಲ್ಲಿದೆ. ಇದು ತಪ್ಪು. Secular State ಎಂದರೆ ಧರ್ಮನಿರಪೇಕ್ಷ ರಾಷ್ಟ್ರವೆಂದಾಗಲೀ, ಜಾತ್ಯತೀತ ರಾಷ್ಟ್ರವೆಂದಾಗಲೀ ಅಲ್ಲ. ಪಾಶ್ಚಾತ್ಯರಾಷ್ಟ್ರಗಳಲ್ಲಿ ಸರ್ಕಾರದ ಆಡಳಿತ ಚರ್ಚ್ ಆಡಳಿತದಿಂದ ಬೇರ್ಪಟ್ಟ ಹಿನ್ನೆಲೆಯಲ್ಲಿ ಬಳಸಿದ secularism ಪದ ಭಾರತದ ಸಂವಿಧಾನದಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಅರ್ಥವನ್ನು ಹೊಂದಿದೆ. Secular State ಎಂದರೆ ಧರ್ಮದ ವಿಚಾರವಾಗಿ ತಟಸ್ಥನೀತಿಯನ್ನು ಅನುಸರಿಸುವುದು, ಯಾವುದೇ ಧರ್ಮವನ್ನು ಬೆಂಬಲಿಸದಿರುವುದು ಎಂದರ್ಥವಲ್ಲ. ಭಾರತದ ಸಂವಿಧಾನವು ಹೀಗೆ ಧರ್ಮಗಳನ್ನು ದೂರೀಕರಿಸುವುದಿಲ್ಲ. ವಿಭಿನ್ನ ಧರ್ಮಗಳನ್ನು ಸಮಾನದೃಷ್ಟಿಯಿಂದ ನೋಡುತ್ತದೆ. ಆಯಾಯ ಧರ್ಮೀಯರ ಜನಸಂಖ್ಯೆಯನ್ನು ಆಧರಿಸಿ ತರತಮಭಾವವನ್ನು ಮಾಡುವುದಿಲ್ಲ. ಒಂದು ಧರ್ಮದವರು ಬಹುಸಂಖ್ಯಾತರಿರಲಿ ಮತ್ತೊಂದು ಧರ್ಮದವರು ಅಲ್ಪಸಂಖ್ಯಾತರಿರಲಿ ತಾರತಮ್ಯ ಮಾಡದೆ ಸರ್ವಧರ್ಮಸಮಭಾವವನ್ನು ಹೊಂದಿರುವುದು ನಮ್ಮ ಸಂವಿಧಾನದ ಹೆಗ್ಗಳಿಕೆ. ಹಾಗೆಂದು ಧರ್ಮಗಳನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಮೆರೆಯುವುದಿಲ್ಲ. ದೇಶದ ಸಾರ್ವಭೌಮತ್ವಕ್ಕೆ ಯಾವುದೇ ಧರ್ಮ ಅಡ್ಡಿ ಬಂದರೆ, ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕಿಗೆ ಚ್ಯುತಿ ತಂದರೆ ಅಂತಹ ಧರ್ಮವನ್ನು ನಿಯಂತ್ರಿಸುವ ಪರಮೋಚ್ಚ ಶಕ್ತಿ ನಮ್ಮ ಸಂವಿಧಾನಕ್ಕೆ ಇದೆ. ಇದು ನಮ್ಮ ಸಂವಿಧಾನದ ಭದ್ರವಾದ ತಾತ್ವಿಕ ನೆಲೆಗಟ್ಟು ಆಗಿದ್ದರೂ ಇಂದಿನ ರಾಜಕೀಯ ವಿದ್ಯಮಾನಗಳು ಇದಕ್ಕೆ ತದ್ವಿರುದ್ದವಾಗಿವೆ. ಇದನ್ನು ಕಂಡೇ ರಾಮಮನೋಹರ ಲೋಹಿಯಾ ಹೇಳಿದ ಮಾರ್ಮಿಕವಾದ ನುಡಿ: “Religion is a long term politics and politics is a short term religion” (ದೀರ್ಘಾವಧಿಯ ರಾಜಕೀಯವೇ ಧರ್ಮ; ಅಲ್ಪಾವಧಿಯ ಧರ್ಮವೇ ರಾಜಕೀಯ).

ಮೂಲಭೂತ ಹಕ್ಕುಗಳು (Fundamental Rights): ಕಾನೂನಿನ ಎದುರು ಎಲ್ಲರೂ ಸಮಾನರು. ಬಡವನಿರಲಿ, ಶ್ರೀಮಂತನಿರಲಿ, ವ್ಯಕ್ತಿಗತ ಸ್ಥಾನಮಾನ ಏನೇ ಇರಲಿ ಎಲ್ಲರೂ ದೇಶದ ಕಾನೂನಿನ ಎದುರಿಗೆ ಒಂದೇ, ಯಾವ ತಾರತಮ್ಯವನ್ನೂ ಮಾಡಬಾರದು ಎಂಬುದು ಸಂವಿಧಾನದ ಆಶಯವಾಗಿದೆ. ಸಂವಿಧಾನದಲ್ಲಿ ಲಿಂಗಭೇದ ಮಾಡಬಾರದು. (The State shall not discriminate against any citizen on grounds of religion, race, caste, sex, place of birth or any of them) ಎಂದು ಹೇಳಿದೆ. ಇದರ ಬೇರುಗಳನ್ನು ದೇವರ ದಾಸಿಮಯ್ಯನವರ ಈ ಕೆಳಗಿನ ವಚನದಲ್ಲಿ ನೋಡಬಹುದು: 

ಮೊಲೆ ಮುಡಿ ಬಂದರೆ ಹೆಣ್ಣೆಂಬರು, 
ಗಡ್ಡ ಮೀಸೆ ಬಂದರೆ ಗಂಡೆಂಬರು 
ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ 
ಕಾಣಾ ರಾಮನಾಥಾ

ಆತ್ಮವು ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದು ನಿರೂಪಿಸುವುದರ ಮೂಲಕ ಲಿಂಗಭೇದವನ್ನು ಶರಣರು ಅಲ್ಲಗಳೆದಿದ್ದಾರೆ. ಹೆಣ್ಣಾಗಲೀ ಗಂಡಾಗಲೀ ಮೇಲೂ ಅಲ್ಲ, ಕೀಳೂ ಅಲ್ಲ; ದೇವರ ಎದುರಿನಲ್ಲಿ ಸಮಾನರು ಎಂದು ಹೇಳಲಾಗಿದೆ. ಲಿಂಗಭೇದವನ್ನೊಪ್ಪಿಕೊಂಡು ಸಮಾನತೆಯನ್ನು ಸಂವಿಧಾನವು ಸಾರಿದರೆ ವಚನಕಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊರನೋಟಕ್ಕೆ ಕಾಣುವ ಲಿಂಗ ತಾರತಮ್ಯವೂ ಸಹ ವಾಸ್ತವವಾಗಿ ಇಲ್ಲವೆಂತಲೂ ಇಬ್ಬರಲ್ಲಿಯೂ ಇರುವ ಆತ್ಮವು ಹೆಣ್ಣೂ ಅಲ್ಲದ, ಗಂಡೂ ಅಲ್ಲದ ಪರಾತ್ಪರ ವಸ್ತುವೆಂಬುದನ್ನು  ಪ್ರತಿಪಾದಿಸುತ್ತಾರೆ. 

ಜಾತಿಗಳ ಕಾರಣಕ್ಕೆ ಮೇಲು ಕೀಳನ್ನು ಆಚರಿಸುವುದನ್ನು ಸಂವಿಧಾನವು ವಿರೋಧಿಸುತ್ತದೆ. ಬಾವಿ, ಕೆರೆಗಳು, ನದಿಗಳು, ರಸ್ತೆಗಳು, ಸಾರ್ವಜನಿಕ ಸ್ಥಳಗಳಿಗೆ ಜಾತಿಭೇದವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ಇರಬೇಕೆಂದು ಸಂವಿಧಾನವು ವಿಧಿಸುತ್ತದೆ. (No citizen shall, on grounds only of religion, race, caste......be subject to any disability, liability, restriction or condition with regard to the use of wells, tanks, bathing ghats, roads....maintained wholly or partly out of State funds) ಅಸ್ಪಶ್ಯತೆಯನ್ನು ಕುರಿತು ಹೀಗೆ ಸಂವಿಧಾನದಲ್ಲಿ ಬರುವ ವಿಧಿನಿಷೇಧಗಳ ಬೇರುಗಳನ್ನು ಶರಣರ ಮತ್ತು ದಾಸರ ಕೆಳಗಿನ ಮಾತುಗಳಲ್ಲಿ ನೋಡಬಹುದಾಗಿದೆ: 

ಹೊಲೆಯರ ಬಾವಿಯಲೊಂದು ಎಲುಬು ನೆಟ್ಟಿರ್ದಡೆ 
ಹೊಲೆ, ಹೊಲೆಯೆಂಬುದೀ ಲೋಕವೆಲ್ಲ 
ಹಲವೆಲುವಿರುವ ಬಾಯಲ್ಲಿ ಅಲ್ಲದುದ ನುಡಿದರೆ 
ಅದು ಹೊಲೆಯರ ಬಾವಿಗಿಂತ ಕರಕಷ್ಟ ಕಾಣಾ ರಾಮನಾಥಾ 
(ದೇವರ ದಾಸಿಮಯ್ಯ)

ಕುಲಕುಲ ಕುಲವೆಂದು ಬಡಿದಾಡದಿರಿ 
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ 
(ಕನಕದಾಸ)

ಹೊಲೆಯ ಹೊರಗಿಹನೆ ಊರೊಳಗಿಲ್ಲವೆ 
ಶ್ರೀಹರಿಯ ಭಕುತರು ಪೇಳಿ ಮತ್ತಿದನು 
(ಪುರಂದರದಾಸ)

ರಾಜಪ್ರಭುತ್ವ ಇದ್ದ ಕಾಲದಲ್ಲಿಯೇ ಇಡೀ ವಿಶ್ವಕ್ಕೇ ಆದರ್ಶವಾದ ಆಧ್ಯಾತ್ಮಿಕ ಸಂವಿಧಾನ ಕನ್ನಡದ ನೆಲದಲ್ಲಿ ರಚನೆಯಾಗಿದ್ದು ಹೆಚ್ಚುಗಾರಿಕೆಯಾಗಿದೆ. ಶರಣರು ಮತ್ತು ದಾಸರಿಂದ ಪ್ರಣೀತವಾದ ಈ ಸಂವಿಧಾನವು ಭಾರತದ ಇಂದಿನ ಸಂವಿಧಾನದ ಎಲ್ಲ ಅಂಶಗಳನ್ನೂ ಒಳಗೊಂಡು ಅದಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಪಡೆದಿದೆ. 

ಭಾರತದಲ್ಲಿ ಆರಂಭದಲ್ಲಿ ವ್ಯಕ್ತಿ ಮಾಡುವ ಕಸುಬಿನಿಂದ ಆತನ ವರ್ಣವನ್ನು ನಿರ್ಧರಿಸಲಾಗುತ್ತಿತ್ತು. ವರ್ಣವನ್ನು ಆಯ್ಕೆ ಮಾಡಿಕೊಳ್ಳುವುದು ವೈಯಕ್ತಿಕ ಆಯ್ಕೆ ಆಗಿತ್ತು. ಹೀಗಾಗಿ ವ್ಯಕ್ತಿ ತನ್ನ ಅಭಿರುಚಿ ಮತ್ತು ಬುದ್ಧಿಮತ್ತೆಗೆ ಅನುಗುಣವಾಗಿ ಜೀವನೋಪಾಯಕ್ಕೆ ಕಸುಬನ್ನು ಆಯ್ಕೆ ಮಾಡಿಕೊಂಡು ತನಗಿಷ್ಟವಾದ ವರ್ಣದವನಾಗಬಹುದಿತ್ತು. ಒಂದು ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯಾದಿ ವರ್ಣಗಳು ವೃತ್ತಿಗಳಾಗಿದ್ದುವೇ ಹೊರತು ಜಾತಿಗಳಾಗಿರಲಿಲ್ಲ. ತಂದೆಯ ಕಸುಬನ್ನು ಮಗ ಕಲಿಯುವುದು ಸುಲಭ, ಅದನ್ನೇ ಮುಂದುವರಿಸುವುದು ಸಹಜ. ವೃತ್ತಿಕೌಶಲ್ಯ ತಂದೆಯಿಂದ ಮಗನಿಗೆ ಹಸ್ತಾಂತರವಾಗುವುದು, ತಲೆಮಾರಿನಿಂದ ತಲೆಮಾರಿಗೆ ಅದು ಅಭಿವೃದ್ಧಿ ಪಡೆಯುತ್ತಾ ಸಾಗುವುದು ಅಷ್ಟೇ ಸಹಜ. ಹೀಗಾಗಿ ಕುಲವನ್ನು ಕಸುಬಿನಿಂದ ಗುರುತಿಸುವ ಕ್ರಮ ಬೆಳೆಯಿತು. ಆದರೆ ಕ್ರಮೇಣ ವರ್ಣಗಳು ಹೋಗಿ ಅವುಗಳ ಸ್ಥಳದಲ್ಲಿ ಜಾತಿಗಳ ನಿರ್ಮಾಣ ಆಯಿತು. ಗುಣಧರ್ಮಗಳ ನಿರ್ಧಾರವಾಗುವುದು ಮಾಡುವ ವೃತ್ತಿಯ ಮೂಲಕ ಎನ್ನುವುದು ತಪ್ಪಿ ಹುಟ್ಟಿನಿಂದ ಎಂಬ ಸ್ಥಿತಿ ನಿರ್ಮಾಣವಾಯಿತು. ಜಾತಿಗೂ ಕಸುಬಿಗೂ ಅವಿನಾಭಾವ ಸಂಬಂಧ ಉಂಟಾಯಿತು. ಬರುಬರುತ್ತಾ ಹುಟ್ಟಿನಿಂದಲೇ ಜಾತಿಗಳು ನಿರ್ಧಾರವಾದವು. ವೇದವನ್ನು ಓದಲಿ, ಬಿಡಲಿ ಬ್ರಾಹ್ಮಣನ ಮಗ ಬ್ರಾಹ್ಮಣನಾದ. ರಾತ್ರಿ ಹೊತ್ತು ಹೊರಗೆ ಬರಲು ಹೆದರುವ ಅಂಜುಬುರುಕನೂ ಕ್ಷತ್ರಿಯನ ಮಗನಾದ ಕಾರಣದಿಂದಲೇ ಕ್ಷತ್ರಿಯನೆನಿಸಿಕೊಂಡ. ವಾಣಿಜ್ಯ ವ್ಯಾಪಾರದ ಗಂಧವಿಲ್ಲದ ಗಾಂಪನೂ ವೈಶ್ಯನ ಮಗನಾಗಿದ್ದರೆ ಸಾಕು ವೈಶ್ಯನೆನಿಸಿಕೊಂಡ. ಶೂದ್ರನ ಮಗನಿಗೆ ಶೂದ್ರನಾಗಿ ಉಳಿಯದೆ ಬೇರೆ ಆಯ್ಕೆ ಇಲ್ಲದಂತಾಯಿತು. ಇವುಗಳ ಜೊತೆಗೆ ಜಾತಿಗಳಲ್ಲಿ ಮೇಲು ಕೀಳು ಎಂಬ ವರ್ಗೀಕರಣವಾಯಿತು. 

ಭಾರತೀಯ ಸಂವಿಧಾನದಲ್ಲಿ ಕಸುಬುಗಳನ್ನು ಮೇಲು ಕೀಳು ಎಂಬುದನ್ನು ಹೋಗಲಾಡಿಸಲಾಗಿದೆ. Dignity of Labour ಅನ್ನು ಪ್ರತಿಪಾದಿಸಲಾಗಿದೆ. ಆದರೆ ವಚನ ಸಾಹಿತ್ಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ Divinity of Labour ಅನ್ನು ಪ್ರತಿಪಾದಿಸಲಾಗಿದೆ. ವ್ಯಕ್ತಿಯ ಕಸುಬುಗಳಲ್ಲಿ ಮೇಲು ಕೀಳುಗಳು ಹೋದವು. ಅಷ್ಟೇ ಅಲ್ಲ ಕಸುಬು ಕಾಯಕವಾಗಿ, ಆತ್ಮೋನ್ನತಿಯ ನಿಚ್ಚಣಿಕೆಯಾಯಿತು. ದೋಣಿ ನಡೆಸುವ ಅಂಬಿಗ ಕೇವಲ ನದಿಯನ್ನು ದಾಟಿಸುವ ಕಸುಬನ್ನು ಮಾಡದೆ ಭವಸಾಗರವನ್ನು ದಾಟಿಸುವ ಆಧ್ಯಾತ್ಮಿಕ ಗುರುವಾದ. ಮಡಿವಾಳ ಬಟ್ಟೆಗಳನ್ನಷ್ಟೇ ಮಡಿ ಮಾಡದೆ ಮನದ ಮಲಿನವನ್ನು ತೊಳೆದು ಬೆಳಕು ತೋರುವ ಗುರುವಾದ. 

ಎಲ್ಲ ಮಾನವರೂ ಸರಿ ಸಮಾನರು ಎಂಬುದು ವಚನಕಾರರ ಆಶಯವಾಗಿತ್ತು. ಸಂವಿಧಾನದ ವ್ಯಾಪ್ತಿಯ ನಾಗರಿಕ ಸಮಾಜಕ್ಕೂ (civilized society) ಶರಣರು-ಸಂತರು ನಿರ್ಮಾಣ ಮಾಡಬಯಸಿದ ಆದರ್ಶ ಸಮಾಜಕ್ಕೂ (ideal society) ವ್ಯತ್ಯಾಸ ಇರುವುದು ಇಲ್ಲಿಯೇ. ಸಂವಿಧಾನವೆನ್ನುವುದು ಕಾನೂನು; ಅದನ್ನು ಪಾಲಿಸುವುದು ಕಡ್ಡಾಯ. ಅದನ್ನು ಗೌರವಿಸುವುದು ಅನಿವಾರ್ಯ; ತಪ್ಪಿ ನಡೆಯುವುದು ಶಿಕ್ಷಾರ್ಹ ಅಪರಾಧ. ಆದರೆ ಇದನ್ನು ಪ್ರಜ್ಞಾಪೂರ್ವಕವಾಗಿ ಸರಕಾರದ ಕಣ್ಣಿಗೆ ಮಣ್ಣೆರಚಿ ಉಲ್ಲಂಘಿಸುವುದು ಯಾರಿಗಾದರೂ ಸಾಧ್ಯ. ಶರಣರು, ಸಂತರು ರೂಪಿಸಿದ್ದು ಕಾನೂನನ್ನು ಅಲ್ಲ; ಅದನ್ನೂ ಮೀರಿದ ಆತ್ಮಾವಲೋಕನವನ್ನು. ಕ್ಷಣಕ್ಷಣವೂ ವ್ಯಕ್ತಿ ತನ್ನ ನಡವಳಿಕೆಗಳನ್ನು ದೇವರು ಹಿಡಿದ ತ್ರಾಸು ಕಟ್ಟಳೆಯಲ್ಲಿ ತೂಗಿ ನೋಡುತ್ತಾ ಅಲ್ಲಿ ಸಲ್ಲುವಂತೆ ಕರ್ತಾರನ ಕಮ್ಮಟವಾದ ಈ ಪ್ರಪಂಚದಲ್ಲಿ ಬದುಕನ್ನು ಸಾಗಿಸುತ್ತಾ ಇರಬೇಕಾಗಿರುವುದು ಅನಿವಾರ್ಯ.  ಜನರರಿಯದಂತೆ ಕಳ್ಳತನ ಮಾಡಬಹುದೇ ಹೊರತು ಮನವರಿಯದ ಕಳ್ಳತನವುಂಟೆ? ಪ್ರಜಾಪ್ರಭುತ್ವದಲ್ಲಿ ಕಾನೂನು, ಪೋಲೀಸು ವ್ಯವಸ್ಥೆಯಿಂದ ಸಂವಿಧಾನವನ್ನು ಜಾರಿಗೊಳಿಸಿದರೆ ವಚನಕಾರರ ದೃಷ್ಟಿಯಲ್ಲಿ ವ್ಯಕ್ತಿಯ ಮನವೇ, ಆತ್ಮಸಾಕ್ಷಿಯ ಪಿಸುದನಿಯೇ ಪೋಲೀಸು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 27.1.2010