“ಸರ್ವಜನಾಂಗದ ಶಾಂತಿಯ ತೋಟ"
ವಿಶಾಲವಾದ ಒಂದು ಕೋಣೆ. ಒರಗುದಿಂಬುಗಳಿಂದ ಕೂಡಿದ ಎತ್ತರದ ಸುಖಾಸನ, ಪ್ರಾತಃಕಾಲದ ಸೂರ್ಯನಂತೆ ಕಂಗೊಳಿಸುವ ತೇಜಃಪುಂಜವಾದ ದುಂಡನೆಯ ಮುಖ, ಕೋಲ್ಮಿಂಚಿನಂತೆ ಹೊಳೆಯುವ ಕಣ್ಣುಗಳು. ಸಂಪಿಗೆಯ ಎಸಳಂತಿರುವ ನೀಳವಾದ ಮೂಗು. ನಕ್ಕರೆ ಹಾಲು ಚೆಲ್ಲುವಂತಹ ದಂತಪಂಕ್ತಿ. ಉದ್ದನೆಯ ಮೊನೆಚಾದ ಕೈಬೆರಳುಗಳು. ವಿಶಾಲವಾದ ಹಣೆಯ ಮೇಲೆ ರಾರಾಜಿಸುವ ವಿಭೂತಿ. ಕೊರಳಲ್ಲಿ ರುದ್ರಾಕ್ಷಿಯ ಕಂಠಮಾಲೆ. ಅಂಗಿಯ ಗುಂಡಿಗೆ ಕಪ್ಪನೆಯ ದಾರದಿಂದ ಇಳಿಬಿಟ್ಟಿದ್ದ ಜೇಬು ಗಡಿಯಾರ. ವೈರಾಗ್ಯವೇ ಸಾಕಾರಗೊಂಡ ಕಾಷಾಯವಸ್ತ್ರಾವೃತವಾದ ಕಾಂತಿಯುತ ದೇಹ. ಎಂತಹ ನಾಸ್ತಿಕರನ್ನೂ ತನ್ನೆಡೆಗೆ ಬರಸೆಳೆಯಬಲ್ಲ ಆಧ್ಯಾತ್ಮಿಕ ಚುಂಬಕಶಕ್ತಿಯುಳ್ಳ ಗಂಭೀರ ಮುಖಮುದ್ರೆಯ ವ್ಯಕ್ತಿತ್ವ. ಇವೆಲ್ಲವುಗಳಿಂದ ಮೈವೆತ್ತು ಎತ್ತರದ ಆಸನದಲ್ಲಿ ಮಂಡಿಸಿದ್ದವರೇ ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಕೆಳಗೆ ಸುತ್ತಲೂ ಕುಳಿತಿದ್ದವರು ಆರೂಢ ದಾಸೋಹಿ ದಾನಚಿಂತಾಮಣಿ ಎಂದು ಹೆಸರಾಗಿದ್ದ ದಾವಣಗೆರೆಯ ಮಾಗನೂರು ಬಸಪ್ಪನವರು, ಅರಸೀಕೆರೆಯ ವಯೋವೃದ್ಧರಾದ ವೀರಪ್ಪಯ್ಯನವರು ಮೊದಲಾದ ಸಮಾಜದ ಗಣ್ಯವ್ಯಕ್ತಿಗಳು.ಸಮಾಜದ ಯಾವುದೋ ಒಂದು ಮುಖ್ಯವಾದ ಸಭೆ ನಡೆದಿತ್ತು. ಗುರುಗಳ ಕರೆ ಬಂತು. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಪೂಜ್ಯ ಗುರುಗಳು ಹಸನ್ಮುಖಿಗಳಾಗಿ ಮಾತೃವಾತ್ಸಲ್ಯದಿಂದ ಬಾರಪ್ಪ, ಬಾರೋ ಎಂದು ನಮ್ಮತ್ತ ಕೈಬೀಸಿಕರೆದರು. ಈತನೇ ಆ ಹುಡುಗ ಎಂದು ಸಭೆಯ ಗಮನ ಸೆಳೆದರು. ಪೂಜ್ಯ ಗುರುಗಳಿಗೆ ಭಕ್ತಿಪುರಃಸರವಾಗಿ ಅಭಿವಂದಿಸಿ ಅವರ ಪಕ್ಕದಲ್ಲಿ ಸಂಕೋಚದಿಂದ ನಿಂತುಕೊಂಡೆವು. ಅಲ್ಲಿ ಸೇರಿದ್ದಶಿಷ್ಯಪ್ರಮುಖರೆಲ್ಲಾ ನಮ್ಮನ್ನೇ ದಿಟ್ಟಿಸಿ ನೋಡತೊಡಗಿದರು. ನಮಗೆ ಏನೊಂದೂ ತಿಳಿಯಲಿಲ್ಲ. ಕೆಲಹೊತ್ತಿನಲ್ಲಿಯೇ ಪೂಜ್ಯ ಗುರುಗಳು ನಮ್ಮ ಕಡೆ ತಿರುಗಿ ನೀನಿನ್ನು ಹೋಗಬಹುದು,ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡ, ಚೆನ್ನಾಗಿ ಓದು ಎಂದು ಹೇಳಿ ಸಭೆಯಿಂದ ಹೋಗಲು ಆಜ್ಞಾಪಿಸಿದರು. ನಮಗೆ ಚೆನ್ನಾಗಿ ಜ್ಞಾಪಕವಿರುವಂತೆ ಈ ಘಟನೆ ನಡೆದದ್ದು 1964ರಲ್ಲಿ. ಆಗ ನಾವು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಪಿ.ಯು.ಸಿ ಓದುತ್ತಿದ್ದ ವಿಜ್ಞಾನದ ವಿದ್ಯಾರ್ಥಿ. ಆ ವರ್ಷ ಅರಸೀಕೆರೆಯಲ್ಲಿ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ನೋಡಲು ಪೂಜ್ಯ ಗುರುಗಳ ಆಣತಿಯ ಮೇರೆಗೆ ಮೈಸೂರಿನಿಂದ ಕೆಲವರು ಗೆಳೆಯರೊಂದಿಗೆ ಹೋಗಿದ್ದೆವು.
ಅಂದಿನ ಸಭೆಯಲ್ಲಿ ನಡೆದ ಸಂಭಾಷಣೆಯು ನಮಗೆ ಕ್ರಮೇಣ ಅರ್ಥವಾಗತೊಡಗಿತು. ಪಿ.ಯು.ಸಿ ವಿಜ್ಞಾನದ ವಿಷಯಗಳಲ್ಲಿ ಪ್ರತಿಶತ 85% ಅಂಕಗಳನ್ನು ಪಡೆದಿದ್ದರೂ ಪೂಜ್ಯ ಗುರುಗಳು ನಮಗೆ ಸಂಸ್ಕೃತ, ಕನ್ನಡ ಮತ್ತು ತತ್ವಶಾಸ್ತ್ರಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ಓದಲು ಪ್ರೇರೇಪಿಸಿ ಮೈಸೂರಿನ ಮಹಾರಾಜಾ ಕಾಲೇಜಿಗೆ ಕಳುಹಿಸಿದರು. ವಿಜ್ಞಾನವನ್ನು ಬೋಧಿಸುತ್ತಿದ್ದ ನಮ್ಮ ನೆಚ್ಚಿನ ಅಧ್ಯಾಪಕರು ಇದರಿಂದ ನಮ್ಮ ಮೇಲೆ ಕುಪಿತಗೊಂಡರು. ವಿಜ್ಞಾನದ ವಿಷಯಗಳಲ್ಲಿ ನಮಗೆ ವಿಶೇಷ ಆಸಕ್ತಿ ಇದ್ದರೂ ಪೂಜ್ಯ ಗುರುಗಳ ಆಣತಿಯನ್ನು ನಿರಾಕರಿಸುವ ಧೈರ್ಯವಾಗಲಿಲ್ಲ. ಅವರ ಆಜ್ಞೆಯಂತೆ ಸಂಸ್ಕೃತ ಮತ್ತು ಕನ್ನಡ ಓದಲು ಮಹಾರಾಜಾ ಕಾಲೇಜಿನಲ್ಲಿ ಪ್ರವೇಶ ಪಡೆದ ಮೇಲೆ ಆಗಿನ ಪ್ರಿನ್ಸಿಪಾಲರಾಗಿದ್ದ ಖಾನ್ ರವರು ನಮ್ಮ ಅಂಕಪಟ್ಟಿಯನ್ನು ನೋಡಿ ವಿಸ್ಮಯಗೊಂಡು ನಮ್ಮನ್ನು ಅವರ ಛೇಂಬರಿಗೆ ಕರೆಸಿದರು. ವಿಜ್ಞಾನದ ವಿಷಯಗಳಲ್ಲಿ ಇಷ್ಟೊಂದು ಒಳ್ಳೆಯ ಅಂಕಗಳನ್ನು ಪಡೆದುಕೊಂಡಿರುವ ನೀನು ಆರ್ಟ್ಸ್ ಓದಲು ಏಕೆ ಬಂದಿರುವೆ, ಇಂಜಿನಿಯರಿಂಗ್ಗೆ ಏಕೆ ಹೋಗಬಾರದು? ಎಂದು ಕೇಳಿದರು. ನಮಗೆ ಜಂಘಾಬಲವೇ ಉಡುಗಿಹೋದಂತಾಯಿತು. ಬಾಯಿ ಒಣಗಿತು. ಬಿ.ಎ. ಓದಲು ಪಡೆದಿರುವ ಪ್ರವೇಶಾವಕಾಶವನ್ನು ಎಲ್ಲಿ ರದ್ದು ಮಾಡಿಬಿಡುವರೋ, ಗುರುಗಳ ಅಪ್ಪಣೆಯನ್ನು ಎಲ್ಲಿ ಧಿಕ್ಕರಿಸಿದಂತಾಗಿಬಿಡುತ್ತದೋ ಎಂಬ ಭಯದಿಂದ ಸಂಸ್ಕೃತ ಓದಲು ನನಗೆ ಬಹಳ ಇಷ್ಟ ಎಂದು ತಡವರಿಸುತ್ತಾ ಉತ್ತರಿಸಿದೆವು. ನಮ್ಮ ಭವಿಷ್ಯದ ದೃಷ್ಟಿಯಿಂದ ಇನ್ನೂ ಏನೇನೋ ಕೆಲವು ಹಿತನುಡಿಗಳನ್ನು ಖಾನ್ ರವರು ಹೇಳಿದ ಅಸ್ಪಷ್ಟ ನೆನಪು. ಸದ್ಯ ಅವರು ಪ್ರವೇಶಾವಕಾಶವನ್ನು ರದ್ದುಪಡಿಸಲಿಲ್ಲವಲ್ಲಾ ಎಂಬ ಸಮಾಧಾನದ ನಿಟ್ಟುಸಿರು ಬಿಟ್ಟು ಅವರ ಛೇಂಬರಿನಿಂದ ಹೊರಬಿದ್ದೆವು.
ಮೇಲೆ ತಿಳಿಸಿದಂತೆ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ನಾವು ಮೊಟ್ಟ ಮೊದಲು ನೋಡಿದ್ದು ಇಲ್ಲಿಗೆ 48 ವರ್ಷಗಳ ಹಿಂದೆ ಅರಸೀಕೆರೆಯಲ್ಲಿ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ನಾಡಿನ ನಾನಾ ಭಾಗಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬಂದಿರುವ ಈ ಮಹೋತ್ಸವ ಒಂದು ಸಂಚಾರೀ ವಿಶ್ವವಿದ್ಯಾನಿಲಯವೆಂಬ ಖ್ಯಾತಿ ಗಳಿಸಿದೆ. ಶಿಸ್ತು ಮತ್ತು ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದು ಇದರ ವೇದಿಕೆಯ ಮೇಲಿಂದ ಉಪನ್ಯಾಸ ನೀಡುವವರಿಗೆ ನಿರ್ದಿಷ್ಟ ಸಮಯದ ಕಟ್ಟುಪಾಡು. ಸಮಯ ಮೀರಿದರೆ ಕೆಂಪು ದೀಪ ದ ಎಚ್ಚರಿಕೆ! ಭಾಷಣಕಾರರು ಕೆಲವರು ಮಾತಿನ ಭರಾಟೆಯಲ್ಲಿ ಕೆಂಪು ದೀಪದ ಎಚ್ಚರಿಕೆಯಿಂದ ಅಸಹನೆಗೊಂಡು ಕಣ್ಣು ಕೆಂಪುಮಾಡಿದವರೂ ಉಂಟು. ಸಮಯದ ಪರಿವೆಯುಳ್ಳ ಇನ್ನು ಕೆಲವರು ಕೆಂಪು ದೀಪದ ಎಚ್ಚರಿಕೆಯು ನಿಮ್ಮ ಕಪ್ಪು ಭಾಷಣವನ್ನು ಮುಗಿಸಿ ಎಂಬ ಸ್ಪಷ್ಟ ಸೂಚನೆ ಎಂದು ವಿನೋದವಾಗಿ ಮಾತನಾಡಿ ಜನರನ್ನು ರಂಜಿಸಿದ್ದೂ ಉಂಟು. ಉಪನ್ಯಾಸಕರೇ ಇರಲಿ, ಮುಖ್ಯ ಅತಿಥಿಗಳೇ ಇರಲಿ, ಪ್ರತಿಷ್ಠಿತವ್ಯಕ್ತಿಗಳೇ ಇರಲಿ, ಮತ್ತಾರೇ ಇರಲಿ, ಈ ಸಮಯದ ಕಟ್ಟುಪಾಡಿನಿಂದ ಹೊರತಲ್ಲ. 1974 ರಲ್ಲಿ ಬೆಂಗಳೂರಿನ ಸುಭಾಷ್ ನಗರ ಮೈದಾನ (ಈಗಿನ ಸಿಟಿ ಬಸ್ ಸ್ಟಾಂಡ್) ದಲ್ಲಿ ಈ ತರಳಬಾಳು ಹುಣ್ಣಿಮೆ ನಡೆದಾಗ, ಮಹಾಮಂಟಪವನ್ನು ಉದ್ಘಾಟಿಸಲು ಬರಬೇಕಾಗಿದ್ದ ಆಗಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರು ಸಕಾಲದಲ್ಲಿ ಬರಲಿಲ್ಲ. ಸಮಯಕ್ಕೆ ಸರಿಯಾಗಿ ಆಗಮಿಸಿದ ನಮ್ಮ ಪರಮಾರಾಧ್ಯ ಗುರುವರ್ಯರು ಮುಖ್ಯಮಂತ್ರಿಗಳಿಗಾಗಿ ಕಾಯದೆ ಸ್ವತಃ ತಾವೇ ಟೇಪನ್ನು ಕತ್ತರಿಸುವ ಮೂಲಕ ಮಂಟಪವನ್ನು ಉದ್ಘಾಟಿಸಿ ವೇದಿಕೆಯ ಮೇಲೇರಿ ಕುಳಿತರು. ತಡವಾಗಿ ವೇದಿಕೆಗೆ ಬಂದ ಅರಸುರವರು ಪೂಜ್ಯರ ಮತ್ತು ಸಭಿಕರ ಕ್ಷಮೆಯನ್ನು ಯಾಚಿಸಿದರು. ಇದೇ ಹುಣ್ಣಿಮೆ ಮಹೋತ್ಸವವು ನಮ್ಮ ಕಾಲದಲ್ಲಿ 1988 ನೇ ಇಸವಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದಾಗ ಆಗಿನ ಮುಖ್ಯಮಂತ್ರಿ ಸನ್ಮಾನ್ಯ ರಾಮಕೃಷ್ಣ ಹೆಗಡೆಯವರು ನಾವು ಸಭೆಯ ಕಾರ್ಯಕಲಾಪಗಳೆಲ್ಲವನ್ನೂ ಮುಗಿಸಿಕೊಂಡು ಮುಖ್ಯಮಂತ್ರಿಗಳಿಗಾಗಿ ಕಾಯದೆ ಸಭೆಯಿಂದ ನಿರ್ಗಮಿಸಿದ ಮೇಲೆ ತಡವಾಗಿ ಆಗಮಿಸಿ ಮುಜುಗರಕ್ಕೊಳಗಾದರು. ಈ ಘಟನೆಯನ್ನು ಕುರಿತು ಪರ ಮತ್ತು ವಿರೋಧವಾಗಿ ಎರಡೂ ರೀತಿಯಲ್ಲಿ ಪತ್ರಿಕೆಗಳು ವಿಮರ್ಶಿಸಿದವು. ಈ ಘಟನೆಯ ನಂತರವೂ ಹೆಗಡೆಯವರು ಮುಂದಿನ ತರಳಬಾಳು ಹುಣ್ಣಿಮೆಯ ಸಮಾರಂಭಗಳಲ್ಲಿ ಭಾಗವಹಿಸಿದರು. ನಮ್ಮ ಅವರ ವಿಶ್ವಾಸಕ್ಕೇನೂ ಕುಂದು ಬರಲಿಲ್ಲ.
ಮಾಘಶುದ್ಧ ಸಪ್ತಮಿಯಿಂದ ಹಿಡಿದು ಮಾಘಶುದ್ಧಪೂರ್ಣಿಮೆಯ ವರೆಗೆ 9 ದಿನಗಳ ಕಾಲ ನಡೆಯುವ ಈ ತರಳಬಾಳು ಹುಣ್ಣಿಮೆ ಮಹೋತ್ಸವ ಈ ವರ್ಷ ಕಡೂರಿನಲ್ಲಿ (30.1.12 ರಿಂದ 7.2.12) ನಡೆಯುತ್ತಿದೆ. ಬೆಳದಿಂಗಳಿಗೆ ಕುಲಜಾತಿ ಸೀಮೆಗಳ ಪರಿಮಿತಿ ಇಲ್ಲ. ಕಳೆದ ಶತಮಾನದ ಮಧ್ಯಭಾಗದಿಂದಲೂ ನಿರಂತರವಾಗಿ ಹಿಂದೂ, ಮುಸ್ಲಿಂ, ಕೈಸ್ತ, ಜೈನ, ಬೌದ್ಧ, ಸಿಖ್ ಮೊದಲಾದ ಎಲ್ಲ ಧರ್ಮೀಯರ ಹೃದಯಗಳಲ್ಲಿ ಭಾವೈಕ್ಯತೆಯ ಬೆಸುಗೆಯನ್ನು ಬೆಸೆಯುತ್ತಾ ಸರ್ವಜನಾಂಗದ ಶಾಂತಿಯ ತೋಟವಾಗಿ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಪೂರ್ಣ ಚಂದಿರನ ಬೆಳುದಿಂಗಳು ಎಲ್ಲೆಡೆ ಚೆಲ್ಲುವರಿದಂತೆ ಎಲ್ಲಿ ನೋಡಿದರಲ್ಲಿ ಭಕ್ತಸಮೂಹ.
ಏನಿದು ತರಳಬಾಳು? ನಮ್ಮ ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ದರು ತಮ್ಮ ಶಿಷ್ಯ ತೆಲಗುಬಾಳು ಸಿದ್ಧನನ್ನು ಮಾಘಶುದ್ಧ ಹುಣ್ಣಿಮೆಯಂದು ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠದ ಮೇಲೆ ಕುಳ್ಳಿರಿಸಿ ತರಳ, ಬಾಳು ಎಂದು ಹರಸಿದ ಆಶೀರ್ವಾದ ಪಂಚಾಕ್ಷರಿಮಂತ್ರ. "Long Live, my Son!, ಜೀತೇ ರಹೋ ಬೇಟಾ! ಎಂಬ ಮಾತೃವಾತ್ಸಲ್ಯದ ಹರಕೆ. ಇದೇ ಹುಣ್ಣಿಮೆಯ ದಿನದಂದು ನಮ್ಮನ್ನು ತರಳ, ಬಾಳು ಎಂದು ಹರಸಿ ಬಯಲಾಗಿರುವ ನಮ್ಮ ಪರಮಾರಾಧ್ಯ ಗುರುವರ್ಯರಿಗೆ ಭಾವಪೂರ್ಣ ನಮನ. ಈ ಶುಭಸಂದರ್ಭದಲ್ಲಿ ಸಹೃದಯ ಓದುಗರೆಲ್ಲರಿಗೂ ಶುಭಹಾರೈಕೆಗಳು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 2.2.2012