ಬದುಕಿನ ಬೆಲೆ ಎಷ್ಟು?
“ಪುಸ್ತಕಂ ವನಿತಾ ವಿತ್ತಂ ಪರ-ಹಸ್ತಗತಂ ಗತಂ
ಯದಿ ವಾ ಪುನರಾಯಾತಂ ಜೀರ್ಣ೦
ಭ್ರಷ್ಟಾ ಚ ಖಂಡಶಃ”
ಸಂಸ್ಕೃತದ ಈ ಸುಭಾಷಿತ ನಮಗೆ ನೆನಪಾಗಿದ್ದು ಮೊನ್ನೆ ಮೈಸೂರಿಗೆ ಹೋದಾಗ. ಸಂದರ್ಭ: ಕನ್ನಡ ಪುಸ್ತಕ ಪ್ರಾಧಿಕಾರ ಏರ್ಪಡಿಸಿದ್ದ ಪುಸ್ತಕಮೇಳ. ಶಿವರಾತ್ರಿ ಪ್ರಯುಕ್ತ ಮೈಸೂರಿನ ಬೇರೊಂದು ಕಾರ್ಯಕ್ರಮಕ್ಕೆ ಹೋದಾಗ ಅದೇ ಸಂದರ್ಭದಲ್ಲಿ ನಡೆಯುತ್ತಿದ್ದ ಪುಸ್ತಕಮೇಳಕ್ಕೆ ಆಗಮಿಸಬೇಕೆಂದು ಪುಸ್ತಕ ಪ್ರಾಧಿಕಾರದ ಸದಸ್ಯರಾದ ಸಂವಹನ ಪ್ರಕಾಶನದ ಮಾಲೀಕ ಲೋಕಪ್ಪನವರ ಒತ್ತಾಸೆ. ಸ್ಥಳ: ಮೈಸೂರಿನ ಮಹಾರಾಜಾ ಕಾಲೇಜಿನ ಹಿಂಭಾಗದ ಮೈದಾನ. ಲೋಕಪ್ಪನವರ ಒತ್ತಾಸೆ ಒಂದು ಭಾವನಾತ್ಮಕ ಸೆಳೆತವಾಗಿ ಪರಿಣಮಿಸಿತು. 60 ರ ದಶಕದ ಯುವ ವಯಸ್ಸಿನಲ್ಲಿ ಅದೇ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು ನಮ್ಮ ನೆನಪಿನ ದೋಣಿಯಲ್ಲಿ ತೇಲತೊಡಗಿದವು. ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು, ತೀ.ನಂ.ಶ್ರೀ., ಪು.ತಿ.ನ., ಡಿ.ಎಲ್.ಎನ್. ಮೊದಲಾದವರು ಇನ್ನೂ ಬದುಕಿದ್ದ ಕಾಲವದು. ಅವರನ್ನು ಕಣ್ಣಾರೆ ನೋಡುವ ಮತ್ತು ಕಿವಿಯಾರೆ ಕೇಳುವ ಸೌಭಾಗ್ಯ ಇಂದಿನ ಯುವಪೀಳಿಗೆಗೆ ಇಲ್ಲ. ಪ್ರಾಚ್ಯವಿದ್ಯಾ ಸಂಶೋಧನಾಕೇಂದ್ರವನ್ನು ಹಾಯ್ದು ಹೋಗುತ್ತಿರುವಾಗ ಅದರ ನಿರ್ದೇಶಕರಾಗಿದ್ದ ಎಚ್. ದೇವೀರಪ್ಪ, ಮಹಾರಾಜಾ ಕಾಲೇಜಿನಲ್ಲಿ ನಮ್ಮ ಕನ್ನಡ ಪ್ರಾಧ್ಯಾಪಕರಾಗಿದ್ದ ಜಿ.ಎಸ್.ಎಸ್., ಸುಜನಾ, ಸಿ.ಪಿ.ಕೆ., ಪ್ರಭುಶಂಕರ, ಎಚ್.ಎಂ. ಚೆನ್ನಯ್ಯ, ಸಹಪಾಠಿಗಳಾಗಿದ್ದ ರಾಮದಾಸ್, ಆಲನಹಳ್ಳಿ ಶ್ರೀಕೃಷ್ಣ, ತೀ.ನಂ. ಶಂಕರನಾರಾಯಣ, ಪಿ.ಕೆ. ರಾಜಶೇಖರ ಮೊದಲಾದ ಗೆಳೆಯರ ನೆನಪುಗಳಲ್ಲಿ ಹಿಂದೆ ಹಿಂದೆ ಓಡುತ್ತಿದ್ದ ಮನಸ್ಸಿಗೆ ದಿಢೀರನೆ ಬ್ರೇಕ್ ಹಾಕಿತ್ತು ಪುಸ್ತಕಮೇಳದ ಮುಂದೆ ನಿಂತ ನಮ್ಮ ಕಾರು.
ಪುಸ್ತಕಮೇಳದ ಪೆಂಡಾಲು ಹೊರಗಿನಿಂದ ನೋಡಲು ಹಳ್ಳಿ ರೈತರು ಜತನದಿಂದ ಕಾಪಾಡಿ ಬೆಳೆಸುವ ಸಸಿಗಳ ಹಸಿರುಮನೆ (Green House) ಯಂತೆ ಗೋಚರಿಸುತ್ತಿತ್ತು. ಒಳಹೊಕ್ಕು ನೋಡಿದಾಗ ಅದೊಂದು ಸಾಹಿತ್ಯಕೃತಿಗಳನ್ನು ಸಂರಕ್ಷಿಸಿ ಸಹೃದಯ ಓದುಗರಿಗೆ ವಿತರಿಸುವ ಸಾಹಿತ್ಯಕೃಷಿಯ ಹಸಿರುಮನೆಯಾಗಿತ್ತು. ಆತ್ಮೀಯವಾಗಿ ಬರಮಾಡಿಕೊಂಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸಿದ್ಧಲಿಂಗಯ್ಯನವರು ಪುಸ್ತಕಮೇಳದ ಬಗ್ಗೆ ವಿವರಣೆ ನೀಡಿದರು. ಮೇಳದಲ್ಲಿ 102 ಮಳಿಗೆಗಳು ಇದ್ದು ಒಂದು ಲಕ್ಷಕ್ಕೂ ಹೆಚ್ಚಿನ ಶೀರ್ಷಿಕೆಯ ಪುಸ್ತಕಗಳು ಇದ್ದವು. ಪ್ರತಿಯೊಂದು ಮಳಿಗೆಯೂ ದುಂಬಿಗಳು ಮುತ್ತಿದ ಜೇನುಗೂಡಿನಂತೆ ಪುಸ್ತಕಪ್ರಿಯರಿಂದ ಸುತ್ತುವರಿದಿತ್ತು. ಪುಸ್ತಕಗಳ ಬಗ್ಗೆ ಅವರಿಗಿದ್ದ ಅಭಿರುಚಿ ಕನ್ನಡಾಭಿಮಾನದ ದ್ಯೋತಕವಾಗಿತ್ತು. ಮೇಳಕ್ಕೆ ಬಂದ ಪ್ರತಿಷ್ಠಿತ ವ್ಯಕ್ತಿಗಳು ಯಾರೆಂಬ ಸುದ್ದಿ ಆಗಾಗ್ಗೆ ಧ್ವನಿವರ್ಧಕದಲ್ಲಿ ಮಹಿಳೆಯೊಬ್ಬಳ ಮಧುರಕಂಠದಿಂದ ಕೇಳಿಬರುತ್ತಿತ್ತು. ಇತರೆ ಮೇಳಗಳಲ್ಲಿರುವಂತೆ ಇಲ್ಲಿ ಘಮಘಮಿಸುವ ತಿಂಡಿ ತೀರ್ಥಗಳ ವಾಸನೆ ಇರಲಿಲ್ಲ. ಇಲ್ಲಿದ್ದ ಸಾಹಿತ್ಯಸೌರಭವೇ ಬೇರೆ. ಒಂದೂವರೆ ಕೋಟಿ ರೂ. ಗಳಿಗೂ ಹೆಚ್ಚು ಪುಸ್ತಕಗಳು ಮಾರಾಟಗೊಂಡವೆಂದು ನಂತರ ತಿಳಿಯಿತು. ಮಳಿಗೆಯಿಂದ ಮಳಿಗೆಗೆ ಹೋಗುವಾಗ ನಮ್ಮ ಬಿಸಿಲುಬೆಳದಿಂಗಳು ಅಂಕಣವನ್ನು ತಪ್ಪದೆ ಓದುತ್ತಿರುವ ಸಹೃದಯ ಓದುಗರ ಆಕಸ್ಮಿಕ ಭೇಟಿ. ವೈಯಕ್ತಿಕವಾಗಿ ನಮಗೆ ಅಪರಿಚಿತರಾದರೂ ಅವರಾಡಿದ ಮೆಚ್ಚುಗೆಯ ಮಾತುಗಳನ್ನು ಕೇಳಿ “Tell me what you read and Ill tell you who you are” (ನೀವು ಏನನ್ನು ಓದುತ್ತೀರೆಂದು ಹೇಳಿ, ಹಾಗಾದರೆ ನೀವು ಯಾರೆಂದು ಹೇಳುತ್ತೇನೆ) ಎನ್ನುವ ಆಂಗ್ಲನುಡಿ ನೆನಪಾಯಿತು. ಒಂದೊಂದೇ ಮಳಿಗೆಯಲ್ಲಿದ್ದ ಪುಸ್ತಕಗಳ ಸುಂದರವಿನ್ಯಾಸದ ಮುಖಪುಟದ ಮೇಲೆ ಕಣ್ಣುಹಾಯಿಸುತ್ತಾ, ಬೇಕಾದ ಪುಸ್ತಕಗಳನ್ನು ಆಯ್ಕೆಮಾಡಿಕೊಂಡು ಮುಂದೆ ಮುಂದೆ ಹೋಗುತ್ತಿದ್ದಂತೆ ಆ ಪುಸ್ತಕಗಳಲ್ಲಿದ್ದ ಮಾಂತ್ರಿಕ ಶಕ್ತಿ ನಮ್ಮನ್ನು ಮೈಮರೆಸಿತ್ತು. ನಮ್ಮೊಂದಿಗಿದ್ದ ಸಿದ್ದಲಿಂಗಯ್ಯನವರು ಕಾರ್ಯನಿಮಿತ್ತ ಯಾವಾಗ ಹಿಂದೆ ಸರಿದು ಹೋದರೋ ಗೊತ್ತೇ ಆಗಲಿಲ್ಲ. “ನೀವೇನು ಲಾರಿಯನ್ನು ತೆಗೆದುಕೊಂಡು ಬಂದಿದ್ದೀರಾ ಈ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು?” ಎಂಬ ಪ್ರಶ್ನೆ ಕಿವಿಗೆ ಬಿದ್ದಾಗ ಅರಸುವ ಬಳ್ಳಿ ಕಾಲ್ತೊಡರಿದಂತೆ ಎನ್ನುವ ಹಾಗೆ ನಮ್ಮ ಕಣ್ಮುಂದೆ ನಿಂತಿದ್ದವರು ನಮ್ಮ ಪ್ರಾಧ್ಯಾಪಕರಾಗಿದ್ದ ಸಿ.ಪಿ.ಕೆ. ಅವರು. ಉಭಯಕುಶಲೋಪರಿ. ವಿಷ್ಣುಪುರಾಣ, ಶಬ್ದಮಣಿದರ್ಪಣ ಕುರಿತ ಅವರ ಉಪನ್ಯಾಸಗಳ ನೆನಪು.
ಗತಕಾಲದ ನೆನಪುಗಳು ಹಳೆಯ ಕಾಲದ ಗ್ರಾಮೋಫೋನಿನ ಮುಳ್ಳು ಇದ್ದಂತೆ! ರೆಕಾರ್ಡ್ ಪ್ಲೇಟಿನ ಒಂದು ಟ್ರಾಕಿನಲ್ಲಿ ಸಿಕ್ಕಿಕೊಂಡರೆ ಅಲ್ಲಿಯೇ ಸುತ್ತುತ್ತಿರುತ್ತದೆ. ಅದನ್ನು ಎತ್ತಿ ಮುಂದಕ್ಕೆ ಇಡದಿದ್ದರೆ ಮುಂದಿನ ಹಾಡು ಕೇಳಿಸುವುದೇ ಇಲ್ಲ. ಆರಂಭದಲ್ಲಿ ಉಲ್ಲೇಖಿಸಿದ ಸುಭಾಷಿತಕ್ಕೆ ಬರೋಣ. “ಪುಸ್ತಕ, ಹೆಣ್ಣು ಮತ್ತು ದುಡ್ಡು ಬೇರೆಯವರ ಕೈಗೆ ಹೋಯಿತೆಂದರೆ ಹೋದಂತೆಯೇ, ಮತ್ತೆ ಮರಳಿ ಬರುವುದಿಲ್ಲ. ಒಂದು ಪಕ್ಷ ಹಿಂತಿರುಗಿ ಬಂದರೂ ಮೊದಲಿನ ಸ್ಥಿತಿಯಲ್ಲಿರುವುದಿಲ್ಲ. ಪುಸ್ತಕ ಹರಿದು ಹೋಗಿರುತ್ತದೆ, ಹೆಣ್ಣು ಭ್ರಷ್ಟಳಾಗಿರುತ್ತಾಳೆ, ದುಡ್ಡು ಅರ್ಧಂಬರ್ಧ ಬರುತ್ತದೆ”. ಎಂದು ಈ ಸೂಕ್ತಿಯು ಎಚ್ಚರಿಸುತ್ತದೆ. ಸಾಮಾಜಿಕ ಜೀವನದಲ್ಲಿ ಬೇರೆಯವರಿಗೆ ಪುಸ್ತಕವನ್ನು ಮತ್ತು ಹಣವನ್ನು ಎರವಲಾಗಿ ಕೊಡುವುದು ಆಶ್ಚರ್ಯದ ಸಂಗತಿಯೇನೂ ಅಲ್ಲ. ಸ್ನೇಹ-ವಿಶ್ವಾಸಗಳಲ್ಲಿ ಅದು ಅನಿವಾರ್ಯವೂ ಹೌದು. ಆದರೆ ಇವುಗಳ ಸಾಲಿನಲ್ಲಿ ಸ್ತ್ರೀಯರನ್ನೂ ಸೇರಿಸಿರುವುದು ಎಷ್ಟರಮಟ್ಟಿಗೆ ಸರಿ? ಸ್ನೇಹ-ವಿಶ್ವಾಸದಲ್ಲಿ ಒಪ್ಪಿಗೆಯಾಗಿ ಮಗಳನ್ನು ಮದುವೆ ಮಾಡಿಕೊಡಬಲ್ಲರೇ ಹೊರತು ತಮ್ಮ ಮಡದಿಯನ್ನು ಇನ್ನೊಬ್ಬರಿಗೆ ಕೊಟ್ಟವರುಂಟೇ? ಬಹುಶಃ ಹಣದಂತೆ ಹೆಣ್ಣನ್ನೂ ಒಂದು ಭೋಗ್ಯ-ವಸ್ತುವನ್ನಾಗಿ ಕಾಣುವ ಭಾರತೀಯ ದೃಷ್ಟಿಕೋನಕ್ಕೆ ಇದು ಅನುಗುಣವಾಗಿಯೇ ಇದೆಯೆಂದು ತೋರುತ್ತದೆ. ಅಥವಾ ನಂಬಿಕೆಯನ್ನು ಹುಟ್ಟಿಸಿ ಮೋಸಗೊಳಿಸುವ ನಯವಂಚಕರನ್ನು ಕುರಿತು ಎಚ್ಚರಿಕೆಯಿಂದಿರಲು ಈ ಮಾತು ಹೇಳಿರಬಹುದೇ? ಒಟ್ಟಾರೆ ವಿಶ್ವಾಸದಲ್ಲಿ ವ್ಯಕ್ತಿಯು ಹೇಗೆ ಮೋಸಹೋಗಬಲ್ಲನೆಂಬ ಅತ್ಯಂತ ವ್ಯಾವಹಾರಿಕ ಜ್ಞಾನವನ್ನು ಈ ಸೂಕ್ತಿಯು ನೀಡುತ್ತದೆ.
ಈ ಸಂಸ್ಕೃತ ಸುಭಾಷಿತವನ್ನು ಹೋಲುವ ಮತ್ತೊಂದು ಮಾರ್ಮಿಕ ನುಡಿ ಆಂಗ್ಲಭಾಷೆಯಲ್ಲಿ ಇಂತಿದೆ:
“Never lend your books to others, for no one ever returns them; the only books I have in my library are books that other folks have lent me”
(ನೀವೆಂದೂ ನಿಮ್ಮ ಪುಸ್ತಕಗಳನ್ನು ಪರರಿಗೆ ಎರವಲಾಗಿ ಕೊಡಬೇಡಿ: ಏಕೆಂದರೆ ಅವರು ವಾಪಾಸು ಕೊಡುವುದಿಲ್ಲ, ನನ್ನ ಬಳಿಯಲ್ಲಿ ಇರುವ ಪುಸ್ತಕಗಳೆಲ್ಲವೂ ಬೇರೆಯವರಿಂದ ಎರವಲು ಪಡೆದವುಗಳೇ ಆಗಿವೆ)
ಪುಸ್ತಕವನ್ನು ಎರವಲಾಗಿ ಪಡೆದ ವ್ಯಕ್ತಿಯು ಅದನ್ನು ಜವಾಬ್ದಾರಿಯಿಂದ ಹಿಂತಿರುಗಿಸದಿದ್ದಾಗ ತುಂಬಾ ಅಸಹನೀಯವೆನಿಸುತ್ತದೆ. ಸ್ನೇಹ-ವಿಶ್ವಾಸದಲ್ಲಿ ಮುಖಕೆಡಿಸಿಕೊಳ್ಳಲು ಬರುವುದಿಲ್ಲ. ಅದೇನೇ ಇರಲಿ, ಎರವಲಾಗಿ ಪಡೆದ ಪುಸ್ತಕವನ್ನು ಮರಳಿ ಹಿಂತಿರುಗಿಸದಿದ್ದರೂ ಚಿಂತೆಯಿಲ್ಲ, ಎರವಲು ಪಡೆದಾದರೂ ಪುಸ್ತಕವನ್ನು ಓದಬೇಕೆಂಬ ಹಂಬಲ ಆ ವ್ಯಕ್ತಿಯಲ್ಲಿರುವುದು ಮೆಚ್ಚಬೇಕಾದ ಸಂಗತಿಯೇ. ಏಕೆಂದರೆ ಪುಸ್ತಕಗಳನ್ನು ಹೊಂದಿದವರೆಲ್ಲರೂ ಓದುತ್ತಾರೆಂದು ನಂಬುವುದಕ್ಕಾಗುವುದಿಲ್ಲ. ಅನೇಕ ಒಳ್ಳೆಯ ಪುಸ್ತಕಗಳಿದ್ದರೂ ಅವುಗಳ ಒಂದು ಪುಟವನ್ನೂ ತೆರೆದು ನೋಡದ ಪುಸ್ತಕ ಪ್ರೇಮಿಗಳು ಇದ್ದಾರೆ. ಎಷ್ಟೋ ಜನರು ಪುಸ್ತಕಗಳನ್ನು ಅವರ ವಾಸದ ಕೊಠಡಿಯ ಆಲಂಕಾರಿಕ ವಸ್ತುಗಳನ್ನಾಗಿ ಮಾಡಿಕೊಂಡಿರುತ್ತಾರೆ. ಅವುಗಳನ್ನು ಓದಿ ಮನಸ್ಸನ್ನು ಆಹ್ಲಾದಕರಗೊಳಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. “No furniture so charming as books” (ಯಾವ ಪೀಠೋಪಕರಣವೂ ಪುಸ್ತಕಗಳಷ್ಟು ಸುಂದರ ಅಲ್ಲ) ಎಂದು ಲೇಖಕನೊಬ್ಬ ಹೇಳುತ್ತಾನೆ. ಮನೆಗೆ ಬಂದ ಅತಿಥಿಗಳಿಗೆ ಆರಾಮವಾಗಿ ಕುಳಿತುಕೊಳ್ಳಲು ದುಬಾರಿ ಬೆಲೆಯ ಸುಖಾಸನಗಳನ್ನು ಜೋಡಿಸಿಟ್ಟಿರುವಂತೆಯೇ, ಬಂದವರ ಕಣ್ಣಿಗೆ ಅಂದವಾಗಿ ಕಾಣುವಂತೆ ಕೊಠಡಿಯ ಗಾಜಿನ ಬೀರುಗಳಲ್ಲಿ ದುಬಾರಿ ಬೆಲೆಯ ವಿಶ್ವಗಕೋಶ (Encyclopaedia) ಗಳನ್ನು ಓರಣವಾಗಿ ಜೋಡಿಸಿಟ್ಟಿರುತ್ತಾರೆ. ನೋಡಿದವರ ಕಣ್ಣು ಆ ಪುಸ್ತಕಗಳತ್ತ ಚಲಿಸುತ್ತಲೇ ಅಂತಹ ದುಬಾರಿ ಬೆಲೆಯ ಪುಸ್ತಕಗಳನ್ನು ಹೊಂದಿದ ಧನ್ಯತೆಯ ಭಾವ ಆತಿಥೇಯರ ಹೃದಯದಲ್ಲಿ ಮೂಡಿ ಬರುತ್ತದೆ. “ಏನ್ರೀ ಅದು Encyclopaedia of Britanica ಇರುವಂತೆ ಕಾಣಿಸುತ್ತದೆ” ಎಂದು ಬಂದವರು ಉದ್ಗರಿಸಿದರೆ ಸಾಕು, “ಹೌದು, ಅದರ ಎಲ್ಲ ಸಂಪುಟಗಳು ನನ್ನಲ್ಲಿ ಇವೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದನ್ನು ಪಡೆಯಲು ಅವರು ಪಟ್ಟ ಶ್ರಮದ ಇತಿಹಾಸವನ್ನು ಹೇಳದೇ ಬಿಡುವುದಿಲ್ಲ. ಬ್ರಿಟಾನಿಕಾದಂತಹ ವಿಶ್ವಕೋಶದ ಪರಿಚಯ ತಮಗಿದೆಯೆಂಬುದನ್ನು ತೋರಿಸಿಕೊಳ್ಳುವ ಹವಣಿಕೆ ಬಂದ ಅತಿಥಿಗಳ ಮನಸ್ಸಿನಲ್ಲಿದ್ದರೆ, ಅಂತಹ ದುಬಾರಿ ಬೆಲೆಯ ವಿಶ್ವಥಕೋಶವು ತಮ್ಮ ಮನೆಯಲ್ಲಿದೆಯೆಂಬುದನ್ನು ಹೇಳಿಕೊಳ್ಳುವ ತವಕ ಆತಿಥೇಯರ ಮನಸ್ಸಿನಲ್ಲಿರುತ್ತದೆ. ವಾಸ್ತವವಾಗಿ ಇಬ್ಬರೂ ಅದನ್ನು ಓದಿರುವುದಿಲ್ಲ. ಆ ಪುಸ್ತಕಗಳ ಮೇಲೆ ಕುಳಿತಿರುವ ಧೂಳು ಹೋಗಲು ಮುಂದಿನ ದೀಪಾವಳಿಯೇ ಬರಬೇಕು.
ನಿತ್ಯಪಾರಾಯಣ ಮಾಡಲು ವಿಶ್ವದಕೋಶವೇನು ಪುರಾಣ ಪುಣ್ಯಕಥೆಯೇ ಎಂದು ಕೇಳಬಹುದು. ಹಾಗೆ ನೋಡಿದರೆ ಪ್ರಪಂಚದಲ್ಲಿ ನಿತ್ಯವೂ ಲೆಕ್ಕವಿಲ್ಲದಷ್ಟು ಪುಸ್ತಕಗಳು ಪ್ರಕಟವಾಗುತ್ತವೆ. ಎಲ್ಲವೂ ಓದಲು ಅರ್ಹವಿರುವುದಿಲ್ಲ. ಹಾಗೇನೆ ಎಲ್ಲ ಒಳ್ಳೆಯ ಪುಸ್ತಕಗಳನ್ನೂ ಒಂದು ಜೀವಮಾನದಲ್ಲಿ ಓದಿ ಮುಗಿಸಲು ಸಾಧ್ಯವಿಲ್ಲ. ಏನನ್ನು ಓದಬೇಕೆಂಬ ನಿರ್ದಿಷ್ಟ ಗುರಿ ಇರಬೇಕು. ಓದುಗರು ಅವರವರ ಅಭಿರುಚಿಗನುಗುಣವಾಗಿ ಯೋಗ್ಯವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು. “Some books are to be tasted, others to be swallowed, and some few to be chewed and digested” (ಕೆಲವು ಪುಸ್ತಕಗಳ ರುಚಿ ಮಾತ್ರ ನೋಡಬೇಕು, ಕೆಲವನ್ನು ಸೇವಿಸಿ ಆಸ್ವಾದಿಸಬೇಕು, ಇನ್ನು ಕೆಲವನ್ನು ಅಗಿದು ಅರಗಿಸಿಕೊಳ್ಳಬೇಕು). ಪ್ರಾಯಶಃ ಪತ್ರಿಕೆಗಳಲ್ಲಿ ಬರುವ ಗ್ರಂಥಸಮೀಕ್ಷೆ ಅಥವಾ ಪುಸ್ತಕ ವಿಮರ್ಶೆಯು ಹುಟ್ಟಿಕೊಂಡಿದ್ದೇ ಈ ಉದ್ದೇಶದಿಂದ ಎಂದು ತೋರುತ್ತದೆ. ಪ್ರಕಟಗೊಂಡ ಪುಸ್ತಕದಲ್ಲಿ ಏನಿದೆ, ಅದು ಓದಲು ಯೋಗ್ಯವೇ ಅಲ್ಲವೇ ಎಂಬುದನ್ನು ಓದುಗನು ಅರಿಯಲಿ, ಕಳಪೆ ಪುಸ್ತಕವನ್ನು ಕೈಗೆತ್ತಿಕೊಂಡು ಓದುಗನು ತನ್ನ ಸಮಯವನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳದಿರಲಿ ಅಥವಾ ಒಂದು ಉತ್ತಮವಾದ ಪುಸ್ತಕವು ಓದುಗನ ಗಮನಕ್ಕೆ ಬಾರದೇ ತಪ್ಪಿ ಹೋಗದಿರಲಿ ಎಂಬುದು ಪುಸ್ತಕ ವಿಮರ್ಶೆಯ ಹಿಂದಿರುವ ಸದಾಶಯ.
ಪುಸ್ತಕಗಳು ನಿಮ್ಮ ಸ್ನೇಹಿತರು ಇದ್ದಂತೆ. ಆತ್ಮೀಯ ಸ್ನೇಹಿತರು ತಕ್ಷಣವೇ ಸಿಗದೇ ಇರಬಹುದು. ಆದರೆ ಪುಸ್ತಕಗಳು ನೀವು ಬಯಸಿದಾಗಲೆಲ್ಲಾ ಸಿಗುತ್ತವೆ. ಅವು ನಿಮ್ಮ ಏಕಾಂಗಿತನವನ್ನು ಮತ್ತು ಖಿನ್ನತೆಯನ್ನು ದೂರ ಮಾಡುತ್ತವೆ. ಓದುವ ಹವ್ಯಾಸ ಇದ್ದರೆ ನಿಮಗೆ ಎಂದೂ ಬೇಸರವೆನಿಸುವುದಿಲ್ಲ. ಪುಸ್ತಕ ಕೈಯಲ್ಲಿರುವುದು ಇನ್ನೊಬ್ಬರ ಹೃದಯ ಮತ್ತು ಮನಸ್ಸು ನಿಮ್ಮೊಂದಿಗೆ ಸದಾ ಇದ್ದಂತೆ. ಬದುಕಿನ ಬೆಲೆ ಏನೆಂಬುದು ಪುಸ್ತಕಗಳಿಂದ ತಿಳಿಯುತ್ತದೆ. 9ನೆಯ ಶತಮಾನದ ಪ್ರಸಿದ್ದ ರಷ್ಯನ್ ಲೇಖಕ ಆಂಥೋನ್ ಚೆಕೊವ್ (Anton Chekhov) ಬರೆದ ಒಂದು ಮನಮಿಡಿಯುವ ಕಥೆ ಹೀಗಿದೆ:
ಒಬ್ಬ ಬ್ಯಾಂಕ್ ಉದ್ದಿಮೆದಾರ ಒಂದು ಔತಣಕೂಟವನ್ನು ಏರ್ಪಡಿಸಿದ್ದ. ಅನೇಕ ಪ್ರತಿಷ್ಠಿತ ವ್ಯಕ್ತಿಗಳು, ಚಿಂತಕರು ಮತ್ತು ಪತ್ರಿಕಾಕರ್ತರೂ ಅದರಲ್ಲಿ ಭಾಗವಹಿಸಿದ್ದರು. ಭೋಜನಕ್ಕೆ ಕುಳಿತಾಗ ಅವರ ಮಧ್ಯೆ ಅನೇಕ ವಿಚಾರಗಳ ಬಗ್ಗೆ ಸರಸ ಸಂಭಾಷಣೆ ನಡೆಯತೊಡಗಿತು. ಒಂದು ಹಂತದಲ್ಲಿ ಅವರ ಮಾತು ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯತ್ತ ತಿರುಗಿತು. ಅನೇಕ ಅತಿಥಿಗಳು ಅಪರಾಧಿಗೆ ಮರಣದಂಡನೆ ವಿಧಿಸುವುದು ಬಹಳ ಅಮಾನವೀಯ ಶಿಕ್ಷೆ, ಅದಕ್ಕಿಂತ ಜೀವಾವಧಿ ಶಿಕ್ಷೆಯೇ ಸರಿ ಎಂದು ಬಲವಾಗಿ ವಾದಿಸತೊಡಗಿದರು. ಆತಿಥೇಯನಾದ ಬ್ಯಾಂಕ್ ಉದ್ದಿಮೆದಾರ ಅವರ ವಾದವನ್ನು ಒಪ್ಪದೆ ಜೀವಾವಧಿ ಶಿಕ್ಷೆಯಲ್ಲಿ ಅಪರಾಧಿ ಬದುಕಿರುವವರೆಗೂ ನೋವು-ಸಂಕಟಗಳನ್ನು ಅನುಭವಿಸಬೇಕಾಗುತ್ತದೆ, ಮರಣದಂಡನೆಯಾದರೆ ಕ್ಷಣಾರ್ಧದಲ್ಲಿ ಸಾಯುವುದರಿಂದ ಜೀವನದುದ್ದಕ್ಕೂ ನರಳಬೇಕಾಗಿಲ್ಲ. ಆದ್ದರಿಂದ ಜೀವಾವಧಿ ಶಿಕ್ಷೆಗಿಂತ ಮರಣದಂಡನೆಯೇ ಸರಿ ಎಂದು ಸಮರ್ಥಿಸಿಕೊಳ್ಳತೊಡಗಿದ. ಇದನ್ನು ಕೇಳಿದ 25 ವರ್ಷದ ಒಬ್ಬ ಯುವ ವಕೀಲ ಎರಡೂ ರೀತಿಯ ಶಿಕ್ಷೆ ಅಮಾನವೀಯ. ದೇಶವೇನೂ ದೇವರಲ್ಲ. ಒಂದು ಜೀವವನ್ನು ಸೃಷ್ಟಿಮಾಡಲು ಸಾಧ್ಯವಾಗದ ದೇಶಕ್ಕೆ ಜೀವಹತ್ಯೆಯನ್ನು ಮಾಡಲು ಹಕ್ಕಿಲ್ಲ. ತನಗೇನಾದರೂ ಅವೆರಡು ಶಿಕ್ಷೆಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವ ಪ್ರಸಂಗ ಬಂದರೆ ಜೀವಾವಧಿ ಶಿಕ್ಷೆಯನ್ನೇ ತಾನು ಆಯ್ಕೆಮಾಡಿಕೊಳ್ಳುವುದಾಗಿ ಪ್ರಬಲವಾಗಿ ಪ್ರತಿಪಾದಿಸಿದ. ಇದರಿಂದ ಕೆರಳಿದ ಬ್ಯಾಂಕ್ ಉದ್ದಿಮೆದಾರ “ಹಾಗಾದರೆ ನಾನು ನಿಮಗೆ ಎರಡು ಮಿಲಿಯನ್ ರೂಬಲ್ ಹಣವನ್ನು ಕೊಡುತ್ತೇನೆ, ನೀವು ಐದು ವರ್ಷಗಳ ಕಾಲ ಒಬ್ಬಂಟಿಗರಾಗಿ ಒಂದು ಕೋಣೆಯಲ್ಲಿ ಇರಬಲ್ಲಿರಾ?” ಎಂದು ಸವಾಲು ಹಾಕಿದ. ಆ ಸವಾಲನ್ನು ಸ್ವೀಕರಿಸಿದ ಯುವ ವಕೀಲ ನೀವು ನಿಜವಾಗಿಯೂ ಎರಡು ಮಿಲಿಯನ್ ಹಣ ಕೊಡುವುದಾದರೆ ಐದು ವರ್ಷವೇಕೆ 15 ವರ್ಷ ನನ್ನ ಸ್ವಾತಂತ್ರ್ಯವನ್ನು ಪಣವಿಟ್ಟು ಏಕಾಂಗಿಯಾಗಿ ಕೋಣೆಯಲ್ಲಿ ಇರಬಲ್ಲೆ ಎಂದು ಪ್ರತಿಸವಾಲು ಹಾಕಿದ. ಚರ್ಚೆ ಗಂಭೀರ ಸ್ವರೂಪ ಪಡೆದು ಎಲ್ಲ ಅತಿಥಿಗಳ ಎದುರಿನಲ್ಲಿ ಉಭಯತರ ಮಧ್ಯೆ ಲಿಖಿತ ಒಪ್ಪಂದವಾಯಿತು. ಆರಂಭದ ದಿನದ ಮಧ್ಯರಾತ್ರಿಯಿಂದ ಕೊನೆಯ ದಿನದ ಮಧ್ಯರಾತ್ರಿಯವರೆಗೆ 15 ವರ್ಷಗಳ ಅವಧಿಯಲ್ಲಿ ಎರಡು ನಿಮಿಷ ಕೊರೆತೆಯಾದರೂ ಒಪ್ಪಂದ ಮುರಿದಂತೆ ಎಂದು ಎಚ್ಚರಿಸಲಾಯಿತು.
ಯುವವಕೀಲ ಏಕಾಂಗಿಯಾಗಿ ವಾಸವಾಗಿರಲು ಬ್ಯಾಂಕ್ ಉದ್ಯಾನವನದಲ್ಲಿದ್ದ ಕೋಣೆಯೊಂದನ್ನು ಆಯ್ಕೆಮಾಡಿಕೊಂಡ. ಹೊರಗಿನಿಂದ ಬೀಗ ಹಾಕಿ ಸೀಲ್ ಮಾಡಲಾಯಿತು. ಯಾರೊಂದಿಗೂ ಮಾತನಾಡುವಂತಿರಲಿಲ್ಲ. ಅವನು ತನಗೆ ಬೇಕೆನಿಸಿದ ಊಟೋಪಚಾರ, ಸಂಗೀತ ಮತ್ತು ಮದ್ಯವನ್ನು ಚೀಟಿಯಲ್ಲಿ ಬರೆದು ಕಿಟಕಿಯ ಹೊರಗೆ ಎಸೆದರೆ ಅದೇ ಕಿಟಕಿಯ ಮುಖಾಂತರ ಅವೆಲ್ಲವನ್ನೂ ಯಥೇಚ್ಛವಾಗಿ ಪೂರೈಸಲಾಗುತ್ತಿತ್ತು. ಆರಂಭದ ವರ್ಷಗಳಲ್ಲಿ ಯುವ ವಕೀಲನಿಗೆ ಏಕಾಂಗಿತನ ಮತ್ತು ಖಿನ್ನತೆ ಕಾಡತೊಡಗಿದವು. ಬೇಸರ ಕಳೆಯಲು ಸಂಗೀತವಾದ್ಯಗಳನ್ನು ಜೋರಾಗಿ ಬಾರಿಸತೊಡಗಿದ. ತಿನ್ನುವುದು, ಕುಡಿಯುವುದು, ಮಲಗುವುದು ಅವನ ನಿತ್ಯದ ದಿನಚರಿಯಾಗಿತ್ತು. ರಾತ್ರಿ ಹೊತ್ತು ಇದ್ದಕ್ಕಿದ್ದಂತೆ ಎದ್ದು ಕುಳಿತುಕೊಳ್ಳುವುದು, ಆಕಳಿಸುವುದು, ಒಬ್ಬನೇ ಸಿಟ್ಟಿನಿಂದ ಮಾತನಾಡಿಕೊಳ್ಳುವುದು, ಕಾಗದದ ಮೇಲೆ ಏನನ್ನಾದರೂ ಬರೆದು ಹರಿದು ಹಾಕುವುದು, ಅಳುವುದು ಹೀಗೆ ಸಾಗಿತ್ತು ಅವನ ಒಂಟಿ ಜೀವನ.
ಕ್ರಮೇಣ ಹಾಗೆ ಮಾದುವುದನ್ನು ಬಿಟ್ಟು ಪುಸ್ತಕಗಳನ್ನು ತರಿಸಿಕೊಂಡು ಓದತೊಡಗಿದ. ಆರಂಭದಲ್ಲಿ ಕಥೆ-ಕಾದಂಬರಿಗಳನ್ನು ಓದಲು ಶುರುಮಾಡಿದವನು ನಂತರ ವಿಭಿನ್ನ ಭಾಷೆಗಳನ್ನು ಕಲಿತು ಧರ್ಮ, ಸಾಹಿತ್ಯ, ಇತಿಹಾಸಕ್ಕೆ ಸಂಬಂಧಿಸಿದ ಉದ್ಗ್ರಂಥಗಳನ್ನು ಹೆಚ್ಚು ಹೆಚ್ಚು ತರಿಸಿಕೊಂಡು ಓದತೊಡಗಿದ. ಒಂದೇ ವರ್ಷದಲ್ಲಿ ನೂರಾರು ಪುಸ್ತಕಗಳನ್ನು ಓದಿ ಮುಗಿಸಿದರೂ ಅವನ ಓದಿನ ದಾಹ ಮುಗಿಯಲಿಲ್ಲ. ಒಂದು ದಿನ ಅವನು ಬ್ಯಾಂಕ್ ಉದ್ದಿಮೆದಾರನಿಗೆ ಆರು ಭಾಷೆಗಳಲ್ಲಿ ಒಂದು ಸುದೀರ್ಘ ಪತ್ರ ಬರೆದ. ವಿಭಿನ್ನ ದೇಶ-ಕಾಲದ ಪ್ರತಿಭಾನ್ವಿತರು ವಿಭಿನ್ನ ಭಾಷೆಗಳನ್ನು ಮಾತನಾಡಿದರೂ ಅವರ ಮಾತುಗಳಲ್ಲಿ ಒಂದೇ ತೆರನಾದ ವಿಚಾರ ಜ್ಯೋತಿ ಪ್ರಜ್ವಲಿಸುತ್ತಿದೆಯೆಂದು, ಅವರ ವಿಚಾರಗಳನ್ನು ತಿಳಿದು ತನಗೆ ಸ್ವರ್ಗವೇ ಸಿಕ್ಕಷ್ಟು ಆನಂದವಾಗಿದೆಯೆಂದು ತನ್ನ ಸಂತೋಷವನ್ನು ಹಂಚಿಕೊಂಡಿದ್ದ. ತನ್ನ ಪತ್ರವನ್ನು ಭಾಷಾ ಪರಿಣಿತರಿಗೆ ತೋರಿಸಿ ಅದರಲ್ಲಿ ಒಂದೂ ತಪ್ಪಿಲ್ಲದಿದ್ದರೆ ತನ್ನ ಪ್ರಯತ್ನ ಸಾರ್ಥಕವಾಗಿದೆಯೆಂದು ತಿಳಿದುಕೊಳ್ಳಲು ಅದರ ಗುರುತಿಗಾಗಿ ಉದ್ಯಾನವನದ ಗಾಳಿಯಲ್ಲಿ ಪಿಸ್ತೂಲಿನಿಂದ ಒಂದು ಗುಂಡು ಹಾರಿಸಲು ಕೇಳಿಕೊಂಡ. ಅವನ ಅಪೇಕ್ಷೆಯಂತೆ ವಿಭಿನ್ನ ಭಾಷಾ ಪರಿಣಿತರಿಗೆ ತೋರಿಸಿದಾಗ ಅವನ ಪತ್ರದಲ್ಲಿ ಒಂದೂ ತಪ್ಪು ಕಾಣಸಿಗಲಿಲ್ಲ. ಅವನ ಕೋರಿಕೆಯಂತೆ ಉದ್ಯಾನವನದಲ್ಲಿ ಗುಂಡು ಹಾರಿಸಲಾಯಿತು.
15 ವರ್ಷ ಮುಗಿಯುತ್ತಾ ಬಂತು. ಇನ್ನೊಂದು ದಿನ ಬಾಕಿ ಇತ್ತು. ಬ್ಯಾಂಕ್ ಉದ್ದಿಮೆದಾರ ಆ ವೇಳೆಗೆ ನಷ್ಟಕ್ಕೆ ಒಳಗಾಗಿದ್ದ. ಅಷ್ಟೊಂದು ಹಣ ಕೊಟ್ಟರೆ ತಾನು ಹಾಳಾಗುತ್ತೇನೆಂಬ ಚಿಂತೆ ಆವರಿಸಿತು. ವಕೀಲ ಕೋಟ್ಯಾಧೀಶನಾಗಿ ತಾನು ಭಿಕ್ಷುಕನಾಗಬೇಕಾಗುತ್ತದಲ್ಲಾ ಎಂದು ಪರಿತಪಿಸಿದ. ಹೇಗಾದರೂ ಮಾಡಿ ಅವನನ್ನು ಕೊಲ್ಲಬೇಕೆಂದು ಸಂಚು ಮಾಡಿದ. ಕಳ್ಳತನದಲ್ಲಿ ಬಾಗಿಲ ಸಂದಿಯಿಂದ ಇಣುಕಿ ನೋಡಿದ. 40 ವರ್ಷದ ಯುವವಕೀಲ ಅಸ್ಥಿಪಂಜರದಂತಾಗಿದ್ದ. ಮಿಲಿಯನ್ ಹಣವನ್ನು ಪಡೆಯುವ ಆಸೆಯಿಂದ ಹೇಗಾಗಿದ್ದಾನೆ ನೋಡು ಎಂದು ಮರುಕಪಟ್ಟ. ಮುಖ ಪೇಲವವಾಗಿತ್ತು. ಕಣ್ಣುಗಳು ಗುಳಿಬಿದ್ದಿದ್ದವು. ಗಲ್ಲ ಸುಕ್ಕುಗಟ್ಟಿತ್ತು. ತಲೆಯ ಗುಂಗುರುಗೂದಲು ಬೆಳ್ಳಗಾಗಿ ಭುಜದ ಮೇಲೆ ಇಳಿಬಿದ್ದಿತ್ತು. ಟೇಬಲ್ ಮೇಲೆ ಪುಸ್ತಕಗಳ ರಾಶಿ ಹರಡಿಬಿದ್ದಿತ್ತು. ಮುಂಬತ್ತಿಯ ಬೆಳಕಿನಲ್ಲಿ ಯಾವುದೋ ಪುಸ್ತಕವನ್ನು ಗಂಭೀರವಾಗಿ ಓದುತ್ತಾ ಏನನ್ನೋ ಬರೆಯುತ್ತಿದ್ದ. ಮಧ್ಯರಾತ್ರಿಗೆ ಒಂದೆರಡು ಗಂಟೆ ಮಾತ್ರ ಬಾಕಿ ಇತ್ತು. ಬ್ಯಾಂಕ್ ಉದ್ದಿಮೆದಾರ ಮನೆಗೆ ಹೋಗಿ ಕೊಠಡಿಯ ಬೀಗದ ಕೈ ತೆಗೆದುಕೊಂಡು ಬಂದ. ಉದ್ಯಾನವನ ಕಗ್ಗತ್ತಲಿನಿಂದ ಆವರಿಸಿತ್ತು. ಕೊರೆಯುವ ಚಳಿ. ಮಳೆ ಬೇರೆ ಸುರಿಯುತ್ತಿತ್ತು. ಅವನನ್ನು ರಹಸ್ಯವಾಗಿ ಕೊಂದು ಮುಗಿಸಲು ಹವಣಿಸಿ ಸದ್ದಿಲ್ಲದೆ ಬೀಗ ತೆಗೆದು ಬಾಗಿಲು ತೆರೆದ. ಆಶ್ಚಕರ್ಯದ ಸಂಗತಿಯೆಂದರೆ ಯುವ ವಕೀಲ ಅಲ್ಲಿರಲಿಲ್ಲ! ಕಿಟಕಿಯ ಮುಖಾಂತರ ಹಾರಿ ಹೋಗಿದ್ದನ್ನು ನೋಡಿದ್ದಾಗಿ ಕಾವಲುಗಾರ ಹೇಳಿದ. ಟೇಬಲ್ ಮೇಲೆ ಇದ್ದ ಒಂದು ಕಾಗದ ಕಣ್ಣಿಗೆ ಬಿತ್ತು. ಅದರಲ್ಲಿ ಯುವ ವಕೀಲ ಹೀಗೆ ಬರೆದಿದ್ದ: “ಈ ರಾತ್ರಿ 12 ಗಂಟೆಗೆ ನನ್ನ ಸ್ವಾತಂತ್ರ್ಯವನ್ನು ಮತ್ತೆ ಪಡೆಯುತ್ತೇನೆ. ನೀನೊಬ್ಬ ಹುಚ್ಚ…. ತಪ್ಪು ದಾರಿಯಲ್ಲಿ ನಡೆಯುತ್ತಿದ್ದೀಯಾ. ಅಸತ್ಯವನ್ನೇ ಸತ್ಯವೆಂದು, ಕುರೂಪವನ್ನೇ ಸೌಂದರ್ಯವೆಂದು ಭ್ರಮಿಸಿದ್ದೀಯಾ. ಧನಮದದಿಂದ ಬೀಗುತ್ತಿರುವ ನಿನ್ನನ್ನು ಇಂದಲ್ಲ ನಾಳೆ ಸಾವು ಕೊನೆಗಾಣಿಸದೆ ಬಿಡುವುದಿಲ್ಲ. ನೀನು ಕೊಡಬೇಕಾದ ಎರಡು ಮಿಲಿಯನ್ ಹಣವನ್ನು ನೀನೇ ಇಟ್ಟುಕೋ, ನನಗೆ ಬೇಕಿಲ್ಲ. ನೀನು ಒದಗಿಸಿದ ಪುಸ್ತಕಗಳಿಂದ ನಾನು ಜಾಣನಾಗಿದ್ದೇನೆ. ಜೀವನದ ಮೌಲ್ಯವನ್ನು ಕಂಡುಕೊಂಡಿದ್ದೇನೆ! ಧನ್ಯವಾದಗಳು!”
ಪತ್ರವನ್ನು ಓದಿದ ಬ್ಯಾಂಕ್ ಉದ್ದಿಮೆದಾರನ ಕಣ್ಣಲ್ಲಿ ಅಶ್ರುಧಾರೆ ಹರಿಯತೊಡಗಿತು. ಮನೆಗೆ ಹೋಗಿ ಯುವ ವಕೀಲನ ಪತ್ರ ಯಾರಿಗೂ ಸಿಗದಂತೆ ತಿಜೋರಿಯಲ್ಲಿ ಭದ್ರವಾಗಿ ಇರಿಸಿದ. ಹಾಸಿಗೆಯ ಮೇಲೆ ಬಿದ್ದು ಹೊರಳಾಡತೊಡಗಿದ. ನಿದ್ರೆ ಬರಲಿಲ್ಲ.
ಸಹೃದಯ ಓದುಗರೇ! ಈ ಪಣದಲ್ಲಿ ಸೋತವನು ಯಾರು? ಗೆದ್ದವನು ಯಾರು? ಬ್ಯಾಂಕ್ ಉದ್ದಿಮೆದಾರ ಗೆದ್ದರೂ ಸೋತ, ಯುವ ವಕೀಲ ಸೋತರೂ ಗೆದ್ದ ಎನಿಸುವುದಿಲ್ಲವೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 17.2.2010.