ಎದೆ ತುಂಬಿ ಹಾಡಿದೆನು....
ಮಾರ್ಚ್ ತಿಂಗಳ ಬಿಸಿಲ ಬೇಗೆ ಹೊರಗೆ ಏರುತ್ತಿತ್ತು. ನಿಯಮಿತ ವೇಳೆಯೊಳಗೆ ಮಾಡಲೇಬೇಕಾದ ಮಠದ ನೂರಾರು ಶಾಲಾಕಾಲೇಜುಗಳ ಜವಾಬ್ದಾರಿ ಕೆಲಸಗಳು ಮನಸ್ಸಿನೊಳಗೆ ಮತ್ತಷ್ಟೂ ತಾಪವನ್ನು ಹೆಚ್ಚಿಸಿದ್ದವು. ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ಧೀರರೂ ಅಲ್ಲ, ವೀರರೂ ಅಲ್ಲ ಎಂಬ ಅಲ್ಲಮ ಪ್ರಭುದೇವರ ಎಚ್ಚರಿಕೆಯ ಮಾತುಗಳ ಹಿನ್ನೆಲೆಯಲ್ಲಿ ವಹಿಸಿಕೊಂಡ ಜವಾಬ್ದಾರಿ ಕೆಲಸಗಳನ್ನು ಅವುಗಳ ಆದ್ಯತೆಯ ಮೇಲೆ ನಿರ್ವಹಿಸುವುದು ನಮಗೆ ಅನಿವಾರ್ಯ ಕರ್ತವ್ಯವಾಗಿತ್ತು. ಆ ದಿನ ಮಧ್ಯಾಹ್ನ ಅನಿರೀಕ್ಷಿತವಾಗಿ ಡಾ|| ಹೆಚ್.ಎಸ್. ವೆಂಕಟೇಶ ಮೂರ್ತಿಯವರು ಮಾತನಾಡುತ್ತಾರೆಂದು ಡಾ|| ಲೋಕೇಶ್ ಅಗಸನಕಟ್ಟೆ ಫೋನ್ ಕೊಟ್ಟಾಗ ಅದೊಂದು ಸೌಜನ್ಯದ ಕರೆಯಾಗಿದ್ದರೂ ನಂತರದ ಅವರ ಮಾತುಗಳು ಲಾಯರ್ ನೋಟೀಸಿನಂತಿದ್ದವು! ಇದೇ ಹೋಳಿ ಹುಣ್ಣಿಮೆಯಂದು ಸಿರಿಗೆರೆಯಲ್ಲಿ ಏರ್ಪಡಿಸಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಸನ್ಮಾನ ಮತ್ತು ಬೆಳದಿಂಗಳ ಕವಿಗೋಷ್ಠಿ ಕಾವ್ಯಪೂರ್ಣಿಮೆಯ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ “ಜಿ.ಎಸ್.ಎಸ್ : ಕಾವ್ಯಾಂತರಂಗ” ಎಂಬ ಗ್ರಂಥಕ್ಕೆ ನಮ್ಮಿಂದ ಲೇಖನ ಬಂದಿಲ್ಲವೆಂದೂ, ಪುಸ್ತಕವನ್ನು ಬೇಗನೆ ಮುದ್ರಣಕ್ಕೆ ಕೊಡಬೇಕಾಗಿರುವುದರಿಂದ ನಾಳೆಯೊಳಗೆ ಬರೆದು ಕಳುಹಿಸಿಕೊಡದೇ ಇದ್ದರೆ ಪುಸ್ತಕದಲ್ಲಿ ಸೇರ್ಪಡೆ ಮಾಡಲು ಆಗುವುದಿಲ್ಲವೆಂದು ಸಂಪಾದಕರಾದ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ನಮಗೆ ಸಿಡಿಲು ಬಡಿದಂತಾಯಿತು. ಮಾತನಾಡಿ ಮೊಬೈಲ್ ಫೋನ್ ಕೆಳಗೆ ಇಡುತ್ತಿದ್ದಂತೆಯೇ ಮನಸ್ಸಿನ ಬೇಗುದಿಯ ಪ್ರತೀಕವೋ ಎಂಬಂತೆ ಅಪರೂಪಕ್ಕೆ ಆ ದಿನ ಹವಾಮಾನದ ವೈಪರೀತ್ಯದಿಂದಾಗಿ ದಿಢೀರನೆ ಆಗಸದಲ್ಲಿ ಗುಡುಗು ಮಿಂಚು ಆರಂಭವಾಯಿತು. ಮಾರ್ಚ್ ತಿಂಗಳ ಬೇಸಿಗೆಯಲ್ಲಿ ನಂಬಲಾರದ ಘಟನೆ! ಝಟಿಲ್ ಎಂದು ಬೇಸಿಗೆಯ ಕಡುಬಿಸಿಲಿಗೇ ಸಿಡಿಲು ಬಡಿದು ಅದರ ಹುಟ್ಟಡಗಿಸಿತ್ತು. ರಾತ್ರಿಯೆಲ್ಲಾ ಧೋ ಎಂದು ಮಳೆ ಸುರಿದು ಬೆಳಗಾಗುವುದರೊಳಗೆ ಸುಡುವ ಕಾವಲಿಯಂತಿದ್ದ ಭೂಮಿ ತಣ್ಣಗಾಗಿತು. ಮನಸ್ಸಿಗೆ ಆಹ್ಲಾದಕರ ವಾತಾವರಣ ಉಂಟಾಗಿ ಈ ಲೇಖನಕ್ಕೆ ಇಂಬುಗೊಟ್ಟಿತು!
ಯಾರದಾದರೂ ಬುದ್ಧಿಯನ್ನು ಹಾಳು ಮಾಡಬೇಕೆಂದಿದ್ದರೆ ಅವರನ್ನು ಯಾವುದಾದರೂ ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನಾಗಿ ಮಾಡಬೇಕೆಂದು ರಾಷ್ಟ್ರಕವಿ ಕುವೆಂಪು ಹೇಳುತ್ತಿದ್ದರಂತೆ. ಜ್ಞಾನಪೀಠ ಪ್ರಶಸ್ತಿ ವಿಜೇತರೂ, ಮನುಜಕುಲಕ್ಕೆ ವಿಶ್ವಪಥವನ್ನು ತೋರಿಸಿದವರೂ ಆದ ಅವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ ತಮ್ಮ ಸ್ವಾನುಭವದಿಂದ ಈ ಮಾತನ್ನು ಹೇಳಿರುವಂತೆ ತೋರುತ್ತದೆ. ಅವರ ಈ ಮಾತಿನ ಎಳೆಯನ್ನು ಮುಂದುವರಿಸಿ ಹೇಳಬಹುದಾದರೆ ಬುದ್ದಿವಂತರಾದವರನ್ನು ದೊಡ್ಡ ದೊಡ್ಡ ಮಠಗಳ ಸ್ವಾಮಿಗಳನ್ನಾಗಿ ಮಾಡುವುದು ಒಳ್ಳೆಯದು. ಬೆಳಗಿನಿಂದ ಸಂಜೆಯವರೆಗೆ ಶಿಷ್ಯರಿಂದ ಬುದ್ದೀ, ಬುದ್ದೀ ಎನಿಸಿಕೊಂಡೇ ಅವರು ತಮ್ಮ ಬುದ್ದಿಯನ್ನು ನಿಃಸಂಶಯವಾಗಿ ಕಳೆದುಕೊಳ್ಳುತ್ತಾರೆ. ಅದಕ್ಕೇ ಏನೋ ಗುರುಗಳೊಬ್ಬರು ಶಿಷ್ಯರ ಮನೆಗೆ ಹೋದಾಗ ಜಾಣ ಹುಡುಗನನ್ನು ನೋಡಿ ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಲು ಬಯಸಿ ಆ ಹುಡುಗನ ತಂದೆಯನ್ನು ಕೇಳಿದರಂತೆ. ಅದಕ್ಕೆ “ಬುದ್ದೀ, ಇವನು ಓದುವುದರಲ್ಲಿ ತುಂಬಾ ಜಾಣನಿದ್ದಾನೆ, ಓದಲಿ ಬಿಡಿ, ಇವನನ್ನೇಕೆ ಹಾಳುಮಾಡುತ್ತೀರಿ? ಇವನ ತಮ್ಮನೊಬ್ಬನಿದ್ದಾನೆ, ಹೇಳಿ ಮಾಡಿಸಿದ ದಡ್ಡ ಮತ್ತು ಉಡಾಳ. ಅವನನ್ನು ಬೇಕಾದರೆ ಮಠಕ್ಕೆ ಮರಿ ಮಾಡಿಕೊಳ್ಳಿ ಎಂದು ಶಿಷ್ಯ ಹೇಳಿದನಂತೆ! ಇದರಿಂದ ನಿಮಗೆ ನಗು ಬರಬಹುದು. ಆದರೆ ಪಾಪ! ಆ ಶಿಷ್ಯನಿಗೆ ಗುರುಗಳ ಮನಸ್ಸನ್ನು ನೋಯಿಸಬೇಕೆಂಬ ದುರುದ್ದೇಶವಿರಲಿಲ್ಲ. ಮುಗ್ಧತೆ ಇತ್ತು. ತನ್ನ ಉಡಾಳ ಮಗನ ಬಗ್ಗೆ ಸಿಟ್ಟು ಇತ್ತು. ಮಠಕ್ಕೆ ಕಳುಹಿಸಿದರೆ ಗುರುಗಳ ಹತ್ತಿರ ಇದ್ದು ಸುಧಾರಿಸಿ ಅವನೂ ಜಾಣನಾಗಬಹುದು ಎಂಬ ಸದಾಶಯವಿತ್ತು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಪ್ರಕಾರ ಈ ಲೋಕದಲ್ಲಿ ನಾಲ್ಕು ತರನಾದ ಜನರಿದ್ದಾರೆ; 1.ಆರ್ತ,2.ಜಿಜ್ಞಾಸು ಮತ್ತು 3.ಅರ್ಥಾರ್ಥೀ ಮತ್ತು 4. ಜ್ಞಾನೀ
ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ
-(ಭಗವದ್ಗೀತೆ 7.16)
ಶಂಕರಾಚಾರ್ಯರ ಪ್ರಕಾರ ಇಲ್ಲಿ ಆರ್ತ ಎಂದರೆ ರೋಗರುಜಿನಗಳಿಂದ ಬಳಲುತ್ತಿರುವ ವ್ಯಕ್ತಿ ಜಿಜ್ಞಾಸು ಎಂದರೆ ದೇವರ ಜ್ಞಾನವನ್ನು ಪಡೆಯಲು ಬಯಸುವ ವ್ಯಕ್ತಿ. ಅರ್ಥಾರ್ಥೀ ಎಂದರೆ ಹಣವನ್ನು ಗಳಿಸಲು ಹಾತೊರೆಯುವ ವ್ಯಕ್ತಿ. ಕೊನೆಯದಾಗಿ ಜ್ಞಾನೀ ಎಂದರೆ ದೇವರ ಸಾಕ್ಷತ್ಕಾರವನ್ನು ಪಡೆದಿರುವ ವ್ಯಕ್ತಿ. ಭಗವದ್ಗೀತೆಯ ಈ ಶ್ಲೋಕಕ್ಕೆ ಆಧುನಿಕ ಭಾಷ್ಯವನ್ನೇನಾದರು ಬರೆದರೆ ಇಂದು ಮಠದ ಗುರುಗಳ ಹತ್ತಿರ ಬರುವ ನಾಲ್ಕು ತೆರನಾದ ಶಿಷ್ಯರ ಸ್ಯಾಂಪಲ್ ಹೀಗಿದೆ: ಪಿತ್ರಾರ್ಜಿತ ಆಸ್ತಿಯಲ್ಲಿ ಸರಿಯಾಗಿ ಪಾಲು ಕೊಟ್ಟಿಲ್ಲವೆಂದೋ ಅಥವಾ ಜಮೀನು ಒತ್ತುವರಿಯಾಗಿದೆಯೆಂದೋ ಹೊಲದಲ್ಲಿ ಹೊಡೆದಾಡಿ ಕೈಕಾಲುಮುರಿದುಕೊಂಡು ಬರುವ ಅಣ್ಣತಮ್ಮಂದಿರು (ಆರ್ತ), ಚುನಾವಣೆಯಲ್ಲಿ ಧಾರಾಳವಾಗಿ ಖರ್ಚುಮಾಡಲು ಸಿದ್ಧರಿದ್ದು ಸಮಾಜ ಸೇವೆ ಮಾಡಲು ಬೇಕಾಗಿರುವ ಟಿಕೆಟ್ ಬಯಸಿ ಬರುವ ರಾಜಕಾರಿಣಿಗಳು (ಟಿಕೆಟ್ ಜಿಜ್ಞಾಸು), ವಯಸ್ಸಾದ ಮಗಳ ಕೈಹಿಡಿಯಲು ಮುಂದೆ ಬಂದ ಧೀರೋದಾತ್ತ ಅಳಿಯನಿಗೆ ಮಾತುಕತೆಯ ಪ್ರಕಾರ ಕೊಡಬೇಕಾದ ನೌಕರಿಗಾಗಿ ಬರುವ ಹೆಣ್ಣುಹೆತ್ತವರು (ಅರ್ಥಾರ್ಥಿ). ಮುಖ್ಯಮಂತ್ರಿಗಳಿಗೆ ಹೇಳಿ ಒಳ್ಳೆಯ ಜಾಗಕ್ಕೆ ವರ್ಗ ಮಾಡಿಸಿಕೊಡಬೇಕೇಂದು ಬಯಸಿ ಬರುವ ಜಾಣ ಅಧಿಕಾರಿಗಳು (ಜ್ಞಾನಿ). ಹೀಗಾಗಿ ಇಂದು ಬಹುತೇಕ ಮಠಗಳು ಆಧ್ಯಾತ್ಮಿಕ ಕೇಂದ್ರಗಳಾಗುವುದಕ್ಕಿಂತ ಹೆಚ್ಚಾಗಿ ಶಿಷ್ಯರ ಇಂತಹ ಲೌಕಿಕ ಆಶೋತ್ತರಗಳನ್ನು ಈಡೇರಿಸುವ ತಾಣಗಳಾಗಿವೆ. ನಮ್ಮ ಅನುಭವದಲ್ಲಿ ಯಾರಾದರೂ ಕೈಯಲ್ಲಿ ಅತಿ ದೊಡ್ಡ ಹಾರ ಹಿಡಿದುಕೊಂಡು ಬಂದರೆಂದರೆ ಕೊರಳಿಗೆ ಉರುಲು ಬಿತ್ತೆಂದೇ ಅರ್ಥ! ಆ ಅಸಾಮಾನ್ಯ ಹಾರದ ಹಿಂದೆ ಅಸಾಮಾನ್ಯ ಕೆಲಸವನ್ನು ಸಾಧಿಸಿಕೊಳ್ಳುವ ಹುನ್ನಾರವೇ ಇರುತ್ತದೆ. ಇದನ್ನು ಕಂಡೇ ಬಸವಣ್ಣನವರು ಹೇಳಿದ್ದು: “ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೇ?” ಹಾಗೆಂದು ಶಿಷ್ಯರ ಲೌಕಿಕ ಜೀವನದ ಸುಧಾರಣೆಯಲ್ಲಿ ಮಠಗಳ ಪಾತ್ರ ಏನೂ ಇಲ್ಲ ಎಂದು ಹೇಳಲಾಗದು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ ಎಂದು ಬಸವಣ್ಣನವರು ಹೇಳುವಂತೆ ಶಿಷ್ಯರು ಅಲ್ಲಿ ಸಲ್ಲುವುದಕ್ಕೆ ಬೇಕಾದ ಅರ್ಹತೆಯನ್ನು ಪಡೆಯುವ ಸಲುವಾಗಿ ಇಲ್ಲಿ ಸಲ್ಲುವಂತೆ ಮಾಡುವ ಹೊಣೆಗಾರಿಕೆ ಮಠಗಳ ಮೇಲೆ ಇದ್ದೇ ಇದೆ. ಮಠಃ ಛಾತ್ರಾದಿನಿಲಯಃ (ಅಮರ ಕೋಶ), ಮಠ ಎಂದರೆ ವಿದ್ಯಾರ್ಥಿಗಳು ವಾಸವಾಗಿರುವ ವಿದ್ಯಾಕೇಂದ್ರಗಳೆಂದು ಅಮರಸಿಂಹನು ತನ್ನ ಸಂಸ್ಕೃತ ಶಬ್ದಕೋಶದಲ್ಲಿ ಹೇಳುತ್ತಾನೆ. ಈ ದೃಷ್ಟಿಯಿಂದ ಶಿಕ್ಷಣ ಪ್ರಸಾರದಲ್ಲಿ ಕರ್ನಾಟಕದ ಮಠಪೀಠಗಳ ಕೊಡುಗೆ ಅಪಾರ. ಆದರೆ ಕಳೆದ ಶತಮಾನದ ಮಧ್ಯಭಾಗದಲ್ಲಿ ಮಠಗಳ ಶೈಕ್ಷಣಿಕ ಸೇವಾಕಾರ್ಯಗಳ ಬಗ್ಗೆ ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳು ಕ್ರಮೇಣ ಬದಲಾಗಿ ಶಿಕ್ಷಣ ಸಂಸ್ಥೆಗಳು ವಾಣಿಜ್ಯೋದ್ಯಮಗಳಾಗಿವೆಂದು ಕಟುಟೀಕೆಗಳಿಗೆ ಗುರಿಯಾಗಬೇಕಾಗಿ ಬಂದಿರುವುದು ಒಂದು ವಿಪರ್ಯಾಸ. ಇದರಲ್ಲಿ ಮಠಗಳ ಪಾತ್ರ ಎಷ್ಟು? ಅವುಗಳನ್ನು ಅನುಸರಿಸಲು ಹೋದ ಇತರೆ ಶಿಕ್ಷಣಸಂಸ್ಥೆಗಳ ಪಾತ್ರ ಎಷ್ಟು? ಕಾಲ ಕಾಲಕ್ಕೆ ಶಿಕ್ಷಣದ ನಿಯಮಾವಳಿಗಳನ್ನು ರೂಪಿಸುತ್ತಾ ಬಂದ ಮಂತ್ರಿಮಹೋದಯರ ಪಾತ್ರ ಎಷ್ಟು? ಎಂಬುದು ಒಂದು ಗಂಭೀರ ಅಧ್ಯಯನದ ವಿಷಯವಾಗಬಲ್ಲುದು. ಮಠಗಳು ಧನದಾಸೆಗೆ ಬಿದ್ದು ತಮ್ಮ ಮೂಲ ಧ್ಯೇಯವನ್ನು ಮರೆತವೋ ಅಥವಾ ಬಂದ ಹಣದಿಂದ ಸ್ವಾಮಿಗಳು ಕಟ್ಟಿ ಬೆಳೆಸಿದ ಬೃಹತ್ ವಿದ್ಯಾಸೌಧಗಳು ಮತ್ತು ಅವರು ಓಡಾಡುವ ದೊಡ್ಡ ದೊಡ್ಡ ಕಾರುಗಳು ನೋಡುವವರ ಕಣ್ಣುಗಳನ್ನು ಕೋರೈಸಿದವೋ ಒಟ್ಟಾರೆ ತುತ್ತಿಟ್ಟವರ ಬಟ್ಟು ಕಚ್ಚಿದರು ಎಂಬ ಗಾದೆ ಮಾತಿನಂತಾಗಿದೆ ಇಂದಿನ ಮಠ-ಪೀಠಗಳ ಪರಿಸ್ಥಿತಿ.
ಮಠ-ಮಂದಿರಗಳಲ್ಲಿ ಮೊದಲಿನಿಂದಲೂ ಇರುವ ಸಾಂಪ್ರದಾಯಿಕ ಮಡಿ-ಮೈಲಿಗೆ ಒಂದು ತೆರನಾದರೆ ಇಂದಿನ ವೈಚಾರಿಕ ಯುಗದಲ್ಲಿ ಮಠ-ಮಂದಿರಗಳೊಂದಿಗೆ ಒಡನಾಟವನ್ನು ಇಟ್ಟುಕೊಳ್ಳುವುದೇ ಇನ್ನೊಂದು ತೆರನಾದ ಮೈಲಿಗೆ ಎಂಬಂತೆ ಹೊಸರೀತಿಯ ಮಡಿವಂತಿಕೆ ವಿಚಾರವಂತರೆನಿಸಿಕೊಂಡವರ ಮನಸ್ಸಿನಲ್ಲಿ ಇರುವುದು ಕಂಡುಬರುತ್ತಿದೆ. ಇದು ವೈಚಾರಿಕತೆಯ ಸೋಗಿನಲ್ಲಿ ಅವರು ತಮ್ಮ ಸ್ವಂತಿಕೆಯನ್ನು ಗುರುತಿಸಿಕೊಳ್ಳಬೇಕೆಂಬ Identity ಯ ಹಪಾಹಪಿ. ಇರುವ ಒಂದು ಜಗತ್ತಿಗೆ ಜಾತಿಗೊಬ್ಬರಂತೆ ನೂರಾರು ಜನ ಜಗದ್ಗುರುಗಳು ತಗಲುಹಾಕಿಕೊಂಡಿದ್ದಾರೆ! ಎಂಬ ಮೂದಲಿಕೆಯ ಮಾತೂ ಕೇಳಿಬರುತ್ತಿದೆ. ಇಂತಹ ಉಡಾಫೆಯ ಮಾತುಗಳನ್ನಾಡುವುದೇ ಅವರ ಬದುಕಿನ ಬಂಡವಾಳ. ಹೀಗಾಗಿ ಇದರ ಉಸಾಬರಿಯೇ ಬೇಡವೆಂದು ಜಗದ್ಗುರು, ಸ್ವಾಮಿ ಎಂದು ಕರೆಸಿಕೊಳ್ಳಲು ಇಷ್ಟಪಡದೆ ಕೇವಲ ಶರಣ ಎಂದರೆ ಸಾಕು ಎಂದು ಶರಣಾದ ಸ್ವಾಮಿಗಳೂ ಇದ್ದಾರೆ. ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಎಂಬ ವಚನದ ಹಿನ್ನೆಲೆಯಲ್ಲಿ ಜಗದ್ಗುರುವಿಗಿಂತಲೂ ಶರಣನೆನಿಸಿಕೊಳ್ಳವುದು ಅಷ್ಟು ಸುಲಭವಲ್ಲ ಎಂಬ ತಾತ್ವಿಕ ಅರಿವು ಅವರಿಗೆ ಇದ್ದಂತೆ ತೋರುವುದಿಲ್ಲ. ಈ ಜಗದ್ಗುರು ಪದಕ್ಕೆ ಅಷ್ಟೊಂದು ಮಹತ್ವವನ್ನಾದರೂ ಏಕೆ ಕೊಡಬೇಕು? ಇದನ್ನು ಅನ್ವರ್ಥಕನಾಮವನ್ನಾಗಿಯೇ ಏಕೆ ಗ್ರಹಿಸಬೇಕು? ಶಿಷ್ಯರು ತಮ್ಮ ಗುರುಗಳನ್ನು ಯಾವ ಹೆಸರಿನಿಂದ ಕರೆದರೆ ಏನಂತೆ? ತಾಯಿ ತನ್ನ ಮುದ್ದಿನ ಮಗುವನ್ನು ನನ್ನ ರಾಜ ಎಂದು ಮುತ್ತಿಟ್ಟು ನಟಿಕೆ ಮುರಿದು ದೃಷ್ಟಿ ತೆಗೆದರೆ, ಆಗದವರು ಕಣ್ಣು ಕೆಂಪಗೆ ಮಾಡಿ ಯಾವ ದೇಶದ ರಾಜ? ಎಂದು ಹಲ್ಲು ಕಡಿಯಬೇಕೇಕೆ? ಇದೇ ಧಾಟಿಯಲ್ಲಿ ಯಾವ ಜಗತ್ತಿಗೆ ಇವರು ಜಗದ್ಗುರು ಎಂದು ಟೀಕಿಸುತ್ತಿದ್ದ ಬುದ್ಧಿಜೀವಿಯೊಬ್ಬರನ್ನು ನಮ್ಮ ಲಿಂಗೈಕ್ಯ ಗುರುವರ್ಯರ ಕಾಲದಲ್ಲಿ ಮಠದ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. “ನಾನು ಮಠಗಳನ್ನು, ಸ್ವಾಮಿಗಳನ್ನು ಬೈಯುತ್ತೇನೆ. ಅದನ್ನು ಸಹಿಸಿಕೊಳ್ಳಲು ನಿಮ್ಮ ಸ್ವಾಮಿಗಳು ಸಿದ್ಧರಿದ್ದರೆ ಬರುತ್ತೇನೆ” ಎಂಬ ಧಾರ್ಷ್ಟ್ಯದ ಮಾತುಗಳನ್ನು ಬರೆದಿದ್ದರು. ಅದನ್ನು ಓದಿ ನಮ್ಮ ಲಿಂಗೈಕ್ಯ ಗುರುಗಳು “ನಮ್ಮ ಮಠದ ಕಾರ್ಯಕ್ರಮದಲ್ಲಿ ನಿಮಗೆ ಮಾತನಾಡಲು ಮುಕ್ತ ಅವಕಾಶ ಕಲ್ಪಿಸಿಕೊಡುತ್ತೇವೆ. ಆದರೆ ನಿಮ್ಮ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ಶಿಷ್ಯರು ನಾವು ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಾಗದೆ ನಿಮ್ಮನ್ನು ಒದೆಯುತ್ತಾರೆ. ಅದನ್ನು ಸಹಿಸಿಕೊಳ್ಳಲು ನೀವು ಸಿದ್ಧರಿದ್ದರೆ ಖಂಡಿತಾ ಬನ್ನಿ” ಎಂದು ಮಾರುತ್ತರ ಬರೆಸಿದ್ದರು. ಅದೇನೇ ಇರಲಿ, ವಿಶ್ವವಿಖ್ಯಾತ ಸಮಾಜಶಾಸ್ತ್ರಜ್ಞ ಪ್ರೊಫೆಸರ್ ಹಿರೇಮಲ್ಲೂರು ಈಶ್ವರನ್ ರವರಿಗೆ ಆಕ್ಸ್ ಫರ್ಡನಲ್ಲಿ ಓದಲು ನೆರವಾಗಿದ್ದು ಸಿರಿಗೆರೆಯ ಮಠ, ಅಂತರರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಡಾ|| ಡಿ.ಎಂ. ನಂಜುಂಡಪ್ಪನವರಿಗೆ ಆಶ್ರಯ ನೀಡಿದ್ದು ಸುತ್ತೂರು ಮಠ, ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರಿಗೆ ಅಶನ, ವಸನ ನೀಡಿದ್ದು ಸಿದ್ದಗಂಗಾ ಮಠ, ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದ ನಮ್ಮನ್ನು ಈಶ್ವರನ್ ರವರಂತೆ ದೇಶ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಪ್ರೋತ್ಸಾಹಿಸಿ ನಮ್ಮ ಬೌದ್ಧಿಕ ಬೆಳವಣಿಗೆಗೆ ಕಾರಣರಾದವರು ನಮ್ಮ ಲಿಂಗೈಕ್ಯ ಗುರುವರ್ಯರು. ಬಾಲ್ಯದ ಒಂದು ಚಿಕ್ಕ ಘಟನೆ ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿತು:
ತುಂಗ-ಭದ್ರೆಯರ ಸಂಗಮದ ಸ್ಥಳದಿಂದ ಕೂಗಳತೆಯ ದೂರದಲ್ಲಿ ತುಂಗಾನದಿಯ ದಂಡೆಯ ಮೇಲಿರುವ ಹಳ್ಳಿಯೇ ನಮ್ಮ ಜನ್ಮಸ್ಥಳ. ಹತ್ತಿರದ ಹಳಿಗೆ ನಮ್ಮ ಗುರುವರ್ಯರು ದಯಮಾಡಿಸಿದ್ದರು. ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಲಾಬಾಲಕನಾಗಿ ಒಂದೆರಡು ಭಕ್ತಿಗೀತೆಗಳನ್ನು ಹಾಡಿ ನಮಸ್ಕರಿಸಿದೆವು. ಈ ಹುಡುಗ ಯಾರು ಎಂದು ಗುರುಗಳು ಕೇಳಿದರು. ಊರ ಹಿರಿಯರು ಪರಿಚಯಿಸಿದರು. ನಮಗೆ ಸಂಗೀತದಲ್ಲಿರುವ ಅಭಿರುಚಿಯನ್ನು ವಿವರಿಸಿದರು. ಹತ್ತಿರದ ಪೇಟೆಯಲ್ಲಿ ಬೀದಿಯ ಭಿಕ್ಷುಕನೊಬ್ಬ ನುಡಿಸುತ್ತಿದ್ದ ತೆಂಗಿನ ಚಿಪ್ಪಿನ ತಂತಿ ವಾದ್ಯದಿಂದ ಆಕರ್ಷಿತರಾಗಿ ಮನೆಗೆ ಬಂದೊಡನೆ ಅದರಂತೆ ಮಾಡಲು ಪ್ರಯತ್ನಿಸಿದ್ದನ್ನು ಕೇಳಿ ಗುರುಗಳು ಮುಗುಳ್ನಕ್ಕರು. ನಮ್ಮನ್ನು ಹತ್ತಿರ ಕರೆದು ಮೈದಡವಿ ತಮ್ಮ ಮಠದಲ್ಲಿರುವ ಪಿಟೀಲನ್ನು ಕಳುಹಿಸಿಕೊಡುವುದಾಗಿ ಹೇಳಿದರು. ಸಿರಿಗೆರೆಗೆ ಹೋದ ಮಾರನೆಯ ದಿನವೇ ಸುಂದರವಾದ ಪಿಟೀಲೊಂದು ನಮ್ಮೂರಿಗೆ ಬರುವ ಬಸ್ಸಿನಲ್ಲಿ ಬಂದು ನಮ್ಮ ಕೈಸೇರಿತು. ವರ್ಷ ಒಪ್ಪತ್ತು ಅಭ್ಯಾಸ ಮಾಡಿಕೊಂಡು ಮಠಕ್ಕೆ ಹೋಗಿ ಶ್ರೀ ಗುರುಗಳ ದರ್ಶನ ಪಡೆದು ಪಿಟೀಲು ನುಡಿಸಿದಾಗ ಗುರುಗಳ ಆನಂದಕ್ಕೆ ಪಾರವೇ ಇಲ್ಲ. ಭೇಷ್ ಎಂದು ಉದ್ಗರಿಸಿದರು. ಶಿವಮೊಗ್ಗದಿಂದ ಮೈಸೂರಿಗೆ, ಮೈಸೂರಿನಿಂದ ಕಾಶಿಗೆ, ಕಾಶಿಯಿಂದ ಕಡಲಾಚೆಯ ವಿಯೆನ್ನಾಕ್ಕೆ ಓದಲು ಹೋಗುವಂತೆ ಪ್ರೋತ್ಸಾಹಿಸಿದವರು ನಮ್ಮ ಲಿಂಗೈಕ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರು ಅನುಗ್ರಹಿಸಿ ಕಳುಹಿಸಿದ ಆ ಪಿಟೀಲಿನ ತಂತಿಗಳಲ್ಲಿ ಯಾವ ಮೋಡಿ ಇತ್ತೋ ಅದು ನಮ್ಮನ್ನು ದೂರದ ಐರೋಪ್ಯ ದೇಶದಲ್ಲಿದ್ದರೂ ಅವರ ಸನಿಹಕ್ಕೆ ಕ್ರಮೇಣ ಗಾಢವಾಗಿ ಎಳೆದು ತಂದಿತು. ಅವರು ವಿರಾಜಮಾನರಾಗಿ ಕುಳಿತಿದ್ದ ಗದ್ದುಗೆಯನ್ನೇ ಏರುವಂತೆ ಮಾಡಿತು.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಒಳ್ಳೆಯ ವಿದ್ಯಾರ್ಥಿಯಾಗಿದ್ದ ನಮ್ಮನ್ನು ನಂತರ ಶ್ರೀಗುರುಗಳು ಕನ್ನಡ ಮತ್ತು ಸಂಸ್ಕೃತ ಓದಲು ಮಹಾರಾಜಾ ಕಾಲೇಜಿಗೆ ಸೇರಿಸಿದರು. ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕರಾಗಿದ್ದ ಎಚ್.ದೇವೀರಪ್ಪನವರನ್ನು ಪರಿಚಯಿಸಿ ಅವರ ನಿಕಟ ಸಂಪರ್ಕವನ್ನಿಟ್ಟುಕೊಳ್ಳಲು ಆದೇಶಿಸಿದ್ದರು. ಪ್ರೌಢಶಾಲೆಯಲ್ಲಿದ್ದಾಗ ಕೈಲಾಸಂ ಕುರಿತ ಯಾವುದೋ ಕಾರ್ಯಕ್ರಮವನ್ನು ಯಾರದೋ ಕೈಲಾಸ ಸಮಾರಾಧನೆಯೆಂದು ತಿಳಿದಿದ್ದ ನಮಗೆ ಕನ್ನಡ ಸಾಹಿತ್ಯದ ಗಂಧವೇ ಇರಲಿಲ್ಲ, ನಮ್ಮ ಆಗಿನ ಸಹಪಾಠಿಗಳಾಗಿದ್ದ ಆಲನಹಳ್ಳಿ ಶ್ರೀಕೃಷ್ಣ, ಕೆ. ರಾಮದಾಸ್, ತೀ.ನಂ ಶಂಕರನಾರಾಯಣ, ಕಾಳೇಗೌಡ ನಾಗವಾರ, ಪಿ.ಕೆ ರಾಜಶೇಖರ, ಹೆಸರಾಂತ ಕವಿ ಪು.ತಿ.ನ ಮಗಳು (ಹೆಸರು ನೆನಪಿಲ್ಲ) ಇವರಿಗೆ ಇದ್ದ ಕನ್ನಡ ಸಾಹಿತ್ಯ ಪ್ರವೇಶ ನಮ್ಮನ್ನು ದಿಗಿಲುಗೊಳಿಸಿತ್ತು. ಹೀಗಿರುವಾಗ ನಮ್ಮ ಹೃದಯದಲ್ಲಿ ಸಾಹಿತ್ಯಾಭಿರುಚಿ ಚಿಗುರೊಡೆಯುವಂತೆ ಪಾಠಮಾಡಿದ ವಿದ್ಯಾಗುರುಗಳಲ್ಲಿ ಜಿ.ಎಸ್.ಎಸ್ ಪ್ರಮುಖರು. ಅದೇ ವರ್ಷ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಮೈಸೂರಿಗೆ ಬಂದಿದ್ದರು. ಮಹಾರಾಜಾ ಕಾಲೇಜಿನ ಕನ್ನಡ ವಿಭಾಗದ ಚಿಕ್ಕ ಕೊಠಡಿಯ ಕುರ್ಚಿಯಲ್ಲಿ ಶುಭ್ರ ಬಿಳಿಯ ವಸ್ತ್ರಧಾರಿಗಳಾಗಿ ನೆಟ್ಟಗೆ ಕುಳಿತು, ಮಿನುಗುವ ಲೋಹದ ಅಂಚಿನ ದುಂಡನೆಯ ಕನ್ನಡಕದಲ್ಲಿ ನೇರವಾಗಿ ದಿಟ್ಟಿಸಿ, ಎಡಗೈಯಲ್ಲಿ ಪುಸ್ತಕ ಹಿಡಿದು, ತಮ್ಮ ದುಂಡು ಮುಖದ ಗಲ್ಲದ ಕೆಳಗೆ ಬಲಗೈ ಮುಷ್ಟಿಯನ್ನಿರಿಸಿ ಗಂಭೀರ ವದನರಾಗಿ ಬಸವಣ್ಣನವರ ವಚನಗಳ ವಿಶ್ಲೇಷಣೆಯನ್ನು ಮಾಡುತ್ತಿದ್ದ ಅವರ ಬೋಧನಾ ಶೈಲಿ, ರನ್ನನ ಗದಾಯುದ್ಧವನ್ನು ಪಾಠ ಮಾಡುವಾಗ ಅದರಲ್ಲಿ ಭಾಸನ ಊರುಭಂಗ ಮತ್ತು ಭಟ್ಟನಾರಾಯಣನ ವೇಣೀಸಂಹಾರ ಮೊದಲಾದ ಸಂಸ್ಕೃತ ನಾಟಕಗಳ ಸನ್ನಿವೇಶ, ಕಲ್ಪನೆಗಳು ಹೇಗೆ ಎರವಲಾಗಿ ಬಂದಿವೆ ಎಂಬುದನ್ನು ವಿವರಿಸಿ “ಜಗತ್ತಿನ ಯಾವುದೇ ಸಾಹಿತ್ಯವಿರಲಿ ಒಬ್ಬ ಕವಿಯ ಕೈ ಮತ್ತೊಬ್ಬ ಕವಿಯ ಜೇಬಿನಲ್ಲಿರುತ್ತದೆ” ಎಂದು ಕೃತಿಚೌರ್ಯದ ಬಗ್ಗೆ ವಿಮರ್ಶಿಸಿದ್ದ ಅವರ ಮಾರ್ಮಿಕ ನುಡಿ ಈಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.
ಮೇಲ್ಕಂಡ ನಮ್ಮ ಬಾಲ್ಯದ ಘಟನೆಗಳನ್ನು ನೆನೆಸಿಕೊಂಡಾಗಲೆಲ್ಲಾ ನಮಗೆ ನೆನಪಾಗುವುದು ಜಿ.ಎಸ್.ಎಸ್ ರವರ ಈ ಕೆಳಗಿನ ಪ್ರಸಿದ್ಧ ಕವಿತೆ:
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?
(ಸಾಮಗಾನ: 1951)
ಜಿ.ಎಸ್.ಎಸ್ ರವರ ಚೊಚ್ಚಲ ಕವನ ಸಂಕಲನ ಸಾಮಗಾನ ದ ಪದ್ಯವಿದು. ಅರ್ಧ ಶತಮಾನಕ್ಕೂ ಹೆಚ್ಚು ಹಳೆಯದಾದ ಈ ಪದ್ಯ ಇಂದಿಗೂ ನಿತ್ಯ ವಿನೂತನವಾಗಿದೆ. ಇದಕ್ಕೆ ರಾಗ ಸಂಯೋಜಿಸಿದ ಮೈಸೂರು ಅನಂತ ಸ್ವಾಮಿಯವರ ಸಂಗೀತವೂ ಕಿವಿಗೆ ಕೇಳಲು ಅಷ್ಟೇ ಸುಮಧುರವಾಗಿದೆ. ಅದೆಷ್ಟು ಹಾಡುಗಾರರು ಇದನ್ನು ಎದೆತುಂಬಿ ಹಾಡಿದ್ದಾರೋ, ಹಾಡಲು ಬಾರದವರೂ ಸುಮ್ಮನಿರಲಾಗದೆ ಮೆಲುದನಿಯಲ್ಲಿ ಗುನುಗುನಿಸಿದ್ದಾರೋ, ಅದಕ್ಕೆ ಲೆಕ್ಕವಿಲ್ಲ! ಜಿ.ಎಸ್.ಎಸ್ ಅವರೇ ತಮ್ಮ ಆತ್ಮಕಥನ ಚತುರಂಗ ದಲ್ಲಿ ಹೇಳಿರುವಂತೆ ಇದು ಅವರ ವಿದ್ಯಾಗುರು ತ.ಸು ಶಾಮರಾಯರನ್ನು ಕುರಿತು ಬರೆದ ಪದ್ಯ. ಆದರೆ ಇದನ್ನು ಓದಿದಾಗಲೆಲ್ಲಾ ಹಾಡನ್ನು ಕೇಳಿದಾಗಲೆಲ್ಲಾ ನಮ್ಮ ಮತ್ತು ನಮ್ಮ ಲಿಂಗೈಕ್ಯ ಗುರುಯರ್ವರ ಸಂಬಂಧವನ್ನು ಕುರಿತೇ ಜಿ.ಎಸ್.ಎಸ್ ಬರೆದಿದ್ದಾರೇನೋ ಎಂಬ ಭಾವನೆ ನಮ್ಮ ಹೃದಯದಲ್ಲಿ ಸಹಜವಾಗಿ ಮೂಡಿಬರುತ್ತದೆ. ಇಲ್ಲಿ ಕವಿಗೆ ತಮ್ಮ ವಿದ್ಯಾ ಗುರುಗಳ ಬಗೆಗೆ ಇರುವ ಅನನ್ಯ ಶ್ರದ್ದಾಭಕ್ತಿ ಒಂದೆಡೆ ಕಾಣಿಸಿದರೆ ಮತ್ತೊಂದೆಡೆ ಗುರುಗಳಿಗೆ ಶಿಷ್ಯನ ಮೇಲೆ ಇದ್ದ ಶಿಷ್ಯವಾತ್ಸಲ್ಯವೂ ಈ ಕವಿತೆಯಲ್ಲಿ ಗೋಚರಿಸುತ್ತದೆ. ಜಿ.ಎಸ್.ಎಸ್ ಅವರೇ ಅನ್ಯತ್ರ ಹೇಳುವಂತೆ ಕವಿಯ ಹಂಬಲ: ಕಿವಿಗಳು, ಕಾವ್ಯಕೃಷಿಯ ಆರಂಭದ ದಿನಗಳಲ್ಲಿ ಯುವ ಕವಿಯು ಎದೆ ತುಂಬಿ ಹೇಳಿದ ಕವಿತೆಗಳನ್ನು ಅವರ ವಿದ್ಯಾಗುರುಗಳಾದ ಶಾಮರಾಯರು ಮನವಿಟ್ಟು ಕೇಳಿ ಅಭಿಮಾನದಿಂದ ಬೆನ್ನುತಟ್ಟಿದ ರೋಮಾಂಚಕ ಕ್ಷಣಗಳನ್ನು ಕವಿ ಇಲ್ಲಿ ಮೆಲುಕು ಹಾಕುತ್ತಾರೆ. ಅಂದು ಹಾಡಿದ ಕವಿತೆಯನ್ನು ಪುನಃ ಪುನಃ ಹಾಡಿದಾಗಲೂ, ಇಂದು ಹಾಡಿದರೂ ಅಂದಿನಂತೆಯೆ ಕುಳಿತು ಅದು ಹೊಸತೊಂದು ಪದ್ಯವೇನೋ ಎಂಬ ತನ್ಮಯತೆಯಿಂದ ಕೇಳುತ್ತೀರಲ್ಲಾ, ಸಾಕು ನಾನು ಧನ್ಯ, ಅದೇ ನನಗೆ ಬಹುಮಾನ ಎಂದು ಕವಿ ಹೃದಯ ಸಂತೃಪ್ತಿ ಭಾವದಲ್ಲಿ ಓಲಾಡುತ್ತದೆ. ಕವಿ ಹಾಡುವ ಹಕ್ಕಿ ಇದ್ದಂತೆ. ಹಕ್ಕಿಗೆ ಯಾವ ಬಹುಮಾನ ಕೊಡುತ್ತಾರೆ? ಅದು ಹಾಡುವುದು ತನ್ನ ಸ್ವ-ಸಂತೋಷಕ್ಕಾಗಿ, “Call a red rose by any name; it smells as good” ಎಂದು ಷೇಕ್ಸ್ಪಿಯರ್ ಹೇಳುತ್ತಾನೆ. ಕೆಂಪು ಗುಲಾಬಿಯನ್ನು ಕಪ್ಪು ಗುಲಾಬಿಯೆಂದು ಕರೆದರೂ ಅದು ತನ್ನ ಕಂಪನ್ನು ಬಿಟ್ಟುಕೊಡುವುದಿಲ್ಲ. ಸುಗಂಧ ಸೂಸುವುದು ಹೂವಿನ ನೈಜಧರ್ಮ, ಕವಿಯೂ ಸಹ ಹಾಗೆಯೇ. ಅವನು ಬರೆಯುವುದು ಹಾಡುವುದು ಎಲ್ಲ ಸ್ವ-ಸಂತೋಷಕ್ಕಾಗಿ, ಬಿರುದು ಸನ್ಮಾನಗಳು ಅವನಿಗೆ ನಗಣ್ಯ. ಯಾರು ಕೇಳಲಿ ಬಿಡಲಿ, ಕೇಳಿ ಮೆಚ್ಚಲಿ, ಕೇಳದೆ ಕಿವಿ ಮುಚ್ಚಲಿ ಕವಿಗೆ ತನ್ನ ಹೃದಯದಾಳದ ತೀವ್ರತರ ಭಾವನೆಗಳನ್ನು ಅಭಿವ್ಯಕ್ತಿಸದ ಹೊರತು ಸಮಾಧಾನವಾಗುವುದಿಲ್ಲ, ಕವಿತೆಯ ಈ ಸಾಲುಗಳನ್ನು ಓದುತ್ತಾ ಹೋದಂತೆ ದೇವರನ್ನು ಕುರಿತು ಅಯ್ಯಾ ನೀನು ಕೇಳಿದರೆ ಕೇಳು ಕೇಳದಿದ್ದರೆ ಮಾಣು; ನಾ ಹಾಡಿದಲ್ಲದೆ ಸೈರಿಸಲಾರೆನು ಎನ್ನುವ ಅಕ್ಕಮಹಾದೇವಿಯ ಹೃದಯದ ತುಡಿತ ಹಾಗೂ ಆನು ಒಲಿದಂತೆ ಹಾಡುವೆ ಎನ್ನುವ ಬಸವಣ್ಣನ ನಿರ್ವ್ಯಾಜ ಭಕ್ತಿ ಜಿ.ಎಸ್.ಎಸ್ ರವರ ಈ ಕವಿತೆಯಲ್ಲಿ ಮೈದಾಳಿದಂತಿವೆ.
ಸಹೃದಯ ಓದುಗರೇ! ಈಟಿವಿ ದೂರದರ್ಶನದಲ್ಲಿ ಎದೆ ತುಂಬಿ ಹಾಡಿದೆನು... ಎಂಬ ಶೀರ್ಷಿಕೆಯಡಿ ಅರಳುತ್ತಿರುವ ಬಾಲಪ್ರತಿಭೆಗಳು ನಿರ್ವಾಹಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಚ್ಚರಿ ಪಡುವಂತೆ ತಮ್ಮ ವಯಸ್ಸಿಗೆ ಮೀರಿ ಎದೆ ತುಂಬಿ, ಮನ ತುಂಬಿ ಹಾಡುವುದನ್ನು ಕೇಳಿದಾಗಲೆಲ್ಲಾ ನಾವು ಭಾವುಕರಾಗಿ ಆ ಮಕ್ಕಳೊಂದಿಗೆ ಕುಳಿತು ಪಿಟೀಲನ್ನು ಕೈಗೆತ್ತಿಕೊಂಡು ನುಡಿಸಬೇಕೆನ್ನಿಸುತ್ತದೆ. ಏಕೆಂದರೆ ಈ ಕವಿತೆಯ ಭಾವ ನಮ್ಮ ಬದುಕಿನ ಒಂದು ಅವಿಸ್ಮರಣೀಯ ಭಾಗವೇ ಆಗಿದೆ. ಇದರ ಪ್ರತಿಯೊಂದು ಸಾಲನ್ನು ಓದಿದಾಗಲೂ, ಕೇಳಿದಾಗಲೂ 50 ವರ್ಷಗಳ ಹಿಂದಿನ ನಮ್ಮ ಬಾಲ್ಯಜೀವನದ ಘಟನೆ ನೆನಪಾಗಿ ಹೃದಯ ಗದ್ಗದಗೊಳ್ಳುತ್ತದೆ, ಕಂಠ ಬಿಗಿಯುತ್ತದೆ, ಕಣ್ಣೆವೆ ಹನಿಗೂಡುತ್ತದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 19.3.2008.