ಸ್ವಾತಂತ್ರ್ಯ ಹೋರಾಟಗಾರರು v/s ಟಿಕೆಟ್ಟು ಹೋರಾಟಗಾರರು....
ಬಹಳ ದಿನಗಳ ಊಹಾಪೋಹಕ್ಕೆ ಈಗ ತೆರೆಬಿದ್ದಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ತೂಗುಯ್ಯಾಲೆಯಾಗಿದ್ದ ಕರ್ನಾಟಕದ ಚುನಾವಣೆ ಆದಿ, ಮಧ್ಯ, ಅಂತ್ಯ ಎಂಬಂತೆ ಕೊನೆಗೂ ಮುಂದಿನ ತಿಂಗಳು ಮೂರು ಹಂತದಲ್ಲಿ ನಡೆಯಲಿದೆ. ಯಾವುದರ ಆದಿ? ಯಾವುದರ ಮಧ್ಯ? ಯಾವುದರ ಅಂತ್ಯ? ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಉತ್ತರಿಸುವುದು ಕಷ್ಟವೇನಲ್ಲ, ಅದೇನೆಂದರೆ ಭ್ರಷ್ಟಾಚಾರದ ಆದಿ, ಪ್ರಜಾಪ್ರಭುತ್ವದ ಅಂತ್ಯ, ಅನಾದಿಕಾಲದಿಂದ ಬಂದ ಭ್ರಷ್ಟಾಚಾರದ ಆದಿಯೇನೋ ನಿಜ. ಪ್ರಜಾಪ್ರಭುತ್ವದ ಅಂತ್ಯ ಹೇಗೆ? ಹೌದು, ನಮಗೆ ಗೊತ್ತು; ಈ ಉತ್ತರದಿಂದ ನೀವು ಗಲಿಬಿಲಿಗೊಳ್ಳುತ್ತೀರಿ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನದ ನಿಯಮಾನುಸಾರವೇ ತಾನೆ ಈಗ ಚುನಾವಣೆ ನಡೆಸಲು ಏರ್ಪಾಡಾಗಿರುವುದು ಎಂದು ಪ್ರಶ್ನಿಸುತ್ತೀರಿ. ನಿಜ, ನೀವು ಕೇಳುವುದು ಸರಿಯಾಗಿದೆ. “ತಿಕ್ಕಾಟದ ಮಧ್ಯೆ ಪ್ರಜಾಪ್ರಭುತ್ವದ ಅಂತ್ಯ" ಎಂದು ಹೇಳಿದ್ದರೆ ನೀವು ಒಪ್ಪುತ್ತಿದ್ದಿರೋ ಏನೋ! ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ನೀವು ಭಾವಿಸಿದ್ದಾದರೂ ಹೇಗೆ? ಚುನಾವಣೆಯ ದಿನಾಂಕ ಘೋಷಣೆಯಾದ ದಿನದಿಂದ ರಾಜಕೀಯ ಪಕ್ಷಗಳು ಚುರುಕಾಗುತ್ತವೆ. ಪಕ್ಷದ ಕಛೇರಿಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗುತ್ತದೆ. ವೀಕ್ಷಕರು ದೆಹಲಿಯಿಂದ ದಯಮಾಡಿಸುತ್ತಾರೆ. ಹಿಂದಿನ ಕಾಲದಲ್ಲಿ ಸುರಸುಂದರಿಯರಾದ ರಾಜಕುಮಾರಿಯರ ಸ್ವಯಂವರಕ್ಕೆ ರಾಜಕುಮಾರರು ಹಾಜರಾದಂತೆ ಗಂ(ಗುಂ)ಡೆದೆಯ ಗಂಡುಗಳು ಪಕ್ಷದ ಟಿಕೆಟ್ ಬಯಸಿ ವೀಕ್ಷಕರ ಮುಂದೆ ಹಾಜರಾಗುತ್ತಾರೆ. ಪಕ್ಷದ ವರಿಷ್ಠರಲ್ಲಿ ನಿಷ್ಠೆಯುಳ್ಳವರಾಗಿ ದಾರಿ ಬೀದಿಗಳಲ್ಲಿ ಅವರು ಉರುಳುಸೇವೆ ಮಾಡಿದ್ದು, ಕಂಠಪೂರ್ತಿ ಕುಡಿದು ಓಲಾಡಿ ಬತ್ತಲೆಸೇವೆ ಮಾಡಿದ್ದು, ದುರಾಗ್ರಹ ನಡೆಸಿ ಕಾರು ಬಸ್ಸುಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದು, ಯಮರಾಜನಿಗೂ ಹೆದರದೆ ರೈಲಿನ ಹಳಿಗೆ ಅಡ್ಡಲಾಗಿ ಮಲಗಿದ್ದು, ಉಟ್ಟು ಓರಾಟಗಾರನಾಗಿ ಖನ್ನಡದ ಖಳನಾಯಕರ ಮುಖಕ್ಕೆ ಮಸಿಬಳಿದದ್ದು ಇತ್ಯಾದಿ, ಇತ್ಯಾದಿ ತಮ್ಮ ವೀರಧೀರ ಪರಾಕ್ರಮವನ್ನು ಬಣ್ಣಿಸುವ ಬಯೋಡೇಟಾ ಮುಂದಿಡುತ್ತಾರೆ. ವಂದಿಮಾಗಧರಿಂದ ಪರಾಕು ಹೇಳಿಸುತ್ತಾರೆ. ಈ ಪಕ್ಷದ ಟಿಕೆಟ್ಟಿಗಾಗಿ ಕಷ್ಟಪಟ್ಟು ಆ ಪಕ್ಷ ಬಿಟ್ಟು ಬಂದ ತಮ್ಮ ಯಶೋಗಾಥೆಯನ್ನು ವಿವರಿಸುತ್ತಾರೆ. ಅಲ್ಲಿಗೇ ಮುಗಿಯುವುದಿಲ್ಲ ಈ ಟಿಕೆಟ್ ಸ್ವಯಂವರ! ವೀಕ್ಷಕರು ದೆಹಲಿಗೆ ಹಿಂತಿರುಗುತ್ತಿದ್ದಂತೆಯೇ ತಮ್ಮ ಗಾಡ್ಫಾದರ್ಗಳನ್ನು ಹುಡುಕಿಕೊಂಡು ಹೋಗುತ್ತಾರೆ.
God Father ಎಂಬ ಇಂಗ್ಲೀಷ್ ಶಬ್ದಕ್ಕೆ ಆಕ್ಸ್ಫರ್ಡ್ ಇಂಗ್ಲೀಷ್ ಶಬ್ದಕೋಶದಲ್ಲಿ ಇಲ್ಲದೇ ಇರುವ ಅರ್ಥ ನಮ್ಮ ಕನ್ನಡದಲ್ಲಿ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಇದೆ. ಕೈಸ್ತಧರ್ಮೀಯರಲ್ಲಿ ದುರದೃಷ್ಟವಶಾತ್ ಮಗುವಿನ ತಂದೆ-ತಾಯಿಗಳು ಸತ್ತು ದಿಕ್ಕಿಲ್ಲದಂತಾದರೆ ಅಂತಹ ಮಗುವನ್ನು ನೋಡಿಕೊಳ್ಳುವ ಹೊಣೆ ಹೊತ್ತ ವ್ಯಕ್ತಿಗೆ God Father/God Mother ಎಂದು ಕರೆಯುತ್ತಾರೆ. ತಂದೆ-ತಾಯಿಗಳು ಬದುಕಿದ್ದಾಗಲೇ ತಮ್ಮ ಆತ್ಮೀಯರಲ್ಲಿ ಅಂಥವರನ್ನು ತಮ್ಮ ಮಗುವಿನ God Parents ಗಳೆಂದು ಆಯ್ಕೆ ಮಾಡಿರುತ್ತಾರೆ. ಆದರೆ ಈ ಶಬ್ದಕ್ಕೆ ನಮ್ಮ ದೇಶದ ರಾಜಕೀಯ ಪರಿಭಾಷೆಯಲ್ಲಿ ಇರುವ ಅರ್ಥವೇ ಬೇರೆ. ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೊಡಿಸುವುದರಿಂದ ಹಿಡಿದು ಮಂತ್ರಿಗಿರಿ ಮತ್ತು ಬೇಕಾದ ಖಾತೆ ಕೊಡಿಸುವವರೆಗೂ, ಅದಾವುದೂ ಇಲ್ಲವೆಂದರೆ ಕನಿಷ್ಟ ನಿಗಮಾಗಮಗಳ ಮೆಂಬರ್, ಛೇರ್ಮನ್ ಆಗುವುದಕ್ಕೂ ತಮಗೆ ನೆರವಾಗಬಲ್ಲ. ಅದಕ್ಕಾಗಿ ತಾವೇ ಆಯ್ಕೆ ಮಾಡಿಕೊಂಡ ವರಿಷ್ಟ (worst?) ರಾಜಕಾರಿಣಿಗಳನ್ನು ಈ ದೇಶದಲ್ಲಿ God Father ಗಳೆಂದು ಕರೆಯುತ್ತಾರೆ. ವಿಶೇಷವೆಂದರೆ ಇವರು ಅವರನ್ನು ಸರಿಯಾಗಿ ನೋಡಿಕೊಂಡರೆ, ಅವರು ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ! ಪಕ್ಷಭೇದವಿಲ್ಲದೆ ಒಮ್ಮತದಿಂದ ನಮ್ಮ ದೇಶದ ರಾಜಕಾರಿಣಿಗಳು ಮೈಗೂಡಿಸಿಕೊಂಡು ಬಂದಿರುವ ಈ ವಿಶೇಷಾರ್ಥವನ್ನು ವಿವರಿಸಿ ಮುಂದಿನ ಆಕ್ಸ್ಫರ್ಡ್ ಇಂಗ್ಲೀಷ್ ಶಬ್ದಕೋಶವನ್ನು ಪರಿಷ್ಕರಿಸಲು ಆಕ್ಸ್ಫರ್ಡ್ಗೆ ನೂತನ ಸರ್ಕಾರ ರಚನೆಯಾದ ಮೇಲೆ ಮಂತ್ರಿಪದವಿ ವಂಚಿತರಾದ ಭಿನ್ನಮತೀಯರ ವಿಶೇಷ ನಿಯೋಗವೊಂದನ್ನು ಕಳುಹಿಸಬೇಕಾಗಿದೆ.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗಿಂತ, ಇಂದು ದೇಶದ ಅಧಿಕಾರ ಗದ್ದುಗೆಯನ್ನು ಏರಲು ರಾಜಕೀಯ ಪಕ್ಷದ ಟಿಕೆಟ್ಟಿಗಾಗಿ ಹೋರಾಡುವ ಟಿಕೆಟ್ಟು ಹೋರಾಟಗಾರರ ಸಂಖ್ಯೆಯೇ ಜಾಸ್ತಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕಥೆ ಒಂದು ತೆರನಾದರೆ, ಟಿಕೆಟ್ಟಿಗಾಗಿ ಹೋರಾಡುವವರ ಕಥೆವ್ಯಥೆ ಮತ್ತೊಂದು ತೆರನಾಗಿದೆ. ಟಿಕೆಟ್ಟು ಹೋರಾಟಗಾರರ ಸಂಘ ಸ್ಥಾಪನೆಯಾಗುವುದೊಂದು ಬಾಕಿ ಉಳಿದಿದೆ. ಸ್ವಾತಂತ್ರ್ಯ ಸಮರಕ್ಕಿಂತ ಚುನಾವಣಾ ಸಮರವೇ ಜೋರಾಗಿದೆ. ದೇಶ ಸೇವೆಗಿಂತ ಸ್ವಾರ್ಥ ಲಾಲಸೆ ಮೇರೆ ಮೀರಿ ಬೆಳೆದಿದೆ. ಸುಲಭವಾಗಿ ದುಡ್ಡು ಮಾಡಲು ಇರುವ ಏಕೈಕ ಮಾರ್ಗವೆಂದರೆ ರಾಜಕೀಯ ಎಂಬ ತೀರ್ಮಾನಕ್ಕೆ ಈ ಜನರು ಬಂದಿರುವಂತೆ ತೋರುತ್ತದೆ. ಹಿಂದಿನ ವರ್ಷಮಾನಗಳಲ್ಲಿ ಚುನಾವಣೆಗೆ ಮಾಡುತ್ತಿದ್ದ ಖರ್ಚು, ಈಗ ಟಿಕೆಟ್ಟು ಪಡೆಯಲು ಮಾಡುವ ಖರ್ಚಿನ ಮುಂದೆ ಏನೂ ಅಲ್ಲ. ಪ್ರಭಾವೀ ಪಕ್ಷದ ಟಿಕೆಟ್ಟು ಪಡೆಯುವಲ್ಲಿ ಯಶಸ್ವಿಯಾದರೆ ತಮ್ಮ ಗೆಲುವು ಖಚಿತ ಎಂಬ ಅಖಂಡ ಧೈರ್ಯ ಈ ಟಿಕೆಟ್ ಆಕಾಂಕ್ಷಿಗಳಲ್ಲಿದೆ. ಅದಕ್ಕಾಗಿ ಅವರು ಎಷ್ಟು ಹಣವನ್ನಾದರೂ ಖರ್ಚು ಮಾಡಲು ಹಿಂದೆಗೆಯುವುದಿಲ್ಲ. ಹೈಕಮಾಂಡಿನ ಆಶೀರ್ವಾದ ಬಲದಿಂದ ಟಿಕೆಟ್ ಗಳಿಸಿದ ಅವರಿಗೆ ಯಾವ ಜನರ ಭಯವೂ ಇರುವುದಿಲ್ಲ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಈ (ವಾ)ನರರಿಗೆ ಸಾರ್ವಜನಿಕ ಜೀವನದಲ್ಲಿ ಸಹಜವಾಗಿ ಇರಬೇಕಾದ ಕನಿಷ್ಠ ನಾಚಿಕೆಯೂ ಇರುವುದಿಲ್ಲ.
ಅಮೇರಿಕಾದಲ್ಲಿ ಟಿಕೆಟ್ ಕೊಡುವುದು ಎಂದರೆ ದಂಡ ಹಾಕುವುದು ಎಂದರ್ಥ. ರಸ್ತೆಗಳಲ್ಲಿ ನಿಲ್ಲಿಸಬಾರದ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದರೆ ಅಥವಾ ನಿಗದಿತ ಅವಧಿ ಮೀರಿ ಕಾರನ್ನು ನಿಲ್ಲಿಸಿದ್ದರೆ ಅಥವಾ ವೇಗದ ಮಿತಿಯನ್ನು ಮೀರಿ ಕಾರನ್ನು ಓಡಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಅವರು ಬಹುತೇಕ ಮಹಿಳಾ ಪೋಲೀಸರಾಗಿರುತ್ತಾರೆ. ನಿಮ್ಮ ಅದೃಷ್ಟಕ್ಕೆ ಇದ್ದಕ್ಕಿದ್ದಂತೆಯೇ ದೇವತೆಗಳಂತೆ ಪ್ರತ್ಯಕ್ಷರಾಗುವ ಈ ಪೋಲೀಸ್ ಸಮವಸ್ತ್ರದ ಲಲನಾಮಣಿಯರು ಯಾರ ಮುಖ ಮೋರೆ ನೋಡದೆ 50 ಡಾಲರ್ ದಂಡ ವಿಧಿಸಿ ದಂಡದ ಚೀಟಿ ಯನ್ನು ಕಾರಿನ ಮುಂಗಾಜಿನ ಮೇಲೆ ಅಂಟಿಸಿ ಅಥವಾ ಮುಂಗಾಜಿನ ವೈಷರ್ಗೆ ಸಿಕ್ಕಿಸಿ ನಿಮಗೆ ಕಾಣಿಸಿಕೊಳ್ಳದೆ ಕ್ಷಣಾರ್ಧದಲ್ಲಿ ಕಣ್ಮರೆಯಾಗಿಬಿಡುತ್ತಾರೆ! ನಮ್ಮ ದೇಶದ ಪೋಲೀಸರಂತೆ ಹೊಂಚು ಹಾಕಿ ನಿಮಗಾಗಿ ಕಾಯುತ್ತಾ ಕೂರುವುದಿಲ್ಲ. ಆ ಟಿಕೆಟ್ನಲ್ಲಿ ನಮೂದಾಗಿರುವ ದಂಡವನ್ನು ನೀವು ಮರುಮಾತಿಲ್ಲದೆ ಕೋರ್ಟಿಗೆ ಹೋಗಿ ಕಟ್ಟಬೇಕು. ತನ್ನದೇನೂ ತಪ್ಪಿಲ್ಲವೆಂದು ವಾದಿಸಿದರೆ ದುಪ್ಪಟ್ಟು ಹಣ ತೆರಬೇಕಾಗುತ್ತದೆ. ಹೀಗೆ ಎರಡು ಮೂರು ಬಾರಿ ಟಿಕೆಟ್ ಸಿಕ್ಕರೆ ಡೈವಿಂಗ್ ಲೈಸೆನ್ಸ್ ರದ್ದಾಗುತ್ತದೆ. ಕಾರಿನ ಇನ್ಸೂರೆನ್ಸ್ ಪ್ರೀಮಿಯಂ ಹೆಚ್ಚಾಗುತ್ತದೆ. ಆ ದೇಶಗಳಲ್ಲಿ ಡೈವಿಂಗ್ ಲೈಸೆನ್ಸ್ ಕಳೆದುಕೊಳ್ಳುವುದೆಂದರೆ ಅಪಘಾತದಲ್ಲಿ ಕೈಕಾಲು ಕಳೆದುಕೊಂಡಂತೆ. ಈ ಭಯದಿಂದ ಅಮೇರಿಕಾದ ನಾಗರೀಕರು ಟಿಕೆಟ್ ಪಡೆಯಲು ಹೆದರುತ್ತಾರೆ. ಆದರೆ ನಮ್ಮವರು ಹಂಬಲಿಸುತ್ತಾರೆ!
ನಮ್ಮ ದೇಶದಲ್ಲಿ ಟಿಕೆಟ್ಟಿಗಾಗಿ ನೂಕು ನುಗ್ಗಲಾಗುವುದು ಮೂರು ಕಡೆ: ಒಂದು ಸಿನೇಮಾ ಮಂದಿರಗಳ ಮುಂದೆ, ಇನ್ನೊಂದು ಕ್ರಿಕೆಟ್ ಸ್ಟೇಡಿಯಂ ಮುಂದೆ, ಮತ್ತೊಂದು ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಕಾರ್ಯಾಲಯ ಮತ್ತು ಪ್ರಭಾವೀ ರಾಜಕಾರಿಣಿಗಳ ಮನೆಯ ಮುಂದೆ! ರಾಜಕೀಯದಲ್ಲಿ ಭ್ರಷ್ಟಾಚಾರ ಪ್ರಾರಂಭವಾಗುವುದೇ ಈ ಟಿಕೆಟ್ಟಿನಿಂದ! ಟಿಕೆಟ್ ಹಂಚುವ ಪ್ರಕ್ರಿಯೆ ಎಲ್ಲ ಭ್ರಷ್ಟಾಚಾರಗಳ ಪಾಪಕೂಪ! ಬಿ ಫಾರಂ ಕೊಡುವುದೆಂದರೆ ಭ್ರಷ್ಟಾಚಾರಕ್ಕೆ ರಾಜಕೀಯ ಪಕ್ಷಗಳು ಕೊಡುವ ಪರವಾನಿಗೆ. ದೆಹಲಿಯಲ್ಲಿರುವ ಪಕ್ಷಗಳ ಹೈಕಮಾಂಡಿನವರು ಜನರ ಭಾವನೆಗಳಿಗೆ ಬೆಲೆಕೊಡದೆ ಯಾವುದೋ ಲೆಕ್ಕಾಚಾರ ಹಾಕಿ ಟಿಕೆಟ್ ನೀಡುತ್ತಾರೆ. ಇದು ಎಲ್ಲ ಪಕ್ಷದವರೂ ಅನುಸರಿಸುವ ತಾರಕ ಮಂತ್ರ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಅವರಿಗೆ ತಮ್ಮ ಪ್ರಭುತ್ವದ ಅರಿವಿಲ್ಲ. ಹೀಗಾಗಿ ಅವರನ್ನು ಆಳುಗಳನ್ನಾಗಿ ಮಾಡಿಕೊಂಡು ಅರಸರಾಗಿ ಮೆರೆಯುವ ರಾಜಕಾರಿಣಿಗಳು ಈ ದೇಶದಲ್ಲಿ ಬಹಳ ಜನರಿದ್ದಾರೆ. ಯೇನ ಕೇನ ಪ್ರಕಾರೇಣ ಪ್ರಸಿದ್ಧಃ ಪುರುಷೋ ಭವೇತ್ ಎಂಬಂತೆ ಹೇಗಾದರೂ ಮಾಡಿ ಒಂದು ದಿನವಾದರೂ ಮಂತ್ರಿಯಾಗಬೇಕೆಂದು ಕನಸು ಕಾಣುವ ಶಾಸಕರು, ಅದಕ್ಕಾಗಿ ಅವರು ಪಡುವ ಶ್ರಮ, ಮಾಡುವ ಕುತಂತ್ರ, ತೋರಿಸುವ ಚಾಣಾಕ್ಷತನ ಬೆರಗುಗೊಳಿಸುವಂತಹದಾಗಿದೆ. ಹಿಂದೆ ರೈಲ್ವೆ ಟಿಕೆಟ್ ಪಡೆಯಲು ರೈಲು ನಿಲ್ದಾಣಗಳಲ್ಲಿ ಸಾಲುಗಟ್ಟಿ ಗಂಟೆಗಟ್ಟಲೆ ನಿಲ್ಲಬೇಕಾಗುತ್ತಿತ್ತು. ಈಗ ರೈಲು, ಬಸ್ಸು, ವಿಮಾನದ ಟಿಕೆಟ್ ಪಡೆಯಲು ನಿಲ್ದಾಣಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಇದ್ದು ಅಂತರಜಾಲದಲ್ಲಿ ಟಿಕೆಟ್ ಬುಕ್ ಮಾಡಲು ಆನ್ ಲೈನ್ ವ್ಯವಸ್ಥೆ ಮಾಡಿದ್ದಾರೆ. ಹಾಗೇನೇ ಪಾರ್ಟಿ ಟಿಕೆಟ್ ಪಡೆಯಲು ಅಂತರಜಾಲದಲ್ಲಿ ಆನ್ ಲೈನ್ ವ್ಯವಸ್ಥೆ ಮಾಡಿದರೆ ಏನಾಗಬಹುದು? ಇದೇನಾದರೂ ಜಾರಿಗೆ ಬಂದರೆ ಬೆಂಗಳೂರು-ದೆಹಲಿ ವಿಮಾನಗಳ ಸಂಚಾರ ಸ್ಥಗಿತಗೊಂಡು ವಿಮಾನಯಾನ ಸಂಸ್ಥೆಯು ಭಾರೀ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಇಲ್ಲ, ನಿಮ್ಮ ಎಣಿಕೆ ತಪ್ಪು, ಚುನಾವಣೆ ಮುಗಿಯುವವರೆಗೂ ತಾಂತ್ರಿಕ ದೋಷದಿಂದ ಅದು ಆಫ್ ಲೈನ್ ಆಗಿಯೇ ಇರುತ್ತದೆ! ದೆಹಲಿಗೆ ದೌಡಾಯಿಸಲೇಬೇಕು.
ನಮ್ಮ ದೇಶದಲ್ಲಿ ಚುನಾವಣೆಗೆ ಪಕ್ಷಗಳು ಅಭ್ಯರ್ಥಿಗಳನ್ನು ಆರಿಸುವ ಕ್ರಮವನ್ನು ನೋಡಿದರೆ ಹೇಸಿಗೆ ಎನಿಸುತ್ತದೆ. ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂದಿಸಬಲ್ಲ ಗೌರವಾನ್ವಿತ ವ್ಯಕ್ತಿಗಳಿಗೆ ಮಾತ್ರ ಪಕ್ಷದ ಟಿಕೆಟ್ ದೊರೆತು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಾದರೆ ಅದು ಪ್ರಜಾಪ್ರಭುತ್ವಕ್ಕೆ ಅನುಗುಣವಾದ ಕ್ರಮವಾಗುತ್ತದೆ. ಆದರೆ ಈಗ ಆಗುತ್ತಿರುವುದೇನು? ಪಕ್ಷದ ಸ್ಥಳೀಯ ಕಾರ್ಯಕರ್ತರ ಮಾತಿಗೆ ಕವಡೆಯ ಕಿಮ್ಮತ್ತೂ ಇಲ್ಲ. ಅವರ ಶಿಫಾರಿಸ್ಸುಗಳನ್ನು ನಾಮಕಾವಸ್ತೆಗೆ ಮಾತ್ರ ಹೈಕಮಾಂಡುಗಳು ತರಿಸಿಕೊಳ್ಳುತ್ತವೆ. ನಂತರ ಅವುಗಳನ್ನು ಗಾಳಿಗೆ ತೂರಿ ಹಳ್ಳಿಯನ್ನೇ ನೋಡಿರದ ವೀಕ್ಷಕನೊಬ್ಬನನ್ನು ನೇಮಿಸಿ, ದಿಲ್ಲಿಯಲ್ಲಿ ಕುಳಿತು ಕೆಲವೇ ಕೆಲವರ ಪ್ರಭಾವ ಮತ್ತು ಒತ್ತಡಗಳಿಗೆ ಮಣಿದು ಏನೇನೋ ರಾಜಕೀಯದ ಲೆಕ್ಕಾಚಾರ ಹಾಕಿ ತೀರ್ಮಾನ ಕೈಗೊಳ್ಳುತ್ತಾರೆ. ಹಳ್ಳಿಗಳಲ್ಲಿ ಬದುಕುವ ಕೋಟಿ ಕೋಟಿ ಜನರ ಪ್ರತಿ ಐದು ವರ್ಷಗಳ ಹಣೆಯ ಬರಹವನ್ನು ದೆಹಲಿಯಲ್ಲಿರುವ ಕೆಲವೇ ಕೆಲವು ಜನರು ನಿರ್ಧರಿಸುವಂತಾಗಿರುವುದು ಪ್ರಜಾಪ್ರಭುತ್ವದ ಪ್ರಹಸನವಲ್ಲದೆ ಮತ್ತೇನು? ಕುಂಟನೋ ಕುರುಡನೋ, ಮುದುಕನೋ ವಿಧುರನೋ, ಅಪ್ಪ-ಅಮ್ಮ ನೋಡಿ ನಿರ್ಧರಿಸಿದ ಗಂಡಿನಿಂದ ತಾಳಿ ಕಟ್ಟಿಸಿಕೊಳ್ಳಬೇಕಾದ ಹೆಣ್ಣಿನ ದುಃಸ್ಥಿತಿ ಇಂದು ನಾಡಿನ ಜನತೆಗೆ ಉಂಟಾಗಿದೆ. ಈಗ ಗಂಡು-ಹೆಣ್ಣು ಮೆಚ್ಚಿ ಸಂಪ್ರದಾಯವನ್ನು ಮುರಿದು ಮದುವೆಯಾಗುವ ಬದಲಾದ ಕಾಲ ಬಂದಿದ್ದರೂ ರಾಜಕೀಯದ ವಿಚಾರದಲ್ಲಿ ಮಾತ್ರ ಇದು ಬದಲಾವಣೆಯಾಗಿಲ್ಲ.
ಇಂದು ಓಟಿನ ಮಹತ್ವಕ್ಕಿಂತ ಟಿಕೆಟ್ಟಿನ ಮಹತ್ವವೇ ಹೆಚ್ಚಾಗಿದೆ. ಪ್ರಭಾವೀ ಪಕ್ಷದ ಟಿಕೆಟ್ಟನ್ನು ಗಿಟ್ಟಿಸುವಲ್ಲಿ ಯಶಸ್ವಿಯಾದ ಅಭ್ಯರ್ಥಿಯು ಗೆದ್ದು ಬಂದಲ್ಲಿ ಅವನ ನಿಷ್ಠೆಯು ಟಿಕೆಟ್ಟು ಕೊಟ್ಟ ದಿಲ್ಲಿಯ ವರಿಷ್ಠರ ಮೇಲೆ ಇರುತ್ತದೆಯೇ ಹೊರತು, ತನಗೆ ಓಟು ಕೊಟ್ಟು ಗೆಲಿಸಿದ ಜನರ ಬಗ್ಗೆ ಕನಿಷ್ಟ ಗಮನವೂ ಇರುವುದಿಲ್ಲ. ಪಕ್ಷದ ವರಿಷ್ಠರ ಮುಂದೆ ಜೀ ಹುಜೂರ್ ಎಂದು ಕೈಕಟ್ಟಿ ನಿಂತುಕೊಳ್ಳುವ ಮಂತ್ರಿ/ಶಾಸಕ ತನ್ನ ಕ್ಷೇತ್ರದ ಜನತೆಯನ್ನು ಕ್ಯಾರೆ ಎಂದು ಮಾತನಾಡಿಸುವುದಿರಲಿ, ಕಣ್ಣೆತ್ತಿಯೂ ಸಹ ನೋಡುವುದಿಲ್ಲ, ಓಟು ಕೊಟ್ಟು ಗೆಲ್ಲಿಸಿ ಬಡಿದಾಡುವ ಹಳ್ಳಿಯ ಜನರ ದಾಕ್ಷಿಣ್ಯಕ್ಕಿಂತ ಟಿಕೆಟ್ಟು ಕೊಟ್ಟು ಅನುಗ್ರಹಿಸಿದ ದಿಲ್ಲಿಯ ವರಿಷ್ಠರ ದಾಕ್ಷಿಣ್ಯವೇ ಅವನಿಗೆ ಮುಖ್ಯ. ನಿಜವಾದ ಭಾರತ ಇರುವುದು ಹಳ್ಳಿಗಳಲ್ಲಿ ಎಂದು ಗಾಂಧೀಜಿ ಹೇಳುತ್ತಿದ್ದರು. ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿಯಲ್ಲ, ದಿಲ್ಲಿ ಹಳ್ಳಿಯ ಹತ್ತಿರಕ್ಕೆ ಬರಬೇಕೇ ವಿನಾ, ಹಳ್ಳಿ ದಿಲ್ಲಿಯ ಬಳಿಗೆ ಹೋಗುವಂತಾಗಬಾರದು. ರಾಜ್ಯದ ಜನ ಪ್ರತಿಯೊಂದಕ್ಕೂ ದೆಹಲಿಯ ಕಡೆಗೆ ಇಂದು ನೋಡುವಂತಾಗಿದೆ. ಟಿಕೆಟ್ ಪಡೆಯಲು ದೆಹಲಿಯ ಆಶೀರ್ವಾದ ಬೇಕು, ಮುಖ್ಯಮಂತ್ರಿಯಾಗಲು ದೆಹಲಿಯ ಕೃಪೆ ಬೇಕು, ಮಂತ್ರಿ ಮಂಡಲ ರಚಿಸಲು, ಮಂತ್ರಿಗಳ ಖಾತೆಗಳನ್ನು ಹಂಚಲು, ಮಂತ್ರಿಮಂಡಲ ವಿಸ್ತರಿಸಲು, ರೈತರು ಗೊಬ್ಬರ-ಬೀಜ ಪಡೆಯಲು, ಅವರು ಬೆವರು ಸುರಿಸಿ ಬೆಳೆದ ಬೆಳೆಯ ಬೆಲೆ ನಿಗದಿಪಡಿಸಲು - ಹೀಗೆ ಪ್ರತಿಯೊಂದಕ್ಕೂ ದೆಹಲಿಯ ಹೈಕಮಾಂಡಿನತ್ತ ನೋಡುವುದೇ ಆಗಿದೆ. ರಾಜ್ಯಸರ್ಕಾರಗಳು ದೆಹಲಿಯಲ್ಲಿರುವ ಪಟ್ಟಭದ್ರರ ಕೈಯಲ್ಲಿರುವ ಸೂತ್ರದ ಗೊಂಬೆಗಳಾಗಿವೆ. ರಾಜಕೀಯ ಮುಖಂಡರು ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೈಕಮಾಂಡ್ ಇರುವುದು ದೆಹಲಿಯಲ್ಲಲ್ಲ: ಹಳ್ಳಿಯ ಜನರೇ ಹೈಕಮಾಂಡ್ ಎಂದು ದಿಲ್ಲಿಯವರ ದೌಲತ್ತು ಮುರಿಯುವಂತೆ ಜನಸಾಮಾನ್ಯರು ಜಾಗೃತರಾಗಬೇಕಾಗಿದೆ.
ವಿಚಾರಶೀಲ ಓದುಗರೇ! ಚುನಾವಣಾಧಿಕಾರಿಯಾಗಿ ರಾಜಕಾರಿಣಿಗಳಿಗೆ ಸಿಂಹಸ್ವಪ್ನವಾಗಿದ್ದ ಶೇಷನ್ ಚುನಾವಣೆಗೆ ನಿಂತು ನಾಮಾವಶೇಷವಾಗಿದ್ದು ಗತಕಾಲದ ಇತಿಹಾಸ. ಇಡೀ ದೇಶದಲ್ಲಿ ಜನಮನ್ನಣೆಯನ್ನು ಗಳಿಸಿಯೂ ಶೇಷನ್ ಚುನಾವಣೆಯಲ್ಲಿ ಪರಾಭವಗೊಂಡದ್ದು ಪ್ರಜಾಪ್ರಭುತ್ವದ ವಿಡಂಬನೆಯಲ್ಲವೇ? ಇದರಿಂದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ ಪ್ರಜೆಗಳ ಅಭಿಮತವನ್ನು ರಾತ್ರೋರಾತ್ರಿ ಬದಲಾಯಿಸುವ ಬೇರೇನೋ ಶಕ್ತಿ ತನ್ನ ಪ್ರಭುತ್ವವನ್ನು ಸಾಧಿಸುತ್ತಿದೆಯೆಂದು ನಿಮಗೆ ಅನ್ನಿಸುವುದಿಲ್ಲವೇ? ಈಗಲಾದರೂ ನಂಬುತ್ತೀರಾ? ನಮ್ಮ ದೇಶದಲ್ಲಿರುವುದು ನಿಜವಾದ ಪ್ರಜಾಪ್ರಭುತ್ವವಲ್ಲ; ಪ್ರಜಾಪ್ರಭುತ್ವದ ಒಂದು ಪ್ರಹಸನ. ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ... ಎಂಬ ಶರಣರ ವಾಣಿಯನ್ನು ಮುಂದುವರಿಸಿ ಇಂದಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಹೇಳಬೇಕೆನ್ನಿಸುತ್ತದೆ:
ಚುನಾವಣೆ ಬಂದರೆ ಟಿಕೆಟ್ಟಿನ ಚಿಂತೆ
ಟಿಕೆಟ್ಟು ಸಿಕ್ಕರೆ ಓಟಿನ ಚಿಂತೆ
ಶಾಸಕನಾದರೆ ಮಂತ್ರಿಯಾಗುವ ಚಿಂತೆ
ಮಂತ್ರಿಯಾದರೆ ಖಾತೆಯ ಚಿಂತೆ
ಖಾತೆ ಸಿಗದಿರೆ, ತಪ್ಪದು ಕ್ಯಾತೆ
ದೇಶದ ಚಿಂತೆ ಯಾರಿಗೂ ಇಲ್ಲ ಕಾಣಾ
ಮದಿರಾಪ್ರಿಯ ಮೂಢ ಮತದಾರಾ.....!!!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 9.4.2008.