ತನುವೆಂಬ ಏರಿಗೆ ಮನವೆಂಬ ಕಟ್ಟೆ

  •  
  •  
  •  
  •  
  •    Views  

ಬಾಲ್ಯದ ನೆನಪುಗಳ ಕುದುರೆಯನ್ನೇರಿ ನಾಗಾಲೋಟದಿಂದ ಹಿಂದೆ ಹಿಂದೆ ಓಡುತ್ತಿದ್ದ ಮನಸ್ಸಿನ ಕಣ್ಣುಗಳಿಗೆ ಮೊಟ್ಟಮೊದಲು ಕಾಣಿಸಿದ್ದು ಈ ಮುಂದಿನ ದೃಶ್ಯ:

ಪಿತ್ರಾರ್ಜಿತ ಆಸ್ತಿಗಳಲ್ಲಿ ಒಂದು ಎಲೆ ಬಳ್ಳಿ, ತೋಟವಿತ್ತು. ತೋಟದಲ್ಲಿ ಒಂದು ಕಪಿಲೆ ಬಾವಿ ಇತ್ತು. ಈಗಿನಂತೆ ಆಗ ಬೋರ್ ವೆಲ್ ಗಳು ಅಷ್ಟಾಗಿ ಇರಲಿಲ್ಲ. ತೆರೆದ ಬಾವಿಯ ಮೇಲ್ಬಾಗದಲ್ಲಿಯೇ 8-10 ಅಡಿ ನೀರು ತುಂಬಿದ್ದು ಹಳ್ಳಿಯ ಮಕ್ಕಳಿಗೆ ಹಬ್ಬಹರಿದಿನಗಳಂದು ಹಾರಿಬೀಳುವ ಈಜುಕೊಳವಾಗಿರುತ್ತಿತ್ತು. ಆಗಾಗ್ಗೆ ತೋಟಕ್ಕೆ ನೀರು ಹಾಯಿಸಲು ಪೂರ್ವಾಶ್ರಮದ ತಂದೆತಾಯಿಗಳು ಹೋಗುತ್ತಿದ್ದರು. ಶಾಲೆಗೆ ರಜಾ ಇದ್ದ ದಿನ ನಾವೂ ಜೊತೆಗೆ ಹೋಗುತ್ತಿದ್ದೆವು. ತೋಟದಲ್ಲಿನ ತೆಂಗಿನ ಮರದ ಎಳನೀರಿನ ಸವಿ ವಿಶೇಷ ಆಕರ್ಷಣೆ. ತಂದೆ ಕಾಲುಗಳಿಗೆ ಹಗ್ಗ ಬಿಗಿದುಕೊಂಡು ಬಾವಿಯ ದಂಡೆಯಲ್ಲಿದ್ದ ಎತ್ತರವಾದ ತೆಂಗಿನ ಮರವನ್ನು ಸ್ವತಃ ಹತ್ತಿ ಎಳನೀರು ಕೆಡವಿ ಕೆತ್ತಿ ಕೊಡುತ್ತಿದ್ದರು. ಮರದ ತುದಿಯವರೆಗೆ ಅವರು ಲೀಲಾಜಾಲವಾಗಿ ಹತ್ತುವುದು ಒಂದು ಸಾಹಸದ ದೃಶ್ಯವಾಗಿದ್ದರೆ ಎಳನೀರನ್ನು ಅಂಗಿಯ ಮೇಲೆ ಚೆಲ್ಲದಂತೆ ಕುಡಿಯುವುದು ನಮ್ಮ ಸಾಹಸಕಾರ್ಯವಾಗಿತ್ತು. ಕುಡಿದ ಮೇಲೆ ತೆಂಗಿನಕಾಯನ್ನು ಹೋಳು ಮಾಡಿ ಅದರ ಒಂದು ಭಾಗವನ್ನು ಕೆತ್ತಿ ಚಮಚವನ್ನಾಗಿ ಮಾಡಿಕೊಡುತ್ತಿದ್ದರು. ಆ ಚಮಚದಲ್ಲಿ ಎಳೆಯ ಕೊಬ್ಬರಿಯನ್ನು ತಿನ್ನುವುದೆಂದರೆ ಸಗ್ಗ ಸುಖ. ತಿಂದು ಬಿಸಾಡುತ್ತಿದ್ದ ತೆಂಗಿನ ಹೋಳುಗಳಿಗಾಗಿ ದೂರದಲ್ಲಿಯೇ ನಿಂತು ಗುರ್ ಎಂದು ಹಲ್ಲು ಕಿರಿಯತ್ತಾ ಕಣ್ಣುಪಿಳುಕಿಸುತ್ತಿದ್ದ ಕೆಂಪುಮೂತಿಯ ಕೋತಿಗಳು ಹೊಂಚುಹಾಕುತ್ತಿದ್ದವು. ಕೊಬ್ಬರಿಯನ್ನು ತಿನ್ನದೆ ಅವುಗಳತ್ತ ಬಿಸಾಡಿದಾಗ ಅವು ಓಡಿಹೋಗಿ ಕೈಯಲ್ಲಿ ಹಿಡಿದುಕೊಂಡು ಕೊಬ್ಬರಿಯನ್ನು ಹೆಕ್ಕಿ ಬಾಯ್ತುಂಬ ಇಟ್ಟುಕೊಂಡು ಜಗಿದು ತಿನ್ನುವ ದೃಶ್ಯ ಖುಷಿಯನ್ನುಂಟು ಮಾಡುತ್ತಿತ್ತು! ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ 15 ದಿನ ಮುಂಚಿತವಾಗಿ ಬರುವ ಭೂಮಿಹುಣ್ಣಿಮೆಯಂದು ನಮ್ಮ ಪೂರ್ವಾಶ್ರಮದ ತಾಯಿ ಎಲೆಬಳ್ಳಿಯ ಮರಕ್ಕೆ ಹೊಸ ಸೀರೆಯನ್ನು ಉಡಿಸಿ, ಬಳೆಗಳನ್ನು ತೊಡಿಸಿ, ತಮ್ಮ ಮೈಮೇಲಿನ ಒಡವೆಗಳನ್ನೇ ಅದಕ್ಕೆ ಹಾಕಿ ಅಲಂಕರಿಸಿ, ಪೂಜೆ ಮಾಡಿ ಪಾದೋದಕವನ್ನು ತೋಟದಲ್ಲೆಲ್ಲಾ ಸಿಂಪಡಿಸಿ ನಂತರ ಬಾಳೆ ಎಲೆಯಲ್ಲಿ ಬಡಿಸುತ್ತಿದ್ದ ಹಬ್ಬದ ಅಡುಗೆಯ ಸವಿ ವರ್ಣಿಸಲಸದಳ! ಸಾಹಿತ್ಯ ಕೃತಿಗಳಲ್ಲಿ ಬರುವ ವನದೇವತೆಯ ಪರಿಕಲ್ಪನೆ ಆಗ ಎಳೆವಯಸ್ಸಿನಲ್ಲಿ ಇರಲಿಲ್ಲ.

ತಂದೆ ಎತ್ತುಗಳನ್ನು ಹೂಡಿ ಕಪಿಲೆ ಬಾವಿಯಿಂದ ನೀರು ಹೊಡೆದರೆ, ತಾಯಿ ಕಾಲುವೆಯಲ್ಲಿ ಹರಿದು ಬರುವ ನೀರನ್ನು ಸಲಿಕೆಯಲ್ಲಿ ತಿರುವಿ ಎಲೆಬಳ್ಳಿಗೆ, ಮಧ್ಯೆ ಮಧ್ಯೆ ಇದ್ದ ಬಾಳೆ ಮತ್ತು ತೆಂಗಿನ ಗಿಡಗಳಿಗೆ ಹಾಯಿಸುತ್ತಿದ್ದರು. ತಾಯಿಯ ಸಮೀಪದಲ್ಲಿದ್ದು ಕಾಲುವೆಯೊಳಗೆ ನಿಂತು ಹರಿದು ಬರುತ್ತಿದ್ದ ನೀರಿನಲ್ಲಿ ಆಟವಾಡುತ್ತಿದ್ದೆವು. ತೆಂಗಿನ ಚಿಪ್ಪಿನಲ್ಲಿರುವ ಮೂರು ಕಣ್ಣುಗಳಲ್ಲಿ ಒಂದನ್ನು ತೂತು ಮಾಡಿ ಅದಕ್ಕೆ ಸೈಕಲ್ಟ್ಯೂಬ್ ನೆಕ್ಕನ್ನು ಅಳವಡಿಸಿ ಅದರ ತುದಿಗೆ ರಬ್ಬರ್ ಟ್ಯೂಬನ್ನು ಜೋಡಿಸಿ ದಾರ ಕಟ್ಟಿ ಕಪಿಲೆ ಬಾವಿಯಿಂದ ನೀರನ್ನು ಎತ್ತುವಂತೆ ಕಾಲುವೆಯ ನೀರಿನಲ್ಲಿ ನಾವು ಆಡುತ್ತಿದ್ದ ಆಟ. ಬಾಳೆಗಿಡದ ಮೇಲಿನ ಬಾಳೆಮೂತಿಯಿಂದ ಉದುರಿಬಿದ್ದ ಅಂಗೈಯಾಕಾರದ ಹೊಂಬಣ್ಣದ ಎಲೆಗಳನ್ನು ಕಾಲುವೆಯ ನೀರಿನಲ್ಲಿ ದೋಣಿಯಂತೆ ತೇಲಿ ಬಿಟ್ಟು ಖುಷಿಪಡುತ್ತಿದ್ದೆವು. ಒಮ್ಮೆ ಎಲೆಬಳ್ಳಿಯ ಕೊನೆಯ ಸಾಲನ್ನು ತಲುಪುತ್ತಿದ್ದಂತೆಯೇ ಬಾವಿಯ ನೀರು ಬರಿದಾಯಿತು. ತಂದೆ ಕಪಿಲೆ ಹೊಡೆಯುವುದನ್ನು ನಿಲ್ಲಿಸಿ ತೆರೆದ ಬಾವಿಯೊಳಗೆ ಇಳಿದು ಕೆಸರಿನ ಗುಂಡಿಯನ್ನು ಅಗಲಮಾಡಿ ನೀರನ್ನು ಮೊಗೆದು ಕಪಿಲೆಯ ಬಾನಿಗೆ ತುಂಬಿಸುತ್ತಿದ್ದರು. ತಾಯಿ ಬಾವಿಯ ದಡದಲ್ಲಿ ಬೆಳೆದು ನಿಂತಿದ್ದ ಹಸಿ ಮೆಣಸಿನಕಾಯಿಗಳನ್ನು ಬಿಡಿಸಿಕೊಳ್ಳುತ್ತಿದ್ದರು. ಬಾವಿಯ ಕಟ್ಟೆಯ ಮೇಲಿಂದ ನಿಂತು ಕುತೂಹಲದಿಂದ ನೋಡುತ್ತಿದ್ದ ನಮ್ಮನ್ನು ಬಿದ್ದೀಯಾ, ಜೋಕೆ! ಎಂದು ತಾಯಿ ಎಚ್ಚರಿಸುತ್ತಿದ್ದರು. ನೋಡು ನೋಡುತ್ತಿದ್ದಂತೆಯೇ ಆಗಬಾರದ ಅನಾಹುತ ಆಗಿಯೇ ಹೋಯಿತು. ಬಾವಿಯ ಕಟ್ಟೆಯ ಮೇಲಿಂದ ಕಾಲು ಜಾರಿ ಬಿದ್ದು ಮಧ್ಯದಲ್ಲಿ ತಲೆಗೆ ಕಲ್ಲು ಬಡಿದು ರಕ್ತ ಚಿಮ್ಮತೊಡಗಿತು. ಅಮ್ಮಾ ಎಂದು ಅಳುತ್ತಾ ಕೆಸರಲ್ಲಿ ಬಿದ್ದ ನಮ್ಮನ್ನು ತಂದೆ ಮೇಲೆತ್ತಿಕೊಂಡು ಬಾವಿಯ ದಂಡೆಗೆ ತಂದರು. ಕೆಸರಿನ ಗುಂಡಿಯಲ್ಲಿ ಬಿದ್ದ ಕಾರಣ ಮೈತುಂಬಾ ಕೆಸರು ಮೆತ್ತಿಕೊಂಡಿದ್ದು ಮೈಗೆ ಪೆಟ್ಟಾಗಿರಲಿಲ್ಲ. ಆದರೆ ಬಾವಿ ಕಟ್ಟೆಯ ಕಲ್ಲು ತಲೆಗೆ ಬಡಿದ ಕಾರಣ ತೀವ್ರ ರಕ್ತಸ್ರಾವವಾಗುತ್ತಿತ್ತು. ಅದನ್ನು ಕಂಡು ಘಾಸಿಗೊಂಡ ತಾಯಿ ಉಟ್ಟ ಸೀರೆ ಕೆಸರಾಗುವುದನ್ನೂ, ರಕ್ತಮಯವಾಗುವುದನ್ನೂ ಲೆಕ್ಕಿಸದೆ ನಮ್ಮನ್ನು ಬಿಗಿದಪ್ಪಿಕೊಂಡು ಸುರಿಸುತ್ತಿದ್ದ ಕಣ್ಣೀರು ಬತ್ತಿದ ಬಾವಿಯನ್ನು ತುಂಬುವಂತಿತ್ತು! ಪ್ರೀತಿವಾತ್ಸಲ್ಯಗಳಿಂದ ತುಂಬಿ ತುಳುಕುತ್ತಿದ್ದ ತಾಯ ಮಡಿಲಲ್ಲಿ ಕ್ಷಣಾರ್ಧದಲ್ಲಿ ಮೂರ್ಛಹೋದೆವು. ಮುಂದೇನಾಯಿತೆಂಬುದು ತಿಳಿಯಲಿಲ್ಲ. ಮೆಲ್ಲ ಮೆಲ್ಲನೆ ಎಚ್ಚರವಾದಾಗ ಮನೆಯ ಮುಂಭಾಗದ ಜಗುಲಿಯ ಮೇಲೆ ಗಾಳಿಗೆ ಮಲಗಿಸಿದ್ದರು. ಸುತ್ತ ಹಳ್ಳಿಯ ಜನ ಜಮಾಯಿಸಿದ್ದರು! ತೆಂಗಿನಕಾಯಿಯ ಜುಟ್ಟಿನ ಬಳಿ ಇರುವ ಕಣ್ಣಿನಂತೆ ನಮ್ಮ ತಲೆ ತೂತಾಗಿತ್ತು! ಅದರ ಗುರುತು ಈಗಲೂ ನಮ್ಮ ನೆತ್ತಿಯ ಮೇಲಿದ್ದು ಸ್ನಾನಮಾಡುವಾಗ ಬಾಲ್ಯದ ಈ ಘಟನೆಯನ್ನು ನೆನಪಿಸುತ್ತಿರುತ್ತದೆ.

ಕಳೆದ ಎರಡು ವಾರಗಳಿಂದ ಬಹಿರಂಗವಾಗಿ ಹಂಚಿಕೊಂಡ ಈ ಕೆಲವು ವೈಯಕ್ತಿಕ ಘಟನಾವಳಿಗಳು ಓದುಗರ ಮನಸ್ಸನ್ನು ಕಲಕಿವೆ. ಹೃದಯವನ್ನು ತಟ್ಟಿ ಅವರ ಕಣ್ಣಂಚನ್ನು ಹನಿಗೂಡಿಸಿವೆ. ಒಂದನ್ನು ಓದಿದಾಗ ಉದ್ಭವಿಸಿದ ಪ್ರಶ್ನೆಗಳಿಗೆ ಮತ್ತೊಂದನ್ನು ಓದಿದಾಗ ಉತ್ತರ ಸಿಕ್ಕಿದೆಯೆಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರಿಗೆ ಹೆಚ್ಚಿನ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಕೆಲವರು ತುಂಬಾ ಭಾವುಕರಾಗಿ ಪ್ರತಿಕ್ರಿಯಿಸಿದರೆ ಇನ್ನು ಕೆಲವರು ಗಂಭೀರವಾದ ಪ್ರಶ್ನೆಗಳನ್ನು ಹಾಕಿದ್ದಾರೆ. ಪೂರ್ವಾಶ್ರಮದ ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗದೆ ಆಶ್ರಮಧರ್ಮವನ್ನು ಪಾಲಿಸಿದ್ದಕ್ಕೆ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಹೋಗದೇ ಇರುವುದು ತಪ್ಪು ಎಂದು ಮತ್ತೆ ಕೆಲವರು ಆಕ್ಷೇಪದ ದನಿ ಎತ್ತಿದ್ದಾರೆ. ಕೆಲವರು ನಮಗೆ ಎದುರಾದ ಧರ್ಮಸಂಕಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಉದಯಶಂಕರ್ ಅವರು Thank you for making me cry ಎಂದು ಅಭಿನಂದಿಸುತ್ತಾ ಅವರ ಈ ಅಳುವಿಗೆ ಸ್ವಾಮಿಗಳ ತ್ಯಾಗ ಕಾರಣವಿರಬಹುದೇ ಅಥವಾ ಅಪರಿಚಿತಳಾದ ಅವರ ತಾಯಿಯ ತ್ಯಾಗವಿರಬಹುದೇ ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಂಡು ಆತ್ಮನಿರೀಕ್ಷಣೆ ಮಾಡಿಕೊಂಡಿದ್ದಾರೆ. ನಮ್ಮ ದೃಷ್ಟಿಯಲ್ಲಿ ಅವೆರಡೂ ಅಲ್ಲ. ನಮ್ಮದು ಬಹು ದೊಡ್ಡ ತ್ಯಾಗ ಎನ್ನಲು ನಮ್ಮ ಹತ್ತಿರ ಗೌತಮ ಬುದ್ಧನಂತೆ ಇದ್ದ ಸಾಮ್ರಾಜ್ಯವಾದರೂ ಏನು? ಓದುಗರ ಭಾವುಕತೆಗೆ, ಅವರ ಕಣ್ಣುಗಳು ತೇವಗೊಳ್ಳುವುದಕ್ಕೆ ನಿಜವಾದ ಕಾರಣ ಅವರವರ ತಾಯಂದಿರ ಮೇಲೆ ಅವರವರಿಗೆ ಇರುವ ಗಾಢವಾದ ಪ್ರೀತಿ, ಜೀವನದ ಮೌಲ್ಯಗಳ ಮೇಲೆ ಅವರಿಗಿರುವ ಗೌರವ. ಅದುವೇ ಅವರ ತಾಯಂದಿರು ನೀಡಿದ ಉತ್ತಮ ಸಂಸ್ಕಾರ. ನಮ್ಮ ಬಾಲ್ಯಜೀವನದ ಘಟನಾವಳಿಗಳು ನಿಮಿತ್ತ ಮಾತ್ರ. ನಮ್ಮ ಪೂರ್ವಾಶ್ರಮದ ತಾಯಿ ಅವರಿಗೆ ಅಪರಿಚಿತಳಿರಬಹುದು. ಆದರೆ ಜಗತ್ತಿನಲ್ಲಿ ತಾಯ್ತನ ಎನ್ನುವುದು ಒಂದು ಎಂಬುದಕ್ಕೆ ಓದುಗರ ಈ ಪ್ರತಿಕ್ರಿಯೆಗಳೇ ಸಾಕ್ಷಿ! ಬಹಳ ಹಿಂದೆ ಆಂಗ್ಲಭಾಷೆಯಲ್ಲಿ ಬರೆದ Communal Conflicts in India ಎಂಬ ನಮ್ಮ ಲೇಖನದಲ್ಲಿರುವ ಈ ಮುಂದಿನ ಸಾಲುಗಳನ್ನು ಗಮನಿಸಿ: A mothers heart knows no religion. Her only religion is the love for her child. The pain and agony a Hindu mother suffers at heart when she loses her loving son cannot be different from that of a Muslim mother and vice versa.

ವಕೀಲರೊಬ್ಬರಾದ ವೇಣು ಭಾವುಕತೆಯಲ್ಲೂ ವಿಚಾರಪರರಾಗಿ ಸಂನ್ಯಾಸ ತೆಗೆದುಕೊಳ್ಳುವುದು ಯಾವ ಮಹಾ ಕಾರ್ಯ ಮಹಾಸ್ವಾಮಿ ಇಂತಹ ತಾಯಂದಿರ ತ್ಯಾಗದ ಮುಂದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. I could not but cry when I read about your Predicament (Dharmasankata)of not being able to help even while your mother was in the hospital bed. Who could say that she was an illiterate; She had all the wisdom of the world. Oh, such a humble and noble soul ಎಂದು ತಂತ್ರಜ್ಞರಾದ ಆರ್.ಎಂ.ದಯಾನಂದ ಎಂಬುವರು ಗುಣಗಾನ ಮಾಡಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರು ಸ್ವತಃ ತಾಯಿಯಾಗಿ ಕೇಳಿದ ಪ್ರಶ್ನೆ ನಮ್ಮ ಊಹೆಗೂ ನಿಲುಕದು. ತಾಯಿಯ ಹೃದಯವನ್ನು ತಾಯಿಯೇ ಬಲ್ಲಳು. ಬಂಜೆ ತಾಯಿಯ ಬೇನೆಯನರಿವಳೆ, ಮಲತಾಯಿ ಮುದ್ದ ಬಲ್ಲಳೇ? ನೊಂದವರ ನೋವ ನೋಯದವರೆತ್ತಬಲ್ಲರು? ಎಂಬ ಅಕ್ಕಮಹಾದೇವಿಯ ವಚನವನ್ನು ನೆನಪಿಸುತ್ತದೆ. ಸಮಾಜ ಸೇವೆಯೇ ತಮ್ಮ ಕರ್ತವ್ಯವೆಂದು ತಿಳಿದು ಅದರಲ್ಲಿಯೇ ತಲ್ಲೀನರಾದ ತಮಗೆ ಕಿಂಚಿತ್ತಾದರೂ ಮನಸ್ಸು ಪರಿತಪಿಸುವಂತಾದರೆ ಆ ತಾಯಿಯ ಮನಸ್ಸು ಅವಳ ಪ್ರತಿ ಹೆಜ್ಜೆಗೂ ಪರಿತಪಿಸುವಂತೆ ಆಗಿರಲಿಕ್ಕಿಲ್ಲವೇ? ಎಂಬ ಶ್ರೀಮತಿ ಶಕುಂತಲಾ ಬಾಗಲಕೋಟೆಯವರ ಪ್ರಶ್ನೆ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದ ಈ ಮುಂದಿನ ಪ್ರಸಿದ್ದ ಶ್ಲೋಕದ ಅರ್ಥಕ್ಕೆ ಹೊಸ ಆಯಾಮವನ್ನು ನೀಡಿದೆ:

ಯಾಸ್ಯತ್ಯದ್ಮ ಶಕುಂತಲೇತಿ ಹೃದಯಂ ಸಂಸ್ಷೃಷ್ಟಮುತ್ಕಂಠಯಾ 
ಕಂಠಃ ಸ್ತಂಭಿತಭಾಷ್ಪವೃತ್ತಿಕಲುಷಃ ಚಿಂತಾಜಡಂ ದರ್ಶನಂ 
ವೈಕ್ತವ್ಯಂಮಮತಾವದೀದೃಶಮಿದಂಸ್ನೇಹಾದಣ್ಯೌರಕಸಃ 
ಪೀಡ್ಯಂತೆಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈ?

ಸಾಕುಮಗಳಾದ ಶಕುಂತಲೆಯನ್ನು ಕುರಿತು ಕಣ್ವ ಮಹರ್ಷಿಗಳ ಹೃದಯದಲ್ಲಿ ಆವಿರ್ಭವಿಸಿದ ಮಧುರಭಾವನೆಗಳನ್ನು ಕಾಳಿದಾಸ ಹೃದಯಂಗಮವಾಗಿ ಇಲ್ಲಿ ಸೆರೆಹಿಡಿದಿದ್ದಾನೆ. ಪ್ರೀತಿಯ ಸಾಕುಮಗಳಾದ ಶಕುಂತಲೆ ಪ್ರೀತಿಸಿ ಮದುವೆಯಾದ ಚಕ್ರವರ್ತಿ ದುಷ್ಯಂತನ ಅರಮನೆಗೆ ಹೊರಟುನಿಂತಿದ್ದಾಳೆ. ಅವಳನ್ನು ನೋಡಿ ಕಣ್ವಮಹರ್ಷಿಗಳ ಕಂಠ ಬಿಗಿಯುತ್ತದೆ. ಕಣ್ಣುಗಳು ಹನಿಗೂಡುತ್ತವೆ. ಸಾಂಸಾರಿಕ ಜೀವನದಿಂದ ದೂರವಿದ್ದು ವೀತರಾಗನಾಗಿರಬೇಕಾದ ಯತಿಯಾದ ತನ್ನ ಮನಸ್ಸಿನಲ್ಲಿಯೇ ಸಾಕುಮಗಳಾದ ಶಕುಂತಲೆಯ ಅಗಲಿಕೆಯಿಂದ ಈ ರೀತಿ ಮನಸ್ಸು ವಿಹ್ವಲಗೊಳುತ್ತಿದೆ. ಹೀಗಿರುವಾಗ ನಿಜವಾದ ಹೆತ್ತ ತಂದೆತಾಯಿಗಳಿಗೆ ತಮ್ಮ ಮಗಳು ಗಂಡನ ಮನೆಗೆ ಹೊರಟುನಿಂತಾಗ ಆಗುವ ಸಂಕಟ ನೋವು ಅದೆಷ್ಟು ಇರಬಹುದು ಎಂದು ಉದ್ಗರಿಸುತ್ತಾರೆ ಕಣ್ವ ಮಹರ್ಷಿಗಳು!

ಅಧ್ಯಾತ್ಮ ಎಂದರೇನು? ಭಾವನೆಗಳನ್ನು ಮೆಟ್ಟಿ ನಿಲ್ಲುವುದೇ ಅಧ್ಯಾತ್ಮವೇ? ಅದನ್ನು ಬಿಟ್ಟು ಬೇರೆ ಮಾರ್ಗ ಇಲ್ಲವೇ? ಸ್ವಾಮಿ, ಸಂನ್ಯಾಸಿ ಆಗದೆ ಸಾಮಾನ್ಯ ಲೌಕಿಕವ್ಯಕ್ತಿಯಾಗಿದ್ದುಕೊಂಡು ತ್ಯಾಗ, ಪರಹಿತ ಸಾಧನೆ ಮಾಡಲು ಬರುವುದಿಲ್ಲವೇ? ಸತ್ಯ, ಧರ್ಮ, ಪ್ರಾಮಾಣಿಕತೆ ಇವುಗಳನ್ನು ಪಾಲಿಸಿಕೊಂಡು ಮುನ್ನಡೆಯಲು ಆಗುವುದಿಲ್ಲವೇ? ಗೃಹಸ್ಥರಾಗಿದ್ದುಕೊಂಡು ದೇವರ ಸಾಕ್ಷಾತ್ಕಾರ ಪಡೆಯಲು ಸಾಧ್ಯವಿಲ್ಲವೇ? ಎಂಬುದು ಇನ್ನೋರ್ವ ವಿಚಾರಶೀಲ ಓದುಗರಾದ ಕು.ಭಾರ್ಗವಿ ಭಟ್ ಅವರಿಗೆ ಕಾಡಿಸುತ್ತಿರುವ ಪ್ರಶ್ನೆಗಳು. ಇದಕ್ಕೆ ಯಾವ ದಾರ್ಶನಿಕರು ಇಲ್ಲವೆನ್ನುತ್ತಾರೆ?

ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು
ಸತಿಪತಿರತಿಸುಖಭೋಗೋಪಭೋಗ ವಿಲಾಸವ ಬಿಟ್ಟನೆ ಸಿಂಧುಬಲ್ಲಾಳನು
ನಿಮ್ಮ ಮುಟ್ಟಿ ಪರಧನ ಪರಸತಿಯರಿಗೆಳಸಿದರೆ
ನಿಮ್ಮ ಚರಣಕ್ಕೆ ದೂರ, ಕೂಡಲಸಂಗಮ ದೇವಾ!

ಎನ್ನುತ್ತಾರೆ ‘ಗೃಹಸ್ಥ ಜಗದ್ಗುರು’ ಬಸವಣ್ಣನವರು. ಮಹಾಭಾರತದ ಕಥೆಯೊಂದರಲ್ಲಿ ಮನೆಯ ಮುಂದೆ ಭಿಕ್ಷಾಂ ದೇಹಿ ಎಂದು ನಿಂತ ಸಂನ್ಯಾಸಿ ತಡವಾಗಿ ಭಿಕ್ಷೆಯನ್ನು ತಂದ ಗೃಹಿಣಿಯನ್ನು ಸಿಟ್ಟಿನಿಂದ ನೋಡಿದಾಗ ಕಾಡಿನಲ್ಲಿ ನಿನ್ನ ಸಿಟ್ಟಿನಿಂದ ಸುಟ್ಟುಬೂದಿಯಾದ ಮರದ ಮೇಲಿನ ಕಾಗೆ ನಾನಲ್ಲ! ಎಂದು ಉತ್ತರಿಸಿದ ಧೀರ ಸದ್ಗೃಹಿಣಿಯ ಕಥೆ ನಿಮಗೆ ಗೊತ್ತಿರಬೇಕಲ್ಲವೇ? ಒಂದು ಮಠದ ಸ್ವಾಮಿಗಳಾಗುವುದಕ್ಕಿಂತ ಒಂದು ಮನೆಯ ಸೊಸೆಯಾಗಿ ಸೈ ಎನಿಸಿಕೊಳ್ಳುವುದು ಬಹಳ ಕಷ್ಟ! ಋಜುಮಾರ್ಗದಲ್ಲಿ ನಡೆಯಬೇಕೆಂದು ಬಯಸುವ ವ್ಯಕ್ತಿ ಸ್ವಾಮಿಯಾದರೇನು, ಗೃಹಸ್ಥನಾದರೇನು ಜೀವನದ ಸವಾಲುಗಳಿಂದ ಹೊರತಾಗಿಲ್ಲ. ಸತ್ಯಮಾರ್ಗದಲ್ಲಿ ನಡೆಯ ಬಯಸುವವನು ಬದುಕಿನಲ್ಲಿ ಕಷ್ಟಕೋಟಲೆಗಳನ್ನು ಅನುಭವಿಸಲು ಸಿದ್ಧನಿರಬೇಕಾಗುತ್ತದೆ. ಅವುಗಳ ಕೊರಗಿನಲ್ಲಿ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದಿದ್ದರೆ ಮಾತ್ರ ದೇವರ ಸಾಕ್ಷಾತ್ಕಾರ ದೊರೆಯಲು ಸಾಧ್ಯ. God sees the truth but waits ಎಂಬ ಟಾಲ್ ಸ್ಟಾಯ್  ಕಥೆಯನ್ನು ಆಧರಿಸಿ ಇದೆ ಅಂಕಣದಲ್ಲಿ ಬರೆದ ‘ಸತ್ಯಮೇವ ಜಯತೇ’! ಎಂಬ ಲೇಖನ ಇಲ್ಲಿ ಸ್ಮರಣೀಯ

ಉಕ್ಕಿಬರುವ ಕಾವೇರಿಯ ನೀರನ್ನು ಹಿಡಿದಿಟ್ಟ ಕನ್ನಂಬಾಡಿ ಕಟ್ಟೆಯಿಂದ ಹೊಲಗದ್ದೆಗಳಿಗೆ ನೀರು ಪೂರೈಕೆಯಾದಂತೆ ಹೃದಯದ ಲೌಕಿಕ ಭಾವನೆಗಳ ಮಹಾಪೂರವನ್ನು ಹಿಡಿದಿಟ್ಟಾಗ ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥಸೇವೆ ಸಲ್ಲುತ್ತದೆ. ಆದರೆ ಕಟ್ಟೆ ಒಡೆಯದಂತೆ ಸಮತೆಯನ್ನು ಕಾಪಾಡಿಕೊಳ್ಳುವುದು ಸಮಾಜದ ಗೌರವಾನ್ವಿತ ಸ್ಥಾನದಲ್ಲಿರುವ ಮಠಪೀಠಗಳ ಸ್ವಾಮಿಗಳ ಕರ್ತವ್ಯ. ಹೃದಯದ ಭಾವನೆಗಳನ್ನು ಮೆಟ್ಟಿನಿಲ್ಲುವುದೆಂದರೆ ಅವುಗಳನ್ನು ಹತ್ತಿಕ್ಕುವುದಲ್ಲ (suppression), ಆ ಭಾವನೆಗಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವುದು (sublimation). ಆ ದಾರಿಯಲ್ಲಿ ಮುಂದೆ ಸಾಗುವುದೇ ಅಧ್ಯಾತ್ಮಸಾಧನೆ. ಆಗ ತನ್ನವರೆಂದು ಯಾರೂ ಇರುವುದಿಲ್ಲ: ಎಲ್ಲರೂ ತನ್ನವರಾಗಿರುತ್ತಾರೆ! ಈ ಹಿನ್ನೆಲೆಯಲ್ಲಿ ಬರೆದ ನಮ್ಮ ವಚನ:

ಬೆಳ್ಳಿ, ತೊಟ್ಟಿಲು
ಶಿಷ್ಯರ ಮನೆಯ ಪಾದಪೂಜೆಯೇ ಅಭ್ಯಂಜನವಾಯಿತ್ತು
ಬೆಳ್ಳಿ ಪಲ್ಲಕ್ಕಿಯೇ ತೊಟ್ಟಿಲಾಯಿತ್ತು!

ನಡುನೆತ್ತಿಯ ನೇಸರನ ಉರಿಬಿಸಿಲೇ ನಡುನಡುಗಿ
ಬೆಳುದಿಂಗಳಾಯಿತ್ತು 
ಹಿಡಿದ ಛತ್ರಿಚಾಮರ ಬಿರುದು ಬಾವಲಿ ಆಟಿಕೆಯಾಯಿತ್ತು
ಬೀಸುವ ಬಿಸಿಗಾಳಿ ಭಕ್ತಿಯ ನಿಃಶ್ವಸನದಲಿ ತಂಗಾಳಿಯಾಯಿತ್ತು 
ಕುಣಿದು ಕುಪ್ಪಳಿಸಿದ ಶಿಷ್ಯರ ಕೂಗಾಟ ಆರ್ಭಟಗಳೇ ಝೇಂಕಾರವಾಯಿತ್ತು
"ಜೈ"ಕಾರದ ಜೋಗುಳದಲ್ಲಿ ಜೋಂಪು ಆವರಿಸಿತ್ತು!

ಮೆರವಣಿಗೆಯ ಬೀದಿಗಳಲ್ಲಿ ಭೋರ್ಗರೆದು ಉಕ್ಕಿ ಹರಿದಿತ್ತು 
ಭಕ್ತಿರಸಗಂಗೆ 
<"ನಾಡಿಗೆ ಬರ ಬಂದರೂ ಭಕ್ತರ ಭಕುತಿಗೆ ಬರ ಇಲ್ಲ"ವೆಂದು
ಸಾರಿ ಸಾರಿ ಹೇಳಿತ್ತು!

ಓಣಿಯೊಂದರ ಕೋರೆದಾಡಿಯ ಶೂರ್ಪನಖಿ ಪೂತನಿ ಬಂದಳು
"ಯಾವ ಜಗತ್ತಿಗೆ ಜಗದ್ಗುರು"ವೆಂದು ಶುಂಠಿ ಕೊಂಬ ಕೊಟ್ಟಳು 
ಸುಖನಿದ್ರೆಯಲಿದ ಹಸುಗೂಸು ಕಿಟಾರನೆ ಕಿರುಚಿತು
ಝಾಡಿಸಿ ಒದೆಯಿತು ಪೂತನಿಯ ಮುಖಕೆ ಬಾಸುಂಡೆ 
ಬರುವಂತೆ!

ಜನಸಾಗರದಲ್ಲಿ ಮಿಂದು ನಲಿದೆದ್ದ ಗಜಗಮನೆ ಗೌರಿ ಬಂದಳು 
ತರಳಬಾಳು ಮಠದ ಪಟ್ಟದಾನೆ ಗೌರಿ ಬಂದಳು
ಬೆಳ್ಳಿತೊಟ್ಟಿಲ ಕೂಸ ಮುತ್ತಿಟ್ಟು "ತರಳಬಾಳೆಂ"ದು ಕೆನ್ನೆ ಸವರಿದಳು
ಕಿಲಕಿಲನೆ ನಗುತ್ತಿದ್ದ ಹಸುಗೂಸನಾ ನಳಿನಾಕ್ಷಿ
ಮೇಲೆತ್ತಿ ಕೈಚೆಲ್ಲಿ ಬೀಳುತಲೆ ಬಿಗಿದಪ್ಪಿ ಮೈದಡವಿದಳು!
ಇದ್ದರೂ ಇಲ್ಲದಂತಿದ್ದ ತಾಯಿಯೊಬ್ಬಳು ಇಲ್ಲವಾದರೇನಂತೆ
ಕೋಟಿ ಕೋಟಿ ತಾಯಂದಿರ ಅಕ್ಕರೆಯ ಕಂದಮ್ಮನಾದ
ಪರಿಯ ನೋಡಾ ಸದ್ಧರ್ಮ ಸಿಂಹಾಸನಾಧೀಶ್ವರಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 2.9.2009.