ರಾಜಕೀಯ ದೊಂಬರಾಟ....

  •  
  •  
  •  
  •  
  •    Views  

Politics is the last resort of a scoundrel” (ರಾಜಕೀಯವು ಫಟಿಂಗನ ಕೊನೆಯ ತಾಣ) ಎಂಬ ಮಾತನ್ನು ನೀವು ಕೇಳಿರಬೇಕಲ್ಲವೇ? ಆದಕಾರಣವೇ ಏನೋ ಇತ್ತೀಚಿನ ದಿನಮಾನಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ರಿಸಾರ್ಟ್ಗಳಲ್ಲಿಯೇ ಹೆಚ್ಚು ನಡೆಯುತ್ತಾ ಬಂದಿವೆ! ಎಲ್ಲಿಯೂ ಗತಿ ಮುಟ್ಟದವನು ರಾಜಕೀಯಕ್ಕೆ ಬರುತ್ತಾನೆ ಎಂಬ ಮಾತಿನ ಧಾಟಿ ಇದರಲ್ಲಿದೆ. ಅಂದರೆ ಬೇರೆ ಯಾವುದಕ್ಕೂ ನಾಲಾಯಕ್ ಆದವನು ರಾಜಕೀಯವನ್ನು ಆಯ್ಕೆ ಮಾಡಿಕೊಳ್ಳುತ್ತಾನೆಂದು ಇದರ ಭಾವಾರ್ಥ, ಕೆಲವೊಂದು ಪ್ರಚಲಿತ ನುಡಿಗಟ್ಟುಗಳು ಎಷ್ಟು ಆಕರ್ಷಕವಾಗಿರುತ್ತವೆಯೆಂದರೆ ಅವುಗಳನ್ನು ಪದೇ ಪದೇ ಬಳಸಿ ಅಭ್ಯಾಸ ಉಂಟಾಗಿ ಮೂಲ ಚಿಂತಕರ ಆ ಮಾತುಗಳ ಬಗ್ಗೆ ಮರುಚಿಂತನೆ ಮಾಡುವ ಗೋಜಿಗೇ ಹೋಗುವುದಿಲ್ಲ. ಅಂತಹ ಪ್ರಚಲಿತ ಮಾತುಗಳಲ್ಲಿ ಇದೂ ಒಂದು. ಇವತ್ತು ನಲ್ಲಿಯಲ್ಲಿ ನೀರು ಬರುತ್ತಿಲ್ಲ, ಏಕೆ? ಎಂದರೆ ನಿನ್ನೆಯೂ ಬಂದಿದ್ದಿಲ್ಲ. ನಿನ್ನೆ ಏಕೆ ಬರಲಿಲ್ಲ? ಮೊನ್ನೆಯೂ ಬಂದಿದ್ದಿಲ್ಲ...... ಹೀಗೆ ನಿನ್ನೆ, ಮೊನ್ನೆ, ಆಚೆ ಮೊನ್ನೆ, ಅದರ ಆಚೆ ಆಚೆವರೆಗೆ ಮಾತು ಹಿಂದು ಹಿಂದಕ್ಕೆ ಹೋಗುತ್ತದೆ. ನಿನ್ನೆ ನೀರು ಬರದೇ ಇದ್ದುದೇ ಇವತ್ತು ಬರದೇ ಇರುವುದಕ್ಕೆ ಕಾರಣವಾಗುತ್ತದೆ. ಆದರೆ ನಿನ್ನೆ, ಮೊನ್ನೆ, ಆಚೆ ಮೊನ್ನೆ ಏಕೆ ನೀರು ಬಂದಿರಲಿಲ್ಲವೆಂಬುದಕ್ಕೆ ನಿಜವಾದ ಕಾರಣವನ್ನು ಹುಡುಕುವ ಗೋಜಿಗೇ ಹೋಗುವುದಿಲ್ಲ. ಅದು ಹೀಗೇನೆ, ಏನೂ ಮಾಡಲು ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದು ಇದು ನಮ್ಮ ಕರ್ಮ ಎಂದು ಜನರು ಅದಕ್ಕೆ ಹೊಂದಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆಯೇ ಹೊರತು, ಅದಕ್ಕೆ ನಿಜವಾದ ಕಾರಣವನ್ನು ಹುಡುಕುವ, ಪ್ರಶ್ನಿಸುವ ಮತ್ತು ಅದನ್ನು ಸರಿಪಡಿಸುವ ಮನೋಧರ್ಮವನ್ನು ಬೆಳಿಸಿಕೊಳ್ಳುವುದಿಲ್ಲ. ರಾಜಕೀಯವು ಫಟಿಂಗರ ಕೊನೆಯ ತಾಣ ಎಂದರೆ ಫಟಿಂಗರೂ ಸಹ ರಾಜಕೀಯವನ್ನು ತಕ್ಷಣವೇ ಆಯ್ಕೆ ಮಾಡಿಕೊಳ್ಳುವುದಿಲ್ಲ. ಬೇರೆ ಎಲ್ಲಾ ಕಡೆ ಪ್ರಯತ್ನ ಮಾಡಿ ಎಲ್ಲಿಯೂ ಸರಿಹೋಗದ ಕಾರಣ ಕೊನೆಗೆ ಅನಿವಾರ್ಯವಾಗಿ ಇದನ್ನು ಆಯ್ಕೆಮಾಡಿಕೊಳ್ಳುತ್ತಾರೆ ಎಂಬ ಭಾವ ಧ್ವನಿಸುತ್ತದೆ. ಹಾಗಾದರೆ ಟಿಕೆಟ್ಟಿಗಾಗಿ ಇಷ್ಟೊಂದು ನೂಕು ನುಗ್ಗಲು ಏಕೆ? ಅವರು ಬೇರೆ ದಂಧೆಯಲ್ಲಿ ಇದ್ದೇ ತಾನೆ ಇಲ್ಲಿಗೆ ಬರಲು ಹಪ ಹಪಿಸುವುದು. ಆದಕಾರಣ ಯಾವುದೋ ಕಾಲದಲ್ಲಿ ಹೇಳಿದ ಈ ಮಾತು ಇಂದು ಸರಿಹೊಂದುವುದಿಲ್ಲ. ಇದನ್ನು ಸಂಪೂರ್ಣ ಬದಲಾಯಿಸಿ ಇಂದಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ “Politics is the first choice of a first rate criminal” ಎಂದು ಹೇಳಬೇಕೆನಿಸುತ್ತದೆ. ಅಂದರೆ ರಾಜಕೀಯವು ಒಬ್ಬ ಮೊದಲನೇ ದರ್ಜೆ ಕ್ರಿಮಿನಲ್ ಕೈದಿಯ ಮೊದಲ ಆಯ್ಕೆ!” ಹೀಗಾಗಿ ಪೊಲೀಸ್ ಠಾಣೆಯ ಕಂಬಿಯನ್ನು ಎಣಿಸಬೇಕಾದವರೂ, ಜೈಲಿನಲ್ಲಿರಬೇಕಾದವರೂ ಈಗ ಶಾಸನ ಸಭೆ/ಲೋಕಸಭೆಗಳಲ್ಲಿದ್ದಾರೆ. ನ್ಯಾಯಾಲಯವು ಅವರನ್ನು ಜೈಲಿಗೆ ಹಾಕಿದರೂ ಅಲ್ಲಿಂದ ಅದೃಶ್ಯರಾಗಿ ಮತ್ತೆ ಶಾಸನಸಭೆ/ಲೋಕಸಭೆಯ ಸುಖಾಸನಗಳಲ್ಲಿ ಯಾವ ಲಜ್ಜೆಯೂ ಇಲ್ಲದೆ ವಿರಾಜಮಾನರಾಗುತ್ತಾರೆ. ಅವರದೇ ಎಲ್ಲ ಕಾರುಬಾರು. ಅವರು ಮಾಡಿದ್ದೇ ಮಾಟ, ಆಡಿದ್ದೇ ಆಟ, ಹೂಡಿದ್ದೇ ತಂತ್ರ. ಬೇಕಾದಾಗ ಬೇಕಾದಂತೆ ಕಾನೂನು ತಿದ್ದುಪಡಿ ಮಾಡಿ ದೇಶದಲ್ಲಿ ಕೋಲಾಹಲ ಎಬ್ಬಿಸುವುದು ಇಂದಿನ ರಾಜಕಾರಿಣಿಗಳ ಜಾಯಮಾನವಾಗಿದೆ. ದೇವರ ಅನುಗ್ರಹಕ್ಕೆ ಎಡೆ ಹಿಡಿಯುವಂತೆ, ಜನರ ಓಟಿನ ಗಳಿಕೆಗಾಗಿ ಅಗ್ಗದ ಜನಪ್ರಿಯ ಯೋಜನೆಗಳನ್ನು ರೂಪಿಸುತ್ತಾರೆ. ಹಿಡಿದ ಎಡೆಯನ್ನು ಉಣ್ಣುವ ಭಾಗ್ಯ ಆ ದೇವರಿಗಾದರೂ ಎಲ್ಲಿದೆ? ಅದನ್ನೂ ಎಡೆ ಹಿಡಿದವನೇ ಅಲ್ಲವೇ ಉಣ್ಣುವುದು! ಒಟ್ಟಾರೆ ಇಂದಿನ ದೇಶದ ಪರಿಸ್ಥಿತಿ ಹುಚ್ಚು ಮುಂಡೇ ಮದುವೆಯಲ್ಲಿ ಉಂಡವನೇ ಜಾಣ ಎಂಬ ನಾಣ್ಣುಡಿಯಂತೆ ಆಗಿದೆ.

ನಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಅನೇಕ ರಾಜಕೀಯ ಮುಖಂಡರಿಗೆ ಮಾರ್ಗದರ್ಶನ ಮಾಡಿ ಮುಂದೆ ತಂದರು. ಅವರ ವಿರೋಧವನ್ನು ಕಟ್ಟಿಕೊಂಡ ರಾಜಕೀಯ ಮುಖಂಡರು ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಒದ್ದಾಡಬೇಕಾಗುತ್ತಿತ್ತು. ಸಿರಿಗೆರೆಯ ಗುರುಗಳಿಗೆ ನೆಗಡಿಯಾದರೆ ವಿಧಾನಸೌಧ ಸೀನುತ್ತದೆ ಎಂಬ ಗಾದೆ ಮಾತು ಅಂದಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು. ಆ ರೀತಿ ಇತ್ತು ಅವರ ರಾಜಕೀಯ ವರ್ಚಸ್ಸು. ಚುನಾವಣೆ ಬಂತೆಂದರೆ ಪತ್ರಿಕಾವರದಿಗಳಿಗೆ ಸುಗ್ರಾಸವಾಗುತ್ತಿದ್ದ ಸುಕ್ಷೇತ್ರವೆಂದರೆ ಹರಿಹರ ಕ್ಷೇತ್ರ, ಒಂದು ಕಾಲದಲ್ಲಿ ಹರಿಹರ ಕ್ಷೇತ್ರವು ಶೈವ-ವೈಷ್ಣವ ಸಂಪ್ರದಾಯಗಳ ಸಾಮರಸ್ಯದ ಪ್ರತೀಕವಾಗಿದ್ದರೆ ಚುನಾವಣಾ ಕಾಲದಲ್ಲಿ ಅದು ಎರಡು ಪ್ರಮುಖ ವೀರಶೈವ ಒಳ ಪಂಗಡಗಳ ವೈಷಮ್ಯದ ಪ್ರತೀಕವಾಗಿತ್ತು. ಒಂದು ಕಡೆ ಸಿರಿಗೆರೆ ಮಠದ ಶಿಷ್ಯರಾದ ಎಚ್. ಸಿದ್ಧವೀರಪ್ಪನವರು, ಮತ್ತೊಂದು ಕಡೆ ಚಿತ್ರದುರ್ಗದ ಮುರುಘಾಮಠದ ಶಿಷ್ಯರಾದ ಗಾಂಜೀ ವೀರಪ್ಪನವರು. ಇವರಿಬ್ಬರ ಚುನಾವಣಾ ಸೆಣಸಾಟ ಇಡೀ ರಾಜ್ಯದ ಜನತೆಯ ಕುತೂಹಲವನ್ನು ಕೆರಳಿಸುತ್ತಿತ್ತು. ಪತ್ರಿಕೆಗಳು ಇದನ್ನು ಜಂಘೀ ಕುಸ್ತಿ ಎಂದೇ ಬಣ್ಣಿಸುತ್ತಿದ್ದವು. ವ್ಯಂಗ್ಯಚಿತ್ರಕಾರರು ಇಬ್ಬರಿಗೂ ಚಡ್ಡಿ ತೊಡಿಸಿ ಅಖಾಡದಲ್ಲಿ ನಿಲ್ಲಿಸಿ, ಸಿದ್ಧವೀರಪ್ಪನವರ ಹಿಂದೆ ಸಿರಿಗೆರೆ ಮಠದ ಗುರುಗಳೂ, ಗಾಂಜಿ ವೀರಪ್ಪನವರ ಹಿಂದೆ ಮುರುಘಾಮಠದ ಗುರುಗಳೂ ನಿಂತು ಕೈಯಲ್ಲಿ ಕಮಂಡಲ ಯೋಗದಂಡ ಹಿಡಿದು ತಮ್ಮ ತಮ್ಮ ಶಿಷ್ಯರನ್ನು ಹುರಿದುಂಬಿಸುತ್ತಿದ್ದಂತೆ ಚಿತ್ರಿಸುತ್ತಿದ್ದರು! ಅಜೇಯರಾದ ಸಿದ್ಧವೀರಪ್ಪನವರನ್ನು ಸೋಲಿಸಲು ಗಾಂಜೀ ವೀರಪ್ಪನವರಿಂದ ಜನ್ಮಾಪಿ ಸಾಧ್ಯವಾಗಲೇ ಇಲ್ಲ. ಸಿದ್ಧವೀರಪ್ಪನವರ ಗೆಲುವು ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡುತ್ತಿದ್ದರೆಂಬುದನ್ನು ಅವಲಂಬಿಸಿರಲಿಲ್ಲ. ಅಂದಿನ ರಾಜಕಾರಣಿಗಳೂ ಮತ್ತು ಜನರು ಈಗಿನಷ್ಟು ಕೆಟ್ಟಿರಲಿಲ್ಲ. ಖರ್ಚಿಗೆ ದುಡ್ಡು ಬೇಕೆಂದು ಅವರನ್ನು ಕೇಳುವ ಗಂಡು ಆಗ ಯಾರೂ ಇರಲಿಲ್ಲ. 63 ರ ಚುನಾವಣೆಯಲ್ಲಿ ಕೇವಲ 23 ಸಾವಿರ ರೂ. ಗಳು, 83 ರ ಚುನಾವಣೆಯಲ್ಲಿ 75 ಸಾವಿರ ರೂ. ಖರ್ಚಾಗಿತ್ತೆಂದು ಈಗಲೂ ತನ್ನ ಹತ್ತಿರ ಲೆಕ್ಕ ಇದೆ ಎಂದು ಅವರ ಕಟ್ಟಾ ಹಿಂಬಾಲಕ ಹನಗವಾಡಿ ವಿರೂಪಾಕ್ಷಪ್ಪ ಹೇಳುತ್ತಾನೆ. ಆತ್ಮರಕ್ಷಣೆಗಾಗಿ ಸದಾ ಜೇಬಿನಲ್ಲಿ ಪಿಸ್ತೂಲು ಇಟ್ಟುಕೊಳ್ಳುತ್ತಿದ್ದ ಗಂಡೆದೆಯ ಸಿದ್ಧವೀರಪ್ಪನವರಿಗೂ ಸಹ ಜಾತಿ ರಾಜಕಾರಣದ ಗುಂಡೇಟು ಬಿದ್ದು ಒಮ್ಮೆ ಟಿಕೆಟ್ ಸಿಗದಂತಾಗಿ ಮನೆಯಲ್ಲಿರಬೇಕಾಯಿತು. 

“Politics without principles is a crime” (ನೀತಿ ಇಲ್ಲದ ರಾಜಕೀಯ ಒಂದು ಪಾತಕ) ಎಂದು ಗಾಂಧೀಜಿ ಹೇಳುತ್ತಿದ್ದರು. ಯಾವ ಪಕ್ಷದ ಸಿದ್ಧಾಂತದಲ್ಲೂ ಈಗ ಏನೂ ಅರ್ಥ ಉಳಿದಿಲ್ಲ. ಜನರು ಪಕ್ಷಗಳನ್ನು ನೋಡಿ ಮತ ಹಾಕುವುದೇ ತಪ್ಪು ಎನ್ನುವ ಕಾಲ ಬಂದಿದೆ. ಜನರು ತತ್ವ ನೀತಿಗೆ ಮಾರು ಹೋಗಿ ಒಂದು ಪಕ್ಷಕ್ಕೆ ಸೇರುತ್ತಾರೆಂಬುದು ಸುಳ್ಳು. ಒಂದರ್ಥದಲ್ಲಿ ಎಲ್ಲ ಪಕ್ಷದಲ್ಲಿರುವವರದೂ ಒಂದೇ ತತ್ವ, ಒಂದೇ ಸಿದ್ಧಾಂತ. ಅದೇನೆಂದರೆ: ತನಗಾಗದವನು ಈ ಪಕ್ಷದಲ್ಲಿದ್ದರೆ ಆ ಪಕ್ಷ ಸೇರು; ತನಗೆ ಆ ಪಕ್ಷದಲ್ಲಿ ಬಯಸಿದ ಸ್ಥಾನಮಾನ ದೊರೆಯದೇ ಹೋದರೆ, ಆ ಪಕ್ಷದ ಸಿದ್ಧಾಂತಗಳಿಂದ ಭ್ರಮ ನಿರಸನವಾಗಿದೆಯೆಂದು ಹೇಳಿ ಮತ್ತೊಂದು ಪಕ್ಷವನ್ನು ಸೇರು! ಪಕ್ಷಕ್ಕೆ ಇಂಗ್ಲೀಷಿನಲ್ಲಿ Party ಎಂದು ಕರೆಯುತ್ತಾರೆ. ಆದರೆ Party ಎಂಬ ಪದಕ್ಕೆ ಇಂಗ್ಲೀಷ್ ಶಬ್ದಕೋಶದಲ್ಲಿ ಇಲ್ಲದ ಅರ್ಥ ಕನ್ನಡದ ಜನರ ಆಡುಮಾತಿನಲ್ಲಿದೆ. ಒಂದು ಊರಿನಲ್ಲಿ ನಡೆಯಬೇಕಾಗಿದ್ದ ಜಾತ್ರೆ ಅಥವಾ ತೇರು ನಡೆಯದೇ ಹೋದರೆ ಆ ಊರಿನ ಜನರಲ್ಲಿ ಹೊಂದಾಣಿಕೆ ಇಲ್ಲ ಬಹಳ ಪಾರ್ಟಿ ಇದೆ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು. ಮಾತಿನಲ್ಲಿ ಪಾರ್ಟಿ ಎಂದರೆ ದ್ವೇಷ, ವೈಷಮ್ಯ, ಹೊಡೆದಾಟ ಎಂದರ್ಥ. ಈ ದ್ವೇಷ-ವೈಷಮ್ಯಗಳು ರಾಜಕೀಯ ಪಕ್ಷಗಳಿಂದ ಬಂದುವೋ ಅಥವಾ ಜನರಲ್ಲಿರುವ ದ್ವೇಷ-ವೈಷಮ್ಯಗಳು ರಾಜಕೀಯ ಪಕ್ಷಗಳ ಬೆಳವಣಿಗೆಗೆ ಕಾರಣವಾದುವೋ ಎಂದು ಕೇಳಿದರೆ ಎರಡೂ ನಿಜ ಎಂದು ಹೇಳುವುದರಲ್ಲಿ ಯಾವ ವಿರೋಧಾಭಾಸವೂ ಇಲ್ಲ. ಒಂದೊಂದು ಪಕ್ಷದಲ್ಲಿರುವ ಪ್ರಮುಖರು ಪಕ್ಷದ ಕಾರಣಕ್ಕಾಗಿ ಒಬ್ಬರಿಗೊಬ್ಬರಿಗೆ ಆಗುವುದಿಲ್ಲ ಎನ್ನುವದಕ್ಕಿಂತ, ವೈಯಕ್ತಿಕವಾಗಿ ಪರಸ್ಪರ ಆಗುವುದಿಲ್ಲ ಎಂದು ಹೇಳುವುದೇ ಹೆಚ್ಚು ಸಮಂಜಸ. ಈ ಮಾತು ಪಕ್ಷದೊಳಗಿದ್ದವರಿಗೂ ಅನ್ವಯಿಸುತ್ತದೆ. ರಾಜಕೀಯದಲ್ಲಿ ಖಾಯಂ ಶತ್ರುತ್ವ, ಖಾಯಂ ಮಿತ್ರತ್ವ ಎಂಬುದು ಇಲ್ಲವೇ ಇಲ್ಲ. “The enemy of an enemy is my friend” (ಶತ್ರುವಿನ ಶತ್ರು ನನ್ನ ಮಿತ್ರ) ಎಂಬುದು ಇಂದಿನ ಎಲ್ಲ ರಾಜಕೀಯ ಪಕ್ಷಗಳ ತತ್ವ ಸಿದ್ಧಾಂತವಾಗಿದೆ. ಆಯಾಯ ಸಂದರ್ಭದಲ್ಲಿ ತಮಗೆ ಆಗದವರಿಗೆ ಆಗದವರನ್ನು ಅಪ್ಪಿಕೊಳ್ಳುವ ಆಗಂತುಕರ/ಅವಕಾಶವಾದಿಗಳ ಕೂಟವೇ ರಾಜಕೀಯ ಪಕ್ಷಗಳು ಎಂದು ಹೇಳಿದರೆ ಅಪ್ಪಟ ಸತ್ಯವನ್ನೇ ಹೇಳಿದಂತಾಗುತ್ತದೆ. ಒಂದು ಚುನಾವಣೆಯಲ್ಲಿ ಎದುರಾಳಿಗಳಾಗಿ ಸೆಣೆಸಾಡಿದವರು ಮತ್ತೊಂದು ಚುನಾವಣೆಯಲ್ಲಿ ಮಿತ್ರರಾಗಿ ಕೂಡಿ ಕೈಜೋಡಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇದನ್ನೇ ರಾಜಕೀಯ ಚದುರಂಗದಾಟವೆಂದು ಕರೆಯುವುದು. ರಾಜಕಾರಣಿಗಳು ತಮ್ಮ ಸ್ವಾರ್ಥಸಾಧನೆಗೆ ಇಂತಹ ಚದುರಂಗದಾಟವನ್ನು ಆಡುವುದರಲ್ಲಿ ನಿಸ್ಸೀಮರು. ಅವರದೇನಾದರೂ ಆಗಲಿ. ಪಾಪ, ಅವರನ್ನು ನಂಬಿ ಅವರ ಹಿಂದೆ ಇದ್ದ ಜನರ ಗತಿಯೇನು ಎಂಬುದು ದೊಡ್ಡ ಪ್ರಶ್ನೆ, ಆ ಬಡಪಾಯಿ ಜನರಿಗೆ ಅವರ ಬೆನ್ನ ಹಿಂದೆ ಹೋಗದೆ ಬೇರೆ ಗತ್ಯಂತರವಿಲ್ಲ. ಮದುವೆಯಾಗುತ್ತಾನೆಂದು ನಂಬಿ ಮೋಸಹೋದ ಹೆಣ್ಣಿನ ಬಾಳುವೆಯಂತಾಗಿದೆ ಅವರ ಸ್ಥಿತಿ. ಕೂಡಿಕೊಂಡ ಗಂಡಿನ ಹಿಂದೆ ಹೋಗದೆ ಬೇರೆ ವಿಧಿ ಇಲ್ಲ. ಹೀಗೆ ಒಬ್ಬೊಬ್ಬ ರಾಜಕೀಯ ನೇತಾರನ ಹಿಂದೆ ಒಂದೊಂದು ಗುಂಪು ಬೆಳೆದುಕೊಂಡು ಯಾವ ಗುಂಪೂ ಹಿಂದಕ್ಕೆ ಸರಿಯಲು ಮಣಿಯದೆ ಬೇರೆ ಬೇರೆ ಪಕ್ಷಗಳನ್ನು ಸೇರಿಕೊಂಡು ಚುನಾವಣೆಯಲ್ಲಿ ಸೆಣಸಾಡುತ್ತಾರೆ. ಈ ಗುಂಪು ರಾಜಕೀಯದ ಹಣಾಹಣಿಯಲ್ಲಿ ಕೆಲವೇ ಕೆಲವು ಮತಗಳ ಅಂತರದಲ್ಲಿ ಆಯ್ಕೆಯಾಗುವ ವಿಜೇತ ಅಭ್ಯರ್ಥಿ ವಾಸ್ತವವಾಗಿ ಆ ಕ್ಷೇತ್ರದ ಬಹುಪಾಲು ಮತದಾರರ ಪ್ರತಿನಿಧಿಯಾಗಿರುವುದಿಲ್ಲ. ರಾಜಕೀಯದಲ್ಲಿ ಒಳ್ಳೆಯವರು ಇಲ್ಲವೇ ಇಲ್ಲ ಎಂದೇನೂ ಅಲ್ಲ. ಆದರೆ ಕೊಲೆ, ದರೋಡೆಗಳ ದೃಶ್ಯವಿಲ್ಲದೆ ಸಿನಿಮಾಗಳು ಯಶಸ್ವಿಯಾಗುವುದಿಲ್ಲ ಎಂಬಂತಾಗಿದೆ ಇಂದಿನ ರಾಜಕೀಯ ಪರಿಸ್ಥಿತಿ! 

ಸರ್ವೇ ಸಾಧಾರಣವಾಗಿ ಒಂದು ಮತಕ್ಷೇತ್ರದಲ್ಲಿ 1.25.000 ಜನ ಮತದಾರರು ಇರುತ್ತಾರೆ. ಅನೇಕ ಪಕ್ಷಗಳು ಸ್ಪರ್ಧಿಸುವುದರಿಂದ ಮತಗಳು ಹಂಚಿಹೋಗಿ ಕೇವಲ 25.000 ಮತಗಳನ್ನು ತೆಗೆದುಕೊಂಡ ಅಭ್ಯರ್ಥಿ ಆಯ್ಕೆಯಾಗುತ್ತಾನೆ ಉಳಿದ ಒಂದು ಲಕ್ಷ ಮತದಾರರನ್ನು ಅವನು ಪ್ರತಿನಿಧಿಸುವುದೇ ಇಲ್ಲಾ ಬಹುಪಾಲು ಜನರ ಆಶೋತ್ತರಗಳಿಗೆ ಆತನು ಸ್ಪಂದಿಸುವುದಿಲ್ಲ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ಮತಗಳನ್ನು ಗಳಿಸಿದ ಪ್ರತಿನಿಧಿಗಳಿಂದ ಕೂಡಿದ ಸರ್ಕಾರ ರಾಜ್ಯವನ್ನು ಆಳುತ್ತದೆ.ಮೇಲು ನೋಟಕ್ಕೆ ಬಹುಮತ (absolute majority)  ಪಡೆದ ಪಕ್ಷವೆಂದು ಕಂಡುಬಂದರೂ ಅದು ವಾಸ್ತವವಾಗಿ ಅಲ್ಪಮತ ಪಡೆದ ಸರ್ಕಾರ (Minority Govt).ಹೀಗಾಗಿ ಬಹು ಜನರ ಆಶೊತ್ತರಗಳನ್ನು ಈಡೇರಿಸುವಲ್ಲಿ ಈ ಸರ್ಕಾರಗಳು ವಿಫಲವಾಗಿವೆ.

ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸಿದ್ಧಾಂತಗಳ ಬಗ್ಗೆ ಎಷ್ಟೇ ದೊಡ್ಡ ಗಂಟಲಿನಿಂದ ಕೂಗಿದರೂ ಚುನಾವಣೆಯಲ್ಲಿ ಟಿಕೆಟ್ಟನ್ನು ನೀಡುವಾಗ ಜಾತಿಯ ಲೆಕ್ಕಾಚಾರ, ದುಡ್ಡಿನ ಲೆಕ್ಕಾಚಾರವಿರುತ್ತದೆಯೇ ಹೊರತು ಬೇರಾವ ಮಾನದಂಡವೂ ಇರುವುದಿಲ್ಲ. ನಮ್ಮ ದೇಶ ಜಾತ್ಯತೀತವೆಂದು ಸಂವಿಧಾನದಲ್ಲಿ ಘೋಷಿತವಾಗಿದ್ದರೂ ಜಾತಿಯ ಆಧಾರದ ಮೇಲೆಯೇ ಎಲ್ಲವೂ ನಿರ್ಧಾರವಾಗುವುದು ಒಂದು ರೀತಿಯ ಅಲಿಖಿತ-ಸಂವಿಧಾನ (unwritten constitution) ಆಗಿಬಿಟ್ಟಿದೆ. ಒಂದೇ ಜಾತಿಯ ಮತಗಳಿಂದ ಯಾವುದೇ ಕ್ಷೇತ್ರದಲ್ಲಿ ಯಾರೂ ಗೆಲ್ಲುವುದು ಸಾಧ್ಯವಿಲ್ಲ. ಆದರೆ ದುರ್ದೈವದ ಸಂಗತಿಯೆಂದರೆ ಗೆದ್ದವನು ಎಲ್ಲ ಜಾತಿ ಕೋಮುಗಳ ಪ್ರತಿನಿಧಿ ಎಂದು ತಿಳಿದುಕೊಳುವುದಿಲ್ಲ. ತಾನು ಒಂದು ಜಾತಿ ಜನರ ಪ್ರತಿನಿಧಿಯೆಂದೇ ಭಾವಿಸುತ್ತಾನೆ. ತನ್ನ ಕ್ಷೇತ್ರಕ್ಕೆ ತನ್ನ ಜಾತಿಯ ತಹಸೀಲ್ದಾರರನ್ನೂ, ಪೋಲೀಸ್ ಇನ್ಸ್ಪೆಕ್ಟರನ್ನೂ, ಅಧಿಕಾರಿಗಳನ್ನೂ ಹಾಕಿಸಿಕೊಂಡು ಜಾತೀಯ ರಾಜಕಾರಣದಲ್ಲಿ ತೊಡಗುತ್ತಾನೆ. ಕ್ಷೇತ್ರದ ಅಭಿವೃದ್ಧಿಗಿಂತ ಕ್ಷೇತ್ರದಲ್ಲಿ ಜಾತಿ-ವೈಷಮ್ಯಕ್ಕೆ, ಕೋಮು ಗಲಭೆಗೆ ಕಾರಣನಾಗುತ್ತಾನೆ. ಚುನಾವಣೆ ಬಂತೆಂದರೆ ಸಾಕು ಜಾತಿ-ಜಾತಿಗಳ ಮಧ್ಯೆ ವಿರಸ ಜಗಳಗಳು ಆರಂಭವಾಗುತ್ತವೆ. ಧರ್ಮಗುರುಗಳಾದ ನಾವು ಕಷ್ಟಪಟ್ಟು ಮತೀಯ ಸಾಮರಸ್ಯವನ್ನು ರೂಪಿಸಲು ಯತ್ನಿಸಿದರೆ, ರಾಜಕಾರಣಿಗಳು ಚುನಾವಣೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತಿನಂತೆ ಮತೀಯ ಸಾಮರಸ್ಯದ ತುಂಬಿದ ಮಡಕೆಯನ್ನು ಒಡೆದು ಹಾಕಿ ಬಿಡುತ್ತಾರೆ. ಮುಂದುವರಿದ ಬಲಾಢ್ಯ ಜನರು ನಿಮ್ಮನ್ನು ತುಳಿದು ಹಾಕುತ್ತಾರೆ ಎಂಬ ಭೀತಿಯನ್ನು ಹಿಂದುಳಿದ ಜಾತಿಯ ಜನರಲ್ಲಿ ಮೂಡಿಸುತ್ತಾರೆ. ಜಾತಿಗಳನ್ನು ಬಳಸಿಕೊಂಡು, ಹಣ ಮತ್ತು ಹೆಂಡದ ಹೊಳೆಯನ್ನು ಹರಿಸಿ, ರಾಜಕೀಯವಾಗಿ ಪರಿಪಕ್ವ ಪರಿಕಲ್ಪನೆಯಿಲ್ಲದ ಹೊಟ್ಟೆಯ ಪಾಡೇ ಕಷ್ಟವಾಗಿರುವ ಜನರನ್ನು ದಿಕ್ಕು ತಪ್ಪಿಸುತ್ತಾರೆ. ಇನ್ನು ಪ್ರಜ್ಞಾವಂತರೆಂದು ತಮ್ಮನ್ನು ತಾವೇ ಕರೆದುಕೊಂಡು ದೇಶದ ಉದ್ಧಾರದ ಬಗ್ಗೆ ಉದ್ದುದ್ದ ಭಾಷಣವನ್ನು ಬಿಗಿಯುವ ಬುದ್ಧಿಜೀವಿಗಳು ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದೇ ಅವಮಾನವೆಂದು ಭಾವಿಸಿ ಮನೆಯಲ್ಲಿಯೇ ಆರಾಮವಾಗಿ ಕುಳಿತು ಚುನಾವಣಾ ವಿಶ್ಲೇಷಣೆಯನ್ನು ಟಿ.ವಿ.ಯಲ್ಲಿ ನೋಡುತ್ತಿರುತ್ತಾರೆ. ದೇಶದ ಹಣೆಬರಹವನ್ನು ನಿರ್ಧರಿಸುವ ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲುಗೊಳ್ಳದ ಈ ಜನರನ್ನು ನಾಡಿನ ಪ್ರಜೆಗಳೆಂದು ಒಪ್ಪುವುದಾದರೂ ಹೇಗೆ? ಬುದ್ಧಿಜೀವಿಗಳೂ, ಪ್ರಜ್ಞಾವಂತರೂ ಭಾಗವಹಿಸದೆ, ಬಹುಪಾಲು ರಾಜಕೀಯವಾಗಿ ಪರಿಪಕ್ವ ಬುದ್ಧಿಯಿಲ್ಲದ ಜನರು ಆರಿಸಿದ ಬುದ್ಧಿಹೀನ ಪ್ರತಿನಿಧಿಗಳು ನಾಡನ್ನು ಆಳುವಂತಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹೊಸ ಹೊಸ ನಿಯಮಾವಳಿಗಳನ್ನು ರೂಪಿಸುವ ಚುನಾವಣಾ ಕಮಿಷನರ್ ಮತದಾರರಿಗೂ ಕೆಲವೊಂದು ಕಟ್ಟುಪಾಡುಗಳನ್ನು ಹಾಕುವುದು ಒಳೆಯದು. ಎಲ್ಲರಿಗೂ ಕಡ್ಡಾಯವಾಗಿ ಓಟು ಮಾಡುವ ನಿರ್ಬಂಧವನ್ನು ವಿಧಿಸಬೇಕು. ಓಟು ಹಾಕದವರಿಗೆ ಸರ್ಕಾರದಿಂದ ಸಿಗಬಹುದಾದ ಹಸಿರು ಕಾರ್ಡು ಇತ್ಯಾದಿ ಸೌಲಭ್ಯಗಳನ್ನು ನಿಲ್ಲಿಸಬೇಕು. ನೌಕರಿಯಲ್ಲಿದ್ದವರು ಮತ ಚಲಾಯಿಸದೇ ಹೋದರೆ ಅಂಥವರ ವಾರ್ಷಿಕ ಬಡ್ತಿಯನ್ನು ನಿಲ್ಲಿಸಬೇಕು. 

ಜಾಗೃತ ಓದುಗರೇ! ನಮ್ಮ ಲಿಂಗೈಕ್ಯ ಗುರುಗಳ ಗುರುಗಳಾಗಿದ್ದ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರ ಕಾಲದಿಂದಲೂ ನಮ್ಮ ಮಠದ ಅಭಿಮಾನಿ ಶಿಷ್ಯರಾಗಿದ್ದ ಜಗಳೂರಿನ ಇಮಾಂ ಸಾಹೇಬರು ಬಹಳ ಹಿಂದೆ ಲೋಕಸಭಾ ಸದಸ್ಯರಾಗಿದ್ದರು. ಜಾತಿಯಲ್ಲಿ ಮುಸ್ಲಿಮರಾಗಿದ್ದರೂ ಎಲ್ಲ ಜನಾಂಗದವರ ಬಾಯಲ್ಲಿ ಇಮಣ್ಣ ಇಮ್ಮಣ್ಣ ಎಂದೇ ಪ್ರಸಿದ್ಧರಾಗಿದ್ದರು. ಒಮ್ಮೆ ಅವರು ವೃದ್ಧಾಪ್ಯದಲ್ಲಿ ಅಸ್ವಸ್ಥರಾಗಿದ್ದಾಗ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಬರಲು ದಾವಣಗೆರೆಯಲ್ಲಿ ಅವರ ಮಗನ ಮನೆಗೆ ಹೋಗಿದ್ದೆವು. ಉಭಯಕುಶಲೋಪರಿಯ ನಂತರ ಹಿರಿಯ ಮುತ್ಸದ್ದಿ ರಾಜಕೀಯ ಧುರೀಣರಾಗಿದ್ದ ಅವರನ್ನು ಮಾತಿನ ಪ್ರಸಂಗದಲ್ಲಿ ಕೇಳಿದೆವು: “ಇಂದಿನ ರಾಜಕಾರಣಿಗಳನ್ನು ಕಂಡು ನಿಮಗೆ ಏನೆನ್ನಿಸುತ್ತದೆ?” ಅದಕ್ಕೆ ಅವರು ಕೊಟ್ಟ ಚುಟುಕು ಹಾಗೂ ಚುರುಕು ಮುಟ್ಟಿಸುವಂತಹ ಉತ್ತರ: “ಕ್ಯಾಕರಿಸಿ ಥೂ ಎಂದು ಉಗುಳಬೇಕೆನ್ನಿಸುತ್ತದೆ!”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 16.4.2008.