ಸ್ವತಃ ದೇವರೇ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ....

  •  
  •  
  •  
  •  
  •    Views  

ತತವಾಗಿ ಕಳೆದ 20 ದಿನಗಳಿಂದ ದೆಹಲಿಯಲ್ಲಿ ಠಿಕಾಣೆ ಹೂಡಿ ಉಪವಾಸ ಸತ್ಯಾಗ್ರಹ ಮಾಡಿದರೂ ಯಾವ ಪಕ್ಷದಿಂದಲೂ ಟಿಕೆಟ್ ಸಿಗದೆ ಗಾಂಧೀಜಿ ನಿರಾಶೆಗೊಂಡು ಕೈಲಾಸಕ್ಕೆ ಹಿಂದಿರುಗಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಲದಲ್ಲಿಯೂ ಇಲ್ಲದೇ ಇದ್ದ ದೇಶಸೇವೆಯ ಉತ್ಸಾಹ ಪಕ್ಷಾತೀತವಾಗಿ ಟಿಕೆಟ್ ಹೋರಾಟಗಾರರಲ್ಲಿ ಇರುವುದು ಕಂಡು ಬಂತು ಎಂದು ಬಾಪು ಶಿವನಿಗೆ ವರದಿ ಮಾಡಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ಬ್ರಿಟಿಷರ ದಾಸ್ಯದಿಂದ ಪಾರುಮಾಡಿ ಗುಂಡೇಟಿಗೆ ಬಲಿಯಾದ ರಾಷ್ಟ್ರಪಿತನಿಗೇ ಟಿಕೆಟ್ ಸಿಗಲಿಲ್ಲವೆಂದರೆ ಏನು ಅನ್ಯಾಯ ಇದು ಎಂದು ಶಿವ ಸಿಟ್ಟಿಗೆದ್ದ. ಸ್ವತಃ ತಾನೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಈ ರಾಜಕಾರಣಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಭೂಮಿಗೆ ಇಳಿದು ಬಂದ. ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೆ ಸೂಕ್ತವೆಂದು ನಿರ್ಧರಿಸಲು ರಾಜ್ಯದ ಎಲ್ಲ ಕ್ಷೇತ್ರಗಳನ್ನು ಸುತ್ತಾಡುತ್ತಾ ಸಿರಿಗೆರೆಗೆ ಬಂದ. ಪ್ರತಿ ಸೋಮವಾರ ನಡೆಯುವ ನಮ್ಮ ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳಿಗೆ ಕಳೆದ ಸೋಮವಾರ ಕಾರ್ಯಬಾಹುಲ್ಯದಿಂದ ರಜೆ ಘೋಷಿಸಿದ್ದರೂ ದರ್ಶನಕ್ಕೆಂದು ಮಠಕ್ಕೆ ಬರುವ ಭಕ್ತಾದಿಗಳಿಗೆ ನಿರಾಶೆಯುಂಟಾಗಬಾರದೆಂದು ಸಂಜೆ ನಮ್ಮ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿರುವ ಸಂಗತಿ ಶಿವನಿಗೆ ತಿಳಿಯಿತು. ಭಕ್ತಾದಿಗಳೆಲ್ಲರೂ ದರ್ಶನ ಮಾಡಿಕೊಂಡು ಹೋದ ಮೇಲೆ ನಮ್ಮೊಡನೆ ಖಾಸಗಿಯಾಗಿ ಮಾತನಾಡಬೇಕೆಂದು ಶಿವ ಬಯಸಿ ಅದರಂತೆ ನಂದಿಗೆ ಸೂಚನೆಯನ್ನು ಕೊಟ್ಟು ಮಾರುವೇಷದಲ್ಲಿ ಸಿರಿಗೆರೆಯ ಸುತ್ತಮುತ್ತ ಹಳ್ಳಿಗರ ಜೊತೆ ಮಾತನಾಡಲು ತೆರಳಿದ. ನಮ್ಮ ಲಿಂಗೈಕ್ಯ ಗುರುವರ್ಯರು ಹೊಸದುರ್ಗದಲ್ಲಿ ಹಾಲುಮತಸ್ಥ ಶ್ರೀಸಾಮಾನ್ಯ ಜಿ.ಟಿ ರಂಗಪ್ಪನನ್ನು ನಿಲ್ಲಿಸಿ ಆಗಿನ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರನ್ನು ಸೋಲಿಸಿದ್ದು, ಭರಮಸಾಗರದಲ್ಲಿ ಹರಿಜನ ಮುಖಂಡ ಜಿ ದುಗ್ಗಪ್ಪನವರಿಗೆ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಸ್ವತಂತ್ರವಾಗಿ ನಿಲ್ಲಿಸಿ ಗೆಲ್ಲಿಸಿದ್ದು, ನಂತರ ಅವರನ್ನು ಪಿ.ಎಸ್.ಸಿ ಛೇರ್ಮನ್ರನ್ನಾಗಿ ಮಾಡಿದ್ದು,1994 ರಲ್ಲಿ ನಾವು ಪಕ್ಷಾತೀತ-ಜ್ಯಾತ್ಯತೀತ ಎಂಬ ಧ್ಯೇಯವನ್ನಿರಿಸಿಕೊಂಡು ಹರಿಹರ, ಮಾಯಕೊಂಡ ,ಜಗಳೂರು, ಭರಮಸಾಗರ ಮತ್ತು ಹೊಳಲ್ಕೆರೆ ಕ್ಷೇತ್ರಗಳನ್ನು ಆರಿಸಿಕೊಂಡು ಹಳ್ಳಿಗಳೇ ಹೈಕಮಾಂಡ್ಗಳು ಆಗಬೇಕೆಂದು ಜನರಿಗೆ ರಾಜಕೀಯ ಮಾರ್ಗದರ್ಶನ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು, ಇತ್ಯಾದಿ ಕುತೂಹಲಕರ ಪ್ರಸಂಗಗಳ ವಿವರಗಳನ್ನು ಶಿವನು ಜನರಿಂದ ಪಡೆದ. ಇದುವರೆಗೆ ಮೀಸಲು ಕ್ಷೇತ್ರವಾಗಿದ್ದ ಭರಮಸಾಗರ ಕ್ಷೇತ್ರ ಇತ್ತೀಚೆಗೆ ಡೀಲಿಮಿಟೇಷನ್ನಿಂದ ವಿಭಜನೆಗೊಂಡು ಹೊಳಲ್ಕೆರೆ, ಮಾಯಕೊಂಡ ಮತ್ತಿತರ ಕ್ಷೇತ್ರಗಳಲ್ಲಿ ವಿಲೀನಗೊಂಡಿರುವ ವಿಷಯ ತಿಳಿದುಕೊಂಡ. ಇದೇ ರೀತಿ ಇದುವರೆಗೆ ಜನರಲ್ ಆಗಿದ್ದ ಹೊಳಲ್ಕೆರೆ, ಮಾಯಕೊಂಡ, ಜಗಳೂರು ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿವೆಯೆಂದೂ ತಿಳಿದುಕೊಂಡ. ಭೈರವೇಶ್ವರನಾಗಿ ಮೀಸಲು ಕ್ಷೇತ್ರದಿಂದ ನಿಂತರೆ ಹೇಗೆ? ಎಂದು ಶಿವ ಆಲೋಚಿಸ ತೊಡಗಿದ. ಆದರೆ ನಾಮಿನೇಷನ್ ಫೈಲ್ ಮಾಡಲು ಒಂದು ದಿನ ಮಾತ್ರ ಬಾಕಿ ಇದೆ. ಅಷ್ಟರೊಳಗೆ ಹಿಂದುಳಿದ ಸರ್ಟಿಫಿಕೇಟ್ ಪಡೆಯುವುದು ಸಾಧ್ಯವಿಲ್ಲದ ಮಾತು ಎಂದು ಹಿಂಜರಿದ. ದುಡ್ಡಿದ್ದರೆ ಈ ದೇಶದಲ್ಲಿ ಯಾವುದು ಸಾಧ್ಯವಿಲ್ಲ? ಹಿಂದುಳಿದ ಸರ್ಟಿಫಿಕೇಟ್ ಏನು ಮಹಾ? ಓದದೆ ವಿಶ್ವವಿದ್ಯಾನಿಲಯಗಳ ಡಿಗ್ರಿ ಸರ್ಟಿಫಿಕೇಟ್ಗಳನ್ನೂ ಸುಲಭವಾಗಿ ಪಡೆಯಬಹುದು ಎಂದ ಒಬ್ಬ ಹಳಿಯ ಪದವೀಧರ. ದುಡ್ಡಿದ್ದರೆ ಎಂ.ಎಲ್.ಎ ಆಗಬಹುದು, ಮಂತ್ರಿ ಆಗಬಹುದು, ವಿಧಾನಸೌಧಾನೂ ಕೊಂಡುಕೊಳ್ಳಬಹುದು ಎಂದ ಮತ್ತೊಬ್ಬ ಹಳ್ಳಿಗ. ಅವನು ಹೇಳುವುದು ನಿಜ. ಇಲ್ಲಿ ಕೇಳು ಶಿವಣ್ಣ, ಇವತ್ತಿನ ಕಾಲದಾಗೆ ದುಡ್ಡಿಲ್ಲಾಂದ್ರೆ ಗಣಿದೊರೆಗಳ ವಿರುದ್ದ ಚುನಾವಣೆಗೆ ಸಾಕ್ಷಾತ್ ದೇವರೇ ನಿಂತರೂ ಡಿಪಾಸಿಟ್ ಕಳೆದುಕೊಳ್ಳುತ್ತಾನೆ ಎಂದ ಮಗುದೊಬ್ಬ. ಈ ಮಾತನ್ನು ಕೇಳಿ ಅವನಿಗೆ ಷಾಕ್ ಹೊಡೆದಂತೆ ಆಯಿತು. 

ಈ ಮಧ್ಯೆ ವಿಭಿನ್ನ ರಾಜಕೀಯ ಪಕ್ಷದ ಹುರಿಯಾಳುಗಳು ನಮ್ಮ ದರ್ಶನ ಪಡೆಯಲು ತಮ್ಮ ಬೆಂಬಲಿಗರೊಂದಿಗೆ ಬರತೊಡಗಿದರು. ಎಲ್ಲಾ ಮಧ್ಯವಯಸ್ಕರು. ಒಂದೊಂದೇ ಗುಂಪಿನವರು ಒಳಗೆ ಬಂದು ಹಾರ ಹಣ್ಣು ಅರ್ಪಣೆ ಮಾಡಿ ಪಕ್ಷದ ಟಿಕೆಟ್ ಪಡೆಯಲು ಅವರು ಮಾಡಿದ ಹರಸಾಹಸವನ್ನು ವಿವರಿಸಿದರು. ನಿನ್ನೆ ರಾತ್ರಿ 8 ಗಂಟೆವರೆಗೂ ಟಿಕೆಟ್ ಖಚಿತಪಡಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಂತೆ ದೂರದರ್ಶನದಲ್ಲಿ ಬೇರೆಯವರಿಗೆ ಆಗಿದೆಯೆಂದು ತಿಳಿದು ನನಗೆ ಷಾಕ್ ಆಯಿತು. ಮತ್ತೆ ಪ್ರಯತ್ನ ಮಾಡಿದೆ, ತಮ್ಮ ಆಶೀರ್ವಾದದಿಂದ ಬಿ ಫಾರಂ ದೊರೆಯಿತು ಎಂದರು ಒಬ್ಬರು. ಈ ದಿನ ಬೆಳಿಗ್ಗೆ ನಾಮಿನೇಷನ್ ಫೈಲ್ ಮಾಡಿ ಬಂದಿರುತ್ತೇನೆ, ಗೆದ್ದು ಮತ್ತೆ ತಮ್ಮ ಆಶೀರ್ವಾದಕ್ಕೆ ಬರುವಂತೆ ತಾವು ಒಳ್ಳೆಯ ಆಶೀರ್ವಾದ ಮಾಡಬೇಕು ಎಂದರು ಮತ್ತೊಬ್ಬರು. ಅವರ ಈ ಆಗ್ರಹಪೂರ್ವಕ ನಿವೇದನೆಯು “ಆಶೀರ್ವಾದದಲ್ಲಿ ಒಳ್ಳೆಯದು, ಕೆಟ್ಟದ್ದು ಇದೆಯೇ?" ಎಂದು ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು. ಜನರೆಲ್ಲರನ್ನೂ ಮಾತನಾಡಿಸಿ ಕಳುಹಿಸುವ ಹೊತ್ತಿಗೆ ರಾತ್ರಿ 8 ಗಂಟೆಯಾಯಿತು. ನಂದಿಯ ಸೂಚನೆಯ ಮೇರೆಗೆ ಶಿವ ಆಗಮಿಸಿದ. ಲೋಕಾಭಿರಾಮವಾಗಿ ಮಾತನಾಡುತ್ತಾ ಅವನೂ ರಾಜಕೀಯ ವಿಷಯಕ್ಕೆ ಬಂದಿದ್ದಾನೆಂದು ತಿಳಿದು ಬೇಸರವಾಯಿತು. ಆರಾಮವಾಗಿ ಕೈಲಾಸದಲ್ಲಿರುವುದನ್ನು ಬಿಟ್ಟು ಶಿವನಿಗೇನು ಈ ಎಲೆಕ್ಷನ್ ಹುಚ್ಚು ಹಿಡಿದಿದೆ ಎನ್ನಿಸಿತು. ಶಿವನಿಗೇ ಇಷ್ಟು ಹುಚ್ಚು ಹಿಡಿದಿರುವಾಗ ಇನ್ನು ಪಿಂಚಣಿ ಇಲ್ಲದ ನಿವೃತ್ತ ಸರ್ಕಾರೀ ನೌಕರರು ಚುನಾವಣೆಯ ಹುಚ್ಚು ಹಚ್ಚಿಕೊಂಡು ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಎನಿಸಿತು. ಗಾಂಧೀಜಿಯವರಿಗೆ ಟಿಕೆಟ್ ಸಿಗದ ಕಾರಣ ಶಿವ ಸಿಟ್ಟಾಗಿದ್ದಾನೆಂದು ತಿಳಿಯಿತು. ಹರ ಮುನಿದರೂ ಗುರು ಕಾಯ್ವನು ಎಂಬಂತೆ ನಾಡಿನ ಮಠಾಧೀಶರೆಲ್ಲರೂ ತಮ್ಮ ತಮ್ಮ ಜಾತಿಯ ಶ್ರೀಮಂತ ಶಿಷ್ಯರಿಗೆ ಟಿಕೆಟ್ ಕೊಡಿಸಲು ಯತ್ನ ನಡೆಸಿದ್ದನ್ನು ಶಿವನಿಗೆ ಹೇಳಿದೆವು. ಸತ್ಯ-ಅಹಿಂಸೆ ಎನ್ನುವ ಗಾಂಧೀಜಿಗೆ ಟಿಕೆಟ್ ಸಿಗುವುದಿಲ್ಲವೆಂದು ಈ ಮೊದಲೇ ವಿಶ್ಲೇಷಣೆ ಮಾಡಿ ಮೂರು ವಾರಗಳ ಹಿಂದೆಯೇ ನೂರೆಂಟು ಮಾತಿನಲ್ಲಿ ವಿವರವಾಗಿ ಬರೆದ ಸಂಪಾದಕರಾದ ವಿಶ್ವೇಶ್ವರ ಭಟ್ಟರ ಲೇಖನವನ್ನೂ ಶಿವನಿಗೆ ತೋರಿಸಿದೆವು. ಸಾಸಿರ ಕಣ್ಣು, ಸಾಸಿರ ಕಿವಿಯ ಶಿವ ಏಕಕಾಲದಲ್ಲಿ ಲೇಖನದ ಮೇಲೆ ಕಣ್ಣು ಹಾಯಿಸುತ್ತಾ, ನಮ್ಮನ್ನೂ ನೋಡುತ್ತಾ ನಾವು ಹೇಳುವ ಮಾತುಗಳನ್ನೂ ಕಿವಿಗೊಟ್ಟು ಆಲಿಸಿದ: 

ಇಲ್ಲಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಹೊಸದುರ್ಗದಲ್ಲಿ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿತ್ತು. ಹುಣ್ಣಿಮೆಯ ಆರಂಭದ ದಿನ ಸಿರಿಗೆರೆಯಿಂದ ಹೊಸದುರ್ಗಕ್ಕೆ ಪ್ರಯಾಣಿಸುವಾಗ ದಾರಿಯುದ್ದಕ್ಕೂ ಹಳ್ಳಿ ಹಳ್ಳಿಗಳಲ್ಲಿ ತಳಿರು ತೋರಣ ಕಟ್ಟಿ ಶಿಷ್ಯರು ತುದಿಗಾಲ ಮೇಲೆ ನಿಂತು ನಮ್ಮನ್ನು ಸ್ವಾಗತಿಸಿದರು. ಜಾತಿ-ಮತ ಭೇದವಿಲ್ಲದೆ ಸರ್ವಜನಾಂಗದವರ ಮನ್ನಣೆಗೆ ಪಾತ್ರವಾಗಿ ನಾಡಹಬ್ಬವೆನಿಸಿರುವ ಒಂಬತ್ತು ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಗಿಸಿಕೊಂಡು ಸಿರಿಗೆರೆಗೆ ವಾಪಾಸು ಹೊರಟೆವು. ಬನ್ಸಿಹಳ್ಳಿ, ಜಾನಕಲ್ ಮಾರ್ಗವಾಗಿ ನಮ್ಮನ್ನು ಬೀಳ್ಕೊಡಲು ಹೊಸದುರ್ಗ ಮತ್ತು ಆಸುಪಾಸಿನ ಭಕ್ತರನೇಕರು ತಮ್ಮ ಬಸ್ಸು ಕಾರುಗಳಲ್ಲಿ ನಮ್ಮ ಕಾರನ್ನು ಹಿಂಬಾಲಿಸಿ ಬರುತ್ತಿದ್ದರು. ದಾರಿಯಲ್ಲಿ ಬರುವ ಹಳ್ಳಿಗಳ ಮುಂದೆ ನಮ್ಮ ಕಾರು ಹಾದು ಹೋಗುವಾಗ ರಸ್ತೆಯ ಎಡಬಲದಲ್ಲಿ ಜನರು ಗುಂಪುಗೂಡಿ ನಿಂತಿದ್ದರು. ಕಾರುಗಳು ಸಮೀಪ ಬರುತ್ತಿದ್ದಂತೆ ಅಲ್ಲಿ ಕಾಯುತ್ತಿದ್ದವರು ಕೈಬೀಸಿ ಕೇಕೆ ಹೊಡೆಯುತ್ತಿದ್ದರು. ದೂರದಿಂದ ಏನೆಂದು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಹತ್ತಿರ ಬಂದೊಡನೆ ಸುಮ್ಮನಾಗಿಬಿಡುತ್ತಿದ್ದರು. ಮಬ್ಬುಗತ್ತಲಿನಲ್ಲಿ ಯಾರನ್ನೋ ಉತ್ಸಾಹದಿಂದ ಕಾಯುತ್ತಿದ್ದು ಈ ಕಾರಲ್ಲ ಕಣೋ ಎಂದು ನಿರಾಶೆಯಿಂದ ಹೇಳಿದ ಮೆಲುದನಿಯ ಮಾತು ಸ್ಪಷ್ಟವಾಗಿ ಕೇಳಿಸಿತು. ಹುಣ್ಣಿಮೆಯ ಆರಂಭದಲ್ಲಿ ದಾರಿಯುದ್ದಕ್ಕೂ ತುದಿಗಾಲ ಮೇಲೆ ನಿಂತು ಸ್ವಾಗತಿಸಿದಂತೆ, ಹುಣ್ಣಿಮೆ ಮುಗಿಸಿಕೊಂಡು ಸಿರಿಗೆರೆಗೆ ಹಿಂದಿರುಗುತ್ತಿರುವ ನಮ್ಮನ್ನು ಬೀಳ್ಕೊಡಲು ಜನರು ಸೇರಿದ್ದಾರೆಂದು ನಾವು ಅಂದುಕೊಂಡದ್ದು ಸರಿಯಲ್ಲವೆಂದು ಒಂದೆರಡು ಹಳ್ಳಿಗಳನ್ನು ದಾಟುತ್ತಿದ್ದಂತೆಯೇ ನಮಗೆ ಅರಿವಾಯಿತು. ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ತಾರಾಮಾರಾಗಿ ತೂರಾಡುತ್ತಾ ನಮ್ಮ ಕಾರಿನ ಮುಂದೆ ಇದ್ದ ಬೆಂಗಾವಲು (Escort) ಪೋಲೀಸ್ ವಾಹನಕ್ಕೇ ಬಿದ್ದ. ಚಾಲಕನ ಜಾಗರೂಕತೆಯಿಂದಾಗಿ ಯಾವ ದುರ್ಘಟನೆಯೂ ಘಟಿಸಲಿಲ್ಲ, ಆಗ ನಮಗೆ ತಿಳಿಯಿತು: ಅವರೆಲ್ಲರೂ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದುದು ನಮಗಾಗಿ ಅಲ್ಲ, ಹತ್ತಿರದಲ್ಲಿಯೇ ಇದ್ದ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಬರುವ ರಾಜಕೀಯ ಮುಂದಾಳುಗಳ ಕಾರುಬಾರುಗಳಿಗಾಗಿ! ಕಾರು ಊರಿನ ಸಮೀಪ ಬರುತ್ತಿದ್ದಂತೆಯೇ ಕಮಲದ ಗುರುತು ಕಾಣಿಸಿದರೆ ಬಿಜೆಪಿ ಬಾವುಟ ಹಾರಿಸಿ ಬಿಜೆಪಿಗೆ ಜೈ ಎಂದು ಕೂಗಿ ಬಾಟಲಿಗಳನ್ನು ಪಡೆದುಕೊಳ್ಳುವುದು, ಅದರ ಹಿಂದೆಯೇ ಹಸ್ತದ ಗುರುತು ಇರುವ ಕಾರು ಬಂದರೆ ಕಾಂಗ್ರೆಸ್ ಬಾವುಟ ಹಾರಿಸಿ ಕಾಂಗ್ರೆಸ್ಗೆ ಜೈ ಎಂದು ಜಯಘೋಷ ಹಾಕಿ ಮದ್ಯದ ಬಾಟಲಿಗಳನ್ನು ತೆಗೆದುಕೊಳ್ಳುವುದು, ದಳದ ಕಾರು ಬಂದರೆ ಕೂಡಲೇ ದನಿ ಬದಲಾಯಿಸಿ ಜನತಾದಳಕ್ಕೆ ಜೈ ಎಂದು ಘೋಷಣೆ ಕೂಗಿ ಸಾರಾಯಿ ಬಾಟಲಿಗಳಿಗೆ ಕೈಚಾಚುವುದು ಚುನಾವಣಾಸಂದರ್ಭಗಳಲ್ಲಿ ಹಳ್ಳಿಗಳಲ್ಲಿ ಕಾಣುವ ಸಾಮಾನ್ಯ ದೃಶ್ಯವಾಗಿದೆ. ನಮ್ಮ ಹಳ್ಳಿಗಳ ಜನರ ನೈತಿಕ ಮಟ್ಟ ಎಷ್ಟೊಂದು ರಸಾತಲಕ್ಕೆ ತಲುಪಿದೆ ಎಂಬುದಕ್ಕೆ ಇದೊಂದು ಚಿಕ್ಕ ಘಟನೆ. ಪ್ರಜಾಪ್ರಭುತ್ವದ ಪ್ರಭುಗಳಾದ ಜನರು ಈ ರೀತಿ ರಾಜಕಾರಣಿಗಳ ಎಂಜಲಿಗೆ ನಾಲಿಗೆ ಚಾಚಿ ನಿಲ್ಲುವುದು ಎಂತಹ ನಾಚಿಕೆಗೇಡು!

ಹಿರೇಕೆರೂರು ತಾಲ್ಲೂಕಿನ ಹಳ್ಳಿಯೊಂದರ ಮಠದ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಲಾಗಿತ್ತು. ಸಂಜೆ 6 ಗಂಟೆಗೆ ಸಮಯಕ್ಕೆ ಸರಿಯಾಗಿ ಹೋದಾಗ ಸುಮಂಗಲೆಯರು ಪೂರ್ಣಕುಂಭದೊಡನೆ ಶ್ರದ್ಧಾಭಕ್ತಿಯಿಂದ ಸ್ವಾಗತಿಸಿದರು. ಕಾರ್ಯಕ್ರಮ ಆರಂಭವಾಯಿತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ಭಾಗವಹಿಸಿರುವುದು ಕಂಡು ಬಂದಿತು. ಸುತ್ತ ಕಣ್ಣು ಹಾಯಿಸಿದಾಗ ಕೈಬೆರಳೆಣಿಕೆಯಷ್ಟು ಮಾತ್ರ ಪುರುಷರು ನಿಂತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಏಕೆ ಸೇರಿಲ್ಲವೆಂದು ಸಮಾರಂಭದ ಕಾರ್ಯಕರ್ತರನ್ನು ಪ್ರಶ್ನಿಸಿದಾಗ ತಿಳಿದುಬಂದ ಅಚ್ಚರಿಯ ಸಂಗತಿಯೆಂದರೆ “ನಿನ್ನೆ ತಾನೆ ಚುನಾವಣೆ ಇತ್ತು. ಮೊನ್ನೆ ಕುಡಿದವರು ಎಚ್ಚರದಪ್ಪಿ ಆಸ್ಪತ್ರೆ ಸೇರಿ ಓಟು ಹಾಕಲೂ ಬಂದಿರಲಿಲ್ಲ. ನಿನ್ನೆ ಕುಡಿದು ಮಲಗಿದವರು ಇನ್ನೂ ಎದ್ದಿಲ್ಲ!” 

ಗಂಭೀರವಾಗಿ ಚಿಂತಿಸುತ್ತಿದ್ದ ಶಿವನ ಗಮನ ಸೆಳೆದೆವು. ಒಮ್ಮೆ ನಮ್ಮ ಪಾರ್ಲಿಮೆಂಟ್ನಲ್ಲಿ ದೇವರಾದ ನೀನು ಇದ್ದೀಯೋ ಇಲ್ಲವೋ ಎಂಬ ಜಿಜ್ಞಾಸೆ ನಡೆಯಿತು. ಬಹಳಷ್ಟು ಚರ್ಚೆ ನಡೆದು ಕೊನೆಗೆ ಓಟಿಗೆ ಹಾಕಲಾಯಿತು. ಹೇಳಬೇಕೆಂದರೆ ಆ ದಿನ ನಿನ್ನ ಅದೃಷ್ಟ ಚೆನ್ನಾಗಿತ್ತು. ಕೆಲವೇ ಕೆಲವು ಮತಗಳ ಅಂತರದಲ್ಲಿ ನೀನು ಬಚಾವಾದೆ!... ಇಷ್ಟನ್ನು ಹೇಳುವುದರೊಳಗೆ ಶಿವ ತಲೆಯಲ್ಲಾಡಿಸಿ ಓ, ಹೀಗೋ ಸಮಾಚಾರ, ನನ್ನದೇ ತಪ್ಪು ಎಂದು ಉದ್ಗರಿಸಿದನು. ಭಸ್ಮಾಸುರನಿಗೆ ವರ ಕೊಟ್ಟು ತಪ್ಪು ಮಾಡಿದಂತೆ ಇನ್ನು ಮುಂದೆ ಅಡ್ಡಬಿದ್ದವರಿಗೆಲ್ಲಾ, ಖದೀಮರಿಗೆಲ್ಲಾ, ಗುಡಿ ಕಟ್ಟಿಸಲು ಕಾಳಸಂತೆಯ ಹಣ ಕೊಟ್ಟವರಿಗೆಲ್ಲಾ ವರ ಕೊಡಬಾರದು, ಅವರ ಹಿಂದಿನ ಉದ್ದೇಶವೇನೆಂಬುದನ್ನು ತಿಳಿದುಕೊಳ್ಳಬೇಕು ಎಂದನು. ಇವರೆಲ್ಲಾ ನನ್ನ ಬೋಳೆ ಸ್ವಭಾವದ ದುರ್ಲಾಭ ಮಾಡಿಕೊಳ್ಳುತ್ತಿದ್ದಾರೆಂದು ಗೊಣಗುತ್ತಾ ಪೂಜಾಕೈಂಕರ್ಯ ಸ್ವೀಕರಿಸಬೇಕೆಂದು ಕೇಳಿಕೊಂಡರೂ ನಾನಿರುವುದನ್ನು ನೋಡಿ ನಿಮಗೆ ಶಿಷ್ಯರು ಒತ್ತಡ ತರಬಹುದೆಂದು ಹೇಳಿ ತಡಮಾಡದೆ ಬೋಳೆಶಂಕರ ನಂದಿಯನ್ನೇರಿ ಕೈಲಾಸಕ್ಕೆ ತೆರಳಿದನು. 

ಶಿವ ಅತ್ತ ಕಡೆ ಹೋಗುತ್ತಿದ್ದಂತೆ ಬಹಳ ವರ್ಷಗಳ ಹಿಂದೆ ನಾವು ಅಮೇರಿಕೆಗೆ ಹೋದಾಗ ಅಲ್ಲಿಯ ಭಾರತೀಯ ಸಂಜಾತ ಮಕ್ಕಳೊಂದಿಗೆ ಲೋಕಾಭಿರಾಮವಾಗಿ ಮಾತನಾಡುವಾಗ ಕೇಳಿದ್ದ ರೋಚಕ ಪ್ರಸಂಗ ನೆನಪಾಯಿತು. ಇದು ಈಗಿನ ಅಧ್ಯಕ್ಷರಾದ ಜಾರ್ಜ್ ಬುಷ್ ತಂದೆ ಜಾರ್ಜ್ ಹರ್ಬರ್ಟ್ ಬುಷ್ ಅಧ್ಯಕ್ಷರಾಗಿದ್ದಾಗ ಪ್ರಚಲಿತವಾಗಿದ್ದ ಕಥಾನಕ: ಒಮ್ಮೆ ಅಮೇರಿಕಾದ ಪ್ರಜೆಗಳು ದೇವರ ಹತ್ತಿರ ಹೋಗಿ ತಮ್ಮ ದೇಶ ಉದ್ದಾರವಾಗುವುದು ಯಾವಾಗ ಎಂದು ಕೇಳಿದರಂತೆ. ಅದಕ್ಕೆ ದೇವರು “ನಿಮ್ಮ ಅಧ್ಯಕ್ಷ ಜಾರ್ಜ್ ಬುಷ್ ಬದುಕಿರುವವರೆಗೂ ನಿಮ್ಮ ದೇಶ ಉದ್ಧಾರ ಆಗುವುದಿಲ್ಲ" ಎಂದು ಹೇಳಿದನಂತೆ! ಅದೇ ರೀತಿ ರಷ್ಯಾ ದೇಶದ ಪ್ರಜೆಗಳು ದೇವರನ್ನು ಕಂಡು ಅವರ ದೇಶ ಉದ್ಧಾರವಾಗುವುದು ಯಾವಾಗ ಎಂದು ಕೇಳಿದರಂತೆ. ಅದಕ್ಕೂ ದೇವರು ನಿಮ್ಮ ಪ್ರೀಮಿಯರ್ ಗೋರ್ಬಚೇವ್ ಬದುಕಿರುವವರೆಗೂ ನಿಮ್ಮ ದೇಶದ ಉದ್ಧಾರ ಖಂಡಿತಾ ಸಾಧ್ಯವಿಲ್ಲ ಎಂದು ಹೇಳಿದನಂತೆ! ಅವರಂತೆಯೇ ಭಾರತೀಯರು ದೇವರನ್ನು ಕಂಡು ಹಣ್ಣು ಕಾಯಿ ಒಡೆದು, ಊದಿನಕಡ್ಡಿ ಬೆಳಗಿ, ಕರ್ಪೂರ ಹಚ್ಚಿ, ಗಂಟೆ ಹೊಡೆದು ಮಂಗಳಾರತಿ ಮಾಡಿ, ಉದ್ದಕ್ಕೆ ಅಡ್ಡ ಬಿದ್ದು, ದೇವರೇ, ನಮ್ಮ ದೇಶ ಉದ್ಧಾರವಾಗುವುದು ಯಾವಾಗ ಎಂದು ಅತ್ಯಂತ ಭಯ-ಭಕ್ತಿಯಿಂದ ಕೇಳಿದರಂತೆ. ಅದಕ್ಕೆ ದೇವರು ಸಿಟ್ಟಿಗೆದ್ದು ಏರಿದ ದನಿಯಲ್ಲಿ ನಾನು ಬದುಕಿರುವವರೆಗೂ ನಿಮ್ಮ ದೇಶದ ಉದ್ಧಾರ ಸಾಧ್ಯವಿಲ್ಲ ತೊಲಗಿರಿ ಎಂದು ಗದರಿಸಿ ಕಳುಹಿಸಿದನಂತೆ! 

ವಿಚಾರಶೀಲ ಓದುಗರೇ! ಈ ದೇಶದ ಹಣೆಯ ಬರಹವನ್ನು ಅಳಿಸಲು ಹರಿ-ಹರ-ಬ್ರಹ್ಮಾದಿಗಳಿಂದಲೂ ಸಾಧ್ಯವಿಲ್ಲ. ಆದರೆ ಆ ದೇವರಿಂದ ಆಗದ ಕೆಲಸವನ್ನು ನಿಮ್ಮ ಕೈಯಿಂದ ಮಾಡಲು ಸಾಧ್ಯವಿದೆ. ಒಮ್ಮೆ ಅಮೇರಿಕಾದ ವೃದ್ಧ ಮಹಿಳೆಯೊಬ್ಬಳು ಯಾವುದೋ ಒಂದು ಅರ್ಜಿ ಫಾರಂ ಭರ್ತಿ ಮಾಡಬೇಕಾಗಿತ್ತು. ಎಲ್ಲ ಅರ್ಜಿಗಳಲ್ಲಿ ಮಾಮೂಲಿಯಾಗಿ ಕೇಳುವಂತೆ ಅರ್ಜಿದಾರರ ಹೆಸರು, ವಿಳಾಸ ಮತ್ತಿತರ ವ್ಯಕ್ತಿಗತ ಮಾಹಿತಿಯನ್ನು ಕೇಳಲಾಗಿತ್ತು. ಅದೆಲ್ಲವನ್ನೂ ಭರ್ತಿ ಮಾಡಿದ ಆ ವೃದ್ಧ ಮಹಿಳೆಗೆ ಅರ್ಜಿಯಲ್ಲಿ ನಿಮ್ಮ ಅವಲಂಬಿತರು ಯಾರು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಸ್ವಲ್ಪ ಕಷ್ಟವಾಯಿತು. ಏಕೆಂದರೆ ಆಕೆಯ ಪತಿ ಮತ್ತು ಮಕ್ಕಳು ರಸ್ತೆ ಅಪಘಾತದಲ್ಲಿ ಸತ್ತುಹೋಗಿದ್ದರು. ಆ ದುರ್ಘಟನೆ ನೆನಪಾಗಿ ದುಃಖಿತಳಾದ ಆ ವೃದ್ಧ ಮಹಿಳೆ ಸಾವರಿಸಿಕೊಂಡು ಆ ಕಾಲಂನ್ನು ಹಾಗೆಯೇ ಖಾಲಿ ಬಿಡಲು ಮನಸ್ಸು ಬಾರದೆ ಕ್ಷಣಕಾಲ ಯೋಚಿಸಿ ಅದರಲ್ಲಿ ನನ್ನನ್ನು ಅವಲಂಬಿಸಿರುವುದು ನನ್ನ ನೆಚ್ಚಿನ ದೇಶವಾದ ಅಮೇರಿಕಾ ಎಂದು ಬರೆದಳಂತೆ! 

ಜಾಗೃತ ಮತದಾರರೇ! ವಿವೇಚನೆಯರಿತು ನಿಮ್ಮ ಪವಿತ್ರವಾದ ಮತ ಚಲಾಯಿಸಿ ನಿಮ್ಮನ್ನು ಅವಲಂಬಿಸಿರುವ ದೇಶವನ್ನು ಕಾಪಾಡಿರಿ. ಕುಡಿಯದೇ ಇರುವ ಗಂಡಿಗೆ ಮಗಳನ್ನು ಕೊಡಬೇಕೆಂದರೆ ಅಂತಹ ಗಂಡು ಈಗಿನ ಕಾಲದಲ್ಲಿ ಸಿಕ್ಕುವುದಿಲ್ಲ. ಇದ್ದುದರಲ್ಲಿಯೇ ಕಡಿಮೆ ಕುಡಿಯುವ ಗಂಡಿಗೆ ಮಗಳನ್ನು ಕೊಡದೆ ಬೇರೆ ಗತ್ಯಂತರವಿಲ್ಲ. ಹಾಗೆಯೇ ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಉಳಿದಿರುವುದೊಂದೇ ಆಯ್ಕೆ: ಕಡಿಮೆ ಭ್ರಷ್ಟರನ್ನು ಗುರುತಿಸಿ ನಿಮ್ಮ ಮತ ಕೊಡಿರಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 30.4.2008.