ಮೋಹದ ಮಾದಕತೆ v/s ಪ್ರೀತಿಯ ಮಾರ್ದವತೆ

  •  
  •  
  •  
  •  
  •    Views  

ಹಿಂದಿನ ವಾರ ಪ್ರೇಮಿಗಳ ದಿನಾಚರಣೆಯ (Valentine"s Day) ಮರುದಿನ ಪತ್ರಿಕೆಗಳಲ್ಲಿ ರಂಗು ರಂಗಿನ ಸುದ್ದಿಗಳು! ಪಾರ್ಕು, ಹೋಟೆಲು ಸಿನೆಮಾ, ಶಾಪಿಂಗ್ ಮಾಲುಗಳಲ್ಲಿ ಪ್ರೇಮಿಗಳು ಸುತ್ತಾಡಿ ಪರಸ್ಪರ ಉಡುಗೊರೆಗಳನ್ನು ನೀಡಿ, ಪ್ರೇಮದ ಭ್ರಮಾಲೋಕದಲ್ಲಿ ಪರಿಭ್ರಮಣೆಯನ್ನು ನಡೆಸಿ ಸಂಭ್ರಮಿಸಿದ ದಿನ ಅದು. ನಗರಪ್ರದೇಶದಲ್ಲಿ ಹದಿಹರೆಯದ ಬೆಡಗುಬಿನ್ನಾಣಗಳ ಆಧುನಿಕ ಯುವಕ-ಯುವತಿಯರು ಆಗಸದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಹಕ್ಕಿಗಳಂತೆ ಸುತ್ತಾಡಿಕೊಂಡು ಸಂಭ್ರಮಿಸಿದುದನ್ನು "ಪ್ರಣಯ ಪಕ್ಷಿಗಳ ಕಲರವ" ಎಂಬ ಆಕರ್ಷಕ ತಲೆಬರಹದ ಅಡಿಯಲ್ಲಿ ವಿಜಯಕರ್ನಾಟಕ ಪತ್ರಿಕೆ ಮುಖಪುಟದಲ್ಲಿ ಸವಿವರವಾಗಿ ವರದಿ ಮಾಡಿದೆ. ಪ್ರೇಮಿಗಳು ತಮ್ಮ ಸುತ್ತಣ ಲೋಕವನ್ನು ಮರೆತು, ತಮ್ಮದೇ ಮಾಯಾಲೋಕದಲ್ಲಿ ವಿಹರಿಸಿದ್ದಾರೆ. ಇನ್ನು ಕೆಲವರು ಈ ಮಾಯಾಲೋಕದಲ್ಲಿ ವಿಹರಿಸಲು ಹೆತ್ತವರು ಅಡ್ಡಬಂದ ಕಾರಣ ಸಾಧ್ಯವಾಗದೆ ಹತಾಶರಾಗಿ ರೈಲುಹಳಿಗೆ ಬಿದ್ದು ಯಮಲೋಕ ಸೇರಿದ್ದಾರೆ. 

ಈ ಸಂದರ್ಭದಲ್ಲಿ ಎಲ್ಲಿಯೋ ಕೇಳಿದ ಒಂದು ಕಥೆ: ಒಬ್ಬ ಹದಿಹರೆಯದ ಹುಡುಗ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಪೀಡಿಸುತ್ತಾನೆ. "ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀಯಾ ಎಂದು ನಾನು ಹೇಗೆ ನಂಬಲಿ?" ಎಂದು ಆಕೆ ಸಂದೇಹ ವ್ಯಕ್ತಪಡಿಸುತ್ತಾಳೆ. "ನಿನಗೇನು ಬೇಕು ಹೇಳು ಅದನ್ನು ನಾನು ತಂದುಕೊಡುತ್ತೇನೆ?" ಎಂದು ಆ ಹುಡುಗ ಕೇಳುತ್ತಾನೆ. “ಹಾಗಾದರೆ ನಿನ್ನ ತಾಯಿಯ ಹೃದಯವನ್ನು ನನಗೆ ತಂದು ಕೊಡಬಲ್ಲೆಯಾ?” ಎಂದು ಆ ಹುಡುಗಿ ಸವಾಲು ಹಾಕುತ್ತಾಳೆ. ಆಕೆಯ ಮೋಹಪಾಶಕ್ಕೆ ಒಳಗಾಗಿದ್ದ ಆ ಹುಡುಗ ಓಹೋ! ಅದೇನು ಮಹಾ! ನಿನ್ನ ಮೇಲಿನ ಪ್ರೀತಿಗಾಗಿ ನಾನು ಯಾವ ತ್ಯಾಗಕ್ಕಾದರೂ ಸಿದ್ದ ಇಗೋ ಬಂದೆ" ಎಂದು ಹೇಳಿ ಮನೆಯತ್ತ ಧಾವಿಸುತ್ತಾನೆ. ತಾಯಿಯೊಬ್ಬಳೇ ಇರುವ ಸಮಯವನ್ನು ಹೊಂಚುಹಾಕಿ ಆಕೆಯನ್ನು ಚಾಕುವಿನಿಂದ ಇರಿದು ಕೊಂದು ಅವಳ ಎದೆಯನ್ನು ಸೀಳಿ ಹೃದಯವನ್ನು ಬಗೆದು ತೆಗೆದುಕೊಳ್ಳುತ್ತಾನೆ. ಅದನ್ನು ಭದ್ರವಾಗಿ ಕೈಯಲ್ಲಿ ಹಿಡಿದುಕೊಂಡು ಪ್ರೀತಿಸಿದ ಹುಡುಗಿಯತ್ತ ಓಡುತ್ತಾನೆ. ದಾರಿಯಲ್ಲಿ ಒಂದು ಕಲ್ಲನ್ನು ಎಡವಿ ಕೆಳಗೆ ಬೀಳುತ್ತಾನೆ. ಕೈಯಲ್ಲಿದ್ದ ತಾಯಿಯ ಹೃದಯ ಮರುಗಿ ಮಗನನ್ನು ಕೇಳುತ್ತದೆ: "ಮಗನೇ! ಕಾಲಿಗೆ ಪೆಟ್ಟಾಯಿತೇನಪ್ಪಾ?" ಮೋಹದ ಅಮಲಿನಲ್ಲಿದ್ದ ಆ ಹುಡುಗನಿಗೆ ತಾಯಿಹೃದಯದ ಮರುಕ ಕೇಳಿಸುವುದಿಲ್ಲ. ಮೇಲೆದ್ದು ಮತ್ತೆ ಹುಡುಗಿಯತ್ತ ಓಡುತ್ತಾನೆ. "ಇಗೋ ನೋಡು ನನ್ನ ತಾಯಿಯ ಹೃದಯ! ಈಗಲಾದರೂ ನಿನಗೆ ನನ್ನ ಮೇಲೆ ನಂಬಿಕೆ ಬಂತೇ? ಬಾ ಮದುವೆಯಾಗೋಣ?" ಎಂದು ಕರೆಯುತ್ತಾನೆ. ಹುಡುಗಿ ಹೌಹಾರಿ ಸಿಟ್ಟಿನಿಂದ ಹೇಳುತ್ತಾಳೆ! "ನಿನ್ನಂತಹ ಅಯೋಗ್ಯನನ್ನು ಮದುವೆಯಾಗುವಷ್ಟು ಅವಿವೇಕಿ ನಾನಲ್ಲ. ನನ್ನ ಮೇಲಿನ ಹುಚ್ಚಿನಿಂದ ಹೆತ್ತ ತಾಯಿಯನ್ನು ಕೊಂದು ಹಾಕಿದ ಪಾಪಿ ನೀನು. ನಾಳೆ ನನಗಿಂತ ಸುಂದರಳಾದ ಹುಡುಗಿ ಕಂಡುಬಂದರೆ ನನ್ನನ್ನೂ ಕೊಂದು ಅವಳ ಹಿಂದೆ ಓಡುತ್ತೀಯಾ!" ಎಂದು ಹೇಳಿ ಅವನನ್ನು ಮದುವೆಯಾಗಲು ನಿರಾಕರಿಸುತ್ತಾಳೆ. ಇದರಿಂದ ಸಿಟ್ಟಿಗೆದ್ದ ಹುಡುಗ ತಾನು ಪ್ರೀತಿಸಿದ ಆ ಹುಡುಗಿಯನ್ನೂ ಚಾಕುವಿನಿಂದ ಇರಿದು ಸಾಯಿಸಿಬಿಡುತ್ತಾನೆ. ಈ ದುರಂತ ಘಟನೆಯಲ್ಲಿ ಕಾಣಬರುವುದು ಪ್ರೀತಿಯಲ್ಲ (love) ಮೋಹ. (infatuation) ಇಂತಹ ಸನ್ನಿವೇಶಗಳನ್ನು ಗಮನದಲ್ಲಿರಿಸಿಕೊಂಡೇ ಭಗವದ್ಗೀತೆಯು ಬೋಧಿಸಿದ್ದು: 

 ಧ್ಯಾಯತೋ ವಿಷಯಾನ್ ಪುಂಸಃ ಸಂಗಃ ತೇಷೂಪಜಾಯತೇ 
 ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ  
ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾದ್ ಸೃತಿವಿಭ್ರಮಃ| 
ಸ್ಮೃತಿಭ್ರಂಶಾದ್ ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ!

       - ಭಗವದ್ಗೀತೆ (2.62-63)

ವಿಷಯವಾಸನೆ>ಸಂಗ>ಕಾಮ>ಕ್ರೋಧ>ಸಂಮೋಹ>ಸ್ಮೃತಿವಿಭ್ರಮ>ಬುದ್ಧಿನಾಶ>ವಿನಾಶ. ಒಂದು ವಸ್ತು ಅಥವಾ ವಿಷಯವನ್ನು ಪದೇ ಪದೇ ಚಿಂತಿಸಿದಾಗ ಅದರ ಬಗ್ಗೆ ಮನಸ್ಸಿನಲ್ಲಿ ಆಸಕ್ತಿ ಉಂಟಾಗುತ್ತದೆ (ಸಂಗಃ).  ಅದರ ಒಡನಾಟ/ಸಾಹಚರ್ಯದಿಂದ ಅದನ್ನು ಪಡೆಯಬೇಕೆಂಬ ಹಂಬಲ ಉಂಟಾಗುತ್ತದೆ(ಕಾಮಃ). ಅದು ಕೈಗೆ ಸಿಗದಿದ್ದಾಗ ಸಿಟ್ಟು ಬರುತ್ತದೆ(ಕ್ರೋಧಃ). ಸಿಟ್ಟು ಮನುಷ್ಯನನ್ನು ಮೂಢನನ್ನಾಗಿಸುತ್ತದೆ (ಸಂಮೋಹಃ). ಅದರಿಂದ ಕಾರ್ಯಾಕಾರ್ಯ ವಿವೇಚನೆ ಇಲ್ಲದಂತಾಗುತ್ತದೆ (ಸ್ಮೃತಿವಿಭ್ರಮಃ). ವಿವೇಚನೆಯನ್ನು ಕಳೆದುಕೊಂಡ ಮನಸ್ಸು ಬುದ್ದಿಯನ್ನು ಹಾಳುಗೆಡವುತ್ತದೆ (ಬುದ್ಧಿನಾಶಃ). ಬುದ್ದಿ ಹಾಳಾಯಿತೆಂದರೆ ಮನುಷ್ಯ ಮಾಡಬಾರದ ಕೆಲಸವನ್ನು ಮಾಡಿ ಹಾಳಾಗುತ್ತಾನೆ (ಪ್ರಣಶ್ಯತಿ). 

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆಯನ್ನು ಕೇಳಿ. ಜಪಾನ್ ದೇಶದಲ್ಲಿ ಮನೆಯ ಗೋಡೆಗಳನ್ನು ನಮ್ಮ ದೇಶದಂತೆ ಕಲ್ಲು/ಇಟ್ಟಿಗೆಗಳಿಂದ ಮಾಡಿರುವುದಿಲ್ಲ. ಮರದ ಹಲಗೆಗಳಿಂದ ಮಾಡಿರುತ್ತಾರೆ. ಹಲಗೆಯಿಂದ ನಿರ್ಮಿಸಿದ ಗೋಡೆಯ ಮಧ್ಯೆ ಟೊಳ್ಳು ಜಾಗ ಇರುತ್ತದೆ. ಮನೆಯ ಮಾಲೀಕನೊಬ್ಬ ತನ್ನ ಮನೆಯ ಗೋಡೆಯನ್ನು ರಿಪೇರಿ ಮಾಡಲು ತೊಡಗಿದಾಗ ಎರಡು ಹಲಗೆಗಳ ಸಂದಿಯಲ್ಲಿ ಒಂದು ಹಲ್ಲಿ ಕಾಣಿಸಿತು. ಅವನು ವರ್ಷದ ಹಿಂದೆ ಆ ಗೋಡೆಗೆ ಹೊಡೆದಿದ್ದ ಕಬ್ಬಿಣದ ಮೊಳೆ ಅದರ ಒಂದು ಕಾಲಿಗೆ ನಾಟಿತ್ತು. ವರ್ಷವಾದರೂ ಹಲ್ಲಿ ಸಾಯದೆ ಗೋಡೆಯ ಒಳಭಾಗದಲ್ಲಿ ಅಂಟಿಕೊಂಡೇ ಇತ್ತು. ಅದನ್ನು ನೋಡಿದ ಮನೆಯ ಯಜಮಾನನ ಮನಸ್ಸಿಗೆ ತುಂಬಾ ನೋವುಂಟಾಯಿತು. ಆ ಹಲ್ಲಿ ಒಂದು ವರ್ಷಕಾಲ ಇದ್ದಲ್ಲಿಯೇ ಇದ್ದು ಹೇಗೆ ಬದುಕಿ ಉಳಿದಿದೆಯೆಂದು ಆಶ್ಚರ್ಯವೂ ಉಂಟಾಯಿತು. ಕುತೂಹಲದಿಂದ ಅದನ್ನು ಗಮನಿಸುತ್ತಿರುವಾಗ ಸ್ವಲ್ಪಹೊತ್ತಿನಲ್ಲಿಯೇ ಒಂದು ಹೆಣ್ಣು ಹಲ್ಲಿ ಅದರ ಹತ್ತಿರ ಬಂದು ತನ್ನ ಬಾಯಲ್ಲಿ ಕಚ್ಚಿಕೊಂಡು ತಂದಿದ್ದ ಆಹಾರವನ್ನು ಅದಕ್ಕೆ ತಿನ್ನಲು ಕೊಟ್ಟಿತು! ವರ್ಷದುದ್ದಕ್ಕೂ ಆ ಗಂಡು ಹಲ್ಲಿ ಹೀಗೆ ಹೆಣ್ಣು ಹಲ್ಲಿಯು ಮಾಡಿದ ಆರೈಕೆಯಲ್ಲಿ ಜೀವಂತವಾಗಿ ಉಳಿದಿತ್ತು! ಅಬ್ಬಾ! ಆ ಎರಡು ಹಲ್ಲಿಗಳ ಮಧ್ಯೆ ಎಂತಹ ಪ್ರೀತಿ ಮತ್ತು ಅನುರಾಗ ಇದ್ದಿರಬಹುದು! ಅಂತಹ ಪ್ರೀತಿ ಅನುರಾಗಗಳು ಮಂಗಳವಾದ್ಯಗಳನ್ನು ಮೊಳಗಿಸಿ "ಮಾಂಗಲ್ಯತಂತುನಾನೇನ..." ಎಂದೆಲ್ಲಾ ಮಂತ್ರ ಹೇಳಿಸಿದ ಇಂದಿನ ಬುದ್ದಿವಂತರೆನಿಸಿದ ಗಂಡುಹೆಣ್ಣುಗಳಲ್ಲಿ ಇದೆಯೇ? ಕ್ಷುದ್ರಜಂತುವೆನಿಸಿದ ಈ ಹಲ್ಲಿಗಳ ವರ್ತನೆಗೂ ಮದುವೆಯಾದ ಮೂರು ತಿಂಗಳಿಗೇ ಡೈವೋರ್ಸ್ ಕೊಡುವ ಆಧುನಿಕ ಯುವದಂಪತಿಗಳ ವರ್ತನೆಗೂ ಎಷ್ಟೊಂದು ವ್ಯತ್ಯಾಸವಿದೆ! 

ದೈಹಿಕ ಆಕರ್ಷಣೆಯೆಂಬುದು ಒಂದು ಮೋಹ. ಅದು ಶಾಶ್ವತವಲ್ಲ, ವಯಸ್ಸು ಕಳೆದಂತೆ ಕುಂದುತ್ತದೆ. ಆದರೆ ಹೃದಯದ ಆಕರ್ಷಣೆಯಾದ ನಿರ್ವ್ಯಾಜ ಪ್ರೀತಿಯ ಸ್ವರೂಪವೇ ಬೇರೆ. ಅದು ಕಾಲಾತೀತ, ವಯಸ್ಸು ಕಳೆದಂತೆ ಹೆಚ್ಚುತ್ತಾ ಹೋಗುತ್ತದೆ. ಅಂತಹ ಪ್ರೇಮದ ಕತೆಯನ್ನು ಶಿವಪುರಾಣದಲ್ಲಿ ನೋಡಬಹುದು. ಶಿವನ ಆಣತಿಯನ್ನು ಮೀರಿ ದಾಕ್ಷಾಯಿಣಿ ತನ್ನ ತಂದೆ ದಕ್ಷಬ್ರಹ್ಮ ನಡೆಸುತ್ತಿದ್ದ ಯಜ್ಞಕ್ಕೆ ಕರೆಯದಿದ್ದರೂ ಹೋಗುತ್ತಾಳೆ. ತವರುಮನೆಯಲ್ಲಿ ತನ್ನ ತಂದೆಯಿಂದಲೇ ಅವಮಾನಿತಳಾಗಿ ಅಗ್ನಿಕುಂಡದಲ್ಲಿ ಹಾರಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಮುಂದೆ ಆಕೆ ಗಿರಿರಾಜನ ಮಗಳಾಗಿ ಜನಿಸುತ್ತಾಳೆ. ಶಿವನೂ ತಪಸ್ಸಿಗೆ ತೊಡಗುತ್ತಾನೆ. ತಪೋನಿರತ ಶಿವನನ್ನು ನೋಡಿ ಗಿರಿಜೆ ಆಕರ್ಷಿತಳಾಗುತ್ತಾಳೆ. ಆಕೆಯ ಆ ಕ್ಷಣದ ಮನಸ್ಸಿನ ಮಧುರ ಭಾವನೆಗಳನ್ನು ಮಹಾಕವಿ ಕಾಳಿದಾಸ ತನ್ನ "ಕುಮಾರಸಂಭವ" ಕಾವ್ಯದಲ್ಲಿ ತುಂಬಾ ಮನೋಜ್ಞವಾಗಿ ವರ್ಣಿಸಿದ್ದಾನೆ: “ಶೈಲಾಧಿರಾಜ-ತನಯಾ ನ ಯಯೌ ನ ತಸ್ಥೌ” (ಕುಮಾರಸಂಭವ 5.85). ಗಿರಿಜೆಯ ಹೃದಯದಲ್ಲಿ ಆವಿರ್ಭವಿಸಿದ ಪ್ರೀತಿ ಅಲ್ಲಿಯೇ ನಿಲ್ಲಲು ಹಾತೊರೆಯುತ್ತದೆ; ಮುಂದೆ ಅಡಿಯಿಡಲು ಬಿಡುವುದಿಲ್ಲ. ಆದರೆ ಅವಳ ಮನಸ್ಸಿನಲ್ಲಿದ್ದ ನಾಚಿಕೆ ಅಲ್ಲಿಯೇ ನಿಲ್ಲಲು ಬಿಡುವುದಿಲ್ಲ; ಮುಂದೆ ಅಡಿಯಿಡಲು ಒತ್ತಾಯಿಸುತ್ತದೆ. ಈ ದ್ವಂದ್ವದಲ್ಲಿ ಗಿರಿಜೆ ನಿಂತಲ್ಲಿಯೇ ನಿಲ್ಲಲೂ ಆಗದ ಮುಂದೆ ಅಡಿಯಿಡಲೂ ಆಗದ ಮಾನಸಿಕ ತೊಳಲಾಟಕ್ಕೆ ಸಿಲುಕಿಕೊಳ್ಳುತ್ತಾಳೆ. 

ವಾರದ ಹಿಂದೆ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ಶಿಲೆಯ ಮೇಲೆ ಕುಳಿತಿದ್ದಾಗ ಉತ್ತರ ಭಾರತದ ಪ್ರವಾಸಿಗನೊಬ್ಬ ಅಲ್ಲಿರುವ "ಶ್ರೀಪಾದ ಪರೈ" ಮಂಟಪದಲ್ಲಿ ಪಾರ್ವತಿಯ ಒಂದೇ ಪಾದದ ಗುರುತು ಏಕಿದೆಯೆಂದು ಕೇಳಿದ. ಅದು ಪಾರ್ವತಿಯು ತಾನು ಪ್ರೀತಿಸಿದ ಶಿವನನ್ನು ಒಲಿಸಿಕೊಳ್ಳಲು ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿದ್ದರ ಸಂಕೇತ. ಇದು ಪುರಾಣದ ಕಥೆಯಾದರೆ ಅಕ್ಕಮಹಾದೇವಿಯು ಜಗದ ಜನರ ಮೋಹದ ಮಗ್ಗುಲ ಮುಳ್ಳುಗಳನ್ನೆಲ್ಲಾ ನಿವಾರಿಸಿ "ಸಾವಿಲ್ಲದ ಕೇಡಿಲ್ಲದ, ರೂಹಿಲ್ಲದ ಚೆಲುವ" ಚೆನ್ನಮಲ್ಲಿಕಾರ್ಜುನನ್ನು ಒಲಿಸಲು ಕೈಗೊಂಡ ಕದಳೀವನ ಯಾತ್ರೆ ಕನ್ನಡ ನಾಡಿನ ಇತಿಹಾಸ. ಕೇವಲ ದೈಹಿಕ ಸೆಳೆತದಿಂದ "ವ್ಯಾಲೆಂಟೈನ್ಸ್ ಡೇ" ಆಚರಿಸುವ ಲೌಕಿಕ ಪ್ರೇಮಿಗಳೆತ್ತ! ತಮ್ಮ ದೈವಿಕ ಪ್ರೇಮದ ಪಾಶದಲ್ಲಿ ದೇವರನ್ನೇ ಕಟ್ಟಿ ಹಾಕಿದ ಅಕ್ಕಮಹಾದೇವಿ, ಮೀರಾಬಾಯಿಯರಂತಹ ಅಲೌಕಿಕ ಪ್ರೇಮಿಗಳೆತ್ತ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 23.2.2012