ರಾಜಕಾರಣದಲ್ಲಿ ಸಾಹಿತ್ಯದ ಕಂಪು

  •  
  •  
  •  
  •  
  •    Views  

ನ್ನಡದ ಸೃಜನಶೀಲ ಸಾಹಿತ್ಯರಚನೆಯಲ್ಲಿ ಹೆಸರುಮಾಡಿದ ಆಧುನಿಕ ಬರಹಗಾರರಲ್ಲಿ ಮಹದೇವ ಬಣಕಾರರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಅವರು ಹುಟ್ಟಿದ ಊರು. ಒಬ್ಬ ಉತ್ತಮ ಬರಹಗಾರನಿಗೆ ತನ್ನ ಮಕ್ಕಳ ಮೇಲಿನ ಮಮತೆಗಿಂತ, ತಾನು ಬರೆದ ಕೃತಿಗಳ ಮೇಲೆಯೇ ಮಮತೆ ಹೆಚ್ಚು. ನಾಡಿನ ಅನೇಕ ಖ್ಯಾತಸಾಹಿತಿಗಳಿಗೆ ಇದ್ದಂತೆ ಬಣಕಾರರಿಗೆ ಸಾಂಸಾರಿಕ ತಾಪತ್ರಯಗಳು ಬಹಳ ಇದ್ದುವು. ಸಾಂಸಾರಿಕ ಸುಖ ಎಂಬುದು ಅವರಿಗೆ ಇರಲೇ ಇಲ್ಲ. ಸಾವಿರಾರು ಚಿಂತೆಗಳು, ನೂರಾರು ಶಾರೀರಿಕ ಬಾಧೆಗಳು. ಒಂದು ರೀತಿಯಲ್ಲಿ ನೋಡಿದರೆ ಅವರಿಗೆ ಸಾಹಿತ್ಯ ರಚನೆಯಿಂದಲೇ ತಮ್ಮ ಸಂಸಾರದ ಚಿಂತೆಗಳನ್ನು ಮರೆಯಲು ಸಾಧ್ಯವಾಗಿದ್ದು; ನೋವಿನಲ್ಲಿಯೂ ನಲಿವನ್ನು ಕಾಣಲು ಸಾಧ್ಯವಾಗಿದ್ದು. ಎಲ್ಲ ಶಾರೀರಿಕ ಬಾಧೆಗಳನ್ನು ಸಹಿಸಿಕೊಳ್ಳಲು ಆಗಿದ್ದು. ಒಬ್ಬ ಬರಹಗಾರನು ಖಾಯಿಲೆಯಿಂದ ಆಸ್ಪತ್ರೆ ಸೇರುವಂತಾದರೆ ಅವನ ಬರಹ ನಿಲ್ಲುತ್ತದೆ. ಆದರೆ ಬಣಕಾರರ ವಿಷಯದಲ್ಲಿ ಹಾಗಲ್ಲ. ಅವರು ಪ್ರತಿಸಾರಿ ಆಸ್ಪತ್ರೆ ಸೇರಿದಾಗಲೆಲ್ಲಾ ಒಂದೊಂದು ಹೊಸ ಗ್ರಂಥವನ್ನು ಬರೆಯುತ್ತಿದ್ದರು. ಹೀಗಾಗಿ “ನೀವು ಆಸ್ಪತ್ರೆ ಸೇರುವಂತಾಗಲಿ” ಎಂದು ಅನೇಕ ವೇಳೆ ನಾವು ಅವರಿಗೆ ಹಾಸ್ಯಮಾಡಿದ್ದುಂಟು. ಕವಿಗಳಿಗೆ ರಮಣೀಯವಾದ ಪ್ರಾಕೃತಿಕ ಪರಿಸರ ಕಾವ್ಯರಚನೆಗೆ ಸ್ಫೂರ್ತಿಯನ್ನು ನೀಡುತ್ತದೆ. ಆದರೆ ಬಣಕಾರರ ವಿಚಾರದಲ್ಲಿ ಹೇಳುವುದಾದರೆ ರೋಗರುಜಿನಗಳಿಂದ ನರಳುವ ಆಸ್ಪತ್ರೆಯ ವಾತಾವರಣವೇ ಅವರ ಕಾವ್ಯರಚನೆಗೆ ಸ್ಫೂರ್ತಿಯ ಸೆಲೆ. ಹಾಸಿಗೆಯಲ್ಲಿ ಮಲಗಿ ನೋವಿನಿಂದ ಸ್ವತಃ ನರಳುತ್ತಿದ್ದರೂ ನಿರ್ಲಿಪ್ತರಾಗಿ ಬರೆಯುವ ಕಾವ್ಯರಚನಾ ಕೌಶಲವಿದ್ದುದು ಬಣಕಾರರೊಬ್ಬರಿಗೇ ಎಂದರೆ ತಪ್ಪಾಗಲಾರದು. 

ಮಹದೇವ ಬಣಕಾರರದು ತುಂಬಾ ವಿನೋದ ಪ್ರವೃತ್ತಿ. ಅವರೊಂದಿಗೆ ಮಾತನಾಡಿದವರಾರೂ ನಗದೇ ಇರುತ್ತಿರಲಿಲ್ಲ. ಎಂತಹ ಬಿಗಿತುಟಿಯ ವ್ಯಕ್ತಿಯನ್ನಾದರೂ ಅವರು ಕ್ಷಣಾರ್ಧದಲ್ಲಿ ಮಾತಿನ ಕಚಗುಳಿ ಇಟ್ಟು ಹೊಟ್ಟೆ ಹುಣ್ಣಾಗುವಂತೆ ನಗಿಸಿಬಿಡುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ನಡೆದ ಒಂದು ಪ್ರಸಂಗ. ಅವರ ಕೊನೆಯ ಮಗಳ ಮದುವೆಗೆ ನಮ್ಮನ್ನು ಆಹ್ವಾನಿಸಿದ್ದರು. ಮದುವೆ ಮಂಟಪದಲ್ಲಿ ಮದುಮಕ್ಕಳನ್ನು ಆಶೀರ್ವದಿಸಿ ಹಿಂದಿರುಗುವಾಗ ಬಣಕಾರರು ಎದುರಾದರು. ಅನಾರೋಗ್ಯದ ಕಾರಣ ಗಾಲಿಯ ಕುರ್ಚಿಯಲ್ಲಿ (wheel chair) ಕುಳಿತಿದ್ದರು. ಮಗಳ ಮದುವೆಯ ಸಂತೋಷದಲ್ಲಿದ್ದ ಅವರನ್ನು ನೋಡಿ ಉಭಯಕುಶಲೋಪರಿ ಮಾತುಗಳನ್ನಾಡಿ, “ಅಳಿಯ ತುಂಬಾ ಸುಂದರವಾಗಿದ್ದಾನೆ” ಎಂದು ನಾವು ಹೇಳುತ್ತಿದ್ದಂತೆಯೇ ಅವರು ಗಂಭೀರವದನರಾಗಿ “ಈ ಮಾವನಾದ ನಾನೇನು ಕಡಿಮೆಯೇ?” ಎಂದು ಪಕ್ಕದಲ್ಲಿಯೇ ಇದ್ದ ಧರ್ಮಪತ್ನಿ ಪಾರ್ವತಮ್ಮನ ಕಡೆಗೆ ತಿರುಗಿ ತುಂಟನಗೆಯನ್ನು ಬೀರಿದರು! ಸುತ್ತ ಸೇರಿದ್ದ ಬಂಧು-ಬಾಂಧವರೆಲ್ಲರೂ ಬಿಗುಮಾನ ಬಿಟ್ಟು ಗೊಳ್ಳೆಂದು ನಕ್ಕರು. ಪಾಪ! ಪಾರ್ವತಮ್ಮ ಬೀಗರೆದುರಿಗೆ ನಾಚಿ ನೀರಾದರು! 

ಸಂತೋಷದ ಪ್ರಸಂಗಗಳಲ್ಲಿ ಹಾಸ್ಯ ಮಾಡುವುದು ಸಹಜ. ಆದರೆ ನೋವಿನ ಪ್ರಸಂಗಗಳಲ್ಲಿಯೂ ಹಾಸ್ಯ ಮಾಡುತ್ತಿದ್ದವರು ಮಹದೇವ ಬಣಕಾರರು. ಅವರ ಈ ಅಪರೂಪದ ಹಾಸ್ಯ ಪ್ರವೃತ್ತಿ ತೆನಾಲಿ ರಾಮಕೃಷ್ಣನನ್ನು ನೆನಪಿಗೆ ತಂದುಕೊಡುತ್ತದೆ. ಬಣಕಾರರಿಗೆ ಒಮ್ಮೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಒಮ್ಮೆಲೇ ಹಾರ್ಟ್ ಅಟ್ಯಾಕ್ ಆಗಿದೆಯೆಂದು ಹೇಳಿದರೆ ಗಾಬರಿಯಾಗಬಹುದೆಂದು ತಿಳಿದು ನಿಧಾನವಾಗಿ ಸಮಾಧಾನದ ನಾಲ್ಕು ಮಾತುಗಳನ್ನಾಡಲು ಹವಣಿಸಿದರು. ಅದಕ್ಕೆ ಬಣಕಾರರಿಂದ ಬಂದ ಪ್ರತಿಕ್ರಿಯೆ: “ಪರವಾಗಿಲ್ಲ ಬಿಡಿ ಡಾಕ್ಟ್ರೇ, ನೀವ್ಯಾಕೆ ಗಾಬರಿಯಾಗುತ್ತೀರಿ, ನನಗೂ ಒಂದು ಹಾರ್ಟ್ ಇದೆ ಎಂಬುದು ಈಗ ಖಚಿತವಾಯಿತಲ್ಲಾ, ಅಷ್ಟೇ ಸಾಕು ಬಿಡಿ” ಎಂದು ವೈದ್ಯರನ್ನೇ ಸಮಾಧಾನಪಡಿಸಿದರು! ಈ ಸಂದರ್ಭವನ್ನು ನೆನೆಸಿಕೊಂಡು ಅವರು ರಚಿಸಿರುವ ಈ ಮುಂದಿನ ಅಪ್ರಕಟಿತ ವಚನ ತುಂಬಾ ಅರ್ಥಪೂರ್ಣವೂ, ತಾತ್ವಿಕವೂ, ಮನೋಜ್ಞವೂ ಆಗಿದೆ: 

ಶರಣಂಗೆ ಮರಣವೇ ಮಹಾನವಮಿ ಎಂಬರು 
ಎನಗೆ ಮರಣ ಸಂದಿ ಮರಳಿ ಪೋದುದೇಕೆ? 
ಕಸುಕಾಯ ಹಿಸುಕಿ ಮೆಲಿದವರುಂಟೇ? 
ಆನು ಹಣ್ಣಾಗದ ಕಾರಣ ನೀನುಣ್ಣನೊಲ್ಲೆಯಾದೆಯಯ್ಯಾ! 
ಎನ್ನ ಹಣ್ಣ ಮಾಡಿ ನೀನುಣ್ಣುವಂತೆ ಮಾಡಾ 
ಎನ್ನ ವರಗುರು ಶಿವಕುಮಾರ ಪ್ರಭುವೇ!

“ಕವಿಗಳು ಮತ್ತು ಸಾಹಿತಿಗಳು ಈ ಪ್ರಪಂಚದ ಅಘೋಷಿತ ಶಾಸಕರು” (Poets and writers are the unacknowledged legislators of the world) ಎಂದು ಸುಪ್ರಸಿದ್ಧ ಆಂಗ್ಲಕವಿ ಪಿ.ಬಿ. ಶೆಲ್ಲಿ ಹೇಳುತ್ತಾನೆ. ಬಣಕಾರರು ಕವಿಗಳಾಗಿಯೂ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ವಿಧಾನಸೌಧದ ಮೆಟ್ಟಿಲುಗಳನ್ನು ಮೇಲೇರಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಹಲವು ವರ್ಷಗಳ ಕಾಲ ಶಾಸಕರಾಗಿ ಕುಳಿತವರ ಪೈಕಿ ಬಣಕಾರರೂ ಸಹ ಒಬ್ಬರು. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ದಾಖಲಾಗಿರುವ ಅವರ ಮಾತುಗಳು ಅವರ ಬುದ್ಧಿಮತ್ತೆಗೆ ಮತ್ತು ಕಾವ್ಯಪ್ರತಿಭೆಗೆ ಸಾಕ್ಷಿಯಾಗಿವೆ. ಅವರ ಆತ್ಮೀಯ ಒಡನಾಡಿಗಳಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರು ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವರಾಗಿದ್ದಾಗ ಅವರ ಮೇಲೆ ವಿಧಾನಸಭೆಯಲ್ಲಿ ಬಣಕಾರರು ವಿರೋಧಪಕ್ಷದ ಸದಸ್ಯರಾಗಿ ಮಾಡಿದ ಟೀಕಾಪ್ರಹಾರ ಅತ್ಯಂತ ಕಾವ್ಯಮಯವಾಗಿದೆ. ರಾಜಕಾರಣಿಯು ಸಾಹಿತಿಯಾಗಿದ್ದರೆ ಅವನಾಡುವ ಮಾತುಗಳು ಎಷ್ಟೇ ಕಟುವಾಗಿದ್ದರೂ ಟೀಕೆಗೆ ಗುರಿಯಾದ ವ್ಯಕ್ತಿಯೂ ಸಹ ಹೇಗೆ ಆನಂದಿಸಬಲ್ಲನೆಂಬುದಕ್ಕೆ ಸಾಕ್ಷಿಯಾಗಿವೆ. ಬಣಕಾರರ ಬಾಯಿಂದಲೇ ಕೇಳಿದ ರೋಚಕವಾದ ಅವರ ಅಪ್ರಕಟಿತ ಕವಿತೆ ಹೀಗಿದೆ:

ಹೊನಲೂಲ ಹೊನ್ನ ಹೊಗೆಯ ಹಡಗಿನಲಿ ಪಯಣಿಸುತ 
ದಿಕ್ಕನ್ನೆಯರ ರನ್ನಗೆನ್ನೆಯೊಳವಿತ ಮಧುಪಾನ ಸೇವಿಸುತ 
ಸೂರ್ಯರಶ್ಮಿಯ ಆನಂದವಂ ಕಂಡ 
ಓ, ಅರ್ಥಮಂತ್ರಿ! ನೀ ಬರಿಯ ಕಂತ್ರಿ! 
ಮುದ್ದಾದ ಮುಖದಲ್ಲಿ ಮುಗುಳು ನಗೆ ಸೂಸಿ 
ಹಾಳು ಮಾಡಿದಿ ನಮ್ಮ ಹಣದ ರಾಶಿ! 
ಬರುವಾಗ ನಮಗೆಂದು ಏನೇನು ತಂದಿ 
ಏನಿತ್ತೋ ಅದನೆಲ್ಲ ಒಬ್ಬನೇ ತಿಂದಿ!

ಹೀಗೆ ಬಣಕಾರರಿಗೆ ಕಾವ್ಯಪ್ರತಿಭೆ ಯುವ ವಯಸ್ಸಿನಿಂದಲೂ ಸಹಜವಾಗಿ ಮೈಗೂಡಿದ್ದರೂ ಅವರು ವಚನಕಾರರಾಗಿ ರೂಪುಗೊಂಡಿದ್ದು ಮಾತ್ರ ನಮ್ಮ ಪರಮಾರಾಧ್ಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವ್ಯಕ್ತಿತ್ವದ ಪ್ರಭಾವಲಯಕ್ಕೆ ಬಂದ ಮೇಲೆ. ಎಳೆಗರು ಎತ್ತಾಗದೇ ಎನ್ನುವಂತೆ ಅವರಲ್ಲಿದ್ದ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸಿದವರೆಂದರೆ ನಮ್ಮ ಪರಮಾರಾಧ್ಯ ಗುರುಗಳು. ವಚನಕಾರರಾಗಿಯೇ ಏಕೆ, ಅವರನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದವರೂ ನಮ್ಮ ಗುರುಗಳೇ ಎಂದರೂ ತಪ್ಪಲ್ಲ. ಅದನ್ನು ಸ್ವತಃ ಬಣಕಾರರೇ ತಮ್ಮ ಅನೇಕ ಬರಹಗಳಲ್ಲಿ ಮತ್ತು ಭಾಷಣಗಳಲ್ಲಿ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿರುತ್ತಾರೆ: “ನಾನೊಂದು ಸುಟ್ಟ ಬಟ್ಟೆ! ಇಡಲೂ ಬಾರದು, ಉಡಲೂ ಬಾರದು. ಅದನ್ನು ಇಡಲೂ ಬರುವಂತೆ ಉಡಲೂ ಬರುವಂತೆ ಮಾಡಿದ ಕಾರುಣ್ಯ, ಸಿರಿಗೆರೆ ಶ್ರೀಗಳವರದು. ಅದಕ್ಕಾಗಿಯೇ ಅವರು ನನ್ನ ಆರಾಧ್ಯ ದೇವರು. ಹುಟ್ಟಿದ ಮನೆಯಿಂದ ಮೊದಲುಗೊಂಡು ಯಾರಿಂದಲೂ ನಾನೊಬ್ಬ ಮನುಷ್ಯನೆನ್ನಿಸಿಕೊಳ್ಳದಿದ್ದ ಕಾಲದಲ್ಲಿ ನನ್ನನ್ನು ಶ್ರೀಗಳವರು ಗುರುತಿಸಿದರು. ರಾಜಕೀಯ ಗೊಂದಲದಲ್ಲಿ ಬುದ್ಧಿವಿಕಾರ, ಮನೋವಿಕಾರ. ನಡೆದು ತಪ್ಪಿದೆ, ನುಡಿದು ಹುಸಿದೆ. ಅಂತೂ ಶಾಸನಸಭೆಯ ಸದಸ್ಯನಾದೆ. ಈಚೀಚೆಗೆ ಬುದ್ಧಿಗೆ ಬೆಳಕು, ಮನಸ್ಸಿಗೆ ಸ್ಥಿರತೆ, ಚಿತ್ತಕ್ಕೆ ಶುದ್ಧಿ, ಆತ್ಮನ ಅರಿವಿನ ಕಡೆಗೆ ಸಂಪೂರ್ಣ ಆಶೆ ಹುಟ್ಟಿತು. ಅದರ ಪ್ರತಿಫಲವೇ ಈ ವಚನಗಳು” ಎಂದು ಬಣಕಾರರು ಬರೆದರೆ ಅವರನ್ನು ಕುರಿತು ನಮ್ಮ ಗುರುವರ್ಯರು ಬರೆದ ಮಾತು: “ರಾಜಕಾರಣಿಗಳಿಗೆ ನಮ್ಮ ದೇಶದಲ್ಲಿ ಅಭಾವವಿಲ್ಲ; ಸ್ವಾಮಿ-ಸಂತರಿಗೂ ಅಭಾವವಿಲ್ಲ. ಅಭಾವವಿರುವುದು ಉತ್ತಮ ಸಾಹಿತಿಗೆ, ನೀತಿಯುತ ಸ್ವಾಮಿಗಳಿಗೆ. ಬಣಕಾರರಿಗೆ ರಾಜಕೀಯದ ಹುಚ್ಚು ಬಹಳ. ಸುದೈವದಿಂದ ಆ ಹುಚ್ಚು ಇಳಿದಿದೆ. ಅವರು ರಚಿಸಿದ ವಚನಗಳು ಪ್ರಪಂಚದ ಮಾನವ ಕುಲದ ಆಸ್ತಿ. ಇದು ಗುರುಗಳಾಗಿ ಶಿಷ್ಯನ ಮೇಲಿನ ವಾತ್ಸಲ್ಯದಿಂದ ಹೇಳುವಂತಹ ಮಾತಲ್ಲ. ಬಣಕಾರರ ವೈರಿಯೂ ಹೇಳುವಂತಹ ಮಾತು”. 

"ಎನ್ನ ವರಗುರು ಶಿವಕುಮಾರ ಪ್ರಭುವೇ" ಎಂದು ನಮ್ಮ ಪರಮಾರಾಧ್ಯ ಗುರುಗಳ ನಾಮಾಂಕಿತವನ್ನೇ ತಮ್ಮ ವಚನ ಮುದ್ರಿಕೆಯನ್ನಾಗಿ ಆಯ್ಕೆ ಮಾಡಿಕೊಂಡು ವಿರಚಿಸಿರುವ ಮಹದೇವ ಬಣಕಾರ ವಚನಗಳು ಅರ್ಥಗಾಂಭೀರ್ಯದಲ್ಲಿ, ತಾತ್ವಿಕ ವಿಚಾರಗಳಲ್ಲಿ ಹನ್ನೆರಡನೆಯ ಶತಮಾನದ ಶಿವಶರಣರ ವಚನಗಳನ್ನು ಹೋಲುತ್ತವೆ. ಬಣಕಾರರ ಪರಿಚಯವಿಲ್ಲದವರಿಗೆ ಈ ವಚನಗಳನ್ನು ಅವರ ಪುಸ್ತಕದಿಂದ ಹೆಕ್ಕಿ ತೆಗೆದು ಹಾಗೆಯೇ ಬಿಡಿ ಬಿಡಿಯಾಗಿ ಓದಲು ಕೊಟ್ಟರೆ ವಚನಗಳ ಶೈಲಿ, ಭಾಷಾ ಪ್ರೌಢಿಮೆ, ತಾತ್ವಿಕ ಅರ್ಥ ಇವುಗಳನ್ನು ನೋಡಿ ಇವರ ಕಾಲಮಾನವನ್ನೂ 12ನೆಯ ಶತಮಾನವೆಂದು ನಿಗದಿಪಡಿಸಿದರೆ ಆಶ್ಚರ್ಯವಿಲ್ಲ. ಈ ಮುಂದಿನ ಅವರ ಕೆಲವು ವಚನಗಳನ್ನು ಗಮನಿಸಿ: 

ಗಂಡ ಸತ್ತಿಹನು, ಅತ್ತೆ ಅರೆಹುಚ್ಚಿ 
ಮಾವಂಗೆ ಇಳಿವಯವು, ನಾದಿನಿ ಅಳಿಮನವದವಳು 
ಮೈದುನ, ಅವಳ ಕೈಗೊಂಬೆ! 
ಮನೆಯ ಮಗಳು, ಗಂಡ ಬಿಟ್ಟವಳು! 
ಮನೆಯಾಳು, ಕೊಳ್ಳೆ ಹೊಡೆಯುವ ಕಳ್ಳ 
ಇಂತಪ್ಪ ಮನೆಯ ಸೊಸೆ ನಾನು, 
ಎಳೆಯ ವಯ, ಯೌವನದ ಮದ, 
ರೂಪವೆಂಬುದಕೆ ಕೊರತೆ ಇಲ್ಲ; 
ಮುಂಡೆಯಾಗಿಹೆನೆಂದು ಕಂಡ ಕಂಡವರ ಕಣ್ಣು, 
ನಾನಾವ ಠಾವಿನೊಳಿರಲಿ ಹೇಳಾ 
ಎನ್ನ ವರಗುರು ಶಿವಕುಮಾರ ಪ್ರಭುವೆ? (ವಚನ 879)

ಹುಲ್ಲ ತಿಂದ ಹಸು ಹಾಲ ಕರೆವುದಯ್ಯಾ 
ಕಲ್ಲ ತಿಂದ ಕೋಳಿ ಮೊಟ್ಟೆಯನಿಡುವುದಯ್ಯಾ 
ನೀರನುಂಡ ಚಂದನ ಗಂಧವ ಕೊಡುವುದಯ್ಯಾ 
ಹೂವಿನ ರಸ ಹೀರಿದ ಜೇನು ಮಧುವನೀವುದಯ್ಯಾ 
ಹಾಲು ಜೇನುಂಡವರು ಮತ್ಸರಕ್ಕೆ ಮಜ್ಜನವನೆರೆವರಯ್ಯಾ 
ಇದು ಕಾರಣ, ಮನುಜನಿರುವಾವುದೆಂಬುದ ತೋರಾ 
ಎನ್ನ ವರಗುರು ಶಿವಕುಮಾರ ಪ್ರಭುವೆ (ವಚನ 924)

ಮಹದೇವ ಬಣಕಾರರು ಸಾಹಿತಿಯಾಗಿ ಅಷ್ಟೇ ಅಲ್ಲ, ಸಂಶೋಧಕರಾಗಿ, ಸಂಘಟಕರಾಗಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ. ನಮಗೆ ನೆನಪಿರುವಂತೆ ನಾವು ಅವರನ್ನು ಮೊಟ್ಟ ಮೊದಲು ನೋಡಿದ್ದು ಶಾಲಾ ಬಾಲಕರಾಗಿ. ನಮ್ಮ ಗುರುವರ್ಯರು 1962 ರ ಮಾರ್ಚ್ ತಿಂಗಳಲ್ಲಿ ಏರ್ಪಡಿಸಿದ್ದ ಕದಳೀವನ ಯಾತ್ರೆ ಯ ಪ್ರವಾಸ ಕಾಲದ ಸಂದರ್ಭದಲ್ಲಿ ಶರಣ ಸಾಹಿತ್ಯದ ಉದ್ದಾಮ ಸಾಹಿತಿಗಳಾದ ಡಾ. ಎಚ್. ತಿಪ್ಪೇರುದ್ರಸ್ವಾಮಿಗಳೂ ಜೊತೆಯಲ್ಲಿದ್ದರು (ಈ ಯಾತ್ರೆಯ ನಂತರವೇ ಅವರು ವೈರಾಗ್ಯನಿಧಿ ಅಕ್ಕಮಹಾದೇವಿಯ ಜೀವನ ವೃತ್ತಾಂತವನ್ನು ಕುರಿತು ಕದಳಿಯ ಕರ್ಪೂರ ಎಂಬ ಕಾದಂಬರಿಯನ್ನು ಬರೆದದ್ದು). ಶ್ರೀಶೈಲದಿಂದ ಕದಳೀವನಕ್ಕೆ ದುರ್ಗಮವಾದ ಕಾಡಿನಲ್ಲಿ ನಡೆದು ಹೋಗುವಾಗ ಅಲ್ಲಲ್ಲಿ ತಂಗಿದ ಪ್ರವಾಸಿಗರಿಗೆ ಬಣಕಾರರೂ, ತಿಪ್ಪೇರುದ್ರಸ್ವಾಮಿಗಳೂ ಪೂಜ್ಯ ಗುರುವರ್ಯರ ಆಶೀರ್ವಚನದ ಪೂರ್ವದಲ್ಲಿ ಶರಣಸಾಹಿತ್ಯವನ್ನು ಕುರಿತು ಭಾಷಣಗಳನ್ನು ಮಾಡುತ್ತಿದ್ದರು. ಬಾಲಕರಾಗಿ ನಾವು ಅದೆಲ್ಲವನ್ನೂ ಕಿವಿಗೊಟ್ಟು ಆಲಿಸುತ್ತಿದ್ದೆವು. 

ಕನ್ನಡನಾಡು-ನುಡಿಗೆ ಸಂಬಂಧಿಸಿದಂತೆ ಆಂಗ್ಲರ ಆಡಳಿತದಲ್ಲಿ ಕನ್ನಡ, ಮಹಾಜನ ವರದಿ ವಿಶ್ಲೇಷಣೆ, ಬಣ್ಣದ ಕಾರಂಜಿ ಇತ್ಯಾದಿ ಅನೇಕ ಮೌಲಿಕ ಗ್ರಂಥಗಳನ್ನು ರಚಿಸಿರುವ ಮಹದೇವ ಬಣಕಾರರು ನಮ್ಮ ಪರಮಪೂಜ್ಯ ಗುರುವರ್ಯರ ಪ್ರೇರೇಪಣೆಯಿಂದ ಆಧುನಿಕ ವಚನಗಳನ್ನು ವಿರಚಿಸಿದ್ದಲ್ಲದೆ, ನಮ್ಮ ಮಠದ ಮೂಲಪುರುಷ ಮರುಳಸಿದ್ಧರನ್ನು ಕುರಿತಂತೆ ಕ್ಲಿಷ್ಟವಾದ ಭಾಮಿನೀ ಷಟ್ಪದಿಯಲ್ಲಿ ವಿಶ್ವಬಂಧು ಮರುಳಸಿದ್ಧಕಾವ್ಯ ವನ್ನು ರಚಿಸಿದ್ದಾರೆ. ಅದೇ ಷಟ್ಪದಿಯಲ್ಲಿ ಲಿಂಗೈಕ್ಯ ಗುರುವರ್ಯರ ಧೀರೋದಾತ್ತ ಜೀವನವೃತ್ತಾಂತವನ್ನು ಶಿವಕುಮಾರ ಚರಿತೆ ಎಂಬ ಶಿರೋನಾಮೆಯಲ್ಲಿ ಮತ್ತೊಂದು ಕಾವ್ಯರಚನೆ ಮಾಡಿದ್ದಾರೆ. 

ನಮ್ಮ ಅನೇಕ ಸಭೆ-ಸಮಾರಂಭಗಳಲ್ಲಿ ಬಣಕಾರರು ಭಾಷಣ ಮಾಡುವಾಗ ರಾಜಕಾರಣಿಗಳನ್ನು ಕುರಿತು ಲೇವಡಿ ಮಾಡುತ್ತಿದ್ದ ಒಂದು ಸ್ವಾರಸ್ಯಕರ ಕಥಾಪ್ರಸಂಗ ಹೀಗಿದೆ: ಒಮ್ಮೆ ವೈದ್ಯರೊಬ್ಬರು ವಿಧಾನಸೌಧದ ಹತ್ತಿರ ಹೋಗುತ್ತಿರುವಾಗ ಬಿಳಿಯ ಟೋಪಿ ಧರಿಸಿದ್ದ ಶುಭ್ರವಾದ ಖಾದಿ ವಸ್ತ್ರಧಾರಿ ವ್ಯಕ್ತಿಯೊಬ್ಬ ಎದುರಾದರು. ಇವರನ್ನು ಎಲ್ಲಿಯೋ ನೋಡಿದಂತಿದೆಯಲ್ಲಾ ಎಂದು ವೈದ್ಯರು ನೆನೆಸಿಕೊಳ್ಳಲು ಯತ್ನಿಸಿದರು. ರಸ್ತೆ ಅಪಘಾತದಲ್ಲಿ ತಲೆಗೆ ಬಹಳವಾದ ಪೆಟ್ಟು ಬಿದ್ದು ತುರ್ತು ಚಿಕಿತ್ಸೆಗೆಂದು ತನ್ನ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ವ್ಯಕ್ತಿ ಈತನೇ ಎಂದು ವೈದ್ಯರು ಗುರುತಿಸಿದರು. ತುರ್ತಾಗಿ ಮಾಡಿದ ಆತನ ತಲೆಯ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ತನ್ನಿಂದಾದ ಪ್ರಮಾದದ ನೆನಪೂ ಸಹ ಆಯಿತು. ತಕ್ಷಣವೇ ಅವರ ಹತ್ತಿರ ಹೋಗಿ ಅದೇ ವ್ಯಕ್ತಿ ಎಂಬುದನ್ನು ಖಚಿತಪಡಿಸಿಕೊಂಡು ಅಳುಕುತ್ತಲೇ ವೈದ್ಯರು ಹೇಳಿದರು: “ನೋಡಿ ಸಾರ್, ನಿಮ್ಮ ತಲೆಯನ್ನು ಆಪರೇಷನ್ ಮಾಡುವಾಗ ಗಡಿಬಿಡಿಯಲ್ಲಿ ನಿಮ್ಮ ಮೆದುಳನ್ನು ಹೊರಗೆ ಇಟ್ಟು ಹೊಲಿಗೆ ಹಾಕಿಬಿಟ್ಟಿದ್ದೇನೆ. ನಿಮ್ಮ ಮೆದುಳನ್ನು ಹಾಗೆಯೇ ಪ್ರಯೋಗಾಲಯದಲ್ಲಿ (laboratory) ತೆಗೆದಿಟ್ಟಿದ್ದೇನೆ. ದಯಮಾಡಿ ನಾಳೆ ನನ್ನ ಆಸ್ಪತ್ರೆಗೆ ಬಂದರೆ ಪುನಃ ಸಣ್ಣದೊಂದು ಆಪರೇಷನ್ ಮಾಡಿ ನಿಮ್ಮ ಮೆದುಳನ್ನು ತಲೆಯೊಳಗಿಟ್ಟು ಹೊಲಿಗೆ ಹಾಕಿ ಕಳುಹಿಸುತ್ತೇನೆ”. ಈ ಮಾತನ್ನು ಕೇಳಿ ಎಲ್ಲಿ ಆ ಮಹಾಶಯ ತನ್ನ ಮೇಲೆ ರೇಗಿ ಬೀಳುತ್ತಾನೋ ಎಂದು ಗಾಬರಿಗೊಂಡಿದ್ದ ವೈದ್ಯರಿಗೆ ಆ ಬಿಳಿಯ ವಸ್ತ್ರಧಾರಿ ವ್ಯಕ್ತಿಯಿಂದ ಬಂದ ಉತ್ತರ ಸೋಜಿಗವನ್ನುಂಟುಮಾಡಿತು: “ಡಾಕ್ಟ್ರೇ, ನೀವೇನೂ ಯೋಚನೆ ಮಾಡಬೇಡಿ, ಅದರ ಅವಶ್ಯಕತೆ ನನಗೆ ಇಲ್ಲ. ಏಕೆಂದರೆ ಈಗ ನಾನು ಮಂತ್ರಿಯಾಗಿದ್ದೇನೆ. ಅರ್ಜೆಂಟಾಗಿ ಕ್ಯಾಬಿನೆಟ್ ಮೀಟಿಂಗಿಗೆ ಹೋಗಬೇಕಾಗಿದೆ, ಆಮೇಲೆ ಟೆಲಿವಿಷನ್ ಇಂಟರ್‌ ವ್ಯೂ ಬೇರೆ ಇದೆ!” ಎಂದು ಹೇಳಿ ಆ ವ್ಯಕ್ತಿ ಇವರ ಉತ್ತರಕ್ಕೂ ಕಾಯದೆ ದಡ ದಡನೆ ವಿಧಾನಸೌಧದ ಮೆಟ್ಟಿಲುಗಳನ್ನು ಏರಿ ಹೋಗಿಬಿಟ್ಟನಂತೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 31.3.2010.