ಕನ್ನಡ ನಾಡಿನ ಹಳ್ಳಿಗರ ಉಸಿರು ಬಸವಣ್ಣ...
ಈ ಭೂಮಿಯ ಮೇಲೆ ಮನುಷ್ಯ ಜೀವಿಯ ಸೃಷ್ಟಿಯಾದಂದಿನಿಂದಲೂ ಕೊಟ್ಯನುಕೋಟಿ ಜನ ಹುಟ್ಟಿದ್ದಾರೆ ಮತ್ತು ಸತ್ತಿದ್ದಾರೆ. ಹೌದು, ನಿಜಕ್ಕೂ ಸತ್ತಿದ್ದಾರೆ. ಅವರೆಲ್ಲರ ಜನನ-ಮರಣ ದಾಖಲಾತಿಗಳು ಇರುವುದಿಲ್ಲ, ಅವರಾರನ್ನೂ ಈ ಜಗತ್ತು ನೆನಪಿಟ್ಟುಕೊಂಡಿಲ್ಲ. ಅಂಥವರು ಸತ್ತಾಗ ಆಯಾಯ ಕಾಲದ ಅವರ ಬಂಧುಗಳು ಮಾತ್ರ ಅತ್ತಿರಬಹುದೇ ಹೊರತು ಈ ಜಗತ್ತು ಅತ್ತಿಲ್ಲ, ಅತ್ತ ಆ ಬಂಧುಗಳೂ ಸಹ ಹೇಳ ಹೆಸರಿಲ್ಲದಂತೆ ಸತ್ತು ಹೋಗಿದ್ದಾರೆ. ಏಕೆಂದರೆ ಅವರು ಈ ಜಗತ್ತು ನೆನಪಿಟ್ಟುಕೊಳ್ಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ, ಇದಕ್ಕೆ ವಿಭಿನ್ನವಾಗಿ ಸಾರ್ವಜನಿಕರ ಸ್ಮೃತಿ ಎಷ್ಟೇ ದುರ್ಬಲವಾಗಿದ್ದರೂ ಮನುಕುಲ ಸದಾ ನೆನಪಿಟ್ಟುಕೊಳ್ಳುವಂತಹ ಛಾಪನ್ನು ಮೂಡಿಸಿದ ಅಸಾಧಾರಣ ವ್ಯಕ್ತಿಗಳು ಅನೇಕರು ಹುಟ್ಟಿ ಕಣ್ಮರೆಯಾಗಿದ್ದಾರೆ. ಅವರಲ್ಲಿ ಕನ್ನಡ ನಾಡಿನ ಭವ್ಯ ಇತಿಹಾಸದ ಮಧ್ಯಕಾಲೀನದಲ್ಲಿ ಉದಯಿಸಿದ ಅಪರೂಪದ ಚೇತನ ಬಸವಣ್ಣನವರು. ಅವರನ್ನು ಎಲ್ಲರಂತೆ ಹುಟ್ಟಿದರು ಎನ್ನುವುದಿಲ್ಲ, ಅವತಾರಪುರುಷರು, ವಿಭೂತಿಪುರುಷರು, ಯುಗಪ್ರವರ್ತಕರು ಎನ್ನುತ್ತೇವೆ. ಎಲ್ಲರಂತೆ ಸತ್ತರು, ನಿಧನರಾದರು ಎನ್ನುವುದಿಲ್ಲ. ಲಿಂಗೈಕ್ಯರಾದರು, ಶಿವನಪಾದ ಸೇರಿದರು ಎನ್ನುತ್ತೇವೆ. ಅಂತಹ ಮಹಾನುಭಾವರನ್ನು ಪ್ರಾತಃಸ್ಮರಣೀಯರೆಂದು ಶ್ರದ್ಧಾಭಕ್ತಿಯಿಂದ ಈಗಲೂ ಸ್ಮರಿಸುತ್ತೇವೆ. ಅದಕ್ಕೆ ಕಾರಣ ಅವರು ತಮಗಾಗಿ, ತಮ್ಮ ಮಡದಿ-ಮಕ್ಕಳಿಗಾಗಿ ಬದುಕಿದವರಲ್ಲ. ವೈಯಕ್ತಿಕ ಸುಖಕ್ಕಾಗಿ ಆಸೆಪಟ್ಟವರಲ್ಲ. ಈ ಲೋಕದ ಒಳಿತಿಗಾಗಿ ಹಿತಕ್ಕಾಗಿ ಬದುಕಿದವರು. ಇನ್ನೊಬ್ಬರ ಸುಖಕ್ಕಾಗಿ ತಮ್ಮ ವೈಯಕ್ತಿಕ ಸುಖ-ಸಂತೋಷಗಳನ್ನು ಬಲಿಗೊಟ್ಟವರು. ಅವರ ಜೀವನಾದರ್ಶ ಎಂತಹುದಾಗಿತ್ತು ಎಂಬುದನ್ನು ಬಸವಣ್ಣನವರ ಮಾತುಗಳಲ್ಲಿಯೇ ಹೇಳುವುದಾದರೆ:
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ-ಮಕ್ಕಳಿಗೆಂದು,
ಕುದಿದೆನಾದಡೆ ಎನ್ನ ಮನಕ್ಕೆ ಮನವೇ ಸಾಕ್ಷಿ...
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನೊಡಲವಸರಕ್ಕೆ ಕುದಿದೆನಾದಡೆ
ತಲೆದಂಡ! ಕೂಡಲ ಸಂಗಮ ದೇವಾ.
ಹೊನ್ನಿನೊಳಗೊಂದೊರೆಯ, ವಸ್ತದೊಳಗೊಂದೆಳೆಯ
ಆನ್ನದೊಳಗೊಂದಗುಳ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ!
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲ ಸಂಗಮ ದೇವಾ.
ಬಸವಣ್ಣನವರು ಕಾಲವಾಗಿ ಎಂಟು ಶತಮಾನಗಳ ಮೇಲಾದರೂ ಅವರ ಬದುಕಿನ ಆದರ್ಶಗಳು ಈಗಲೂ ಪ್ರಸ್ತುತವಾಗಿವೆ. ಕಾಲದ ಮರಳಿನ ಮೇಲೆ ಅವರು ಇಟ್ಟ ದೃಢವಾದ ಹೆಜ್ಜೆಯ ಗುರುತುಗಳನ್ನು ಅಳಿಸಿಹಾಕಲು ಯಾವ ಸುನಾಮಿ ಅಲೆಯಿಂದಲೂ, ಚಂಡಮಾರುತದಿಂದಲೂ ಇದುವರೆಗೂ ಸಾಧ್ಯವಾಗಿರುವುದಿಲ್ಲ. ಅಂತಹ ಮಹೋನ್ನತ ವ್ಯಕ್ತಿತ್ವ ಅವರದು. ಆದರೆ ಅಂಥವರ ಸ್ಮರಣೆಯಿಂದ ಆಗುವ ಲಾಭವೇನು? ಎಂದು ಎಲ್ಲವನ್ನೂ ಲಾಭ/ನಷ್ಟದ ಮಾನದಂಡದಿಂದ ಅಳೆಯುವ ಲೆಕ್ಕಾಚಾರಪ್ರವೃತ್ತಿಯುಳ್ಳವರು ಕೇಳಬಹುದು. ಈ ರೀತಿ ಕೇಳುವುದು ಸರಿಯಲ್ಲವೆಂದು ಶ್ರದ್ಧಾಳುಗಳು ನೊಂದುಕೊಳ್ಳಬಹುದು. “ಹೌದು, ಹಾಗೆ ಕೇಳುವುದು ತಪ್ಪು, ಪುಣ್ಯಪುರುಷರನ್ನು ಸ್ಮರಿಸುವುದೇ ಒಂದು ಸೌಭಾಗ್ಯ", ನಮ್ಮ ಜೀವನ ಪಾವನವಾಗುತ್ತದೆ ಹೀಗೆ ಮಹಾತ್ಮರನ್ನು ನಿಂದಿಸುವವರನ್ನು ಸುಮ್ಮನೆ ಬಿಡಬಾರದು, ಎಂದು ಸೋಗಲಾಡಿತನದ ಮಾತು ಆಡುವವರನ್ನು ಮಾತ್ರ ಸ್ವತಃ ಬಸವಣ್ಣನವರೇ ಒಪ್ಪುವುದಿಲ್ಲ:
ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ?
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ?
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ?
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ?
ಮುನ್ನಿನ ಪುರಾತರ ನೆನೆದು ಧನ್ಯನಾದಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲ-ಸಂಗಮ-ದೇವಾ?
ದೊಡ್ಡವರನ್ನು, ಪುಣ್ಯಪುರುಷರನ್ನು ಸಾಂಪ್ರದಾಯಿಕವಾಗಿ ನೆನೆಸುವುದರಿಂದ ದಿಢೀರನೆ ಏನೂ ಆಗುವುದಿಲ್ಲ, ಕರ್ರಗಿರುವವನು, ಕೆಂಪಗಾಗುವುದಿಲ್ಲ, ಕೆಂಪಗಿರುವವನು ಕರ್ರಗಾಗುವುದಿಲ್ಲ, ಬಡವ ಶ್ರೀಮಂತನಾಗುವುದಿಲ್ಲ, ಶ್ರೀಮಂತ ಬಡವನಾಗುವುದಿಲ್ಲ, ನಮ್ಮವರು ಪುಣ್ಯಪುರುಷರನ್ನು ನೆನಸುವುದಾದರೂ ಏತಕ್ಕಾಗಿ?ಅವರ ಮೇಲಿನ ಭಕ್ತಿಗಿಂತ ವೈಯಕ್ತಿಕ ಹಿತಾಸಕ್ತಿಗಾಗಿ ಅವರನ್ನು ನೆನೆಯುವುದರಿಂದ ಅವರ ಆಶೀರ್ವಾದ ಬಲದಿಂದ ತಾನು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆಯೆಂಬ ಸ್ವಾರ್ಥಭಾವನೆಯಿಂದಲೇ ಹೊರತು ಹಿಂದಿನವರು ಸಮಾಜಕ್ಕೆ ಮಾಡಿದ ಉಪಕಾರಸ್ಮರಣೆಗಾಗಿ ಖಂಡಿತಾ ಅಲ್ಲ, ಇನ್ನು ಅವರ ಸ್ಮರಣೆಯಿಂದ ಪ್ರೇರಣೆ ಪಡೆದು, ಅವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಸತ್ಯಸಂಕಲ್ಪ ದೂರವೇ ಉಳಿಯಿತು! ಅವರನ್ನು ನೆನೆಸುವುದರಿಂದ ತಮಗೆ ಒಳ್ಳೆಯದಾಗುತ್ತದೆ ಎಂಬ ಸ್ವಾರ್ಥ ಭಾವನೆಯಿಂದಲಾದರೂ ನೆನೆಸುವ ಶ್ರದ್ದಾಭಕ್ತಿ ಯುಳ್ಳ, ಜನ ಎಷ್ಟೋ ವಾಸಿ. ಆ ಯಾವ ಧಾರ್ಮಿಕ ಭಾವನೆಗಳೂ ಇಲ್ಲದೆ ಆರಾಮವಾಗಿ ಕಾಲ ಕಳೆಯಲು ರಜೆಗಳಿಗಾಗಿ ತುದಿಗಾಲ ಮೇಲೆ ನಿಂತಿರುವ ನಿರ್ಲಜ್ಜ ಜನರೂ ಇದ್ದಾರೆ. ಬಸವ ಜಯಂತಿಯು ಬೇಸಿಗೆಯ ರಜಾ ಕಾಲದಲ್ಲಿ ಬರುವುದರಿಂದ ಬಹುಮಟ್ಟಿಗೆ ಶಾಲಾ-ಕಾಲೇಜಿನ ಶಿಕ್ಷಕರಿಗೆ ಇದರ ನೆನಪು ಇರುವುದಿಲ್ಲ. ಇನ್ನು ಸರ್ಕಾರೀ ನೌಕರರಿಗೆ ಮಾತ್ರ ಅದರ ಹಿಂದೆ ಮುಂದೆ ಎರಡು ಸಿ.ಎಲ್ ಗಳನ್ನು ಹಾಕಿದರೆ ಆಗುವ ಉಪಯೋಗವೇನೆಂಬುದು ಅವರಿಗೇ ಗೊತ್ತು!
ಎಲ್ಲ ಪುರಾಣ ಪುಣ್ಯಪುರುಷರ ಜೀವನ ಕಥಾಪ್ರಸಂಗವನ್ನು ನಿರೂಪಿಸಿದಂತೆ ಬಸವಣ್ಣನವರ ಜೀವನ ಚರಿತ್ರೆಯನ್ನು ಪುರಾಣಕಾರರು, ಹರಿಹರಾದಿ ಕವಿಗಳು ಕೈಲಾಸದಿಂದ ಆರಂಭಿಸುತ್ತಾರೆ. ಹರಿಹರನ ಬಸವರಾಜದೇವರ ರಗಳೆಯ ಆರಂಭದಲ್ಲಿ ಬರುವ ರೋಚಕ ಕಥಾಪ್ರಸಂಗ ಹೀಗಿದೆ: ಕೈಲಾಸದಲ್ಲಿ ಶಿವನ ಒಡ್ಡೋಲಗ, ಕಿನ್ನರರು ನವರಸ ಉಕ್ಕಿ ಹರಿವಂತೆ ತನ್ಮಯತೆಯಿಂದ ಹಾಡುತ್ತಾರೆ. ಭೃಂಗೀಶ ಹೊಸ ರೀತಿಯ ಗತಿಗಳಿಂದ ಕೂಡಿದ ನಾಟ್ಯವನ್ನು ಅಭಿನಯಿಸುತ್ತಾನೆ. ಶಿವ ನೋಡಿ ಆನಂದಿಸುತ್ತಾನೆ. ಮಾಲೆಗಾರನೊಬ್ಬ ಶಿವನ ಸಿರಿಮುಡಿಗೆ ಸಂಪಿಗೆಯ ಹೂಗಳನ್ನು ತರುತ್ತಾನೆ. ಶಿವನು ವೃಷಭಮುಖನನ್ನು ಕರೆದು ಆ ಹೂವುಗಳನ್ನು ಎಲ್ಲರಿಗೂ ಹಂಚಲು ಆದೇಶಿಸುತ್ತಾನೆ. ವೃಷಭಮುಖ ಶಿವನ ಆಣತಿಯಿಂದ ಪುಳಕಗೊಂಡು ಶಿವನ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಾನೆ. ಆದರೆ ಶಿವನ ಮಗ ಷಣ್ಮುಖನಿಗೆ ಮಾತ್ರ ಕೊಡುವುದನ್ನು ಮರೆತುಬಿಡುತ್ತಾನೆ. ಷಣ್ಮುಖ ನನಗೆ ಕೊಟ್ಟಿಲ್ಲವೆಂದು ಕೇಳಿದರೂ “ನಿನಗೆ ಕೊಡದೇ ಇರುತ್ತೇನೆಯೇ, ಕೊಟ್ಟಿದ್ದೇನೆ ಎಂದು ವಾದಿಸುತ್ತಾನೆ. ಪ್ರಸಾದ ಸಿಗದ ಕಾರಣ ಬಾಡಿದ ಮಗನ ಮುಖವನ್ನು ನೋಡಿ ಮರುಗಿ ಶಿವನು ಕುಮಾರನ್ನು ಪ್ರೀತಿಯಿಂದ ಎತ್ತಿ ತೊಡೆಯ ಮೇಲೆ ಕೂರಿಸಿಕೊಂಡು ಮೈದಡವಿ ವೃಷಭ ಮುಖನ ಕಡೆ ತಿರುಗಿ ಗದರಿಸುತ್ತಾನೆ.
ಹರಿಯಜರ ಸುರರಸುರರಾಜರ ಸಮಕ್ಷದೊಳು
ಅರವರಿಸದೀ ಸಭೆಯೊಳೆನ್ನಯ ಸಮಕ್ಷದೊಳು
ಹುಸಿ ನುಡಿವರೆ ಕುಡದೆ ಯೆನ್ನಯ ಕುಮಾರಂಗೆ
ಎಸೆವ ನಿಜಭಕ್ತಿಭೂಷಣನೆನಿಪ ವೀರಂಗೆ
ಎಮಗೆ ಕುಡದಿರ್ದಡಂ ಸೈರಿಸುವೆವಾವಯ್ಯ
ವಿಮಳ ಶಿಶುವಿಂಗೆ ಪುಸಿನುಡಿಯೆ ಸೈರಿಸೆವಯ್ಯ
ನನಗೆ ಕೊಡದೇ ಇದ್ದರೂ ಪರವಾಗಿಲ್ಲ, ನನ್ನ ಮುದ್ದಿನ ಮಗನಿಗೆ ಕೊಡದೆ ಕೊಟ್ಟಿದ್ದೇನೆಂದು ನನ್ನೆದುರಿಗೆ ಸುಳ್ಳು ಹೇಳುತ್ತೀಯಾ? ಮಕ್ಕಳ ಮೇಲೆ ಸ್ವಲ್ಪವೂ ಕರುಣೆ ಬೇಡ ನಿನಗೆ? ಎಂದು ವೃಷಭಮುಖನ ಮೇಲೆ ಶಿವ ಕೋಪಗೊಂಡು ಈ ತಪ್ಪಿಗಾಗಿ ಭೂಲೋಕದಲ್ಲಿ ಬಸವಣ್ಣನಾಗಿ ಹುಟ್ಟಿ ಪ್ರಸಾದದ ಮಹಿಮೆಯನ್ನು ತೋರಿಸು ಎಂದು ಶಪಿಸುತ್ತಾನೆ. ಹರಿಹರನ ಈ ಕಾಲ್ಪನಿಕ ಕಥಾಪ್ರಸಂಗ ಇಂದಿನ ಕೌಟುಂಬಿಕ ಜೀವನದಲ್ಲಿ ಮಕ್ಕಳ ಮೇಲಿನ ಮೋಹದಿಂದ ಉಂಟಾಗುವ ಕಲಹಗಳಿಗೆ ಒಂದು ಒಳ್ಳೆಯ ಉದಾಹರಣೆಯಾಗಬಲ್ಲುದೇ ಹೊರತು ಬಸವಣ್ಣನ ಹುಟ್ಟಿಗೆ ನಿಜವಾದ ಕಾರಣವಾಗಲು ಸಾಧ್ಯವಿಲ್ಲ, ಬಸವಣ್ಣ ಶಾಪಗ್ರಸ್ತನಾಗಿ ಭೂಮಿಗೆ ಬಂದವನಲ್ಲ. ಭಾರತೀಯ ಶಾಪಗ್ರಸ್ತ ಸಮಾಜವನ್ನು ಕಂಡು ಮರುಗಿ ಭೂಲೋಕವನ್ನೇ ಕೈಲಾಸವನ್ನಾಗಿ ಮಾಡ ಬಯಸಿದ ಮಹಾಮಾನವತಾವಾದಿ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,
ಕೂಡಲ-ಸಂಗಮ-ದೇವಾ.
ನಾವು ದೈನಂದಿನ ವ್ಯವಹಾರದಲ್ಲಿ ಬಳಸುವ ನಾಣ್ಯಗಳು, ನೋಟುಗಳನ್ನು ಅಚ್ಚುಹಾಕುವ ಕಾರ್ಯಾಗಾರಕ್ಕೆ ಟಂಕಸಾಲೆ ಎಂದು ಕರೆಯುತ್ತಾರೆ. ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಟಂಕಸಾಲೆಯಲ್ಲಿ ಮುದ್ರಿತಗೊಂಡ ನಾಣ್ಯ/ನೋಟುಗಳಿಗೆ ಮಾತ್ರ ಬೆಲೆಯುಂಟು. ಉಳಿದೆಡೆ ಅಕ್ರಮವಾಗಿ ಮುದ್ರಿತಗೊಂಡ ನಾಣ್ಯ/ನೋಟುಗಳಿಗೆ ಕಳ್ಳ ನಾಣ್ಯ ಅಥವಾ ಖೋಟಾ ನೋಟು ಎಂದು ಕರೆಯುತ್ತಾರೆ. ಅವು ಕೆಲಕಾಲ ಮೋಸದಿಂದ ಚಲಾವಣೆಗೆ ಬಂದರೂ ಗೊತ್ತಾದ ತಕ್ಷಣವೇ ಬೆಲೆಯನ್ನು ಕಳೆದುಕೊಳ್ಳುತ್ತವೆ. ಅಂತಹ ಒಂದು ಕಳ್ಳದಂಧೆಗೂ ಜನ ಬಲಿಯಾಗಿರುವ ಉದಾಹರಣೆಗಳಿವೆ. ಇದೇ ರೀತಿ ಮುಗ್ಧಜನರ ನಂಬುಗೆಯನ್ನು ದುರುಪಯೋಗ ಮಾಡಿಕೊಳ್ಳುವ ಕಳ್ಳದಂಧೆ ಧಾರ್ಮಿಕ ಕ್ಷೇತ್ರದಲ್ಲಿಯೂ ಇರುವುದನ್ನು ಮನಗಾಣಬಹುದಾಗಿದೆ. ನಾವು ಬಾಳುತ್ತಿರುವ ಈ ಪ್ರಪಂಚ ಸೃಷ್ಟಿಕರ್ತನಾದ ದೇವರ ಒಂದು ಟಂಕಸಾಲೆ. ಇದು ನಮ್ಮ ಜೀವನ ಕ್ರಮವನ್ನು, ಗುಣಾವಗುಣಗಳನ್ನು ನೋಡಿ ಮುದ್ರೆಯೊತ್ತುವ ಆಧ್ಯಾತ್ಮಿಕ ಟಂಕಸಾಲೆ, ವ್ಯವಹಾರದಲ್ಲಿ ಹೇಗೆ ಅಸಲೀ ನೋಟು, ಖೋಟಾ ನೋಟು ಎಂದು ಗ್ರಹಿಸಲಾಗುತ್ತದೆಯೋ ಹಾಗೆಯೇ ನಮ್ಮ ಜೀವನಕ್ರಮವನ್ನು ನೋಡಿ ದೇವರು ನಿರ್ಧರಿಸುತ್ತಾನೆ. ಮನುಷ್ಯ ತನ್ನ ನಿತ್ಯಜೀವನದಲ್ಲಿ ಒಳ್ಳೆಯ ನಡೆ-ನುಡಿಗಳನ್ನು ಅಳವಡಿಸಿಕೊಂಡು ದೇವರ ಟಂಕಸಾಲೆಯಲ್ಲಿ ಸನ್ನಡತೆಯ ಮುದ್ರೆಯನ್ನೊತ್ತಿಸಿಕೊಳ್ಳಬೇಕು. ಆಗ ಮಾತ್ರ ಅವನು ದೇವರ ಒಲುಮೆಗೆ ಪಾತ್ರನಾಗುತ್ತಾನೆ.
ಹಸುವನ್ನು ಗೋಮಾತೆ ಎಂದು ಗೌರವಿಸಿಕೊಂಡು ಬಂದಂತೆ ಹಳ್ಳಿಗಳಲ್ಲಿ ರೈತರು ಎತ್ತುಗಳನ್ನು ಶಿವನ ವಾಹನವಾದ ನಂದಿಯೆಂದೇ ನಂಬಿ ಪೂಜಿಸಿಕೊಂಡು ಬಂದಿದ್ದಾರೆ. ಶಿಷ್ಟ ಭಾಷೆಯಲ್ಲಿ ನಾವು ಬಸವ ಜಯಂತಿ ಎಂದರೆ, ಗ್ರಾಮೀಣ ಭಾಷೆಯಲ್ಲಿ ಅದು ಬಸವನ ಹಬ್ಬ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಇಟ್ಟು, ದೀಪ ಹಚ್ಚಿ ವಚನಸಂಗೀತ ಹಾಡಿ, ಭಾಷಣಗಳನ್ನು ಮಾಡಿ ಬಸವ ಜಯಂತಿ ಆಚರಿಸುತ್ತಾರೆ. ಆದರೆ ನೂರಾರು ವರ್ಷಗಳಿಂದಲೂ ಹಳ್ಳಿಗಳಲ್ಲಿ ರೈತರು ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಹಚ್ಚಿ ಝೂಲು ಹಾಕಿ, ಹಬ್ಬಕ್ಕೆ ಮಾಡಿದ ವಿಶೇಷ ಭಕ್ಷ್ಯಭೋಜ್ಯಗಳನ್ನು ಬಾಳೆ ಎಲೆಯಲ್ಲಿ ದೇವರಿಗೆ ಎಡೆ ಹಿಡಿಯುವಂತೆ ಹಿಡಿದು ತಿನ್ನಿಸಿ ಬಸವನ ಹಬ್ಬವನ್ನು ಆಚರಿಸುತ್ತಾ ಬಂದಿರುತ್ತಾರೆ. ಎತ್ತಿನ ಕೊಂಬುಗಳಿಗೆ ಹತ್ತಿಪ್ಪತ್ತು ರೂಪಾಯಿ ನೋಟನ್ನು ಕಟ್ಟಿ, ಊರ ಮುಂದೆ ಕೇಕೆ ಹೊಡೆದು ಓಡಿಸಿ, ತಾಕತ್ತಿದ್ದರೆ ತನ್ನ ಎತ್ತುಗಳ ಕೊಂಬನ್ನು ಹಿಡಿದು ಬಗ್ಗಿಸಿ ನೋಟನ್ನು ಕಿತ್ತುಕೊಳ್ಳಲಿ ಎಂದು ತನ್ನೂರ ಜನರಿಗೆ ಸವಾಲು ಹಾಕಿ ಖುಷಿಪಡುತ್ತಾರೆ.ಸವಾಲಿಗೆ ಪ್ರತಿ ಸವಾಲಾಗಿ ಹುರಿಮೀಸೆಯನ್ನು ಹುರಿಗೊಳಿಸುತ್ತಾ ನಿನ್ನ ಜುಜುಬಿ ಹತ್ತಿಪ್ಪತ್ತು ರೂಪಾಯಿ ನೋಟುಗಳು ಯಾರಿಗೆ ಬೇಕಾಗಿದೆ? ಹೋಗಿ ಭಿಕ್ಷಕರಿಗೆ ಹಾಕು ಎಂದು ಎದುರಾಳಿಗಳು ಮೂದಲಿಸಿ ಹೆಚ್ಚಿನ ಹಣವನ್ನು ಕಟ್ಟುವಂತೆ ಮಾಡುತ್ತಾರೆ. ಸೈನಿಕರು ಕತ್ತಿಯನ್ನು ಝಳಪಿಸಿ ರಣರಂಗದಲ್ಲಿ ವೀರಾವೇಶದಿಂದ ಹೋರಾಡಿದಂತೆ ಎದೆಗುಂಡಿಗೆ ಗಟ್ಟಿಯಿರುವ ಜನರು ತಲೆಗೆ ಟವಲ್ಲನ್ನು ಕಟ್ಟಿ ಸೆಡ್ಡು ಒಡೆದು ನಿಲ್ಲುತ್ತಾರೆ; ಕರಡಿ ಮಜಲುಗಳ ಧ್ವನಿಗೆ ಪುಟಿದು ಎದುರಿಗೆ ಹೂಂಕರಿಸಿ ಬಂದ ಆ ಬಲಶಾಲಿ ಹೋರಿಗಳ ಕೊಂಬುಗಳನ್ನು ಹಿಡಿದು ಬಗ್ಗಿಸಿ ವೀರಾವೇಶದಿಂದ ಸೆಣಸಾಡುತ್ತಾರೆ. ಒಮ್ಮೊಮ್ಮೆ ಭೀಮಕಾಯದ ಎತ್ತುಗಳ ತುಳಿತಕ್ಕೆ ಆಯತಪ್ಪಿ ಬಿದ್ದ ಗಾಯಾಳುಗಳನ್ನು ನೋಡಿ ಗಾಬರಿಗೊಂಡು ರಕ್ಷಣೆಗೆ ಜನರು ಧಾವಿಸುತ್ತಾರೆ. ನಮ್ಮ ಬಾಲ್ಯದಲ್ಲಿ ಚಿಕ್ಕ ಹುಡುಗರಾಗಿ ಕೈಬೆರಳು ಕಚ್ಚಿಕೊಂಡು ದೂರದಿಂದಲೇ ನೋಡಿದ್ದ ಆ ರುದ್ರರಮಣೀಯ ದೃಶ್ಯ, ನಮ್ಮ ಹಳ್ಳಿಗರ ಆ ಎದೆಗಾರಿಕೆ ಈಗಲೂ ನಮಗೆ ರೋಮಾಂಚನವನ್ನುಂಟುಮಾಡುತ್ತದೆ.
ಮಕ್ಕಳಿಲ್ಲದ ಮಾದಲಾಂಬಿಕೆ ನಂದಿ ಯನ್ನು ಆರಾಧಿಸಿ ಬಸವಣ್ಣನನ್ನು ಪಡೆದಳೆಂದು ಪ್ರತೀತಿ.ನಂದಿ ಶಿವನ ವಾಹನವಾದ ವೃಷಭ. ಕನ್ನಡದ ಬಸವ ಸಂಸ್ಕೃತದ ವೃಷಭ ಶಬ್ದದ ತದ್ಭವ, ವೈಶಾಖ ಶುದ್ದ ಅಕ್ಷಯ ತೃತೀಯದಂದು ಬಸವ ಜಯಂತಿ ಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಸಂಸ್ಕೃತದ ಬಸವಪುರಾಣವನ್ನು ಆಧರಿಸಿ ಕನ್ನಡದ ಗಾಂಧಿ ಹರ್ಡೇಕರ್ ಮಂಜಪ್ಪನವರು 1913 ರಲ್ಲಿ ದಾವಣಗೆರೆಯಲ್ಲಿ ಮೊಟ್ಟಮೊದಲಿಗೆ ಬಸವ ಜಯಂತಿ ಆಚರಿಸುವುದನ್ನು ಜಾರಿಗೆ ತಂದರು ಎಂಬುದು ನಾಡಿನ ಹಿರಿಯ ಸಂಶೋಧಕರಾದ ಎಂ.ಎಂ ಕಲಬುರ್ಗಿಯವರ ಅಭಿಮತವಾಗಿದೆ. ಹಳ್ಳಿಗಳಲ್ಲಿ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ಬಸವನ ಹಬ್ಬ ಬಸವಣ್ಣನವರ ಪೂರ್ವಕಾಲದಲ್ಲಿ ಆಚರಣೆಯಲ್ಲಿದ್ದಂತೆ ತೋರುವುದಿಲ್ಲ, ಬಸವಣ್ಣ ಎತ್ತಲ್ಲ, ನಿಜ. ಬಸವಾಭಿಮಾನಿಗಳು ಆರಾಧಿಸುವ ಬಸವಣ್ಣನವರ ಭಾವಚಿತ್ರವೂ ಕಾಲ್ಪನಿಕವೇ ಹೊರತು ನಿಜವಾದುದಲ್ಲ, ರೈತನಿಗೆ ತನ್ನ ಬದುಕಿಗೆ ಆಸರೆಯಾದ ಎತ್ತು ಒಂದು ಪ್ರಾಣಿಯಾಗಿ ಕಾಣಿಸುವುದಿಲ್ಲ, ಅದರ ಕಾಲು ಮುರಿದರೆ ತನ್ನ ಕಾಲೇ ಮುರಿದಂತಹ ವೇದನೆಯುಂಟಾಗುತ್ತದೆ. ಎಲ್ಲಿಯೋ ಒಂದು ಕಡೆ ಕಲ್ಯಾಣದ ಬಸವಣ್ಣನಿಗೂ ಮತ್ತು ನಮ್ಮ ಹಳ್ಳಿಗರು ಆಚರಿಸಿಕೊಂಡು ಬಂದಿರುವ ಈ ಬಸವನ ಹಬ್ಬಕ್ಕೂ ಏನೋ ಒಂದು ಸಂಬಂಧದ ಕೊಂಡಿ ಏರ್ಪಟ್ಟಿರುವುದಂತೂ ನಿಜ. ಬಸವಣ್ಣನಿಗೂ ಮತ್ತು ಹಳ್ಳಿಯ ರೈತರ ಜೀವನಾಡಿಯಾದ ಎತ್ತುಗಳಿಗೂ ಒಂದು ಅವಿನಾಭಾವ ಸಂಬಂಧವಿದೆ. ಜಾನಪದ ಸಾಹಿತ್ಯದಲ್ಲಿ ಇದಕ್ಕೆ ವಿಫುಲವಾದ ನಿದರ್ಶನಗಳು ಸಿಕ್ಕುತ್ತವೆ.
ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ | ನಾಡೊಳಗೆ
ಸೊಲ್ಲಿತ್ತಿ ಜನವು ಹಾಡುವುದು.
ಕಸವ ಹೊಡೆದ ಕೈ ಯಾತಾರ ನಾತಾವ
ಬಸವಣ್ಣ ನಿನ್ನ ಸಗಣೀಯ | ಹೊಡೆದ ಕೈ
ಎಸಳು ಯಾಲಕ್ಕಿ ಗೊನೆ ನಾತ.
ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ
ಭಲರೆ ಬಸವಯ್ಯ ಬಸವರಸ | ನಿನ್ನುಸಿರು
ನೆಲೆಯಾತು ನಿತ್ಯ ಜನಪದಕೆ.
ಹಳ್ಳಿಗಳಲ್ಲಿ ರೈತರು ಗಾಡಿ ಹೊಡೆಯುವಾಗ ಅಕಸ್ಮಾತ್ತಾಗಿ ಗಾಡಿಯ ಚಕ್ರ ಕೊರಕಲಿಗೆ ಬಿದ್ದು ಎತ್ತು ಮುಗ್ಗರಿಸಿದರೆ ತಕ್ಷಣವೇ ತನಗೆ ಅರಿವಿಲ್ಲದಂತೆ ರೈತನ ಬಾಯಿಂದ ಆತಂಕದ ದನಿಯಲ್ಲಿ ಹೊರಹೊಮ್ಮುವ ಉದ್ಗಾರವೆಂದರೆ ಬಸವ, ಬಸವ ಬಸವ!”. ಇದೇ ರೀತಿ ನಮ್ಮ ಲಿಂಗೈಕ್ಯ ಗುರುವರ್ಯರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಎದುರಿಗೆ ಏನಾದರೂ ಅಡ್ಡ ಬಂದು ಚಾಲಕ ಇದ್ದಕ್ಕಿಂದಂತೆ ಬ್ರೇಕ್ ಹಾಕಿದರೆ ಅವರು ಬಸವ, ಬಸವ, ಬಸವ ಎಂದು ಉದ್ಗರಿಸುತ್ತಿದ್ದುದ್ದನ್ನು ಸ್ವತಃ ಕೇಳಿ ಪುಳಕಗೊಂಡಿದ್ದೇವೆ. ಬಸವಾಭಿಮಾನಿಗಳ ಉಸಿರು ಬಸವಣ್ಣ : ನಮ್ಮ ನಾಡಿನ ಹಳ್ಳಿಗರ ಉಸಿರು ಬಸವಣ್ಣ!
ಸಹೃದಯ ಓದುಗರೇ ಬಸವ ಜಯಂತಿಯ ಈ ಶುಭ ಸಂದರ್ಭದಂದು ನಿಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳು
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 7.5.2008.