ಯಮುನಾ ತೀರದಲ್ಲಿ
ಪರದೇಶಗಳಿಂದ ಯಾರಾದರೂ ಪ್ರತಿಷ್ಠಿತ ರಾಜಕೀಯ ನೇತಾರರು ಭಾರತಕ್ಕೆ ಬಂದರೆ ದೆಹಲಿಯ ರಾಜಘಾಟ್ ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸಮಾಧಿಗೆ ಪುಷ್ಪಗುಚ್ಚ ಸಮರ್ಪಿಸಿ ಗೌರವವನ್ನು ಸಲ್ಲಿಸದೆ ಹೋಗುವುದಿಲ್ಲ. ಅದು ದೇಶ ದೇಶಗಳ ಮಧ್ಯೆ ಇರುವ ರಾಜತಾಂತ್ರಿಕ ಸಂಬಂಧ. ದೇಶ-ವಿದೇಶಗಳ, ಪ್ರಾಂತ್ಯ-ಪ್ರದೇಶಗಳ ಗಡಿಬಾಂದುಗಳನ್ನು ದಾಟಿ, ಮತಪಂಥಗಳ ಚೌಕಟ್ಟನ್ನು ಮೀರಿ ಮನುಷ್ಯ ಮನುಷ್ಯರ ಮಧ್ಯೆ ಇರುವ, ಇರಬೇಕಾದ ಮಾನವೀಯ ಸಂಬಂಧವೇ ಧರ್ಮ. ಇದನ್ನು ಎತ್ತಿಹಿಡಿಯುವುದೇ ಜಗತ್ತಿನ ಎಲ್ಲ ಧರ್ಮಗಳ ಮೂಲ ಧ್ಯೇಯ. ಈ ತಾತ್ವಿಕ ನೆಲೆಗಟ್ಟಿನ ಮೇಲೆ ಇಂದು ಧರ್ಮಗಳು ನಡೆಯುತ್ತಿಲ್ಲ. ಧರ್ಮಗಳು ನಡೆಯುತ್ತಿಲ್ಲ ಎನ್ನುವುದಕ್ಕಿಂತ ಆಯಾಯ ಧರ್ಮದ ಜನರು ನಡೆಯುತ್ತಿಲ್ಲವೆಂದು ಹೇಳುವುದು ಹೆಚ್ಚು ಸೂಕ್ತ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಪ್ರಸಿದ್ಧವಾದ ನುಡಿಗಟ್ಟನ್ನು ಕೇಳದ ಭಾರತೀಯರು ಇಲ್ಲ. ಯಾರು ಧರ್ಮವನ್ನು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ ಎಂಬುದು ಇದರ ಸಾಮಾನ್ಯ ಅರ್ಥ. ತನ್ನನ್ನು ತಾನು ಕಾಪಾಡಿಕೊಳ್ಳದ ಧರ್ಮ ಇತರರನ್ನು ಹೇಗೆ ಕಾಪಾಡಬಲ್ಲದು ಎಂಬ ಪ್ರಶ್ನೆ ಹುಟ್ಟುತ್ತದೆ. ಹೊರಿಸಿಕೊಂಡು ಹೋದ ನಾಯಿ ಮೊಲನೇನ ಹಿಡಿಯುವುದಯ್ಯಾ? ಎಂಬ ಬಸವಣ್ಣನವರ ವಚನ ನೆನಪಾಗುತ್ತದೆ. ಬೇಟೆಯಾಡಲು ಕಾಡಿಗೆ ಹೋಗುವ ಬೇಡನಿಗೆ ನಾಯಿ ನೆರವಾಗುತ್ತದೆ. ಅಂತಹ ನಾಯಿ ದುರ್ಬಲವಾಗಿದ್ದರೆ, ನಡೆದಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಅದನ್ನೇ ಹೆಗಲಮೇಲೆ ಹೊತ್ತುಕೊಂಡು ಹೋಗುವಂತಾದರೆ ಬೇಡನಿಗೆ ಬೇಟೆಯಾಡಲು ಅದರಿಂದ ಸಹಾಯವಾಗುವುದಾದರೂ ಹೇಗೆ? ಇಲ್ಲಿ ಧರ್ಮವನ್ನು ಕಾಪಾಡುವುದೆಂದರೆ ಆ ನಾಯಿಯಂತೆ ಹೆಗಲಮೇಲೆ ಹೊತ್ತುಕೊಂಡು ಹೋಗುವುದೆಂದರ್ಥವಲ್ಲ. ಧರ್ಮತತ್ವಗಳನ್ನು ನಡೆಯಲ್ಲಿ ಅಳವಡಿಸಿಕೊಳ್ಳುವುದೆಂದರ್ಥ. ಸತ್ಯಂ ವದ, ಧರ್ಮಂ ಚರ ಎನ್ನುತ್ತದೆ ಉಪನಿಷತ್. ಸತ್ಯವನ್ನು ಹೇಳು, ಧರ್ಮದಂತೆ ನಡೆ ಎಂದು ಇದರ ಅರ್ಥ. ಧರ್ಮೋಪದೇಶ ಎಂಬ ಪದಪುಂಜ ಬಳಕೆಯಲ್ಲಿದ್ದರೂ ಅದು ಉಪದೇಶವಾಗಿ ಉಳಿದರೆ ಸಾಲದು. ಆಚರಣೆಯಲ್ಲಿ ಅಳವಡಬೇಕು. ಇತ್ತೀಚೆಗೆ ಹರಿದ್ವಾರದಲ್ಲಿ ಸಾಂಪ್ರದಾಯಿಕವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾ ಕುಂಭಮೇಳ ನಡೆಯಿತು. ಲಕ್ಷಾಂತರ ಹಿಂದೂಗಳು ಪಾವನ ಗಂಗೆಯಲ್ಲಿ ಮಿಂದು ಧನ್ಯತೆಯ ಭಾವವನ್ನು ಹೊಂದಿದರು. ಅದರಿಂದ ಶ್ರದ್ಧಾಳುಗಳ ಮೈ ಪುಳಕಗೊಂಡರೆ ಸಾಲದು, ಮನಃಪರಿವರ್ತನೆಗೆ ದಾರಿಯಾಗಬೇಕು. ಕೇವಲ ಗಂಗೆಯಲ್ಲಿ ಮುಳುಗಿ ಏಳುವುದರಿಂದ ಪಾಪ ಪರಿಹಾರವಾಗುವುದಿಲ್ಲ. ಮತ್ತೆ ಪಾಪಕಾರ್ಯವನ್ನು ಮಾಡದಂತೆ ಸಂಕಲ್ಪವನ್ನು ಮಾಡುವುದಾಗಬೇಕು. ಸಾಂಪ್ರದಾಯಿಕವಾಗಿ ನದಿಯ ನೀರಿನಲ್ಲಿ ಮುಳುಗಿ ಏಳುವವರನ್ನು ಕಂಡು ಬಸವಣ್ಣನವರು ವಿಡಂಬನೆ ಮಾಡುತ್ತಾರೆ. ಡಾಂಭಿಕ ಭಕ್ತರನ್ನು ನದಿಯ ದಡದಲ್ಲಿ ನಿಂತು ಮೀನಿಗೆ ಹೊಂಚುಹಾಕುತ್ತಿರುವ ಕೊಕ್ಕರೆಗೆ ಹೋಲಿಸುತ್ತಾರೆ: “ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು ಮೂಗ ಹಿಡಿದು ಧ್ಯಾನವ ಮಾಡುವರಯ್ಯಾ!” ಅನೇಕ ಸಂಪ್ರದಾಯಗಳು ಹೀಗೆ ಅರ್ಥವಿಲ್ಲದ ಶುಷ್ಕ ಆಚರಣೆಗಳಾಗಿ ಪರಿಣಮಿಸಿವೆ. ಇವನ್ನು ಗೊಡ್ಡು ಸಂಪ್ರದಾಯಗಳೆಂದು ಹೀಗಳೆಯುವುದಕ್ಕಿಂತ ಸತ್ ಸಂಪ್ರದಾಯಗಳ ಹಿಂದಿರುವ ಮನೋಧರ್ಮದ ದೋಷವೆನ್ನುವುದು ಹೆಚ್ಚು ಸೂಕ್ತವಾಗಬಹುದು.
ನಿಜವಾದ ಧರ್ಮತತ್ವಗಳನ್ನು ಆತ್ಮೀಯ ಗೆಳೆತನದಲ್ಲಿ ಕಾಣಬಹುದು. ಮಾನವೀಯ ಭಾವನೆಯನ್ನು ಬೋಧಿಸುವ ಧರ್ಮದ ಅರಿವು ನೈಜಗೆಳೆತನದಲ್ಲಿ ಅನುಭವಕ್ಕೆ ಬರುತ್ತದೆ. ಗೆಳೆತನವೆಂಬುದು ಎರಡು ದೇಹಗಳಲ್ಲಿರುವ ಒಂದು ಆತ್ಮ ಎಂದು ಮಹಾನ್ ದಾರ್ಶನಿಕ ಅರಿಸ್ಟಾಟಲ್ ಹೇಳುತ್ತಾನೆ. ನಿಮ್ಮ ಗೆಳೆಯರು ಎಂಥವರು ಎಂಬುದನ್ನು ನೋಡಿ ನೀವು ಎಂಥವರು ಎಂಬ ತೀರ್ಮಾನಕ್ಕೆ ಬರಬಹುದು. ಜಾತಿಮತಗಳು ಬಂಧುತ್ವಕ್ಕೆ ಅಡ್ಡಿಬರುತ್ತವೆಯೇ ಹೊರತು ಗೆಳೆತನಕ್ಕೆ ಅಡ್ಡಿಬರುವುದಿಲ್ಲ. ನಿಜವಾದ ಗೆಳೆತನದಲ್ಲಿ ಜಾತಿಮತಗಳ ಸೋಂಕು ಇರುವುದಿಲ್ಲ, ಸಂಬಂಧಿಗಳನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ನಿಮಗೆ ಇಲ್ಲ, ಆದರೆ ಗೆಳೆಯರನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಮಾತ್ರ ಖಂಡಿತಾ ಇದೆ. ಬಂಧುತ್ವದಲ್ಲಿ ಸಿಗದ ಸುಖ, ನೆಮ್ಮದಿ, ಮನಃಶಾಂತಿ ನಿಮಗೆ ಗೆಳೆತನದಲ್ಲಿ ಸಿಗುತ್ತದೆ. ಅಂತಹ ಅಪರೂಪದ ಗೆಳೆಯರೊಬ್ಬರು ಕಳೆದ ತಿಂಗಳು ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಶಿಕ್ಷಣ ಕುರಿತು ನಡೆದ ಸಂವಾದಗೋಷ್ಠಿಯಲ್ಲಿ ಸಿಕ್ಕಿದ್ದರು. ನಮ್ಮೊಡನೆ ಎಪ್ಪತ್ತರ ದಶಕದಲ್ಲಿ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಓದಿದವರು. ಸಂಸ್ಕೃತ ವಿಭಾಗದಲ್ಲಿ ನಮ್ಮ ಸಂಶೋಧನಾಕಾರ್ಯ ನಡೆದಿದ್ದರೆ ತತ್ವಜ್ಞಾನ ವಿಭಾಗದಲ್ಲಿ ಅವರ ಸಂಶೋಧನಾಕಾರ್ಯ ಸಾಗಿತ್ತು. ಅವರ ಹೆಸರು ಶ್ರೀವತ್ಸ ಗೋಸ್ವಾಮಿ. ವೈಷ್ಣವರಲ್ಲಿ ರಾಮಾನುಜ, ನಿಂಬಾರ್ಕ, ಚೈತನ್ಯ ಇತ್ಯಾದಿ ಅನೇಕ ಸಂಪ್ರದಾಯಗಳಿವೆ. ಶ್ರೀವೈಷ್ಣವ ಸಂಪ್ರದಾಯದ ಬಹುತೇಕ ಆಚಾರ್ಯರು ಗೃಹಸ್ಥರು. ನಮ್ಮ ಗೆಳೆಯರಾದ ಗೋಸ್ವಾಮಿಯವರು ಚೈತನ್ಯ ಸಂಪ್ರದಾಯದವರು. ಗೃಹಸ್ಥರಾಗಿಯೂ ಆಚಾರ್ಯರೆನಿಸಿಕೊಂಡವರು. ನಮ್ಮ ನಮ್ಮ ಸಂಪ್ರದಾಯಗಳು ಏನೇ ಇದ್ದರೂ ನಮ್ಮ ಗೆಳೆತನ ಅವುಗಳಿಂದ ಅತೀತವಾದುದು. ದೆಹಲಿಗೆ ಹೋದಾಗಲೆಲ್ಲಾ ವೃಂದಾವನದ ಯಮುನಾ ತೀರದ ದಂಡೆಯಲ್ಲಿರುವ ಅವರ ಶ್ರೀಚೈತನ್ಯ ಸಂಸ್ಥಾನಕ್ಕೆ ಹೋಗದೆ ಹಿಂದಿರುಗಿದ ಸಂದರ್ಭಗಳಿಲ್ಲ. ವೈಷ್ಣವರ ಆರಾಧ್ಯದೇವರಾದ ಶ್ರೀಕೃಷ್ಣನ ಜನ್ಮಸ್ಥಳವಾದ ವೃಂದಾವನಕ್ಕೆ ದೆಹಲಿಯಿಂದ ಸುಮಾರು ಮೂರು ಗಂಟೆಗಳ ಪ್ರಯಾಣ. ಕಾರಿನಲ್ಲಿ ಒಟ್ಟಿಗೆ ಕುಳಿತು ದೆಹಲಿಯಿಂದ ಹೊರಡುವಾಗ ನಮಗೆ ನೆನಪಾಗಿದ್ದು ಕರ್ನಾಟಕ ಸಂಗೀತದ ಪಿತಾಮಹರೆನಿಸಿದ ಪುರಂದರದಾಸರು ಹೃದಯತುಂಬಿ ಹಾಡಿದ “ಬೃಂದಾವನದೊಳು ಆಡುವನ್ಯಾರೆ ಚಂದಿರವದನೆ ನೋಡೋಣ ಬಾರೇ”! ಸಿಂಧುಭೈರವಿ ರಾಗದಲ್ಲಿರುವ ಈ ದೇವರನಾಮವನ್ನು ಪಿಟೀಲಿನಲ್ಲಿ ನುಡಿಸಲು ನಾವು ಕಲಿತದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ, ಬಿಡಾರಂ ಕೃಷ್ಣಪ್ಪನವರ ಅಯ್ಯನಾರ್ ಕಲಾಶಾಲೆಯಲ್ಲಿ. ಪಿಟೀಲು ಚೌಡಯ್ಯನವರ ಶಿಷ್ಯರಾದ ವೆಂಕಟಾಚಾರ್ ಅವರಿಂದ. ಕನ್ನಡ ಬಾರದ ಗೋಸ್ವಾಮಿಯವರಿಗೆ ಪುರಂದರದಾಸರ ಈ ದೇವರನಾಮದ ಅರ್ಥವನ್ನು ತಿಳಿಹೇಳಿದಾಗ ಶ್ರೀಕೃಷ್ಣನ ಆರಾಧಕರಾದ ಅವರಿಗೆ ಆದ ಸಂತೋಷ ಹೇಳತೀರದು. ಪ್ರಯಾಣದುದ್ದಕ್ಕೂ ವಿಭಿನ್ನ ಸಂಪ್ರದಾಯಗಳಲ್ಲಿರುವ ಏಕತೆಯ ವಿಚಾರವಾಗಿ ನಮ್ಮ ಅವರ ಮಧ್ಯೆ ಮುಕ್ತ ಸಂವಾದ.
ಶ್ರೀವತ್ಸ ಗೋಸ್ವಾಮಿಯವರು ಬೃಂದಾವನದಲ್ಲಿ ನೆಲೆಸಿದ್ದರೂ ಮೂಲತಃ ದಕ್ಷಿಣದವರು. ಹೀಗಾಗಿ ಕರ್ನಾಟಕದವರಾದ ನಮ್ಮನ್ನು ಕಂಡರೆ ವಯೋವೃದ್ಧರಾದ ಅವರ ತಂದೆ ಶ್ರೀ ಪುರುಷೋತ್ತಮ ಗೋಸ್ವಾಮಿಯವರಿಗೆ ಅಪಾರವಾದ ಪ್ರೀತಿ. ಅವರ ಪೂರ್ವಜರು ತಮಿಳುನಾಡಿನ ಪ್ರಸಿದ್ದ ಶ್ರೀರಂಗಂ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿದ್ದ ವೆಂಕಟಭಟ್ಟರು. ಕ್ರಿ.ಶ. 1511 ರಲ್ಲಿ ಚೈತನ್ಯ ಮಹಾಪ್ರಭು ಶ್ರೀರಂಗಂ ಕ್ಷೇತ್ರಕ್ಕೆ ಆಗಮಿಸಿದಾಗ ವೆಂಕಟಭಟ್ಟರ ಮಗ ಗೋಪಾಲಭಟ್ಟ ಆಕರ್ಷಿತನಾದನು. ನಂತರ ಅವರಿಂದ ದೀಕ್ಷೆ ಪಡೆದು ಗೋಪಾಲಭಟ್ಟ ಗೋಸ್ವಾಮಿಯಾಗಿ ಬೃಂದಾವನಕ್ಕೆ ಬಂದು ನೆಲೆಸಿದರು. ಅವರು ಸಂಸ್ಕೃತದಲ್ಲಿ ವಿರಚಿಸಿದ ಶ್ರೀಹರಿಭಕ್ತಿವಿಲಾಸದಲ್ಲಿ ಶಿವರಾತ್ರಿಯನ್ನು ಕುರಿತು ಬರೆದ ಈ ಕೆಳಗಿನ ಶ್ಲೋಕಗಳು ಅತ್ಯಂತ ಸ್ಮರಣೀಯವಾಗಿವೆ:
ಶಿವರಾತ್ರಿವ್ರತಮಿದಂ ಯದ್ಯಪ್ಯಾವಶ್ಯಕಂ ನಹಿ |
ವೈಷ್ಣವೈರಪಿ ತತ್ಕಾರ್ಯಂ ಶ್ರೀಕೃಷ್ಣಪ್ರೀತಯೇ ಸದಾ ||
ಯಃ ಶಿವಃ ಸೋಹಮೇವೇಹ ಯೋಹಂ ಸ ಭಗವಾನ್ ಶಿವಃ |
ನಾವಯೋರಂತರಂ ಕಿಂಚಿದಾಕಾಶಾನಿಲಯೋರಿವ ||
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ |
ಶಿವಸ್ಯ ಹೃದಯಂ ವಿಷ್ಣು: ವಿಷ್ಣೋಸ್ತು ಹೃದಯಂ ಶಿವಃ ||
ವೈಷ್ಣವರ ಆರಾಧ್ಯ ದೈವ ವಿಷ್ಣುವೇ ಹೊರತು ಶಿವನಲ್ಲ. ಆದರೆ ಶಿವ ಮತ್ತು ವಿಷ್ಣು ಬೇರೆ ಬೇರೆಯಲ್ಲ. ಶಿವನ ಹೃದಯ ವಿಷ್ಣು, ವಿಷ್ಣುವಿನ ಹೃದಯ ಶಿವ. ವಿಷ್ಣುವನ್ನು ಆರಾಧಿಸುವ ವೈಷ್ಣವರು ಶಿವರಾತ್ರಿಯನ್ನು ಆಚರಿಸಬಹುದೇ ಹೇಗೆ ಎಂಬ ಪ್ರಶ್ನೆ ಬಂದಾಗ ಅದರ ಅವಶ್ಯಕತೆ ಇಲ್ಲವೆಂದರೂ ಶ್ರೀಕೃಷ್ಣನನ್ನು ಸಂತೃಪ್ತಿಪಡಿಸುವ ಸಲುವಾಗಿ ವೈಷ್ಣವರೂ ಶಿವರಾತ್ರಿಯನ್ನು ಆಚರಿಸಬೇಕೆಂದು ಬರೆದು ಹರಿಹರ ಸಾಮರಸ್ಯವನ್ನು ಪ್ರತಿಪಾದಿಸಿದ್ದಾರೆ. ಮಹಾಪ್ರಭು ಶ್ರೀಚೈತನ್ಯರಿಗೆ ಗೋಪಾಲಭಟ್ಟ ಗೋಸ್ವಾಮಿಯವರನ್ನು ಒಳಗೊಂಡಂತೆ ಆರು ಜನ ಶಿಷ್ಯರಿದ್ದರು. ಉಳಿದವರ ಹೆಸರು ರಘುನಾಥಭಟ್ಟ ಗೋಸ್ವಾಮಿ, ರಘುನಾಥ್‌ದಾಸ್ ಗೋಸ್ವಾಮಿ, ಸನಾತನ್ ಗೋಸ್ವಾಮಿ, ರೂಪ ಗೋಸ್ವಾಮಿ ಮತ್ತು ಜೀವ ಗೋಸ್ವಾಮಿ. ಇವರಲ್ಲಿ ಕೊನೆಯ ಮೂವರು (ಸನಾತನ್, ರೂಪ, ಜೀವ ಗೋಸ್ವಾಮಿ) ಜಾತಿಯಿಂದ ಮುಸ್ಲಿಮರಾಗಿದ್ದು ಕರ್ನಾಟಕದಿಂದ ಬಂದವರಾಗಿದ್ದರೆಂಬುದು ಇಲ್ಲಿ ಸ್ಮರಣೀಯ.
ಬೃಂದಾವನವನ್ನು ತಲುಪಿದ ಮೇಲೆ ಶ್ರೀವತ್ಸ ಗೋಸ್ವಾಮಿಯವರ ಗ್ರಂಥಾಲಯವನ್ನು ನೋಡುವಾಗ ನಮ್ಮ ಕಣ್ಣಿಗೆ ಬಿದ್ದ ಅಪರೂಪದ ಪುಸ್ತಕವೆಂದರೆ 1883 ರಲ್ಲಿ ಪ್ರಕಟವಾದ ತುಲಸೀ ರಾಮಾಯಣದ ಇಂಗ್ಲೀಷ್ ಅನುವಾದ. ಅನುವಾದಕರು ಆಗಿನ ಮಥುರಾ ಜಿಲ್ಲೆಯ ಕಲೆಕ್ಟರಾಗಿದ್ದ ಬ್ರಿಟಿಷ್ ಅಧಿಕಾರಿ Frederic Salmon Growse. ಆ ವೇಳೆಗಾಗಲೇ ಸಂಸ್ಕೃತದ ವಾಲ್ಮೀಕಿ ರಾಮಾಯಣ ಗದ್ಯ ಮತ್ತು ಪದ್ಯರೂಪ ಎರಡರಲ್ಲಿಯೂ ಲ್ಯಾಟಿನ್, ಇಟಾಲಿಯನ್, ಫ್ರೆಂಚ್, ಇಂಗ್ಲೀಷ್ ಮೊದಲಾದ ಐರೋಪ್ಯ ಭಾಷೆಗಳಿಗೆ ತರ್ಜುಮೆಯಾಗಿ ಅನೇಕ ಮುದ್ರಣಗಳನ್ನು ಕಂಡಿತ್ತು. ಅದುವರೆವಿಗೂ ಹಿಂದೀ ಭಾಷೆಯ ತುಲಸೀ ರಾಮಾಯಣ ಅನ್ಯ ಭಾಷೆಗಳಿಗೆ ತರ್ಜುಮೆಯಾಗಿರಲಿಲ್ಲ. ಪ್ರಾಚೀನತೆಯ ದೃಷ್ಟಿಯಿಂದ ಮೂಲಸಂಸ್ಕೃತ ರಾಮಾಯಣಕ್ಕೆ ತನ್ನದೇ ಆದ ಮಹತ್ವ ಇದೆ. ಅದಕ್ಕೆ ತುಲಸೀದಾಸರ ಹಿಂದೀ ರಾಮಾಯಣ ಸರಿಸಾಟಿಯಲ್ಲದಿದ್ದರೂ ಇದು ಅತ್ಯಂತ ಮಹತ್ವಪೂರ್ಣವಾದ ಗ್ರಂಥವಾಗಿದ್ದು ಉತ್ತರ ಭಾರತೀಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನಾಡಿ ಎನ್ನಬಹುದು. ಜನಸಾಮಾನ್ಯರ ಆಡುಭಾಷೆಯಲ್ಲಿರುವ ಈ ಗ್ರಂಥ ಮೂಲಸಂಸ್ಕೃತ ರಾಮಾಯಣಕ್ಕಿಂತಲೂ ಹೆಚ್ಚು ಪ್ರಚಲಿತವಾಗಿದೆ ಎನ್ನುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ತುಲಸೀ ರಾಮಾಯಣವನ್ನು ಜನರು ನಿತ್ಯ ಪಾರಾಯಣ ಮಾಡುತ್ತಾರೆ. ಕನ್ನಡದಲ್ಲಿ ಶರಣರ ವಚನಗಳನ್ನು ಉದಾಹರಿಸಿದಂತೆ ತುಲಸೀದಾಸರ ಹಿಂದೀ ರಾಮಾಯಣದ ದೋಹೆಗಳನ್ನು ಉದಾಹರಿಸುತ್ತಾರೆ. ಉತ್ತರ ಭಾರತೀಯರಿಗೆ ಈ ಗ್ರಂಥದ ಬಗ್ಗೆ ಇರುವ ಶ್ರದ್ಧಾಭಕ್ತಿಯನ್ನು ಕುರಿತು ಗ್ರಿಫಿತ್ ಎಂಬ ಸಂಸ್ಕೃತ ವಿದ್ವಾಂಸ ಇಂಗ್ಲೆಂಡಿನಲ್ಲಿ ಕ್ರೈಸ್ತರು ತಮ್ಮ ಧರ್ಮಗ್ರಂಥವಾದ ಬೈಬಲ್‌ಗೆ ತೋರುವ ಗೌರವಕ್ಕಿಂತಲೂ ಹೆಚ್ಚಿನ ಗೌರವವನ್ನು ಇಲ್ಲಿಯ ಜನರು ತುಲಸೀ ರಾಮಾಯಣಕ್ಕೆ ತೋರುತ್ತಾರೆಂದು ಹೀಗೆ ಗುಣಗಾನ ಮಾಡಿದ್ದಾನೆ: “The Ramayan of Tulsidas is more popular and more honoured by the people of the North-Western provinces than the Bible is by the corresponding classes in England". ಈ ಇಂಗ್ಲೀಷ್ ಅನುವಾದ ಗ್ರಂಥವನ್ನು ನೋಡಿ ಸಿಡಿಮಿಡಿಗೊಂಡ ಬ್ರಿಟಿಷ್ ಮೇಲಧಿಕಾರಿ "ರಾಜ್ಯಭಾರ ಮಾಡಲು ನೇಮಿಸಿದ ಜಿಲ್ಲಾ ಕಲೆಕ್ಟರ್ ಸ್ಥಳೀಯ ಜನರೊಂದಿಗೆ ಷಾಮೀಲಾಗಿದ್ದಾನೆ" ಎಂದು ಬೇರೆ ಜಿಲ್ಲೆಗೆ ವರ್ಗ ಮಾಡಿದನಂತೆ! (The gentleman who was sent to rule over the heathens, turned into a sort of collusion with the natives).
ಬೃಂದಾವನದಿಂದ ಹೊರಡುವ ಬೆಳಿಗ್ಗೆ ಶ್ರೀವತ್ಸ ಗೋಸ್ವಾಮಿಯವರ ಚಿಕ್ಕ ಸೊಸೆ ಹಿಂದೂಸ್ಥಾನಿ ಸಂಗೀತ ಪ್ರವೀಣೆ ಶ್ರೀಮತಿ ಆಸ್ಥಾ “ಬಸೋ ಮೊರೇ ನೈನನ್ ಮೇಂ ನಂದಲಾಲ್! ಸಾಂವರಿ ಸೂರತ್ ಮೋಹನಿ ಮೂರತ್, ನೈನಾ ಬನೇ ಬಿಸಾಲ್! ಆಧರ್ ಸುಧಾರಸ್ ಮುರಲೀ ರಾಜತ್!....” ಎಂದು ಸುಶ್ರಾವ್ಯವಾಗಿ ಹಾಡಿದ ಮೀರಾಬಾಯಿಯ ಹಿಂದೀ ಭಜನ್ "ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮನೆನಹು ತುಂಬಿ" ಎಂಬ ಬಸವಣ್ಣನವರ ವಚನವನ್ನು ನೆನಪಿಗೆ ತಂದುಕೊಟ್ಟಿತು. ಗೋಸ್ವಾಮಿಯವರ ಪರಿವಾರದಿಂದ ಬೀಳ್ಕೊಂಡು ಹಿಂದಿರುಗುವಾಗ ಅವರ ಮೊಮ್ಮೊಗಳಾದ ಹಾಲುಗಲ್ಲದ ಹಸುಳೆ ವಿಷ್ಣುಪ್ರಿಯಾ ನಮ್ಮ ಹತ್ತಿರ ಬಂದು "ಸ್ವಾಮೀಜೀ! ಆಪ್ ಕೋ ಮೈಂ ಏಕ್ ಗೀತ್ ಸುನಾಊಂ?” ಎಂದು ಮುಗ್ಧತೆಯಿಂದ ಕೇಳಿದಾಗ ಹೊರಡುವ ಅವಸರದಲ್ಲಿದ್ದರೂ ಇಲ್ಲ ಎನ್ನಲಾಗಲಿಲ್ಲ. "ಠೀಕ್ ಹೈಂ, ಸುನಾವೋ ಬೇಟೀ" ಎಂದಾಗ ಮುಗ್ಧಬಾಲಕಿ ಖುಷಿಯಿಂದ, ಹಾಡುವ ಗೀತೆಯ ಅರ್ಥಕ್ಕನುಗುಣವಾಗಿ ತನ್ನ ಕೈಬೆರಳುಗಳಲ್ಲಿ ಭರತನಾಟ್ಯದ ವಿಭಿನ್ನ ಮುದ್ರೆಗಳನ್ನು ಅಭಿನಯಿಸಿ ತೋರಿಸುತ್ತಾ ರಾಗಬದ್ಧವಾಗಿ ಹಾಡಿದ ಈ ಮುಂದಿನ ಹಿಂದೀ ಕವಿತೆ ದಾರಿಯುದ್ದಕ್ಕೂ ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತಿತ್ತು: ಬೃಂದಾವನದಿಂದ ನಿರ್ಗಮಿಸುವ ವೇಳೆ ನಮ್ಮನ್ನೇ ಕಣ್ಣೆವೆಯಲುಗದೆ ದಿಟ್ಟಿಸಿ ನೋಡುತ್ತಿದ್ದ ಅವಳ ಮುಖ ಬಾಡಿದ ಹೂವಾಗಿತ್ತು! ತನಗೆ ತಾನೇ ಗುನುಗುಡುತ್ತಾ ಹೇಳಿಕೊಂಡಂತಿತ್ತು:
ಪೂಲೋಂ ಸೇ ಹಮ್ ಹಂಸನಾ ಸೀಖೇಂ, ಭೌರೋಂ ಸೇ ಗೀತ್ ಗಾನಾ
ಆಮೋಂ ಕೀ ಡಾಲೀ ಸೇ ಸೀಖೇಂ, ಫಲ್ ಪಾಕರ್ ಝಕ್ ಜಾನಾ
ಮುರ್ಗೇ ಕೀ ಬೋಲೀ ಸೇ ಸೀಖೇಂ, ಜಗನಾ ಔರ್ ಜಗಾನಾ
ಸೂರಜ್ ಕೀ ಕಿರಣೋಂ ಸೇ ಸೀಖೇಂ, ಜಗ್-ಮಗ್ ಕರ್ ಜಾನಾ
ಚೀಂಟೀ ಕೇ ಕಾಮೋಂ ಸೇ ಸೀಖೇಂ, ಮೆಹ್ ನತ್ ಕರ್ ಕೇ ಖಾನಾ
ಸೂಈ ಔರ್ ಧಾಗಾ ಸೇ ಸೀಖೇಂ, ಬಿಛುಡೇ ಗಲೇ ಲಗಾನಾ
ಧೂಏಂ ಸೇ ಹಮ್ ಸಭೀ ಸೀಖೇಂ, ಊಂಚೀ ಮಂಜಿಲ್ ಪರ್ ಜಾನಾ
ದೀಏಂ ಕೀ ಬಾತೀ ಸೇ ಸೀಖೇಂ, ಸಬಕೋ ರಾಹ್ ದಿಖಾನಾ
ಕನ್ನಡ ಭಾವಾನುವಾದ:
ಕಲಿಯೋಣ ಬಾರಾ
ಕಲಿಯೋಣ ಬಾರಾ ಅರಳಿದ ಹೂಗಳಿಂದ ನಗುವುದನು!
ಝೇಂಕರಿಸುವ ದುಂಬಿಗಳಿಂದ ಹಾಡುವುದನು!
ಕಲಿಯೋಣ ಬಾರಾ ಮಾಮರದ ಕಿರುಕೊಂಬೆಯಿಂದ
ಫಲವ ಪಡೆದು ವಿನಯದಿಂ ಬಾಗುವುದನು!
ಕಲಿಯೋಣ ಬಾರಾ ಅರುಣೋದಯದಿ ಕೂಗುವ ಕೋಳಿಯಿಂದ
ಎಚ್ಚರದಿಂದಿರುವುದನು, ಎಚ್ಚರಿಸುವುದನು!
ಕಲಿಯೋಣ ಬಾರಾ
ರವಿಕಿರಣಗಳಿಂದ ಜಗದೊಳಗೆ ಜಗಮಗಿಸುವುದನು!
ಕಲಿಯೋಣ ಬಾರಾ
ಸೋಲರಿಯದೆ ಸಾಲುಗಟ್ಟಿ ನಡೆಯುವ ಇರುವೆಗಳಿಂದ
ಶ್ರಮಜೀವಿಗಳಾಗಿ ದುಡಿದು ತಿನ್ನುವುದನು!
ಕಲಿಯೋಣ ಬಾರಾ ಸೂಜಿ-ದಾರಗಳಿಂದ
ಅಗಲಿದವರ ಕೊರಳನಾಲಂಗಿಸುವುದನು!
ಕಲಿಯೋಣ ಬಾರಾ ಮೇಲೆ ಮೇಲೇರುವ ಧೂಮದಿಂದ
ಬಾನೆತ್ತರಕ್ಕೆ ಬೆಳೆಯುವುದನು!
ಕಲಿಯೋಣ ಬಾರಾ ಕಂಗೊಳಿಸುವ ದೀಪದಿಂದ
ಬೆಳಗುವುದನು, ಎಲ್ಲರ ಬಾಳಬಟ್ಟೆಗೆ ಬೆಳಕಾಗುವುದನು!.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 14.4.2010