ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ....

  •  
  •  
  •  
  •  
  •    Views  

ಹಳ ವರ್ಷಗಳ ಹಿಂದೆ ನಡೆದ ಒಂದು ಘಟನೆ. ದಾವಣಗೆರೆ ಸಮೀಪದ ಆನೆಕೊಂಡ ಎಂಬ ಹಳ್ಳಿಯಿಂದ ಕೆಲವರು ಯುವಕರು ನಮ್ಮನ್ನು ಆಹ್ವಾನಿಸಲು ಸಿರಿಗೆರೆಗೆ ಬಂದಿದ್ದರು. ಕಾರ್ಯಕ್ರಮ ಆ ಹಳ್ಳಿಯ ಒಂದು ದೇವಸ್ಥಾನದ ಉದ್ಘಾಟನೆ ಮತ್ತು ದೇವಾಲಯದ ಆವರಣದಲ್ಲಿ ನವಗ್ರಹ ಪ್ರತಿಷ್ಠಾಪನೆ. ಡೈರಿಯನ್ನು ತೆಗೆದು ನೋಡಿದಾಗ ಆ ದಿನ ಖಾಲಿ ಇತ್ತು. ಮರುಮಾತಿಲ್ಲದೆ ಒಪ್ಪಿಕೊಂಡು ಕಾರ್ಯಕ್ರಮಕ್ಕೆ ಹೋಗಿದ್ದೆವು. ಚಿತ್ರದುರ್ಗ ಮಠದ ಹಿಂದಿನ ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರೂ ದಯಮಾಡಿಸಿದ್ದರು. ಕಾರ್ಯಕ್ರಮ ನಡೆದ ಒಂದೆರಡು ದಿನಗಳಲ್ಲಿಯೇ ದಾವಣಗೆರೆಯ ಕೆಲವು ಬಸವತತ್ವಾಭಿಮಾನಿಗಳಿಂದ ನಮಗೆ ಒಂದು ರಿಜಿಸ್ಟರ್ಡ್ ಪತ್ರ ಬಂದಿತು. ಪತ್ರದ ಒಕ್ಕಣಿಕೆಯು ಲಾಯರ್ ನೋಟೀಸ್ ಮಾದರಿಯಲ್ಲಿ ಇತ್ತು. “ಈ ಪತ್ರ ತಲುಪಿದ ಒಂದು ವಾರದೊಳಗೆ” ಉತ್ತರವನ್ನು ನೀಡಬೇಕೆಂದು ಏರುದನಿಯಲ್ಲಿ ಬರೆದಿದ್ದರು. ಅವರ ಪ್ರಶ್ನೆ ಹೀಗಿತ್ತು: “ಬಸವಣ್ಣನವರ ತತ್ವಗಳಲ್ಲಿ ನಿಷ್ಠೆಯುಳ್ಳವರಾಗಿ ದೇಶ-ವಿದೇಶಗಳಲ್ಲಿ ಶರಣರ ತತ್ವಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಾ ಬಂದಿರುವ ತಾವು ಗುಡಿ-ಗುಂಡಾರಗಳ ಕಾರ್ಯಕ್ರಮಕ್ಕೆ ಅದರಲ್ಲೂ ನವಗ್ರಹ ಪ್ರತಿಷ್ಠಾಪನೆಗೆ ಹೇಗೆ ಹೋದಿರಿ?” ಇದೇ ಪ್ರಶ್ನೆಯನ್ನು ಅವರು ಮುರುಘರಾಜೇಂದ್ರ ಸ್ವಾಮಿಗಳಿಗೂ ಕೇಳಿದ್ದರು. ಅವರು ಏನು ಉತ್ತರ ಕೊಟ್ಟರೋ ನಮಗೆ ಗೊತ್ತಿಲ್ಲ. ಬಸವ ಬಳಗದಿಂದ ಬಂದ ಪತ್ರ ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು. ನಿತ್ಯ ಜೀವನದಲ್ಲಿ ಮರ್ಯಾದಸ್ಥರು ಇಂತಿಂಥಾ ಸ್ಥಳಗಳಿಗೆ ಹೋಗುವುದಿಲ್ಲ, ಹೋಗಬಾರದು ಎಂಬ ಸಭ್ಯ ನಡವಳಿಕೆಗಳು ಸಮಾಜದಲ್ಲಿವೆ. ಹಾಗೆಯೇ ಬಸವತತ್ವದಲ್ಲಿ ಧರ್ಮಬಾಹಿರ ನಡವಳಿಕೆ ಎನ್ನುವ ಈ ಧೋರಣೆ ಎಷ್ಟರ ಮಟ್ಟಿಗೆ ಸರಿ? ಕಲಾವಿದನ ಕಲ್ಪನಾಚಿತ್ರವಾದ ಬಸವಣ್ಣನ ಭಾವಚಿತ್ರವನ್ನು ಪೂಜಿಸಲು ಆರಾಧಿಸಲು ಆಕ್ಷೇಪಿಸದವರು ಗುಡಿಯ ದೇವರನ್ನು ಪೂಜಿಸಲು ಆಕ್ಷೇಪಿಸುದೇಕೆ? ನಾವಂತೂ ಪ್ರಶ್ನೆ ಕೇಳಿದವರಿಗೆ ಒಂದು ಪೋಸ್ಟ್ ಕಾರ್ಡಿನಲ್ಲಿ ನಾಲ್ಕೇ ನಾಲ್ಕು ಸಾಲುಗಳ ಜವಾಬನ್ನು ಈ ರೀತಿ ಬರೆದು ಕಳುಹಿಸಿದೆವು: 

“ಮೊದಲನೆಯದಾಗಿ ನೀವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ 
ಮಾತುಗಳನ್ನು ಕೇಳಿದ್ದರೆ ಈ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ. 
ಎರಡನೆಯದಾಗಿ ಹಳ್ಳಿಯ ನಮ್ಮ ಯುವಕರು ಊರ ಮುಂದಿನ 
ಗುಡಿಸಲಿಗೆ (ಅಂದರೆ ಹೆಂಡ ಕುಡಿಯುವುದಕ್ಕೆ ಹೋಗುವುದಕ್ಕಿಂತ 
ಊರ ಮಧ್ಯದಲ್ಲಿರುವ ಗುಡಿಗೆ ಹೋಗುವುದು ಎಷ್ಟೋ ವಾಸಿ ಎಂದು 
ನಮಗೆ ಅನ್ನಿಸಿದ್ದರಿಂದ ಹೋಗಿದ್ದೆವು.”

ಅಂದಿನ ಸಭೆಯಲ್ಲಿ ನಾವು ಮುಖ್ಯವಾಗಿ ಹೇಳಿದ್ದು ಇಷ್ಟು: “ಜನರಿಗೆ ಬಹಳ ಕಾಟ ಕೊಡುತ್ತವೆನ್ನುವ ಈ ಕಲ್ಲಿನ ನವಗ್ರಹಗಳು ಪರಸ್ಪರ ಕಚ್ಚಾಡದೆ ಈ ಕಟ್ಟೆಯ ಮೇಲೆ ಮರದ ನೆರಳಿನಲ್ಲಿ ಒಂದೆಡೆ ತಣ್ಣಗೆ ಕುಳಿತಿವೆ. ಆದರೆ ಪರಸ್ಪರರ ಮೇಲೆ ಕಲ್ಲು ತೂರಾಡಿ ಜಗಳ ಕಾಯುವ, ಕಣಿಗೆ ಕುಡುಗೋಲು ಹಿಡಿದು ಜೀವ ತೆಗೆಯುವ ಜೀವಂತ ಗ್ರಹಗಳು ಊರೊಳಗೇ ಇವೆ!” ಇದನ್ನು ಕೇಳಿದ ಸಭೆ ನಗೆಗಡಲಲ್ಲಿ ಮುಳುಗಿತು. ಯಾರನ್ನು ಕುರಿತು ಈ ಮಾತುಗಳನ್ನು ಗುರುಗಳು ಹೇಳಿರಬಹುದೆಂದು ಹಳ್ಳಿಯ ವಿದ್ಯಮಾನಗಳನ್ನು ಬಲ್ಲ ಹಿರಿಯರು ಹುಬ್ಬೇರಿಸಿ ಪಕ್ಕದಲ್ಲಿ ಕುಳಿತವರೊಡನೆ ಪಿಸುದನಿಯಲ್ಲಿ ಮಾತನಾಡತೊಡಗಿದರು.

ಗುಡಿ-ಗುಂಡಾರಗಳನ್ನು ಬಸವಣ್ಣ ವಿರೋಧಿಸಿದ್ದು ಗುಡಿಯಲ್ಲಿ ದೇವರಿಲ್ಲವೆಂದಲ್ಲ. ಒಂದು ಹಂತದಲ್ಲಿ ಬಸವಣ್ಣನವರೂ ಸಹ ಕೂಡಲ ಸಂಗಮದಲ್ಲಿರುವ ಸಂಗಮೇಶ್ವರ ದೇವಾಲಯದ ಆರಾಧಕರೇ ಆಗಿದ್ದರು. ಈ ವಿಶ್ವದಲ್ಲಿ ದೇವರು ಇಲ್ಲದ ಸ್ಥಳವೇ ಇಲ್ಲ.

ವಾಯಿಜ್ ಮುಝೇ ಪೀನೇ ದೇ ಮಸ್ಜಿದ್ ಮೇ ಬೈಠ್ ಕೆ
ವರನಾ ವೋ ಜಗಹ್ ಬತಾ ಜಹಾಂ ಖುದಾ ನಹೀ

ನನಗೆ ಮಸೀದಿಯಲ್ಲಿ ಕುಳಿತು ಶರಾಪು ಕುಡಿಯಲು ಅವಕಾಶ ಮಾಡಿಕೊಡು; ಇಲ್ಲದಿದ್ದರೆ ಅಲ್ಲಾ ಇಲ್ಲದ ಜಾಗ ಎಲ್ಲಿದೆ ಹೇಳು, ಅಲ್ಲಿ ಹೋಗಿ ಕುಡಿಯುತ್ತೇನೆ ಎನ್ನುತ್ತಾನೆ ಒಬ್ಬ ಮುಸ್ಲಿಂ ಅನುಭಾವಿ. ಹೀಗೆ ವಿಶ್ವದ ಎಲ್ಲೆಡೆ ದೇವರು ವ್ಯಾಪಿಸಿರುವಾಗ ಗುಡಿಯನ್ನಾಗಲೀ, ಮಸೀದಿಯನ್ನಾಗಲೀ, ಚರ್ಚನ್ನಾಗಲೀ ದೇವರ ಅಸ್ತಿತ್ವದಿಂದ ಹೊರತುಪಡಿಸಲು ಸಾಧ್ಯವೇ? ಗುಡಿಯಲ್ಲಿ ದೇವರಿಲ್ಲವೆಂದರೆ ದೇವರ ಸರ್ವಾಂತರ್ಯಾಮಿತ್ವಕ್ಕೆ ಧಕ್ಕೆಯುಂಟಾಗುವುದಿಲ್ಲವೇ? ಒಂದು ಕಾಲದಲ್ಲಿ ಗುಡಿಯ ಆರಾಧಕನಾಗಿದ್ದ ಬಸವಣ್ಣ ತನ್ನ ವೈಚಾರಿಕತೆ ಪರಿಪಕ್ವವಾದಂತೆ ವಿರೋಧಿಸಿದ್ದು ಗುಡಿಯ ದೇವರನ್ನಲ್ಲ. ಗುಡಿಯೊಳಗಿದ್ದ ಪೂಜಾರಿ-ಪುರೋಹಿತರ ಮಡಿವಂತಿಕೆಯನ್ನು, ದೇವರು ಮತ್ತು ಭಕ್ತರ ಮಧ್ಯೆ ಅಡ್ಡ ಗೋಡೆಯಾಗಿದ್ದ ಅವರ ಪುರೋಹಿತಶಾಹಿಯನ್ನು.

ದೇವರು ಸರ್ವಾಂತರ್ಯಾಮಿ ಎಂದ ಮೇಲೆ ಆ ದೇವರನ್ನು ಹುಡುಕಿಕೊಂಡು ಎಲ್ಲಿಯೂ ಹೋಗಬೇಕಾಗಿಲ್ಲ, ಎಲ್ಲೆಡೆಯೂ ಇರುವ ದೇವರು ತನ್ನೊಳಗೂ ಇದ್ದಾನೆಂದು ಮನಗಾಣಬೇಕು. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರ ದೇವರು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ಕಾಣಾ ಎಂದು ಶರಣರು ಹೇಳಿದ್ದು ಈ ಅರ್ಥದಲ್ಲಿ, ಆದಕಾರಣ ಈ ಶರೀರವೇ ಒಂದು ಗುಡಿ.

ಉಳ್ಳವರು ಶಿವಾಲಯವ ಮಾಡುವರು 
ನಾನೇನ ಮಾಡಲಿ ಬಡವನಯ್ಯಾ 
ಎನ್ನ ಕಾಲೇ ಕಂಭ, ದೇಹವೇ ದೇಗುಲ 
ಶಿರ ಹೊನ್ನ ಕಳಸವಯ್ಯಾ 
ಕೂಡಲ ಸಂಗಮ ದೇವ ಕೇಳಯ್ಯಾ:
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

ಬಸವಣ್ಣನವರು ತಮ್ಮ ಈ ವಚನದಲ್ಲಿ ಶರೀರವನ್ನು ದೇವಾಲಯಕ್ಕೆ ಸಮೀಕರಿಸಿ ಒಂದು ಅಪರೂಪವಾದ ಆಧ್ಯಾತ್ಮಿಕ ಚಿಂತನೆಯನ್ನು ಮಾಡಿದ್ದಾರೆ. ಮನುಷ್ಯನ ಶರೀರವೇ ಒಂದು ಗುಡಿ ಇದ್ದಂತೆ. ಶರೀರದ ಕಾಲುಗಳೇ ಅದರ ಕಂಭಗಳು. ತಲೆಯೇ ಈ ಶರೀರವೆಂಬ ಗುಡಿಯ ಮೇಲಿರುವ ಬಂಗಾರದ ಕಳಶ, ಇಲ್ಲಿ ಕೊಟ್ಟಿರುವ ಹೋಲಿಕೆ ತುಂಬಾ ಮನೋಜ್ಞವಾಗಿದೆ. ಇದರಲ್ಲಿ ಅರ್ಥವಾಗದ ಶಬ್ದಗಳೇ ಇಲ್ಲ. ಆದರೆ ಇಲ್ಲಿ ಬಳಸಿದ ಸ್ಥಾವರ ಮತ್ತು ಜಂಗಮ ಶಬ್ದಗಳ ತಾತ್ವಿಕ ಅರ್ಥವನ್ನು ಮಾತ್ರ ಗ್ರಹಿಸುವುದು ಅಷ್ಟು ಸುಲಭವಲ್ಲ. ಮೇಲು ನೋಟಕ್ಕೆ ಅನೇಕರು ಇಲ್ಲಿ ಸ್ಥಾವರ ಎಂದರೆ ಗುಡಿ, ಜಂಗಮ ಎಂದರೆ ಶರೀರ ಎಂದು ಅನಿಸದರೆ ಆಶ್ಚರ್ಯವಿಲ್ಲ.  ಆದರೆ ಒಂದೆಡೆ ಸ್ಥಿರವಾಗಿ ನಿಂತಿರುವ ಕಾರಣ ದೇವಾಲಯವು ಸ್ಥಾವರವೇ? ನಡೆದಾಡುವ ಕಾರಣ ಶರೀರವು ಜಂಗಮವೇ? ಅಲ್ಲ. ಶತಮಾನಗಳಷ್ಟು ಹಿಂದೆ ಕಟ್ಟಿದ ದೇವಾಲಯಗಳು ಈಗಲೂ ನಾಡಿನ ನಾನಾ ಭಾಗಗಳಲ್ಲಿ ಕಂಗೊಳಿಸುತ್ತಿವೆ. ಅವುಗಳನ್ನು ಕಟ್ಟಿದ ಜನರೇ ನಮ್ಮ ಕಣ್ಮುಂದೆ ಇಲ್ಲ, ಕಲ್ಲು ಮಣ್ಣಿನಿಂದ ಕಟ್ಟಿದ ದೇವಾಲಯವಾದರೋ ನೂರಾರು ವರ್ಷಗಳ ಕಾಲ ಇರುತ್ತದೆ. ರಕ್ತ ಮಾಂಸಗಳಿಂದ ತುಂಬಿದ ಈ ಶರೀರವು ನೂರು ವರ್ಷವೂ ಇರುವುದಿಲ್ಲ, 

ಹಲವಾರು ವರುಷ ನೆರಳಾಗಿ ನಿಂತ ಮರ, 
ತೊಲೆಯಾಗಿ ಉಳಿಯಿತು ನೂರು ವರುಷ. 
ನೂರು ವರುಷ ಆಳಿದ ಅರಸ |
ಹೆಣವಾಗಿ ಉಳಿಯಲಿಲ್ಲ. ಮೂರು ದಿವಸ!       - (ಜರಗನಹಳ್ಳಿ ಶಿವಶಂಕರ್)

ಹೀಗಿರುವಾಗ ಸ್ಥಾವರ ಅಳಿಯುತ್ತದೆ, ಜಂಗಮ ಅಳಿಯುವುದಿಲ್ಲ ಎನ್ನುವುದು ಏನು?

ಗುಡಿಯಲ್ಲಿರುವ ಶಿವಲಿಂಗವಾಗಲೀ ಕೈಯೊಳಗಿರುವ ಇಷ್ಟಲಿಂಗವಾಗಲೀ ದೇವರಲ್ಲ, ದೇವರ ಸಂಕೇತಗಳು ಮಾತ್ರ. ಒಂದು ಗೋಡೆಗಡಿಯಾರವಾದರೆ ಮತ್ತೊಂದು ಕೈಗಡಿಯಾರ, ಗಡಿಯಾರಗಳು ಕಾಲವಲ್ಲ, ಕಾಲದ ಸೂಚಿಗಳು ಮಾತ್ರ. “ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆ ಅಡಿಯಾಗಿ ಬೀಳುವ ಲೊಟ್ಟೆ ಮೂಳನ ಕಂಡು ಮೆಟ್ಟಿದ ಎಡಪಾದರಕ್ಷೆಯಿಂದ ಲಟಲಟನೆ ಹೊಡೆ ಎಂದ” ಅಂಬಿಗರ ಚೌಡಯ್ಯನ ಮಾತನ್ನು ಈ ಅರ್ಥದಲ್ಲಿ ಗ್ರಹಿಸಬೇಕು. ಕೊರಳಲ್ಲಿರುವ ಲಿಂಗವನ್ನು ಬಿಟ್ಟು ಗುಡಿಯಲ್ಲಿರುವ ಲಿಂಗಕ್ಕೆ ಅಡ್ಡಬೀಳಲು ಹೋದರೆ ತನ್ನ ಕೊರಳಲ್ಲಿರುವ ಇಷ್ಟಲಿಂಗದ ಮೇಲೆ ತನಗೆ ನಂಬಿಕೆ ಇಲ್ಲವೆಂದು ಅರ್ಥವಾಗುತ್ತದೆ. ಕೈಯೊಳಗಿರುವ ಲಿಂಗವೇ ಬೇರೆ, ಗುಡಿಯಲ್ಲಿರುವ ಲಿಂಗವೇ ಬೇರೆ ಎಂದು ಭಾವಿಸಿದರೆ ಏಕದೇವೋಪಾಸನೆಗೆ ಧಕ್ಕೆಯುಂಟಾಗುತ್ತದೆ. ಎರಡೂ ಒಂದೇ, ಬೇರೆಯಲ್ಲ ಎಂದು ಭಾವಿಸುವುದಾದರೆ ದೇವರ ಸಂಕೇತವಾದ ಇಷ್ಟಲಿಂಗವೇ ಕೈಯೊಳಗಿರುವಾಗ ಗುಡಿಯೊಳಗಿರುವ ಲಿಂಗವನ್ನು ಹುಡುಕಿಕೊಂಡು ಹೋಗಿ ಅಡ್ಡಬೀಳುವ ಅವಶ್ಯಕತೆ ಇಲ್ಲವೆಂದು ಇದರ ತಾತ್ಪರ್ಯ. ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ಎಂದು ಕೇಳುತ್ತಾರೆ ಅಲ್ಲಮಪ್ರಭುಗಳು. ತನ್ನ ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಕೆ ಇಲ್ಲ. ದೇವರು ಎಲ್ಲೆಲ್ಲೂ ಇದ್ದಾನೆಂದಮೇಲೆ ತನ್ನೊಳಗೂ ಇರಲೇಬೇಕಲ್ಲವೇ? ಹೀಗಾಗಿ ಬೇರೆಡೆ ಅರಸಿಕೊಂಡು ಹೋಗುವ ಪ್ರಮೇಯವೇ ಇಲ್ಲ. ಸಾರಿಗೆ ಒಗ್ಗರಣೆ ಹಾಕಲು ಬೇಕಾದ ಕರಿಬೇವು ಅಡಿಗೆಮನೆಯಲ್ಲಿಯೇ ಇರುವಾಗ ಅದಕ್ಕಾಗಿ ಮಾರುಕಟ್ಟೆಗೆ ಏಕೆ ಓಡಿಹೋಗಬೇಕು? ಈ ತಾತ್ವಿಕ ಅರ್ಥವನ್ನು ಗ್ರಹಿದಸದೆ ಗುಡಿಯಲ್ಲಿರುವ ಶಿವಲಿಂಗವನ್ನು ಪೂಜಿಸುವುದು ಎನೋ ಒಂದು ಅಪರಾಧ ಮಾಡಿದಂತೆ ತಪ್ಪು ಎಂದು ದೂಷಿಸುವುದಾಗಲೀ, ಕೈಯೊಳಗಿರುವ ಲಿಂಗವನ್ನು ಪೂಜಿಸುವುದೇ ಸರಿ ಎಂದು ವಾದಿಸುವುದಾಗಲೀ ಮೂಲಭೂತವಾದ (Fundamentalism) ಆಗುತ್ತದೆ.

ಸಕಲಕೆಲ್ಲಕೆ ನೀನೆ 
ಅಕಳಂಕ ಗುರುವೆಂದು 
ನಿಖಿಳ ಶಾಸ್ತ್ರವು ಪೇಳುತಿರಲರಿದೆನು 

ಅವರವರ ದರುಶನಕೆ 
ಅವರವರ ವೇಷದಲಿ 
ಅವರವರಿಗೆಲ್ಲ ಗುರು ನೀನೊಬ್ಬನೆ 
ಅವರವರ ಭಾವಕ್ಕೆ 
ಅವರವರ ಪೂಜೆಗಂ 
ಅವರವರಿಗೆಲ್ಲ ಶಿವ ನೀನೊಬ್ಬನೆ       - ಮುಪ್ಪಿನ ಷಡಕ್ಷರಿಯ ಕೈವಲ್ಯಪದಗಳು 

ಮೇಲೆ ಮುಪ್ಪಿನ ಷಡಕ್ಷರಿ ಹೇಳುವಂತೆ ಭಗವಂತನ ಆರಾಧನೆ ಆಯಾಯ ಭಕ್ತನ ಭಕ್ತಿಭಾವಕ್ಕನುಗುಣವಾಗಿರುತ್ತದೆ. ಒಬ್ಬರ ಆರಾಧನಾ ಪದ್ಧತಿ ಮತ್ತೊಬ್ಬರಿಂದ ಭಿನ್ನವಾಗಿರಬಹುದು. ಆದರೆ ಆರಾಧಿಸುವ ದಿವ್ಯ ಚೇತನ ಒಂದೇ. “ಹಗಲಿರುಳೆನ್ನದೆ ಪ್ರಾಣಿಘಾತವ ಮಾಡಿದ ಬೇಡನ ಕೈಲಾಸಕೊಯ್ದೆ ಎನ್ನನೇತಕೊಲ್ಲೆಯಯ್ಯಾ ಕೂಡಲಸಂಗಮದೇವಾ” ಎಂದು ಬಸವಣ್ಣನವರು ಹಲುಬಿದ್ದಾರೆ. ಗುಡಿಯಲ್ಲಿರುವ ಶಿವಲಿಂಗಕ್ಕೆ ತನ್ನ ಕಣ್ಣನ್ನಿತ್ತು ಮಾನವೀಯತೆಯನ್ನು ಮೆರೆದ ಬೇಡರ ಕಣ್ಣಪ್ಪನನ್ನು ಗೌರವಿಸಿದ್ದಾರೆ. ಸದಾ ಹಿಂಸೆಯಲ್ಲೇ ತೊಡಗಿದ್ದ ಬೇಡರ ಕಣ್ಣಪ್ಪನಿಗೆ ಕೈಲಾಸ ಪದವಿಯನ್ನು ನೀಡಿ ದೇವರು ತಪ್ಪು ಮಾಡಿದ ಎಂದು ಆರೋಪ ಹೊರಿಸಿಲ್ಲ. ಕಣ್ಣಪ್ಪನು ಗುಡಿಯಲ್ಲಿರುವ ಸ್ಥಾವರಲಿಂಗ ಪೂಜೆ ಮಾಡಿದ, ನಾನು ಕೈಯೊಳಗಿರುವ ಇಷ್ಟಲಿಂಗ ಪೂಜೆ ಮಾಡಿದೆ. ಸ್ಥಾವರಲಿಂಗ ಪೂಜೆ ಮಾಡಿದ ಕಣ್ಣಪ್ಪನನ್ನು ಕೈಲಾಸಕ್ಕೆ ಒಯ್ದೆ. ಇಷ್ಟಲಿಂಗಪೂಜೆ ಮಾಡಿದ ನನ್ನನ್ನು ಏಕೆ ಒಯ್ಯುತ್ತಿಲ್ಲ ಎಂಬ ಒಣ ತರ್ಕವಾಗಲೀ ಇದಲ್ಲ, ಇದು ದೇವರ ನಿಂದನೆಯೂ ಅಲ್ಲ, ಬೇಡರ ಕಣ್ಣಪ್ಪನ ಮೇಲಿನ ಈರ್ಷ್ಯೆಯೂ ಅಲ್ಲ, ಕಾವ್ಯಮೀಮಾಂಸೆಯಲ್ಲಿ ಇದನ್ನು ನಿಂದಾಸ್ತುತಿ (ನಿಂದಿಸುವುದರ ಮೂಲಕ ಹೊಗಳುವುದು) ಎಂದು ಕರೆಯುತ್ತಾರೆ.

ಒಂದೇ ಲಿಂಗ ಕೈಯೊಳಗಿಟ್ಟು ಪೂಜೆ ಮಾಡಿದರೆ ಇಷ್ಟಲಿಂಗವೆನಿಸುತ್ತದೆ; ಕಟ್ಟೆಯ ಮೇಲಿಟ್ಟು ಪೂಜೆ ಮಾಡಿದರೆ ಸ್ಥಾವರಲಿಂಗವೆನಿಸುತ್ತದೆ.ಗುಡಿಯ ಲಿಂಗವಾಗಲಿ, ಕೈ ಒಳಗಿನ ಲಿಂಗವಾಗಲಿ ಎರಡೂ ಜಡವಸ್ತುಗಳೇ.  ಅವುಗಳಲ್ಲಿ ಚೈತನ್ಯದ ಕಳೆಯನ್ನು ಕಾಣುವ ದೃಷ್ಟಿ ಭಕ್ತನ ಹೃದಯದಲ್ಲಿ ಇರುತ್ತದೆ. ಜಡವಸ್ತುವಾದ ತವರು ಮನೆಯ ಬಟ್ಟೆಯಲ್ಲಿ ಹೆತ್ತ ತಾಯಿಯ ಮಮತೆಯನ್ನು ಕಾಣುವ ಮಗಳ ಹಾಗೆ! ಶಿಲ್ಪಿಯು ಕೆತ್ತಿದ ಗುಡಿಯ  ಲಿಂಗಕ್ಕೆ ದೈವತ್ವ ಬರುವುದು ಅದನ್ನು ಪ್ರತಿಷ್ಠಾಪಿಸುವ ಪೂಜಾರಿ – ಪುರೋಹಿತರ ಮಂತ್ರ ಪಾಠಗಳಿಂದ ಅಲ್ಲ, ಹೋಮ ಹವನಾದಿಗಳಿಂದಲೂ ಅಲ್ಲ, ಅದನ್ನು ಆರಾಧಿಸುವ ಭಕ್ತರಿಂದ. ಅವರ ಹೃದಯದಲ್ಲಿ ತುಂಬಿರುವ ಭಕ್ತಿ-ಭಾವಗಳಿಂದ. ವನವೆಲ್ಲ ನೀವೆ ವನದೊಳಗಣ ದೇವ ತರುವೆಲ್ಲ ನೀವೆ, ತರುವಿನೊಳಗಾಡುವ ಖಗ ಮೃಗವೆಲ್ಲ ನೀವೆ ಎಂದು ಅಕ್ಕಮಹಾದೇವಿ ಭಾವಪರವಶಳಾಗಿ ನುಡಿದಂತೆ ಈ ಜಗತ್ತಿನ ಸಕಲ ಚರಾಚರವಸ್ತುಗಳಲ್ಲಿಯೂ ದೈವತ್ವವನ್ನು ಕಾಣುವುದು ಭಕ್ತಿಹೃದಯ. ಅಂತೆಯೇ ಗುರುಕೊಟ್ಟ ಲಿಂಗದಲ್ಲಿ ಚಿದ್ಘನರಸಾನುಭೂತಿಯುಂಟಾಗುವುದು ಗುರುವಿನ ತಪಃಸಿದ್ಧಿಯಿಂದಲ್ಲ; ಆ ಗುರುವಿನ ಬಗ್ಗೆ ಶಿಷ್ಯನಲ್ಲಿರುವ ಅನನ್ಯ ಶ್ರದ್ಧಾಭಕ್ತಿಯಿಂದ. 

ಎನ್ನ ಕಾಲೇ ಕಂಭ, ದೇಹವೇ ದೇಗುಲ ಎಂದು ಬಸವಣ್ಣನವರು ಶರೀರಕ್ಕೆ ದೇವಾಲಯದ ಹೋಲಿಕೆಯನ್ನು ಕೊಟ್ಟರೆ, ಶಿಲ್ಪಶಾಸ್ತ್ರದಲ್ಲಿ ದೇವಾಲಯದ ನಿರ್ಮಾಣಕ್ಕೆ ಶರೀರದ ಹೋಲಿಕೆಯನ್ನು ಕೊಡಲಾಗಿದೆ. ದೇವಾಲಯದ ವಿಭಿನ್ನ ಭಾಗಗಳನ್ನು ಹಸ್ತ, ಪಾದಗಳೆಂದೇ ಗುರುತಿಸಲಾಗುತ್ತದೆ. ತಾಯ ಗರ್ಭದಲ್ಲಿ ಶಿಶುವಿರುವಂತೆ ಶಿವಲಿಂಗವಿರುವ ಗುಡಿಯ ಒಳಭಾಗವನ್ನು ಗರ್ಭಗೃಹವೆಂದೇ ಕರೆಯಲಾಗುತ್ತದೆ. ಬಸವಣ್ಣನವರು ಶರೀರವನ್ನೇ ಗುಡಿಯೆಂದು ಹೇಳುವಾಗ ಗುಡಿಗಿಂತ ಶರೀರ ಶ್ರೇಷ್ಠವೆಂದಲ್ಲ. ಸತ್ತ ದೇಹಕ್ಕೂ ಸಹ ಕೈಕಾಲು ತಲೆ ಎಲ್ಲಾ ಇರುತ್ತವೆ. ಆದರೆ ಅಂತಹ ಹೆಣವನ್ನು ಎಲ್ಲಿಯಾದರೂ ದೇವಾಲಯ ಎನ್ನಲು ಬಂದೀತೇ? ಕಾಲನ್ನು ಕಂಭವಾಗಿಯೂ, ತಲೆಯನ್ನು ಕಳಶವನ್ನಾಗಿಯೂ, ದೇಹವನ್ನು ದೇಗುಲವನ್ನಾಗಿಯೂ ಪರಿಭಾವಿಸುವ ಎನ್ನ ಶಬ್ದ ಸೂಚಕವಾದ ಜೀವವೇ ಅಲ್ಲಿ ಇರುವುದಿಲ್ಲ. ಹೆಚ್ಚೆಂದರೆ ಸತ್ತ ಹೆಣವನ್ನು ಒಂದು ಹಾಳು ದೇವಾಲಯವೆಂದು ಬೇಕಾದರೆ ಹೇಳಬಹುದು. ಗುಡಿಯಲ್ಲಿ ಶಿವಲಿಂಗವಿದ್ದಂತೆ, ಶರೀರವೆಂಬ ಗುಡಿಯಲ್ಲಿ ಇಷ್ಟಲಿಂಗ. ಅದರಾಚೆ ಇರುವುದು ಪ್ರಾಣಲಿಂಗ; ಅದು ಸೂಕ್ಷ್ಮಶರೀರಕ್ಕೆ ಸೇರಿದ್ದು, ಅದರಿಂದಾಚೆ ಇರುವುದೇ ಕಾರಣ ಶರೀರಕ್ಕೆ ಸೇರಿದ ಭಾವಲಿಂಗ! ಗುಡಿಯಾಗಲೀ, ಗುಡಿಯ ಲಿಂಗವಾಗಲೀ ಹೇಗೆ ಸ್ಥಾವರವೋ, ಈ ಶರೀರವಾಗಲೀ, ಶರೀರದ ಮೇಲೆ ಧರಿಸಿರುವ ಇಷ್ಟಲಿಂಗವಾಗಲೀ ಸ್ಥಾವರವೇ. ಸ್ಥಾವರಕ್ಕಳಿವುಂಟು ಎಂಬ ಮಾತು ಬರೀ ಗುಡಿಯನ್ನು ಕುರಿತು ಹೇಳಿದ ಮಾತಲ್ಲ: ಒಟ್ಟಾರೆ ನಶ್ವರವಾದ ಈ ಭೌತಿಕ ಪ್ರಪಂಚವನ್ನು ಕುರಿತು ಹೇಳಿದ ಮಾತು. ಜಂಗಮಕ್ಕಳಿವಿಲ್ಲ ಎಂಬ ಮಾತು ದೇವಾಲಯಕ್ಕೆ ಸಂವಾದಿಯಾದ ಶರೀರವನ್ನು ಕುರಿತು ಹೇಳಿದ ಮಾತಲ್ಲ; ಈ ನಶ್ವರ ಶರೀರದೊಳಗಿರುವ ಶಾಶ್ವತ ಚೈತನ್ಯವಾದ ಆತ್ಮವನ್ನು ಕುರಿತು ಹೇಳಿದ ಮಾತು.

ಎಷ್ಟೋ ವಚನಗಳಲ್ಲಿ ಬಸವಣ್ಣನವರು ಸ್ಥಾವರ-ಜಂಗಮ ಒಂದೇ ಎಂದು ಪ್ರತಿಪಾದಿಸುತ್ತಾರೆ: “ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿರ್ಪ. ಸ್ಥಾವರ ಜಂಗಮ ಒಂದೇ ಎಂದುದು ಕೂಡಲ ಸಂಗನ ವಚನ”. “ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ? ನಮ್ಮ ಶರಣರಿಗುರಿಗರಗಾಗಿ ಕರಗದನ್ನಕ್ಕ, ಸ್ಥಾವರ ಜಂಗಮವೊಂದೇ ಎಂದು ನಂಬದನ್ನಕ್ಕ.” “ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ, ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ, ಜಂಗಮವಾಪ್ಯಾಯನವಾದಡೆ ಲಿಂಗ ಸಂತುಷ್ಟಿಯಹುದಯ್ಯಾ” “ಎರೆದರೆ ನೆನೆಯದು, ಮರೆದರೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ! ಕೂಡಲ ಸಂಗಮ ದೇವಾ, ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು!” “ಸ್ಥಾವರ ಜಂಗಮ ಒಂದೆಯೆಂದರಿದಡೆ ಕೂಡಲ ಸಂಗಮದೇವ ಶರಣಸನ್ನಿಹಿತ!” 

ಅದುವೇ ಲಿಂಗಾಂಗ ಸಾಮರಸ್ಯ ಬದುಕಿನ ಎಲ್ಲ ಬಂಧನಗಳಿಂದ ಕಳಚಿಕೊಂಡ ನಿರ್ವಯಲ ಸ್ಥಿತಿ. ನಾನು ನೀನೆಂಬ ಉಭಯವಳಿದು ತಾನು ತಾನಾದ, ಪೂಜ್ಯ ಪೂಜಕನೆಂಬ ಭೇದವಳಿದು ಅನಂತದೊಳಗೊಂದಾದ ಬೆಳಗಿನೊಳಗಣ ಮಹಾಬೆಳಗು. ಅದರ ಅರಿವು ಉಂಟಾದಾಗ ಆಗುವ ಲಿಂಗಾನುಭಾವವೆಂದರೆ:

ಕಂಗಳು ತುಂಬಿದ ಬಳಿಕ ನೋಡಲಿಲ್ಲ, 
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, 
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ, 
ಮನ ತುಂಬಿದ ಬಳಿಕ ನೆನೆಯಲಿಲ್ಲ, 
ಮಹಂತ ಕೂಡಲ-ಸಂಗಮ-ದೇವನ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 14.5.2008.