ಆನು ಒಲಿದಂತೆ ಹಾಡುವೆ
“ಸಾಹಿತ್ಯ-ಸಂಗೀತ-ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ” ಎಂಬ ಸೂಕ್ತಿಯೊಂದು ಸಂಸ್ಕೃತದಲ್ಲಿದೆ. ಸಾಹಿತ್ಯ, ಸಂಗೀತ ಮತ್ತು ಕಲೆಯ ಗಂಧವಿಲ್ಲದ ಮನುಷ್ಯ ಬಾಲ ಮತ್ತು ಕೋಡು ಇಲ್ಲದ ಪಶುವಿಗೆ ಸಮಾನ ಎಂದು ಇದರ ಅರ್ಥ. ದೈನಂದಿನ ವ್ಯವಹಾರದಲ್ಲಿ ಅವನೊಬ್ಬ ಪಶು ಎಂದು ಹೀಗಳೆಯುವ ಮಾತುಗಳನ್ನು ನೀವು ಕೇಳಿದ್ದೀರಿ. ಹೀಗೆ ಒಬ್ಬರನ್ನು ನಿಂದಿಸುವಾಗ ಬಳಸುವ ಪಶು ಎಂಬ ಶಬ್ಧಕ್ಕೂ ಈ ಸೂಕ್ತಿಯಲ್ಲಿ ಬಳಸಿರುವ ಬಾಲ-ಕೋಡು ಇಲ್ಲದ ಪಶು ಎಂಬುದಕ್ಕೂ ಸೂಕ್ಷ್ಮವಾದ ಅರ್ಥವ್ಯತ್ಯಾಸವಿದೆ. ವ್ಯವಹಾರದಲ್ಲಿ ಬಳಸುವ ಪಶು ಎಂಬ ಶಬ್ದಕ್ಕೆ ಬುದ್ದಿ ಇಲ್ಲದವನು, ಒರಟು ಸ್ವಭಾವದವನು ಎಂದರ್ಥ. ಆದರೆ ಈ ಸೂಕ್ತಿಯಲ್ಲಿ ಬಳಸಿರುವ ಪಶು ಶಬ್ದದ ಅರ್ಥವೇ ಬೇರೆ. ಯಾವ ಪ್ರಾಣಿಯೂ ಅಂಗ ಊನವಾದ ಮಾತ್ರಕ್ಕೆ ತನ್ನ ಪಶುತ್ವವನ್ನು ಕಳೆದುಕೊಳ್ಳುವುದಿಲ್ಲ. ಬಾಲ ಮತ್ತು ಕೋಡು ಇಲ್ಲದ ಪ್ರಾಣಿಯನ್ನೂ ಪಶು ಎಂದು ಕರೆಯುತ್ತೇವೆ. ಹಾಗೆಯೇ ಕಾಲಿಲ್ಲದ, ಕಣ್ಣಿಲ್ಲದ ವ್ಯಕ್ತಿಯನ್ನು ಕುಂಟ, ಕುರುಡ ಎಂದು ಕರೆದರೂ ಅವನನ್ನು ಮನುಷ್ಯನಲ್ಲ ಎಂದು ಅಲ್ಲಗಳೆಯಲು ಬರುವುದಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಮನುಷ್ಯನೂ ಪ್ರಾಣಿಯೇ. ಏಕೆಂದರೆ ಪ್ರಾಣ ಉಳ್ಳದ್ದೆಲ್ಲ ಪ್ರಾಣಿ. ಪ್ರಾಣಿಗಳಿಗಿಂತ ಮನುಷ್ಯ ಹೆಚ್ಚಿನ ಬುದ್ದಿಶಾಲಿಯೆಂದು ತನ್ನನ್ನು ತಾನೇ ಪ್ರಾಣಿವರ್ಗದಿಂದ ಬೇರ್ಪಡಿಸಿಕೊಂಡಿದ್ದಾನೆ. ಮನುಷ್ಯನ ಈ ಸ್ವಯಂಘೋಷಿತ ಹಿರಿಮೆಯನ್ನು ಪ್ರಶ್ನಿಸುವಷ್ಟು ತಾರ್ಕಿಕ ಬುದ್ಧಿಶಕ್ತಿ ಪ್ರಾಣಿಗಳಿಗಿಲ್ಲ. ಆದರೆ ಎಷ್ಟೋ ವೇಳೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಮನುಷ್ಯ ವರ್ತಿಸುತ್ತಾನೆ. ಹೀಗಾಗಿ ಎಳೆಯ ಮಕ್ಕಳನ್ನು ಯಾರಾದರೂ ಹೊಡೆದರೆ ಅಥವಾ ಕ್ರೂರವಾಗಿ ವರ್ತಿಸಿದರೆ ನೀನೇನು ಮನುಷ್ಯನೋ ಮೃಗವೋ ಎಂದು ಹಳಿಯುವುದನ್ನು ನೀವು ಕೇಳಿರಬಹುದು. ಆದರೆ ಎಂತಹ ಕ್ರೂರಮೃಗವೂ ತನ್ನ ಮರಿಗಳಿಗೆ ಕೋಮಲ ಹೃದಯವುಳ್ಳ ತಾಯಿಯಾಗಿರುತ್ತದೆ. ನಾವು ಒಮ್ಮೆ ಕಣ್ಣಾರೆ ಕಂಡ ಅಪರೂಪದ ದೃಶ್ಯ ಹೀಗಿದೆ: ಸಿರಿಗೆರೆಯಿಂದ ಬೀರೂರು ಕಡೆಗೆ ಬೆಳಗಿನ ಹೊತ್ತು ಯಾವುದೋ ಕಾರ್ಯಕ್ರಮ ನಿಮಿತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಮಾರ್ಗಮಧ್ಯೆ ಹೊಸದುರ್ಗವನ್ನು ದಾಟುತ್ತಿರುವಾಗ ಜೋರಾಗಿ ಬಾರಿಸುತ್ತಿದ್ದ ತಮ್ಮಟೆಯ ಶಬ್ಧ ಕೇಳಿಸಿತು. ಕಣ್ಣೆತ್ತಿ ಕಿಟಕಿಯಾಚೆ ನೋಡಿದಾಗ ರಸ್ತೆಯ ಎಡಕ್ಕೆ ಬಯಲು ಪ್ರದೇಶದಲ್ಲಿ ಗುಡ್ಡಗಳತ್ತ ಭೀಮಾಕಾರದ ದೊಡ್ಡ ಕರಡಿಯೊಂದು ಓಡುತ್ತಿತ್ತು. ಹಳ್ಳಿಯ ಜನರು ಮದ್ದಳೆ ತಮ್ಮಟೆಗಳನ್ನು ಬಾರಿಸುತ್ತಾ ಕರಡಿಯನ್ನು ಬೆನ್ನಟ್ಟಿ ಕೈಯಲ್ಲಿ ಭರ್ಜಿಗಳನ್ನು ಹಿಡಿದು ಕಲ್ಲುಗಳನ್ನು ಬೀರುತ್ತಿದ್ದರು. ಕರಡಿಯು ಪ್ರಾಣಭೀತಿಯಿಂದ ಜನರ ಕೈಗೆ ಸಿಗದಂತೆ ಓಡುತ್ತಿತ್ತು! ಆದರೆ ಅದರ ಹಿಂದೆ ಇದ್ದ ಮರಿ ಕರಡಿಗೆ ಅದರಷ್ಟು ವೇಗವಾಗಿ ಓಡಲು ಆಗುತ್ತಿರಲಿಲ್ಲ. ತಾಯಿ ಕರಡಿಯು ಹಿಂತಿರುಗಿ ನೋಡಿ ನಿಂತು ನಾಲ್ಕು ಹೆಜ್ಜೆ ಹಿಂದಕ್ಕೆ ಓಡಿ ಬಂದು ತನ್ನ ಮರಿಯನ್ನು ಕರೆದುಕೊಂಡು ಮತ್ತೆ ಮುಂದೆ ಮುಂದೆ ಓಡುತ್ತಿತ್ತು! ತನ್ನ ರಕ್ಷಣೆಯ ಜೊತೆಗೆ ತನ್ನ ಮರಿಯ ರಕ್ಷಣೆಗಾಗಿ ಅದು ಹೆಜ್ಜೆ ಹೆಜ್ಜೆಗೂ ಮಾಡುತ್ತಿದ್ದ ಪ್ರಯತ್ನ ನಮ್ಮ ಹೃದಯವನ್ನು ಕಲಕಿತು! ಅದರ ಪಾಡಿಗೆ ಅದನ್ನು ಬಿಟ್ಟುಬಿಡಿ ಎಂದು ಜನರಿಗೆ ಕೂಗಿ ಹೇಳಬೇಕೆನಿಸಿತು. ಮುಂದೆ ಏನಾಯಿತೋ ತಿಳಿಯಲಿಲ್ಲ. ದಾರಿಯುದ್ದಕ್ಕೂ ನಮ್ಮ ಕಣ್ಮುಂದೆ ಆ ದೃಶ್ಯ ಮರುಕಳಿಸಿ ಮನಸ್ಸು ತಳಮಳಗೊಂಡಿತ್ತು! ಹೃದಯ ಉದ್ವಿಗ್ನಗೊಂಡಿತ್ತು!
ಒಂದು ಕಾಡುಪ್ರಾಣಿ ಕರಡಿಯ ಹೃದಯದಲ್ಲಿರುವ ಮಾತೃವಾತ್ಸಲ್ಯ ನಾಗರಿಕನೆನಿಸಿದ ಮನುಷ್ಯನ ಹೃದಯದಲ್ಲಿ ಕಾಣಸಿಗದಿದ್ದರೆ ಅವನನ್ನು ಮನುಷ್ಯ ಎಂದು ಕರೆವುದಾದರೂ ಹೇಗೆ? ಮೊನ್ನೆ ಸೋಮವಾರ ನಡೆದ ನಮ್ಮ ಸದ್ಧರ್ಮನ್ಯಾಯಪೀಠದ ಕಾರ್ಯಕಲಾಪಗಳಲ್ಲಿ ಒಂದು ವಿಲಕ್ಷಣವಾದ ಪ್ರಸಂಗ ಘಟಿಸಿತು. ಎದುರಿಗೆ ವಾದಿ-ಪ್ರತಿವಾದಿಗಳಾಗಿ ನಿಂತಿದ್ದವರು ಒಬ್ಬ ಯುವ ಮಹಿಳೆ ಮತ್ತು ಆಕೆಯ ಪತಿ. ಇಬ್ಬರ ಮಧ್ಯೆ ಯಾವುದೋ ಕಾರಣದಿಂದ ವಿರಸ ಉಂಟಾಗಿ ತವರು ಮನೆ ಸೇರಿದ ಆ ಮಹಿಳೆ ನಮಗೆ ದೂರು ಸಲ್ಲಿಸಿದ್ದಳು. ವಿಚಾರಣೆ ನಡೆಸುವಾಗ ಆ ಮಹಿಳೆಯ ಪಕ್ಕದಲ್ಲಿ ನಿಂತಿದ್ದ ಚಿಕ್ಕ ಮಗುವನ್ನು ನೋಡಿ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಕನ್ನಡದ ಗಾದೆ ನೆನಪಾಯಿತು. ತಂದೆತಾಯಿಗಳ ಮಧ್ಯೆ ಏನು ನಡೆಯುತ್ತಿದೆ ಎಂಬ ಯಾವ ಅರಿವೂ ಇಲ್ಲದ ಆ ಮುಗ್ಧ ಬಾಲಕನನ್ನು ನಮ್ಮ ಹತ್ತಿರ ಕರೆದೆವು. ಪುಟ್ಟ ಬಾಲಕ ಅಂಜುತ್ತಲೇ ಹತ್ತಿರ ಬಂದು ನಮಸ್ಕರಿಸಿದ. ಅಂತಹ ಮಕ್ಕಳಿಗೆ ಕೊಡಲೆಂದೇ ನಮ್ಮ ಮುಂದಿರುವ ಟೇಬಲ್ ಮೇಲೆ ಇಟ್ಟುಕೊಂಡಿದ್ದ ಚಾಕಲೇಟ್ಗಳನ್ನು ಅವನ ಕೈಗೆ ಕೊಟ್ಟು ಎದುರಿಗೆ ನಿಂತಿರುವ ವ್ಯಕ್ತಿ ಯಾರೆಂದು ಕೇಳಿದೆವು. ಬಾಲಕ ತಂದೆಯತ್ತ ಕಣ್ಣು ಹೊರಳಿಸಿ ಭಯಭೀತನಾಗಿ ಏನೊಂದೂ ಹೇಳದೆ ಮೂಕನಾಗಿ ನಿಂತಿದ್ದ. ಪ್ರತಿವಾದಿಯತ್ತ ತಿರುಗಿ "ಬಾ ಇಲ್ಲಿ ನಿನ್ನ ಮಗನನ್ನು ಎತ್ತಿಕೋ” ಎಂದು ಸೂಚಿಸಿದೆವು. ಒಡನೆಯೇ ದೂರದಲ್ಲಿ ಕೂತಿದ್ದ ಬಾಲಕನ ಅಜ್ಜ ಸಿಡಿಮಿಡಿಗೊಂಡು ಎದ್ದು ನಿಂತು ಪ್ರತಿವಾದಿಯಾದ ಮಗನನ್ನು “ನೀನು ನನ್ನ ಮಗನೇ ಆಗಿದ್ದರೆ ಎತ್ತಿಕೊಳ್ಳಬೇಡ!” ಎಂದು ಏರು ದನಿಯಲ್ಲಿ ಗದರಿಸಿದ. ಪ್ರತಿವಾದಿಗೆ ಗುರುಗಳ ಆಜ್ಞೆಯನ್ನು ಪಾಲಿಸಬೇಕೋ ತಂದೆಯ ಮಾತನ್ನು ಕೇಳಬೇಕೋ ತಿಳಿಯದೆ ಇಬ್ಬಂದಿ ಸ್ಥಿತಿಗೆ ಒಳಗಾದ. ಸೊಸೆಯ ಮೇಲಿನ ಸಿಟ್ಟಿನಿಂದ ಮೊಮ್ಮಗನನ್ನೂ ಧಿಃಕರಿಸುವ ಮಟ್ಟಿಗೆ ಹೋದ ವಿಕೃತಮನಸ್ಸಿನ ಆ ಹಠಮಾರಿ ಮುದುಕನಿಗೆ ಎಲ್ಲರೆದುರು ಛೀಮಾರಿ ಹಾಕಿ ಜೋರುಮಾಡಿದ ಮೇಲೆ ಪ್ರತಿವಾದಿ ಬಂದು ತನ್ನ ಮಗನನ್ನು ಎತ್ತಿಕೊಂಡ. ಆದರೆ ನಮ್ಮ ಒತ್ತಾಯಕ್ಕೆ ಅವನು ತನ್ನ ಮಗನನ್ನು ಎತ್ತಿಕೊಂಡನೇ ಹೊರತು ನಿಜವಾದ ಪ್ರೀತಿಯಿಂದ ಅಲ್ಲ ಎಂಬುದು ಅವನ ಮುಖಭಾವದಲ್ಲಿ ಕಾಣಿಸುತ್ತಿತ್ತು. ಮಹಾಭಾರತದ ಶಾಕುಂತಲೋಪಾಖ್ಯಾನದಲ್ಲಿ ಮುಂದೆ ನಿಂತಿದ್ದ ತೇಜಸ್ವಿ ಬಾಲಕ ತನ್ನ ಮಗನೆಂದು ಗೊತ್ತಿದ್ದರೂ ಗುರುತಿಸದಂತೆ ನಟಿಸಿದ ಗಂಡ ದುಷ್ಯಂತನ ವರ್ತನೆಯಿಂದ ಬೇಸತ್ತ ಶಕುಂತಲೆ ಸಿಟ್ಟಿನಿಂದ ಹೇಳಿದ “ಅಂಡಾನಿ ಬಿಭ್ರತಿ ಸ್ವಾನಿ ನ ಭಿನ್ದಂತಿ ಪಿಪೀಲಿಕಾಃ” (ಸಣ್ಣ ಇರುವೆಗಳೂ ಕೂಡ ತಮ್ಮ ಮೊಟ್ಟೆಗಳನ್ನು ಪೋಷಿಸುತ್ತವೆಯೇ ಹೊರತು ಒಡೆಯುವುದಿಲ್ಲ) ಎಂಬ ಶ್ಲೋಕ ನೆನಪಿಗೆ ಬಂತು. ಅನೇಕ ವೇಳೆ ಮನುಷ್ಯರಿಗಿಂತಲೂ ಪ್ರಾಣಿಗಳು ಎಷ್ಟೋ ವಾಸಿ ಮೇಲು ಎನಿಸುತ್ತದೆ. ಯಾವ ಹುಲಿಯೂ ಬಂದೂಕಿನ ಗುಂಡಿನಿಂದ ಸಾಯುವಾಗ ತನ್ನ ಮರಿಗಳಿಗೆ ತನ್ನನ್ನು ಕೊಂದ ಬೇಟೆಗಾರನ ಮತ್ತು ಅವನ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಲು ಹೇಳಿ ಸಾಯುವುದಿಲ್ಲ. ಅವುಗಳೇನಾದರೂ ಮನುಷ್ಯನಂತೆ ದ್ವೇಷ ಭಾವನೆಗಳನ್ನು ಇಟ್ಟುಕೊಂಡಿದ್ದರೆ ಇಂದು ಮನುಷ್ಯ ಸಂತತಿಯೇ ಈ ಭೂಮಿಯ ಮೇಲೆ ಇರುತ್ತಿರಲಿಲ್ಲ!
ಪ್ರಾಣಿಗಳು ಮನುಷ್ಯನಂತೆ ಎಂದೂ ಕೂಡಿಟ್ಟು ಕಾದಾಡುವುದಿಲ್ಲ. ಅಂದಂದಿನ ಹಸಿವನ್ನು ಅಂದಂದೇ ಬೇಟೆಯಾಡಿ ನೀಗಿಸಿಕೊಳ್ಳುತ್ತವೆ. ಅಪರಿಗ್ರಹ ತತ್ವವನ್ನು ಪ್ರಾಣಿಗಳು ಪಾಲಿಸಿದಂತೆ ಮನುಷ್ಯರು ಪಾಲಿಸುವುದಿಲ್ಲ. “ಇಂದಿಗೆಂತು ನಾಳಿಗೆಂತು ಎಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ!” ಎಂದು ಪರಿತಪಿಸುವ ಬಸವಣ್ಣನವರ ಮಾತು ಮನುಷ್ಯನಿಗೆ ಅನ್ವಯಿಸುತ್ತದೆಯೇ ಹೊರತು ಪ್ರಾಣಿಗಳಿಗೆ ಅನ್ವಯಿಸುವುದಿಲ್ಲ. "There is enough in this world for mans need, but not enough for mans greed” ಎನ್ನುವ ಗಾಂಧೀಜಿಯವರ ಮಾತೂ ಸಹ ಮನುಷ್ಯನನ್ನೇ ಕುರಿತು ಹೇಳಿದ್ದು. ಒಮ್ಮೆ ರಮಣಮಹರ್ಷಿಯವರು ಧ್ಯಾನಮಂದಿರದಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಕೋತಿಯೊಂದು ಬಂತು. ಅವರ ಮುಂದೆ ಭಕ್ತರು ತಂದಿಟ್ಟಿದ್ದ ಹಣ್ಣಿನ ಬುಟ್ಟಿಯಲ್ಲಿ ಒಂದನ್ನು ಎತ್ತಿಕೊಂಡು ಹೋಯಿತು. ಅದು ಅತ್ತ ಹೋಗುತ್ತಿದ್ದಂತೆಯೇ ರಮಣ ಮಹರ್ಷಿಗಳು ಶಿಷ್ಯರತ್ತ ನೋಡಿ ನಸುನಗುತ್ತಾ “ಅದು ಉಂಗಳೊಡೆಯ ಮುಗತ್ತಿಲ್ ಕರಿಯೈಪೂಸಿ ಪೋಯ್ ವಿಟ್ಟದು!” (ಅದು ನಿಮ್ಮ ಮುಖಕ್ಕೆ ಮಸಿ ಬಳಿದು ಹೋಯಿತು) ಎಂದು ಉದ್ಗರಿಸಿದರಂತೆ! ಅವರ ಮಾತಿನ ಅರ್ಥವೇನೆಂದು ಶಿಷ್ಟರಿಗೆ ತಕ್ಷಣವೇ ಹೊಳೆಯಲಿಲ್ಲ. ಅದಕ್ಕೆ ಅವರು “ಆ ಕೋತಿ ಎಲ್ಲರ ಕಣ್ಣೆದುರಿಗೆ ಹಣ್ಣಿನ ಬುಟ್ಟಿಯಿಂದ ಒಂದೇ ಒಂದು ಹಣ್ಣನ್ನು ತೆಗೆದುಕೊಂಡು ಹೋಯಿತು. ನೀವು ಎಲ್ಲಾ ತನಗೆ ಬೇಕೆಂದು ಬಯಸುತ್ತೀರಿ?” ಎಂದು ಹೇಳಿದಾಗ ಶಿಷ್ಯರು ತಲೆತಗ್ಗಿಸಿದರಂತೆ!
ವಿಚಾರ ಎಲ್ಲಿಂದ ಎಲ್ಲಿಗೋ ಹೋಯಿತು. ಆರಂಭದಲ್ಲಿ ಉಲ್ಲೇಖಿಸಿದ ಸೂಕ್ತಿಯಲ್ಲಿ ಸಾಹಿತ್ಯ, ಸಂಗೀತ ಮತ್ತು ಕಲೆಯ ಗಂಧವಿಲ್ಲದ ಮನುಷ್ಯನನ್ನು ಪಶುವಿಗೆ ಹೋಲಿಸಿರುವುದು ಅಂತಹ ವ್ಯಕ್ತಿಯನ್ನು ಬುದ್ಧಿ ಇಲ್ಲದ ಪಶುವೆಂದು ಹೀಗಳೆಯುವುದಕ್ಕಲ್ಲ. ಬಾಲವಿಲ್ಲದ, ಕೋಡಿಲ್ಲದ ಪಶುವು ಹೇಗೆ ನೋಡಲು ಸುಂದರವಾಗಿ ಕಾಣಿಸುವುದಿಲ್ಲವೋ ಹಾಗೆ ಅಂತಹ ವ್ಯಕ್ತಿ ಶೋಭಿಸುವುದಿಲ್ಲವೆಂದು ತಿಳಿಹೇಳಲು. ಇದು ಮನುಷ್ಯನ ಬಾಹ್ಯ ನೋಟವನ್ನು ಕುರಿತು ಹೇಳಿದ ಮಾತಲ್ಲ. ಅಂತರಂಗವನ್ನು ಕುರಿತು ಹೇಳಿದ ಮಾತು. ಸಂಗೀತ ಮನುಷ್ಯನ ಮನಸ್ಸನ್ನು ಅರಳಿಸುತ್ತದೆ. ಸಂಗೀತದ ನಾದ ಮಾಧುರ್ಯವು ಯಾರನ್ನು ತಾನೇ ಆಕರ್ಷಿಸುವುದಿಲ್ಲ? “ಪಶುರ್ವೇತ್ತಿ, ಶಿಶುರ್ವೇತ್ತಿ, ವೇತ್ತಿ ಗಾನರಸಂ ಫಣಿಃ”. ದೂರದಿಂದ ಅಲೆ ಅಲೆಯಾಗಿ ಬಂದ ಕೊಳಲಿನ ಮಧುರ ನಿನಾದವನ್ನು ಕೇಳಿ ಹಸುವೂ ಸಹ ಹುಲ್ಲು ತಿನ್ನುವುದನ್ನು ಬಿಟ್ಟು ತಲೆಯೆತ್ತಿ ಕಿವಿಯಗಲಿಸಿ ಕೇಳುತ್ತದೆ. ಜೋ! ಜೋ!! ಎಂದು ಹಾಡುವ ತಾಯಿಯ ಜೋಗುಳವನ್ನು ಕೇಳಿದ ತೊಟ್ಟಿಲ ಮಗುವು ಕಿಲ ಕಿಲನೆ ನಕ್ಕು ಹಾಗೆಯೇ ನಿದ್ರೆ ಹೋಗುತ್ತದೆ. ರಾಗಬದ್ಧವಾಗಿ ನುಡಿಸುವ ಹಾವಾಡಿಗನ ಪುಂಗಿಯ ನಿನಾದಕ್ಕೆ ವಿಷಜಂತುವಾದ ಹಾವೂ ಸಹ ಹೆಡೆಯೆತ್ತಿ ತಲೆದೂಗುತ್ತದೆ. ಸಂಗೀತಕ್ಕೆ ಭಾಷೆ ಇಲ್ಲ; ಭಾವವಿರುತ್ತದೆ. ಸಂಗೀತದ ನಾದಮಾಧುರ್ಯವನ್ನು ಆಸ್ವಾದಿಸಲು ಎಲ್ಲರಿಂದಲೂ ಆಗುವುದಿಲ್ಲ. ಅದಕ್ಕೆ ಒಂದು ಸಂಸ್ಕಾರ ಬೇಕು. ಅಯಸ್ಕಾಂತಕ್ಕೆ ಆಕರ್ಷಣ ಶಕ್ತಿ ಇದ್ದರೂ ಲೋಹವು ಆಕರ್ಷಣೆಗೆ ಒಳಗಾಗಬಹುದೇ ಹೊರತು ಹುಲ್ಲು ಆಕರ್ಷಿತವಾಗುವುದಿಲ್ಲ.
ಸಂಗೀತದಿಂದ ಮನಸ್ಸು ಉತ್ತಮ ಸಂಸ್ಕಾರ ಹೊಂದುತ್ತದೆ. ಸೂಕ್ಷ್ಮ ಸಂವೇದನೆಯನ್ನು ಪಡೆಯುತ್ತದೆ. ಏಕಾಗ್ರತೆಯನ್ನು ಸಾಧಿಸಲು ಸಹಕಾರಿಯಾಗುತ್ತದೆ. ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೆ ವಿಜ್ಞಾನದ ವಿಷಯಗಳಂತೆ ಮಕ್ಕಳು ಸಂಗೀತವನ್ನು ಕಲಿಯುವುದು ಕಡ್ಡಾಯವಾಗಬೇಕು. ಇಂದಿನ ನವನಾಗರೀಕತೆಯಲ್ಲಿ ಹೆಣ್ಣನ್ನು ನೋಡಲು ಬಂದಾಗ ಮಗಳಿಗೆ ವೀಣೆಯನ್ನು ಹಿಡಿದುಕೊಳ್ಳಲು ಬರುವುದಿಲ್ಲವೆಂದು ಗಂಡು ಜರಿದು ಹೋದರೆ ಗತಿ ಏನು ಎಂದು ಮಗಳಿಗೆ ಸಂಗೀತಪಾಠ ಹೇಳಿಸಿದರೆ ಚತುರ್ವಿಧ ಪುರುಷಾರ್ಥಗಳನ್ನೂ ಮೀರಿದ ಪಂಚಮ ಪುರುಷಾರ್ಥ ಸಾಧನೆಗಾಗಿ ತಂದೆತಾಯಿಗಳು ಹೀಗೆ ಮಾಡುತ್ತಾರೆ ಎಂದು ಹೇಳಬೇಕಾಗುತ್ತದೆ!
ಶ್ರೇಷ್ಠ ಸಂಗೀತಗಾರನಿಗೆ ತಾನು ಬೇರೆ, ತಾನು ನುಡಿಸುವ ವಾದ್ಯ ಬೇರೆಯಾಗಿ ತೋರುವುದಿಲ್ಲ. ಆರಂಭದಲ್ಲಿ ವಾದ್ಯವನ್ನು ಶೃತಿಗೊಳಿಸುವಾಗ ಇದ್ದ ಭೇದ ಕ್ರಮೇಣ ಮಾಯವಾಗಿ ತಾನು ನುಡಿಸುವ ವಾದ್ಯವೇ ತಾನಾಗಿಬಿಡುತ್ತಾನೆ. ತನ್ನ ಕೈಯಲ್ಲಿರುವ ವಾದ್ಯವನ್ನು ನುಡಿಸುತ್ತಿದ್ದೇನೆಂಬ ಪರಿವೆಯೇ ಅವನಿಗಿರುವುದಿಲ್ಲ. ತನ್ಮಯತೆಯಿಂದ ನುಡಿಸುವ ಸಂಗೀತಗಾರ ತಾನು ಬೇರೆಯಲ್ಲ; ತನ್ನ ವಾದ್ಯ ಬೇರೆಯಲ್ಲ. ವಾದ್ಯ ಮತ್ತು ವಾದಕ ಒಂದಾಗಿಬಿಡುತ್ತಾರೆ. ವಾದ್ಯವು ಅವನ ಶರೀರದ ಒಂದು ಭಾಗವಾಗಿ ಕಾಣಿಸುವುದಿಲ್ಲ. ವಾದ್ಯವೇ ಶರೀರ, ಶರೀರವೇ ವಾದ್ಯ ಎಂಬ ಅಭಿನ್ನತೆ ಏರ್ಪಡುತ್ತದೆ. ಅಲೆ ಅಲೆಯಾಗಿ ಹೊರಹೊಮ್ಮುವ ನಾದವೇ ಅವನ ಉಸಿರಾಗಿ ಪರಿಣಮಿಸುತ್ತದೆ. ತಾನು ನುಡಿಸುವ ತಂತಿಗಳಿಂದ ಅಪ್ಪಿ ತಪ್ಪಿ ಒಂದು ಅಪಸ್ವರವು ಉಂಟಾದರೂ ನಡೆಯುವಾಗ ಕಾಲಲ್ಲಿ ಮುಳ್ಳುನಟ್ಟಷ್ಟು ನೋವುಂಟಾಗುತ್ತದೆ; ಜೀವವೇ ಹೋದಂತೆ ಆಗಿಬಿಡುತ್ತದೆ.
ನಮ್ಮ ದೇಶದಲ್ಲಿ ಸಂಗೀತ ಹುಟ್ಟಿದ್ದು ಕೇವಲ ಮನರಂಜನೆಗಾಗಿ ಅಲ್ಲ, ಆತ್ಮೋನ್ನತಿಗಾಗಿ, ದೇವರ ಒಲುಮೆಗಾಗಿ. "ಕೋಟ್ಯನುಕೋಟಿ ಜಪವನು ಮಾಡಿ ಕೋಟಲೆಗೊಳ್ಳಲದೇಕೆ ಮನವೇ? ಕಿಂಚಿತ್ತು ಗೀತವೊಂದು ಅನಂತಕೋಟಿ ಜಪ” ಎಂದು ಬಸವಣ್ಣನವರು ಭಗವನ್ನಾಮಜಪಕ್ಕಿಂತ, ಭಗವನ್ನಾಮ ಸಂಕೀರ್ತನೆಯನ್ನು ಅಂದರೆ ತನ್ಮಯತೆಯಿಂದ ಹಾಡಿ ಭಗವಂತನ ಸ್ತೋತ್ರ ಮಾಡುವುದನ್ನು ಹೆಚ್ಚು ಮೆಚ್ಚಿಕೊಳ್ಳುತ್ತಾರೆ. ತಾಳಮಾನ ಸರಿಸವನರಿಯೆ... ಕೂಡಲಸಂಗಮ ದೇವಾ ನಿನಗೆ
ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಎನ್ನುವ ಅವರು
ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಹಾಡಯ್ಯಾ,
ಉರದಲೊತ್ತಿ ಬಾರಿಸು ಕೂಡಲ ಸಂಗಮದೇವಾ!
ಎಂಬ ವಚನವನ್ನು ಸ್ವತಃ ಹಾಡಿದಂತಿದೆ. ಕೈಯೊಳಗೆ ತಂಬೂರಿಯನ್ನು ಹಿಡಿದು ಭಗವನ್ನಾಮ-ಸಂಕೀರ್ತನೆಯನ್ನು ಮಾಡುತ್ತಾ ದೇವರಿಗಾಗಿ ಹೃದಯಾಂತರಾಳದಿಂದ ಹಂಬಲಿಸುವ ಭಕ್ತನು ಭಗವಂತನ ಕೈಯೊಳಗಿನ ತಂಬೂರಿಯಾಗಿಬಿಡುತ್ತಾನೆ. ಅವನ ಶರೀರವೇ ಆ ತಂಬೂರಿಯ ತೋಳುಗಳಾಗಿ, ತಲೆಯೇ ಆ ತಂಬೂರಿಯ ಸೋರೆಬುರುಡೆಯಾಗಿ, ನರಗಳೇ ತಂತಿಗಳಾಗಿ, ಬೆರಳೇ ತಂತಿಯನ್ನು ಮೀಟುವ ಕಡ್ಡಿಯಾಗಿ ಪರಿಣಮಿಸುತ್ತವೆ. ಹೀಗೆ ಭಕ್ತನು ಭಗವಂತನು ನುಡಿಸಿದಂತೆ ನುಡಿಸುವ ವಾದ್ಯವಾಗಿ ಪರಿಣಮಿಸುತ್ತಾನೆ. ಪರಮಾತ್ಮನ ಪದತಲದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡು ಜೀವನದಲ್ಲಿ ಏನೇ ಮಾಡಿದರೂ, ಏನೇ ಘಟಿಸಿದರೂ, ತಾನು ಮಾಡಿದೆನೆಂಬ ಅಹಂಕಾರಪಟ್ಟುಕೊಳ್ಳದೆ ಅಥವಾ ಹೀಗಾಯಿತಲ್ಲಾ ಎಂದು ದುಃಖಿಸದೆ “ಎಲ್ಲಾ ಶಿವನ ಲೀಲೆ, ಎಲ್ಲಾ ಅವನ ಇಚ್ಚೆ, ನನ್ನದೇನಿದೆ? ಶಿವನ ಕೈಯೊಳಗಿನ ತಂಬೂರಿ ನಾನು, ಅವನು ನುಡಿಸಿದಂತೆ ನುಡಿಯಲೇ ಬೇಕಲ್ಲವೇ?” ಎಂದು ಸಮಾಧಾನ ಪಟ್ಟುಕೊಳ್ಳುತ್ತಾನೆ. ಸಂಗೀತಗಾರನು ತಂಬೂರಿಯನ್ನು ಮಗುವಿನಂತೆ ಎದೆಗೆ ಅವಚಿಕೊಂಡು, ತನ್ಮಯತೆಯಿಂದ ಹೇಗೆ ಹಾಡುತ್ತಾನೋ ಹಾಗೆಯೇ ಭಗವಂತನ ಪುಣ್ಯನಾಮಸ್ಮರಣೆಯಲ್ಲಿ ತನ್ಮಯನಾಗುವ ಭಕ್ತನು ತನ್ನ ಕೈಯೊಳಗಿರುವ ತಂಬೂರಿಯೇ ತಾನಾಗಿ, ತಾನೇ ಆ ನಾದಬ್ರಹ್ಮ ಶಿವನು ಎದೆಗೊತ್ತಿಕೊಂಡು ನುಡಿಸುವ ತಂಬೂರಿಯಾಗಿ ಆನಂದಾನುಭೂತಿಯಲ್ಲಿ ಓಲಾಡುತ್ತಾನೆ. ಪುರಂದರ ದಾಸರ ದೇವರನಾಮಗಳಾಗಲೀ, ತ್ಯಾಗರಾಜರ ಕೀರ್ತನೆಗಳಾಗಲೀ, ನಿಜಗುಣರ ಗೀತೆಗಳಾಗಲೀ, ರಂಗಮಂದಿರಗಳಲ್ಲಿ ಸಂಗೀತಕಛೇರಿಗಳನ್ನು ಮಾಡಿ, ಭರತನಾಟ್ಯವನ್ನು ಅಭಿನಯಿಸಿ, ಆಕಾಶವಾಣಿಯಲ್ಲಿ ಹಾಡಿ, ದೂರದರ್ಶನದಲ್ಲಿ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುವುದಕ್ಕಾಗಿ ಅಲ್ಲ; ಜೀವನವೆಂಬ ನಾಟ್ಯದ ಸೂತ್ರಧಾರನಾದ ಆ ನಟರಾಜನ ಒಲುಮೆಯನ್ನು ಗಳಿಸುವುದಕ್ಕಾಗಿ!
ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯಾ ಎನ್ನುತ್ತಾರೆ ಬಸವಣ್ಣನವರು. ಶಿವನು ನಾದಪ್ರಿಯನಲ್ಲವೆಂದರೆ ನಾದದ್ವೇಷಿಯೇ? ನಾಟ್ಯದ ಅಧಿದೇವತೆಯಾಗಿ ನಟರಾಜನೆಂದು ಪ್ರಸಿದ್ಧನಾಗಿರುವ ಶಿವನು ನಾದದ್ವೇಷಿಯಾಗಲು ಹೇಗೆ ಸಾಧ್ಯ? ಶಿವನು ಒಲಿಯುವುದು ಕೇವಲ ನಾದಕ್ಕಲ್ಲ; ನಾದದ ಹಿಂದಿರುವ ಭಕ್ತಿಭಾವಗಳಿಗೆ. ಭಾರತೀಯ ಸಂಗೀತವು ಭಕ್ತಿಪ್ರಧಾನವಾದದ್ದು. ಅದು ಸಂಗೀತ ಕಛೇರಿಗಳಿಂದ ಜನರ ಮೆಚ್ಚುಗೆಯನ್ನು ಗಳಿಸಲೋಸುಗ ಹುಟ್ಟಿದ್ದಲ್ಲ. ದೇವರ ಮುಂದೆ ಭಕ್ತಿಯಿಂದ ಹಾಡಿ ದೇವರ ಒಲುಮೆಯನ್ನು ಪಡೆಯಲೋಸುಗ ಹುಟ್ಟಿದ್ದು. ಶಿವನು ಭಕ್ತಿಪ್ರಿಯನೇ ಹೊರತು ಪಾಂಡಿತ್ಯಪ್ರಿಯನಲ್ಲ. ಇದನ್ನೇ ಪುರಂದರದಾಸರು ಅನುಭವಿಸಿ ಸುರುಟಿ ರಾಗದಲ್ಲಿ ಹಾಡಿದ್ದು:
ಕೇಳನೋ ಹರಿ ತಾಳನೋ
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ!
ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರನು ಈ ಡಂಭಕದ ಕೂಗಾಟ.
ಅಡಿಗಡಿಗಾನಂದ ಬಾಷ್ಪಪುಳಕದಿಂದ
ನಡೆ ನುಡಿಗೆ ಶ್ರೀಹರಿಯೆನ್ನುತ
ದೃಢಭಕ್ತಿಯಿಂದಲಿ ಹರಿಕೀರ್ತನೆ ಮಾಡಿ
ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 21.4.2010.