ಮಕ್ಕಳ ಮುಗ್ಧತೆ ಮತ್ತು ಪ್ರೀತಿ
ಕೌಸಲ್ಯಾಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ||
ಉತ್ತಿಷ್ಠ ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ |
ಉತ್ತಿಷ್ಠ ಕಮಲಾಕಾಂತ ತೈಲೋಕ್ಯಂ ಮಂಗಳಂ ಕುರು ||
ಕರ್ನಾಟಕ ಸಂಗೀತ ಗಾನವಿದುಷಿ ಶ್ರೀಮತಿ ಸುಬ್ಬುಲಕ್ಷ್ಮೀ ಸುಶ್ರಾವ್ಯವಾಗಿ ಹಾಡಿದ ಈ ಸುಪ್ರಭಾತವನ್ನು ಕೇಳದವರೇ ಇಲ್ಲ. ಮುಂಜಾವದ ನಸುಕಿನಲ್ಲಿ ದೇವಾಲಯಗಳ ಮೇಲಿರುವ ಧ್ವನಿವರ್ಧಕಗಳಿಂದ ಕೇಳಿಬರುವ ಈ ಸುಪ್ರಭಾತ ಭಕ್ತಿಸಂಪನ್ನರಿಗೆ, ಸಂಗೀತಪ್ರಿಯರಿಗೆ ಕರ್ಣಾನಂದಕರವಾಗಿರುತ್ತದೆ; ಕುಂಭಕರ್ಣರಿಗೆ ಕರ್ಣಕಠೋರವಾಗಿರುತ್ತದೆ. ತಾಯಂದಿರು ಮಲಗಿದ ಮಕ್ಕಳನ್ನು ಏಳಿಸುವ ರೀತಿಯಲ್ಲಿ ಉತ್ತಿಷ್ಠ ನರಶಾರ್ದೂಲ ಎದ್ದೇಳು ಮಂಜುನಾಥ! ಎಂದೆಲ್ಲಾ ದೇವರನ್ನೇ “ಏಳಯ್ಯಾ ಬೆಳಗಾಯಿತು” ಎಂದು ಪ್ರಾರ್ಥನೆಯಲ್ಲಿ ಹೇಳುವುದು ದೇವರಿಗೆ ಮರ್ಯಾದೆ ತರುವಂತಹ ವಿಷಯವೇ? ಮಲಗಿದ್ದವರು ಏಳದಿದ್ದರೆ ಮುಖದ ಮೇಲೆ ನೀರನ್ನು ಚಿಮುಕಿಸುವಂತೆ ಬೆಳಗಿನ ಪೂಜಾ ಸಂದರ್ಭದಲ್ಲಿ ದೇವರಿಗೆ ಮಾಡುವ ಅಭಿಷೇಕವು ಮಲಗಿದ್ದ ದೇವರನ್ನು ಎಚ್ಚರಿಸಲೋಸುಗವೇ? ಏಳಬೇಕಾದವರು ಯಾರು? ದೇವರೋ, ಭಕ್ತರೋ? ಮಕ್ಕಳು ಶಾಲೆಯ ಹೋಂವರ್ಕನ್ನು ಮಾಡಿ ಮುಗಿಸದೇ ಹೋದರೆ ಅಥವಾ ಏನಾದರೂ ತಪ್ಪು ಮಾಡಿದರೆ ತಾಯಂದಿರು ನಿಮ್ಮ ಅಪ್ಪನಿಗೆ ಹೇಳಿ ನಿನಗೆ ಸರಿಯಾಗಿ ಪೂಜೆ ಮಾಡಿಸ್ತೀನಿ ಇರು ಎಂದು ಮಕ್ಕಳನ್ನು ಗದರಿಸುವುದಕ್ಕೂ ಮತ್ತು ಅವರ ಅಪ್ಪ ಮಾಡುವ ದೇವರ ಪೂಜೆಯ ರೀತಿಗೂ ಏನಾದರೂ ಸಂಬಂಧ ಇರಬಹುದೇ? ದೇವರೇನು ಸೋಮಾರಿಯೇ ಅಥವಾ ಲೋಕಪಾಲಕನಾದ ಅವನು ನಿತ್ಯವೂ ಮೊರೆಯಿಡುವ ಅಸಂಖ್ಯಾತ ಭಕ್ತರ ಸಂಕಷ್ಟಗಳನ್ನು ಪರಿಹರಿಸುವಲ್ಲಿ ದಿನವಿಡೀ ಬಿಸಿಲ ಬೇಗೆಯಲ್ಲಿ ಬೆಂದು ಸೋತು ಸುಣ್ಣಾಗಿ ನಿದ್ರೆಗೆಟ್ಟು ಮಲಗಿರುವನೇ? ಹಾಗೆ ಮಲಗಿದ ಸಂದರ್ಭದಲ್ಲಿ ಲೋಕವ್ಯವಹಾರ ನಡೆಯುವುದು ಹೇಗೆ? ವಿಮಾನ ನಿಲ್ದಾಣದಿಂದ ಮೇಲೇರಿದ ವಿಮಾನ ನಿರ್ದಿಷ್ಟವಾದ ಎತ್ತರವನ್ನು ತಲುಪಿ ನಿರಾತಂಕ ಸ್ಥಿತಿಯಲ್ಲಿದೆಯೆಂದು ಖಾತ್ರಿಯಾದ ಮೇಲೆ ವಿಶ್ರಾಂತಿಯನ್ನು ಪಡೆಯಲು ಅನುಭವಿ ಪೈಲೆಟ್ autopilot ಗೆ ಇಡುವಂತೆ ದೇವರೇನಾದರೂ ಮಲಗಿದ್ದಾಗ ಈ ಜಗತ್ತನ್ನು ನಿಯಂತ್ರಿಸಲು autopilot ಗೆ ಇಟ್ಟಿರುತ್ತಾನೆಯೇ? ಅದಾವುದೂ ಅಲ್ಲ. ಆಧುನಿಕ ಮೈಕಾಸುರನ ಬಾಯಲ್ಲಿ ಬರುವ ಈ ಸುಪ್ರಭಾತ ವಾಲ್ಮೀಕಿಯ ಮೂಲ ರಾಮಾಯಣದಲ್ಲಿ ಬರುವ ಶ್ಲೋಕಗಳು. ವಿಶ್ವಾಮಿತ್ರರು ಮಹಾರಾಜ ದಶರಥನ ಒಪ್ಪಿಗೆಯನ್ನು ಪಡೆದು ರಾಕ್ಷಸರ ಸಂಹಾರಕ್ಕಾಗಿ ರಾಮಲಕ್ಷ್ಮಣರನ್ನು ಕಾಡಿಗೆ ಕರೆದುಕೊಂಡು ಹೋದಾಗ ಸರಯೂ ನದಿಯ ದಡದಲ್ಲಿ ತಂಗಿದ್ದು ಬೆಳಗಿನ ಹೊತ್ತು ರಘುವಂಶತಿಲಕನಾದ ಶ್ರೀರಾಮನನ್ನು ಏಳಿಸುವಾಗ ಹೇಳಿದ ಈ ಶ್ಲೋಕಗಳು ದೇವರ ಮೇಲಿನ ವಾತ್ಸಲ್ಯಭಕ್ತಿಯ ಪ್ರತೀಕ.
ಬೆಳಗಿನ ಹೊತ್ತು ಆಕಾಶವಾಣಿಯಲ್ಲಿ ಕೇಳಿಬರುವ ಈ ಸುಪ್ರಭಾತದ ನಂತರ ಚಿಂತನ ಕಾರ್ಯಕ್ರಮವಿರುತ್ತದೆ. ನಿಯಮಿತವಾಗಿ ನಾಲೈದು ನಿಮಿಷಗಳ ಅವಧಿಯಲ್ಲಿ ಬಿತ್ತರಿಸುವ ಈ ಕಾರ್ಯಕ್ರಮದಲ್ಲಿ ಮನಸ್ಸನ್ನು ಆಹ್ಲಾದಗೊಳಿಸುವ ಒಳ್ಳೊಳ್ಳೆಯ ಚಿಂತನಾರ್ಹ ಆಧ್ಯಾತ್ಮಿಕ ವಿಚಾರಗಳಿರುತ್ತವೆ. ಇತ್ತೀಚೆಗೆ ಆಧುನಿಕ ತಂತ್ರಜ್ಞಾನ ಬೆಳೆದಂತೆ ಇಂತಹ ಒಳ್ಳೆಯ ವಿಚಾರಗಳು ನಿಮ್ಮ ಮೊಬೈಲ್ ಫೋನ್ ಗೆ ಅಥವಾ ಇ-ಮೇಲ್ ವಿಳಾಸಕ್ಕೆ ಪ್ರತಿದಿನ ಬರುತ್ತವೆ. ಆಕಾಶವಾಣಿಯ ಚಿಂತನ ಕಾರ್ಯಕ್ರಮದಲ್ಲಿ ಕೇಳಿಬರುವ ವಿಚಾರಗಳು ಗಾಳಿಗೆ ತೇಲಿಹೋದರೆ, ನಿಮ್ಮ ಮೊಬೈಲ್/ಇ-ಮೇಲ್ ನಲ್ಲಿ ಬರುವ ವಿಚಾರಗಳು ಲಿಖಿತರೂಪದಲ್ಲಿ ಇರುವುದರಿಂದ ನಿಮಗೆ ಬಿಡುವಾದಾಗ ಓದಿಕೊಳ್ಳಬಹುದು. ಕೆಲವು ದಿನಗಳ ಹಿಂದೆ ನಮ್ಮ ಮೊಬೈಲ್ ಗೆ ಬಂದ ತುಂಬಾ ಮನಮಿಡಿಯುವ ಕಥಾನಕ ಹೀಗಿದೆ:
ಒಬ್ಬ ತಂದೆ ಹೊಸದಾಗಿ ಕೊಂಡಿದ್ದ ತನ್ನ ಕಾರನ್ನು ತೊಳೆಯುತ್ತಿದ್ದ. ಆಟವಾಡುತ್ತಿದ್ದ ಆತನ ನಾಲ್ಕು ವರ್ಷದ ಮಗು ಕಲ್ಲಿನಿಂದ ಕಾರನ್ನು ಗೀಚಿದ್ದು ಕಾಣಿಸಿತು. ಸಿಟ್ಟಿಗೆದ್ದ ತಂದೆ ಸುತ್ತಿಗೆಯಿಂದ ಮಗುವಿನ ಕೈಗೆ ಹೊಡೆದ. ಮಗುವಿನ ಕೈಬೆರಳುಗಳು ಜಜ್ಜಿಹೋದವು. ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಅನಿವಾರ್ಯವಾಗಿ ಕೈಬೆರಳುಗಳನ್ನು ಕತ್ತರಿಸಬೇಕಾಯಿತು. ಬ್ಯಾಂಡೇಜ್ ಕಟ್ಟಿಸಿಕೊಂಡು ವಾಪಾಸ್ ಮನೆಗೆ ಹಿಂತಿರುಗುವಾಗ ಆ ಮಗು ತಂದೆಯತ್ತ ತಿರುಗಿ ಕೇಳಿತು: “ಅಪ್ಪಾ! ನನ್ನ ಕೈಬೆರಳುಗಳು ಯಾವಾಗ ಬೆಳೆಯುತ್ತವೆ?” ಮುಗ್ಧ ಮಗುವಿನ ಈ ಮಾತುಗಳನ್ನು ಕೇಳಿ ತಂದೆಗೆ ಕರುಳು ಕಿವುಚಿದಂತಾಯಿತು. ಬಾಯಿಂದ ಮಾತೇ ಹೊರಡಲಿಲ್ಲ. ತನ್ನ ಕ್ರೂರವರ್ತನೆಯಿಂದ ಬೇಸತ್ತ ತಂದೆ ಕಾರನ್ನು ಝಾಡಿಸಿ ಒದ್ದ. ಕಾರಿನ ಮೇಲೆ ಮಗು ಗೀಚಿದ್ದು ಮತ್ತೊಮ್ಮೆ ಕಾಣಿಸಿತು. ಗಮನವಿಟ್ಟು ಓದಿದಾಗ ಆ ಮಗು ತಂದೆಯ ಮೇಲಿನ ಪ್ರೀತಿಯಿಂದ “I love you Dad” ಎಂದು ಬರೆದಿತ್ತು! ಅದನ್ನು ಓದಿ ಭಾರವಾದ ಹೃದಯದಿಂದ ತಂದೆ ನೆಲಕ್ಕೆ ಕುಸಿದು ಬಿದ್ದ. ಒಂದನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. “Things are to be used and people are to be loved. But in the world, people are used and things are loved!”. (ಜಡವಸ್ತುಗಳನ್ನು ಬಳಸಿಕೊಳ್ಳಬೇಕು; ಮನುಷ್ಯರನ್ನು ಪ್ರೀತಿಸಬೇಕು. ಆದರೆ ಈ ಜಗತ್ತಿನಲ್ಲಿ ಮನುಷ್ಯರನ್ನು ಬಳಸಿಕೊಳ್ಳುತ್ತಾರೆ; ಜಡವಸ್ತುಗಳನ್ನು ಪ್ರೀತಿಸುತ್ತಾರೆ). ಇದೇ ಮಾತನ್ನು ಮತಧರ್ಮಗಳಿಗೂ ಅನ್ವಯಿಸಿ ಹೇಳಬಹುದೆಂದು ತೋರುತ್ತದೆ. ಈ ಜಗತ್ತಿನಲ್ಲಿ ಜನರು ಮನುಷ್ಯರನ್ನು ಪ್ರೀತಿಸುವುದಕ್ಕಿಂತ ತಮ್ಮ ತಮ್ಮ ಮತಧರ್ಮಗಳನ್ನು ಹೆಚ್ಚು ಪ್ರೀತಿಸುತ್ತಿರುವಂತೆ ತೋರುತ್ತದೆ. “ಹೆತ್ತವರಿಗೆ ಹೆಗ್ಗಣ ಮುದ್ದು, ಕೂಡಿದವರಿಗೆ ಕೋಡಗ ಮುದ್ದು” ಎಂಬ ನಾಣ್ಣುಡಿಯಂತೆ ತಮ್ಮ ತಮ್ಮ ಮತಧರ್ಮಗಳ ಮೇಲಿರುವ ಪ್ರೀತಿ, ಅಭಿಮಾನ ವೈಯಕ್ತಿಕವಾದುದು. ಅದು ಮತ್ತೊಬ್ಬರ ಮೇಲಿನ ದ್ವೇಷಕ್ಕೆ, ದುರಭಿಮಾನಕ್ಕೆ ಕಾರಣವಾಗಬಾರದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಮತಧರ್ಮವೇ ಬೇರೆ, ನೈಜಧರ್ಮವೇ ಬೇರೆ. ಗುಡಿ-ಚರ್ಚು-ಮಸೀದಿಗಳಿಗೆ ಹೋಗುವುದು ಮತಧರ್ಮ. ಅಲ್ಲಿಗೆ ಹೋಗಿ ಮಾಡುವ ಪ್ರಾರ್ಥನೆಯ ಹಿಂದಿರುವ ಆಶಯವೇ ನೈಜಧರ್ಮ.
ಪ್ರತಿಯೊಂದು ಮಗುವೂ ವಿಶಿಷ್ಟ ಗುಣಸ್ವಭಾವಗಳಿಂದ ಹುಟ್ಟುತ್ತದೆ. ಕ್ರಮೇಣ ಅದರ ಮೇಲೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕೌಟುಂಬಿಕ ಪರಿಸರಗಳು ಪ್ರಭಾವವನ್ನು ಬೀರುತ್ತವೆ. ಮಗುವಿನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅದರ ಸಂಪರ್ಕಕ್ಕೆ ಬರುವ ಹಿರಿ-ಕಿರಿಯ ವ್ಯಕ್ತಿಗಳ ಪಾತ್ರವೂ ಇದೆ. “Every child is born, with inherited characteristics, into a specific socio-economic and emotional environment, and trained in certain ways by figures of authority” ಎನ್ನುತ್ತಾರೆ ಈ ದೇಶ ಕಂಡ ಅಪರೂಪದ ರಾಷ್ಟ್ರಪತಿಗಳಾದ ಡಾ. ಅಬ್ದುಲ್ ಕಲಾಂ. ದೇಶದ ಅತ್ಯುನ್ನತ ಸ್ಥಾನಕ್ಕೇರಿದರೂ ಸರಳತೆ ಮತ್ತು ಸಜ್ಜನಿಕೆಯನ್ನು ಅವರಂತೆ ಉಳಿಸಿಕೊಂಡವರು ಬಹಳ ವಿರಳ.
ಮಕ್ಕಳು ಬೆಳೆದಂತೆ ಸಮಾಜ ಅವರ ಮನಸ್ಸನ್ನು ಕಲುಷಿತಗೊಳಿಸುತ್ತದೆ. ಬಾಲ್ಯದಲ್ಲಿದ್ದ ಮನಸ್ಸಿನ ಮುಗ್ಧತೆ ಮಾಯವಾಗಿ ವ್ಯವಹಾರ ಚತುರತೆ, ನಾಟಕೀಯತೆ, ಕೃತ್ರಿಮತೆ ಮನೆಮಾಡಿಕೊಳ್ಳುತ್ತವೆ. ಸ್ವಾರ್ಥ, ಅಹಂಕಾರ ಮತ್ತು ಲಾಲಸೆ ಬಲಗೊಳ್ಳುತ್ತವೆ. ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಯಾರಿಗೆ ಉಪದೇಶ ಮಾಡಿದರೆ ಸಾರ್ಥಕವಾಗುತ್ತದೆ ಎಂಬ ವಿಚಾರವಾಗಿ ಆಗಾಗ್ಗೆ ಹೇಳುತ್ತಿದ್ದ ಮಾರ್ಮಿಕವಾದ ಮಾತುಗಳು ನೆನಪಾಗುತ್ತಿವೆ: “ವಯಸ್ಸಾದವರಿಗೆ ಉಪದೇಶ ಮಾಡಿ ಪ್ರಯೋಜನವಿಲ್ಲ. ಅವರು ತುಂಬಿದ ಚೀಲ ಇದ್ದಂತೆ. ಬೇಡವಾದದ್ದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡಿರುತ್ತಾರೆ. ಹೊಸದಾಗಿ ತುಂಬಲು ಅಲ್ಲಿ ಸ್ವಲ್ಪವೂ ಜಾಗವಿರುವುದಿಲ್ಲ. ತಲೆ ಹೊಲಿದು ಸಾಗಿಸುವುದಷ್ಟೇ ಬಾಕಿ ಇರುವುದು. ಇನ್ನು ಯುವಕ-ಯುವತಿಯರೋ ತೂತಿನ ಚೀಲವಿದ್ದಂತೆ. ತುಂಬಲು ಯತ್ನಿಸುವುದು ವ್ಯರ್ಥಪ್ರಯಾಸ. ಹರಿದ ಚೀಲದಲ್ಲಿ ಎಷ್ಟೇ ತುಂಬಲು ಪ್ರಯತ್ನಿಸಿದರೂ ನಿಲ್ಲುವುದಿಲ್ಲ; ಸೋರಿಹೋಗುತ್ತದೆ. ನಾವು ಮಾಡುವ ಉಪದೇಶವು ಸಾರ್ಥಕಗೊಳ್ಳಬೇಕಾದರೆ ಚಿಕ್ಕ ಮಕ್ಕಳನ್ನು ಆಯ್ಕೆಮಾಡಿಕೊಳ್ಳಬೇಕು. ಎಳೆಯ ಮಕ್ಕಳು ಖಾಲಿ ಚೀಲ ಇದ್ದಂತೆ. ಏನನ್ನಾದರೂ ತುಂಬಬಹುದು. ತುಂಬಿದ್ದು ಗಟ್ಟಿಯಾಗಿ ನಿಲ್ಲುತ್ತದೆ. ಆದರೆ ಅಂತಹ ಖಾಲಿ ಚೀಲಗಳನ್ನು ತುಂಬುವವರು ಮಾತ್ರ ಯೋಗ್ಯರಾಗಿರಬೇಕು”.
ಮಾನವ ಪ್ರಪಂಚದ ಅದ್ಭುತ ಸೃಷ್ಟಿ ಮಕ್ಕಳು. ಮನೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಅವರು. ತಂದೆ-ತಾಯಿಗಳಿಗೆ ತಮ್ಮ ಸ್ವಂತ ಮಕ್ಕಳ ಮೇಲಿನ ಪ್ರೀತಿಗಿಂತ ಮೊಮ್ಮಕ್ಕಳ ಮೇಲಿನ ಪ್ರೀತಿಯೇ ಜಾಸ್ತಿ. ಅದಕ್ಕೆ ಕಾರಣ ಅವುಗಳ ಮುಗ್ಧತೆ. ಮೊಮ್ಮಕ್ಕಳು ಸಹ ತಂದೆ-ತಾಯಿಗಳಿಗಿಂತ ಹೆಚ್ಚು ಇಷ್ಟಪಡುವುದು ಅಜ್ಜ-ಅಜ್ಜಿಗಳನ್ನು. ಮಕ್ಕಳಿಗೆ ದೊಡ್ಡವರು ಕಲಿಸಬೇಕಾದ್ದು ಬಹಳಷ್ಟು ಇದ್ದರೂ ಅವರಿಂದ ದೊಡ್ಡವರು ಕಲಿಯಬೇಕಾದ್ದೂ ಇದೆ. ಒಂದು ನರ್ಸರಿಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭವಿತ್ತು. ಪುಟಾಣಿಗಳು ಒಳ್ಳೆಯ ಉಡುಗೆಗಳನ್ನು ತೊಟ್ಟು ತುಂಬಾ ಉತ್ಸಾಹದಿಂದ ಭಾಗವಹಿಸಿದ್ದರು. ಅವರ ಪೋಷಕರೂ ಜೊತೆಯಲ್ಲಿ ಬಂದಿದ್ದರು. ಅವರನ್ನು ಹೊರಗೆ ನಿಲ್ಲಿಸಿ ಮಕ್ಕಳನ್ನು ಮಾತ್ರ ಒಂದು ವಿಶಾಲವಾದ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿನ ಟೇಬಲ್ ಗಳ ಮೇಲೆ ಅನೇಕ ಬುಟ್ಟಿಗಳನ್ನು ಇಡಲಾಗಿತ್ತು. ಒಂದೊಂದರಲ್ಲಿಯೂ ಸಾವಿರ, ಐದುನೂರು, ನೂರು, ಐವತ್ತು ರೂಪಾಯಿ ಹೀಗೆ ವಿಭಿನ್ನ ಬೆಲೆಯ ನೋಟಿನ ಕಂತೆಗಳನ್ನು ಬುಟ್ಟಿಗಳ ತುಂಬ ಇಟ್ಟಿದ್ದರು. ಒಳಗೆ ಬಂದ ಮಕ್ಕಳಿಗೆ ಅವುಗಳಲ್ಲಿ ತಮಗೆ ಬೇಕಾದ್ದನ್ನು ತೆಗೆದುಕೊಳ್ಳಲು ಮಿಸ್ ಸೂಚಿಸಿದರು. ಹೊರಗೆ ಇದ್ದ ತಂದೆ-ತಾಯಿಗಳು ಸಾವಿರ ರೂಪಾಯಿ ಬೆಲೆಯ ನೋಟಿನ ಕಟ್ಟುಗಳನ್ನು ಎತ್ತಿಕೊಳ್ಳಲು ತಮ್ಮ ಮಕ್ಕಳಿಗೆ ಬೆರಳು ಮಾಡಿ ತೋರಿಸುತ್ತಿದ್ದರು. ಮಕ್ಕಳು ಸುತ್ತ ಕಣ್ಣುಹಾಯಿಸಿದರು. ಟೇಬಲ್ ಕೊನೆಯಲ್ಲಿದ್ದ ಒಂದು ದೊಡ್ಡ ಬುಟ್ಟಿ ಆ ಎಲ್ಲ ಪುಟಾಣಿಗಳನ್ನು ಆಕರ್ಷಿಸಿತ್ತು. ಅದರಲ್ಲಿದ್ದುದು ರೂಪಾಯಿ ನೋಟುಗಳಲ್ಲ; ವಿಭಿನ್ನ ವಿನ್ಯಾಸದ ಚಾಕ್ ಲೆಟ್ ಗಳು! ಮಕ್ಕಳೆಲ್ಲರೂ ಆ ಚಾಕ್ ಲೆಟ್ ಗಳನ್ನು ಆರಿಸಿಕೊಂಡು ಬಾಯಿಚಪ್ಪರಿಸಿದರು! ಹೊರಗೆ ಇದ್ದ ಪೋಷಕರು ಅವಾಕ್ಕಾದರು!
ಮಕ್ಕಳು ದೇವರು ಇದ್ದಂತೆ ಎಂಬ ನಾಣ್ಣುಡಿಯನ್ನು ನೀವು ಕೇಳಿದ್ದೀರಿ. ಮಕ್ಕಳ ಮುಗ್ಧತೆಗೆ ಮಾರು ಹೋಗದವರೇ ಇಲ್ಲ. ಮರದ ಕೆಳಗೆ ಕುಳಿತು ಜಪ ಮಾಡುತ್ತಿದ್ದ ಒಬ್ಬ ಸನ್ಯಾಸಿಯೂ ತನ್ನೆದುರಿಗೆ ಆಡುತ್ತಿದ್ದ ಮಕ್ಕಳನ್ನು ನೋಡಿ ಹೇಗೆ ಮೈಮರೆತನೆಂಬ ಹೃದಯಂಗಮವಾದ ವರ್ಣನೆ ಜನಪದ ಗೀತೆಯಲ್ಲಿ ಹೀಗಿದೆ:
ನನ್ನಯ್ಯನಂತೋರು ಹನ್ನೆರೆಡು ಮಕ್ಕಳು
ಹೊನ್ನೆಯ ಮರದ ನೆರಳಲ್ಲಿ ಆಡುವಾಗ
ಸನ್ಯಾಸಿ ಜಪವ ಮರೆದಾನ!
ಮಕ್ಕಳ ಮುಗ್ಧತೆಯನ್ನು ಬಣ್ಣಿಸಲು ಕೋಳೂರು ಕೊಡಗೂಸು ಕಥೆಗಿಂತ ಹೆಚ್ಚಿನದೇನೂ ಬೇಕಿಲ್ಲ. ಆಂಗ್ಲಭಾಷೆಯ ಮೋಹಕ್ಕೊಳಗಾದ ಇಂದಿನ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಮಿಕಿಮೌಸ್ ಕಥೆಯನ್ನು ಹೇಳಿಕೊಡಲು ಬಯಸುತ್ತಾರೆಯೇ ಹೊರತು ಇಂತಹ ದೇಶೀಸಂಸ್ಕೃತಿಯ ಕಥೆಗಳನ್ನು ಹೇಳಿಕೊಡಲು ಮುಂದಾಗುತ್ತಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಕೊಡಿಸಬೇಕೆಂಬ ಅರಿವು ತಂದೆತಾಯಿಗಳಲ್ಲಿ ಮೊದಲಿಗಿಂತ ಹೆಚ್ಚು ಮೂಡಿದ್ದರೂ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಬೇಕೆಂಬುದೇ ಅವರ ಒತ್ತಾಸೆಯಾಗಿದ್ದು ಮಕ್ಕಳ ಮೇಲೆ ತುಂಬಾ ಒತ್ತಡ ಉಂಟಾಗಿರುವುದು ವಿಷಾದನೀಯ ಸಂಗತಿ.
ಮಕ್ಕಳಿಗೆ ದೇವರ ಹೆಸರನ್ನು ಇಡುವ ಪದ್ಧತಿ ಅನೇಕ ಶತಮಾನಗಳಿಂದ ನಡೆದುಕೊಂಡು ಬಂದಿದ್ದು ಇಂದಿನ ನವನಾಗರೀಕ ಯುಗದಲ್ಲಿ ಅದು ಕ್ಷೀಣಿಸುತ್ತಿದೆ. ಈಗಿನ ನರ್ಸರಿ ಶಾಲೆಗಳಲ್ಲಿ ಓದುವ ಮಕ್ಕಳು ಮೂರಕ್ಷರದ ಮುಕ್ಕಣ್ಣರು! ಹಾಜರಾತಿ ಪುಸ್ತಕದಲ್ಲಿ ಮೂರು ಅಕ್ಷರಗಳಿಗಿಂತ ಹೆಚ್ಚಿನ ಅಕ್ಷರವುಳ್ಳ ಉದ್ದನೆಯ ಹೆಸರುಗಳೇ ಈಗ ಕಾಣಿಸುವುದಿಲ್ಲ. ಹಿಂದಿನ ಕಾಲದ ಶಿಕ್ಷಕ-ಶಿಕ್ಷಕಿಯರು ತರಗತಿಯಲ್ಲಿ ಹಾಜರಾತಿಯನ್ನು ತೆಗೆದುಕೊಳ್ಳುವಾಗ ಸಮಯದ ಉಳಿತಾಯಕ್ಕಾಗಿ ಹೆಸರನ್ನು ಕರೆಯುವ ಬದಲು ರೋಲ್ ಕಾಲ್ ನಂಬರ್ ಕರೆಯುತ್ತಿದ್ದರು. ಈಗ ಕಾಲ ಬದಲಾವಣೆಯಾಗಿದೆ. ನಂಬರ್ ಬದಲು ಮಗುವಿನ ಪೂರ್ಣ ಹೆಸರನ್ನು ಕರೆಯುವುದೇ ವಾಸಿ. ಮಗುವನ್ನು ನಿರ್ಜೀವಿ ಸಂಖ್ಯೆಯಿಂದ ಗುರುತಿಸುವ ಬದಲು ಭಾವಪೂರ್ಣ ಹೆಸರಿನಿಂದ ಕರೆದು ಮಗುವಿನ ಮನಸ್ಸಿನಲ್ಲಿ ಮಧುರಭಾವನೆಗಳನ್ನು ಬಿತ್ತುವುದು ಒಳ್ಳೆಯದು. ಇದು ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಆದರೆ ಸಾಲದು. ಮನೆಯಲ್ಲೂ ಅಂತಹ ವಾತಾವರಣವಿರಬೇಕು. ಹಲವು ವರ್ಷಗಳ ಹಿಂದೆ ಅಮೇರಿಕಾ ಪ್ರವಾಸದಲ್ಲಿದ್ದಾಗ ಅಲ್ಲಿಯ ಮಕ್ಕಳು ಹೇಳಿದ ಒಂದು ರೋಚಕ ಕಥಾನಕ ನೆನಪಾಗುತ್ತಿದೆ:
ಶಾಲೆಗೆ ಹೋಗಿದ್ದ ಒಬ್ಬ ಬಾಲಕ ಸಂಜೆ ಮನೆಗೆ ಹಿಂದಿರುಗಿದ. ಪ್ರತಿದಿನವೂ ಆಫೀಸಿನಿಂದ ತಂದೆ ರಾತ್ರಿ ತಡವಾಗಿ ಬರುತ್ತಿದ್ದುದರಿಂದ ಬಾಲಕನಿಗೆ ತಂದೆಯನ್ನು ನೋಡಲು ಆಗುತ್ತಿರಲಿಲ್ಲ. ತಂದೆಯನ್ನು ನೋಡಬೇಕೆಂದರೆ ರಜಾದಿನವೇ ಬರಬೇಕು. ಆ ದಿನ ಆಕಸ್ಮಿಕವಾಗಿ ಬೇಗನೆ ಮನೆಗೆ ಬಂದ ತಂದೆಯನ್ನು ನೋಡಿ ಖುಷಿಗೊಂಡ ಬಾಲಕ ತಂದೆಯ ಹತ್ತಿರ ಹೋಗಿ “Dad, how much do you earn in an hour?” ಎಂದು ಕೇಳಿದ. ತಂದೆಗೆ ಸಿಟ್ಟು ನೆತ್ತಿಗೇರಿತು. ನನ್ನ ದುಡಿಮೆಯ ವಿಚಾರ ನಿನಗೇಕೆ, ನೀನು ಕೇಳಿದಾಗಲೆಲ್ಲಾ pocket money” ಕೊಡುತ್ತಿರುವೆನಲ್ಲಾ ಎಂದು ಗದರಿಸಿದ. ಬಾಲಕ ತಿಳಿದುಕೊಳ್ಳಲು ಹಠ ಮಾಡಿದ. ತಂದೆ ಗಂಟೆಗೆ ಒಂದು ನೂರು ಡಾಲರ್ ಗಳಿಸುತ್ತಿರುವುದಾಗಿ ತಂದೆ ಹೆಮ್ಮೆಯಿಂದ ಹೇಳಿಕೊಂಡ. ಬಾಲಕ ಸ್ವಲ್ಪ ಹೊತ್ತು ಏನನ್ನೋ ನೆನೆಸಿಕೊಂಡು “Dad, could you please give me ten dollars?” ಎಂದು ದೈನ್ಯದಿಂದ ಕೇಳಿದ. ತಂದೆ ಕೋಪಗೊಂಡು ಪೀಡೆ ತೊಲಗು ಇಲ್ಲಿಂದ ಎಂದು ಮೂದಲಿಸಿ ಬಾಲಕನ ಕೈಗೆ ಹತ್ತು ಡಾಲರ್ ಗಳನ್ನು ಕೊಟ್ಟು ಕಳುಹಿಸಿದ. ಬಾಲಕ ತನ್ನ ಕೊಠಡಿಗೆ ಓಡಿ ಹೋಗಿ ತಾನು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಎಣಿಸಿದ. ಅವನ ಎಣಿಕೆಯಂತೆ ಸರಿಯಾಗಿ 90 ಡಾಲರ್ ಇದ್ದವು. ಅದಕ್ಕೆ ಆಗತಾನೇ ಪಡೆದ 10 ಡಾಲರ್ ಗಳನ್ನು ಸೇರಿಸಿ ಒಟ್ಟು ನೂರು ಡಾಲರ್ ಗಳನ್ನು ಕೈಯಲ್ಲಿ ಹಿಡಿದು ತಂದು ತಂದೆಯ ಮುಂದೆ ನಿಂತು ಹೇಳಿದ: “Dad, take these hundred dollars, Could you please play with me for an hour!”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 5.5.2010.