ಪ್ರಮಾಣ ವಚನವೆಂಬ ಪ್ರಹಸನ
ಭಾರತದ ಸಂವಿಧಾನದ 164.3 ನೇ ಕಲಂ ಪ್ರಕಾರ ರಾಜ್ಯಪಾಲರು ಮಂತ್ರಿಗಳಾಗುವವರಿಗೆ ಅಧಿಕಾರ ಮತ್ತು ಗೋಪ್ಯತೆ ಕುರಿತು ಪ್ರಮಾಣವಚನ ಬೋಧಿಸಬೇಕೆಂಬ ನಿಯಮವಿದೆ. ಅಧಿಕಾರ ಕುರಿತ ಪ್ರಮಾಣ ವಚನದ ಒಕ್ಕಣಿಕೆ ಹೀಗಿದೆ:
“....ಎಂಬ ಹೆಸರಿನವನಾದ ನಾನು ವಿಧಿದ್ವಾರ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುತ್ತೇನೆಂದು, ಭಾರತದ ಸಾರ್ವಭೌಮತೆಯನ್ನು ಮತ್ತು ಸಮಗ್ರತೆಯನ್ನು ಸಮರ್ಥಿಸುತ್ತೇನೆಂದು, ಕರ್ನಾಟಕದ ....ಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧೆಯಿಂದಲೂ ಶುದ್ಧಾಂತಃಕರಣದಿಂದಲೂ ನಿರ್ವಹಿಸುತ್ತೇನೆಂದು, ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ ಅಥವಾ ದ್ವೇಷವಿಲ್ಲದೆ ಎಲ್ಲಾ ಬಗೆಯ ಜನರಿಗೂ ಸಂವಿಧಾನ ಮತ್ತು ವಿಧಿಗೆ ಅನುಸಾರವಾಗಿ ನ್ಯಾಯವನ್ನು ಮಾಡುತ್ತೇನೆಂದು ....ಭಗವಂತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ".
" ಗೋಪ್ಯತೆ ಕುರಿತ ಪ್ರಮಾಣ ವಚನದ ಒಕ್ಕಣಿಕೆ ಹೀಗಿದೆ":
“...ಎಂಬ ಹೆಸರಿನವನಾದ ನಾನು ಕರ್ನಾಟಕ ರಾಜ್ಯದ ....ಮಂತ್ರಿಯಾಗಿ ನನ್ನ ಪರ್ಯಾಲೋಚನೆಗೆ ಬರತಕ್ಕ ಯಾವುದೇ ವಿಷಯವನ್ನು ನನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಅಗತ್ಯವಾಗಿರಬಹುದಾದ ಸಂದರ್ಭದಲ್ಲಲ್ಲದೆ ಅನ್ಯಥಾ ಯಾವ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಆಗಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಿಳಿಸುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂದು .....ಭಗವಂತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ.”
"ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭದ ವರ್ಷಗಳಲ್ಲಿ ರಾಜಭವನದ ಆವರಣದಲ್ಲಿ ನಡೆಯುತ್ತಾ ಇತ್ತು. ಇತ್ತೀಚಿನ ವರ್ಷಗಳಲ್ಲಿ ವಿಧಾನಸೌಧದ ಮುಂದೆ ಕಿಕ್ಕಿರಿದ ಜನಸ್ತೋಮದ ಎದುರು ನಡೆಯುತ್ತಿರುವುದು ಹೊಸ ಸಂಪ್ರದಾಯವಾಗಿದೆ. ಎದುರುಗಡೆ ಕರ್ನಾಟಕದ ಉಚ್ಚ ನ್ಯಾಯಾಲಯವಿದ್ದು ಒಂದು ರೀತಿಯಲ್ಲಿ ಅರ್ಥಪೂರ್ಣವೂ ಆಗಿದೆ. ಪ್ರಮಾಣ ವಚನವನ್ನು ಬೋಧಿಸಿದ ಘನತೆವೆತ್ತ ರಾಜ್ಯಪಾಲರಾದ ರಾಮೇಶ್ವರ ಠಾಕೂರ್ರವರು ಕಷ್ಟಪಟ್ಟು ಕನ್ನಡದಲ್ಲಿ" ...ಎಂಬ ಹೆಸರಿನವನಾದ ನಾನು... ಎಂಬ ಪಲ್ಲವಿಯನ್ನು ಹಿಂದೀ ದಾಟಿಯಲ್ಲಿ ಹಾಡಿದರೆ, ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳು ಅವರ ವೈಯಕ್ತಿಕ ಹೆಸರು ಮತ್ತು ಅವರು ನಂಬಿದ ದೇವರ ಹೆಸರನ್ನು ಸೇರಿಸಿ ಅನುಪಲ್ಲವಿಯನ್ನು ಹಾಡಿದರು. ಒಮ್ಮೆಗೆ ಮೂರು ಜನ ಮಂತ್ರಿಗಳು ಮೈಕ್ ಮುಂದೆ ನಿಂತು ಮಾಡಿದ ಪ್ರಮಾಣ ವಚನ ಒಂದು ರೀತಿಯಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರು ಮಾಡುವ ಮಂತ್ರಪಠಣದಂತಿತ್ತು! ಸಭೆ ಒಂದು ಗಂಟೆಯೊಳಗೆ ಮುಗಿದು ಹೋಯಿತು. ನಂತರ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ಹೋದಾಗ ಸ್ವಾಮಿಗಳ ದಂಡೇ ಸೇರಿತ್ತಂತೆ. ಆ ಸ್ವಾಮಿಗಳ ಕಾಲಿಗೆ ಅಡ್ಡ ಬಿದ್ದೂ ಬಿದ್ದೂ ಮುಖ್ಯಮಂತ್ರಿಗಳು ಸುಸ್ತಾದರೆಂದು ಪತ್ರಿಕೆಗಳು ಬಣ್ಣಿಸಿವೆ. ಆದರೆ ಒಂದೇ ಕಂತಿನಲ್ಲಿ 29 ಜನ ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಅಧಿಕಾರ ಮತ್ತು ಗೋಪ್ಯತೆ ಕುರಿತು ನಿಯಮಾನುಸಾರ ಒಬ್ಬೊಬ್ಬರಿಗೆ ಎರಡೆರಡು ಬಾರಿ ಪ್ರಮಾಣ ವಚನ ಬೋಧಿಸಿದ ಹಿರಿಯ ವಯಸ್ಸಿನ ರಾಜ್ಯಪಾಲರು ಸುಸ್ತಾದ ಬಗ್ಗೆ ಚಕಾರ ಎತ್ತಿಲ್ಲ. ಆ ಬೇಸರದಿಂದಲೋ ಏನೋ ಬಹುಮತ ಸಾಬೀತುಪಡಿಸಿದ ಮೇಲೆಯೇ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದಾಗಿ ರಾಜ್ಯಪಾಲರು ಪಟ್ಟು ಹಿಡಿದಿದ್ದಾರೆ!
ಯಾವ ಖಾತೆ ಸಿಗುತ್ತದೆಯೆಂಬ ಚಿಂತೆಯಲ್ಲಿರುವ ಮಂತ್ರಿಗಳಿಗೆ ಅಧಿಕಾರ ಮತ್ತು ಗೋಪ್ಯತೆ ಕುರಿತು ಪ್ರತ್ಯೇಕ ಪ್ರಮಾಣವಚನ ಏಕೆ ಎಂಬ ಪ್ರಶ್ನೆ ಯಾರಿಗೂ ಕಾಡಿಸಿದಂತೆ ಕಾಣುವುದಿಲ್ಲ, ವಧೂವರರು ಮದುವೆ ಮಂಟಪದಲ್ಲಿ ಪುರೋಹಿತರು ಹೇಳಿಕೊಡುವ ಮಂತ್ರದ ಅರ್ಥ ಏನು ಎಂದು ತಿಳಿದುಕೊಳ್ಳುವ ಗೋಜಿಗೆ ಹೇಗೆ ಹೋಗುವುದಿಲ್ಲವೋ ಹಾಗೆ! ಕಾನೂನು ತಜ್ಞರನ್ನು ಕೇಳಿದರೆ ಅವರು ಇಂಗ್ಲೆಂಡ್ ಅಮೇರಿಕಾ ದೇಶಗಳ ಸಂವಿಧಾನದ ಕಡೆಗೆ ತೋರಿಸಿ ಮದುವೆ ಮನೆ ಬೀಗರಂತೆ ಮದುಮಕ್ಕಳೊಂದಿಗಿರುವ ಸಂಬಂಧವನ್ನು ವಿವರಿಸಿದರೇ ಹೊರತು ಸಮರ್ಪಕವಾದ ಉತ್ತರ ಅವರಿಂದಲೂ ನಮಗೆ ದೊರೆಯಲಿಲ್ಲ. ಕುತೂಹಲಕರ ಸಂಗತಿಯೆಂದರೆ ಸಂವಿಧಾನದಲ್ಲಿ ನಿಯಮಾನುಸಾರ ಮಂತ್ರಿಗಳಿಗೆ ಅಧಿಕಾರ ಮತ್ತು ಗೋಪ್ಯತೆ ಕುರಿತು ಎರಡು ಪ್ರತಿಜ್ಞಾವಿಧಿಗಳು ಇದ್ದರೆ, ಉಚ್ಚ ನ್ಯಾಯಾಲಯ ಮತ್ತು ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗೆ ಅಧಿಕಾರ ಕುರಿತು ಒಂದೇ ಒಂದು ಪ್ರತಿಜ್ಞಾ ವಿಧಿ ಇರುವುದು. ಇಲ್ಲಿ ನಮ್ಮನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆ ಗೋಪ್ಯತೆಯ ಪ್ರತಿಜ್ಞಾವಿಧಿ ನ್ಯಾಯಮೂರ್ತಿಗಳಿಗೆ ಏಕೆ ಇಲ್ಲ, ಮಂತ್ರಿಗಳಿಗೆ ಮಾತ್ರ ಏಕೆ ಇದೆ ಎಂಬುದಲ್ಲ, ಮಂತ್ರಿಗಳಾದವರಿಗೆ ಗೋಪ್ಯತೆಯ ಪ್ರತ್ಯೇಕ ಪ್ರತಿಜ್ಞಾವಿಧಿ ಏಕೆ? ಎಂಬುದಾಗಿದೆ. ಅದನ್ನು ಅಧಿಕಾರದ ಪ್ರತಿಜ್ಞಾವಿಧಿಯೊಳಗೇ ಸೇರಿಸಲು ಬರುತ್ತಿರಲಿಲ್ಲವೇ? ಗೋಪ್ಯತೆಯನ್ನು ಅಧಿಕಾರದಿಂದ ಬೇರ್ಪಡಿಸಲು ಸಾಧ್ಯವೇ? ಈ ವಿಚಾರವಾಗಿ ನಮಗೆ ನೆನಪಾಗುವುದು ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಬರುವ ಈ ಪದ್ಯ:
ವಾಗರ್ಥಾವಿವ ಸಂಪ್ಯಕ್ತೌ ವಾಗರ್ಥಃ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ |
ಈ ಜಗತ್ತಿನ ತಾಯಿ-ತಂದೆಗಳಾದ ಪಾರ್ವತೀ ಪರಮೇಶ್ವರರ ಪರಸ್ಪರ ಸಂಬಂಧ ಹೇಗಿದೆ ಎಂದರೆ ಶಬ್ದ ಮತ್ತು ಅದರ ಅರ್ಥದ ಸಂಬಂಧ ಇದ್ದ ಹಾಗೆ ಇದೆ ಎಂದು ಕಾಳಿದಾಸ ಹೇಳುತ್ತಾನೆ. ಶಬ್ದ (word) ಮತ್ತು ಅದರ ಅರ್ಥವನ್ನು (meaning) ಪ್ರತ್ಯೇಕಿಸಲು ಬರುವುದಿಲ್ಲ, ಅವೆರಡರ ಸಂಬಂಧ ಅವಿನಾಭಾವ. ಈ ಸೂಕ್ಷ್ಮತೆಯನ್ನು ಪತಂಜಲಿಯು ತನ್ನ ವ್ಯಾಕರಣ ಮಹಾಭಾಷ್ಯದಲ್ಲಿ ಬಹಳ ಚೆನ್ನಾಗಿ ವಿಶ್ಲೇಶಿಸಿದ್ದಾನೆ. ಹಸು ಎಂಬ ಶಬ್ದ ಏನನ್ನು ಸೂಚಿಸುತ್ತದೆ? ಹಸುವಿನ ಕೋಡು, ಬಾಲ, ಗೊರಸು ಅಥವಾ ಡುಬ್ಬವನ್ನಲ್ಲ, ಅದರ ಕಪ್ಪು, ಬಿಳುಪು, ಕಂದು ಬಣ್ಣವನ್ನಲ್ಲ, ಯಾವುದರ ಉಚ್ಚಾರಣೆಯಿಂದ ಇವುಗಳನ್ನೊಳಗೊಂಡ ಹಸುವಿನ ಪರಿಜ್ಞಾನ ಉಂಟಾಗುತ್ತದೆಯೋ ಅದು ಹಸು ಶಬ್ದ ಎಂದು ವಿವರಿಸುತ್ತಾನೆ.(ಯೇನ ಉಚ್ಚಾರಿತೇನ ಸಾಸ್ನಾ-ಲಾಂಗೂಲ-ಕಕುದ-ಖುರ-ವಿಷಾಣಿನಾಂ ಸಂಪ್ರತ್ಯಯಃ ಭವತಿ ಸ ಶಬ್ದಃ). ಅಂತಹ ಅರಿವನ್ನು ಶಬ್ದದಿಂದ ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೇನೆ ಗೋಪ್ಯತೆಯನ್ನು (secrecy) ಅಧಿಕಾರದಿಂದ (office) ಬೇರ್ಪಡಿಸಲು ಸರ್ವಥಾ ಸಾಧ್ಯವಿಲ್ಲ. ಅಧಿಕಾರ ವಹಿಸಿಕೊಂಡ ವ್ಯಕ್ತಿ ಅದರ ಜವಾಬ್ದಾರಿಯನ್ನರಿತು ಕಾರ್ಯ ನಿರ್ವಹಿಸಬೇಕಾಗುತ್ತದೆ. ಮನಸ್ವೀ ವರ್ತಿಸಲು ಬರುವುದಿಲ್ಲ. ಇಲ್ಲವಾದರೆ ಅದು ಬೇಜವಾಬ್ದಾರಿಯಾಗುತ್ತದೆ. ಆದಕಾರಣ ಅಧಿಕಾರ ಮತ್ತು ಗೋಪ್ಯತೆಯ ಎರಡು ಪ್ರತಿಜ್ಞಾ ವಿಧಿಗಳಿರುವುದು ಕಾನೂನುಬದ್ಧವಿರಬಹುದು, ತರ್ಕಬದ್ಧವಂತೂ ಅಲ್ಲ.
ಪ್ರತಿಜ್ಞಾ ವಿಧಿ ಒಂದಿರಲಿ, ಎರಡಿರಲಿ. ನಮ್ಮ ನಾಡಿನಲ್ಲಿ ಎಷ್ಟು ಜನ ಮಂತ್ರಿಮಹೋದಯರು ಈ ಪ್ರತಿಜ್ಞಾ ವಿಧಿಯಂತೆ ನಡೆದುಕೊಂಡು ಬಂದಿದ್ದಾರೆ? ಎಂಬುದು ಇಲ್ಲಿನ ಬಹು ಮುಖ್ಯ ಪ್ರಶ್ನೆ. ಮನುಷ್ಯ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂಬ ಆಶಯದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸುವವರಿಗೆ ಸಂವಿಧಾನದ ನಿಯಾಮಾನುಸಾರ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನವನ್ನು ಬೋಧಿಸುವುದು ಒಂದು ರೀತಿಯ ವಾಡಿಕೆಯಾಗಿದೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆ ರೀತಿ ಪ್ರಮಾಣ ವಚನವನ್ನು ಸ್ವೀಕರಿಸಿದವರು ಅದರಂತೆ ನಡೆಯಬೇಕು ಹಾಗೆ ನೆಡೆಯದಿದ್ದರೆ ಪ್ರಮಾಣವಚನ ಸ್ವೀಕರಿಸಿಯೂ ಏನು ಪ್ರಯೋಜನವಿಲ್ಲ. ಅಂತಹ ಯಾವ ಪ್ರಮಾಣ ವಚನ ಸ್ವೀಕರಿಸದಿದ್ದರೂ ಸತ್ಯ ಮತ್ತು ಧರ್ಮದ ಹಾದಿಯಲ್ಲಿ ಕಿಂಚಿತ್ತೂ ಊನ ಬರದಂತೆ ನಡೆಯುವವರಿದ್ದಾರೆ. ಅವರು ಹಾಗೆ ನಡೆಯುವುದು ಪ್ರಮಾಣ ವಚನದ ಬದ್ಧತೆಯಿಂದ ಅಲ್ಲ, ಅವರು ನಂಬಿಕೊಂಡು ಬಂದ ಜೀವನಮೌಲ್ಯದಿಂದ. ಅವರು ಜೀವನದಲ್ಲಿ ಎಂದೂ ಋಜುಮಾರ್ಗದಿಂದ ತಪ್ಪಿ ನಡೆಯಲು ಸಾಧ್ಯವಿಲ್ಲ. ಅಡ್ಡ ಹಾದಿಯಲ್ಲಿ ನಡೆಯುವವರಿಗೆ ಆತ್ಮಸಾಕ್ಷಿ ಇಲ್ಲವೆಂದಲ್ಲ. ಆದರೆ ಅವರಿಗೆ ಅಡ್ಡಹಾದಿಯನ್ನು ತುಳಿಯದಿರಲು ಆತ್ಮಬಲ ಇರುವುದಿಲ್ಲ. ಅಂಥವರು ಪ್ರಮಾಣ ವಚನ ಸ್ವೀಕರಿಸಿದರೂ ಅಷ್ಟೆ, ಬಿಟ್ಟರೂ ಅಷ್ಟೆ, ಹರಿಶ್ಚಂದ್ರನಿಗೆ ಸತ್ಯ ಮತ್ತು ದೇವರು ಬೇರೆ ಬೇರೆ ಆಗಿರಲಿಲ್ಲ. ಸತ್ಯವೆಂಬುದೆ ಹರನು, ಹರನೆಂಬುದೇ ಸತ್ಯ, ಎರಡಿಲ್ಲ ಎಂಬುದು ಅವನ ಬಲವಾದ ನಂಬಿಕೆಯಾಗಿತ್ತು. ಸತ್ಯ ಪರಿಪಾಲನೆಯ ಮುಂದೆ ಮಾನಾಪಮಾನಗಳು, ಲೋಕದ ದೃಷ್ಟಿಯ ಎಲ್ಲಾ ಸರಿತಪ್ಪುಗಳು ಅವನಿಗೆ ಗೌಣವಾಗಿದ್ದವು. ಶಿರ ಹರಿದು ಅಟ್ಟೆ ನೆಲ್ಲೆ ಬಿದ್ದರೂ ಅಂತಹವರು ನಂಬಿದ ತತ್ವಗಳನ್ನು ಬಿಡಲಾರರು.
ಗೋವಿನ ಹಾಡಿನ ಪುಣ್ಯಕೋಟಿ ಎಂಬ ಹಸುವಿಗೆ ಸತ್ಯವನ್ನು ಪರಿಪಾಲಿಸುವುದು ತನ್ನ ಧರ್ಮವಾಗಿತ್ತು. ಅಮ್ಮ ನೀನು ಸಾಯಲೇಕೆ, ನನ್ನ ತಬ್ಬಲಿ ಮಾಡಲೇಕೆ? ಸುಮ್ಮನಿಲ್ಲಿಯೆ ನಿಲ್ಲು ಎಂದು ಗೋಗರೆದ ಕಂದನಿಗೆ ಹಸು ಹೇಳಿದ್ದೇನು: ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು! ಹಿಂದಿರುಗಿ ಹೋದರೆ ಸಾಯುತ್ತೇನೆಂದು ಗೊತ್ತಿದ್ದರೂ ಕೊಟ್ಟ ಮಾತಿಗೆ ಕಟಿಬಿದ್ದು ಕಾಡಿಗೆ ಹೋಗಿ ಹುಲಿಯ ಎದುರಿಗೆ ನಿಂತು ಖಂಡವಿದೆ ಕೊ, ಮಾಂಸವಿದೆ ಕೊ, ಗುಂಡಿಗೆಯ ಬಿಸಿರಕ್ತವಿದೆ ಕೊ ಎಂದು ಸತ್ಯದ ಸವಾಲು ಹಾಕಿದ ಆ ಪುಣ್ಯಕೋಟಿಯು ಸತ್ಯಮಾರ್ಗದಲ್ಲಿ ನಡೆಯುತ್ತೇನೆಂದು ಯಾವ ವಿಧಾನಸೌಧ ಅಥವಾ ಪಾರ್ಲಿಮೆಂಟಿನಲ್ಲಿ ಪ್ರಮಾಣವಚನ ಸ್ವೀಕರಿಸಿತ್ತು!
ಕೋರ್ಟುಗಳಲ್ಲಿ ಸಾಕ್ಷಿದಾರನನ್ನು ಕಟಕಟೆಯಲ್ಲಿ ನಿಲ್ಲಿಸಿ ಅವನಿಂದ ಹೇಳಿಕೆ ಪಡೆಯುವ ಮೊದಲು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೆ ಏನನ್ನೂ ಹೇಳುವುದಿಲ್ಲ. ನಾನು ಹೇಳುವುದೆಲ್ಲಾ ಸತ್ಯ ಎಂದು ಪ್ರಮಾಣ ವಚನ ಬೋಧಿಸುತ್ತಾರೆ. ಅದಕ್ಕೆ ಮುನ್ನಾ ದಿನ ಅವನು ಕೋರ್ಟಿನಲ್ಲಿ ಹೇಗೆ ಸುಳ್ಳು ಹೇಳಬೇಕೆಂದು ವಕೀಲರಿಂದ ತರಬೇತಿಯನ್ನು ಪಡೆದಿರುತ್ತಾನೆ. ಪ್ರಮಾಣ ಮಾಡಿ ಸುಳ್ಳು ಹೇಳಬಾರದೆಂಬ ಆತ್ಮಸಾಕ್ಷಿ ಸಾಕ್ಷಿದಾರನನ್ನು ಕಾಡಿಸುವುದಿಲ್ಲ. ಅವನು ಸತ್ಯವನ್ನು ಹೇಳುತ್ತಿಲ್ಲವೆಂದು ನ್ಯಾಯಾಧೀಶರಿಗೂ ಗೊತ್ತು. ಆದರೆ ಸುಳ್ಳು ಹೇಳಿದ ಸಾಕ್ಷಿದಾರರಿಗೆ ಶಿಕ್ಷೆ ವಿಧಿಸಿದ ಪ್ರಸಂಗಗಳಾದರೂ ಎಷ್ಟು? ವೃತ್ತಿನಿರತ ಮೂರನೇ ದರ್ಜೆ ಕ್ರಿಮಿನಲ್ಗಳಿಂದಲೂ ಅಂತಹ ಪ್ರಮಾಣ ಮಾಡಿಸಲಾಗುತ್ತದೆ. ಏಕೆಂದರೆ ಅದು ದೇಶದ ಕಾನೂನು. ಆದ ಕಾರಣವೋ ಏನೋ “ಕಾನೂನು ಒಂದು ಕತ್ತೆ!” (Law is an ass) ಎಂದು ಹೇಳುತ್ತಾರೆ.
ಹಿಂದೆ ಹಳ್ಳಿಗಳಲ್ಲಿ ಪಂಚಾಯಿತಿದಾರರ ಮುಂದೆ ಎದುರಾಳಿ ಸುಳ್ಳು ಹೇಳಿದರೆ ಬಾ, ಗುಡಿಯಲ್ಲಿ ಗಂಟೆ ಹೊಡೆದು ಪ್ರಮಾಣ ಮಾಡಿ ಹೇಳು, ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕುವ ಒಂದು ಕಾಲ ಇತ್ತು. ಆದರೆ ಈಗ ದೇವರ ಮೇಲಿನ ಬೆಳ್ಳಿ-ಬಂಗಾರದ ಒಡವೆಗಳನ್ನೇ ಹೊಡೆದುಕೊಂಡು ಹೋಗುವ ಕಳ್ಳ ಭಕ್ತರು ಇರುವಾಗ ಅಂಥವರಿಗೆ ಗುಡಿಯ ಗಂಟೆ ಹೊಡೆಯುವುದೇನು ಮಹಾ ಕಷ್ಟದ ಕೆಲಸ!
ಬಸವಣ್ಣನವರು ಬಾಲ್ಯದಲ್ಲಿ ಸಂಪ್ರದಾಯದ ವಿರುದ್ಧ ದನಿ ಎತ್ತಿ ಜನಿವಾರವನ್ನು ಕಿತ್ತೆಸೆದ ಕಾರಣ ಸಮಾಜಬಾಂಧವರಿಂದ ಬಹಿಷ್ಕೃತರಾಗಿದ್ದರು. ಅದೇ ಬಸವಣ್ಣನವರು ಮುಂದೆ ಬೆಳೆದು ದೊಡ್ಡವರಾಗಿ ಕಲ್ಯಾಣದಲ್ಲಿ ಬಿಜ್ಜಳನ ಮುಖ್ಯಮಂತ್ರಿಗಳಾದಾಗ ಅವರ ಬಂಧುಬಾಂಧವರು ಬಸವಣ್ಣ ನಮ್ಮವನು, ನಮ್ಮ ಸೋದರತ್ತೆ ಮಗ, ನಮ್ಮ ಮಾವನ ಮಗಳ ಗಂಡನ.... ಎಂದೆಲ್ಲಾ ಸಂಬಂಧ ಸೂತ್ರ ಹೇಳಿಕೊಂಡು ಕಲ್ಯಾಣಕ್ಕೆ ಹೋಗುತ್ತಾರೆ. ಹೀಗೆ ಅಧಿಕಾರದಲ್ಲಿರುವಾಗ ಸಹಾಯ ಬಯಸಿ ರಕ್ತಸಂಬಂಧವನ್ನು ಮುಂದಿಟ್ಟುಕೊಂಡು ಬಂದ ತಮ್ಮ ಸಂಬಂಧಿಕರನ್ನು ಕಂಡು ಬಸವಣ್ಣನವರು ಹೇಳಿದ್ದೇನು?
ಒಡೆಯರು ಬಂದರೆ ಗುಡಿತೋರಣವ ಕಟ್ಟಿ
ನಂಟರು ಬಂದರೆ ಸಮಯವಿಲ್ಲೆನ್ನಿ!
ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು?....
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು,
ಬಳಿಕ ಬಂಧುಗಳುಂಟೇ ಕೂಡಲಸಂಗಮದೇವಾ!
ಬಾಲ್ಯದಲ್ಲಿ ಸಮಾಜದಿಂದ ನಾನು ಬಹಿಷ್ಕೃತನಾಗಿ ಊರು ಬಿಡುವಾಗ ಈ ನಂಟರು ಎಲ್ಲಿ ಹೋಗಿದ್ದರು? ಇಂತಹ ಸ್ವಾರ್ಥಿಗಳನ್ನು ಹತ್ತಿರ ಸೇರಿಸಬೇಡಿ. ಅಂಥವರೇನಾದರೂ ನಿಮ್ಮ ಹತ್ತಿರ ಬಂದರೆ ಸಮಯವಿಲ್ಲ ಹೋಗಿ (Get out, get lost!) ಎಂದು ನಿಷ್ಟುರವಾಗಿ ಹೇಳಿ ವಾಪಾಸ್ ಕಳುಹಿಸಿ, ಒಡೆಯರು ಅಂದರೆ ಈ ನಾಡಿನ ಜನಸಾಮಾನ್ಯರು ತಮ್ಮ ಕಷ್ಟಪರಿಹಾರಕ್ಕೆಂದು ಬಂದರೆ ಅವರನ್ನು ತಳಿರು ತೋರಣ ಕಟ್ಟಿ ಸ್ವಾಗತಿಸಿ ಸಾಧ್ಯವಾದಷ್ಟೂ ಅವರ ಕಷ್ಟಕ್ಕೆ ನೆರವಾಗಿ ಎಂದು ಹೇಳುತ್ತಾರೆ.ಈ ಮಾತನ್ನು ನಮ್ಮ ನಾಡಿನ ರಾಜಕಾರಣಿಗಳು ನೆನಪಿಟ್ಟು ಕೊಳ್ಳುವುದು ಒಳ್ಳೆಯದು.
ವಿಧಾನಸೌಧದ ಹೆಬ್ಬಾಗಿಲ ಮೇಲೆ ಕೆಂಗಲ್ ಹನುಮಂತಯ್ಯನವರು ಬರೆಸಿರುವ ಸರ್ಕಾರದ ಕೆಲಸ, ದೇವರ ಕೆಲಸ ಎಂಬ ಮಾತನ್ನು ಓದಿದವರು ಹಾಗಾದರೆ ಅದನ್ನು ದೇವರೇ ಮಾಡಲಿ ಬಿಡು, ನಮ್ಮ ಕೆಲಸವೇ ಬೇರೆ ಎಂದು ತಿಳಿದುಕೊಂಡರೆ ಆಶ್ಚರ್ಯವಿಲ್ಲ. ಅದರ ಜೊತೆಗೆ ನಂಟರು ಬಂದರೆ ಸಮಯವಿಲ್ಲೆನ್ನಿ, ನಂಟು-ಭಕ್ತಿ ನಾಯಕನರಕ ಎಂಬ ಬಸವಣ್ಣನವರ ನುಡಿಗಟ್ಟುಗಳನ್ನು ಬರೆಸಿ ಇಂದಿನ ರಾಜಕಾರಣಿಗಳನ್ನು ಎಚ್ಚರಿಸುವುದು ಒಳ್ಳೆಯದು. ಹೆಚ್ಚು ಕಡಿಮೆ ಇದೇ ಅರ್ಥವನ್ನು ಕೊಡುವ ಈ ಕೆಳಗಿನ ಸಂಸ್ಕೃತ ಶ್ಲೋಕವನ್ನು ಪಾರ್ಲಿಮೆಂಟ್ ಭವನದ ಪ್ರವೇಶ ದ್ವಾರದ ಮೇಲೆ ಕೆತ್ತಿಸಲಾಗಿದೆ:
ಅಯಂ ಪರೋ ನಿಜೋ ವೇತಿ ಗಣನಾ ಲಘುಚೇತಸಾಂ |
ಉದಾರಚರಿತಾನಾಂ ತು ವಸುಧೈವಕುಟುಂಬಕಮ್ ||
ಇವನು ನಮ್ಮವನು, ಇವನು ನಮ್ಮವನಲ್ಲ ಎಂದು ಭಿನ್ನಭೇದ ಮಾಡುವುದು ಸಣ್ಣತನ, ವಿಶಾಲಹೃದಯ ಉಳ್ಳವರಿಗೆ ಇಡೀ ವಿಶ್ವವೇ ಒಂದು ಅವಿಭಕ್ತ ಕುಟುಂಬ (Global Family). ಈ ವಿಶ್ವಕುಟುಂಬಿತ್ವ ಸಂದೇಶವನ್ನು ಸಾರುವ ಶ್ಲೋಕವನ್ನು ಅದೆಷ್ಟು ಜನ ನಮ್ಮ ಲೋಕಸಭಾಸದಸ್ಯರು ಮತ್ತು ಮಂತ್ರಿಗಳು ಪಾರ್ಲಿಮೆಂಟ್ ಭವನವನ್ನು ಪ್ರವೇಶಿಸುವಾಗ ತಲೆಯೆತ್ತಿ ನೋಡಿದ್ದಾರೆ! ನೋಡಿದರೂ ಅದೆಷ್ಟು ಜನರಿಗೆ ಇದರ ಅರ್ಥ ಗೊತ್ತಿದೆ! ಪ್ರಾಮಾಣಿಕವಾಗಿ ಹೇಳಲಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 4.6.2008.